ಪ್ರತಿಯೊಬ್ಬರ ಮನೆಯಲ್ಲಿ ದೇವರ ಪೂಜೆ-ಉಪಾಸನೆಗೆ ದೇವರ ಕೋಣೆ ಇದ್ದೇ ಇರುತ್ತದೆ. ಆದರೆ ಹೆಚ್ಚಾಗಿ ದೇವರಕೋಣೆ ಹೇಗಿರುತ್ತದೆ? ದೇವರಕೋಣೆಯೆದುರು ಕುಳಿತರೆ ನಮ್ಮ ಮನಸ್ಸು ಶಾಂತವಾಗಬೇಕು, ಉತ್ಸಾಹವೆನಿಸಬೇಕು, ಭಗವಂತನ ಕುರಿತು ಭಕ್ತಿಭಾವ ಹೆಚ್ಚಾಗಬೇಕು, ದೇವರಕೋಣೆಯಲ್ಲಿ ಭಗವಂತನ ಅಸ್ತಿತ್ವದ ಅರಿವಾಗಬೇಕು, ದೇವರು ನಮ್ಮೊಂದಿಗಿದ್ದಾನೆ ಎಂದು ಅನಿಸಬೇಕು. ಆದರೆ ಮನೆಯಲ್ಲಿರುವ ದೇವರಕೋಣೆಯಲ್ಲಿ ದೇವತೆಗಳ ಚಿತ್ರ ಮತ್ತು ಮೂರ್ತಿಗಳನ್ನು ಅವ್ಯವಸ್ಥಿತವಾಗಿ ಜೋಡಿಸಿ ಇಡುವುದರಿಂದ ನಮಗೆ ಇಂತಹ ಅನುಭೂತಿ ಸಿಗಬಹುದೇ?
ದೇವಸ್ಥಾನವು ಹೇಗೆ ಇಡೀ ಗ್ರಾಮ ಅಥವಾ ಊರಿಗೆ, ಶಕ್ತಿ ಅಥವಾ ಚೈತನ್ಯವನ್ನು ಪೂರೈಸುತ್ತದೆಯೋ, ಅದೇ ರೀತಿ ದೇವರಕೋಣೆಯು ಇಡೀ ಮನೆಗೆ ಶಕ್ತಿ, ಚೈತನ್ಯವನ್ನು ಪೂರೈಸಬೇಕು, ಮನೆಯ ವಾತಾವರಣವನ್ನು ಶುದ್ಧ ಮಾಡಬೇಕು. ಆದರೆ ನಾವು ಮಾಡುವ ದೇವರ ಜೋಡಣೆಯಿಂದ ಇದು ಸಾಧ್ಯವಾಗಬಹುದು ಎಂದು ನಮಗೆ ಅನಿಸುತ್ತದೆಯೇ? ಹಾಗಾದರೆ ಈಗ ಶಾಸ್ತ್ರೀಯವಾಗಿ ದೇವರನ್ನು ಹೇಗೆ ಜೋಡಿಸಬೇಕು ಎಂದು ತಿಳಿದುಕೊಳ್ಳೋಣ.
ಶಂಕುವಿನ ಆಕಾರದಲ್ಲಿ (ಕೋನಾಕಾರ) ರಚನೆ
ದೇವರಕೋಣೆ/ಮಂಟಪದಲ್ಲಿ ದೇವತೆಗಳ ಜೋಡಣೆಯನ್ನು ಶಂಕುವಿನ ಆಕಾರದಲ್ಲಿ ಮಾಡಬೇಕು. ಪೂಜಕನ ಎದುರಿಗೆ ಅಂದರೆ ಶಂಕುವಿನ ಮಧ್ಯಭಾಗದಲ್ಲಿ (ಶಂಕುವಿನ ತುದಿಯಲ್ಲಿ) ಶ್ರೀಗಣಪತಿಯನ್ನು ಇಡಬೇಕು. ಪೂಜೆಯನ್ನು ಮಾಡುವವರ ಬಲಗಡೆಗೆ ಸ್ತ್ರೀ ದೇವತೆಗಳನ್ನಿಡಬೇಕು. ದೇವತೆಗಳನ್ನಿಡುವಾಗ ಮೊದಲು ಕುಲದೇವಿಯನ್ನಿಡಬೇಕು. ಕುಲದೇವಿಯ ನಂತರ ಉಚ್ಚದೇವತೆಗಳ ಉಪರೂಪಗಳಿದ್ದಲ್ಲಿ ಅವುಗಳನ್ನಿಡಬೇಕು. ಅನಂತರ ಆಯಾ ಉಚ್ಚ ದೇವತೆಗಳನ್ನಿಡಬೇಕು. ಪೂಜಕನ ಎಡಗಡೆಗೆ ಇದೇ ರೀತಿಯಲ್ಲಿ ಪುರುಷ ದೇವರು, ಅಂದರೆ ಮೊದಲು ಕುಲದೇವರು, ಅನಂತರ ಉಚ್ಚದೇವರ ಉಪರೂಪಗಳು ಮತ್ತು ಕೊನೆಯಲ್ಲಿ ಉಚ್ಚದೇವತೆಗಳನ್ನಿಡಬೇಕು.
ಉಚ್ಚದೇವತೆಗಳ ಜೋಡಣೆಯನ್ನು ಮಾಡುವ ಕ್ರಮ: ಏಳು ಉಚ್ಚದೇವತೆಗಳಲ್ಲಿ ಬ್ರಹ್ಮ (ಇಚ್ಛಾ), ವಿಷ್ಣು (ಕ್ರಿಯಾ) ಮತ್ತು ಮಹೇಶ (ಜ್ಞಾನ) ಅಂದರೆ ಉತ್ಪತ್ತಿ, ಸ್ಥಿತಿ ಮತ್ತು ಲಯಕ್ಕೆ ಸಂಬಂಧಿಸಿದ ದೇವತೆಗಳಿಗಿಂತ ಮೊದಲು ಉಳಿದ ದೇವತೆಗಳನ್ನು ಅನುಕ್ರಮವಾಗಿ ಇಚ್ಛೆ, ಕ್ರಿಯಾ ಮತ್ತು ಜ್ಞಾನ ಲಹರಿಗಳಿಗನುಸಾರ ಇಡಬೇಕು.
ದೇವತೆಗಳ ಜೋಡಣೆಯನ್ನು ಶಂಕುವಿನಂತೆ ರಚಿಸುವುದರ ವೈಶಿಷ್ಟ್ಯಗಳು ಮತ್ತು ಮಹತ್ವ
ಅ. ಶಂಕುವಿನಂತೆ ರಚನೆಯನ್ನು ಮಾಡುವುದರ ವೈಶಿಷ್ಟ್ಯವೇನೆಂದರೆ, ಶಂಕುವಿನ ಮಧ್ಯಭಾಗ ಅಥವಾ ತುದಿ ಅಂದರೆ ಸಗುಣದಲ್ಲಿ ಬಂದು ಕಾರ್ಯ ಮಾಡುವ ಶಕ್ತಿ ಹಾಗೂ ಅದರ ಮೇಲಿನ ತ್ರಿಕೋನದ ಭಾಗವೆಂದರೆ ಆನಂದ ಮತ್ತು ಶಾಂತಿ ಅಂದರೆ ನಿರ್ಗುಣ ರೂಪವನ್ನು ತೋರಿಸುತ್ತದೆ. ಮಧ್ಯದಲ್ಲಿ ಗಣಪತಿ, ಆಮೇಲೆ ಆಯಾ ದೇವತೆಗಳ ಉಪರೂಪಗಳು ಮತ್ತು ನಂತರ ಮೂಲ ಉಚ್ಚದೇವತೆಗಳು, ಈ ಕ್ರಮವು ಜೀವದ ಸಗುಣದಿಂದ ನಿರ್ಗುಣದ ಕಡೆಗಿನ ಪ್ರಯಾಣವನ್ನು ತೋರಿಸುತ್ತದೆ. ಶಂಕುವಿನ ದೊಡ್ಡದಾಗುತ್ತಾ ಹೋಗುವ ಭಾಗವು ನಿರ್ಗುಣದ ವ್ಯಾಪ್ತಿಯನ್ನು ದರ್ಶಿಸುತ್ತದೆ.
ಆ. ಗಣಪತಿಯು ಯಾವಾಗಲೂ ಮಧ್ಯದಲ್ಲಿರುತ್ತಾನೆ. ನಾವು ಮಾತನಾಡುವ ನಾದಭಾಷೆಯನ್ನು ಶ್ರೀಗಣಪತಿಯು ತಿಳಿದು ಕೊಳ್ಳಬಲ್ಲನು; ಆದುದರಿಂದಲೇ ಅವನು ಬೇಗನೇ ಪ್ರಸನ್ನನಾಗುವ ದೇವನಾಗಿದ್ದಾನೆ. ಶ್ರೀಗಣಪತಿಯು ನಾದಭಾಷೆಯನ್ನು ಪ್ರಕಾಶ ಭಾಷೆಗೆ ಮತ್ತು ಪ್ರಕಾಶಭಾಷೆಯನ್ನು ನಾದಭಾಷೆಗೆ ರೂಪಾಂತರ ಮಾಡುವ ದೇವನಾಗಿದ್ದಾನೆ. ಇತರ ದೇವತೆಗಳಿಗೆ ಹೆಚ್ಚಾಗಿ ಪ್ರಕಾಶಭಾಷೆ ಮಾತ್ರ ತಿಳಿಯುತ್ತದೆ. ಹಾಗೆಯೇ ಶ್ರೀಗಣಪತಿಯು ಇಚ್ಛಾಲಹರಿಗಳಿಗೆ ಸಂಬಂಧಿಸಿದ ದೇವನಾಗಿದ್ದರಿಂದ ಭಕ್ತರ ಇಚ್ಛೆಗಳನ್ನು ಅಥವಾ ಭಕ್ತರು ದೇವತೆಗಳ ಚರಣಗಳಲ್ಲಿ ಮಾಡಿದ ಬೇಡಿಕೆಗಳನ್ನು ಬೇಗನೇ ಕುಲದೇವರಿಗೆ ತಲುಪಿಸುತ್ತಾನೆ. ಆಮೇಲೆ ಕುಲದೇವರು ಆಯಾ ಜೀವಗಳಿಗೆ ಸಹಾಯ ಮಾಡಲು ಬೇಗನೇ ಬರುತ್ತಾರೆ. ಅಲ್ಲದೇ ಕುಲದೇವರು ಜೀವಗಳ ಇಚ್ಛೆಯನ್ನು ಪೂರ್ಣಗೊಳಿಸಲು ಉಚ್ಚ ದೇವತೆಗಳಲ್ಲಿ ಬೇಡಿಕೊಳ್ಳುತ್ತಾರೆ. ಇದರಿಂದ ಉಚ್ಚದೇವತೆಗಳ ತತ್ತ್ವವು ಬೇಗನೆ ಕಾರ್ಯನಿರತವಾಗಿ ಜೀವಗಳಿಗಾಗಿ ಕಾರ್ಯ ಮಾಡುತ್ತದೆ.
– ಓರ್ವ ವಿದ್ವಾಂಸ (ಸೌ.ಅಂಜಲಿ ಗಾಡಗೀಳರ ಮಾಧ್ಯಮದಿಂದ, ೨೮.೧೦.೨೦೦೪, ರಾತ್ರಿ ೮.೩೦)
ಕೆಲವು ಇತರ ಸೂಚನೆಗಳು
೧. ಕೆಲವೊಮ್ಮೆ ದೇವತೆಗಳ ಚಿತ್ರಗಳಲ್ಲಿ ಭಗವಂತನು ಶಕ್ತಿಯೊಂದಿಗೆ ಇರುತ್ತಾನೆ. ಅಂತಹ ದೇವರ ಚಿತ್ರ ಅಥವಾ ಮೂರ್ತಿಯನ್ನು ಹೇಗೆ ಜೋಡಿಸಬೇಕು? : ಕೆಲವೊಮ್ಮೆ ದೇವತೆಗಳ ಚಿತ್ರಗಳಲ್ಲಿ ಭಗವಂತನು ಶಕ್ತಿಯೊಂದಿಗೆ ಇರುತ್ತಾನೆ. ಉದಾ. ಸೀತಾರಾಮ, ಲಕ್ಷ್ಮೀನಾರಾಯಣ ಇತ್ಯಾದಿ. ಯಾವಾಗ ದೇವಿಯನ್ನು ದೇವರ ಎಡಬದಿಯಲ್ಲಿ ತೋರಿಸಲಾಗಿರುತ್ತದೆಯೋ, ಆಗ ಅವಳು ತನ್ನ ಸ್ವಾಮಿಯೊಂದಿಗೆ ಭಕ್ತರಿಗೆ ಆಶೀರ್ವಾದ ನೀಡುತ್ತಿರುತ್ತಾಳೆ. ಎಡಬದಿಯು ಚಂದ್ರನಾಡಿಯದ್ದಾಗಿದ್ದು ಅದು ಶೀತಲ ಮತ್ತು ಆನಂದದಾಯಕವಾಗಿದೆ. ಇದು ಶಕ್ತಿಯ ತಾರಕರೂಪವಾಗಿದೆ. ಇಂತಹ ಚಿತ್ರಗಳಲ್ಲಿ ಪುರುಷ ದೇವರನ್ನು ಪ್ರಧಾನದೇವತೆಯೆಂದು ತಿಳಿದುಕೊಂಡು ಅವುಗಳನ್ನು ಗಣಪತಿಯ ಬಲಬದಿಗೆ ಇಡಬೇಕು. ಕೆಲವೊಂದು ಚಿತ್ರಗಳಲ್ಲಿ ದೇವಿಯರನ್ನು ದೇವರ ಬಲಬದಿಯಲ್ಲಿ ತೋರಿಸಲಾಗಿರುತ್ತದೆ. ಬಲಬದಿಯು ಸೂರ್ಯನಾಡಿಯದ್ದಾಗಿದ್ದು ಅದು ತೇಜಸ್ವೀ ಮತ್ತು ಶಕ್ತಿದಾಯಕವಾಗಿದೆ. ಇದು ಶಕ್ತಿಯ ಮಾರಕರೂಪವಾಗಿದೆ. ಕಾಳೀ ವಿಲಾಸತಂತ್ರದಲ್ಲಿ ಕಾಳಿಯು ಶಿವನ ಹೃದಯದ ಮೇಲೆ ನಿಂತು ನೃತ್ಯ ಮಾಡುತ್ತಾಳೆ ಎಂದು ಹೇಳಲಾಗಿದೆ. ಇಲ್ಲಿ ಶಕ್ತಿಯು ಶಿವನಿಗಿಂತ ಪ್ರಬಲಳಾಗಿದ್ದಾಳೆ. ಯಾವಾಗ ಚಿತ್ರದಲ್ಲಿ ದೇವಿಯನ್ನು ದೇವರ ಬಲಬದಿಯಲ್ಲಿ ತೋರಿಸಲಾಗಿರುತ್ತದೆಯೋ, ಆಗ ಅವಳು ಕ್ರಿಯಾಶೀಲಳಾಗಿರುವುದರಿಂದ ಅವಳನ್ನು ಪ್ರಧಾನ ದೇವತೆಯೆಂದು ತಿಳಿದುಕೊಂಡು ಚಿತ್ರವನ್ನು ಶ್ರೀಗಣಪತಿಯ ಎಡಬದಿಯಲ್ಲಿಡಬೇಕು.
೨. ಯಾರಾದರೊಬ್ಬರ ದೇವರಕೋಣೆಯಲ್ಲಿ ದೇವತೆಗಳ ಸಂಖ್ಯೆಯು ಕಡಿಮೆಯಿದ್ದಲ್ಲಿ ಉದಾ.ದೇವತೆಗಳ ಉಪರೂಪಗಳಿದ್ದು, ಉಚ್ಚದೇವತೆಗಳ ರೂಪಗಳಿಲ್ಲದಿದ್ದಲ್ಲಿ ದೇವತೆಗಳ ಜೋಡಣೆಯನ್ನು ಮಾಡುವಾಗ ಶಂಖದ ರಚನೆಯಲ್ಲಿ ಹೇಳಿದಂತೆ ಉಚ್ಚದೇವತೆಗಳ ರೂಪಗಳನ್ನು ಸಹ ಹೊಸದಾಗಿ ತಂದು ಇಡಬೇಕೇನು ? : ಹೊಸದಾಗಿ ದೇವತೆಗಳನ್ನು ತಂದಿಡುವ ಆವಶ್ಯಕತೆ ಯಿಲ್ಲ. ಮನೆಯಲ್ಲಿರುವ ದೇವತೆಗಳನ್ನೇ ಶಂಕುವಿನ ಆಕಾರದಲ್ಲಿಡಬೇಕು. ಮುಖ್ಯವಾಗಿ ಶ್ರೀಗಣಪತಿ ಮತ್ತು ಕುಲದೇವರನ್ನು (ಕುಲದೇವ ಅಥವಾ ಕುಲದೇವಿ) ದೇವರಕೋಣೆಯಲ್ಲಿ ಇಟ್ಟರೆ ಸಾಕಾಗುತ್ತದೆ; ಏಕೆಂದರೆ ಇತರ ದೇವತೆಗಳ ತುಲನೆಯಲ್ಲಿ ನಮ್ಮ ಕುಲದೇವರ ಬಗ್ಗೆ ಭಾವಜಾಗೃತಿಯು ಬೇಗನೇ ಆಗುತ್ತದೆ. ಮೇಲಿನ ನಿಯಮವು ಕರ್ಮಕಾಂಡಕ್ಕೆ ಸಂಬಂಧಿಸಿದ್ದು ಅದು ದೇವತೆಗಳ ಸಗುಣ ರೂಪಗಳಿಗೆ ಸಂಬಂಧಿಸಿದೆ. ಸಗುಣ ಸಾಧನೆಯನ್ನು ಮಾಡುವಾಗ ಅನೇಕದಿಂದ ಏಕಕ್ಕೆ ಹೋಗುವುದಕ್ಕೆ ಅಂದರೆ ಅದ್ವೈತದ ಕಡೆಗೆ ಹೋಗುವುದಕ್ಕೆ ಹೆಚ್ಚು ಮಹತ್ವವಿರುತ್ತದೆ. ದೇವತೆಗಳ ಸಗುಣ ಮೂರ್ತಿಯಿಂದ ಆಯಾ ದೇವತೆಗಳ ಅನೇಕ ಸಗುಣ-ನಿರ್ಗುಣ ತತ್ತ್ವಗಳ ಕಡೆಗೆ ಮತ್ತು ಅದರಿಂದ ಇವೆಲ್ಲವುಗಳನ್ನೂ ತನ್ನಲ್ಲಿ ಸಮಾವೇಶಮಾಡಿಕೊಳ್ಳುವಂತಹ ಮತ್ತು ಸಂಪೂರ್ಣ ನಿರ್ಗುಣ ನಾದ ಈಶ್ವರನ ಕಡೆಗೆ ನಮಗೆ ಹೋಗಬೇಕಾಗಿರುತ್ತದೆ.
೩. ಯಾರಾದರೊಬ್ಬರ ದೇವರಕೋಣೆಯಲ್ಲಿ ದೇವರ ಸಂಖ್ಯೆಯು ಹೆಚ್ಚಿದ್ದಲ್ಲಿ, ಉದಾ. ದೇವತೆಗಳ ಎರಡು ಉಪರೂಪಗಳಿದ್ದಲ್ಲಿ ಜೋಡಣೆಯನ್ನು ಮಾಡುವಾಗ ಎರಡನ್ನೂ ಇಡಬೇಕೋ ಅಥವಾ ಎರಡರಲ್ಲಿ ಒಂದನ್ನು ಇಡಬೇಕು ? : ಎರಡು ಉಪರೂಪಗಳಿದ್ದಲ್ಲಿ ಒಂದೇ ಉಪರೂಪವನ್ನು ಇಡುವುದರ ಕಡೆಗೆ ಜೀವದ ಒಲವಿರಬೇಕು. ನಮಗೆ ಅನೇಕದಿಂದ ಏಕದ ಕಡೆಗೆ ಹೋಗಬೇಕಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಮತ್ತು ಅದಕ್ಕನುಸಾರ ಈಶ್ವರನ ಬಗ್ಗೆ ಶ್ರದ್ಧೆಯನ್ನು ನಿರ್ಮಿಸುವ ಧ್ಯೇಯವನ್ನಿಟ್ಟುಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ನಾವು ಸಗುಣ ಸಾಧನೆಯಿಂದ ನಿರ್ಗುಣ ಸಾಧನೆಯ ಕಡೆಗೆ ಹೋಗಬಹುದು.
ಮೇಲೆ ಕೊಟ್ಟಂತೆ ದೇವರ ಕೋಣೆಯಲ್ಲಿ ದೇವರ ಜೋಡಣೆ ಮಾಡಿದುದರಿಂದ ಬಂದ ಅನುಭೂತಿ : ದೇವರ ಮಂಟಪದಲ್ಲಿ ದೇವರನ್ನು ಯೋಗ್ಯರೀತಿಯಲ್ಲಿ ಜೋಡಣೆ ಮಾಡಿದ ಬಳಿಕ ಹತ್ತು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಸ್ತ್ರೀಯು ಎದ್ದು ನಿಲ್ಲುವುದು: ನಾನು ರಾಯಗಡ ಜಿಲ್ಲೆಯ ರೋಹಾ ತಾಲೂಕಿನ ಖಾರಪಟ್ಟಿ ಎಂಬ ಊರಿನಲ್ಲಿರುವ ನನ್ನ ಸ್ನೇಹಿತನ ಮನೆಗೆ ಹೋಗಿದ್ದೆ. ಅವರ ದೇವರ ಮಂಟಪದಲ್ಲಿ ದೇವರನ್ನು ಯೋಗ್ಯರೀತಿಯಲ್ಲಿ ಜೋಡಿಸಿರಲಿಲ್ಲ. ನಾನು ಅವನಿಗೆ, ‘ಶ್ಯಾಮ, ಏನಿದು? ದೇವರನ್ನು ಅಡ್ಡಾದಿಡ್ಡಿಯಾಗಿ ಜೋಡಿಸಿಟ್ಟಿರುವುದರಿಂದ ನಿನ್ನ ಮನೆಯಲ್ಲಿ ಆಧ್ಯಾತ್ಮಿಕ ತೊಂದರೆಗಳ ಅರಿವಾಗುತ್ತಿದೆ. ಅವಶ್ಯವಿದ್ದಷ್ಟೇ ದೇವರನ್ನಿಟ್ಟು ಅವುಗಳನ್ನು ಯೋಗ್ಯರೀತಿಯಲ್ಲಿ ಜೋಡಣೆ ಮಾಡು. ಹೆಚ್ಚುವರಿ ದೇವತೆಗಳನ್ನು ವಿಸರ್ಜನೆ ಮಾಡು’ ಎಂದು ಹೇಳಿದೆ. ನಾನು ಹೇಳಿದ ಕೂಡಲೆ ಶ್ಯಾಮನು ಕೃತಿ ಮಾಡಿದನು. ಅನಂತರ ೧೦ ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಅವರ ತಾಯಿಯು ಗೋಡೆಯನ್ನು ಹಿಡಿದು ಎದ್ದು ನಿಲ್ಲತೊಡಗಿದಳು
– ಶ್ರೀ.ಅನಂತ ಕೊಕಬಣಕರ, ಘಾಟಕೋಪರ, ಮುಂಬೈ.
(ಹೆಚ್ಚಿನ ಮಾಹಿತಿಗಾಗಿ ಓದಿ ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ ‘ದೇವರ ಕೋಣೆ ಮತ್ತು ಪೂಜೆಯ ಉಪಕರಣಗಳು’)