ಫಲ-ಜ್ಯೋತಿಷ್ಯಶಾಸ್ತ್ರವು ಗ್ರಹ, ರಾಶಿ ಮತ್ತು ಕುಂಡಲಿಯ ಮನೆಗಳು ಎಂಬ ೩ ಮೂಲ ಘಟಕಗಳನ್ನು ಅವಲಂಬಿಸಿದೆ. ಈ ೩ ಘಟಕಗಳಿಂದ ಭವಿಷ್ಯದ ಬಗ್ಗೆ ಸಲಹೆ ನೀಡಲು ಸಾಧ್ಯವಾಗುತ್ತದೆ. ಈ ಮೂರು ಘಟಕಗಳನ್ನು ಈ ಲೇಖನದ ಮೂಲಕ ಪರಿಚಯಿಸಿಕೊಳ್ಳೋಣ.
೧. ಗ್ರಹ
ಗ್ರಹವೆಂದರೆ ‘ಗ್ರಹಣ ಮಾಡುವುದು’. ಗ್ರಹಗಳು ನಕ್ಷತ್ರಗಳಿಂದ ಹೊರಹೊಮ್ಮುವ ಸೂಕ್ಷ್ಮ ಊರ್ಜೆಯನ್ನು ಗ್ರಹಿಸುತ್ತವೆ. ಆದ್ದರಿಂದ ಅವುಗಳನ್ನು ‘ಗ್ರಹ’ ಎಂದು ಕರೆಯಲಾಗುತ್ತದೆ. ಗ್ರಹಗಳಲ್ಲಿ ಬುಧ, ಶುಕ್ರ, ಮಂಗಳ, ಗುರು ಹಾಗೂ ಶನಿ ಇವೈದು ಮುಖ್ಯವಾಗಿದ್ದು ಅವುಗಳು ಪಂಚಮಹಾಭೂತಗಳ ಪ್ರತಿನಿಧಿಗಳಾಗಿವೆ. ರವಿ ಆತ್ಮಕ್ಕೆ ಹಾಗೂ ಚಂದ್ರ ಮನಸ್ಸಿಗೆ ಸಂಬಂಧಿಸಿದ ಗ್ರಹಗಳಾಗಿವೆ. ಗ್ರಹಗಳ ತತ್ತ್ವಗಳು ಮತ್ತು ಗ್ರಹಗಳು ಯಾವ ಲಕ್ಷಣಗಳಿಗೆ ಸಂಬಂಧಿಸಿವೆ ಎಂಬುದನ್ನು ಮುಂದಿನ ಕೋಷ್ಟಕದಲ್ಲಿ ವಿವರಿಸಲಾಗಿದೆ.
ಗ್ರಹ | ತತ್ತ್ವ | ಸಂಬಂಧಿಸಿದ ಲಕ್ಷಣ |
---|---|---|
೧. ಬುಧ | ಪೃಥ್ವಿ | ಬುದ್ಧಿ, ವಾಣಿ , ವ್ಯಾಪಾರ, ಸ್ಥೈರ್ಯ |
೨. ಶುಕ್ರ | ಜಲ | ಕಾಮನೆ, ಸೌಖ್ಯ, ಕಲೆ, ಸಮೃದ್ಧಿ |
೩. ಚಂದ್ರ | ಜಲ | ಮನಸ್ಸು, ಸ್ವಭಾವ, ವಾತ್ಸಲ್ಯ, ಔಷಧ |
೪. ಮಂಗಳ | ಅಗ್ನಿ | ಪರಾಕ್ರಮ, ಶೌರ್ಯ, ನೇತೃತ್ವ, ಉದ್ಯೋಗ |
೫. ರವಿ | ಅಗ್ನಿ | ಆರೋಗ್ಯ, ವಿದ್ಯೆ, ಅಧಿಕಾರ, ಕೀರ್ತಿ |
೬. ಶನಿ | ವಾಯು | ಸಂಶೋಧನೆ, ತತ್ತ್ವ ಜ್ಞಾನ, ವ್ಯಾಧಿ, ಕ್ಷಯ |
೭. ಗುರು | ಆಕಾಶ | ಜ್ಞಾನ, ವಿವೇಕ, ಸಾಧನೆ, ವ್ಯಾಪಕತೆ |
ಬುಧ, ಶುಕ್ರ ಹಾಗೂ ಚಂದ್ರ ಈ ಗ್ರಹಗಳು ‘ಪೃಥ್ವಿ’ ಹಾಗೂ ‘ಜಲ’ ತತ್ತ್ವಗಳಿಗೆ ಸಂಬಂಧಿಸಿರುವುದರಿಂದ ಅವುಗಳು ವ್ಯಕ್ತಿಯ ಕುಟುಂಬ, ಗಂಡ/ಹೆಂಡತಿ, ಸ್ವಭಾವ, ಸ್ಥೈರ್ಯ ಹಾಗೂ ಸೌಖ್ಯಕ್ಕಾಗಿ ಅನುಕೂಲಕರವಾಗಿರುತ್ತವೆ. ರವಿ, ಮಂಗಳ ಹಾಗೂ ಶನಿ ಈ ಗ್ರಹಗಳು ‘ಅಗ್ನಿ’ ಮತ್ತು ‘ವಾಯು’ ತತ್ತ್ವಗಳಿಗೆ ಸಂಬಂಧಿಸಿರುವುದರಿಂದ ಅವುಗಳು ವ್ಯಕ್ತಿಯ ಕಾರ್ಯಕ್ಷೇತ್ರ, ಕರ್ತವ್ಯ, ಉತ್ಕರ್ಷ ಹಾಗೂ ಪ್ರತಿಷ್ಠೆಗಾಗಿ ಅನುಕೂಲಕರವಾಗಿರುತ್ತವೆ. ಗುರು ಗ್ರಹ ಆಕಾಶತತ್ತ್ವಕ್ಕೆ ಸಂಬಂಧಿಸಿರುವುದರಿಂದ ಅದು ಸಮಗ್ರವಾಗಿ ಅನುಕೂಲಕರ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಪೂರಕವಾಗಿರುವ ಗ್ರಹವಾಗಿದೆ.
೨. ರಾಶಿ
ಪೃಥ್ವಿ ಯಾವ ಮಾರ್ಗದಲ್ಲಿ ಸೂರ್ಯನ ಸುತ್ತಲೂ ಸಂಚರಿಸುತ್ತದೆಯೋ, ಆ ಮಾರ್ಗಕ್ಕೆ ಕ್ರಾಂತಿಪಥ (ಕ್ರಾಂತಿವೃತ್ತ) ಎನ್ನುತ್ತಾರೆ. ಕ್ರಾಂತಿಪಥದ ೧೨ ಸಮಾನ ಭಾಗಗಳೆಂದರೆ ರಾಶಿ. ಪ್ರತಿಯೊಂದು ರಾಶಿಯಲ್ಲಿ ಎರಡುಕಾಲು (೨.೨೫) ನಕ್ಷತ್ರಗಳಿರುತ್ತವೆ. ರಾಶಿ ಸ್ಥಿರವಾಗಿರುತ್ತದೆ; ಆದರೆ ಪೃಥ್ವಿ ತನ್ನ ಸುತ್ತಲೂ ತಿರುಗುವುದರಿಂದ ರಾಶಿಚಕ್ರ ತಿರುಗಿದ ಹಾಗೆ ಕಾಣಿಸುತ್ತದೆ. ಜಾತಕದ ಕುಂಡಲಿಯಲ್ಲಿ ಮೊದಲ ಸ್ಥಾನದಲ್ಲಿರುವ ರಾಶಿಗೆ ‘ಲಗ್ನರಾಶಿ’ ಹಾಗೂ ಚಂದ್ರ ಯಾವ ರಾಶಿಯಲ್ಲಿರುತ್ತಾನೆಯೋ, ಅದಕ್ಕೆ ‘ಜನ್ಮರಾಶಿ’ ಎನ್ನುತ್ತಾರೆ. ಈ ಎರಡು ರಾಶಿಗಳು ವ್ಯಕ್ತಿಯ ವ್ಯಕ್ತಿತ್ವದ ಮೇಲೆ ವಿಶೇಷ ಪರಿಣಾಮ ಬೀರುತ್ತವೆ. ಲಗ್ನರಾಶಿ ವ್ಯಕ್ತಿಯ ಮೂಲ ಪಿಂಡ (ಪ್ರಕೃತಿ), ಹಾಗೂ ಜನ್ಮರಾಶಿ ವ್ಯಕ್ತಿಯ ಸ್ವಭಾವ-ವೈಶಿಷ್ಟ್ಯವನ್ನು ದರ್ಶಿಸುತ್ತದೆ.
(ಜಾತಕದಲ್ಲಿ ಜನ್ಮರಾಶಿಯನ್ನು ಹೇಗೆ ಹುಡುಕಬೇಕು ಎಂದು ತಿಳಿದುಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ).
೨ ಅ. ಜನ್ಮರಾಶಿಗನುಸಾರ ವ್ಯಕ್ತಿಯಲ್ಲಿ ಸರ್ವಸಾಧಾರಣವಾಗಿ ಕಂಡುಬರುವ ವೈಶಿಷ್ಟ್ಯಗಳು
ಜನ್ಮರಾಶಿ | ತತ್ತ್ವ | ಸರ್ವಸಾಧಾರಣವಾಗಿ ಕಂಡುಬರುವ ವೈಶಿಷ್ಟ್ಯಗಳು |
---|---|---|
೧. ಮೇಷ | ಅಗ್ನಿ | ಶೌರ್ಯ, ಮಹತ್ವಾಕಾಂಕ್ಷೆ, ಕಾರ್ಯತತ್ಪರತೆ, ಗತಿಶೀಲತೆ |
೨. ವೃಷಭ | ಪೃಥ್ವಿ | ಸ್ಥಿರತೆ, ಶ್ರಮ ವಹಿಸದೆ ಸುಖ ಬಯಸುವುದು, ವ್ಯವಹಾರ-ಕೌಶಲ್ಯ |
೩. ಮಿಥುನ | ವಾಯು | ಚಂಚಲತೆ, ವಾಕ್ಚಾತುರ್ಯ, ಸಮನ್ವಯ-ಕೌಶಲ್ಯ |
೪. ಕರ್ಕಾಟಕ | ಜಲ | ಭಾವನಾಪ್ರಧಾನತೆ, ಸಂಗೋಪನೆ, ಕರ್ತವ್ಯದಕ್ಷತೆ |
೫. ಸಿಂಹ | ಅಗ್ನಿ | ವಿದ್ವತ್ತು, ತತ್ತ್ವನಿಷ್ಠೆ, ಅಧಿಕಾರಿವೃತ್ತಿ, ಔದಾರ್ಯ |
೬. ಕನ್ಯಾ | ಪೃಥ್ವಿ | ಕಲಾಪ್ರೇಮ, ವಿಮರ್ಶಕವೃತ್ತಿ, ನಿಯೋಜನ-ಕೌಶಲ್ಯ |
೭. ತುಲಾ | ವಾಯು | ಆಕಲನಶಕ್ತಿ, ಕಾರ್ಯದಕ್ಷತೆ, ಸೇವಾಭಾವ |
೮. ವೃಶ್ಚಿಕ | ಜಲ | ಧೈರ್ಯ, ಗೋಪ್ಯತೆ, ಮೊಂಡುತನ, ನೇರ ಮಾತಿನ |
೯. ಧನು | ಅಗ್ನಿ | ವಿವೇಕಿ, ನ್ಯಾಯಪ್ರಿಯ, ವಿದ್ಯಾವ್ಯಾಸಂಗ, ಧರ್ಮಶೀಲ |
೧೦. ಮಕರ | ಪೃಥ್ವಿ | ಸತತವಾಗಿ ಕಾರ್ಯಮಗ್ನ, ಸೃಜನಶೀಲ, ಪಟ್ಟುಹಿಡಿಯುವಿಕೆ, ಪರಿಶ್ರಮ |
೧೧. ಕುಂಭ | ವಾಯು | ಸಂಶೋಧಕವೃತ್ತಿ, ತತ್ತ್ವ ಜ್ಞಾನದ ವಿಚಾರಶೈಲಿ, ಅನಾಸಕ್ತಿ |
೧೨. ಮೀನ | ಜಲ | ಭಕ್ತಿಪರಾಯಣ, ಪರೋಪಕಾರಿ, ಸಜ್ಜನ, ಲೋಕಪ್ರಿಯ |
ಒಂದು ಗ್ರಹವು ಅದಕ್ಕೆ ಪೂರಕವಾದ ಗುಣಧರ್ಮವಿರುವ ರಾಶಿಯಲ್ಲಿರುವಾಗ ಬಲಶಾಲಿಯಾಗುತ್ತದೆ ಮತ್ತು ಪ್ರಖರವಾದ ಫಲ ಕೊಡುತ್ತದೆ. ಉದಾ. ಅಗ್ನಿತತ್ತ್ವದ ಮಂಗಳ ಗ್ರಹ ಅಗ್ನಿತತ್ತ್ವದ ಮೇಷ ರಾಶಿಯಲ್ಲಿ ಪ್ರಖರವಾದ ಫಲಕೊಡುತ್ತದೆ. ತದ್ವಿರುದ್ಧ ಗ್ರಹ ಅದಕ್ಕೆ ಪ್ರತಿಕೂಲವಾದ ಗುಣಧರ್ಮವಿರುವ ರಾಶಿಯಲ್ಲಿರುವಾಗ ದುರ್ಬಲವಾಗುತ್ತದೆ.
೩. ಕುಂಡಲಿಯ ಮನೆಗಳು
ಕುಂಡಲಿಯಲ್ಲಿ ಕಾಣಿಸುವ ಮನೆಗಳೆಂದರೆ ದಿಕ್ಕುಗಳ ಸಮಾನ ವಿಭಾಗಗಳು. ಕುಂಡಲಿಯಲ್ಲಿ ಒಟ್ಟು ೧೨ ಮನೆಗಳಿದ್ದು (ಸ್ಥಾನಗಳಿದ್ದು) ಹೇಗೆ ದಿಕ್ಕುಗಳ ತಮ್ಮ ಸ್ಥಾನ ಬದಲಾಯಿಸುವುದಿಲ್ಲವೋ, ಕುಂಡಲಿಯ ಆ ೧೨ ಮನೆಗಳು ಬದಲಾಗುವುದಿಲ್ಲ. ಆದರೆ ಮನೆಗಳಲ್ಲಿ ಬರುವ ರಾಶಿಗಳು ಬದಲಾಗುತ್ತವೆ. ಜೀವನದಲ್ಲಿ ಪ್ರತಿಯೊಂದು ವಿಷಯದ ನಿರ್ಧಾರ ಒಂದಲ್ಲ ಒಂದು ಮನೆಯಿಂದಾಗುತ್ತದೆ. ಕುಂಡಲಿಯ ೧೨ ಮನೆಗಳಿಂದ ಯಾವ ವಿಷಯಗಳ ಮಾಹಿತಿಯನ್ನು ಪಡೆಯಬಹುದು ಎಂದು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಕುಂಡಲಿಯ ಮನೆ | ಮನೆಗೆ ಸಂಬಂಧಿಸಿದ ಅಂಶಗಳು |
---|---|
೧. ಪ್ರಥಮ (೧ನೇ ಮನೆ) | ಶರೀರ ಪ್ರಕೃತಿ, ವ್ಯಕ್ತಿತ್ವ |
೨. ದ್ವಿತೀಯ (೨ನೇ ಮನೆ) | ಸ್ಥಾವರ ಸಂಪತ್ತು, ಕುಟುಂಬ, ವಾಕ್ಚಾತುರ್ಯ |
೩. ತೃತೀಯ (೩ನೇ ಮನೆ) | ಬುದ್ಧಿ, ಕೌಶಲ್ಯ, ಸೋದರ-ಸೋದರಿ |
೪. ಚತುರ್ಥ (೪ನೇ ಮನೆ) | ತಾಯಿ, ಮನೆ, ವಾಹನ, ಸುಖ |
೫. ಪಂಚಮ (೫ನೇ ಮನೆ) | ವಿದ್ಯೆ, ಉಪಾಸನೆ, ಸಂತತಿ |
೬. ಷಷ್ಠ (೬ನೇ ಮನೆ) | ವಿಕಾರ, ವ್ಯಾಧಿ, ಶತ್ರು |
೭. ಸಪ್ತಮ (೭ನೇ ಮನೆ) | ಕಾಮನೆ, ವೈವಾಹಿಕ ಜೀವನ |
೮. ಅಷ್ಟಮ (೮ನೇ ಮನೆ) | ಆಯುಷ್ಯ, ಸಿದ್ಧಿ, ಯೋಗಸಾಧನೆ |
೯. ನವಮ (೯ನೇ ಮನೆ) | ಪುಣ್ಯ, ಭಾಗ್ಯ, ದೈವೀ ಆಶೀರ್ವಾದ |
೧೦. ದಶಮ (೧೦ನೇ ಮನೆ) | ಕರ್ಮ, ಉದ್ಯೋಗ, ತಂದೆ, ಪ್ರತಿಷ್ಠೆ |
೧೧. ಏಕಾದಶ (೧೧ನೇ ಮನೆ) | ಆರ್ಥಿಕ ಲಾಭ, ಲೋಕಸಂಗ್ರಹ |
೧೨. ದ್ವಾದಶ (೧೨ನೇ ಮನೆ) | ತ್ಯಾಗ, ಆಧ್ಯಾತ್ಮಿಕ ಉನ್ನತಿ |
೩ ಅ. ನಾಲ್ಕು ಪುರುಷಾರ್ಥಗಳಿಗೆ ಸಂಬಂಧಿಸಿದ ಮನೆಗಳು ಮತ್ತು ಅವುಗಳ ಸ್ವರೂಪ
ಹಿಂದೂ ಧರ್ಮಕ್ಕನುಸಾರ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಇವು ಮಾನವ ಜೀವನದ ಉದ್ದಿಷ್ಟಗಳಾಗಿವೆ. ಕುಂಡಲಿಯ ೧೨ ಮನೆಗಳಿಂದ ಈ ೪ ಪುರುಷಾರ್ಥಗಳ ವಿಚಾರ ಮಾಡಲಾಗುತ್ತದೆ, ಅಂದರೆ ಆ ಪುರುಷಾರ್ಥಗಳನ್ನು ಸಾಧಿಸಲು ವಿಧಿಯ ಅನುಕೂಲತೆ ಎಷ್ಟಿದೆ, ಎಂಬುದರ ವಿಚಾರ ಮಾಡಲಾಗುತ್ತದೆ. ಪುರುಷಾರ್ಥಗಳಿಗೆ ಸಂಬಂಧಿಸಿದ ಕುಂಡಲಿಯ ಮನೆಗಳು ಮತ್ತು ಅವುಗಳ ಸ್ವರೂಪವನ್ನು ಮುಂದಿನ ಕೋಷ್ಟಕದಲ್ಲಿ ಕೊಡಲಾಗಿದೆ.
ಪುರುಷಾರ್ಥ | ಸಂಬಂಧಿಸಿದ ಮನೆಗಳು | ||
---|---|---|---|
ಭೌತಿಕ | ಮಾನಸಿಕ | ಆಧ್ಯಾತ್ಮಿಕ | |
೧. ಧರ್ಮ | ಪ್ರಥಮ | ಪಂಚಮ | ನವಮ |
೨. ಅರ್ಥ | ದಶಮ | ದ್ವಿತೀಯ | ಷಷ್ಠ |
೩. ಕಾಮ | ಸಪ್ತಮ | ಏಕಾದಶ | ತೃತೀಯ |
೪. ಮೋಕ್ಷ | ಚತುರ್ಥ | ಅಷ್ಟಮ | ದ್ವಾದಶ |
ಮನೆಗಳ ಭೌತಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಸ್ವರೂಪವು ಪುರುಷಾರ್ಥವನ್ನು ಸಾಧಿಸುವುದರಲ್ಲಿನ ಹಂತವನ್ನು ದರ್ಶಿಸುತ್ತದೆ, ಉದಾ. ಮೋಕ್ಷ ಸ್ಥಾನಗಳ ಪೈಕಿ ‘ಚತುರ್ಥ’ ಸ್ಥಾನವು ಕುಲಾಚಾರಗಳ ಪಾಲನೆ ಮಾಡುವುದು, ಹಬ್ಬ-ಉತ್ಸವಗಳನ್ನು ಆಚರಿಸುವುದು ಇತ್ಯಾದಿ ಪ್ರಾಥಮಿಕ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ; ‘ಅಷ್ಟಮ’ ಸ್ಥಾನವು ಜಪ, ತಪ, ಅನುಷ್ಠಾನಗಳು ಇತ್ಯಾದಿ ಸಕಾಮ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ; ಮತ್ತು ‘ದ್ವಾದಶ’ ಸ್ಥಾನವು ತನು-ಮನ-ಧನದ ತ್ಯಾಗ, ಗುರುಸೇವೆ, ಅಧ್ಯಾತ್ಮಪ್ರಸಾರ ಹೀಗೆ ನಿಷ್ಕಾಮ ಸ್ವರೂಪದ ಸಾಧನೆಯನ್ನು ದರ್ಶಿಸುತ್ತದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧.೨೦೨೩)
Super explanation.