ಲಾಕ್‌ಡೌನ್ ಸಮಯದಲ್ಲಿ ಈಗ ಮನೆಯವರೆಲ್ಲರೂ ೨೪ ಗಂಟೆ ಒಟ್ಟಿಗೆ ಇರುತಿದ್ದಾರೆ. ಮನೆಯಲ್ಲಿರುವ ಎಲ್ಲರ ವಿಚಾರಪ್ರಕ್ರಿಯೆ, ಅಭಿಪ್ರಾಯಗಳು ಒಂದೇ ರೀತಿಯದ್ದಿರುವುದಿಲ್ಲ. ಹಾಗಾಗಿ ಪರಸ್ಪರ ಹೊಂದಾಣಿಕೆಯಾಗದಿರುವುದು, ಸಣ್ಣ ಪುಟ್ಟ ವಿಷಯಗಳಿಂದ ಮನೆಯಲ್ಲಿ ಕಲಹವಾಗುವುದು, ಮನಸ್ಸಿನ ವಿರುದ್ಧ ನಡೆಯುವ ಪ್ರಸಂಗದಿಂದ ಜಗಳವಾಗಿ ಒಬ್ಬರಿಗೊಬ್ಬರು ಮುಖ ತೋರಿಸದೆ ಇರುವುದು, ಮಾತನಾಡದೆ ಇರುವುದು ಮುಂತಾದ ಘಟನೆಗಳು ಹೆಚ್ಚಾಗಬಹುದು. ಇಂತಹ ಘಟನೆಗಳನ್ನು ತಡೆಯಲು ಒಂದೇ ಒಂದು ಉಪಾಯವೆಂದರೆ ನಮ್ಮಲಿರುವ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ.
೧. ನಮ್ಮ ಇಚ್ಛೆಯ ಅಥವಾ ಮನಸ್ಸಿನ ವಿರುದ್ಧ ಪ್ರಸಂಗ ಘಟಿಸಿದರೆ ಸ್ವಭಾವದೋಷ ಮತ್ತು ಅಹಂ ಉಕ್ಕಿಬರುತ್ತವೆ
ಮನೆಯಲ್ಲಿ ಒಟ್ಟಿಗೆ ಇದ್ದರೂ ‘ಒಮ್ಮತವಿಲ್ಲದೆ ಜಗಳವಾಗುವುದು, ಸಣ್ಣ ಪುಟ್ಟ ವಿಷಯಗಳಿಂದ ಕಲಹ ನಿರ್ಮಾಣವಾಗಿ ಮನೆಯವರು ಒಬ್ಬರಿಂದೊಬ್ಬರು ದೂರವಾಗುವುದು’, ಹೀಗಾಗಲು ಕೆಟ್ಟ ಶಕ್ತಿಗಳು ಪ್ರಯತ್ನ ಮಾಡುತ್ತಿವೆ.
ಪರಿಸ್ಥಿತಿ ಪ್ರತಿಕೂಲವಾಗಿದ್ದಾಗ, ಅಥವಾ ಮನಸ್ಸಿನಲ್ಲಿರುವಂತೆ ಆಗದೇ ಇದ್ದಾಗ ನಮ್ಮ ಸ್ವಭಾವದೋಷಗಳು ಅಥವಾ ಅಹಂನ ಲಕ್ಷಣಗಳು ಉಕ್ಕಿ ಬರುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪ್ರಸಂಗಗಳಿಂದಲೇ ‘ನಾವು ಯಾವ ಸ್ವಭಾವದೋಷಗಳ ಮತ್ತು ಅಹಂನ ನಿರ್ಮೂಲನೆಗಾಗಿ ಪ್ರಯತ್ನಿಸಬೇಕು’ ಎಂಬುವುದು ನಮಗೆ ತಿಳಿಯುತ್ತದೆ. ಇಂತಹ ಸಮಯದಲ್ಲಿ ‘ದೇವರು ನಮ್ಮ ಸಾಧನೆಯಲ್ಲಿನ ಅಡಚಣೆಗಳನ್ನು ನಮಗೆ ತೋರಿಸಿಕೊಟ್ಟು ನಮಗೆ ಸಹಾಯ ಮಾಡುತ್ತಿದ್ದಾರೆ’ ಎಂಬುವುದರ ಅರಿವನ್ನು ಇಟ್ಟುಕೊಂಡು ಆತ್ಮಚಿಂತನೆಯನ್ನು ಮಾಡಿ, ಸ್ಥಿರವಾಗಿ ಆ ಪರಿಸ್ಥಿತಿಯನ್ನು ಎದುರಿಸಬೇಕು.
೨. ಮನೆಯವರ ಬಗ್ಗೆ ಅಪೇಕ್ಷೆಯ ವಿಚಾರಗಳು ಬಂದರೆ, ಸ್ವಯಂಸೂಚನೆಯನ್ನು ನೀಡಿ, ಅವರಲ್ಲಿರುವ ಗುಣಗಳನ್ನು ನೋಡಿ ಆ ಗುಣಗಳಿಂದ ಕಲಿಯಲು ಪ್ರಯತ್ನಿಸಿ !
ಸಾಮಾನ್ಯವಾಗಿ ನೋಡಿದಾಗ, ಅನೇಕ ಜನರಲ್ಲಿ ‘ಮನೆಯವರಿಂದ ಅಪೇಕ್ಷೆಯಿಡುವುದು, ಅಪೇಕ್ಷಿತ ರೀತಿಯಲ್ಲಿ ಆಗದಿದ್ದರೆ ಕಿರಿಕಿರಿಯಾಗುವುದು’ ತೀವ್ರವಾಗಿ ಕಂಡುಬರುತ್ತದೆ. ಲಾಕ್‌ಡೌನ್‌ನಂತಹ ಪರಿಸ್ಥಿತಿಯಲ್ಲಿ ಮನಯೆಲ್ಲಿ ಒಟ್ಟಿಗೆ ಇದ್ದಾಗ, ಇಂತಹ ಪ್ರಸಂಗಗಳು ಪದೇ ಪದೇ ಘಟಿಸುತ್ತಿದ್ದರೆ, ಮನೆಯ ವಾತಾವರಣವೂ ಕಲುಷಿತವಾಗಬಹುದು. ಆದುದರಿಂದ ಇದರ ಬಗ್ಗೆ ಸ್ವಯಂಸೂಚನೆಯನ್ನು ತೆಗೆದುಕೊಳ್ಳಿ, ಮತ್ತು ಕುಟುಂಬದ ಸದಸ್ಯರ ಗುಣಗಳನ್ನು ಗಮನಿಸಿ ಬರೆದಿಟ್ಟುಕೊಂಡು, ಅವುಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳಲು ಪ್ರಯತ್ನಿಸಿ.
– (ಸದ್ಗುರು) ಸೌ. ಬಿಂದಾ ಸಿಂಗಬಾಳ್