ಶರಣಾಗತಭಾವವು ಸಾಧನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ. ಒಂದು ರೀತಿಯಲ್ಲಿ ಬಹಳ ಕಠಿಣ, ಆದರೆ ಕೃತಿಯ ಸ್ತರದಲ್ಲಿ ಅತ್ಯಂತ ಸುಲಭವಾದುದಾಗಿದೆ !
ಸಾಧನೆಯಲ್ಲಿ ಪ್ರಗತಿಯಾಗಲು ಶರಣಾಗತಭಾವಕ್ಕೆ ಅಸಾಧಾರಣ ಮಹತ್ವವಿದೆ, ಶರಣಾಗತಿಗೆ ಅತ್ಯುನ್ನತ ಶ್ರದ್ಧಾಸ್ಥಾನವೆಂದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ – (ಪೂ.) ಶಿವಾಜಿ ವಟಕರ
ನಾನು ಈ ವಿಷಯದ ಬಗ್ಗೆ ಏನು ಓದಿದ್ದೇನೆಯೋ, ಏನು ಕೇಳಿದ್ದೇನೆಯೋ ಮತ್ತು ಏನು ಅನುಭವಿಸಿದ್ದೇನೆಯೋ, ಅದನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಶರಣಾಗಿ ಸಮರ್ಪಿಸುತ್ತಿದ್ದೇನೆ. ನನಗೆ ಅಸಾಧ್ಯವಾದುದು ಏನೂ ಇಲ್ಲ? ಕಾಲಿನಿಂದ ಒದ್ದು ನೀರು ತೆಗೆಯುವೆನು, ಎಂಬ ಮಾನಸಿಕತೆಯಲ್ಲಿ ನಾನು ಸಿಲುಕಿದ್ದೆನು. ವ್ಯಾವಹಾರಿಕ ಅನುಭವದಿಂದ, ಸಾಮರ್ಥ್ಯದಿಂದ, ತನ್ನನ್ನು ಶ್ರೇಷ್ಠ ಎಂದು ತಿಳಿಯುವುದು, ನನಗೆ ಎಲ್ಲವೂ ತಿಳಿದಿದೆ ಎಂಬ ವಿಚಾರದಿಂದಾಗಿ ನನ್ನಲ್ಲಿ ಬಹಳ ಅಹಂ ಇತ್ತು. 1989 ರಲ್ಲಿ ಪರಾತ್ಪರ ಗುರು ಡಾ. ಆಠವಲೆಯವರ ಸಂಪರ್ಕಕ್ಕೆ ಬಂದ ಬಳಿಕ ನನಗೆ ಇದರ ಅರಿವಾಯಿತು. ಅವರ ಕೃಪೆಯಿಂದ ಅಧ್ಯಾತ್ಮದ ಮಾರ್ಗವನ್ನು ಸೇರಿದ ಬಳಿಕ ಶರಣಾಗತಿಯ ಮಹತ್ವ ತಿಳಿಯಿತು. ನನಗಿಂತ ಶ್ರೇಷ್ಠರಾಗಿರುವವರು ಅಗಣಿತ ಜನರಿದ್ದಾರೆ. ಈಶ್ವರ ಮತ್ತು ಶ್ರೀಗುರುಗಳು ಸರ್ವಶ್ರೇಷ್ಠರಾಗಿದ್ದು, ಅವರಿಗೆ ಶರಣಾಗದೇ ಪರಮಾರ್ಥ ಸಾಧ್ಯವಿಲ್ಲ ಎಂದು 34 ವರ್ಷಗಳ ಸಾಧನೆಯ ಪ್ರವಾಸದಲ್ಲಿ ಕಲಿಯಲು ಸಿಕ್ಕಿತು.
ಅಧ್ಯಾತ್ಮದಿಂದ ಅರ್ಥವಾದ ಶರಣಾಗತಿಯ ಮಹತ್ವ
ಅ. ಸಾಧನೆಯಲ್ಲಿ ಪ್ರಗತಿಯಾಗಲು ಶರಣಾಗತಿಯೇ ಮಹತ್ವದ ಸಾಧನ
ಶಾಲಾ ಜೀವನದಲ್ಲಿ ನಾನು ಶರಣಾಗುವುದು ಅಥವಾ ‘ಶರಣಾಗತಿ’ ಎಂಬ ಶಬ್ದವನ್ನು ಮೊದಲ ಬಾರಿಗೆ ಕೇಳಿದೆನು. ನಮ್ಮ ಜನ್ಮವು ಪ್ರಾರಬ್ಧಭೋಗವನ್ನು ಭೋಗಿಸಿ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದಕ್ಕಾಗಿ ಇದೆ, ಎಂಬುದು ಅಧ್ಯಾತ್ಮದಲ್ಲಿ ಕಲಿಯಲು ಸಿಕ್ಕಿತು. ಸಾಧನೆಯಲ್ಲಿ ಪ್ರಗತಿಗಾಗಿ ಶರಣಾಗತಿಯು ಮಹತ್ವದ ಸಾಧನವಾಗಿದೆ. ಈಶ್ವರನಿಗೆ, ಗುರುಗಳಿಗೆ ಅಥವಾ ಸಾಧನೆ ಆಗಲು ಯಾರಿಗಾದರೂ ಶರಣಾಗಬೇಕಿರುತ್ತದೆ. ಶರಣಾಗತಭಾವದಲ್ಲಿರುವ ಸಾಧಕನು ಗುರುಕೃಪೆಯಿಂದ ಅಹಂನ ಮೇಲೆ ಜಯ ಸಾಧಿಸಿ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಕೊಳ್ಳಬಲ್ಲನು.
ಆ. ಸಂತರು ಶರಣಾಗತಿಯ ಮಹತ್ವವನ್ನು ಹೇಳಿ ಸಾಧಕರಿಗೆ ಉನ್ನತಿಯ ಮಾರ್ಗವನ್ನು ತೋರಿಸುವುದು
ಶ್ರೀ ಜ್ಞಾನೇಶ್ವರರು, ಸಂತ ಏಕನಾಥ ಮಹಾರಾಜರು, ಸಂತ ತುಕಾರಾಮ ಮಹಾರಾಜರು, ಸಮರ್ಥ ರಾಮದಾಸಸ್ವಾಮಿಗಳು, ಗುರು ನಾನಕರು, ಪ.ಪೂ. ಭಕ್ತರಾಜ ಮಹಾರಾಜ ಮೊದಲಾದ ಮಹಾನ್ ಸಂತರು ಸ್ವಾನುಭವದಿಂದ (ಸ್ವಂತ ಅನುಭವದಿಂದ) ‘ಶರಣಾಗತಿಯ ಅನನ್ಯಸಾಧಾರಣ ಮಹತ್ವ ಮತ್ತು ಅದನ್ನು ಹೇಗೆ ಸಾಧಿಸಬೇಕು’ ಎಂಬುದರ ಬಗ್ಗೆ ಹೇಳಿದ್ದಾರೆ.
ಇ. ಶ್ರೀಕೃಷ್ಣನು ಅರ್ಜುನನಿಗೆ ಶರಣಾಗಲು ಉಪದೇಶಿಸುವುದು
ಶ್ರೀಕೃಷ್ಣನು ಭಗವದ್ಗೀತೆಯ ಮಾಧ್ಯಮದಿಂದ ಅರ್ಜುನನಿಗೆ ಜ್ಞಾನ, ಭಕ್ತಿ, ವೈರಾಗ್ಯ ಇತ್ಯಾದಿಗಳನ್ನು ಕಲಿಸಿದನು. ಈ ಎಲ್ಲ ಪ್ರಯತ್ನಗಳನ್ನು ಮಾಡುವುದಕ್ಕಿಂತ ಕೊನೆಯ ರಾಮಬಾಣ ಉಪಾಯವೆಂದು ಶ್ರೀಕೃಷ್ಣನು ಅರ್ಜುನನಿಗೆ ಶರಣಾಗಲು ಹೇಳಿದನು.
ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |
ಅಹಂ ತ್ವಾ ಸರ್ವಪಾಪೇಭ್ಯೊ ಮೋಕ್ಷಯಿಷ್ಯಾಮಿ ಮಾ ಶುಚಃ ||
– ಶ್ರೀಮದ್ಭಗವದ್ಗೀತೆ, ಅಧ್ಯಾಯ 18, ಶ್ಲೋಕ 66
ಅರ್ಥ : ಎಲ್ಲ ಧರ್ಮಗಳನ್ನು, ಎಲ್ಲ ಕರ್ತವ್ಯಕರ್ಮಗಳನ್ನು ನನಗೆ ಅರ್ಪಿಸಿ, ನೀನು ಕೇವಲ ಸರ್ವಶಕ್ತಿವಂತ, ಸರ್ವಾಧಾರನಾದ (ಎಲ್ಲರ ಆಧಾರನಾಗಿರುವ) ನನಗೆ, ಅಂದರೆ ಪರಮೇಶ್ವರನಿಗೆ ಶರಣಾಗು. ನಾನು ನಿನ್ನನ್ನು ಎಲ್ಲ ಪಾಪಗಳಿಂದ ದೂರ ಗೊಳಿಸುವೆನು. ನೀನು ಶೋಕಿಸಬೇಡ.
‘ಶರಣ’ ಶಬ್ದದ ಉತ್ಪತ್ತಿ
ಶರಣ ಶಬ್ದವು ಶೃ ಧಾತುವಿನಿಂದ ಉತ್ಪನ್ನವಾಗಿದೆ.
ಶೃಣಾತಿ ದುಃಖಮನೆನೆತಿ | (ಶಬ್ದಕಲ್ಪದ್ರುಮ), ಅಂದರೆ ಯಾವುದರಿಂದ ದುಃಖ ನಾಶವಾಗುತ್ತದೆಯೋ, ಅದು ಶರಣ.
ಶರಣಾಗತಿಯ ವ್ಯಾಖ್ಯೆ
ನಾನು ಎಂಬ ಭಾವನೆ ಪ್ರತಿಯೊಂದು ವಿಷಯದ ಕರ್ತೃತ್ವವನ್ನು ತನ್ನಲ್ಲಿ ಇಡಲು ಉದ್ಯುಕ್ತಗೊಳಿಸುತ್ತದೆ. ಉದಾಹರಣೆಗೆ, ‘ನಾನು ಇದನ್ನು ಮಾಡಿದೆ, ಇದು ನನ್ನಿಂದಾಯಿತು’ ಇತ್ಯಾದಿ. ಕರ್ತೃತ್ವವನ್ನು ಭಗವಂತನ ಚರಣಗಳಲ್ಲಿ ಸಮರ್ಪಿಸುವ ಪ್ರಕ್ರಿಯೆಗೆ ಶರಣಾಗತಿ ಎನ್ನುತ್ತಾರೆ.
ಶರಣಾಗತಿಯ ಹಿಂದಿರುವ ಕಾರಣಗಳು
ಅ. ಸಂಕಟಗಳು ದೂರವಾಗಬೇಕೆಂದು ಸಂತರು ಅಥವಾ ಗುರುಗಳಿಗೆ ಶರಣಾಗುವ ವಿಚಾರ ಬರುವುದು
ನನ್ನ ಸೌಭಾಗ್ಯದಿಂದ ನನ್ನಲ್ಲಿ ಸ್ವಲ್ಪಮಟ್ಟಿಗೆ ಒಳ್ಳೆಯ ಸಂಸ್ಕಾರಗಳಾಗಿರುವುದರಿಂದ ಸಜ್ಜನರು, ಶ್ರೇಷ್ಠ ವ್ಯಕ್ತಿಗಳು ಮತ್ತು ಸತ್ಪುರುಷರಿಗೆ ಶರಣಾಗಬೇಕೆಂಬ ಸಂಸ್ಕಾರಗಳು ಚಿಕ್ಕಂದಿನಿಂದಲೇ ನನ್ನ ಮೇಲಾಗಿದ್ದವು. ವ್ಯಾವಹಾರಿಕ ಜೀವನದಲ್ಲಿ ವೈಫಲ್ಯ, ನಿಂದನೆ, ಹಣಕಾಸಿನ ಕೊರತೆ, ಕೌಟುಂಬಿಕ ಸಮಸ್ಯೆಗಳ ತೊಂದರೆಯಿಂದ ನಾನು ಕುಸಿದು ಹೋಗಿದ್ದೆ. ನನ್ನ ಮನಸ್ಸು ಸಹಾನುಭೂತಿಯನ್ನು ಹುಡುಕುತ್ತಿತ್ತು. ಸಂಕಟಗಳು ದೂರವಾಗಬೇಕು ಎನ್ನುವ ಪ್ರಾಮಾಣಿಕ ಅಪೇಕ್ಷೆಯಿಂದ ನಾನು ಸ್ನೇಹಿತರು, ಸಮಾಜದಲ್ಲಿನ ವ್ಯಕ್ತಿಗಳು, ಜ್ಯೋತಿಷಿ, ಸಂತರು, ಹಾಗೆಯೇ ಗುರು ಹೀಗೆ ಯಾರಿಗಾದರೂ ಶರಣಾಗಬೇಕೆಂಬ ವಿಚಾರದಲ್ಲಿದ್ದೆ. ನನಗೆ ಸಂಕಟಗಳು ಎದುರಾಗುವ ಪ್ರಮಾಣ ಅಧಿಕವಾಗಿದ್ದರಿಂದ ಶರಣಾಗಲೇಬೇಕು ಎಂದು ನನಗೆ ಅರಿವಾಗತೊಡಗಿತು.
ಆ. ಗುರು ಅಥವಾ ಈಶ್ವರನಿಗೆ ಶರಣಾಗದ ಕಾರಣ ಅನೇಕರ ಸಾಧನೆಯಲ್ಲಿ ಕುಸಿತವಾದುದನ್ನು ನೋಡಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರಿಗೆ ಶರಣಾಗುವುದು
ಸಾಧನೆಯ ಪ್ರವಾಸ ಕಠಿಣವಾಗಿದ್ದರಿಂದ, ಸ್ವತಃ ತಮ್ಮನ್ನು ಉನ್ನತರೆಂದು ತಿಳಿದುಕೊಂಡಿದ್ದ ಒಳ್ಳೊಳ್ಳೆಯ ಸಾಧಕರು ಮತ್ತು ಸಂತರು ತಮ್ಮ ಗುರುಗಳಿಗೆ ಅಥವಾ ಈಶ್ವರನಿಗೆ ಶರಣಾಗದ ಕಾರಣ ಸಾಧನೆಯಲ್ಲಿ ಕುಸಿತವಾದುದನ್ನು ನಾವು ನೋಡುತ್ತೇವೆ. ವ್ಯವಹಾರ ಮತ್ತು ಸಾಧನೆಯಲ್ಲಿನ ಏಳು ಬೀಳುಗಳನ್ನು ನೋಡಿದ ಬಳಿಕ ನಾನು ಪೂರ್ಣವಿಚಾರ ಮಾಡಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಶರಣಾಗುವ ಮಾರ್ಗವನ್ನು ಆರಿಸಿದೆನು.
ಶರಣಾಗತಿ ಸ್ಥಿತಿ ಹೇಗೆ ಉಂಟಾಗುತ್ತದೆ ?
ಅ. ಗುರುಗಳ ಮೇಲೆ ಅಪಾರ ಶ್ರದ್ಧೆ ಇರಬೇಕು
ಶರಣಾಗತಿ ಕೇವಲ ಒಂದು ಕ್ರಿಯೆಯಲ್ಲ, ಅದು ಉಚ್ಚ ಕೋಟಿಯ ಸಾಧನೆಯಾಗಿದೆ. ಈ ಸ್ಥಿತಿ ಉಂಟಾಗಬೇಕೆಂಬ ಬಗ್ಗೆ ಒಂದೇ ಧ್ಯಾಸವಿರಬೇಕು. ‘ನಾನು ಗುರುಗಳಿಗೆ ಶರಣಾಗಿ ಅವರ ಚರಣಗಳಲ್ಲಿ ತನು, ಮನ ಮತ್ತು ಧನ ಹೀಗೆ ಎಲ್ಲವನ್ನೂ ಅರ್ಪಿಸಿದ್ದೇನೆ. ಹಾಗಾಗಿ ಅವರೇ ನನ್ನನ್ನು ಎಲ್ಲ ರೀತಿಯ ಸಂಕಟಗಳಿಂದ ಪಾರು ಮಾಡುವರು. ನಾನು ಏನೂ ಚಿಂತೆ ಮಾಡಬೇಕಿಲ್ಲ’. ‘ನಾನು ಶರಣಾಗಿದ್ದೇನೆ’ ಎಂಬುದರ ಅಹಂನ್ನು ಕೂಡ ಇಟ್ಟುಕೊಳ್ಳಬಾರದು.
ಆ. ಅಹಂ-ನಿರ್ಮೂಲನೆ ಪ್ರಕ್ರಿಯೆಯನ್ನು ಮನಃಪೂರ್ವಕ ಮಾಡಿದರೆ ಶರಣಾಗತ ಸ್ಥಿತಿ ಮೂಡಲು ಸಾಧ್ಯವಾಗುತ್ತದೆ
ಪರಾತ್ಪರ ಗುರು ಡಾಕ್ಟರರು ಗುರುಕೃಪಾಯೋಗ ಸಾಧನೆಯನ್ನು ಹೇಳಿದ್ದಾರೆ, ಶರಣಾಗತ ಸ್ಥಿತಿಗಾಗಿ ಗುರುಕೃಪಾಯೋಗಾನುಸಾರ ಹೇಳಿರುವ ಅಹಂ-ನಿರ್ಮೂಲನೆಯ ಪ್ರಕ್ರಿಯೆಯು ಮಹತ್ವದ್ದಾಗಿದೆ. ಅಷ್ಟಾಂಗ ಸಾಧನೆಯಿಂದ ಶರಣಾಗತ ಸ್ಥಿತಿ ಮೂಡಲು ವೇಗ ಸಿಗುತ್ತದೆ. ‘ಗುರುಚರಣಗಳಿಗೆ ಸಮರ್ಪಿತರಾಗುವ ಭಾವನೆಯನ್ನು ಮೈಗೂಡಿಸಿಕೊಂಡರೆ ಶರಣಾಗತಿಯಾಗಲು ಪ್ರಾರಂಭವಾಗುತ್ತದೆ. – (ಪೂ.) ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ (೭.೨.೨೦೨೩)
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನಿರ್ಮಿಸಿದ ಶರಣಾಗತಭಾವದಿಂದಲೇ ಜೀವನದಲ್ಲಿ ಸಕಾರಾತ್ಮಕತೆ, ಸಹಜತೆ ಮತ್ತು ಆನಂದ ಉತ್ಪನ್ನವಾಗತೊಡಗುವುದು
ಪರಾತ್ಪರ ಗುರು ಡಾ. ಆಠವಲೆಯವರು ಶರಣಾಗತಿಯ ವಿಷಯದಲ್ಲಿ ಕೇವಲ ತಾತ್ತ್ವಿಕ ಮಾಹಿತಿಯನ್ನು ಮಾತ್ರ ಹೇಳಿಲ್ಲ, ಬದಲಾಗಿ ಅವರೇ ನನ್ನಲ್ಲಿ ಶರಣಾಗತಭಾವವನ್ನು ಮೂಡಿಸುತ್ತಿದ್ದಾರೆ. ಯಾವಾಗ ನನ್ನ ಮನಸ್ಸಿನಲ್ಲಿ ನಿರಾಶೆಯ ಕಾರ್ಮೋಡಗಳು ಆವರಿಸುತ್ತವೆಯೋ, ‘ನಾನು ಸೋತು ಹೋದೆನೇನು’ ಎಂದು ಅನಿಸುತ್ತದೆಯೋ ಅಥವಾ ‘ನಾನು ಒಬ್ಬಂಟಿಯಾಗಿದ್ದೇನೆ’ ಎನ್ನುವ ಅರಿವು ಮನಸ್ಸನ್ನು ಕೊರೆಯತೊಡಗುತ್ತದೆಯೋ, ಆಗ ಪರಾತ್ಪರ ಗುರುದೇವರು ನನಗೆ ಜೀವಮಾನವಿಡೀ ತಿಳಿದೋ-ತಿಳಿಯದೆಯೋ ನೀಡಿರುವ ಅಸಂಖ್ಯಾತ ಆಶೀರ್ವಾದಗಳು, ಅವರ ಬೋಧನೆ ಮತ್ತು ನೀಡಿದ ಅವಕಾಶಗಳ ಸ್ಮರಣೆಯಾಗುತ್ತದೆ. ಅವರು ನನ್ನ ಜೋಳಿಗೆಯಲ್ಲಿ ಬಹಳಷ್ಟು ಚೈತನ್ಯ ಸೇರಿ ಎಲ್ಲವನ್ನೂ ಹಾಕಿದ್ದಾರೆ. ಅದು ಎಂದಿಗೂ ತೀರುವುದಿಲ್ಲ. ಈ ಕೃತಜ್ಞತೆಯ ಅರಿವಿನಿಂದ ನನಗೆ ಅವರ ಶ್ರೀ ಚರಣಗಳಿಗೆ ಶರಣಾಗಲು ಸಾಧ್ಯವಾಗುತ್ತದೆ. ಅವರೇ ಮೂಡಿಸಿದ ಶರಣಾಗತ ಭಾವದಿಂದಲೇ ಸಕಾರಾತ್ಮಕತೆ, ಸಹಜತೆ ಮತ್ತು ಆನಂದ ಉತ್ಪನ್ನವಾಗಲು ಪ್ರಾರಂಭವಾಗಿದೆ.
ಶರಣಾಗತಭಾವ ಬರಲು ಪ್ರಕ್ರಿಯೆಯನ್ನು ನಡೆಸುವಾಗ ಕಲಿಯಲು ಸಿಕ್ಕಿದ ಅಂಶಗಳು
1. ಶರಣಾಗಲು ಸಾಧಕನಿಗೆ ವಯಸ್ಸು ಅಥವಾ ಪರಿಸ್ಥಿತಿಯ ಮಿತಿ ಇರುವುದಿಲ್ಲ.
2. ಜ್ಞಾನ, ಧರ್ಮ, ಕರ್ಮ ಅಥವಾ ಸಾಧನೆ ಅಲ್ಪವಿದ್ದರೂ ನಡೆಯುತ್ತದೆ; ಆದರೆ ಶ್ರದ್ಧೆಯಿದ್ದರೆ, ಭಗವಂತ ಶರಣಾಗತಿಯ ದ್ವಾರವನ್ನು ತೆರೆಯುತ್ತಾನೆ.
3. ‘ನಾನು ಮತ್ತು ನನ್ನದು’ ಎಂಬ ಭಾವನೆಯನ್ನು ತ್ಯಜಿಸಿದ ಸಾಧಕನಿಗೆ, ಶರಣಾಗತಿಯ ಮೊದಲ ಮೆಟ್ಟಿಲು ಪ್ರಾಪ್ತವಾಗುತ್ತದೆ.
4. ಸಾಧಕನು ಅಂತರ್ಮುಖನಾಗಿದ್ದಷ್ಟು ಬೇಗನೇ ಶರಣಾಗತಿಗೆ ಅರ್ಹನಾಗುತ್ತಾನೆ.
5. ಸಾಧಕನ ಅಹಂಕಾರ ಎಷ್ಟು ಸಲ ಸೋಲುತ್ತದೆಯೋ, ಅಷ್ಟು ಸಲ ಅವನು ಗುರುಚರಣಗಳಿಗೆ ಇನ್ನಷ್ಟು ಸಮೀಪವಾಗುತ್ತಾನೆ. ಈಶ್ವರನಿಗೆ ಅಹಂಕಾರವನ್ನು ದಾನ ಮಾಡಿ ಶರಣಾಗತಿಯನ್ನು ಸ್ವೀಕರಿಸಿದರೆ ಈಶ್ವರನ ವೈಶಾಲ್ಯ ಅನುಭವಕ್ಕೆ ಬರುತ್ತದೆ.
6. ಶರಣಾಗತ ಸಾಧಕನ ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆಯ ಜವಾಬ್ದಾರಿಯನ್ನು ಭಗವಂತನೇ (ಗುರು) ಸ್ವೀಕರಿಸುತ್ತಾನೆ. ಶರಣಾಗತಿಯು ಚಿತ್ತವನ್ನು ಶುದ್ಧಗೊಳಿಸುವ ಮತ್ತು ವಿಶಾಲಗೊಳಿಸುವ ಕೃತಿಯಾಗಿದೆ.
7. ಶರಣಾಗತ ಸಾಧಕನಿಗೆ ಜೀವನದಲ್ಲಿ ಬೇಸರ ಬರುವುದಿಲ್ಲ ಅಥವಾ ಮರಣದ ಭಯವೂ ಆಗುವುದಿಲ್ಲ.
8. ಶರಣಾಗತಿಯೆಂದರೆ ಭಗವಂತನಲ್ಲಿ ಅಥವಾ ಗುರುಚರಣಗಳಲ್ಲಿ ನಮ್ಮ ಜೀವವನ್ನು ಸವೆಸುವುದು.
ಕೃತಜ್ಞತೆ
ಮೇಲಿನ ವಿವೇಚನೆಯೆಂದರೆ ನಾನು ಅನುಭವಿಸಿದ ಅನೇಕ ಪ್ರಸಂಗಗಳಿಂದ ಕಲಿಯಲು ಸಿಕ್ಕಿರುವುದರ ಸ್ವಲ್ಪ ಸಾರಾಂಶವಷ್ಟೇ ಆಗಿದೆ. ಸದ್ಯದ ಕಾಲದಲ್ಲಿ ಸಾಧಕರಿಗೆ ಶರಣಾಗತಿ ಮೂಡುವ ಸರ್ವೋಚ್ಚ ಶ್ರದ್ಧಾಸ್ಥಾನವೆಂದರೆ ಪರಾತ್ಪರ ಗುರು ಡಾ. ಜಯಂತ ಆಠವಲೆ ಇವರೇ ಆಗಿದ್ದಾರೆ ಎಂದು ನನಗೆ ಕಳಕಳಿಯಿಂದ ಹೇಳಬೇಕೆಂದು ಅನಿಸುತ್ತಿದೆ. ಅವರ ಚರಣಗಳಿಗೆ ಶರಣಾಗಿ ಕೋಟಿ ಕೋಟಿ ಕೃತಜ್ಞತೆಗಳನ್ನು ವ್ಯಕ್ತಪಡಿಸುತ್ತೇನೆ.
– (ಪೂ.) ಶಿವಾಜಿ ವಟಕರ, ಸನಾತನ ಆಶ್ರಮ, ದೇವದ, ಪನವೇಲ (೭.೨.೨೦೨೩)