ಸಂತರ ಚೈತನ್ಯಮಯ ಮಾರ್ಗದರ್ಶನದಿಂದ ಜಾಗೃತವಾದ ಬಳಂಜದ ಹಿಂದೂ ಸಮಾಜ !
ಬಳಂಜ – ‘ಹೀನಾನಿ ಗುಣಾನಿ ದೂಷಯತಿ ಇತಿ ಹಿಂದು’ ಅಂದರೆ ಹೀನ ದುರ್ಗುಣಗಳನ್ನು ದೂರ ಮಾಡಿ ಸಾತ್ವಿಕ ಜೀವನ ನಡೆಸುವವನೆ ಹಿಂದೂ. ಹಿಂದೂ ರಾಷ್ಟ್ರ ಎಂದರೆ ಇಂತಹ ಸಾತ್ವಿಕ ಜನತೆಯುಳ್ಳ ರಾಷ್ಟ್ರವಾಗಿರುತ್ತದೆ. 2025 ರ ನಂತರ ಭಾರತದಲ್ಲಿ ವಿಶಾಲ ಹಿಂದೂ ರಾಷ್ಟ್ರ ಸ್ಥಾಪನೆ ಆರಂಭವಾಗಲಿದೆ. ಈ ಸಾತ್ವಿಕ ರಾಷ್ಟ್ರವು ನಿರ್ಮಾಣವಾಗಬೇಕಿದ್ದರೆ ಈಗಿನಿಂದಲೇ ಸಾಧನೆಯನ್ನು ಆರಂಭಿಸಿ ಸದ್ಗುಣಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂಜ್ಯ ರಮಾನಂದ ಗೌಡ ಇವರು ಕರೆ ನೀಡಿದರು. ಅವರು 12 ಜೂನ್ ಬುಧವಾರದಂದು ಸನಾತನ ಸಂಸ್ಥೆಯು ಬಳಂಜದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ಆಯೋಜಿಸಿದ್ದ ವಿಶೇಷ ಪ್ರವಚನದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಕರಾದ ಶ್ರೀ. ವಿಜಯ ಕುಮಾರ್ ಇವರು ಉಪಸ್ಥಿತರಿದ್ದರು.
ಪೂಜ್ಯ ರಮಾನಂದ ಗೌಡ ಇವರು ಮುಂದೆ ಮಾತನಾಡಿ ಹಿಂದೆ ಗುರುವಿನ ಮೂಲಕ ಜ್ಞಾನವನ್ನು ಪಡೆದು ಶಿಷ್ಯರು ಸಾಧನೆಯನ್ನು ಮಾಡುತ್ತಿದ್ದರು. ಭಾರತದಲ್ಲಿ ಗುರುವಿಗೆ ಅಗ್ರಸ್ಥಾನವಿದೆ. ಛತ್ರಪತಿ ಶಿವಾಜಿ ಮಹಾರಾಜರು ಮತ್ತು ಹಕ್ಕ ಬುಕ್ಕರು ಸಹ ತಮ್ಮ ರಾಜ್ಯ ಸ್ಥಾಪನೆಯನ್ನು ಮಾಡುವಾಗ ಗುರುಗಳ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದರು. ಇದರಿಂದಾಗಿ ಅವರ ಧರ್ಮಸಂಸ್ಥಾಪನೆಯ ಕಾರ್ಯವು ಪೂರ್ಣವಾಯಿತು. ಪ್ರಸ್ತುತ ಕಾಲದಲ್ಲಿ ಅನೇಕ ದಾರ್ಶನಿಕರು, ಸಂತರು ಮತ್ತು ಸ್ವತಃ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರೂ ಸಹ ಭಾರತ 2025 ರ ನಂತರ ಹಿಂದೂ ರಾಷ್ಟ್ರದ ಉದಯವಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೇವಲ ಶಾರೀರಿಕ, ಮಾನಸಿಕ ಸ್ತರದಲ್ಲಿ ಪ್ರಯತ್ನ ಮಾಡುವುದಷ್ಟೇ ಅಲ್ಲದೆ ಸಾಧನೆಯನ್ನು ಮಾಡಿ ಆಧ್ಯಾತ್ಮಿಕ ಬಲವನ್ನೂ ಹೆಚ್ಚಿಸಬೇಕಿದೆ ಹಾಗಾಗಿ ನಾವು ಈ ಹಿಂದೂ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ಗುರುಗಳ ಮಾರ್ಗದರ್ಶನ ಪಡೆದು ಕಾರ್ಯ ಮಾಡಿದರೆ ಯಶಸ್ಸು ಖಂಡಿತ ಸಿಗುವುದು ಎಂದರು. ಕೊನೆಗೆ ಅವರು “ಧರ್ಮೋ ರಕ್ಷತಿ ರಕ್ಷಿತಃ” ಅಂದರೆ ಧರ್ಮ ಉಳಿಯಬೇಕಾದರೆ ನಾವೆಲ್ಲ ಹಿಂದೂಗಳು ಧರ್ಮಚರಣೆಯನ್ನು ಮಾಡಬೇಕು ಉದಾಹರಣೆಗೆ ಕುಂಕುಮ ಹೇಗೆ ಮತ್ತು ಏಕೆ ಇಡಬೇಕು, ದೇವಸ್ಥಾನದ ದರ್ಶನ ಹೇಗೆ ಮಾಡಬೇಕು ? ಸ್ತ್ರೀಯರು ಆಭರಣಗಳನ್ನು ಹೇಗೆ ಧರಿಸಬೇಕು ? ಇಂತಹ ಧರ್ಮಕ್ಕೆ ಸಂಬಂಧಿಸಿದ ಅನೇಕ ವಿಷಯಗಳ ಕುರಿತು ಶಿಕ್ಷಣ ಪಡೆಯಬೇಕು ಮತ್ತು ಆಧ್ಯಾತ್ಮಿಕ ಸಾಧನೆಯನ್ನು ಹೆಚ್ಚಿಸಬೇಕು ಎಂದರು.