ಹನುಮಾನ ಜಯಂತಿಯ ಪೂಜಾವಿಧಿ

Article also available in :

ಹನುಮಾನ ಜಯಂತಿಯ ದಿನ (ಚೈತ್ರ ಶುಕ್ಲ ಹುಣ್ಣಿಮೆಯಂದು) ಹನುಮಂತನ ದೇವಸ್ಥಾನದಲ್ಲಿ ಸೂರ್ಯೋದಯಕ್ಕೆ ಮೊದಲೇ ಕೀರ್ತನೆಯು (ಹರಿಕಥೆ) ಪ್ರಾರಂಭವಾಗುತ್ತದೆ. ಸೂರ್ಯೋದಯಕ್ಕೆ ಕೀರ್ತನೆ ಮುಕ್ತಾಯಗೊಳ್ಳುತ್ತದೆ ಮತ್ತು ಹನುಮಂತನ ಜನ್ಮವಾಗುತ್ತದೆ (ಜನ್ಮೋತ್ಸವವನ್ನು ಆಚರಿಸಲಾಗುತ್ತದೆ). ನಂತರ ಹನುಮಂತನ ಮೂರ್ತಿಯನ್ನು ಪೂಜಿಸುತ್ತಾರೆ ಮತ್ತು ಎಲ್ಲರಿಗೂ ಪ್ರಸಾದವನ್ನು ಕೊಡುತ್ತಾರೆ. ನಾವು ಮನೆಯಲ್ಲಿಯೇ ಹನುಮಂತನ ಪೂಜೆಯನ್ನು ಸರಳವಾಗಿ ಹೇಗೆ ಮಾಡಬಹುದು ಎಂದು ತಿಳಿದುಕೊಳ್ಳೋಣ…

1. ಹನುಮಂತನ ಜನನ ಸೂರ್ಯೋದಯದ ಸಮಯದಲ್ಲಿ ಆಚರಿಸಲಾಗುತ್ತದೆ.

2. ಹನುಮಂತನ ವಿಗ್ರಹ ಅಥವಾ ಪ್ರತಿಮೆಯ ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯನ್ನು ಮಾಡಬೇಕು.

3. ಸೂರ್ಯೋದಯದ ಸಮಯದಲ್ಲಿ ಶಂಖನಾದ ಮಾಡಿ ಪೂಜೆಯನ್ನು ಪ್ರಾರಂಭಿಸಬೇಕು.

4. ಶುಂಠಿ ಮತ್ತು ಸಕ್ಕರೆಯ ಮಿಶ್ರಣ ನೈವೇದ್ಯವೆಂದು ಇಡಬಹುದು. ಅದರ ನಂತರ ಇದನ್ನು ಎಲ್ಲರೂ ಪ್ರಸಾದ ಎಂದು ಸ್ವೀಕರಿಸಬಹುದು.

5. ಹನುಮಂತನಿಗೆ ಎಕ್ಕದ ಎಲೆ ಹಾಗೂ ಹೂಗಳ ಹಾರವನ್ನು ಅರ್ಪಿಸಬೇಕು.

6. ಪೂಜೆಯ ನಂತರ ಶ್ರೀ ರಾಮನ ಹಾಗೂ ಹನುಮಂತನ ಆರತಿಯನ್ನು ಮಾಡಬೇಕು.

ಪೂಜೆಯ ತಯಾರಿ

1. ಸಾಮಾಗ್ರಿಗಳು

ಅಚಮನಕ್ಕೆ (ಹರಿವಾಣ, ಪಂಚಪಾತ್ರೆ, ಕಲಶ, ಉದ್ಧರಣೆ), ನೀಲಾಂಜನ, ಪೂಜೆಗೆ ತಟ್ಟೆ, ಕಾಲುದೀಪ, ದೀಪದಡಿಯಲ್ಲಿಡಲು ತಟ್ಟೆ, ಘಂಟೆ, ಊದುಬತ್ತಿ

2. ಇತರ ವಸ್ತುಗಳು

ಅಕ್ಷತೆ, ಅರಿಶಿನ-ಕುಂಕುಮ, ಅಡಿಕೆ, ವೀಳ್ಯದೆಲೆಗಳು – 4, ನಾಣ್ಯಗಳು, ಬಿಲ್ವಪತ್ರೆ, ಊದುಬತ್ತಿ ಪೊಟ್ಟಣ, ಹೂಬತ್ತಿ, ಹತ್ತಿಯ ಬತ್ತಿ, ಬೆಂಕಿಪೊಟ್ಟಣ, ಗಂಧ, ತೆಂಗಿನಕಾಯಿ 1, ಎಕ್ಕದ ಎಲೆ ಮತ್ತು ಹೂಗಳ ಹಾರ, ದವನ, ಮಣೆ, ಹಣ್ಣುಗಳು, ಶುಂಠಿಯ ನೈವೇದ್ಯ, ರಂಗೋಲಿ

3. ಪೂಜಕನ ತಯಾರಿ

ಪೂಜಕನ ಮಡಿವಸ್ತ್ರಗಳನ್ನು ಧರಿಸಬೇಕು. ಕೈಗಳನ್ನು ಒರೆಸಿಕೊಳ್ಳಲು ಒಂದು ವಸ್ತ್ರವನ್ನಿಟ್ಟುಕೊಳ್ಳಬಹುದು.

ಪೂಜೆಯ ಸ್ವರೂಪ

ಅಚಮಾನ

ಪೂಜಕನು ದೇವರಿಗೆ ನಮಸ್ಕರಿಸಿ ಮತ್ತು ಪ್ರಾರ್ಥನೆ ಸಲ್ಲಿಸಿ ಪೂಜೆಯನ್ನು ಪ್ರಾರಂಭಿಸಬೇಕು.

ಬಲಗೈಯಿಂದ ಆಚಮನದ ಮುದ್ರೆ ಮಾಡಬೇಕು. ನಂತರ ಎಡಗೈಯಿಂದ ಉದ್ಧರಣೆಯಿಂದ ನೀರನ್ನು ಬಲಗೈಯ ಅಂಗೈಯಲ್ಲಿ (ಮುದ್ರೆಯ ಸ್ಥಿತಿಯಲ್ಲಿಯೇ) ತೆಗೆದುಕೊಳ್ಳಬೇಕು ಮತ್ತು ಶ್ರೀವಿಷ್ಣುವಿನ ಪ್ರತಿಯೊಂದು ಹೆಸರಿನ ಕೊನೆಗೆ ‘ನಮಃ’ ಎಂಬ ಶಬ್ದವನ್ನು ಉಚ್ಚರಿಸಿ ಆ ನೀರನ್ನು ಕುಡಿಯಬೇಕು

೧. ಶ್ರೀ ಕೇಶವಾಯ ನಮಃ | ೨. ಶ್ರೀ ನಾರಾಯಣಾಯ ನಮಃ | ೩. ಶ್ರೀ ಮಾಧವಾಯ ನಮಃ |

ನಾಲ್ಕನೇ ಹೆಸರನ್ನು ಉಚ್ಚರಿಸುವಾಗ ‘ನಮಃ’ ಎಂಬ ಶಬ್ದದ ಸಮಯದಲ್ಲಿ ಬಲಗೈಯಿಂದ ಹರಿವಾಣದಲ್ಲಿ ನೀರನ್ನು ಬಿಡಬೇಕು.

೪. ಶ್ರೀ ಗೋವಿಂದಾಯ ನಮಃ |

ಪೂಜಕನು ಕೈಯನ್ನು ಒರೆಸಿಕೊಂಡು ನಮಸ್ಕಾರದ ಮುದ್ರೆ ಯಲ್ಲಿ ಎದೆಯ ಬಳಿ ಕೈಗಳನ್ನು ಜೋಡಿಸಬೇಕು ಮತ್ತು ಶರಣಾಗತ ಭಾವದಿಂದ ಮುಂದಿನ ಹೆಸರುಗಳನ್ನು ಉಚ್ಚರಿಸಬೇಕು.

೫. ಶ್ರೀ ವಿಷ್ಣವೇ ನಮಃ | ೬. ಶ್ರೀ ಮಧುಸೂದನಾಯ ನಮಃ | ೭. ಶ್ರೀ ತ್ರಿವಿಕ್ರಮಾಯ ನಮಃ | ೮. ಶ್ರೀ ವಾಮನಾಯ ನಮಃ | ೯. ಶ್ರೀ ಶ್ರೀಧರಾಯ ನಮಃ | ೧೦. ಶ್ರೀ ಹೃಷಿಕೇಶಾಯ ನಮಃ | ೧೧. ಶ್ರೀ ಪದ್ಮನಾಭಾಯ ನಮಃ | ೧೨. ಶ್ರೀ ದಾಮೋದರಾಯ ನಮಃ | ೧೩. ಶ್ರೀ ಸಂಕರ್ಷಣಾಯ ನಮಃ | ೧೪. ಶ್ರೀ ವಾಸುದೇವಾಯ ನಮಃ | ೧೫. ಶ್ರೀ ಪ್ರದ್ಯುಮ್ನಾಯ ನಮಃ | ೧೬. ಶ್ರೀ ಅನಿರುದ್ಧಾಯ ನಮಃ | ೧೭. ಶ್ರೀ ಪುರುಷೋತ್ತಮಾಯ ನಮಃ | ೧೮. ಶ್ರೀ ಅಧೋಕ್ಷಜಾಯ ನಮಃ | ೧೯. ಶ್ರೀ ನಾರಸಿಂಹಾಯ ನಮಃ | ೨೦. ಶ್ರೀ ಅಚ್ಯುತಾಯ ನಮಃ | ೨೧. ಶ್ರೀ ಜನಾರ್ದನಾಯ ನಮಃ | ೨೨. ಶ್ರೀ ಉಪೇಂದ್ರಾಯ ನಮಃ | ೨೩. ಶ್ರೀ ಹರಯೇ ನಮಃ | ೨೪. ಶ್ರೀ ಶ್ರೀಕೃಷ್ಣಾಯ ನಮಃ |

ಪುನಃ ಆಚಮನ ಮಾಡಿ ೨೪ ಹೆಸರುಗಳನ್ನು ಹೇಳಬೇಕು. ನಂತರ ಪಂಚಪಾತ್ರೆಯಲ್ಲಿನ ಎಲ್ಲ ನೀರನ್ನು ಹರಿವಾಣದಲ್ಲಿ ಸುರಿಯಬೇಕು ಮತ್ತು ಎರಡೂ ಕೈಗಳನ್ನು ಒರೆಸಿ ಎದೆಯ ಬಳಿ ನಮಸ್ಕಾರದ ಮುದ್ರೆಯಲ್ಲಿ ಕೈಜೋಡಿಸಬೇಕು ಮತ್ತು ಮುಂದೆ ನೀಡಿದಂತೆ ದೇವತೆಗಳನ್ನು ಸ್ಮರಿಸಬೇಕು.

ದೇವತಾಸ್ಮರಣ

ಶ್ರೀಮನ್ಮಹಾಗಣಾಧಿಪತಯೇ ನಮಃ | ಅರ್ಥ: ಗಣಗಳ ನಾಯಕನಾದ ಶ್ರೀ ಗಣಪತಿಗೆ ನಾನು ನಮಸ್ಕರಿಸುತ್ತೇನೆ.

ಇಷ್ಟದೇವತಾಭ್ಯೋ ನಮಃ | ಅರ್ಥ: ನನ್ನ ಆರಾಧ್ಯ ದೇವತೆಗೆ ನಾನು ನಮಸ್ಕರಿಸುತ್ತೇನೆ.

ಕುಲದೇವತಾಭ್ಯೋ ನಮಃ | ಅರ್ಥ: ಕುಲದೇವತೆಗೆ ನಾನು ನಮಸ್ಕರಿಸುತ್ತೇನೆ.

ಗ್ರಾಮದೇವತಾಭ್ಯೋ ನಮಃ | ಅರ್ಥ: ಗ್ರಾಮದೇವತೆಗೆ ನಾನು ನಮಸ್ಕರಿಸುತ್ತೇನೆ.

ಸ್ಥಾನದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ಸ್ಥಾನದೇವತೆಗೆ ನಾನು ನಮಸ್ಕರಿಸುತ್ತೇನೆ.

ವಾಸ್ತುದೇವತಾಭ್ಯೋ ನಮಃ | ಅರ್ಥ: (ಇಲ್ಲಿನ) ವಾಸ್ತುದೇವತೆಗೆ ನಾನು ನಮಸ್ಕರಿಸುತ್ತೇನೆ.

ಆದಿತ್ಯಾದಿನವಗ್ರಹದೇವತಾಭ್ಯೋ ನಮಃ | ಅರ್ಥ: ಸೂರ್ಯಾದಿ ಒಂಬತ್ತು ಗ್ರಹದೇವತೆಗಳಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ದೇವೇಭ್ಯೋ ನಮಃ | ಅರ್ಥ: ಎಲ್ಲ ದೇವರಿಗೆ ನಾನು ನಮಸ್ಕರಿಸುತ್ತೇನೆ.

ಸರ್ವೇಭ್ಯೋ ಬ್ರಾಹ್ಮಣೇಭ್ಯೋ ನಮೋ ನಮಃ | ಅರ್ಥ: ಎಲ್ಲ ಬ್ರಾಹ್ಮಣರಿಗೆ (ಬ್ರಹ್ಮನನ್ನು ತಿಳಿದಿರುವವರಿಗೆ) ನಾನು ನಮಸ್ಕರಿಸುತ್ತೇನೆ.

ಅವಿಘ್ನಮಸ್ತು | ಅರ್ಥ: ಎಲ್ಲ ಸಂಕಟಗಳ ನಾಶವಾಗಲಿ.

ದೇಶಕಾಲ

ಪೂಜಕನು ಎರಡೂ ಕಣ್ಣುಗಳಿಗೆ ನೀರು ಹಚ್ಚಿ ನಂತರ ಮುಂದೆ ನೀಡಿದಂತೆ ದೇಶಕಾಲ ಕಥನ ಮಾಡಬೇಕು.

ಶ್ರೀಮದ್ಭಗವತೋ ಮಹಾಪುರುಷಸ್ಯ ವಿಷ್ಣೋರಾಜ್ಞಯಾ ಪ್ರವರ್ತಮಾನಸ್ಯ ಅದ್ಯ ಬ್ರಹ್ಮಣೋ ದ್ವಿತೀಯೇ ಪರಾರ್ಧೇ ವಿಷ್ಣುಪದೇ ಶ್ರೀಶ್‍ವೇತ-ವಾರಾಹಕಲ್ಪೇ ವೈವಸ್ವತ ಮನ್ವಂತರೇ ಅಷ್ಟಾವಿಂಶತಿ-ತಮೇ ಯುಗೇ ಯುಗಚತುಷ್ಕೇ ಕಲಿಯುಗೇ ಪ್ರಥಮ ಚರಣೇ ಜಂಬುದ್ವೀಪೇ ಭರತವರ್ಷೇ ಭರತಖಂಡೇ ದಕ್ಷಿಣಾಪಥೇ ರಾಮಕ್ಷೇತ್ರೇ ಬೌದ್ಧಾವತಾರೇ ಆರ್ಯಾವರ್ತದೇಶೇ ಅಸ್ಮಿನ್ವರ್ತಮಾನೇ ವ್ಯಾವಹಾರಿಕೇ ಕ್ರೋಧೀ ನಾಮ ಸಂವತ್ಸರೇ, ಉತ್ತರಾಯಣೇ, ವಸಂತಋತೌ, ಚೈತ್ರಮಾಸೇ, ಶುಕ್ಲಪಕ್ಷೇ, ಪೌರ್ಣಿಮಾಯಾಂ ತಿಥೌ, ಮಂಗಲ (ಭೌಮ) ವಾಸರೇ, ಚಿತ್ರಾ ದಿವಸ ನಕ್ಷತ್ರೇ, ವಜ್ರ ಯೋಗೇೇ, ವಿಷ್ಟಿ ಕರಣೇ, ಕನ್ಯಾ ಸ್ಥಿತೇ ವರ್ತಮಾನೇ ಶ್ರೀಚಂದ್ರೇ, ಮೇಷ ಸ್ಥಿತೇ ವರ್ತಮಾನೇ ಶ್ರೀಸೂರ್ಯೇ, ಮೇಷ ಸ್ಥಿತೇ ವರ್ತಮಾನೇ ಶ್ರೀದೇವಗುರೌ, ಕುಂಭ ಸ್ಥಿತೇ ವರ್ತಮಾನೇ ಶ್ರೀಶನೈಶ್‍ಚರೇ ಶೇಷೇಷು ಸರ್ವಗ್ರಹೇಷು ಯಥಾಯಥಂ ರಾಶಿಸ್ಥಾನಾನಿ ಸ್ಥಿತೇಷು ಏವಂ ಗ್ರಹ ಗುಣವಿಶೇಷೇಣ ವಿಶಿಷ್ಟಾಯಾಂ ಶುಭಪುಣ್ಯತಿಥೌ…

ಯಾರಿಗೆ ಮೇಲಿನ ‘ದೇಶಕಾಲ’ ಹೇಳಲು ಸಾಧ್ಯವಿಲ್ಲವೋ, ಅವರು ಮುಂದಿನ ಶ್ಲೋಕವನ್ನು ಹೇಳಬೇಕು.

ತಿಥಿರ್ವಿಷ್ಣುಸ್ತಥಾ ವಾರೋ ನಕ್ಷತ್ರಂ ವಿಷ್ಣುರೇವ ಚ|
ಯೋಗಶ್ಚ ಕರಣಂ ಚೈವ ಸರ್ವಂ ವಿಷ್ಣುಮಯಂ ಜಗತ್||

ಅರ್ಥ : ತಿಥಿ, ವಾರ, ನಕ್ಷತ್ರ, ಯೋಗ, ಕರಣ ಇತ್ಯಾದಿಗಳನ್ನು ಉಚ್ಚರಿಸುವುದರಿಂದ ಸಿಗುವ ಎಲ್ಲ ಫಲವು ಶ್ರೀವಿಷ್ಣುವಿನ ಸ್ಮರಣೆಯಿಂದ ಪ್ರಾಪ್ತವಾಗುತ್ತದೆ; ಏಕೆಂದರೆ ಇಡೀ ಜಗತ್ತೇ ವಿಷ್ಣುಮಯವಾಗಿದೆ.

ಸಂಕಲ್ಪ

ಬಲಗೈಯಲ್ಲಿ ಅಕ್ಷತೆಯನ್ನು ತೆಗೆದುಕೊಂಡು ಸಂಕಲ್ಪವನ್ನು ಉಚ್ಚರಿಸಬೇಕು.

ಮಮ ಆತ್ಮನಃ ಶ್ರುತಿ-ಸ್ಮೃತಿ-ಪುರಾಣೋಕ್ತ-ಫಲ-ಪ್ರಾಪ್ತ್ಯರ್ಥಂ ಶ್ರೀ ಪರಮೇಶ್ವರಪ್ರೀತ್ಯರ್ಥಮ್ ಅದ್ಯ ದಿನೇ ಅಸ್ಮಾಕಂ ಸಕುಟುಂಬಾನಾಂ ಸಪರಿವಾರಾಣಾಂ ದ್ವಿಪದ-ಚತುಷ್ಪದ-ಸಹಿತಾನಾಂ ಕ್ಷೇಮ-ಸ್ಥೈರ್ಯ-ಆಯುಃ-ಆರೋಗ್ಯ-ಐಶ್ವರ್ಯ-ಅಭಿವೃದ್ಧಿ-ಪೂರ್ವಕಂ ಪ್ರಭು ಶ್ರೀಹನುಮದ್-ದೇವತಾ-ಅಖಂಡ-ಕೃಪಾಪ್ರಸಾದ-ಸಿದ್ಧ್ಯರ್ಥಂ ಗಂಧಾದಿಪಂಚೋಪಚಾರೈಃ ಪೂಜನಮ್ ಅಹಂ ಕರಿಷ್ಯೇ ।। ತತ್ರಾದೌ ನಿರ್ವಿಘ್ನತಾ ಸಿದ್ಧ್ಯರ್ಥಂ ಮಹಾಗಣಪತಿಸ್ಮರಣಂ ಕರಿಷ್ಯೇ ।। ಶರೀರಶುದ್ಧ್ಯರ್ಥಂ ದಶವಾರಂ ವಿಷ್ಣುಸ್ಮರಣಂ ಕರಿಷ್ಯೇ ।। ಕಲಶ-ಘಂಟಾ-ದೀಪ-ಪೂಜನಂ ಕರಿಷ್ಯೇ ।।

‘ಸಂಕಲ್ಪ’ದ ಕುರಿತಾದ ಸೂಚನೆ : ಪ್ರತಿಯೊಂದು ಸಲ ಎಡಗೈಯಿಂದ ಉದ್ಧರಣೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಬಲಗೈಯಿಂದ ಕೆಳಗೆ ಬಿಡುವಾಗ ‘ಕರಿಷ್ಯೇ’ ಎಂದು ಹೇಳಬೇಕು.

ಶ್ರೀ ಗಣೇಶ ಸ್ಮರಣೆ

ವಕ್ರತುಣ್ಡ ಮಹಾಕಾಯ ಕೋಟಿಸೂರ್ಯಸಮಪ್ರಭ ।

ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ।।

ಶ್ರೀ ಗಣೇಶಾಯ ನಮ: ಚಿಂತಯಾಮಿ ।

ಶ್ರೀವಿಷ್ಣು ಸ್ಮರಣೆ

‘ವಿಷ್ಣವೇ ನಮೋ’ ಎಂದು 9 ಬಾರಿ ಹೇಳಿ ಹತ್ತನೇ ಬಾರಿಗೆ ‘ವಿಷ್ಣವೇ ನಮಃ’ ಎಂದು ಹೇಳಿ.

ಕಲಶ ಪೂಜೆ

ಕಲಶದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ।।

ಕಲಶದಲ್ಲಿ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.

ಘಂಟೆಯ ಪೂಜೆ

ಘಂಟಿಕಾಯೈ ನಮಃ | ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ।

ಘಂಟೆಗೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಒಟ್ಟಿಗೆ ಅರ್ಪಿಸಬೇಕು.

ದೀಪ ಪೂಜೆ

ದೀಪದೇವತಾಭ್ಯೋ ನಮಃ | ಸರ್ವೋಪಚಾರಾರ್ಥೇ ಗಂಧಾಕ್ಷತಪುಷ್ಪಂ ಸಮರ್ಪಯಾಮಿ ||

ದೀಪಕ್ಕೆ ಗಂಧ, ಅಕ್ಷತೆ ಮತ್ತು ಹೂವುಗಳನ್ನು ಅರ್ಪಿಸಬೇಕು. (ದೀಪ ದೇವತೆಗೆ ಅರಿಶಿನ ಕುಂಕುಮ ಅರ್ಪಿಸುವ ಪದ್ಧತಿಯೂ ಇದೆ.)

ಪೂಜಾಸಾಹಿತ್ಯ, ಪೂಜಾಸ್ಥಳ, ಹಾಗೆಯೇ ಸ್ವಂತದ (ಪೂಜಕನ) ಶುದ್ಧಿ

ಕಲಶ ಮತ್ತು ಶಂಖದಲ್ಲಿನ ಸ್ವಲ್ಪ ನೀರನ್ನು ಉದ್ಧರಣೆಯಲ್ಲಿ ಒಟ್ಟಿಗೆ ತೆಗೆದುಕೊಳ್ಳಬೇಕು. ಪೂಜಕನು ಮುಂದಿನ ಮಂತ್ರವನ್ನು ಪಠಿಸುತ್ತಾ ಬಿಲ್ವಪತ್ರಯಿಂದ ಆ ನೀರನ್ನು ಪೂಜಾಸಾಹಿತ್ಯಗಳ ಮೇಲೆ, ತನ್ನ ಸುತ್ತಲೂ (ಪೂಜಾಸ್ಥಳ) ಮತ್ತು ತನ್ನ ಮೇಲೆ (ತಲೆಯ ಮೇಲೆ) ಪ್ರೋಕ್ಷಣೆ ಮಾಡಿಕೊಳ್ಳಬೇಕು.

ಅಪವಿತ್ರಃ ಪವಿತ್ರೋ ವಾ ಸರ್ವಾವಸ್ಥಾಂಗತೋಪಿ ವಾ |
ಯಃ ಸ್ಮರೇತ್ ಪುಂಡರೀಕಾಕ್ಷಂ ಸ ಬಾಹ್ಯಾಭ್ಯಂತರಃ ಶುಚಿಃ ||

ಬಿಲ್ವಪತ್ರೆಯನ್ನು ಹರಿವಾಣದಲ್ಲಿ ಬಿಡಬೇಕು.

ಈಗ ಕೈಮುಗಿದು ಮುಂದಿನ ಶ್ಲೋಕವನ್ನು ಪಠಿಸಬೇಕು.

ಮನೋಜವಂ ಮಾರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಾಂ ವರಿಷ್ಠಮ್ ।
ವಾತಾತ್ಮಜಂ ವಾನರಯೂಥಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ ।।

ಶ್ರೀ ಹನುಮತೇ ನಮಃ । ಧ್ಯಾಯಾಮಿ ।।

ಶ್ರೀ ಹನುಮತೇ ನಮಃ । ಆವಾಹಯಾಮಿ ।। (ಅಕ್ಷತೆ ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ವಿಲೇಪನಾರ್ಥೇ ಚಂದನಂ ಸಮರ್ಪಯಾಮಿ ।। (ಗಂಧ ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ಸಿಂದೂರಂ ಸಮರ್ಪಯಾಮಿ ।। (ಸಿಂದೂರ ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ಅಲಂಕಾರಾರ್ಥೇ ಅಕ್ಷತಾನ್ ಸಮರ್ಪಯಾಮಿ ।। (ಅಕ್ಷತೆ ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ಪುಷ್ಪಂ ಸಮರ್ಪಯಾಮಿ ।। (ಹೂವು ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ಬಿಲ್ವಪತ್ರಂ ಸಮರ್ಪಯಾಮಿ ।। (ಬಿಲ್ವಪತ್ರ ಹಾಗೂ ಎಕ್ಕದ ಎಲೆಗಳನ್ನು ಅರ್ಪಿಸಬೇಕು)

ಶ್ರೀ ಹನುಮತೇ ನಮಃ । ಧೂಪಂ ಸಮರ್ಪಯಾಮಿ ।। (ಊದಬತ್ತಿ ಬೆಳಗಬೇಕು)

ಶ್ರೀ ಹನುಮತೇ ನಮಃ । ದೀಪಂ ಸಮರ್ಪಯಾಮಿ ।। (ದೀಪ ಬೆಳಗಬೇಕು)

ಬಲಗೈಯಲ್ಲಿ ಎರಡು ಬಿಲ್ವಪತ್ರೆಗಳನ್ನು ತೆಗೆದುಕೊಳ್ಳಿ. ಉದ್ಧರಣೆಯಿಂದ ಅದರ ಮೇಲೆ ನೀರು ಬಿಟ್ಟು ನೈವೇದ್ಯದ ಮೇಲೆ ಪ್ರೋಕ್ಷಣೆ ಮಾಡಿ (ಸಿಂಪಡಿಸಿ) ಒಂದು ಎಲೆಯನ್ನು ಅದರ ಮೇಲಿಡಬೇಕು. ಇನ್ನೊಂದು ಎಲೆಯನ್ನು ಕೈಯಲ್ಲಿಯೇ ಹಿಡಿದುಕೊಂಡಿರಬೇಕು ಮತ್ತು ಎಡಗೈಯ ಬೆರಳುಗಳನ್ನು ಎರಡೂ ಕಣ್ಣುಗಳ (ಅಪವಾದ: ಎಡಗೈಯನ್ನು ಎದೆಯ ಮೇಲೆ) ಮೇಲಿಟ್ಟು ನೈವೇದ್ಯವನ್ನು ಅರ್ಪಿಸುವಾಗ ಮುಂದಿನ ಮಂತ್ರಗಳನ್ನು ಪಠಿಸಬೇಕು.

ಶ್ರೀ ಹನುಮತೇ ನಮಃ । ಶುಂಠಿಕಾ ನೈವೇದ್ಯಂ ನಿವೇದಯಾಮಿ ।

ಓಂ ಪ್ರಾಣಾಯ ಸ್ವಾಹಾ । ಓಂ ಅಪಾನಾಯ ಸ್ವಾಹಾ । ಓಂ ವ್ಯಾನಾಯ ಸ್ವಾಹಾ ।

ಓಂ ಉದಾನಾಯ ಸ್ವಾಹಾ । ಓಂ ಸಮಾನಾಯ ಸ್ವಾಹಾ । ಓಂ ಬ್ರಹ್ಮಣೇ ಸ್ವಾಹಾ ।

ಮಂತ್ರಗಳನ್ನು ಹೇಳಿ ಎಲೆಯನ್ನು ಹನುಮಂತನಿಗೆ ಅರ್ಪಿಸಬೇಕು. ಮುಂದಿನ ಮಂತ್ರಗಳು ಹೇಳುವಾಗ ಕ್ರಮವಾಗಿ ಎಲೆಯಡಿಕೆ, ತೆಂಗಿನಕಾಯಿ ಮತ್ತು ಹಣ್ಣುಗಳ ಮೇಲೆ ನೀರನ್ನು ಸಿಂಪಡಿಸಬೇಕು.

ಶ್ರೀ ಹನುಮತೇ ನಮಃ । ಮುಖವಾಸಾರ್ಥೇ ಪೂಗೀಫಲತಾಂಬೂಲಂ ಸಮಪರ್ಯಾಮಿ । ಫಲಾರ್ಥೇ ನಾರಿಕೇಲಫಲಂ ಸಮಪರ್ಯಾಮಿ ।

ಪ್ರಾರ್ಥನೆ

ಆವಾಹನಂ ನ ಜಾನಾಮಿ ನ ಜಾನಾಮಿ ತವಾರ್ಚನಮ್ । ಪೂಜಾಂ ಚೈವ ನ ಜಾನಾಮಿ ಕ್ಷಮ್ಯತಾಂ ಪರಮೇಶ್ವರ ।।

ಮಂತ್ರಹೀನಂ ಕ್ರಿಯಾಹೀನಂ ಭಕ್ತಿಹೀನಂ ಸುರೇಶ್ವರ । ಯತ್ಪೂಜಿತಂ ಮಯಾ ದೇವ ಪರಿಪೂರ್ಣಂ ತದಸ್ತು ಮೇ ।

ಯಸ್ಯ ಸ್ಮೃತ್ಯಾ ಚ ನಾಮೋಕ್ತ್ಯಾ ತಪಃಪೂಜಾಕ್ರಿಯಾದಿಷು । ನ್ಯೂನಂ ಸಂಪೂರ್ಣತಾಂ ಯಾತಿ ಸದ್ಯೋ ವಂದೇ ತಮಚ್ಯುತಮ್ ।।

ಬಲಗೈಯಲ್ಲಿ ಅಕ್ಷತೆ ತೆಗೆದುಕೊಂಡು ಮುಂದಿನ ಮಂತ್ರವನ್ನು ಪಠಿಸಬೇಕು ಮತ್ತು ಪ್ರಿಯತಾಂ ಎಂದು ಹೇಳುವಾಗ, ಉದ್ಧರಣೆಯಿಂದ ಬಲಗೈಯಲ್ಲಿ  ನೀರು ತೆಗೆದುಕೊಂಡು ಹರಿವಾಣದಲ್ಲಿ ಅಕ್ಷತೆಯನ್ನು ಬಿಡಬೇಕು.

ಅನೇನ ಕೃತ ಪೂಜನೇನ ಶ್ರೀ ಹನುಮತ್ ದೇವತಾ ಪ್ರೀಯತಾಮ್ ।।

ನಂತರ, ಪ್ರಾರಂಭದಲ್ಲಿ ಹೇಳಿದಂತೆ, ಅಚಮನ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.

Leave a Comment