ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ರತ್ನಗಳ (gemstones) ಉಪಯೋಗವಾಗುತ್ತಿದೆ. ಪ್ರಾಚೀನ ಋಷಿಗಳು, ಜ್ಯೋತಿಷ್ಯರು, ವೈದ್ಯಾಚಾರ್ಯರು ಮುಂತಾದವರು ತಮ್ಮ ಗ್ರಂಥಗಳಲ್ಲಿ ‘ರತ್ನಗಳ ಗುಣಧರ್ಮ ಹಾಗೂ ಉಪಯೋಗ’ಗಳ ವಿಷಯದಲ್ಲಿ ವಿವೇಚನೆ ನೀಡಿದ್ದಾರೆ. ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹದೋಷಗಳ ನಿವಾರಣೆಗಾಗಿ ರತ್ನಗಳನ್ನು ಉಪಯೋಗಿಸಲಾಗುತ್ತದೆ. ರತ್ನಗಳನ್ನು ಧರಿಸುವುದರ ಹಿಂದಿನ ಉದ್ದೇಶ ಹಾಗೂ ಅವುಗಳ ಉಪಯೋಗವನ್ನು ಈ ಲೇಖನದಿಂದ ತಿಳಿದುಕೊಳ್ಳೋಣ.
೧. ರತ್ನಗಳ ಪ್ರಕಾರ
ರತ್ನಗಳಲ್ಲಿ ಖನಿಜ, ಜೈವಿಕ ಇತ್ಯಾದಿ ಪ್ರಕಾರಗಳಿವೆ. ಜೈವಿಕ ರತ್ನಗಳು ಕೀಟಗಳು ಅಥವಾ ಜೀವಜಂತುಗಳಿಂದ ನಿರ್ಮಾಣವಾಗುತ್ತವೆ. ಉದಾ. ಮುತ್ತು (ಮೋತಿ, pearls) ಹಾಗೂ ಹವಳ (corals). ಖನಿಜ ರತ್ನಗಳು ಭೂಗರ್ಭದಲ್ಲಿ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೂರಾರು ವರ್ಷಗಳಲ್ಲಿ ಸಿದ್ಧವಾಗುತ್ತವೆ, ಉದಾ. ಮಾಣಿಕ್ಯ (ಕೆಂಪು ರತ್ನ, ಪದ್ಮರಾಗ, ruby), ಪಚ್ಚೆ (emerald), ನೀಲ (sapphire) ಇತ್ಯಾದಿ. ಅವುಗಳ ಕೆತ್ತನೆ ಮಾಡಿ ಶುದ್ಧ ಮಾಡಲಾಗುತ್ತದೆ.
೨. ರತ್ನ ಧಾರಣೆ ಮಾಡುವ ಹಿಂದಿನ ಉದ್ದೇಶ
ರತ್ನಗಳು ನೈಸರ್ಗಿಕವಾಗಿ ದೊರೆಯುವ ದಿವ್ಯ ವಸ್ತುಗಳಾಗಿವೆ. ರತ್ನಗಳ ಗುಣಧರ್ಮಕ್ಕನುಸಾರ ಅವುಗಳಿಂದ ಸೂಕ್ಷ್ಮ ಊರ್ಜೆ ವಾತಾವರಣದಲ್ಲಿ ಪ್ರಕ್ಷೇಪಣೆಯಾಗುತ್ತಲೇ ಇರುತ್ತದೆ ಹಾಗೂ ಗ್ರಹಗಳಿಂದ ಬರುವ ಸೂಕ್ಷ್ಮ ಊರ್ಜೆಯು ರತ್ನಗಳತ್ತ ಆಕರ್ಷಿಸಲ್ಪಡುತ್ತದೆ. ಆದ್ದರಿಂದ ರತ್ನ ಧರಿಸುವ ವ್ಯಕ್ತಿಯ ಶರೀರ ಹಾಗೂ ಮನಸ್ಸಿನ ಮೇಲೆ ರತ್ನದಲ್ಲಿರುವ ಸೂಕ್ಷ್ಮ ಊರ್ಜೆಯ ಪರಿಣಾಮವಾಗುತ್ತದೆ. ರತ್ನಗಳು ಘನ ಪದಾರ್ಥಗಳಾಗಿರುವುದರಿಂದ ಅವುಗಳಲ್ಲಿ ಈ ಸೂಕ್ಷ್ಮ ಊರ್ಜೆಯು ಹೆಚ್ಚು ಸಮಯದವರೆಗೆ ಉಳಿಯುತ್ತದೆ.
೩. ರತ್ನಗಳು ಮತ್ತು ಗ್ರಹಗಳ ಸಂಬಂಧ
ಪ್ರತಿಯೊಂದು ರತ್ನಕ್ಕೆ ವಿಶಿಷ್ಟ ಬಣ್ಣವಿರುತ್ತದೆ. ಆಧಿದೈವಿಕ ವಿಜ್ಞಾನಕ್ಕನುಸಾರ ಪ್ರತಿಯೊಂದು ಬಣ್ಣದಲ್ಲಿ ಸತ್ತ್ವ, ರಜ ಹಾಗೂ ತಮ ಗುಣಗಳು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಉದಾ. ಕಪ್ಪು ಬಣ್ಣದಲ್ಲಿ ತಮೋಗುಣ, ಕೆಂಪು ಬಣ್ಣದಲ್ಲಿ ರಜೋಗುಣ ಹಾಗೂ ಹಳದಿ ಬಣ್ಣದಲ್ಲಿ ಸತ್ತ್ವಗುಣವು ಕ್ರಮವಾಗಿ ಹೆಚ್ಚು ಪ್ರಮಾಣದಲ್ಲಿರುತ್ತದೆ. ರತ್ನಗಳು ಮತ್ತು ಗ್ರಹಗಳ ಬಣ್ಣದ ಸಮಾನತೆಯಿಂದ ಅವುಗಳ ನಡುವಿನ ಸಂಬಂಧವನ್ನು ನಿರ್ಧರಿಸಲಾಗಿದೆ. ಉದಾ. ಮಾಣಿಕ್ಯವೆಂಬ ಕೆಂಪು ಬಣ್ಣದ ರತ್ನವು ರವಿಗೆ ಸಂಬಂಧಿಸಿದೆ. ಹಳದಿ ಬಣ್ಣದ ಪುಷ್ಪರಾಗ (ಪುಷ್ಯರಾಗ) ರತ್ನವು ಗುರು ಗ್ರಹಕ್ಕೆ ಸಂಬಂಧಿಸಿದೆ.
೪. ಜ್ಯೋತಿಷ್ಯಶಾಸ್ತ್ರದಲ್ಲಿ ರತ್ನಗಳ ಮಹತ್ವ
ವ್ಯಕ್ತಿಯ ಜನ್ಮಕುಂಡಲಿಯಲ್ಲಿ ಯಾವ ಗ್ರಹ ದುರ್ಬಲ ಅಥವಾ ದೂಷಿತವಾಗಿರುತ್ತಯೋ, ಆ ಗ್ರಹಕ್ಕೆ ಸಂಬಂಧಿಸಿದ ರತ್ನವನ್ನು ಧರಿಸಲಾಗುತ್ತದೆ ಅಥವಾ ಶರೀರದಲ್ಲಿ ಯಾವ ಊರ್ಜೆಯನ್ನು ಹೆಚ್ಚಿಸುವ ಆವಶ್ಯಕತೆಯಿದೆಯೋ, ಆ ಊರ್ಜೆಗೆ ಸಂಬಂಧಿಸಿದ ರತ್ನವನ್ನು ಧಾರಣೆ ಮಾಡುವುದು ಲಾಭದಾಯಕವಾಗಿರುತ್ತದೆ. ಉದಾ. ಒಬ್ಬರಲ್ಲಿ ಆತ್ಮವಿಶ್ವಾಸ ಕಡಿಮೆಯಿದ್ದರೆ ಅವರು ರವಿಗೆ ಸಂಬಂಧಿಸಿದ ಮಾಣಿಕ್ಯವನ್ನು ಧರಿಸುವುದು ಅನುಕೂಲಕರವಾಗಿದೆ. ರತ್ನವನ್ನು ಉಂಗುರದಲ್ಲಿ ಹೊಂದಿಸಿ ಧರಿಸುವುದು ಉತ್ತಮ. ಮುಂದಿನ ಕೋಷ್ಟಕದಲ್ಲಿ ‘ರತ್ನಗಳಿಗೆ ಸಂಬಂಧಿಸಿದ ಗ್ರಹ, ಅವುಗಳ ಉಪಯೋಗ ಹಾಗೂ ಯಾವ ಬೆರಳಿನಲ್ಲಿ ಯಾವ ರತ್ನವನ್ನು ಧರಿಸಬೇಕು’, ಎಂಬುದನ್ನು ತೋರಿಸಲಾಗಿದೆ.
ರತ್ನ | ಗ್ರಹ | ಧರಿಸುವುದರಿಂದಾಗುವ ಉಪಯೋಗ | ಬೆರಳು |
---|---|---|---|
ಮಾಣಿಕ್ಯ (ruby) | ರವಿ | ಕರ್ತತ್ವ-ಶೌರ್ಯ-ಧೈರ್ಯ ವೃದ್ಧಿ, ಆರೋಗ್ಯಪ್ರಾಪ್ತಿ, ಪ್ರಾಣಶಕ್ತಿ ಸಿಗುವುದು | ಅನಾಮಿಕೆ |
ಮುತ್ತು (pearl) | ಚಂದ್ರ | ಸುಖಪ್ರಾಪ್ತಿ, ಆನಂದವೃದ್ಧಿ, ಮನೋಬಲ ಹೆಚ್ಚಾಗುವುದು | ಕಿರುಬೆರಳು |
ಹವಳ (coral) | ಮಂಗಲ | ತೇಜ ಮತ್ತು ಆಪ ತತ್ತ್ವಗಳ ಸಂತುಲನ, ಪಚನಸಂಸ್ಥೆಯ ಸುಧಾರಣೆ, ಉಷ್ಣತೆಯ ವಿಕಾರಗಳಿಗೆ ಉಪಯುಕ್ತ | ಅನಾಮಿಕೆ |
ಪಚ್ಚೆ (emerald) | ಬುಧ | ಬೌದ್ಧಿಕ ಕ್ಷಮತೆ ಹೆಚ್ಚಾಗುವುದು, ವಾಕ್‍ಶಕ್ತಿಯ ಸುಧಾರಣೆ, ಮೆದುಳಿಗೆ ಸಂಬಂಧಸಿದ ವಿಕಾರಗಳಿಗೆ ಉಪಯುಕ್ತ | ಕಿರುಬೆರಳು |
ಪುಷ್ಪರಾಗ (yellow sapphire) | ಗುರು | ವಿದ್ಯಾಲಾಭ, ಒಟ್ಟಾರೆ ಅನುಕೂಲತೆ ಲಭಿಸಲು, ಸಾತ್ತ್ವಿಕತೆ ಸಿಗುವುದು | ತರ್ಜನಿ |
ವಜ್ರ (diamond) | ಶುಕ್ರ | ವೀರ್ಯವೃದ್ಧಿ, ವೈವಾಹಿಕ ಸೌಖ್ಯಪ್ರಾಪ್ತಿ, ಇಚ್ಛಾಪೂರ್ತಿಯಾಗುವುದು | ಅನಾಮಿಕೆ |
ನೀಲ (sapphire) | ಶನಿ | ಸಾತತ್ಯ, ಚಿಂತನಶೀಲ ಬದ್ಧಿಯ ವೃದ್ಧಿ, ವಾತವಿಕಾರಗಳಿಗೆ ಉಪಯುಕ್ತ | ಮಧ್ಯಮೆ |
೫. ರತ್ನ ಧಾರಣೆ ಬಗ್ಗೆ ಇವುಗಳನ್ನು ಗಮನದಲ್ಲಿಟ್ಟುಕೊಳ್ಳಿ
ಅ. ಸ್ತ್ರೀಯರು ಎಡ ಕೈಗೆ ಮತ್ತು ಪುರುಷರು ಬಲ ಕೈಗೆ ರತ್ನಗಳನ್ನು ಧರಿಸಬೇಕು. ಯೋಗಶಾಸ್ತ್ರಕ್ಕನುಸಾರ ಎಡ ಕೈ ಚಂದ್ರ ನಾಡಿಗೆ ಮತ್ತು ಬಲ ಕೈ ಸೂರ್ಯನಾಡಿಗೆ ಸಂಬಂಧಿಸಿದೆ.
ಆ. ರತ್ನವನ್ನು ಧರಿಸುವ ಮೊದಲು ಅದಕ್ಕೆ ಮಂತ್ರಸಹಿತ ಅಭಿಷೇಕ ಮಾಡುತ್ತಾರೆ. ಅದರಿಂದ ರತ್ನದ ಮೇಲೆ ಚೈತನ್ಯದ ಸಂಸ್ಕಾರವಾಗುತ್ತದೆ.
ಇ. ರತ್ನ ಯಾವ ಗ್ರಹಕ್ಕೆ ಸಂಬಂಧಿಸಿದೆಯೊ, ಆ ಗ್ರಹದ ವಾರದಂದು ಸೂರ್ಯೋದಯವಾದ ನಂತರ ರತ್ನವನ್ನು ಧಾರಣೆ ಮಾಡಬೇಕು.
ಈ. ರತ್ನದಲ್ಲಿ ಒಡಕ್ಕುಂಟಾದರೆ ಅದನ್ನು ಉಪಯೋಗಿಸಬಾರದು.
೬. ಕೃತ್ರಿಮ (ಕೃತಕ) ರತ್ನಗಳಿಂದ ದೂರವಿರಿ
ಇಂದು ದೊಡ್ಡ ಪ್ರಮಾಣದಲ್ಲಿ ಕೃತ್ರಿಮ (synthetic) ರತ್ನಗಳನ್ನು ತಯಾರಿಸಲಾಗುತ್ತದೆ. ನೈಸರ್ಗಿಕ ಹಾಗೂ ಕೃತ್ರಿಮ ರತ್ನಗಳು ಒಂದೇ ರೀತಿ ಕಾಣುತ್ತವೆ; ಆದರೆ ಕೃತ್ರಿಮ ರತ್ನಗಳು ತುಲನೆಯಲ್ಲಿ ಭಿದುರವಾಗಿರುತ್ತವೆ, ಆದ್ದರಿಂದ ಅವುಗಳಲ್ಲಿ ಕೆತ್ತನೆ ಕಡಿಮೆ ಇರುತ್ತವೆ. ಕ್ರತ್ರಿಮ ರತ್ನಗಳ ಬೆಲೆ ಕಡಿಮೆಯಿರುತ್ತದೆ; ಆದರೆ ನೈಸರ್ಗಿಕ ರತ್ನಗಳಲ್ಲಿರುವ ದೈವೀ ಊರ್ಜೆಯು ಕೃತ್ರಿಮ ರತ್ನಗಳಲ್ಲಿ ಇರುವುದಿಲ್ಲ. ಆದ್ದರಿಂದ ಗ್ರಹದೋಷಗಳ ಹಾಗೂ ವ್ಯಾಧಿಗಳ ನಿವಾರಣೆಗಾಗಿ ನೈಸರ್ಗಿಕ ರತ್ನಗಳನ್ನು ಉಪಯೋಗಿಸುವುದು ಲಾಭದಾಯಕವಾಗಿದೆ.
– ಶ್ರೀ. ರಾಜ ಕರ್ವೆ, ಜ್ಯೋತಿಷ್ಯ ವಿಶಾರದ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ. (೨೦.೧೨.೨೦೨೨)
Good information🙏
Good information and very use full thank you very much
Good information very useful🙏🏾🙏🏾🙏🏾🙏🏾🙏🏾👍