ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಕಾರಣಗಳು ಮತ್ತು ತೊಂದರೆಯ ಸ್ವರೂಪ
ಇತ್ತೀಚಿನ ಕಾಲದಲ್ಲಿ ಹಿಂದಿನಂತೆ ಯಾರೂ ಶ್ರಾದ್ಧ-ಪಕ್ಷ, ಹಾಗೆಯೇ ಸಾಧನೆಯನ್ನೂ ಮಾಡುವುದಿಲ್ಲ. ಕಲಿಯುಗದಲ್ಲಿನ ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿ ಸಿಲುಕಿಕೊಂಡಿರುತ್ತಾರೆ. ಇದರಿಂದಾಗಿ ಇಂತಹವರ ಲಿಂಗದೇಹಗಳು ಮೃತ್ಯುವಿನ ನಂತರ ಅತೃಪ್ತವಾಗಿ ಉಳಿಯುತ್ತವೆ. ಆದುದರಿಂದ ಬಹುತೇಕ ಎಲ್ಲರಿಗೂ ಪೂರ್ವಜರ ಅತೃಪ್ತ ಲಿಂಗದೇಹಗಳಿಂದ ಆಧ್ಯಾತ್ಮಿಕ ತೊಂದರೆಯಾಗುತ್ತಿದೆ. ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಲುಕಿಕೊಳ್ಳುತ್ತವೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕದ ಮಧ್ಯದಲ್ಲಿದೆ) ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡಿರುವ ಪೂರ್ವಜರಿಗೆ ಗತಿಯು ಸಿಗುತ್ತದೆ. ಮುಂದೆ ಅವರು ಅವರ ಕರ್ಮಗಳಿಗನುಸಾರ ಮುಂದುಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದ ನಮಗಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.
ಅತೃಪ್ತ ಪೂರ್ವಜರಿಂದ ತೊಂದರೆಯಾಗುವ ಸಾಧ್ಯತೆ ಇದೆ ಅಥವಾ ತೊಂದರೆ ಆಗುತ್ತಿದೆ, ಎಂಬುದನ್ನು ಅಧ್ಯಾತ್ಮದಲ್ಲಿನ ಉನ್ನತರೇ ಹೇಳಬಲ್ಲರು. ಹಾಗೆ ಹೇಳುವ ಉನ್ನತರು ಸಿಗದೇ ಇದ್ದಾಗ ಮತ್ತು ಮುಂದೆ ನೀಡಿದ ತೊಂದರೆಗಳು ಆಗುತ್ತಿದ್ದಲ್ಲಿ ಅವು ಅತೃಪ್ತ ಪೂರ್ವಜರಿಂದ ಆಗುತ್ತಿವೆ ಎಂದು ತಿಳಿದು ಸಾಧನೆಯನ್ನು ಮಾಡಬೇಕು – ವಿವಾಹವಾಗದಿರುವುದು, ಪತಿ-ಪತ್ನಿಯರಲ್ಲಿ ಹೊಂದಾಣಿಕೆಯಾಗದಿರುವುದು, ಗರ್ಭಧಾರಣೆಯಾಗದಿರುವುದು, ಗರ್ಭಧಾರಣೆಯಾದರೂ ಗರ್ಭಪಾತವಾಗುವುದು, ಮಕ್ಕಳು ಸಮಯಕ್ಕೆ ಮೊದಲೇ ಹುಟ್ಟುವುದು, ಬುದ್ಧಿಮಾಂದ್ಯ ಅಥವಾ ಅಂಗವಿಕಲ ಮಕ್ಕಳು ಹುಟ್ಟುವುದು, ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಸಾಯುವುದು ಇತ್ಯಾದಿ. ವ್ಯಸನ, ದಾರಿದ್ರ್ಯ, ಶಾರೀರಿಕ ರೋಗ ಮುಂತಾದ ಲಕ್ಷಣಗಳಿರುವ ಸಾಧ್ಯತೆಯೂ ಇರುತ್ತದೆ.
ಕೆಲವು ಜನರು ಮೃತವ್ಯಕ್ತಿಯ ಸ್ಮರಣೆಗೆಂದು ಮನೆಯ ಎದುರು ಅಥವಾ ಬದಿಯಲ್ಲಿ ಅವರ ಹೆಸರಿನ ಸಮಾಧಿಯನ್ನು ಕಟ್ಟುತ್ತಾರೆ. ಈ ಸಮಾಧಿಗೆ ನಿಯಮಿತವಾಗಿ ಹೂವುಗಳನ್ನು ಅರ್ಪಿಸಿ ಪೂಜೆಯನ್ನೂ ಮಾಡುತ್ತಾರೆ. ಮೃತವ್ಯಕ್ತಿಯ ಮೇಲಿನ ಪ್ರೇಮ ಮತ್ತು ಅವರ ನೆನಪಿಗಾಗಿ ಮನೆಯಲ್ಲಿ ಅವರ ಛಾಯಾಚಿತ್ರಗಳನ್ನು ಇಡುವುದು, ದೇವರ ಕೋಣೆಯಲ್ಲಿ ನಾಣ್ಯವನ್ನಿರಿಸುವುದು ಅಥವಾ ಮನೆಯ ಮುಂದೆ ಸಮಾಧಿಯನ್ನು ಕಟ್ಟುವುದು ಮುಂತಾದ ಕೃತಿಗಳಿಂದ ಆ ವ್ಯಕ್ತಿಯ ಲಿಂಗದೇಹವು ಅಲ್ಲಿ ಸಿಲುಕಿಕೊಳ್ಳುತ್ತದೆ. ಇದರಿಂದ ಅವರಿಗೆ ಮುಂದಿನ ಗತಿ ಸಿಗುವುದಿಲ್ಲ, ಹಾಗೆಯೇ ಅವರಿಗೆ ಯಾತನೆಯನ್ನೂ ಸಹಿಸಬೇಕಾಗುತ್ತದೆ. ಭಗೀರಥನು ಪೂರ್ವಜರ ಮುಕ್ತಿಗಾಗಿ ತಪಸ್ಸನ್ನು ಮಾಡಿ ಗಂಗೆಯನ್ನು ಪೃಥ್ವಿಯಲ್ಲಿ ಅವತರಿಸುವಂತೆ ಮಾಡಿದ ಉದಾಹರಣೆಯು ಪಿತೃಋಣ ತೀರಿಸಿದುದರ ಉತ್ತಮ ಆದರ್ಶವಾಗಿದೆ. ನಾವು ಪೂರ್ವಜರನ್ನು ಮೇಲೆ ಹೇಳಿದ ಸ್ಥೂಲ ವಿಷಯಗಳಲ್ಲಿ ಸಿಲುಕಿಸಿದರೆ ಮತ್ತು ಅವರಿಗೆ ಗತಿ ಸಿಗಲು ನಾಮಜಪ ಮುಂತಾದ ಸಾಧನೆಯನ್ನು ಮಾಡದೇ ಇದ್ದಲ್ಲಿ ನಮ್ಮಿಂದ ಪಿತೃ ಋಣ ತೀರುವುದಿಲ್ಲ. ಹಾಗೆಯೇ ಪೂರ್ವಜರಿಗೆ ತೊಂದರೆಯಾಗಿ ಅವರು ನಮ್ಮ ಸಾಧನೆಯಲ್ಲಿ ಅಡಚಣೆಗಳನ್ನು ತರುತ್ತಾರೆ. ಪಿತೃ ಋಣವನ್ನು ತೀರಿಸಲು ಮತ್ತು ಪೂರ್ವಜರ ಮುಕ್ತಿಯನ್ನು ತಡೆಗಟ್ಟದೇ ಅವರಿಗೆ ಗತಿ ಸಿಗಬೇಕೆಂದು ‘ಶ್ರೀ ಗುರುದೇವ ದತ್ತ |’ ನಾಮಜಪ ಮತ್ತು ಶ್ರಾದ್ಧವಿಧಿಗಳನ್ನೂ ಮಾಡಬೇಕು.
ಅತೃಪ್ತ ಪೂರ್ವಜರ ತೊಂದರೆಗಳಿಂದ ರಕ್ಷಣೆಯಾಗಲು
ತೊಂದರೆಗಳ ತೀವ್ರತೆಗನುಸಾರ ಮಾಡಬೇಕಾದ ಉಪಾಸನೆ
ಅ. ಈಗ ಯಾವುದೇ ರೀತಿಯ ತೊಂದರೆ ಇಲ್ಲದಿದ್ದಲ್ಲಿ ಮುಂದೆ ತೊಂದರೆಗಳು ಆಗಬಾರದೆಂದು, ಹಾಗೆಯೇ ಸ್ವಲ್ಪ ತೊಂದರೆ ಇದ್ದರೆ ಪ್ರತಿದಿನ 1 ರಿಂದ 2 ಗಂಟೆ ‘ಶ್ರೀ ಗುರುದೇವ ದತ್ತ|’ ನಾಮಜಪವನ್ನು ಮಾಡಬೇಕು. ಉಳಿದ ಸಮಯದಲ್ಲಿ ಪ್ರಾರಬ್ಧದಿಂದ ತೊಂದರೆಯಾಗಬಾರದು ಮತ್ತು ಆಧ್ಯಾತ್ಮಿಕ ಉನ್ನತಿಯಾಗಬೇಕೆಂದು ಸಾಮಾನ್ಯ ಮನುಷ್ಯನು ಅಥವಾ ಪ್ರಾಥಮಿಕ ಅವಸ್ಥೆಯಲ್ಲಿನ ಸಾಧಕನು ತನ್ನ ಕುಲದೇವತೆಯ ನಾಮಜಪವನ್ನು ಆದಷ್ಟು ಹೆಚ್ಚು ಮಾಡಬೇಕು. (ಕುಲದೇವತೆಯ ನಾಮದ ಮಹತ್ವ ಸಾಧನೆಯ ಬಗೆಗಿನ ವಿವೇಚನೆಯನ್ನು ಸನಾತನದ ಗ್ರಂಥ ‘ಅಧ್ಯಾತ್ಮದ ಪ್ರಾಸ್ತಾವಿಕ ವಿವೇಚನೆ’ಯಲ್ಲಿ ಮಾಡಲಾಗಿದೆ.)
ಆ. ಮಧ್ಯಮ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಪ್ರತಿದಿನ 2 ರಿಂದ 4 ಗಂಟೆಗಳಷ್ಟು ಮಾಡಬೇಕು. ಹಾಗೆಯೇ ಪ್ರತೀ ಗುರುವಾರ ದತ್ತನ ದೇವಸ್ಥಾನಕ್ಕೆ ಹೋಗಿ ಏಳು ಪ್ರದಕ್ಷಿಣೆಗಳನ್ನು ಹಾಕಬೇಕು ಮತ್ತು ಕುಳಿತುಕೊಂಡು 1-2 ಮಾಲೆ ನಾಮಜಪವನ್ನು ಒಂದು ವರ್ಷವಾದರೂ ಮಾಡಬೇಕು. ಅನಂತರ ಮೂರು ಮಾಲೆಗಳಷ್ಟು ನಾಮಜಪವನ್ನು ಮಾಡುತ್ತಿರಬೇಕು.
ಇ. ತೀವ್ರ ತೊಂದರೆಯಿದ್ದರೆ ಕುಲದೇವತೆಯ ನಾಮಜಪದ ಜೊತೆಗೆ ‘ಶ್ರೀ ಗುರುದೇವ ದತ್ತ |’ ಈ ನಾಮಜಪವನ್ನು ಪ್ರತಿದಿನ 4 ರಿಂದ 6 ಗಂಟೆ ಮಾಡಬೇಕು. ಯಾವುದಾದರೂ ಜ್ಯೋತಿರ್ಲಿಂಗವಿರುವ ಸ್ಥಳಕ್ಕೆ ಹೋಗಿ ನಾರಾಯಣಬಲಿ, ನಾಗಬಲಿ, ತ್ರಿಪಿಂಡಿ ಶ್ರಾದ್ಧ, ಕಾಲಸರ್ಪಶಾಂತಿ ಇವುಗಳಂತಹ ವಿಧಿಗಳನ್ನು ಮಾಡಬೇಕು. ಅದರ ಜೊತೆಗೆ ಯಾವುದಾದರೂ ದತ್ತಕ್ಷೇತ್ರದಲ್ಲಿ ಉಳಿದುಕೊಂಡು ಸಾಧನೆ ಮಾಡಬೇಕು ಅಥವಾ ಸಂತರ ಸೇವೆಯನ್ನು ಮಾಡಿ ಅವರ ಆಶೀರ್ವಾದವನ್ನು ಪಡೆದುಕೊಳ್ಳಬೇಕು.
“ಶ್ರೀ ಗುರುದೇವ ದತ್ತ |” ನಾಮಜಪ
“ಓಂ ಓಂ ಶ್ರೀ ಗುರುದೇವ ದತ್ತ ಓಂ |” ನಾಮಜಪ (ಟಿಪ್ಪಣಿ)
ಟಿಪ್ಪಣಿ – ಈ ನಾಮಜಪದ ಬಗ್ಗೆ ಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ!
ಈ. ಪಿತೃಪಕ್ಷದಲ್ಲಿ ದತ್ತನ ನಾಮಜಪ ಮಾಡುವುದರಿಂದ ಪಿತೃಗಳಿಗೆ ಬೇಗನೇ ಗತಿ ಸಿಗುತ್ತದೆ; ಆದುದರಿಂದ ಆ ಸಮಯದಲ್ಲಿ ಪ್ರತಿದಿನ ಕನಿಷ್ಟಪಕ್ಷ 6 ಗಂಟೆ (72 ಮಾಲೆ) ದತ್ತನ ನಾಮಜಪ ಮಾಡಬೇಕು.
ಮನೆಯಲ್ಲಿನ ವ್ಯಕ್ತಿಗಳು ಮೇಲೆ ನೀಡಿದಂತೆ ತಮ್ಮ ತಮ್ಮ ತೊಂದರೆಯ ತೀವ್ರತೆಗನುಸಾರ ಪ್ರತಿದಿನ ದತ್ತನ ನಾಮಜಪವನ್ನು ಕನಿಷ್ಠಪಕ್ಷ ಅಷ್ಟನ್ನಾದರೂ ಮಾಡಬೇಕು ಮತ್ತು ಹೆಚ್ಚೆಂದರೆ ಸತತವಾಗಿ ಮಾಡಬೇಕು.
ದತ್ತನ ನಾಮಜಪದಿಂದ ಅತೃಪ್ತ ಪೂರ್ವಜರ ತೊಂದರೆಗಳಿಂದ ಹೇಗೆ ರಕ್ಷಣೆಯಾಗುತ್ತದೆ?
ಅ. ಸಂರಕ್ಷಣಾ ಕವಚ ನಿರ್ಮಾಣವಾಗುವುದು: ದತ್ತನ ನಾಮಜಪದಿಂದ ನಿರ್ಮಾಣವಾಗುವ ಶಕ್ತಿಯಿಂದ ನಾಮಜಪ ಮಾಡುವವರ ಸುತ್ತಲೂ ಸಂರಕ್ಷಣಾ ಕವಚ ನಿರ್ಮಾಣವಾಗುತ್ತದೆ.
ಆ. ಅತೃಪ್ತ ಪೂರ್ವಜರಿಗೆ ಗತಿ ಸಿಗುವುದು : ಬಹುತೇಕ ಜನರು ಸಾಧನೆಯನ್ನು ಮಾಡದಿರುವುದರಿಂದ ಮಾಯೆಯಲ್ಲಿಯೇ ಸಿಲುಕಿಕೊಂಡಿರುತ್ತಾರೆ. ಇದರಿಂದ ಮೃತ್ಯುವಿನ ನಂತರ ಇಂತಹವರ ಲಿಂಗದೇಹಗಳು ಅತೃಪ್ತವಾಗಿರುತ್ತವೆ. ಇಂತಹ ಅತೃಪ್ತ ಲಿಂಗದೇಹಗಳು ಮರ್ತ್ಯಲೋಕದಲ್ಲಿ ಸಿಕ್ಕಿಕೊಳ್ಳುತ್ತವೆ. (ಮರ್ತ್ಯಲೋಕವು ಭೂಲೋಕ ಮತ್ತು ಭುವರ್ಲೋಕಗಳ ಮಧ್ಯದಲ್ಲಿದೆ.) ದತ್ತನ ನಾಮಜಪದಿಂದ ಮರ್ತ್ಯಲೋಕದಲ್ಲಿ ಸಿಲುಕಿಕೊಂಡ ಅತೃಪ್ತ ಪೂರ್ವಜರಿಗೆ ಗತಿ ಸಿಗುತ್ತದೆ. ಇದರಿಂದ ಮುಂದೆ ಅವರು ತಮ್ಮ ಕರ್ಮಗಳಿನುಸಾರ ಮುಂದು ಮುಂದಿನ ಲೋಕಕ್ಕೆ ಹೋಗುವುದರಿಂದ ಸಹಜವಾಗಿಯೇ ಅವರಿಂದಾಗುವ ತೊಂದರೆಗಳ ಪ್ರಮಾಣವು ಕಡಿಮೆಯಾಗುತ್ತದೆ.
ಈ ನಾಮಜಪವನ್ನು ಹಾಕಿದ ನಂತರ ತಮ್ಮಲ್ಲಿ ಅಥವಾ ತಮ್ಮ ಮನೆಯಲ್ಲಿ ಏನು ಬದಲಾವಣೆಗಳಾದವು ಎಂದು ನಮಗೆ ತಿಳಿಸಲು ಮರೆಯಬೇಡಿ. ಪ್ರತಿಯೊಬ್ಬರೂ ಈ ನಾಮಜಪವನ್ನು ಮಾಡಿ ಮತ್ತು ಇತರರೂ ಮಾಡಲು ಇದನ್ನು ಆದಷ್ಟು ಹೆಚ್ಚು ಜನರಿಗೆ ತಲುಪಿಸಿ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದತ್ತ’)
Very informative, thanks.
Hari namasamrane madi