ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಬಗ್ಗೆ ಉಪಯುಕ್ತ ಅಂಶಗಳು

ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ ಆಧ್ಯಾತ್ಮಿಕ ಸಾಧನೆ ಮಾಡುವವರಿಗೆ ಮಾತ್ರವಲ್ಲ ಜೀವನದಲ್ಲಿ ಆನಂದ ಅನುಭವಿಸಲು ಇಚ್ಛಿಸುವವರಿಗೂ ಉಪಯುಕ್ತವಾಗಿದೆ. ಈ ಪ್ರಕ್ರಿಯೆಯು ಯಾವುದೇ ಮಾರ್ಗದಿಂದ ಸಾಧನೆಯನ್ನು ಮಾಡುವವರಿಗೆ ಮಹತ್ವದ್ದಾಗಿದೆ ಏಕೆಂದರೆ ಇದರಿಂದ ಸಾಧನೆಗೆ ಆವಶ್ಯಕವಿರುವ ಮೂಲಭೂತ ಸಾತ್ತ್ವಿಕತೆ ಹೆಚ್ಚಿಸುತ್ತದೆ. ಈ ಪ್ರಕ್ರಿಯೆಯನ್ನು ಅನುಸರಿಸಿ ಸ್ವಭಾವದೋಷಗಳನ್ನು ಹೋಗಲಾಡಿಸುವುದರಿಂದ ನಮ್ಮ ಮನಸ್ಸು ಶಾಂತ ಮತ್ತು ಸ್ಥಿರವಾಗಿ ಜೀವನದಲ್ಲಿ ಎದುರಿಸುವ ಸಂಘರ್ಷದ ಸನ್ನಿವೇಶಗಳನ್ನು ಎದುರಿಸಲು ಆಂತರಿಕ ಶಕ್ತಿ ದೊರೆಯುತ್ತದೆ. ಈ ಪ್ರಕ್ರಿಯೆಯನ್ನು ಮಾಡುವಾಗ ನಾವು ಎದುರಿಸುವ ಪ್ರಸಂಗಗಳ ಅಧ್ಯಯನವನ್ನು ಹೇಗೆ ಮಾಡಬೇಕು, ಸ್ವಭಾವದೋಷವನ್ನು ಹೇಗೆ ಗುರುತಿಸಬೇಕು, ಯೋಗ್ಯ ದೃಷ್ಟಿಕೋನ ಹೇಗಿರಬೇಕು ಎಂದು ತಿಳಿಯಲು ಕೆಲವು ಪ್ರಸಂಗಗಳನ್ನು ಇಲ್ಲಿ ನೀಡಿದ್ದೇವೆ. ಸ್ವಭಾವದೋಷ ಹಾಗೂ ಅಹಂ ನಿರ್ಮೂಲನೆ ಪ್ರಕ್ರಿಯೆ ಕಲಿಯಲು ಸನಾತನ ಆಶ್ರಮಕ್ಕೆ ಬರುವವರಿಗೆ ಮಾರ್ಗದರ್ಶನ ನೀಡುವ ಸೌ. ಸುಪ್ರಿಯಾ ಮಾಥೂರ ಇವರು ನೀಡಿರುವ ದೃಷ್ಟಿಕೋನಗಳು ಮುಂದಿವೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ ಪ್ರಕ್ರಿಯೆಯನ್ನು ಮಾಡುವಾಗ ನಾವು ಎದುರಿಸುವ ಪ್ರಸಂಗಗಳ ಅಧ್ಯಯನವನ್ನು ಹೇಗೆ ಮಾಡಬೇಕು ಯೋಗ್ಯ ದೃಷ್ಟಿಕೋನ ಹೇಗಿರಬೇಕು ಎಂಬುವುದರ ಮಾರ್ಗದರ್ಶನ

Contents

ಪರಿಸ್ಥಿತಿಯನ್ನು ದೂಷಿಸುವುದು

ದೃಷ್ಟಿಕೋನ

೧. ಪರಿಸ್ಥಿತಿ ಹೇಗೂ ಇರಲಿ, ಅದರಲ್ಲಿ ತಾಳ್ಮೆಯು ಬಹಳ ಮಹತ್ವದ್ದಾಗಿರುತ್ತದೆ.

೨. ಪರಿಸ್ಥಿತಿಯನ್ನು ವಿವರಿಸಿ (ಅಂದರೆ ‘ಈ ರೀತಿ ಆಗಿತ್ತು, ಆದುದರಿಂದ ಆ ತಪ್ಪಾಯಿತು’ ಎಂದು ಹೇಳಿ) ನಂತರ ಕ್ಷಮೆ ಯಾಚಿಸುವುದು ಸಹ ಒಂದು ರೀತಿಯ ಸ್ಪಷ್ಟೀಕರಣವೇ ಆಗಿದೆ.

೩. ಸಾಧನೆಯಲ್ಲಿ ‘ನಾನು ಎಲ್ಲಿ ಹಿಂದೆ ಉಳಿದಿದ್ದೇನೆ’ ಎಂಬುದರ ವಿಚಾರ ಮಾಡುವ ಪ್ರಯತ್ನಗಳು ಹೆಚ್ಚಾಗಬೇಕು.

೪. ‘ಪರಿಸ್ಥಿತಿ ಬದಲಾಗಬೇಕು’, ಎಂಬ ವಿಚಾರಕ್ಕಿಂತ ‘ಆ ಪರಿಸ್ಥಿತಿಯಲ್ಲಿ ನಾನೇನು ಮಾಡಬೇಕು’ ಎನ್ನುವ ವಿಚಾರ ಆಗಬೇಕು, ಇದು ಸಾಧನೆಯಾಗಿದೆ.

೫. ‘ಪರಿಸ್ಥಿತಿಯಲ್ಲಿ ಸಿಲುಕಿಕೊಳ್ಳದೆ, ಈ ಪರಿಸ್ಥಿತಿಯು ಸಾಧನೆಗಾಗಿಯೇ ಉದ್ಭವಿಸಿದೆ’, ಎಂಬ ಚಿಂತನೆ ಹೆಚ್ಚಾಗಬೇಕು.

 ಬುದ್ಧಿಗೆ ಅರಿವಾದರೂ ಪರಿಸ್ಥಿತಿ ಸ್ವೀಕಾರವಾಗದೇ ಪ್ರತಿಕ್ರಿಯೆ ಬರುವುದು ಹಾಗೂ ಅದಕ್ಕೆ ಸ್ಪಷ್ಟೀಕರಣ ನೀಡುವುದು

ದೃಷ್ಟಿಕೋನ

೧. ಸ್ವಭಾವದೋಷ ನಿರ್ಮೂಲನೆಯಲ್ಲಿ ನಮಗೆ ಸ್ವಯಂಸೂಚನೆಯು ಶೇ. ೫೦ ಹಾಗೂ ಕೃತಿಯ ಸ್ತರದ ಪ್ರಯತ್ನಗಳು ಶೇ. ೫೦ ರಷ್ಟು ಸಹಾಯ ಮಾಡುತ್ತವೆ.

೨. ತಪ್ಪನ್ನು ಸಮರ್ಥಿಸಿಕೊಂಡು ಜೊತೆಗೆ ಕ್ಷಮಾಯಾಚನೆ ಮಾಡುವುದರಿಂದ ಏನೂ ಉಪಯೋಗವಾಗುವುದಿಲ್ಲ. ಈಶ್ವರನಿಗೆ ಎಲ್ಲರ ಪರಿಸ್ಥಿತಿ ತಿಳಿದಿರುತ್ತದೆ. ಸಾಧಕನ ಭಕ್ತಿ, ಶ್ರದ್ಧೆ ಹಾಗೂ ತಳಮಳಕ್ಕನುಸಾರ ಈಶ್ವರ ಅವರಿಗೆ ಪರಿಸ್ಥಿತಿಯನ್ನು ಸ್ವೀಕರಿಸಲು ಮತ್ತು ಕಲಿಯಲು ಸಹಾಯ ಮಾಡುತ್ತಾನೆ.

೩. ಆದ್ದರಿಂದ ಇತರರು ಹೇಳಿದ್ದನ್ನು ಕೇಳುವುದು, ಹಾಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವುದು ಹಾಗೂ ಪ್ರಾಯಶ್ಚಿತ್ತ ತೆಗೆದುಕೊಳ್ಳುವುದು ಆವಶ್ಯಕವಾಗಿದೆ.

ಸ್ವಯಂಸೂಚನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.

ಸಹನಶೀಲತೆ ಇಲ್ಲದಿರುವುದರಿಂದ ಮನಸ್ಸಿನ ವಿರುದ್ಧ ಪ್ರಸಂಗವಾದಾಗ ಕಿರಿಕಿರಿ ಆಗುವುದು

ದೃಷ್ಟಿಕೋನ

೧. ಮನಸ್ಸಿನ ವಿರುದ್ಧ ಏನಾದರೂ ಘಟಿಸಿದಾಗ ಹೇಳುವವರ ಬಗ್ಗೆ ಕಿರಿಕಿರಿಯಾಗಿ ನಮಗೆ ಅದು ಸಹನೆಯಾಗುವುದಿಲ್ಲ. ಆಗ ಮನಸ್ಸಿಗೆ ಸಾಧಕತ್ವವನ್ನು ಕಲಿಸಬೇಕು. ನಮ್ಮ ಮನಸ್ಸಿನ ವಿರುದ್ಧ ಪ್ರಸಂಗ ನಡೆದ ತಕ್ಷಣ ನಕಾರಾತ್ಮಕ ವಿಚಾರ ಹಾಗೂ ಪ್ರತಿಕ್ರಿಯೆಗಳು ಬರಲಾರಂಭಿಸುತ್ತವೆ. ‘ನಾನು ಸಾಧನೆ ಒಳ್ಳೆಯದಾಗಿ ಮಾಡಬೇಕು’, ಎನ್ನುವ ವಿಚಾರವಿದ್ದರೂ ಪ್ರಯತ್ನ ಆಗದೇ ಮನಸ್ಸಿನ ಸಿದ್ಧತೆ ಆಗುವುದಿಲ್ಲ ಹಾಗೂ ‘ತನಗೆ ಮಿತಿಯಿದೆ’, ಎಂದು ಅನಿಸುತ್ತದೆ.

೨. ಪ್ರಯತ್ನದಲ್ಲಿ ರಿಯಾಯಿತಿ ತೆಗೆದುಕೊಳ್ಳದೆ ನಿರಂತರ ಕಲಿಯುವ ಹಾಗೂ ತಿಳಿದುಕೊಳ್ಳುವ ಸ್ಥಿತಿಯಲ್ಲಿರಬೇಕು. ಅದರಲ್ಲಿ ತನ್ನನ್ನು ಬದಲಾಯಿಸಿಕೊಳ್ಳುವ ತವಕ ಹೆಚ್ಚು ಪ್ರಮಾಣದಲ್ಲಿರಬೇಕು.

೩. ಅಯೋಗ್ಯ ವಿಚಾರ ಬಂದಾಗ ಅದರಲ್ಲಿ ಯೋಗ್ಯ ಬದಲಾವಣೆ ಮಾಡಿಕೊಳ್ಳಬೇಕು. ಬದಲಾವಣೆಗಾಗಿ ಕೃತಿಯನ್ನು ಮಾಡದೇ ಕೇವಲ ವಿಚಾರದಲ್ಲಿಯೇ ಇದ್ದರೆ ಪರಿಣಾಮವಾಗುವುದಿಲ್ಲ.

೪. ಕಿರಿಕಿರಿಯಾದರೆ ಶಿಕ್ಷಾಪದ್ಧತಿಯನ್ನು ಉಪಯೋಗಿಸಬೇಕು. ಅದಕ್ಕಾಗಿ ಇಂತಹ ವಿಚಾರ, ಪ್ರತಿಕ್ರಿಯೆಗಳು ಎಲ್ಲೆಲ್ಲಿ ಬರುತ್ತವೆ ಹಾಗೂ ಕಿರಿಕಿರಿಯಾಗುತ್ತದೆ ಎಂಬ ಬಗ್ಗೆ ಪ್ರತಿ ೨ ಗಂಟೆಗೆ ಒಮ್ಮೆ ಚಿಂತನೆ ಮಾಡಬೇಕು.

ಸಾಧನೆಯ ಪ್ರಯತ್ನಗಳಾಗದಿರುವಾಗ ತಮ್ಮ ಸಾಧನೆಯ ವರದಿ ಕೇಳಬಾರದು, ಎಂದೆನಿಸುವುದು

ದೃಷ್ಟಿಕೋನ

೧. ಸಾಧನೆಯ ಪ್ರಯತ್ನಗಳು ಆಗದಿರುವಾಗ, ನಮ್ಮ ಉತ್ಸಾಹ ಕಡಿಮೆಯಿರುತ್ತದೆ. ಮನಸ್ಸಿನ ಸ್ಥಿತಿಯಿಂದ ಕೃತಿಯ ಮೇಲೆ ಪರಿಣಾಮವಾಗುತ್ತದೆ ಮತ್ತು ರಿಯಾಯಿತಿ ತೆಗೆದುಕೊಳ್ಳುವುದು, ಮುಂದೂಡುವಿಕೆ ಮತ್ತು ನಿರುತ್ಸಾಹ ಹೆಚ್ಚುತ್ತದೆ. ಸಾಧನೆಯಲ್ಲಿ ಮನಸ್ಸಿನಿಂದ ಹೆಚ್ಚು ಪಾಲ್ಗೊಳ್ಳಬೇಕಾಗುತ್ತದೆ. ಮನಸ್ಸಿನಲ್ಲಿ ಉತ್ಸಾಹವಿದ್ದರೆ, ಪ್ರತಿಯೊಂದು ಕೃತಿ ಯೋಗ್ಯ ಸಮಯದಲ್ಲಿಯೇ ಆಗುತ್ತದೆ.

೨. ಉತ್ಸಾಹವನ್ನು ಹೆಚ್ಚಿಸಲು ದಿನಕ್ಕೆ ೫ ಬಾರಿ ಆತ್ಮನಿವೇದನೆಯನ್ನು ಮಾಡಬೇಕು. ಸತತವಾಗಿ ಅನುಸಂಧಾನದಲ್ಲಿದ್ದರೆ ಚೈತನ್ಯ ಮತ್ತು ಉತ್ಸಾಹದಲ್ಲಿ ಹೆಚ್ಚಳವಾಗುತ್ತದೆ ಮತ್ತು ಕೃತಿಗಳನ್ನು ತತ್ಪರವಾಗಿ ಮಾಡಲು ಸಾಧ್ಯವಾಗುತ್ತದೆ. ಪ್ರತಿಯೊಂದು ಕೃತಿಗೆ ಭಾವದ ಪ್ರಯತ್ನಗಳನ್ನು ಸೇರಿಸಿ ಮಾಡಿದರೆ ಅದರಿಂದ ಸಾಧನೆಯಾಗುತ್ತದೆ.

೩. ಮನುಷ್ಯನಿಗೆ ವ್ಯಾವಹಾರಿಕ ಜೀವನದಲ್ಲಿ ತುಂಬಾ ಆಶೆಗಳಿರುತ್ತವೆ. ಅನೇಕ ಬಾರಿ ವಿಫಲನಾದರೂ, ಅವನು ಪ್ರಯತ್ನಿಸುವುದನ್ನು ಬಿಡದೇ ಪುನಃ ಪುನಃ ಪ್ರಯತ್ನಿಸುತ್ತಾನೆ. ಸಾಧನೆಯಲ್ಲಿಯೂ ಹೀಗೆಯೇ ಪ್ರಯತ್ನಿಸಬೇಕು. ಸಂಪೂರ್ಣ ಜೀವನವು ಪ್ರಾರಬ್ಧದ ಮೇಲೆ ಅವಲಂಬಿಸಿರುತ್ತದೆ; ಆದರೆ ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸಿದರೆ ಪ್ರಾರಬ್ಧವು ಸಹ್ಯವಾಗುತ್ತದೆ. ಅದಕ್ಕಾಗಿ ಪ್ರಾರಬ್ಧಕ್ಕೆ ಸಂಬಂಧಿಸುವ ಪ್ರತಿಯೊಂದು ವಿಚಾರದಲ್ಲಿಯೂ ಆಧ್ಯಾತ್ಮಿಕ ದೃಷ್ಟಿಕೋನದಿಂದ ವಿಚಾರ ಮಾಡಬೇಕು.

೪. ನಾವು ಪೂರ್ಣವೇಳೆ ಸಾಧನೆಯನ್ನು ಮಾಡಲು ಸಂಸಾರವನ್ನು ತ್ಯಜಿಸಿರುತ್ತೇವೆ. ಇಷ್ಟೊಂದು ತ್ಯಾಗ ಮಾಡಿದ ಫಲ ನಮಗೆ ಸಿಕ್ಕೇ ಸಿಗುತ್ತದೆ; ಆದರೆ ಅದನ್ನು ಪಡೆಯುವ ವೇಗವನ್ನು ಹೆಚ್ಚಿಸಬೇಕು. ಕೇವಲ ನಮ್ಮ ಕ್ಷಮತೆಯನ್ನು ಮಾತ್ರ ಅವಲಂಬಿಸಿರದೇ ಈಶ್ವರನನ್ನು ಅವಲಂಬಿಸಿದ್ದರೆ, ಉತ್ಸಾಹ, ತತ್ಪರತೆ ಬರುತ್ತದೆ.

ಕೃತಿಯ ಸ್ತರದ ತಪ್ಪುಗಳು ಮರುಕಳಿಸುವುದು

ದೃಷ್ಟಿಕೋನ

೧. ಮನಸ್ಸಿನ ಯಾವ ಅಯೋಗ್ಯ ವಿಚಾರದಿಂದ ತಪ್ಪು ಕೃತಿಯಾಗುತ್ತದೆ ಎಂಬುದರತ್ತ ಗಮನ ಹರಿಸಬೇಕು. ಮನಸ್ಸು ಒಂದೇ ಸಲಕ್ಕೆ ಅನೇಕ ವಿಚಾರಗಳನ್ನು ಮಾಡುತ್ತಿರುತ್ತದೆ. ಅದು ಯಾವ ವಿಚಾರದಲ್ಲಿದೆ – ಸಾಧನೆಗನುಸಾರ ಕಾರ್ಯನಿರತವಾಗಿದೆಯೋ ಅಥವಾ ಅನಾವಶ್ಯಕ ವಿಚಾರಗಳಲ್ಲಿ ಸಿಲುಕಿದೆ ಎಂಬುದನ್ನು ಗಮನಿಸಬೇಕು. ಆ ವಿಚಾರಪ್ರಕ್ರಿಯೆ ಬರೆಯಬೇಕು. ಮನಸ್ಸಿನಲ್ಲಿರುವ ವಿಚಾರಗಳತ್ತ ಗಮನ ಹರಿಸದಿದ್ದರೆ ಅದರ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಲು ಸಾಧ್ಯವಿಲ್ಲ. ಮನಸ್ಸಿನ ಕಡೆ ಗಮನ ಕೊಡದಿದ್ದರೆ ಎಷ್ಟೇ ಸೇವೆ, ಕಾರ್ಯವನ್ನು ಮಾಡಿದರೂ, ಅದು ಪರಿಪೂರ್ಣವಾಗುವುದಿಲ್ಲ.

೨. ನಾವು ಎಲ್ಲಿಯೂ ಏನೇ ಮಾಡುತ್ತಿದ್ದರೂ [ಸ್ವಭಾವದೋಷ ಮತ್ತು ಅಹಂ ನಿರ್ಮೂಲನ] ಪ್ರಕ್ರಿಯೆಯು ಎಲ್ಲ ಕಡೆ ಒಂದೇ ರೀತಿ ನಡೆಯುತ್ತಿರಬೇಕು. ಆಶ್ರಮದಲ್ಲಿರುವಾಗ ಎಲ್ಲ ಕೃತಿಗಳನ್ನು ಅಚ್ಚುಕಟ್ಟಾಗಿ ಮತ್ತು ಸರಿಯಾಗಿ ಮಾಡುತ್ತೇವೆ. ಹೊರಗೆ ಅಥವಾ ಮನೆಗೆ ಹೋದಾಗ ಸ್ವಚ್ಛಂದ, ದೋಷಪೂರಿತ ಸ್ವಭಾವವು ಕಾಣಿಸಿಕೊಳ್ಳುತ್ತದೆ. ಏಕೆಂದರೆ ಆಶ್ರಮದಲ್ಲಿ ತೋರಿಕೆಗಾಗಿ ಪ್ರಯತ್ನಿಸುತ್ತೇವೆ. ಮನೆಯಲ್ಲಿ ಯಾರ ಬಂಧನವು ಇಲ್ಲದಿರುವುದರಿಂದ ಪ್ರಕ್ರಿಯೆ ನಿಲ್ಲುತ್ತದೆ. ಹೀಗೆ ಆಗಬಾರದೆಂದು ಸತತವಾಗಿ ಮನಸ್ಸಿನತ್ತ ಗಮನವಿರಬೇಕು.

೩. ಪರಾತ್ಪರ ಗುರುದೇವರು (ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆಯ ಜನಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು) ಮನಸ್ಸನ್ನು ಅರ್ಪಣೆ ಮಾಡಿಸುವುದಕ್ಕಾಗಿಯೇ ವ್ಯಷ್ಟಿ ಸಾಧನೆಯನ್ನು ಹೇಳಿದ್ದಾರೆ. ಆದರೂ ನಮ್ಮಿಂದ ಕೃತಿಯ ಸ್ತರದಲ್ಲಿ ಪ್ರಯತ್ನಗಳೇಕೆ ಆಗುವುದಿಲ್ಲ, ಎಂಬುದನ್ನು ಕಲಿಯಬೇಕಾದರೆ, ಮನಸ್ಸಿನಲ್ಲಿ ಬರುವ ವಿಚಾರಗಳ ಬಗ್ಗೆ ಚಿಂತನೆ ಮಾಡಲೇಬೇಕು. ಏನೂ ತಿಳಿಯದಿದ್ದರೆ, ಇತರರ ಸಹಾಯ ಪಡೆಯಬೇಕು.

ಮನೆಗೆ ಹೋದ ನಂತರ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಬಗ್ಗೆ ದುರ್ಲಕ್ಷ

ದೃಷ್ಟಿಕೋನ

ಆಶ್ರಮದಲ್ಲಿರುವಾಗ ನಾವು ನಮ್ಮಲ್ಲಿ ಸಾಧನೆಯ ಬಂಧನವನ್ನು ಹಾಕಿ ಪ್ರಯತ್ನಿಸುತ್ತೇವೆ. ಮನೆಗೆ ಹೋದನಂತರ ಹಾಗೆ ಮಾಡುವುದಿಲ್ಲ. ಆದ್ದರಿಂದ ಸ್ವಭಾವದೋಷಗಳ ತೀವ್ರತೆ ಹೆಚ್ಚುತ್ತದೆ ಮತ್ತು ಪುನಃ ಉಮ್ಮಳಿಸಿ ಬರುವ ಸ್ವಭಾವದೋಷಗಳ ತೀವ್ರತೆಯನ್ನು ಕಡಿಮೆ ಮಾಡಲು ತುಂಬಾ ಸಮಯ ಕೊಡಬೇಕಾಗುತ್ತದೆ. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಗಾಗಿ ಮಾಡಿದ ಪ್ರಯತ್ನಗಳ ಮೇಲೆಯೂ ಪರಿಣಾಮ ಬೀರುತ್ತದೆ. ಪ್ರಕ್ರಿಯೆ ನಿಂತಿರುವುದರಿಂದ ಹೆಚ್ಚು ಪರಿಶ್ರಮ ಪಡಬೇಕಾಗುತ್ತದೆ. ಅದಕ್ಕಾಗಿ ಸಾತತ್ಯವಿರಿಸಲು ಹೆಚ್ಚು ಮಹತ್ವವನ್ನು ಕೊಡಬೇಕು.

ಸೇವೆಯಲ್ಲಿ ಪರಿಪೂರ್ಣತೆ ಇಲ್ಲದಿರುವುದು

ದೃಷ್ಟಿಕೋನ

೧. ನಾವು ಸೇವೆಯನ್ನು ಹೇಗೆ ಮಾಡುತ್ತೇವೆ ಎನ್ನುವುದು ಸೇವೆಯಲ್ಲಿ ನಮ್ಮ ಪಾಲುಗೊಳ್ಳುವಿಕೆ ಎಷ್ಟಿದೆ ಎಂಬುವುದನ್ನು ಅವಲಂಬಿಸಿರುತ್ತದೆ.

೨. ಅಲ್ಪ ಸಂತುಷ್ಟುರಾಗಿದ್ದರೆ ಜೀವ ಸವೆಸಿ ಸೇವೆ ಮಾಡಲು ಅಡಚಣೆಯಾಗುತ್ತದೆ.

೩. ಈಶ್ವರನ ಚರಣಗಳಲ್ಲಿ ಸಮರ್ಪಿತರಾಗಿ ಸೇವೆ ಮಾಡಿದರೆ ಈಶ್ವರನ ಸಹಾಯ ಸಿಗುತ್ತದೆ. ನಾವು ಎಲ್ಲವನ್ನು ನಿಯಮ, ವ್ಯಾಪ್ತಿ, ನಿರ್ದಿಷ್ಟ ಕಾರ್ಯಪದ್ಧತಿಗನುಸಾರ ಮಾಡುತ್ತಿರುತ್ತೇವೆ; ಆದರೆ ಮತ್ತಷ್ಟು ಉತ್ತಮವಾಗಿ ಸೇವೆಯಾಗಲು ಉನ್ನತರಿಗೆ ಕೇಳಿ ಕೇಳಿ ಮಾಡಿದರೆ ಪ್ರಕ್ರಿಯೆ ಉತ್ತಮವಾಗುತ್ತದೆ.

೪. ನಿರಂತರ ಕಲಿಯುವ ಆಸಕ್ತಿಯಿರಬೇಕು.

೫. ಸ್ವಂತ ವರದಿಯನ್ನು ಹೆಚ್ಚು ಗಾಂಭೀರ್ಯದಿಂದ ತೆಗೆದುಕೊಳ್ಳ ಬೇಕು. ಅಲ್ಪಸಂತುಷ್ಟರಾಗುತ್ತಿದ್ದೇವೆ ಎಂದ ತಕ್ಷಣ ತಳಮಳ ಹೆಚ್ಚಿಸಲು ಸ್ವಯಂಸೂಚನೆ ನೀಡಬೇಕು.

೬. ಒಂದೇ ಸೇವೆಯನ್ನು ಸತತವಾಗಿ ಮಾಡಿದ್ದರಿಂದ ನನಗೆ ಆ ಸೇವೆ ಮಾಡಲು ಬರುತ್ತದೆ ಮತ್ತು ಕೃತಿಯ ಸ್ತರದಲ್ಲಿಯೂ ಯೋಗ್ಯ ರೀತಿಯಲ್ಲಿ ಆಗುತ್ತದೆ. ಆದುದರಿಂದ ಮುಂದೆ ನನ್ನಲ್ಲಿ ದೈವೀ ಗುಣವನ್ನು ಹೆಚ್ಚಿಸಲು ಪ್ರಯತ್ನಿಸಬೇಕು. ‘ಆ ಸೇವೆ ನನಗೆ ಬರುತ್ತದೆ, ನಾನು ಮಾಡುತ್ತಿದ್ದೇನೆ’, ಎಂದರೆ ಇದರರ್ಥ ಪರಿಪೂರ್ಣತೆಯಲ್ಲ!

೭. ದೇಹಶುದ್ಧಿಗಾಗಿ ದೇವರು ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯನ್ನು ನೀಡಿದ್ದಾರೆ. ಆದುದರಿಂದ ಆ ಮಟ್ಟದ ಪ್ರಕ್ರಿಯೆಯಾಗಬೇಕು, ಎನ್ನುವ ಸಕಾರಾತ್ಮಕ ವಿಚಾರವನ್ನು ನಿರಂತರವಾಗಿ ಮಾಡುವುದು ಮಹತ್ವದ್ದಾಗಿದ್ದು, ಇದರ ಚಿಂತನೆಯಾಗಬೇಕು.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆಯಲ್ಲಿ ಪ್ರಾರಂಭದಲ್ಲಿದ್ದ ಉತ್ಸಾಹ ಕಡಿಮೆಯಾಗುವುದು

ದೃಷ್ಟಿಕೋನ

೧. ನಾವು ಶಾರೀರಿಕ ದೃಷ್ಟಿಯಿಂದ ದುರ್ಬಲರಾಗಿದ್ದರೂ, ಮನಸ್ಸಿನಲ್ಲಿ ಉತ್ಸಾಹವಿದ್ದರೆ ಪ್ರಯತ್ನಗಳಾಗುತ್ತವೆ. ಪ್ರಾರಂಭದಲ್ಲಿ ಮಾಡಲೇಬೇಕು ಎನ್ನುವ ಉತ್ಸಾಹವಿರುತ್ತದೆ. ಆದರೆ ನಂತರ ‘ಸ್ವಲ್ಪ ಸ್ವಲ್ಪವೇ ಮಾಡುತ್ತ ಹೋಗೋಣ’, ಎನ್ನುವ ವಿಚಾರ ಬರುವುದು ಎಂದರೆ ‘ನಿರಂತರವಾಗಿ ಒಂದೇ ಕೃತಿಯನ್ನು ಮಾಡಲು ನಿರಾಸಕ್ತಿ ಅಥವಾ ಬೇಸರ ಬರುವುದು’, ಎಂದು ಹೇಳಬಹುದು.

೨. ವಾಸ್ತವದಲ್ಲಿ ಮನಸ್ಸಿನಲ್ಲಿ ಸ್ವಭಾವದೋಷ ಮತ್ತು ಅಹಂ ಇವುಗಳ ನಿರ್ಮೂಲನೆ ಪ್ರಕ್ರಿಯೆಯ ವಿಷಯದಲ್ಲಿ ಉತ್ಸಾಹವಿದ್ದರೆ ಆಧ್ಯಾತ್ಮಿಕ ಸ್ತರದ ನಾವೀನ್ಯತೆ ಸಿಗುತ್ತದೆ; ಆದರೆ ಮನೋರಾಜ್ಯದಲ್ಲಿ ವಿಹರಿಸಿದರೆ ಕೇವಲ ವಿಚಾರಗಳೇ ಆಗುತ್ತವೆ, ಕೃತಿಯಾಗುವುದಿಲ್ಲ. ಅದನ್ನೇ ಅಂತರ್ಮುಖತೆಯಿಂದ ಮಾಡಿದರೆ ಆಧ್ಯಾತ್ಮಿಕ ಸ್ತರದ ನಾವೀನ್ಯ ದೊರಕುತ್ತದೆ.

೩. ಪ್ರಕ್ರಿಯೆಯನ್ನು ಬುದ್ಧಿಯಿಂದ ಮಾಡಿದರೆ ನಿರುತ್ಸಾಹವೆನಿಸುತ್ತದೆ. ಸ್ವಲ್ಪ ಸ್ವಲ್ಪ ಮಾಡುತ್ತ ಹೋಗೋಣ ಎನ್ನುವ ವಿಚಾರದ ವೇಗದಲ್ಲಿ ಮುಂದುವರಿದರೆ ಬಹಳ ಸಮಯ ಬೇಕಾಗುತ್ತದೆ. ನಮಗೆ ಸಿಗುವ ಊರ್ಜೆಯು ಭಗವಂತನ ಅಂಶವಾಗಿರುತ್ತದೆ; ಆದ್ದರಿಂದ ಪ್ರಕ್ರಿಯೆಯನ್ನು ಅದೇ ವೇಗದಿಂದ ಮಾಡಬೇಕು.

ಕ್ಷಮೆಯಾಚಿಸುವುದು ಮತ್ತು ಪ್ರಾಯಶ್ಚಿತ್ತ

ದೃಷ್ಟಿಕೋನ

೧. ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಪ್ರಕ್ರಿಯೆ ಎಂದರೆ ಸಾಧನೆಯ ವೇಗ ಹೆಚ್ಚಿಸಲು ಈಶ್ವರನು ನೀಡಿರುವ ಅಮೂಲ್ಯ ಅವಕಾಶ. ಆದರೆ ಕಲಿಯುವುದಕ್ಕಿಂತಲೂ ಅಧಿಕಾರವಾಣಿ ಮತ್ತು ಇತರರಿಗೆ ಕಲಿಸುವ  ಸ್ವಭಾವದೋಷಗಳಿದ್ದರೆ ಈ ಪ್ರಕ್ರಿಯೆಯಲ್ಲಿ ಏನೂ ಸಾಧಿಸಲು ಆಗುವುದಿಲ್ಲಿ.

೨. ಕ್ಷಮೆ ಯಾಚಿಸುವಾಗ ಕೂಡ ಪರಿಸ್ಥಿತಿ ಹೇಳಿ ಕ್ಷಮೆ ಯಾಚಿಸುವುದು ಎಂದರೆ ಸ್ಪಷ್ಟೀಕರಣವೇ ಆಯಿತು. ಉದಾ. ನನ್ನ ಮಾತಿನಿಂದ ನಿಮಗೆ ಬೇಸರ ಅನಿಸಿದರೆ ಕ್ಷಮಿಸಿ, ಇಂತಹ ಮೇಲು ಮೇಲಿನ ಕ್ಷಮೆಯಾಚನೆ ಅಂತಃಕರಣದಿಂದ ಆಗುವುದಿಲ್ಲ. ಕ್ಷಮೆ ಕೇಳುವಾಗ ಅದು ದೋಷರಹಿತ ಮತ್ತು ಅದರಲ್ಲಿ ಯಾಚಕನ ಭಾವವಿರಬೇಕು.

೩. ಪ್ರತಿಯೊಂದು ತಪ್ಪಿಗೆ ಕಠೋರ ಪ್ರಾಯಶ್ಚಿತ್ತ ತೆಗೆದುಕೊಂಡರೆ, ಪ್ರಯತ್ನದಲ್ಲಿ ವೇಗ ಬರಬಹುದು. ಸ್ಥಿತಿಯ ಅರಿವು ಮಾಡಿಕೊಟ್ಟರೂ ಅರಿವಾವುಗುದಿಲ್ಲವೆಂದರೆ ಸಾಧನೆಯ ಸ್ಥಿತಿ ಗಂಭೀರವಾಗಿದೆ, ಎಂದು ತಿಳಿದು ಪ್ರಯತ್ನಿಸಬೇಕು.

ಸಾಧನೆಯ ಸಂಸ್ಕಾರವಾಗಲು ಪ್ರಯತ್ನಿಸಬೇಕು

ದೃಷ್ಟಿಕೋನ

೧. ಏನಾದರೂ ಸಾಧಿಸಬೇಕಾದರೆ ಅದಕ್ಕೆ ಪ್ರಯತ್ನಗಳ ಜೊತೆ ಇರಲೇಬೇಕು. ಕೇವಲ ವಿಚಾರದಿಂದ ಧ್ಯೇಯ ಸಾಧಿಸಲಾಗದು. ಉದಾ. ಮಕ್ಕಳು ಒಳ್ಳೆಯ ರೀತಿ ಅಭ್ಯಾಸ ಮಾಡಬೇಕು, ಈ ರೀತಿ ವಿಚಾರ ಅವರ ಮುಂದೆ ಮಂಡಿಸಿ ನಾವು ಅವರ ಎದುರೇ ಟಿವಿ ನೋಡುತ್ತಾ ಕುಳಿತುಕೊಂಡರೆ, ಆಗ ಸಾಧ್ಯವಾಗುವುದೇ? ಅಂತಹ ಸಮಯದಲ್ಲಿ ಟಿವಿ ಆರಿಸಿ ಅವರಲ್ಲಿ ಅಭ್ಯಾಸ ಮಾಡುವ ಸಂಸ್ಕಾರವನ್ನು ನಾವೇ ಮೂಡಿಸಬೇಕಾಗುತ್ತದೆ.

೨. ನನಗೆ ಪ್ರಯತ್ನ ಮಾಡಬೇಕೆಂಬ ವಿಚಾರ ಇದೆ; ಆದರೆ ಪ್ರತ್ಯಕ್ಷದಲ್ಲಿ ಪ್ರಯತ್ನಗಳಾಗುತ್ತಿಲ್ಲ. ಪ್ರಯತ್ನ ಏಕೆ ಆಗುವುದಿಲ್ಲ ಎಂಬುವುದರತ್ತ ಗಾಂಭೀರ್ಯದಿಂದ ಗಮನ ನೀಡಬೇಕು.

೩. ಪ್ರತಿಯೊಂದು ಕ್ಷಣ ನನಗಾಗಿ ಗುರುಪೂರ್ಣಿಮೆಯೇ ಆಗಿದೆ. ಗುರುಪೂರ್ಣಿಮೆಯ ಸಮಯದಲ್ಲಿ ನಿರಂತರ ನಾಮಜಪ ಆಗಬೇಕು, ಹೀಗೆ ಅನಿಸುತ್ತಿದ್ದರೆ ನಾಮಜಪದ ಸಂಸ್ಕಾರ ಆಗಬೇಕೆಂದು ಸಂಪೂರ್ಣ ವರ್ಷವಿಡೀ ಪ್ರಯತ್ನ ಮಾಡಬೇಕಾಗುತ್ತದೆ. ಆದ್ದರಿಂದ ಈಶ್ವರನ ಅನುಸಂಧಾನದಲ್ಲಿ ಇರುವುದು ಸಾಧ್ಯವಾಗುತ್ತದೆ .

೪. ಸತತವಾಗಿ ಇಡೀ ವರ್ಷ ಈಶ್ವರನ ಸಮಷ್ಟಿಯಲ್ಲಿ ಸಮರ್ಪಿತರಾಗಬೇಕು ಎಂಬ ವಿಚಾರವಿದ್ದರೆ ಮಾತ್ರ ಕೃತಿಯ ಸ್ತರದ ಪ್ರಯತ್ನಗಳಿಗೆ ವೇಗ ಸಿಗುತ್ತದೆ. ನಕಾರಾತ್ಮಕ ವಿಚಾರಗಳಿದ್ದರೆ ಈಶ್ವರ ಏನು ಕೊಡುತ್ತಿದ್ದಾನೆಯೋ ಅದನ್ನು ಕೂಡ ಸ್ವೀಕರಿಸಲು ಆಗುವುದಿಲ್ಲ. ಎಲ್ಲರೂ ಸಾಧನೆಯ ಸಂಸ್ಕಾರ ಮಾಡಲು ಹೆಚ್ಚೆಚ್ಚು ಪ್ರಯತ್ನಿಸಬೇಕು.

ಪ್ರಸಂಗಗಳ ಅಧ್ಯಯನ

ಪ್ರಸಂಗ ೧ – ಒಬ್ಬ ನನ್ನ ತಪ್ಪು ಹೇಳಿದ್ದರಿಂದ ಉದ್ದೇಶಪೂರ್ವಕವಾಗಿ ಮತ್ತು ದ್ವೇಷ ಬುದ್ಧಿಯಿಂದ ಅವನ ತಪ್ಪು ಹೇಳುವುದು

ದೃಷ್ಟಿಕೋನ – ಪೂರ್ವಗ್ರಹದಿಂದ ಅಧೋಗತಿ ಆಗುತ್ತದೆ. ಪಾಠ ಕಲಿಸುವುದು ಅಥವಾ ಸೇಡು ತೀರಿಸಿಕೊಳ್ಳುವ ವಿಚಾರ ಎಷ್ಟು ಇದೆ ಎಂಬುವುದರ ಅಭ್ಯಾಸ ಮಾಡಬೇಕು. ಎಲ್ಲ ವಿಚಾರಗಳನ್ನು ಹೇಳಿ ಇತರರ ಸಹಾಯ ಪಡೆಯಬೇಕು.

ಪ್ರಸಂಗ ೨ – ವರ್ಷಗಟ್ಟಲೆ ಒಂದೇ ಸೇವೆ/ಕೆಲಸ ಮಾಡುವುದರಿಂದ ಕಾರ್ಯದಲ್ಲಿ ಅತಿಆತ್ಮವಿಶ್ವಾಸ ಮತ್ತು ಪದೇ ಪದೇ ಅದನ್ನೇ ಮಾಡಿದರಿಂದ ಪಾಲುಗೊಳ್ಳುವಿಕೆ ಮತ್ತು ಉತ್ಸಾಹ ಇಲ್ಲದಿರುವುದು

ದೃಷ್ಟಿಕೋನ

೧. ಅನುಭವದ ಅಹಂನಿಂದ ಪರಿಪೂರ್ಣತೆ ಕಡಿಮೆ ಆಗುತ್ತದೆ. ೧೦ ವರ್ಷಗಳಾದರೂ ಅದೇ ತಪ್ಪಾಗುವುದು ಅಕ್ಷಮ್ಯವಾಗಿದೆ.

೨. ಪ್ರಾಥಮಿಕ ಹಂತದಲ್ಲಿ ಇಂತಹ ತಪ್ಪು ಆಗಬಹುದು; ಆದರೆ ನಾವು ತಪ್ಪಿನಿಂದ ಕಲಿಯುವುದಿಲ್ಲ ಎಂದು ಇದರಿಂದ ಗಮನಕ್ಕೆ ಬರುತ್ತದೆ. ನಮ್ಮ ನಂತರ ಪರಿಶೀಲನೆ ಮಾಡುವವರು ಯಾರು ಇಲ್ಲ, ಹೀಗಿದ್ದರೆ ಆ ವಿಷಯದಲ್ಲಿ ನಮ್ಮಲ್ಲಿ ಸತರ್ಕತೆ ಮತ್ತು ಜವಾಬ್ದಾರಿಯ ಅರಿವು ಎಷ್ಟು ಇದೆ ಎಂಬುವುದರ ಚಿಂತನೆ ಆಗಬೇಕು.

೩. ಗಾಂಭೀರ್ಯವನ್ನು ಕೂಡ ಹೆಚ್ಚಿಸಬೇಕು. ಸೇವೆಯ ಬಗ್ಗೆ ಅಜ್ಞಾನ ಇದ್ದರೆ ಅದನ್ನು ಹೇಳಬೇಕು. ಆದರೆ ತಿಳಿದಿದ್ದರೂ ನಮ್ಮಿಂದ ತಪ್ಪುಗಳು ಆದರೆ ನಮ್ಮಲ್ಲಿ ಯಾವುದೇ ರೀತಿಯ ಪ್ರಕ್ರಿಯೆ (ಚಿಂತನ, ಮಂಥನ) ಆಗುವುದಿಲ್ಲ; ಅಂದರೆ ಸಾಧನೆಯಲ್ಲಾಗುವ ಹಾನಿಯನ್ನು ನಿಲ್ಲಿಸಲಾಗುವುದಿಲ್ಲ ಮತ್ತು ಅಧೋಗತಿಯ ವೇಗ ಹೆಚ್ಚುವುದು.

ಪ್ರಸಂಗ ೩ – ನಾನು ತುಂಬಾ ಪ್ರಯತ್ನ ಪಟ್ಟೆ, ಆದರೆ ನನ್ನ ಪ್ರಗತಿಯಾಗದಿರಲು ಪರಿಸ್ಥಿತಿಯೇ ಕಾರಣವಾಗಿದೆ ಎಂಬ ವಿಚಾರ.

ದೃಷ್ಟಿಕೋನ

೧. ಪ್ರಗತಿಯ ವಿಷಯದಲ್ಲಿ ದೈಹಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಭಾಗ, ಹಾಗೆಯೇ ಹಲವಾರು ಕಾರಣಗಳಿರುವ ಸಾಧ್ಯತೆ ಇದೆ.

೨. ಇತರ ವ್ಯಕ್ತಿಗಳಿಂದ ನಮ್ಮ ಸಾಧನೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

೩. ತಿಳಿದುಕೊಳ್ಳಲು ಎಲ್ಲಿ ಕಡಿಮೆಬಿದ್ದೆ? ವ್ಯಷ್ಟಿ ಮಟ್ಟದಲ್ಲಿ ಎಲ್ಲಿ ಕಡಿಮೆಬಿದ್ದೆ? ಫಲನಿಷ್ಪತ್ತಿಯ ಪರಿಕಲ್ಪನೆಯ ಬಗ್ಗೆ ಪರಿಗಣಿಸಲಾಯಿತೇ? ಪ್ರಗತಿಯು ಬಾಹ್ಯವಾಗಿ ಮಾಡಿದ ಕೃತಿಗಳಿಗಿಂತ ಆಂತರಿಕ ಪ್ರಕ್ರಿಯೆ ಮೇಲೆ ಹೆಚ್ಚು ಅವಲಂಬಿಸಿದೆ.

೪. ನಮ್ಮ ಸೇವೆ ಎಷ್ಟು ಗಂಟೆ ಆಯಿತು ಎನ್ನುವುದಕ್ಕಿಂತ ಸೇವೆಯ ಅವಧಿಯಲ್ಲಿ ನನ್ನ ಸ್ವಭಾವದೋಷ ಮತ್ತು ಅಹಂ ಎಷ್ಟು ಕಾರ್ಯನಿರತವಾಗಿತ್ತು, ಎಂಬ ಆತ್ಮಚಿಂತನೆ ಹೆಚ್ಚಾಗಬೇಕು.

೫. ವಿಕಲ್ಪವು ಅಧೋಗತಿಗೆ ಕಾರಣವಾಗುತ್ತದೆ. ವಿಕಲ್ಪ ಬಂದಾಗ, ಈಶ್ವರನು ನಿರೀಕ್ಷಿಸಿದಂತೆ ನನ್ನಿಂದ ಪ್ರಯತ್ನಗಳಾಗಬೇಕು, ಎಂಬ ಸೆಳೆತ ಹೆಚ್ಚಬೇಕು. ಅದಕ್ಕಾಗಿ ವರ್ಷವಿಡೀ ಎಲ್ಲಿ ಕಡಿಮೆ ಬಿದ್ದೆ ಎಂಬುವುದರ ನಿರೀಕ್ಷಣೆ ಮಾಡಬೇಕು.

೬. ಸಾಧನೆಯ ಪ್ರಯತ್ನಗಳು ನಿರಂತರವಾಗಿರಬೇಕಾದರೆ ನಮ್ಮಲ್ಲಿರಿವ ಕೊರತೆಗಳು ಸ್ಪಷ್ಟವಾಗಿರಬೇಕು. ಸುಮ್ಮನೆ ದುಃಖಪಡುತ್ತ ಕೂಡುವುದಕ್ಕಿಂತ ನಮ್ಮ ಮನಸ್ಸಿಗೆ ಅರಿವು ಮಾಡಿಕೊಟ್ಟು ಮುಂದೆ ಮಾಡಬೇಕಾದ ಪ್ರಯತ್ನಗಳಿಗೆ ಚಾಲನೆ ನೀಡಬೇಕು. ತನ್ನ ತಪ್ಪುಗಳ ಬಗ್ಗೆ ಪ್ರತಿಯೊಂದು ಕಡೆ ಅರಿವಾಗಬೇಕು ಮತ್ತು ಅವುಗಳನ್ನು ಸ್ವೀಕರಿಸಬೇಕು. ಇದು ತಿಳಿದರೆ ಬದಲಾವಣೆ ಬೇಗನೆಯಾಗುತ್ತದೆ.

೭. ನಮ್ಮೊಳಗಿನ ಕೊರತೆಗಳಿಂದ ಕಲಿಯಲು ಪ್ರಯತ್ನಿಸಬೇಕು. ವಿಕಲ್ಪ (ಸಮಷ್ಟಿಯಿಂದ ನನ್ನ ಪ್ರಗತಿಯಾಗಲಿಲ್ಲ) ಏಕೆ ಬರುತ್ತದೆ ಎಂಬುವುದರ ಚಿಂತನೆ ಮಾಡಿ ಬರೆದಿಡಬೇಕು. ಈ ವಿಚಾರ ನಮ್ಮ ಮನಸ್ಸಿನ ಮೇಲೆ ಯಾವ ಪರಿಣಾಮ ಬೀರಿದೆ ಎಂದು ಹುಡುಕಬೇಕು.

ಪ್ರಸಂಗ ೪ – ಸಮರ್ಪಣೆಯ ಭಾವದ ಬಗ್ಗೆ

ದೃಷ್ಟಿಕೋನ

೧. ದೇವರ ಕೃಪೆಯಿಂದ ನನಗೆ ಸೇವೆ ಸಿಕ್ಕಿದೆ.

೨. ನನಗೆ ಸಿಕ್ಕಿದ ಸೇವೆ ಇದು ಈಶ್ವರನಿಗೆ ಅಪೇಕ್ಷಿತವಾಗಿದೆ.

೩. ಸೇವೆಯಿಂದ ಈಶ್ವರನು ನನ್ನ ಉದ್ಧಾರವೇ ಮಾಡುತ್ತಿರುತ್ತಾನೆ.

೪. ಶರಣಾಗತಿ ಇದ್ದರೆ ಸಾಧನೆಯ ಪ್ರಯತ್ನಗಳಲ್ಲಿ ಈಶ್ವರನ ಚೈತನ್ಯ ದೊರೆತು ಮನಸ್ಸಿನ ಅಂತರ್ಮುಖತೆ ಹೆಚ್ಚುತ್ತದೆ.

೫. ಸಾಧನೆ ಅಂದರೆ ಸಾತತ್ಯ. ಸಾಧನೆಯಲ್ಲಾಗುವ ತಪ್ಪುಗಳೆಂದರೆ ಭಾವದ ಮತ್ತು ಈಶ್ವರನೊಂದಿಗಿನ ಅನುಸಂಧಾನದ ಅಭಾವ ಎಂದು ಅರ್ಥವಾಗುತ್ತದೆ.

೬. ಕೊನೆಯುಸಿರಿನ ತನಕ ಗುರುಚರಣಗಳೊಂದಿಗೆ ಲೀನವಾಗುವ ಯೋಚನೆ ಮಾಡುವುದು ಮತ್ತು ಪ್ರಯತ್ನದಲ್ಲಿ ತೊಡಗಿರುವುದು.

೭. ತತ್ತ್ವನಿಷ್ಠರಾಗಿ ಪ್ರಯತ್ನಿಸಿದರೆ ಫಲ ನಿಷ್ಪತ್ತಿ ಸಾಧ್ಯ.

೮. ಕೃತಜ್ಞತಾಭಾವ ಮತ್ತು ಶರಣಾಗತಿಯನ್ನು ಹೆಚ್ಚಿಸಿದಾಗ ಈಶ್ವರನ ಚೈತನ್ಯ ದೊರೆತು ಮುಂದಿನ ಪ್ರಕ್ರಿಯೆಯಾಗುತ್ತದೆ.

೯. ಈಶ್ವರನೇ ಎಲ್ಲವೂ ಮಾಡುತ್ತಿರುತ್ತಾನೆ. ಅದನ್ನು ನೋಡಿ ಅನುಭವಿಸಬೇಕು. ಕೇವಲ ದೈಹಿಕವಾಗಿ ಸೇವೆ ಮಾಡಿದರೆ ಅದರಿಂದ ಸಮರ್ಪಿತಭಾವ ಆಗದು.

೧೦. ನಾನು ಏನು ಮಾಡಿದೆ ಎನ್ನುವುದಕ್ಕಿಂತ ಈಶ್ವರನು ನನಗಾಗಿ ಏನೇನು ಮಾಡಿದ, ನನಗೆ ಏನೇನು ಕಲಿಸಿದ, ಎಂಬ ಅರಿವು ಇದ್ದರೆ ಸತತವಾಗಿ ಕೃತಜ್ಞತಾಭಾವದಲ್ಲಿರಬಹುದು.

೧೧. ಸತತವಾಗಿ ದಾಸ್ಯಭಾವದಲ್ಲಿಯೇ ಇರಬೇಕು

೧೨. ಈಶ್ವರನು ಸಾಮರ್ಥ್ಯವಂತನಾಗಿದ್ದಾನೆ. ಕಾರ್ಯನಿರತವಾದ ಅವನ ಶಕ್ತಿಯು ನಮಗಾಗಿ ಏನೇನು ಮಾಡುತ್ತದೆ ಎಂಬುವುದರ ಕಡೆಗೆ ಸತತ ಗಮನವಿಟ್ಟು ಶರಣಾಗತಿಯನ್ನು ಹೆಚ್ಚಿಸಬೇಕು.

೧೩. ನಮ್ಮಲ್ಲಿ ಎಷ್ಟು ಭಕ್ತಿ ಇದೆಯೋ ಅದಕ್ಕನುಗುಣವಾಗಿ ಈಶ್ವರನ ಸಹಾಯ ದೊರಕುತ್ತದೆ.

೧೪. ಅಹಂ ನಷ್ಟವಾಗಲು ಈಶ್ವರನು ಪ್ರಸಂಗವನ್ನು ನಿರ್ಮಿಸುತ್ತಾನೆ, ಇದಕ್ಕಿಂತ ನಮ್ಮೊಳಗೆ ಗುಣ ನಿರ್ಮಾಣವಾಗಲೆಂದೇ ಪ್ರಸಂಗ ತಂದಿಡುತ್ತಾನೆ ಎಂಬ ಯೋಚನೆ ಹೆಚ್ಚು ಸೂಕ್ತವಾಗಿದೆ.

೧೫. ಈಶ್ವರನೊಂದಿಗಿನ ಅನುಸಂಧಾನವು ಹೆಚ್ಚಾದ ನಂತರ ಉತ್ಸಾಹ, ಚೈತನ್ಯ ಹೆಚ್ಚುತ್ತವೆ ಮತ್ತು ಅದರಿಂದ ಪ್ರಯತ್ನಗಳಿಗೆ ವೇಗ ಬರುತ್ತದೆ.

೧೬. ಉತ್ಸಾಹವನ್ನು ಹೆಚ್ಚಿಸಲು ದಿನವಿಡೀ ೫ ಸಲ ಆತ್ಮನಿವೇದನೆ ಮಾಡಬೇಕು. ಮಾಡುವ ಪ್ರತಿಯೊಂದು ಕೃತಿಗೆ ಭಾವ ಜೋಡಿಸಬೇಕು.

೧೭. ಸೇವೆಯಿಂದ ಅನುಭೂತಿ ಬರುತ್ತದೆ, ಅದರೊಟ್ಟಿಗೆ ಈಶ್ವರನ ಗುಣ ಮತ್ತು ಚೈತನ್ಯ ಪಡೆಯಲು ಪ್ರಯತ್ನ ಮಾಡಬೇಕು.

೧೮. ಸ್ವಭಾವದೋಷ ಮತ್ತು ಅಹಂ ನಿರ್ಮೂಲನ ಪ್ರಕ್ರಿಯೆ ಎಂದರೆ ಎಲ್ಲ ದೇಹಗಳ ಶುದ್ಧಿಯಾಗಿದೆ.

೧೯. ಕಲಿಯುವ ಸ್ಥಿತಿಯಲ್ಲಿರಲು ದಿನವೊಂದರಲ್ಲಿ ಕನಿಷ್ಠ ೧೦೦ ಸಲ ಪ್ರಾರ್ಥನೆ ಮಾಡಬೇಕು.

೨೦. ಸಹಸಾಧಕರು ಎಂದರೆ ಗುರುದೇವರು ನಮ್ಮ ಸಮಷ್ಟಿ ಸಾಧನೆ ಆಗಬೇಕೆಂದು ನೀಡಿದ ಸಹಾಯವಿದೆ. ಅದಕ್ಕಾಗಿ ಅವರ ಬಗ್ಗೆ ಶುದ್ಧ ಭಾವ ಇರಬೇಕು.

೨೧. ಮನಸ್ಸು ಅಸ್ವಸ್ಥವಾಗಿದ್ದರೆ ಸಮರ್ಪಣೆಯಾಗುವುದು ಕಷ್ಟ. ಸೇವೆಯಲ್ಲಿ ಮನಸ್ಸು ಶುದ್ಧವಾಗಿರಬೇಕು. ಮನಸ್ಸಿನಿಂದ ನಾವು ಪೂರ್ಣ ಸಮಯ ನೀಡಿದ್ದೇವೆಯೇ?

೨೨. ಶರೀರದೊಂದಿಗೆ ಮನಸ್ಸು ಕೂಡ ಈಶ್ವರನು ನಿರೀಕ್ಷಿಸಿದಂತೆ ಶುದ್ಧವಾಗಿರುವುದೇ?

೨೩. ಗುರುಕಾರ್ಯವನ್ನು ಮಾಡಿ ನಮ್ಮನ್ನು ಉದ್ಧರಿಸಿಕೊಳ್ಳಬೇಕು.

ಪ್ರಸಂಗ ೫ – ಕಲಿಸುವ ವೃತ್ತಿ ಇರುವುದು

ದೃಷ್ಟಿಕೋನ

೧. ಕಲಿಸುವ ವೃತ್ತಿಯಿದ್ದರೆ ಮನಸ್ಸು ಆಗ್ರಹಿಸುವ ಸ್ಥಿತಿಯಲ್ಲಿರುತ್ತಿದೆ. ‘ಇತರರನ್ನು ಕೀಳ್ಮಟ್ಟದವರೆಂದು ಪರಿಗಣಿಸುವುದು’, ಈ ಸುಪ್ತ ವಿಚಾರವೂ ಇರುತ್ತದೆ. ಸಾಧನೆಯಲ್ಲಿ ಯಾರು ಏನೇ ಹೇಳಿದರೂ ಕೇಳುವ ಸ್ಥಿತಿಯಲ್ಲಿರಬೇಕು.

೨. ನಮ್ಮ ಸಾಧನೆಯಲ್ಲಿ ಕುಟುಂಬದವರ ಪಾಲ್ಗೊಳ್ಳುವಿಕೆ ಮಹತ್ವದ್ದಾಗಿರುತ್ತದೆ. ಅವರ ಸಹಾಯ ಪಡೆಯಲು ಹೆಚ್ಚು ಪ್ರಯತ್ನಿಸಬೇಕು; ಆದರೆ ನಮ್ಮಲ್ಲಿರುವ ಅಹಂಭಾವದಿಂದಾಗಿ ನಾವು ಅವರಿಂದ ಸಹಾಯ ಪಡೆಯುವುದಿಲ್ಲ. ಆದ್ದರಿಂದ ಪ್ರಗತಿಯಾಗಲು ಹೆಚ್ಚು ಸಮಯ ಬೇಕಾಗುತ್ತದೆ.

ಪ್ರಸಂಗ ೬ – ‘ಸ್ವ’ ಮೇಲೆ ನಿಯಂತ್ರಣ

ದೃಷ್ಟಿಕೋನ

೧. ಸತತವಾಗಿ ಮನಸ್ಸಿನ ಸ್ತರದಲ್ಲಿ ವಿಚಾರಗಳ ನಿರೀಕ್ಷಣೆ ಮಾಡಬೇಕು. ನನಗೆ ಏನನಿಸುತ್ತದೆ ಎನ್ನುವುದಕ್ಕಿಂತ ಎದುರಿನ ವ್ಯಕ್ತಿಗೆ ಏನನಿಸುತ್ತದೆ ಎನ್ನುವುದರ ಬಗ್ಗೆ ಪಟ್ಟು ಹಿಡಿಯುವ ಗುಣದ ಸಹಾಯದಿಂದ ಹೆಚ್ಚಿಸಲು ಪ್ರಯತ್ನಿಸಬೇಕು.

೨. ಪ್ರಯತ್ನದಲ್ಲಿ ಫಲದ ಅಪೇಕ್ಷೆ ಇದ್ದರೆ ಪ್ರಯತ್ನ ಕುಸಿಯುತ್ತದೆ. ನಾನು ‘ಸ್ವ’ ಅರ್ಪಿಸಲು ಸಾಧನೆಗೆ ಬಂದಿದ್ದೇನೆ ಎಂಬ ವಿಚಾರ ತಮ್ಮಲ್ಲಿ ಕಡಿಮೆಯಿದೆ ಎಂದರ್ಥ.

೩. ಸನಾತನದ ಆಶ್ರಮದಲ್ಲಿನ ಎಲ್ಲ ಕಾರ್ಯಪದ್ಧತಿಗಳು ನಮ್ಮ ‘ಸ್ವ’ವನ್ನು ನಾಶಗೊಳಿಸುವುದಕ್ಕಾಗಿಯೇ ಇವೆ. ಅದು ನಮ್ಮ ಬುದ್ಧಿಗೆ ತಿಳಿಯಬೇಕೆಂದು ಪ್ರತಿಯೊಂದು ಕಾರ್ಯಪದ್ಧತಿಯ ವಿಶ್ಲೇಷಣೆ ಮಾಡಬೇಕು.

ಪ್ರಸಂಗ ೭ – ಸಾಧನೆಯಲ್ಲಿ ನಿರುತ್ಸಾಹ

ದೃಷ್ಟಿಕೋನ

೧. ಇಲ್ಲಿ ಪೂರ್ಣ ನಿರುತ್ಸಾಹವೇ ಕಂಡುಬರುತ್ತದೆ. ಯಾವುದಾದರೊಂದು ಅಭ್ಯಾಸವು (habit) ನಿಂತು ಹೋದರೆ ಅದನ್ನು ಪುನಃ ಪ್ರಾರಂಭಿಸಲು ಬಹಳ ಸಮಯ ತಗಲುತ್ತದೆ.

೨. ಪ್ರಕ್ರಿಯೆಯನ್ನು ಸಹ ಔಪಚಾರಿಕವೆಂದು ಮಾಡುವುದಾಗುತ್ತದೆ. ‘ನನ್ನಲ್ಲಿ ಬದಲಾವಣೆ ಆಗಬೇಕು’ ಎಂಬ ವಿಚಾರವಿದ್ದು ಮನಸ್ಸಿನ ಪಾಲ್ಗೊಳ್ಳುವಿಕೆ ಇಲ್ಲವಾದಂತೆ ಆಗಿದೆ.

೩. ಮನೆಗೆ ಹೋದಾಗ ಸಾಧಕರಿಂದ ವ್ಯಷ್ಟಿ ಸಾಧನೆ ಆಗುವುದಿಲ್ಲ. ಪ್ರಗತಿಯು ಹಂತಹಂತವಾಗಿಯೇ ಆಗುತ್ತಿರುತ್ತದೆ. ಹಾಗಾಗಿ ಉದಾಸೀನತೆ ಬಂದಲ್ಲಿ ಗಾಂಭೀರ್ಯದಿಂದ ವಿಚಾರ ಮಾಡಬೇಕು ಇಲ್ಲವಾದರೆ ಮನಸ್ಸು ಮಾಯೆಯಲ್ಲಿ ಸಿಲುಕುತ್ತದೆ.

೪. ‘ಉತ್ಸಾಹ ಏಕೆ ಕಡಿಮೆಯಾಯಿತು’ ಎಂಬುವುದರ ಚಿಂತನೆಯನ್ನು ಬರೆಯಬೇಕು. ನಮಗೆ ನಮ್ಮ ಸ್ಥಿತಿಯ ಬಗ್ಗೆ ಆಂತರಿಕ ಅರಿವು ಇದ್ದಲ್ಲಿ ಮಾತ್ರ ಬದಲಾವಣೆ ಆಗಲು ಸಾಧ್ಯ. ಅದಕ್ಕಾಗಿ ಸಾತತ್ಯವಿರಬೇಕು. ಸಾಧನೆಯ ಮೂಲಕ ಶೇ. ೫೦ ರಷ್ಟು ಅರಿವನ್ನು ಮೂಡಿಸಬೇಕು. ಉಳಿದ ಶೇ. ೫೦ ರಷ್ಟನ್ನು ಕೃತಿಯ ಸ್ತರದಲ್ಲಿ ಮಾಡಿದರೆ ಮಾತ್ರ ಪೂರ್ಣ ಲಾಭವಾಗುತ್ತದೆ. ಮನಸ್ಸಿನ ಪಾಲುದಾರಿಕೆ ಇದ್ದಲ್ಲಿ ಮಾತ್ರ ಅಡಚಣೆಗಳನ್ನು ಎದುರಿಸಬಹುದಾಗಿದೆ. ಇಲ್ಲವಾದರೆ ಎಲ್ಲ ಪ್ರಯತ್ನಗಳು ತೋರಿಕೆಯದ್ದಾಗಿರುತ್ತವೆ. ಹೇಗೇಗೋ ಮಾಡಿ ಮಾಡಲಾಗುತ್ತದೆ. ಮನಸ್ಸಿನ ಪ್ರಕ್ರಿಯೆ ಸತತವಾಗಿ ಆಗುತ್ತಿರಬೇಕು. ಆಗಲೇ ಆಶ್ರಮದ ಚೈತನ್ಯ ಮತ್ತು ಮಾರ್ಗದರ್ಶನದ ಲಾಭವಾಗುತ್ತದೆ. ಅದಕ್ಕಾಗಿ ನಿರುತ್ಸಾಹದ ಕಾರಣವನ್ನು ಮತ್ತು ಮನಸ್ಸಿನ ಪ್ರಕ್ರಿಯೆ ಎಲ್ಲಿ ನಿಂತಿದೆ ?’ ಎಂದು ಮೊದಲು ಹೇಳಬೇಕು.

ಪ್ರಸಂಗ ೮ – ನಕಾರಾತ್ಮಕ ವಿಚಾರಗಳಿಂದ ತೊಂದರೆಯಾಗುವುದು

ದೃಷ್ಟಿಕೋನ

ನಕಾರಾತ್ಮಕ ವಿಚಾರಗಳಿಂದ ಹೊರಬರುವ ಸಂಸ್ಕಾರವನ್ನು ಮನಸ್ಸಿನಲ್ಲಿ ಮೂಡಿಸಬೇಕು. ಕೂಡಲೇ ಆ ವಿಚಾರವನ್ನು ಯಾರಿಗಾದರೂ ಹೇಳಬೇಕು ಮತ್ತು ಉಪಾಯವನ್ನು ಕೇಳಿಕೊಳ್ಳಬೇಕು ಹಾಗೂ ಸ್ವಯಂಸೂಚನೆ ನೀಡುವುದು ಮುಂತಾದವುಗಳನ್ನು ಮಾಡಬೇಕು. ವಾಸ್ತವದಲ್ಲಿ ‘ಅದರಿಂದ ನಮ್ಮ ಮನಸ್ಸಿಗೆ ಎಷ್ಟು ಹಾನಿಯಾಗುತ್ತದೆ, ವಿಚಾರಗಳಿಂದ ಏನು ಪರಿಣಾಮವಾಗುತ್ತದೆ’ ಎಂಬುದರ ಗಾಂಭೀರ್ಯವಿಲ್ಲದ ಕಾರಣ ನಾವು ಅದರಲ್ಲಿಯೇ ಸಿಲುಕಿಕೊಂಡು ಪರ್ಯಾಯವನ್ನು ಹುಡುಕುವುದನ್ನು ಮುಂದೂಡುತ್ತೇವೆ. ಅದಕ್ಕಾಗಿ ಪ್ರತಿ ಗಂಟೆಗೊಮ್ಮೆ ಮನಸ್ಸಿನ ಸ್ಥಿತಿಯ ವರದಿಯನ್ನು ತೆಗೆದುಕೊಳ್ಳಬೇಕು. ನಕಾರಾತ್ಮಕತೆಯ ಬದಲು ಪರಿಹಾರೋಪಾಯದ ಕಡೆಗೆ ನಮ್ಮ ಗಮನವಿರಬೇಕು. ಅದರ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ಬರೆದು ತರಬೇಕು. ಆಗ ಪರಿಹಾರೋಪಾಯ ಸಿಗುತ್ತದೆ. ಮನಸ್ಸಿನ ಜಾಗರೂಕತೆ ಹೆಚ್ಚಾಗುತ್ತದೆ. ಪ್ರತಿಯೊಂದು ವಿಚಾರದ ಮುಂದೆ ಉಪಾಯವನ್ನು ಬರೆದರೆ ಅಂತರ್ಮುಖತೆ ಹೆಚ್ಚಾಗುತ್ತದೆ. ಆ ಸಮಯದಲ್ಲಿ ಸ್ವಯಂಸೂಚನೆ ನೀಡಲು ಆಗದಿದ್ದರೆ ಪ್ರಾರ್ಥನೆ, ಕೃತಜ್ಞತೆ ಮತ್ತು ಕೃತಿಯ ಸ್ತರದ ಪ್ರಯತ್ನಗಳನ್ನು ಮಾಡಬೇಕು.

ಪ್ರಸಂಗ ೯ – ಸ್ವೀಕಾರವೃತ್ತಿ ಇಲ್ಲದಿರುವುದು

ದೃಷ್ಟಿಕೋನ

೧. ನಮಗೆ ಗೊತ್ತಿಲ್ಲದ (ತಿಳಿಯದ) ವಿಷಯಗಳನ್ನು ಯಾರೋ ನಮಗೆ ಹೇಳುತ್ತಿದ್ದಾರೆ ಎಂದು ಆನಂದಿಸಬೇಕು; ಆದರೆ ‘ನಮ್ಮ ಪ್ರವಾಸವು ವಿರುದ್ಧ ದಿಕ್ಕಿನಲ್ಲಿ ಸಾಗುತ್ತಿದೆ’, ಎಂದು ದೇವರು ಗಮನಕ್ಕೆ ತಂದುಕೊಟ್ಟ ಬಗ್ಗೆ ಕೃತಜ್ಞತೆ ಅನಿಸಬೇಕು. ನಮ್ಮ ಅಹಂನ ಮೇಲೆ ಆಕ್ರಮಣವಾದಾಗ ನಕಾರಾತ್ಮಕತೆಯು ಹೆಚ್ಚಾಗುತ್ತದೆ. ಹಾಗಾಗಿ ಇನ್ನೂ ಸ್ಪಷ್ಟವಾಗಿ ವಿಚಾರ ಪ್ರಕ್ರಿಯೆ ಆಗುವುದಿಲ್ಲ.

೨. ‘ಅಳು ಬರುತ್ತದೆ’ ಎಂದರೆ ಆ ಪ್ರಸಂಗದ ನಿರಾಶೆ ಇನ್ನೂ ಇದೆ’ ಎಂದರ್ಥ. ಅದರಿಂದ ಹೊರಬರಲು ಅದೇ ಕ್ಷಣ ಅದರ ಆಳ ಎಷ್ಟಿದೆ ಎಂದು ಗಮನಕ್ಕೆ ತಂದುಕೊಂಡು ಸಹಾಯವನ್ನು ಪಡೆದರೆ ಮುಂದಿನ ಪ್ರಕ್ರಿಯೆ ಆಗುತ್ತದೆ.

ಪ್ರಸಂಗ ೧೦ – ಸಹಸಾಧಕರು ಮಾತನಾಡಿದ ನಂತರ ಮೊಬೈಲ್‌ ಮೈಕ್‌ ಮ್ಯೂಟ್‌ ಇರುವುದರಿಂದ ಮತ್ತು ಪ್ರಶ್ನೆಗೆ ಉತ್ತರ ನೀಡದೇ ಇರುವುದರಿಂದ ಪ್ರತಿಕ್ರಿಯೆ ಬರುವುದು

ದೃಷ್ಟಿಕೋನ

೧. ಇಂತಹ ಪ್ರತಿಕ್ರಿಯೆ ಎಲ್ಲೆಲ್ಲಿ ಬರುತ್ತದೆ ಎಂದು ನೋಡಬೇಕು.

೨. ಇದರಲ್ಲಿ ನನಗೇನು ಅನಿಸುತ್ತದೆ ಎಂಬುವುದರ ಕಡೆಗೆ ಹೆಚ್ಚು ಗಮನ ನೀಡಿದರೆ ಕಲಿಯುವ ಮತ್ತು ಪರಿಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಆಗುತ್ತದೆ. ಕಲಿಯುವ ವೃತ್ತಿ ಕಡಿಮೆ ಇರುವುದರಿಂದ ಅಹಂಗೆ ಧಕ್ಕೆ ಬರಬಾರದೆಂದು, ಅದರ ಕಡೆಗೆ ಹೆಚ್ಚು ಗಮನ ಹೋಗುತ್ತದೆ. ಕೆಲವು ಪ್ರಸಂಗದಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸುವ ಬದಲು ಸುಲಭವಾಗಿ ಹೇಳುವ ಪ್ರಯತ್ನ ಆಗಬೇಕು.

೩. ‘ಸ್ವ’ ಅಂದರೆ ತನಗೆ ಮಹತ್ವ ಎಲ್ಲಿಯೂ ಕಡಿಮೆ ಆಗಬಾರದು ಎಂಬ ಅಹಂನ ವಿಚಾರವಿದ್ದರೆ ನಮ್ಮೆದುರಿನ ವ್ಯಕ್ತಿ ಹೇಗೆ ಮಾತನಾಡುತ್ತಿದ್ದಾರೆ ಎಂಬ ಪದ್ಧತಿಯ ಕಡೆಗೆ ಗಮನ ಹೋಗುತ್ತದೆ. ಏಕೆಂದರೆ ನಮ್ಮ ಗಮನವೆಲ್ಲ ಇತರರ ಸ್ವಭಾವದೋಷಗಳತ್ತ ಇರುತ್ತದೆ. ಕಲಿಯುವ ಪ್ರವೃತ್ತಿ ಇದ್ದಲ್ಲಿ ಎದುರಿನ ವ್ಯಕ್ತಿ ಏನು ಹೇಳುತ್ತಿದ್ದಾರೆ ಎಂಬತ್ತ ಗಮನ ಇರುತ್ತದೆ. ಅಲ್ಲಿ ಕಲಿಯುವ ಭಾಗ ಹೆಚ್ಚಾಗುತ್ತದೆ.

೪. ಇತರರ ಸ್ವಭಾವದೋಷಗಳ ಬಗ್ಗೆಯೇ ಹೆಚ್ಚು ಗಮನವಿಡುವ ಅಭ್ಯಾಸವಿದ್ದರೆ ಪ್ರಾಯಶ್ಚಿತ್ತ ತೆಗೆದುಕೊಳ್ಳಬೇಕು. ಇತರರನ್ನು ಅರ್ಥ ಮಾಡಿಕೊಳ್ಳುವುದು, ಅವರನ್ನು ಅರಿತುಕೊಳ್ಳುವ ಪ್ರಮಾಣವನ್ನು ಹೆಚ್ಚಿಸಬೇಕು.

ಪ್ರಸಂಗ ೧೧ – ಕ್ಷಮೆ ಯಾಚಿಸುವಾಗ ಪೂರ್ಣ ಪ್ರಸಂಗ ಹೇಳದಿರುವುದು, ಅಥವಾ ಕ್ಷಮೆ ಯಾಚಿಸುವಾಗ ತನ್ನಿಂದಾದ ತಪ್ಪನ್ನು ಸಮಜಾಯಿಷಿ ಹೇಳುವುದು ಹೆಚ್ಚು ಇರುತ್ತದೆ.

ದೃಷ್ಟಿಕೋನ

೧. ಕ್ಷಮೆ ಯಾಚಿಸುವಾಗ ತನ್ನ ಅನುಕೂಲಕ್ಕೆ ತಕ್ಕಂತೆ ಹೇಳುವುದು ತಪ್ಪು.

೨. ಪೂರ್ಣ ಪ್ರಸಂಗ ಹೇಳದೇ ಇರುವ ಕಾರಣ ಏನು ಎಂದು ಚಿಂತನೆ ಆಗಬೇಕು.

೩. ಪೂರ್ಣ ಪ್ರಸಂಗ ಮರೆಮಾಚುತ್ತಿದ್ದಲ್ಲಿ ಅದು ಅಪ್ರಾಮಾಣಿಕತೆ. ಅದಕ್ಕಾಗಿ ಪುನಃ ಸೇವೆಯ ಸ್ಥಳದಲ್ಲಿ ಮತ್ತು ಸಾಧಕರೆದುರು ಪೂರ್ಣ ತಪ್ಪು ಹೇಳಿ ಕ್ಷಮೆ ಯಾಚಿಸಬೇಕು.

೪. ಕ್ಷಮೆ ಯಾಚಿಸುವಾಗ ಪ್ರಸಂಗ ಪೂರ್ಣವಾಗಿ ಹೇಳದಿರುವುದು ಎಂದರೆ ಮನಸ್ಸಿಗನುಸಾರ ಮಾಡುವುದು. ನನಗೆ ಹೇಗೆ ಬೇಕು ಹಾಗೆ, ಎಂದರೆ ಮನಸ್ಸಿಗನುಸಾರ ಮಾಡುವುದು. ಸುಲಭ ಇರುವುದನ್ನು ಮಾತ್ರ ಹೇಳುತ್ತೇವೆ ಆದರೆ ಭಗವಂತ ನಮ್ಮನ್ನು ಪ್ರತಿಕ್ಷಣ ನೋಡುತ್ತಿರುತ್ತಾನೆ.

೫. ಇಷ್ಟು ಚಿಕ್ಕ ವಿಷಯದಲ್ಲಿ ಇಷ್ಟು ಅಪ್ರಾಮಾಣಿಕತೆಯಿದ್ದರೆ ಮುಂದೆ ದೊಡ್ಡ ಸ್ವಭಾವದೋಷದ ಬಗ್ಗೆ ವಿಚಾರ ಹೇಗಿರಬಹುದು?

ಇಲ್ಲಿ ನಾನು ಕ್ಷಮೆ ಕೇಳಿದೆ ಎಂಬುವುದಕ್ಕಿಂತಲೂ ನಾನು ಏನು ಮರೆಮಾಚಿದ್ದೇನೆ ಎಂದು ಹೇಳಿ ಕ್ಷಮೆ ಯಾಚಿಸುವುದು ಅಪೇಕ್ಷಿತವಿರುತ್ತದೆ.

ಪ್ರಸಂಗ ೧೨ – ತುರ್ತಾಗಿ ಹೊರಗೆ ಹೋಗುವ ಪ್ರಸಂಗ ಬಂದಾಗ ಪ್ರಕ್ರಿಯೆ ಆಗುವುದಿಲ್ಲ

ದೃಷ್ಟಿಕೋನ

೧. ಈ ಪ್ರಸಂಗದಲ್ಲಿ ‘ಪ್ರಕ್ರಿಯೆ ಆಗಬಾರದೆಂದು ಮನಸ್ಸು ರಿಯಾಯತಿ ತೆಗೆದುಕೊಳ್ಳುತ್ತಿದೆ’, ಇದು ತಕ್ಷಣ ಗಮನಕ್ಕೆ ಬರಬೇಕು.

೨. ನಾವು ಎಲ್ಲಿದ್ದರೂ, ಎಲ್ಲಿಗೆ ಹೋದರು, ಪ್ರಾರ್ಥನೆ, ಕೃತಜ್ಞತೆ, ಮತ್ತು ಆತ್ಮನಿವೇದನೆಗಳತ್ತ ಸತತ ಗಮನ ನೀಡಬೇಕು.

೩. ‘ಗಡಿಬಿಡಿ ಇತ್ತು’ ಎನ್ನುವುದು ಅಂದರೆ ತಪ್ಪನ್ನು ಸಮರ್ಥಿಸುವುದು. ಅದರ ಬದಲು ನನ್ನಿಂದ ಇಂದು ಪ್ರಯತ್ನ ಆಗಿಲ್ಲ, ಹೀಗೆ ಹೇಳುವುದು ಅಂದರೆ ಪ್ರಾಮಾಣಿಕತೆಯಾಗಿದೆ.

೪. ತಪ್ಪನ್ನು ಸಹ ತತ್ತ್ವನಿಷ್ಠರಾಗಿ ಹೇಳಲು ಕಲಿಯಬೇಕು. ತಪ್ಪನ್ನು ಸೌಮ್ಯ ಮಾಡಿ ಹೇಳುವುದು ಎಂದರೆ ಅಹಂ  ಕಾಪಾಡುವುದು. ಆದ್ದರಿಂದ ಅಲ್ಪ ಸಂತುಷ್ಟಿ ಬರುತ್ತದೆ.

೫. ನಾನು ಸರಿ ಇದ್ದೇನೆ ಎಂದು ಮನಸ್ಸಿನ ಮೂಲೆಯಲ್ಲಿ ಇರುತ್ತದೆ. ತಪ್ಪನ್ನು ಇದ್ದ ಹಾಗೆ ಹೇಳುವುದರಿಂದ ಸಾಧನೆಯಲ್ಲಿರುವ ಆನಂದ ಸಿಗಬಲ್ಲದು, ಇಲ್ಲವಾದರೆ ಸ್ವ (ತನ್ನತನ) ಕಾಪಾಡುತ್ತಾ ಮತ್ತು ರಿಯಾಯತಿ ಪಡೆಯುತ್ತಾ ಸಾಧನೆ ಮಾಡುವುದರಿಂದ ಸಾಧನೆಯ ವೇಗ ಕಡಿಮೆ ಆಗುತ್ತದೆ. ಮುಂದೆ ಮುಂದೆ ಮನಸ್ಸು ಬಹಿರ್ಮುಖವಾಗಿ ಇತರರ ತಪ್ಪುಗಳತ್ತಲೇ ನೋಡತೊಡಗುತ್ತದೆ.

ಸಂಕಲನ – ಶ್ರೀಮತಿ ಅಶ್ವಿನಿ ಪ್ರಭು, ಮಂಗಳೂರು

Leave a Comment