*ಜಾತಕವನ್ನು ಜನ್ಮ ಕುಂಡಲಿ, ಜನ್ಮ ಪತ್ರಿಕೆ ಎಂದೂ ಕರೆಯುತ್ತಾರೆ.
ಹಿಂದೂ ಸಮಾಜದಲ್ಲಿ ಮಗುವಿನ ಜನ್ಮವಾದ ನಂತರ ಜ್ಯೋತಿಷಿಗಳಿಂದ ಮಗುವಿನ ಜಾತಕ ಮಾಡಿಸಿಕೊಳ್ಳಲಾಗುತ್ತದೆ. ಬಹಳಷ್ಟು ಜನರಿಗೆ ಜಾತಕದಲ್ಲಿ ಯಾವ ಮಾಹಿತಿ ಇರುತ್ತದೆ ಎಂಬುವುದರ ಕುತೂಹಲ ಇರುತ್ತದೆ. ಈ ಲೇಖನದಲ್ಲಿ ಜಾತಕ ಅಂದರೇನು ಮತ್ತು ಅದರಲ್ಲಿ ಯಾವ ಮಾಹಿತಿ ಇರುತ್ತದೆ, ಎಂದು ತಿಳಿದುಕೊಳ್ಳೋಣ.
೧. ಜಾತಕ ಅಂದರೆ ಏನು ?
ಜಾತಕ ಎಂದರೆ ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿರುವ ಗ್ರಹ-ನಕ್ಷತ್ರಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ನೀಡುವ ಒಂದು ಚಿಕ್ಕ ಪುಸ್ತಕ. ವೈದ್ಯಕೀಯ ವರದಿಯಲ್ಲಿ ವ್ಯಕ್ತಿಯ ಶರೀರಿಕ ಸ್ಥಿತಿಯ ಬಗ್ಗೆ ಮಾಹಿತಿ ಹೇಗೆ ಇರುತ್ತದೆಯೋ, ಹಾಗೆಯೆ ವ್ಯಕ್ತಿಯ ಜಾತಕದಲ್ಲಿ ಆತನ ಜನ್ಮಸಮಯದಲ್ಲಿ ಖಗೋಲ ಸ್ಥಿತಿ-ಗತಿಗಳ ಮಾಹಿತಿಯನ್ನು ನೀಡಲಾಗಿರುತ್ತದೆ. ಜಾತಕದಲ್ಲಿರುವ ಮಾಹಿತಿಯನ್ನು ಉಪಯೋಗಿಸಿ ಜ್ಯೋತಿಷಿಗಳು ಭವಿಷ್ಯವನ್ನು ಹೇಳುತ್ತಾರೆ. ಜಾತಕದಲ್ಲಿ ನೀಡಿರುವ ಸ್ವಲ್ಪ ಮಾಹಿತಿಯು ಸ್ವತಃ ಆ ವ್ಯಕ್ತಿಗೂ ಉಪಯುಕ್ತವಾಗಿರುಗುತ್ತದೆ. ಅದರ ವಿವರಣೆಯನ್ನು ಮುಂದೆ ಕೊಡಲಾಗಿದೆ.
೧ ಅ. ಸಾಮಾನ್ಯ ಮಾಹಿತಿ
ಜಾತಕದ ಆರಂಭದಲ್ಲಿ ಸಂಬಂಧಪಟ್ಟ ವ್ಯಕ್ತಿಯ ಹೆಸರು, ಜನ್ಮ ತಾರೀಕು, ಜನ್ಮ ಸಮಯ ಮತ್ತು ಜನ್ಮಸ್ಥಳದ ಮಾಹಿತಿ ಬರೆದಿರುತ್ತದೆ.
೧ ಆ. ಜನ್ಮದಿನದ ಪಂಚಾಂಗ
ಪುಸ್ತಕದಲ್ಲಿ ವ್ಯಕ್ತಿಯ ಜನ್ಮದ ಸಮಯದಲ್ಲಿ ಇರುವ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣ ಈ ೫ ಅಂಶಗಳನ್ನು ಬರೆದಿರುತ್ತದೆ.
೧ ಇ. ಕಾಲಮಾಪನದ ಘಟಕಗಳು
ವ್ಯಕ್ತಿಯ ಜನ್ಮದ ಸಮಯದಲ್ಲಿದ್ದ ಸಂವತ್ಸರ (ವರ್ಷ), ಅಯನ (ಉತ್ತರಾಯಣ-ದಕ್ಷಿಣಾಯನ), ಋತು (ವಸಂತ, ಗ್ರೀಶ್ಮ ಇತ್ಯಾದಿ), ಮಾಸ (ತಿಂಗಳು) ಮತ್ತು ಪಕ್ಷ (ಶುಕ್ಲ, ಕೃಷ್ಣ) ಇವುಗಳ ಮಾಹಿತಿಯಿರುತ್ತದೆ.
೧ ಈ. ಜನ್ಮನಕ್ಷತ್ರದ ವೈಶಿಷ್ಟ್ಯ ಗಳು
ಜನ್ಮದ ಸಮಯದಲ್ಲಿ ಚಂದ್ರನು ಯಾವ ನಕ್ಷತ್ರದಲ್ಲಿರುತ್ತಾನೆಯೋ, ಅದು ವ್ಯಕ್ತಿಯ ಜನ್ಮನಕ್ಷತ್ರವಾಗಿರುತ್ತದೆ. ಎಲ್ಲ ಗ್ರಹಗಳ ತುಲನೆಯಲ್ಲಿ ಚಂದ್ರನು ಪ್ರಥ್ವಿಯ ಅತೀ ಸಮೀಪ ಇರುವುದರಿಂದ ಪೃಥ್ವಿಯ ಮೇಲೆ ಅವನ ಸೂಕ್ಷ್ಮ ಊರ್ಜೆಯ (ಆಪತತ್ತ್ವದ) ಮತ್ತು ಸ್ಥೂಲ ಊರ್ಜೆಯ (ಗುರುತ್ವಾಕರ್ಷಣೆಯ) ಪರಿಣಾಮವಾಗುತ್ತದೆ. ಆದುದರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಚಂದ್ರ ನಕ್ಷತ್ರಕ್ಕೆ (ಜನ್ಮನಕ್ಷತ್ರಕ್ಕೆ) ಹೆಚ್ಚು ಮಹತ್ವವನ್ನು ನೀಡಲಾಗಿದೆ. ಜನ್ಮನಕ್ಷತ್ರಕ್ಕೆ ಸಂಬಂಧಿಸಿದ ದೇವತೆ, ದಾನವಸ್ತು, ಆರಾಧ್ಯವೃಕ್ಷ, ವರ್ಣಾಕ್ಷರ ಇತ್ಯಾದಿಗಳ ಮಾಹಿತಿಯನ್ನು ಪತ್ರಿಕೆಯಲ್ಲಿ ನೀಡಲಾಗಿರುತ್ತದೆ. ಅವುಗಳ ಉಪಯೋಗ ವಿವಿಧ ಪ್ರಸಂಗಗಳಲ್ಲಿ ಆಗುತ್ತದೆ.
೧ ಉ. ಫಲಿತ
ಕೆಲವು ಪತ್ರಿಕೆಗಳಲ್ಲಿ ಮುದ್ರಿಸಿದ ಫಲಿತವನ್ನು (ಭವಿಷ್ಯವನ್ನು) ನೀಡಲಾಗಿರುತ್ತದೆ. ಆ ಫಲಿತಗಳನ್ನು ಗಣಕೀಯ ತಂತ್ರಾಂಶ (ಸಾಫ್ಟವೇರ್) ಬಳಸಿ ತಯಾರಿಸಿದ್ದರಿಂದ ಅದರಲ್ಲಿ ತಥ್ಯ ಬಹಳ ಕಡಿಮೆಯಿರುತ್ತದೆ; ಆದರೆ ಯಾವ ಪತ್ರಿಕೆಯಲ್ಲಿ ಜ್ಯೋತಿಷಿಗಳು ಸ್ವತಃ ಅಧ್ಯಯನ ಮಾಡಿ ಕುಂಡಲಿಯ ಫಲಿತವನ್ನು ಬರೆದಿರುತ್ತಾರೆಯೋ, ಆ ಫಲಿತದ ಉಪಯೋಗವು ಆ ವ್ಯಕ್ತಿಗೆ ಜೀವನದಲ್ಲಿ ಮಾರ್ಗಕ್ರಮಣ ಮಾಡುವಾಗ ಆಗುತ್ತದೆ.
೨. ಕುಂಡಲಿ ಅಂದರೆ ಏನು ?
ಕುಂಡಲಿಯು ಪತ್ರಿಕೆಯಲ್ಲಿನ ಮುಖ್ಯ ಭಾಗವಾಗಿದೆ. ಕುಂಡಲಿ ಅಂದರೆ ಆಕಾಶದ ಆಕೃತಿಬದ್ಧ ನಕಾಶೆ. ಕುಂಡಲಿಯಲ್ಲಿರುವ ೧೨ ಸ್ಥಾನಗಳಲ್ಲಿ ಗ್ರಹ ಮತ್ತು ರಾಶಿಯಗಳನ್ನು ತೋರಿಸಲಾಗಿರುತ್ತದೆ. ಜನ್ಮಕುಂಡಲಿಯಿಂದ ವ್ಯಕ್ತಿಯ ಜನ್ಮದ ಸಮಯದಲ್ಲಿ ಆಕಾಶದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದವು, ಅವು ಯಾವ ರಾಶಿಯಲ್ಲಿದ್ದವು, ಅವು ಪರಸ್ಪರ ಎಷ್ಟು ಅಂಶ ದೂರದಲ್ಲಿದ್ದವು, ಎಂಬ ಮಾಹಿತಿ ಕೂಡಲೇ ತಿಳಿಯುತ್ತದೆ. ಪತ್ರಿಕೆಯಲ್ಲಿ ಲಗ್ನಕುಂಡಲಿ, ರಾಶಿಕುಂಡಲಿ, ವರ್ಗಕುಂಡಲಿ ಹೀಗೆ ವಿವಿಧ ಪ್ರಕಾರದ ಕುಂಡಲಿಗಳನ್ನು ಕೊಡಲಾಗಿರುತ್ತದೆ. ಜ್ಯೋತಿಷಿಗಳು ಭವಿಷ್ಯವನ್ನು ಹೇಳುವಾಗ ವಿವಿಧ ಕಾರಣಗಳಿಗಾಗಿ ಉಪಯೋಗಿಸುತ್ತಾರೆ.
೩. ಮಗುವಿನ ಜನ್ಮವಾದನಂತರ ಎಷ್ಟು ದಿನಗಳಲ್ಲಿ ಜಾತಕ ಮಾಡಿಸಿಕೊಳ್ಳಬೇಕು ?
ಮಗುವಿನ ಜನ್ಮವಾದ ನಂತರ ಕೂಡಲೇ, ಅಂದರೆ ೨-೩ ದಿನಗಳಲ್ಲಿ ಜಾತಕ ಮಾಡಿಸಿಕೊಳ್ಳಬೇಕು; ಏಕೆಂದರೆ, ಜಾತಕವನ್ನು ಮಾಡುವಾಗ ‘ಮಗುವಿನ ಜನ್ಮ ಯಾವ ಯೋಗದಲ್ಲಿ ಆಗಿದೆ ?’, ಎಂಬುದನ್ನು ಜ್ಯೋತಿಷಿಗಳು ನೋಡುತ್ತಾರೆ. ಯಾವುದಾದರೂ ಅಶುಭ ತಿಥಿ, ಅಶುಭ ನಕ್ಷತ್ರ ಮತ್ತು ಅಶುಭ ಯೋಗದಲ್ಲಿ ಜನ್ಮವಾಗಿದ್ದರೆ, ಮಗುವಿಗೆ ಅದರಿಂದ ತೊಂದರೆಯಾಗಬಾರದೆಂದು ಶಾಸ್ತ್ರಗಳಲ್ಲಿ ಜನನಶಾಂತಿಯನ್ನು ಮಾಡಲು ಹೇಳಲಾಗಿದೆ. ಈ ಜನನಶಾಂತಿಯನ್ನು ಜನ್ಮದನಂತರ ಹನ್ನೆರಡನೇ ದಿನ ಮಾಡಲಾಗುತ್ತದೆ. ಜನ್ಮಪತ್ರಿಕೆಯನ್ನು ಮಾಡಿಸಿಕೊಳ್ಳಲು ತಡವಾದರೆ ಜನನಶಾಂತಿಯನ್ನು ಮಾಡಲು ತಡವಾಗುತ್ತದೆ. ಜನನಶಾಂತಿಯನ್ನು ಹೆಚ್ಚು ತಡಮಾಡಿ ಮಾಡಿದರೆ ಅದರ ಪರಿಣಾಮ ಕಡಿಮೆಯಾಗುತ್ತದೆ.
೪. ಜಾತಕವನ್ನು ಮಾಡುವ ಜ್ಯೋತಿಷಿಗಳಿಗೆ ಯಾವ ಮಾಹಿತಿಯನ್ನು ಕೊಡಬೇಕು ?
ಜಾತಕಗಳ ಒಳ್ಳೆಯ ಅಧ್ಯಯನವಿರುವ ಮತ್ತು ಸನ್ನಡತೆಯ ಜ್ಯೋತಿಷಿಗಳಿಂದ ಜಾತಕವನ್ನು ಮಾಡಿಸಿಕೊಳ್ಳಬೇಕು. ಜ್ಯೋತಿಷಿಗಳಿಗೆ ಮಗುವಿನ ಜನ್ಮದಿನಾಂಕ, ಜನ್ಮದ ಸಮಯ ಮತ್ತು ಜನ್ಮಸ್ಥಳವನ್ನು ನಿಕರವಾಗಿ ಹೇಳಬೇಕು; ಏಕೆಂದರೆ ಈ ಮೂರು ವಿಷಯಗಳನ್ನೇ ಆಧಾರವಾಗಿಟ್ಟುಕೊಂಡು ಜಾತಕವನ್ನು ತಯಾರಿಸಲಾಗುತ್ತದೆ. ನವಜಾತ ಶಿಶುವಿನ ವಿಷಯದಲ್ಲಿ ಏನಾದರೂ ವೈಚಿತ್ರ ಕಂಡುಬಂದಲ್ಲಿ ಅವುಗಳನ್ನೂ ಜ್ಯೋತಿಷಿಗಳಿಗೆ ಹೇಳಬೇಕು, ಉದಾ. ಮಗುವಿಗೆ ಜನ್ಮದಿಂದಲೇ ಹಲ್ಲುಗಳಿರುವುದು, ಹೆಚ್ಚು ಅವಯವಗಳಿರುವುದು ಅಥವಾ ಕಡಿಮೆ ಅವಯವಗಳಿರುವುದು ಇತ್ಯಾದಿ.
೫. ಜಾತಕವನ್ನು ಮಾಡಿಸಿಕೊಳ್ಳುವುದರ ಮಹತ್ವ
ದಿಶೆ ಮತ್ತು ಕಾಲ ಇವುಗಳ ಮನುಷ್ಯನೊಂದಿಗಿರುವ ಸಂಬಂಧವನ್ನು ಜಾತಕ ತೋರಿಸುತ್ತದೆ. ಪೂರ್ವಜನ್ಮದಲ್ಲಿ ಮಾಡಿದ ಒಳ್ಳೆಯ ಮತ್ತು ಕೆಟ್ಟ ಕರ್ಮಗಳ ಫಲವನ್ನು ಮನುಷ್ಯನು ಪ್ರಾರಬ್ಧರೂಪದಲ್ಲಿ ಮುಂದಿನ ಜನ್ಮದಲ್ಲಿ ಭೋಗಿಸುತ್ತಾನೆ. ವ್ಯಕ್ತಿಯ ಪ್ರಾರಬ್ಧವನ್ನು ತಿಳಿದುಕೊಳ್ಳಲು ಕುಂಡಲಿಯು ಒಂದು ಮಾಧ್ಯಮವಾಗಿದೆ. ಜಾತಕದಿಂದ ಜೀವನದಲ್ಲಿ ಸಾಧನೆ-ಸಂಪನ್ನತೆ, ಕಾಲದ ಅನುಕೂಲತೆ ಮತ್ತು ಪ್ರತಿಕೂಲತೆ, ಸುಖ-ದುಃಖ, ಅನಿಷ್ಟ ಇತ್ಯಾದಿಗಳು ತಿಳಿಯುತ್ತವೆ. ಆದ್ದರಿಂದ ನಮಗೆ ನಮ್ಮ ಜೀವನದ ಸ್ವರೂಪ ತಿಳಿಯಲು ಜಾತಕ ಸಹಾಯಕವಾಗಿದೆ.
೬. ಜಾತಕ ಜೋಪಾನವಾಗಿ ಮತ್ತು ಕೈಗೆಟಕುವಂತೆ ಇಡಬೇಕು
ಉಪನಯನ, ವಿವಾಹ ಇತ್ಯಾದಿ ಶುಭಕಾರ್ಯಗಳ ಪ್ರಸಂಗಗಳಲ್ಲಿ, ಹಾಗೆಯೇ ಕೆಲವೊಮ್ಮೆ ಆಪತ್ಕಾಲದ ಪರಿಸ್ಥಿತಿಯಲ್ಲಿ ಜಾತಕದ ಆವಶ್ಯಕತೆ ಇರುತ್ತದೆ. ಜಾತಕವನ್ನು ಸರಿಯಾಗಿ ಇಡದಿದ್ದರೆ ಅಥವಾ ಕಳೆದುಹೋದರೆ ಅಡಚಣೆಯಾಗುತ್ತದೆ, ಮತ್ತು ಅದನ್ನು ಪುನಃ ಮಾಡಿಸಿಕೊಳ್ಳಲು ಸಮಯ ಮತ್ತು ಹಣ ಖರ್ಚಾಗುತ್ತದೆ. ಆದ್ದರಿಂದ ಜಾತಕವನ್ನು ಜೋಪಾನ ಮಾಡಿ ಇಡಬೇಕು ಮತ್ತು ಸಹಜವಾಗಿ ಕೈಗೆ ಸಿಗುವಂತಹ ಸ್ಥಳದಲ್ಲಿಡಬೇಕು.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೨.೧೨.೨೦೨೨)