ಮಸಾಲೆ ಡಬ್ಬಿಯಲ್ಲ, ಔಷಧಗಳ ಗಣಿ !

ನಾವು ಸೇವಿಸುವ ಆಹಾರದಲ್ಲಿ ಹಾಕುವ ಬಗೆಬಗೆಯ ಪದಾರ್ಥಗಳ ಪ್ರತಿಯೊಂದರಲ್ಲಿಯೂ ಏನಾದರೊಂದು ಔಷಧೀಯ ಗುಣ ಖಂಡಿತವಾಗಿಯೂ ಇರುತ್ತದೆ. ಆದುದರಿಂದ ನಮ್ಮ ಭಾರತೀಯ ಪಾಕ ಕಲೆಯು (ಅಡುಗೆ) ಆರೋಗ್ಯದ ದೃಷ್ಟಿಯಿಂದ ಸರ್ವಶ್ರೇಷ್ಠವಾಗಿದೆ. ಈ ಘಟಕಗಳು ಯಾವುವು ಮತ್ತು ಔಷಧಿಯಂತೆ ಅವುಗಳನ್ನು ಹೇಗೆ ಉಪಯೋಗಿಸಬೇಕು ಎಂಬುದನ್ನು ನಾವು ತಿಳಿದುಕೊಳ್ಳೋಣ. ಆರೋಗ್ಯದ ಸಣ್ಣಪುಟ್ಟ ತೊಂದರೆಗಳಾದಾಗ ಸುಲಭವಾಗಿ ಮನೆಯಲ್ಲಿಯೇ ಉಪಚಾರ ಮಾಡಲು ಇಲ್ಲಿ ನೀಡಿರುವ ಮಾಹಿತಿಯನ್ನು ಉಪಯೋಗಿಸಬಹುದು.

ಅಡುಗೆಮನೆಯ ಮಸಾಲೆ ಡಬ್ಬಿ

ಉದಾಹರಣೆಗೆ, ಒಮ್ಮೆ ಓರ್ವ ಮಹಿಳೆಯಿಂದ ನನಗೆ ದೂರವಾಣಿ ಕರೆ ಬಂದಿತ್ತು. ‘ನಾಳೆ ನಾನು ಉಪನ್ಯಾಸ ಕೊಡಬೇಕು; ಆದರೆ ಸತತವಾಗಿ ಕೆಮ್ಮು ಬರುತ್ತಿದೆ. ಏನು ಮಾಡಲಿ?’ ಎಂದು. ನಾನು ಅವರಿಗೆ ಒಂದು ಔಷಧಿಯನ್ನು ಹೇಳಿದೆ; ಆದರೆ ತಡರಾತ್ರಿ ಆ ಔಷಧಿ ಸಿಗುವುದು ಅಸಾಧ್ಯವಾಗಿತ್ತು. ಆಗ ಲವಂಗವನ್ನು ಸಣ್ಣಗೆ ಕುಟ್ಟಿ ಜೇನುತುಪ್ಪ ಸೇರಿಸಿ ಅದನ್ನು ಸೇವಿಸುವಂತೆ ಅವರಿಗೆ ಹೇಳಿದೆ; ಅವರ ಕೆಮ್ಮು ಕಡಿಮೆಯಾಗಿ ಅವರಿಗೆ ಉಪನ್ಯಾಸ ನೀಡಲು ಸಾಧ್ಯವಾಯಿತು. ಗಂಟಲು ನೋವಿದ್ದರೆ ಅರಿಸಿನ-ಹಾಲು ಕುಡಿಯುವುದು, ಶೀತವಾಗಿದ್ದರೆ ಬಜೆಯ ಲೇಪವನ್ನು ಹಣೆಗೆ ಹಚ್ಚುವುದು, ಇಂತಹ ಮನೆಮದ್ದುಗಳನ್ನು ತಾವು ಕೇಳಿರಬಹುದು ಅಥವಾ ಓದಿರಬಹುದು. ಸಣ್ಣಪುಟ್ಟ ಕಾಯಿಲೆಗಳಿಗೆ ಮನೆಮದ್ದನ್ನು ಮಾಡಬಹುದು; ಆದರೆ ಎಲ್ಲರೂ ಗಮನಿಸಬೇಕಾದ ಒಂದು ಅಂಶವೆಂದರೆ, ಓರ್ವ ವ್ಯಕ್ತಿಗೆ ಗಂಭೀರ ರೋಗವಿದ್ದರೆ ಅವರು ಮನೆಮದ್ದನ್ನೇ ಅವಲಂಬಿಸುವುದು ಅಯೋಗ್ಯವಾಗಿದೆ. ಈ ಉಪಚಾರಗಳು ಪ್ರಾಥಮಿಕ ಸ್ವರೂಪದ್ದಾಗಿವೆ. ಈ ಮಾಹಿತಿಯನ್ನು ತಾರತಮ್ಯದಿಂದ ಉಪಯೋಗಿಸಬೇಕು. ಆಪತ್ಕಾಲದ ದೃಷ್ಟಿಯಿಂದ ಸಾಧಕರಿಗೆ ಈ ಮಾಹಿತಿ ಉಪಯೋಗವಾಗಲೆಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥಿಸುತ್ತೇನೆ – ವೈದ್ಯೆ (ಸೌ.) ಮುಕ್ತಾ ಲೊಟಲೀಕರ.

ಪ್ರತಿಯೊಬ್ಬ ಗೃಹಿಣಿಯು ಅಡುಗೆಮನೆಯಲ್ಲಿ ಮಸಾಲೆ ಡಬ್ಬಿಯೊಂದನ್ನು ಇಡುತ್ತಾಳೆ. ಒಗ್ಗರಣೆಗೆ ಬೇಕಾಗುವ ಜೀರಿಗೆ, ಸಾಸಿವೆ, ಅರಿಸಿನ, ಇಂಗು ಹೀಗೆ ಎಲ್ಲ ವಸ್ತುಗಳು ಒಟ್ಟಿಗೆ ಈ ಡಬ್ಬಿಯಲ್ಲಿ ಇರುತ್ತವೆ. ಅವುಗಳ ಔಷಧಿ (ಗುಣಗಳನ್ನು) ಉಪಯೋಗವನ್ನು ನಾವು ಇಂದು ತಿಳಿದುಕೊಳ್ಳೋಣ.

ಸಾಸಿವೆ

ಅ. ಸಾಸಿವೆಯು ಉಷ್ಣಗುಣದ್ದಾಗಿದೆ. ಆದುದರಿಂದ ಶರೀರದ ಯಾವುದೇ ಭಾಗದಲ್ಲಿ ನೋವಿದ್ದರೆ ಸಾಸಿವೆ ಎಣ್ಣೆ ಹಚ್ಚುವುದರಿಂದ ನೋವು ಕಡಿಮೆಯಾಗುತ್ತದೆ.

ಆ. ಕಫ ಪ್ರಕೃತಿಯ ವ್ಯಕ್ತಿಯು ಶಕ್ತಿ ಹೆಚ್ಚಿಸಬೇಕಾದರೆ ಸಾಸಿವೆ ಎಣ್ಣೆಯನ್ನು ಮೈಗೆ ತಿಕ್ಕಿಕೊಳ್ಳಬೇಕು.

ಇ. ಹುಳುಕು ಹಲ್ಲು ನೋಯುತ್ತಿದ್ದರೆ, ಸಾಸಿವೆಯನ್ನು ನಯವಾಗಿ ಪುಡಿ ಮಾಡಿ ಒಂದು ಲೋಟ ನೀರಿನಲ್ಲಿ ಕಾಲು ಚಮಚ ಸಾಸಿವೆಯ ಪುಡಿ ಸೇರಿಸಿ, ಅದು ಅರ್ಧ ಲೋಟ ನೀರು ಆಗುವ ತನಕ ಕುದಿಸಬೇಕು. ಈ ನೀರು ಉಗುರುಬೆಚ್ಚಗೆ ಆದ ಮೇಲೆ ಅದರಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ನೋವು ಕಡಿಮೆಯಾಗಿ ಆರಾಮ ಅನಿಸುತ್ತದೆ. (ಹಲ್ಲು ಹುಳುಕಾದರೆ ದಂತ ವೈದ್ಯರ ಸಲಹೆಯನ್ನು ಪಡೆದುಕೊಳ್ಳುವುದು ಆವಶ್ಯಕವಾಗಿದೆ.)

ಈ. ಸಾಸಿವೆಯನ್ನು ಹೆಚ್ಚು ಬಳಸುವುದರಿಂದ ಪಿತ್ತದ ರೋಗಗಳು ಆಗುತ್ತವೆ; ಆದರೆ ಸರಿಯಾದ ಅಳತೆಯಲ್ಲಿ ತಿಂದರೆ ಅದು ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತದೆ. (ಆದುದರಿಂದ ಒಗ್ಗರಣೆ ತಯಾರಿಸುವಾಗ ಅದನ್ನು ಸರಿಯಾದ ಅಳತೆಯಲ್ಲೇ ಬಳಸಲಾಗುತ್ತದೆ.)

ಉ. ಶೀತಪ್ರದೇಶದಲ್ಲಿ ಜನರು (ಉದಾ. ಉತ್ತರ ಭಾರತದಲ್ಲಿ) ಸಾಸಿವೆಯನ್ನು ಹೇರಳವಾಗಿ ಬಳಸುತ್ತಾರೆ. (ಸರಸೋ ಕಾ ಸಾಗ, ಸಾಸಿವೆ ಎಣ್ಣೆ ಹಾಕಿ ಮಾಡಿದ ಉಪ್ಪಿನಕಾಯಿ ಇತ್ಯಾದಿ). ಅದಕ್ಕೆ ಕಾರಣ ಮೇಲೆ ಹೇಳಿದ ಸಾಸಿವೆಯ ಗುಣಧರ್ಮದಿಂದ ತಮ್ಮ ಗಮನಕ್ಕೆ ಬಂದಿರಬಹುದು; ಆದರೆ ಉಷ್ಣ ಪ್ರದೇಶದಲ್ಲಿರುವ ಜನರು ‘ಸರಸೋ ಕಾ ಸಾಗ’ ಅಥವಾ ಸಾಸಿವೆ ಎಣ್ಣೆಯಿರುವ ಉಪ್ಪಿನಕಾಯಿ ಹೆಚ್ಚು ತಿಂದರೆ ತೊಂದರೆಯಾಗುತ್ತದೆ. ಇದರಿಂದ ಆಯಾ ಪ್ರದೇಶಕ್ಕೆ ತಕ್ಕಂತೆ ಏನು ತಿನ್ನಬೇಕು ಎಂಬುವುದೂ ತಮ್ಮ ಅರಿವಿಗೆ ಬರಬಹುದು.

ಜೀರಿಗೆ

ಅ. ಬಾಯಿಹುಣ್ಣು ಆದಾಗ ಜೀರಿಗೆಯನ್ನು ಜಗಿದು ತಿನ್ನಬೇಕು. ಜೀರಿಗೆಯಲ್ಲಿರುವ ಎಣ್ಣೆಯು ಬಾಯಿಹುಣ್ಣನ್ನು ಕಡಿಮೆ ಮಾಡುತ್ತದೆ; ಆದರೆ ಪದೇಪದೇ ಬಾಯಿಹುಣ್ಣು ಆಗುತ್ತಿದ್ದರೆ, ವೈದ್ಯಕೀಯ ಸಲಹೆ ಪಡೆಯುವುದು ಆವಶ್ಯಕ.

ಆ. ಹಸಿವಾಗದಿರುವುದು, ಹೊಟ್ಟೆ ಉಬ್ಬುವುದು, ಬಾಯಿರುಚಿ ಇಲ್ಲದಿರುವುದು, ಪದೇಪದೇ ಅಜೀರ್ಣವಾಗುವುದು ಇದಕ್ಕೆಲ್ಲ ಸರಳ ಉಪಾಯವೆಂದರೆ ಊಟದ ನಂತರ ಕಾಲು ಚಮಚ ಜೀರಿಗೆಯನ್ನು ಜಗಿದು ತಿನ್ನಬೇಕು. ನಂತರ ಬೆಚ್ಚನೆಯ ನೀರು ಕುಡಿಯಬೇಕು.

ಇ. ಬಾಣಂತಿಗೆ ಕಾಲು ಚಮಚ ಜೀರಿಗೆಯ ಚೂರ್ಣ ಮತ್ತು ಅರ್ಧ ಚಮಚ ಬೆಲ್ಲ ಹೀಗೆ ಪ್ರತಿದಿನ ತಿನ್ನಲು ಕೊಟ್ಟರೆ ಹಾಲಿನ ಪ್ರಮಾಣವು ಹೆಚ್ಚುತ್ತದೆ.

ಈ. ವಾಂತಿಯಾಗುತ್ತಿದ್ದರೆ ಕಾಲು ಚಮಚ ಜೀರಿಗೆ ಚೂರ್ಣ ಉಗುರುಬೆಚ್ಚಗಿನ ನೀರಿನೊಂದಿಗೆ ಸೇವಿಸಿದರೆ ಆರಾಮ ಅನಿಸುತ್ತದೆ.

ಇಂಗು

ಅ. ಇಂಗು ಒಂದು ರೀತಿಯ ಸಸ್ಯರಸ. ಇಂಗು ಉಷ್ಣ ಗುಣಧರ್ಮದ್ದಾಗಿದೆ. ಸಣ್ಣ ಮಕ್ಕಳ ಹೊಟ್ಟೆ ಉಬ್ಬಿದರೆ ಅದರ ಮೇಲೆ ಇಂಗಿನ ಲೇಪವನ್ನು ಹಚ್ಚಿದರೆ ಆರಾಮವಾಗುತ್ತದೆ.

ಆ. ಅಜೀರ್ಣ (ಅಪಚನ) ವಾದರೆ ಒಂದು ಚಮಚ ತುಪ್ಪದ ಜೊತೆಗೆ ಒಂದು ಚಿಟಿಕಿ ಇಂಗನ್ನು ತಿನ್ನಬೇಕು.

ಇ. ಗಾಯ ವಾಸಿಯಾಗದಿದ್ದರೆ ಬೇವಿನ ಎಲೆಗಳು ಮತ್ತು ಇಂಗು ಈ ಮಿಶ್ರಣವನ್ನು (ಚಟ್ನಿ ಹಾಗೆ) ನುಣ್ಣಗೆ ಮಾಡಿ ಗಾಯದ ಮೇಲೆ ಹಚ್ಚಿದರೆ ಗಾಯ ವಾಸಿಯಾಗುತ್ತದೆ.

ಈ. ಹೊಟ್ಟೆ ತೊಳೆಸುವುದು, ವಾಂತಿಯಾಗುವುದು, ದೀರ್ಘ ಕಾಲ ಹೊಟ್ಟೆ ನೋವು ಬರುವುದು, ಹೀಗೆ ಆಗುತ್ತಿದ್ದರೆ ಇಂಗು, ಸೈಂಧವ ಉಪ್ಪು, ಮತ್ತು ಜೀರಿಗೆ ಪುಡಿ ಪ್ರತಿಯೊಂದನ್ನು ಒಂದು ಚಿಟಿಕೆಯಷ್ಟು ತೆಗೆದುಕೊಂಡು, ಒಂದು ಚಮಚ ತುಪ್ಪ ಮತ್ತು ಅರ್ಧ ಚಮಚ ಜೇನುತುಪ್ಪದೊಂದಿಗೆ ಬೆರೆಸಿ ಸೇವಿಸಬೇಕು.

ಉ. ಇಂಗು ಉಷ್ಣಗುಣಧರ್ಮದ್ದಾಗಿದೆ, ಹಾಗಾಗಿ ಪಿತ್ತ ಪ್ರಕೃತಿಯವರು, ಮೈಗ್ರೇನ (ತಲೆನೋವಿನ ಒಂದು ಪ್ರಕಾರ), ಹಾಗೂ ಯಕೃತ್ತಿನ ರೋಗವಿರುವ ಜನರು ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಬಳಸಬೇಕು.

ಅರಿಸಿನ

ಅ. ಅರಿಸಿನದ ಔಷಧೀಯ ಉಪಯುಕ್ತತೆಯು ನಮಗೆಲ್ಲರಿಗೂ ಗೊತ್ತಿರುತ್ತದೆ. ಅರಿಸಿನವನ್ನು ಬಹುಗುಣಿ ಎಂದು ಮತ್ತು ವಿವಿಧ ವ್ಯಾಧಿಗಳಿಗೆ ಔಷಧಿ ಎಂದು ಬಳಸುತ್ತಾರೆ. ಅರಿಸಿನದ ಗುಣ ಧರ್ಮವು ಉಷ್ಣವಾಗಿದ್ದರೂ, ಅದರಿಂದ ಪಿತ್ತವು ಹೆಚ್ಚುವುದಿಲ್ಲ.

ಆ. ಶೀತ, ಕೆಮ್ಮು, ಗಂಟಲು ನೋವಿದ್ದರೆ ಕಾಲು ಚಮಚ ಅರಿಸಿನದ ಹುಡಿಯನ್ನು ಜೇನುತುಪ್ಪದೊಂದಿಗೆ ನೆಕ್ಕಬೇಕು. ಅರಿಸಿನ ಹುಡಿಯನ್ನು ಹಾಲಿಗೂ ಸೇರಿಸಿ ಕುಡಿಯಬಹುದು.

ಇ. ಬಾಯಿಹುಣ್ಣಾದರೆ ಅರಿಸಿನದ ಕಷಾಯದಿಂದ ಬಾಯಿ ಮುಕ್ಕಳಿಸಬೇಕು. ಇದರಿಂದ ಬಾಯಿಹುಣ್ಣು ಕಡಿಮೆಯಾಗುತ್ತದೆ, ಹಾಗೂ ಬಾಯಿಯ ದುರ್ಗಂಧವೂ ಕಡಿಮೆಯಾಗುತ್ತದೆ.

ಈ. ಮೈಗೆ ಕೆರೆತ ಬಂದಾಗ ಅಥವಾ ಚರ್ಮರೋಗ ಆದಾಗ ಅರಿಸಿನ ಮತ್ತು ಬೇವು ಸೊಪ್ಪಿನ ಮಿಶ್ರಣವನ್ನು (ಚಟ್ನಿ ಹಾಗೆ) ಮಾಡಿ ಆ ಲೇಪವನ್ನು ಹಚ್ಚಿದರೆ ಆರಾಮವೆನಿಸುತ್ತದೆ.

ಉ. ಪೆಟ್ಟು ಬಿದ್ದ ಜಾಗದಲ್ಲಿ ಅರಿಸಿನದ ಲೇಪವನ್ನು ಹಚ್ಚಬೇಕು. ಕಾಲು ಚಮಚ ಅರಿಸಿನ ಮತ್ತು ಅರ್ಧ ಚಮಚ ಬೆಲ್ಲದ ಮಿಶ್ರಣವನ್ನು ತಿನ್ನಬೇಕು.

ಊ. ಮೂಲವ್ಯಾಧಿ ಆದಾಗ ಆಕಳ ತುಪ್ಪದಲ್ಲಿ ಅರಿಸಿನದ ಕೊಂಬನ್ನು ಅರೆದು ಗೆಡ್ಡೆಗಳಿಗೆ ಹಚ್ಚಬೇಕು.

ಎ. ಅರಿಸಿನದಿಂದ ಚರ್ಮದ ಬಣ್ಣವು ಸುಧಾರಿಸುತ್ತದೆ. ಆದುದರಿಂದ ಉಟಣೆಗಳಲ್ಲಿ ಮತ್ತು ಮುಲಾಮುಗಳಲ್ಲಿ ಅರಿಸಿನವನ್ನು ಬಳಸುತ್ತಾರೆ. ಕಡಲೆ ಹಿಟ್ಟಿಗೆ ಒಂದು ಚಿಟಿಕೆ ಅರಿಸಿನ ಹಾಕಿ ಅವೆರಡನ್ನೂ ಹಾಲಿನಲ್ಲಿ ಬೆರಿಸಿ ಆ ಲೇಪವನ್ನು ಮುಖಕ್ಕೆ ಹಚ್ಚಿಕೊಂಡರೆ ಚರ್ಮದ ಕಾಂತಿಯು ಹೆಚ್ಚಾಗುತ್ತದೆ.

ಏ. ಕಾಲು ಉಳುಕಿ ಬಾವು ಬಂದರೆ ಅರಿಸಿನದ ಕೊಂಬನ್ನು ನೀರಿನಲ್ಲಿ ಅರೆದು ಬಿಸಿ ಮಾಡಿ ಬಾವು ಬಂದಿರುವಲ್ಲಿ ಅದನ್ನು ಹಚ್ಚಬೇಕು.

ಕೊತ್ತುಂಬರಿ ಬೀಜ

ಅ. ಮಸಾಲೆ ಪದಾರ್ಥಗಳಲ್ಲಿ ಕೊತ್ತುಂಬರಿ ಬೀಜಗಳು ಇರುತ್ತವೆ. ಕೊತ್ತುಂಬರಿ ಬೀಜಗಳು ನಮ್ಮ ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಬಹಳ ಚೆನ್ನಾಗಿ ಮಾಡುತ್ತವೆ. ಕೊತ್ತುಂಬರಿ ಬೀಜಗಳು ಪಿತ್ತವನ್ನು ಹೆಚ್ಚಿಸುವುದಿಲ್ಲ. ಆದುದರಿಂದ ಪಿತ್ತ ಪ್ರಕೃತಿಯ ವ್ಯಕ್ತಿಗಳು ಕೊತ್ತುಂಬರಿ ಬೀಜಗಳನ್ನು ಹೆಚ್ಚು ಬಳಸಬಹುದು.

ಆ. ಬಾಯಿಹುಣ್ಣು ಆದಾಗ ಕೊತ್ತುಂಬರಿ ಬೀಜಗಳ ರಸದಿಂದ ಬಾಯಿ ಮುಕ್ಕಳಿಸಬೇಕು.

ಇ. ಮೂಗಿನಿಂದ ರಕ್ತ ಬಂದರೆ ೩-೪ ಹನಿ ಕೊತ್ತುಂಬರಿ ಬೀಜಗಳ ರಸವನ್ನು ಮೂಗಿನಲ್ಲಿ ಹಾಕಬೇಕು.

ಈ. ವಾಂತಿಯಾಗುತ್ತಿದ್ದರೆ ಅರ್ಧ ಚಮಚ ಕೊತ್ತುಂಬರಿ ಬೀಜಗಳ ಪುಡಿ ಮತ್ತು ಒಂದು ಚಮಚ ಕಲ್ಲುಸಕ್ಕರೆಯನ್ನು ಸೇರಿಸಿ ತಿನ್ನಬೇಕು.

ಉ. ಕೆಂಗಣ್ಣು ರೋಗ ಬಂದಾಗ ಕಣ್ಣುಗಳು ಉರಿಯುತ್ತವೆ ಮತ್ತು ಕಣ್ಣುಗಳಲ್ಲಿ ಒಂದೇಸವನೇ ಏನೋ ಚುಚ್ಚಿದ ಹಾಗೆ ಅನಿಸುತ್ತದೆ. ಇಂತಹ ಸಮಯದಲ್ಲಿ ಔಷಧೋಪಚಾರಗಳ ಜೊತೆಗೆ ಕೊತ್ತುಂಬರಿ ಬೀಜಗಳ ಪುಡಿಯನ್ನು ಒಂದು ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಅದ್ದಿ ಸ್ವಲ್ಪ ಸ್ವಲ್ಪ ಸಮಯದ ನಂತರ ಅದನ್ನು ಕಣ್ಣುಗಳ ಮೇಲೆ ಇಡಬೇಕು.

ಊ. ಮೇಲಿಂದ ಮೇಲೆ ಆಗುವ ಪಿತ್ತದಿಂದ ಗಂಟಲಿನಲ್ಲಿ ಉರಿ, ಮೈ ಉರಿಯುವುದು, ಕಣ್ಣುಗಳು ಉರಿಯುವುದಂತಹ ತೊಂದರೆಗಳಾಗುತ್ತಿದ್ದರೆ ಇದನ್ನು ಮಾಡಿ. ಅರ್ಧ ಚಮಚ ಕೊತ್ತುಂಬರಿ ಬೀಜಗಳ ಪುಡಿ ಮತ್ತು ಅರ್ಧ ಚಮಚ ಜೀರಿಗೆ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಹಾಕಿ ರಾತ್ರಿಯಿಡೀ ನೆನೆಸಿಡಬೇಕು. ಬೆಳಗ್ಗೆ ಈ ನೀರನ್ನು ಸೋಸಿ ಬರಿ ಹೊಟ್ಟೆಯಲ್ಲಿ ಕುಡಿಯಬೇಕು.

ಎ. ಒಂದೇಸಮನೆ ಒಣ ಕೆಮ್ಮು ಬರುತ್ತಿದ್ದರೆ ಕೊತ್ತುಂಬರಿ ಬೀಜಗಳನ್ನು ಕಲ್ಲುಸಕ್ಕರೆಯೊಂದಿಗೆ ಅಗಿದು ತಿನ್ನಬೇಕು.

ಏ. ಮೂತ್ರವಿಸರ್ಜನೆ ಮಾಡುವಾಗ ಉರಿ, ಮೂತ್ರ ಸಂಪೂರ್ಣ ಆಗದಿರುವುದು ಇವುಗಳಿಗೆ ಉಪಚಾರವೆಂದು ಅರ್ಧ ಚಮಚ ಕೊತ್ತುಂಬರಿ ಬೀಜಗಳ ಪುಡಿಯನ್ನು ಒಂದು ಲೋಟ ನೀರಿನಲ್ಲಿ ಇಡೀ ರಾತ್ರಿ ನೆನೆಸಿ ಬೆಳಗ್ಗೆ ಸೋಸಿ ಬರಿ ಹೊಟ್ಟೆಯಲ್ಲಿ ಕುಡಿಯಬೇಕು.

ಅಜವಾನ (ಓಮ)

ಅಜವಾನವು ಉಷ್ಣ ಗುಣಧರ್ಮದ್ದಾಗಿರುವುದರಿಂದ ಅದು ಜಠರಾಗ್ನಿಯನ್ನು ಹೆಚ್ಚಿಸುವ ಕಾರ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡುತ್ತದೆ.

ಅ. ಅಪಚನವಾಗಿದ್ದರೆ, ‘ಗ್ಯಾಸ್‌’ನಿಂದ (ವಾಯುವಿನಿಂದ) ಹೊಟ್ಟೆ ನೋಯುತ್ತಿದ್ದರೆ, ಕಾಲು ಚಮಚ ಅಜವಾನ ತಿಂದು ಅದರ ಮೇಲೆ ಬಿಸಿನೀರು ಕುಡಿಯಬೇಕು. ಅಜವಾನವನ್ನು ಬಟ್ಟೆಯಲ್ಲಿ ಕಟ್ಟಿ ಅದರಿಂದ ಹೊಟ್ಟೆಗೆ ಕಾವು ನೀಡಬಹುದು.

ಆ. ಹೊಟ್ಟೆಯಲ್ಲಿ ಜಂತುಗಳು ಆಗಿದ್ದರೆ, ಅಜವಾನವನ್ನು ವೀಳ್ಯದೆಲೆಯ ಜೊತೆಗೆ ತಿನ್ನಲು ಕೊಡಬೇಕು.

ಇ. ವಾಂತಿಯಾಗುತ್ತಿದ್ದರೆ, ಅಜವಾನ ಮತ್ತು ಲವಂಗದ ಒಂದು ಚಿಟಿಕೆ ಚೂರ್ಣವನ್ನು ಜೇನುತುಪ್ಪದೊಂದಿಗೆ ನೆಕ್ಕಿ ತಿನ್ನಬೇಕು.

ಈ. ಹಸಿವಾಗದಿದ್ದರೆ ಕಾಲು ಚಮಚ ಅಜವಾನ ಮತ್ತು ಒಂದು ಚಿಟಿಕೆ ಸೈಂಧವ ಉಪ್ಪನ್ನು ಬೆಚ್ಚನೆಯ ನೀರಿನೊಂದಿಗೆ ಸೇವಿಸಬೇಕು.

ಲವಂಗ

ಅ. ಲವಂಗದ ರುಚಿ ಖಾರ ಮತ್ತು ಕಹಿ ಇದ್ದರೂ, ಅದು ತಂಪು ಗುಣಧರ್ಮದ್ದಾಗಿದೆ.

ಆ. ಬಾಯಿಯಿಂದ ದುರ್ಗಂಧ ಬರುತ್ತಿದ್ದರೆ ಲವಂಗವನ್ನು ಜಗಿಯಬೇಕು.

ಇ. ಹಲ್ಲು ಬಹಳ ನೋಯುತ್ತಿದ್ದರೆ ಹತ್ತಿಯ ಮೇಲೆ ಲವಂಗದ ಎಣ್ಣೆಯನ್ನು ಹಾಕಿ ಅದನ್ನು ಹಲ್ಲಿನ ಮೇಲೆ ಒತ್ತಿ ಹಿಡಿಯಬೇಕು. ಅದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ.

ಈ. ಮೇಲಿಂದ ಮೇಲೆ ಕೆಮ್ಮು ಬರುತ್ತಿದ್ದರೆ, ದಮ್ಮಿನ (ಅಸ್ತಮಾದ) ತೊಂದರೆಯಿಂದ ಕೆಮ್ಮು ಬಂದಂತಾಗುತ್ತಿದ್ದರೆ, ಒಂದು ಚಿಟಿಕೆ ಲವಂಗದ ಚೂರ್ಣವನ್ನು ಜೇನುತುಪ್ಪದೊಂದಿಗೆ ಬೆರಸಿ ನೆಕ್ಕಿ ತಿನ್ನಬೇಕು.

ಉ. ಅವರೆಕಾಳು, ಕಡಲೆಬೇಳೆ, ಚೆನ್ನಂಗಿ ಬೇಳೆಯಂತಹ ಕಾಳುಗಳ ಪದಾರ್ಥಗಳನ್ನು ಬಹಳಷ್ಟು ಪ್ರಮಾಣದಲ್ಲಿ ತಿನ್ನುವುದರಿಂದ ಅಜೀರ್ಣವಾಗಿ ಹೊಟ್ಟೆ ಉಬ್ಬಿದರೆ, ಹುರಿದ ಲವಂಗದ ಒಂದು ಚಿಟಿಕೆ ಚೂರ್ಣವನ್ನು ಜೇನುತುಪ್ಪದೊಂದಿಗೆ ತಿನ್ನಬೇಕು. ಅದರಿಂದ ಹೊಟ್ಟೆಯಲ್ಲಿರುವ ವಾಯುವಿಗೆ (ಗ್ಯಾಸಗೆ) ವೇಗ ದೊರೆತು ಹೊಟ್ಟೆ ಹಗುರಾಗುತ್ತದೆ. ಸದ್ಯ ಬಹಳಷ್ಟು ಜನರು ಊಟ ಹೆಚ್ಚಾದರೆ, ಸೋಡಾ ಇರುವ ತಂಪು ಪಾನೀಯಗಳನ್ನು ಕುಡಿಯುತ್ತಾರೆ. ಉಪಹಾರಗೃಹಗಳಲ್ಲಿಯೂ ಒಂದು ರೂಢಿಯಾಗಿ ‘ಕೊಲ್ಡ್ ಡ್ರಿಂಕ ಬೇಕಾ ?’, ಎಂದು ಕೇಳುತ್ತಾರೆ. ಅವುಗಳ ಮೂಲಕ ಅತಿಹೆಚ್ಚು ಪ್ರಮಾಣದಲ್ಲಿ ಸಕ್ಕರೆ ಶರೀರದಲ್ಲಿ ಹೊಗುತ್ತದೆ. ನಿಜ ಹೇಳುವುದಾದರೆ ನಾವು ಊಟವನ್ನೇ ಸರಿ ಪ್ರಮಾಣದಲ್ಲಿ ಮಾಡಿದರೆ, ಈ ತೊಂದರೆಯೇ ಆಗುವುದಿಲ್ಲ; ಆದರೆ ನಾಲಿಗೆಯ ಚಪಲದಿಂದ ಜಾಸ್ತಿ ತಿಂದರೆ ಈ ರೀತಿಯ ತೊಂದರೆ ಯಾವಾಗಲಾದರೊಮ್ಮೆ ಆಗುತ್ತದೆ. ಹೀಗಾದಾಗ ಲವಂಗದ ಚೂರ್ಣವನ್ನು ಸೇವಿಸುವುದು, ಎಂದಿಗೂ ಆರೋಗ್ಯಕ್ಕಾಗಿ ಹಿತಕರವೇ.

ಜಾಜಿಕಾಯಿ (ಜಾಯಿಕಾಯಿ)

ಅ. ಸಿಹಿ ಪದಾರ್ಥಗಳಿಗೆ ಸುಗಂಧ ಬರಬೇಕೆಂದು ಜಾಜಿಕಾಯಿಯನ್ನು ಬಳಸುತ್ತಾರೆ. ಜಾಜಿಕಾಯಿ ಉಷ್ಣ ಗುಣಧರ್ಮದ್ದಾಗಿದೆ.

ಆ. ತಲೆ ನೋಯುತ್ತಿದ್ದರೆ ಜಾಜಿಕಾಯಿಯನ್ನು ತೇಯ್ದು ಹಣೆಗೆ ಹಚ್ಚಬೇಕು.

ಇ. ನಿದ್ದೆ ಬರದಿದ್ದರೆ, ಜಾಜಿಕಾಯಿಯನ್ನು ತೇಯ್ದು ಅದರ ಲೇಪವನ್ನು ಹಣೆಗೆ ಮತ್ತು ಅಂಗಾಲುಗಳಿಗೆ ಹಚ್ಚಬೇಕು.

ಈ. ಹೊಟ್ಟೆನೋವು ಬಂದು ಭೇದಿ ಆಗುತ್ತಿದ್ದರೆ, ಜಾಜಿಕಾಯಿಯನ್ನು ಹೆರೆಯಬೇಕು (ತುರಿದು) ಮತ್ತು ಹೆರೆದ ಜಾಜಿಕಾಯಿಯನ್ನು ಕಾಲು ಚಮಚ ತುಪ್ಪ ಮತ್ತು ಕಾಲು ಚಮಚ ಸಕ್ಕರೆಯೊಂದಿಗೆ ಸೇವಿಸಿದರೆ ಹೊಟ್ಟೆನೋವಿನ ಪ್ರಮಾಣವು ಕಡಿಮೆಯಾಗಿ ಭೇದಿಯೂ ನಿಲ್ಲುತ್ತದೆ.

ಉ. ಮುಖದ ಮೇಲೆ ಮೊಡವೆಗಳು ಕಾಣಿಸಿಕೊಂಡರೆ ಜಾಜಿಕಾಯಿಯನ್ನು ಹಾಲಿನಲ್ಲಿ ತೇಯ್ದು ಮುಖಕ್ಕೆ ಅದರ ಲೇಪವನ್ನು ಹಚ್ಚಬೇಕು. ಅದರಿಂದ ಮೊಡವೆಗಳ ಕಲೆ ಬೀಳುವುದಿಲ್ಲ ಮತ್ತು ಚರ್ಮ ಸ್ವಚ್ಛವಾಗುತ್ತದೆ.

ದಾಲಚಿನ್ನಿ (ಚಕ್ಕೆ)

ಅ. ಶೀತದಿಂದ ತಲೆ ನೋಯುತ್ತಿದ್ದರೆ ದಾಲಚಿನ್ನಿಯನ್ನು ತೇಯ್ದು ಅದರ ಲೇಪವನ್ನು ಹಣೆಗೆ ಹಚ್ಚಬೇಕು.

ಆ. ದಾಲಚಿನ್ನಿಯು ಒಸಡುಗಳನ್ನು ಗಟ್ಟಿ ಮಾಡುತ್ತದೆ. ಆದುದರಿಂದ ದಾಲಚಿನ್ನಿಯ ಒಂದು ತುಂಡನ್ನು ಬಾಯಿಯಲ್ಲಿಟ್ಟರೆ ಒಸಡುಗಳು ಆರೋಗ್ಯಕರವಾಗಿರುತ್ತವೆ.

ಇ. ದಾಲಚಿನ್ನಿಯ ಒಂದು ತುಂಡನ್ನು ಬಾಯಿಯಲ್ಲಿಟ್ಟುಕೊಂಡರೆ ವಾಕರಿಕೆ ಕಡಿಮೆಯಾಗುತ್ತದೆ.

ಈ. ಹುಳುಕು ಹಲ್ಲಿನ ಮೇಲೆ ದಾಲಚಿನ್ನಿಯ ಎಣ್ಣೆಯಲ್ಲಿ ಅದ್ದಿದ ಹತ್ತಿಯನ್ನು ಇಟ್ಟರೆ, ನೋವು ಕಡಿಮೆಯಾಗುತ್ತದೆ.

ಉ. ದಾಲಚಿನ್ನಿಯು ಉಷ್ಣವಾಗಿರುವುದರಿಂದ ಕೆಮ್ಮು, ದಮ್ಮುಗಳಂತಹ ಕಾಯಿಲೆಗಳಿಗಾಗಿ ಬಳಸುವ ಔಷಧಿಗಳಲ್ಲಿ ಅದನ್ನು ಉಪಯೋಗಿಸುತ್ತಾರೆ.

ಕರಿಮೆಣಸು (ಮೆಣಸಿನ ಕಾಳು)

ಅ. ಕರಿಮೆಣಸು ಬಹಳ ಉಷ್ಣ, ಅದು ಪಿತ್ತವನ್ನು ಹೆಚ್ಚಿಸುತ್ತದೆ. ಆದುದರಿಂದ ಆಹಾರದಲ್ಲಿ ಕರಿಮೆಣಸು ಬಳಸುವಾಗ, ನಮ್ಮ ಪ್ರಕೃತಿ, ನಮಗಾಗುವ ತೊಂದರೆ ಮತ್ತು ಋತು ಇವುಗಳ ವಿಚಾರ ಮಾಡುವುದು ಆವಶ್ಯಕವಾಗಿದೆ. ಕಫ ಪ್ರಕೃತಿಯ ವ್ಯಕ್ತಿಗೆ ಕರಿಮೆಣಸಿನಿಂದ ಕೂಡಲೇ ತೊಂದರೆಯಾಗುವುದಿಲ್ಲ; ಆದರೆ ಪಿತ್ತ ಪ್ರಕೃತಿಯ ವ್ಯಕ್ತಿಗಳಿಗೆ ಮಾತ್ರ ಮೆಣಸು ತಿಂದ ತಕ್ಷಣ ಪಿತ್ತದ ತೊಂದರೆಯಾಗಬಹುದು. ಬೇಸಿಗೆಯಲ್ಲಿ ಅಥವಾ ಶರದ ಋತುವಿನಲ್ಲಿ ನಮ್ಮ ಆಹಾರದಲ್ಲಿ ಕರಿ ಮೆಣಸಿನ (ಮೆಣಸಿನ ಕಾಳು) ಪ್ರಮಾಣ ಅತ್ಯಲ್ಪವಿರಬೇಕು.

ಆ. ಎದೆಯಲ್ಲಿ ಕಫ ಆಗಿದ್ದರೆ ಅಥವಾ ಶೀತ ಆಗಿದ್ದರೆ ಚಿಟಿಕೆಯಷ್ಟು ಕರಿಮೆಣಸಿನ ಪುಡಿಯನ್ನು ಜೇನುತುಪ್ಪದೊಂದಿಗೆ ನೆಕ್ಕಿದರೆ ಕಫ ತೆಳುವಾಗುತ್ತದೆ.

ಬಡೇಸೋಪು (ಸೋಂಪು)

ಅ. ಬಡೇಸೋಪು ಶೀತಲ ಗುಣಧರ್ಮದ್ದಾಗಿದೆ. ಆದುದರಿಂದ ಅದು ಪಿತ್ತವನ್ನು ಕಡಿಮೆ ಮಾಡುತ್ತದೆ.

ಆ. ಚಿಕ್ಕ ಮಕ್ಕಳಲ್ಲಿ ಹೊಟ್ಟೆ ಉಬ್ಬುವುದು, ಹೊಟ್ಟೆ ನೋವು ಇತ್ಯಾದಿಗಳಿಗೆ ಬಡೇಸೋಪಿನ ಅರ್ಕವನ್ನು (೫ ರಿಂದ ೧೦ ಮಿ.ಲಿ. ಅಷ್ಟು) ಎರಡೂ ಸಮಯದ ಊಟದ ಮೊದಲು ಕೊಟ್ಟರೆ ಕೂಡಲೇ ಆರಾಮವೆನಿಸುತ್ತದೆ.

ಇ. ಬಡೇಸೋಪಿನ ಪುಡಿಯನ್ನು ಅರ್ಧ ಚಮಚದಷ್ಟು ಕಲ್ಲುಸಕ್ಕರೆಯೊಂದಿಗೆ ಕೊಟ್ಟರೆ ಮೇಲಿಂದ ಮೇಲೆ ಬರುವ ಕೆಮ್ಮು ಕಡಿಮೆಯಾಗುತ್ತದೆ.

ಈ. ಬಾಣಂತಿಗೆ ಪ್ರತಿದಿನ ಬಡೇಸೋಪು ಕೊಟ್ಟರೆ ಲಾಭವಾಗುತ್ತದೆ.

ಹಸಿಶುಂಠಿ ಮತ್ತು ಶುಂಠಿ

ಅ. ಹಸಿಶುಂಠಿ (ಅಲ್ಲ) ಮತ್ತು ಶುಂಠಿ ಇವೆರಡೂ ಉಷ್ಣ ಗುಣಧರ್ಮದ್ದಾಗಿವೆ. ಗಡ್ಡೆ ಹಸಿಯಾಗಿದ್ದರೆ ಅದಕ್ಕೆ ‘ಹಸಿಶುಂಠಿ’ ಅಥವಾ ‘ಅಲ್ಲ’ ಎಂದು ಹೇಳುತ್ತಾರೆ, ಅದು ಒಣಗಿದ ನಂತರ ಮತ್ತು ಅದರ ಮೇಲೆ ವಿಶಿಷ್ಟ ಪ್ರಕ್ರಿಯೆಯನ್ನು ಮಾಡಿದ ಮೇಲೆ ‘ಒಣಶುಂಠಿ’ ತಯಾರಾಗುತ್ತದೆ. ಉಷ್ಣವಾಗಿರುವುದರಿಂದ ಬೇಸಿಗೆ ಮತ್ತು ಶರದ ಋತುವಿನಲ್ಲಿ ಹಸಿಶುಂಠಿ ಮತ್ತು ಶುಂಠಿಯನ್ನು ಬಳಸಬಾರದು.

ಆ. ಹಸಿಶುಂಠಿಯ ರಸದೊಂದಿಗೆ ಏಲಕ್ಕಿ, ಜಾಜಿಕಾಯಿ, ಜಾಯಪತ್ರಿ ಮತ್ತು ಲವಂಗ ಇವೆಲ್ಲವುಗಳನ್ನು ಹಾಕಿ ತಯಾರಿಸಿದ ಆಲೆಪಾಕ್, ಹಸಿವೆ ಆಗದಿರುವುದು, ಬಾಯಿಗೆ ರುಚಿ ಇಲ್ಲದಿರುವುದು, ಶೀತ ಮತ್ತು ಕೆಮ್ಮಿಗೆ ಉತ್ತಮ ಔಷಧಿ ಆಗಿದೆ.

ಇ. ಅಜೀರ್ಣವಾಗುತ್ತಿದ್ದರೆ ಕಾಲು ಚಮಚ ಹಸಿಶುಂಠಿಯ ರಸದಲ್ಲಿ, ಚಿಟಿಕೆಯಷ್ಟು ಸೈಂಧವ ಲವಣ ಮತ್ತು ಸ್ವಲ್ಪ ನಿಂಬೆರಸವನ್ನು ಹಾಕಬೇಕು, ಊಟಕ್ಕೆ ಮೊದಲು ಈ ಮಿಶ್ರಣವನ್ನು ಸ್ವಲ್ಪ ನೆಕ್ಕಿದರೆ ಬಾಯಿಗೆ ರುಚಿ ಬರುತ್ತದೆ ಮತ್ತು ಜೀರ್ಣಕ್ರಿಯೆಯೂ ಸುಧಾರಿಸುತ್ತದೆ.

ಈ. ಕೆಮ್ಮಿದ್ದರೆ ಕಾಲು ಚಮಚದಷ್ಟು ಹಸಿಶುಂಠಿಯ ರಸವನ್ನು ಜೇನುತುಪ್ಪದೊಂದಿಗೆ ನೆಕ್ಕಲು ಕೊಡಬೇಕು. (ಇದರಲ್ಲಿ ಪ್ರಮಾಣ ತುಂಬ ಮಹತ್ವದ್ದಾಗಿದೆ; ಏಕೆಂದರೆ ಚಿಕಿತ್ಸೆ ಗೊತ್ತಿದೆ, ಆದರೆ ಪ್ರಮಾಣ ಗೊತ್ತಿರದಿದ್ದರೆ, ಅದರಿಂದ ಲಾಭವಾಗದೇ ಅಪಾಯವೇ ಹೆಚ್ಚಾಗುತ್ತದೆ. ಒಮ್ಮೆ ಓರ್ವ ರೋಗಿಗೆ ಬಹಳ ಕಫ ವಾದುದರಿಂದ ಅವನ ಸಂಬಂಧಿಕರು ಅವನಿಗೆ ಮನೆಮದ್ದಿನ ಹೆಸರಿನಲ್ಲಿ ಅರ್ಧ ಬಟ್ಟಲಿನಷ್ಟು ಹಸಿಶುಂಠಿಯ ರಸ ಮತ್ತು ಜೇನುತುಪ್ಪವನ್ನು ನೀಡಿದ್ದರು. ಆ ರೋಗಿಯ ಕಫವಂತೂ ಅದರಿಂದ ಕಡಿಮೆಯಾಗಲಿಲ್ಲ, ಬದಲಾಗಿ ಉಷ್ಣತೆಯ ತೊಂದರೆಯಿಂದ ಅವನು ತುಂಬಾ ತೊಂದರೆಗೀಡಾದನು. ಆದುದರಿಂದ ನಮಗೆ ಪೂರ್ಣ ಮಾಹಿತಿ ಇಲ್ಲದಿರುವ ಚಿಕಿತ್ಸೆಯನ್ನು ಯಾವುದೇ ರೋಗಿಗೆ ಮಾಡಬಾರದು ಎಂದು ಇಲ್ಲಿ ಹೇಳ ಬೇಕೆನಿಸುತ್ತದೆ. ಈ ಸಮಯದಲ್ಲಿ ವೈದ್ಯರ ಸಲಹೆ ಪಡೆದಿದ್ದರೆ, ರೋಗಿಗೆ ತೊಂದರೆಯಾಗುತ್ತಿರಲಿಲ್ಲ.)

ಹುಣಸೆ

ಅ. ಹುಣಸೆ ಹುಳಿಯಾಗಿರುತ್ತದೆ. ಹಸಿ ಹುಣಸೆಕಾಯಿ ಉಷ್ಣ ಗುಣಧರ್ಮದ್ದಾಗಿರುತ್ತದೆ. ಆದುದರಿಂದ ಅದು ಪಿತ್ತವನ್ನು ಹೆಚ್ಚಿಸುತ್ತದೆ. ಹಣ್ಣಾದ ಹುಣಸೆಯೂ ಉಷ್ಣವೇ ಆಗಿರುತ್ತದೆ; ಆದರೆ ಹುಣಸೆಕಾಯಿಗಿಂತ ಲಾಭದಾಯಕವಾಗಿರುತ್ತದೆ.

ಆ. ಹಸಿವಾಗದಿರುವುದು, ಆಹಾರ ಜೀರ್ಣವಾಗದಿರುವಾಗ, ಬಾಯಿಗೆ ರುಚಿ ಇರದಿರುವುದು, ಹೊಟ್ಟೆ ತೊಳೆಸುವಿಕೆ, ಮೈ ಉರಿಯುವುದು ಇವುಗಳಿಗೆ ಹುಣಸೆಯ ಶರಬತ್ತು ಬಹಳ ಲಾಭದಾಯಕವಾಗಿದೆ.

ಹುಣಸೆಯ ಶರಬತ್ತು ತಯಾರಿಸುವ ಪದ್ಧತಿ :

೧. ಒಂದು ಲೋಟದಷ್ಟು ಶರಬತ್ತು ತಯಾರಿಸಲು ೧ ಲೋಟ ನೀರು, ನೀರಿನ ಕಾಲು ಭಾಗದಷ್ಟು ಹುಣಸೆಯನ್ನು ತೆಗೆದುಕೊಳ್ಳಬೇಕು.

೨. ರಾತ್ರಿಯಿಡಿ ಹುಣಸೆಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಹುಣಸೆಯನ್ನು ಗಿವುಚಿ ಆ ನೀರನ್ನು ಸೋಸಬೇಕು.

೩. ಅದರಲ್ಲಿ ರುಚಿಗೆ ತಕ್ಕಷ್ಟು ಕಲ್ಲುಸಕ್ಕರೆ, ಕಪ್ಪು ಉಪ್ಪು, ಚಿಟಿಕೆಯಷ್ಟು ಕರಿಮೆಣಸಿನ ಪುಡಿಯನ್ನು ಹಾಕಬೇಕು ಮತ್ತು ಕಲ್ಲುಸಕ್ಕರೆ ಕರಗುವವರೆಗೆ ಚಮಚದಿಂದ ಕಲುಕಬೇಕು.

೪. ಇಲ್ಲಿ ಗಮನದಲ್ಲಿಡಬೇಕಾದ ವಿಷಯವೆಂದರೆ ನಾವು ಹುಣಸೆಯ ಶರಬತ್ತು ಮಾಡಿದ ನಂತರ ಅದರ ಗುಣಧರ್ಮ ಬದಲಾಗುತ್ತದೆ. ಕೇವಲ ಹುಣಸೆಯನ್ನು ತಿಂದರೆ ಪಿತ್ತ ಹೆಚ್ಚಾಗುತ್ತದೆ; ಆದರೆ ಹುಣಸೆಯ ಶರಬತ್ತನ್ನು ಸೇವಿಸಿದರೆ ಪಿತ್ತದಿಂದ ಗಂಟಲುರಿ ಅಥವಾ ಹೊಟ್ಟೆಯುರಿ ಕಡಿಮೆಯಾಗುತ್ತದೆ.

ಕೋಕಮ್‌

ಅ. ಕೋಕಮ್‌ (ಪುನರ್ಪುಳಿ, ಮುರುಗಲ ಹಣ್ಣು ಎಂದೂ ಕರೆಯುತ್ತಾರೆ) ಇದರ ಕಾಯಿ ಮತ್ತು ಹಣ್ಣಿನ ಗುಣಧರ್ಮಗಳು ಬೇರೆ ಬೇರೆ ಆಗಿರುತ್ತವೆ. ಹಣ್ಣು ಪಿತ್ತಶಾಮಕವಾಗಿದೆ. ಕೊಕಮ್‌ ಶರಬತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ. ಬಹಳಷ್ಟು ಪಿತ್ತದಿಂದ ಶರೀರ ಉರಿಯುತ್ತಿದ್ದರೆ ಕೊಕಮ್‌ ಶರಬತ್ತನ್ನು ಕುಡಿಯಬೇಕು.

ಆ. ಪಿತ್ತದಿಂದ ಚರ್ಮದ ಮೇಲೆ ಕೆಂಪು ಕಲೆಗಳು ಮತ್ತು ಬೊಕ್ಕೆಗಳೆದ್ದರೆ, ಅದರ ಮೇಲೆ ಕೋಕಮ್‌ ನೀರು ಅಥವಾ ಕೋಕಮ್‌ ರಸವನ್ನು ಹಚ್ಚಬೇಕು.

ಇ. ಕೋಕಮ್‌ನ ಬೀಜಗಳಿಂದ ಎಣ್ಣೆಯನ್ನು ತೆಗೆಯಬಹುದು. ಈ ಎಣ್ಣೆಯು ಚರ್ಮದ ರೋಗಗಳು, ಒಣ ಚರ್ಮ, ಒಣ ತುಟಿಗಳು, ಬಿರುಕು ಬಿಟ್ಟ ಪಾದಗಳಿಗೆ ಉಪಯುಕ್ತವಾಗಿದೆ.

ಈ. ಆಮಶಂಕೆಗೆ, ಒಂದು ಚಮಚದಷ್ಟು ಕೋಕಮ್‌ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಸಕ್ಕರೆ ಪುಡಿಯನ್ನು ಹಾಕಿ ಸೇವಿಸಬೇಕು. ಆಮ ಬೀಳುವುದು ಕಡಿಮೆಯಾಗುತ್ತದೆ.

ಖರ್ಜೂರ

ಅ. ರುಚಿಯಲ್ಲಿ ಸಿಹಿ ಮತ್ತು ಶೀತ ಗುಣಧರ್ಮದ ಖರ್ಜೂರ ಉಷ್ಣತೆ ಮತ್ತು ಪಿತ್ತವನ್ನು ಕಡಿಮೆ ಮಾಡುತ್ತದೆ.

ಆ. ಬಹಳ ಭೇದಿ, ವಾಂತಿಯಾದ ನಂತರ ಶರೀರದಲ್ಲಿ ನೀರು ಕಡಿಮೆಯಾಗುತ್ತದೆ (ಡಿಹೈಡ್ರೇಶನ್‌ ಆಗುತ್ತದೆ). ಇದರಿಂದ ಆಯಾಸ, ತಲೆ ತಿರುಗುವುದು, ಕಣ್ಣಗಳೆದುರು ಕತ್ತಲು ಬರುವುದು ಸಾಮಾನ್ಯ. ಇಂತಹ ಸಮಯದಲ್ಲಿ ತಕ್ಷಣ ಉತ್ಸಾಹ ಬರಲು ಖರ್ಜೂರವನ್ನು ನೀರಿನಲ್ಲಿ ಸ್ವಲ್ಪ ಸಮಯ ನೆನೆಸಿ ಅದನ್ನು ಸ್ವಲ್ಪ ಕಿವುಚಬೇಕು. ಆ ನೀರನ್ನು ಕುಡಿದರೆ ತಕ್ಷಣ ಉತ್ಸಾಹ ಬರುತ್ತದೆ.

ಇ. ಶರೀರದಲ್ಲಿ ಕಬ್ಬಿಣದ ಅಂಶ ಕಡಿಮೆ ಇದ್ದರೆ ಆಹಾರದಲ್ಲಿ ಖರ್ಜೂರವನ್ನು ಅವಶ್ಯ ಸೇವಿಸಬೇಕು.

ಇಲ್ಲಿ ಅಡುಗೆ ಮನೆಯಲ ವಿವಿಧ ಘಟಕಗಳ ಗುಣಧರ್ಮ ಮತ್ತು ಔಷಧೀಯ ಉಪಯೋಗಗಳ ಬಗ್ಗೆ ತಿಳಿದುಕೊಂಡೆವು. ಇದರಿಂದ ನಮಗೆ ಪ್ರಾಥಮಿಕ ಚಿಕಿತ್ಸೆಗಾಗಿ ಹಾಗೂ ನಮ್ಮ ಪ್ರಕೃತಿಗನುಸಾರ, ನಮಗಾಗುವ ತೊಂದರೆಗಳಿಗನುಸಾರ ನಾವು ಯಾವ ಪದಾರ್ಥಗಳನ್ನು ಸೇವಿಸಬೇಕು ಮತ್ತು ಯಾವ ಪದಾರ್ಥಗಳನ್ನು ಸೇವಿಸಬಾರದು ಎಂಬುದೂ ಗಮನಕ್ಕೆ ಬರುತ್ತದೆ. ನಮ್ಮ ಅಡುಗೆಯಲ್ಲಿ ಬಹುತೇಕ ಉಷ್ಣ ಪದಾರ್ಥಗಳಿರುತ್ತವೆ. ಆದುದರಿಂದ ನಾವು ತಿನ್ನುವ ಅಹಾರ  ಜೀರ್ಣವಾಗಲು ನಮಗೆ ಈ ಪದಾರ್ಥಗಳು ಸಹಾಯ ಮಾಡುತ್ತಿರುತ್ತವೆ; ಆದರೆ ಆ ಪದಾರ್ಥಗಳ ಯೋಗ್ಯ ಪ್ರಮಾಣ ಇರುವುದು ಬಹಳ ಮಹತ್ವದ್ದಾಗಿದೆ.

– ವೈದ್ಯೆ (ಸೌ.) ಮುಕ್ತಾ ಲೊಟಲೀಕರ, ಪೂನಾ. (೨೦೨೩)

1 thought on “ಮಸಾಲೆ ಡಬ್ಬಿಯಲ್ಲ, ಔಷಧಗಳ ಗಣಿ !”

Leave a Comment