ಸತ್ಸೇವೆ ಸತ್ಸಂಗ – 1

ತ್ಯಾಗ

ಅಷ್ಟಾಂಗ ಸಾಧನೆಯಲ್ಲಿ ‘ತ್ಯಾಗ’ವು ಒಂದು ಮಹತ್ವದ ಹಂತವಾಗಿದೆ. ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ನಾಮಸ್ಮರಣೆ, ಸತ್ಸಂಗ, ಸತ್ಸೇವೆ. ತ್ಯಾಗ, ಪ್ರೀತಿ ಮತ್ತು ಭಾವಜಾಗೃತಿ ಇವು ಅಷ್ಟಾಂಗ ಸಾಧನೆಯ ವಿವಿಧ ಹಂತಗಳಾಗಿವೆ. ಪ್ರತಿಯೊಂದು ಘಟಕಕ್ಕೂ ಅದರದ್ದೇ ಆದ ಸ್ವತಂತ್ರ ಮಹತ್ವವಿದೆ. ಇದಕ್ಕೂ ಮೊದಲಿನ ಸತ್ಸಂಗಗಳಲ್ಲಿ ನಾವು ನಾಮಜಪ, ಸತ್ಸಂಗ, ಸತ್ಸೇವೆ ಮತ್ತು ಸ್ವಭಾವದೋಷ ನಿರ್ಮೂಲನೆ ಈ ವಿಷಯಗಳನ್ನು ವಿವರವಾಗಿ ತಿಳಿದುಕೊಂಡಿದ್ದೇವೆ. ಇನ್ನು ಮುಂದಿನ ಸತ್ಸಂಗಗಳಲ್ಲಿ ನಾವು ತ್ಯಾಗ, ಅಹಂ ನಿರ್ಮೂಲನೆ ಮತ್ತು ಪ್ರೀತಿ ಈ ವಿಷಯಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಇದನ್ನು ‘ತ್ಯಾಗ’ ಈ ವಿಷಯದಿಂದ ಪ್ರಾರಂಭಿಸೋಣ.

ಅಧ್ಯಾತ್ಮದಲ್ಲಿ ತನು-ಮನ-ಧನ ಮತ್ತು ಕೊನೆಗೆ ಸರ್ವಸ್ವವನ್ನೂ ತ್ಯಾಗ ಮಾಡುವುದಿರುತ್ತದೆ. ಈಶ್ವರಪ್ರಾಪ್ತಿಗಾಗಿ ಸಾಧನೆ ಮಾಡುವಾಗ ಒಮ್ಮೆಲೇ ಸರ್ವಸ್ವದ ತ್ಯಾಗ ಮಾಡಲು ಸಾಧ್ಯವಿರುವುದಿಲ್ಲ; ಆದರೆ ನಾವು ಹಂತಹಂತವಾಗಿ ತನು-ಮನ-ಧನ ಹೀಗೆ ತ್ಯಾಗ ಮಾಡುತ್ತಾ ಮುಂದೆ ಸರ್ವಸ್ವದ ತ್ಯಾಗ ಮಾಡಲು ಸಾಧ್ಯವಿದೆ.

ಅ. ತ್ಯಾಗ ಎಂದರೆ ನಿಖರವಾಗಿ ಏನು?

ತ್ಯಾಗದ ಅರ್ಥ ವಿಶಾಲವಾಗಿದೆ. ವಸ್ತುಗಳನ್ನು ಕೊಟ್ಟು ಬಿಡುವುದು ಇದಷ್ಟೇ ತ್ಯಾಗವಲ್ಲ. ತ್ಯಾಗದಲ್ಲಿ ಎಲ್ಲಾ ವಸ್ತುಗಳ ಮೇಲಿನ ಮೋಹವನ್ನು ಬಿಡುವುದು ಮಹತ್ವದ್ದಾಗಿರುತ್ತದೆ. ಗುರುಗಳು, ಶಿಷ್ಯನು ತನ್ನಲ್ಲಿರುವ ವಸ್ತುಗಳನ್ನು ತ್ಯಜಿಸುವಂತೆ ಮಾಡುತ್ತಾರೆ. ಕೊನೆಗೆ ಅವನ ಆಸಕ್ತಿ ಇಲ್ಲದಂತಾದಾಗ ಆತನಿಗೆ ವಿಪುಲವಾಗಿ ನೀಡುತ್ತಾರೆ. ಛತ್ರಪತಿ ಶಿವಾಜಿ ಮಹಾರಾಜರು ಹಿಂದವಿ ಸ್ವರಾಜ್ಯವನ್ನು ಸ್ಥಾಪಿಸಿದರು; ಆದರೆ ಅದನ್ನು ಮಾಡುವಾಗ ಅವರಲ್ಲಿ ಹಿಂದವಿ ಸ್ವರಾಜ್ಯದ ಸ್ಥಾಪನೆಯು ಭಗವಂತನ ಇಚ್ಛೆಯಾಗಿದೆ ಎಂಬ ಭಾವವಿತ್ತು. ‘ಈ ರಾಜ್ಯ ನಿರ್ಮಾಣವಾಗಬೇಕೆಂಬುದು “ಶ್ರೀ’ ಗಳ ಇಚ್ಛೆ|’ ಎನ್ನುತ್ತಿದ್ದರು. ಛತ್ರಪತಿ ಶಿವಾಜಿ ಮಹಾರಾಜರಿಗೆ ಆಸಕ್ತಿಯಿರಲಿಲ್ಲ; ಆದುದರಿಂದಲೇ ಸಮರ್ಥ ರಾಮದಾಸಸ್ವಾಮಿಯವರಿಗೆ ಅವರು ಅರ್ಪಿಸಿದ ರಾಜ್ಯವನ್ನು ಸಮರ್ಥ ರಾಮದಾಸರು ಅವರಿಗೇ ಹಿಂದಿರುಗಿಸಿಬಿಟ್ಟರು.

ಆ. ಸ್ವಾರ್ಥದ ವಿಧಗಳು ಮತ್ತು ಸ್ವಾರ್ಥತ್ಯಾಗ

ತ್ಯಾಗದ ಹಂತವನ್ನು ತಲುಪಲು ಸ್ವಾರ್ಥವನ್ನು ತ್ಯಜಿಸುವುದು ಆವಶ್ಯಕ.

1. ಸ್ವಾರ್ಥದ ವಿಧಗಳು: ಸ್ವಾರ್ಥದಲ್ಲಿ ಮೂರು ವಿಧಗಳಿವೆ – ಕಾಯಿಕ, ವಾಚಿಕ ಮತ್ತು ಮಾನಸಿಕ.

ಅ. ಕಾಯಿಕ (ದೈಹಿಕ) ಸ್ವಾರ್ಥ : ಮತ್ತೊಬ್ಬರಿಗಾಗಿ ನಮ್ಮ ದೇಹಕ್ಕೆ ತೊಂದರೆಯಾಗದಂತೆ ನೋಡಿಕೊಳ್ಳುವುದೆಂದರೆ ಕಾಯಿಕ ಸ್ವಾರ್ಥ. ಉದಾಹರಣೆಗೆ, ಯಾರಾದರೂ ಯಾವುದಾದರೊಂದು ತಿನಿಸನ್ನು ತಿನ್ನಲು ಬಯಸಿದಾಗ ಮತ್ತು ಅದನ್ನು ಅಡುಗೆಮನೆಯಿಂದ ತರಬೇಕಾಗಿದ್ದಲ್ಲಿ ತಾವೇ ಅದನ್ನು ತರಲು ಎದ್ದು ಹೋಗದಿರುವುದು, ಇತರರಿಗೆ ಫ್ಯಾನ್ ಕಡಿಮೆ ವೇಗದಲ್ಲಿ ಬೇಕಾಗಿದ್ದು ನಮಗೆ ಹೆಚ್ಚು ವೇಗದಲ್ಲಿ ಬೇಕಾಗಿದ್ದಾಗ ಫ್ಯಾನಿನ ವೇಗವನ್ನು ಅವರಿಗೋಸ್ಕರ ಕಡಿಮೆ ಮಾಡದಿರುವುದು ಇವುಗಳೆಂದರೆ ಕಾಯಿಕ ಸ್ವಾರ್ಥ. ಕಾಯಿಕ ಸ್ವಾರ್ಥದಲ್ಲಿ ವ್ಯಕ್ತಿಯು ತನ್ನ ಅಭ್ಯಾಸಗಳನ್ನು ಕಾಪಾಡಿಕೊಳ್ಳಲು ಪ್ರಾಧಾನ್ಯತೆಯನ್ನು ಕೊಡುತ್ತಾನೆ. ಇತರರಿಗೋಸ್ಕರ ಸ್ವಲ್ಪವೂ ಕಷ್ಟ ಪಡಲು ವ್ಯಕ್ತಿಯಲ್ಲಿ ಸಿದ್ಧತೆಯಿರುವುದಿಲ್ಲ.

ಆ. ವಾಚಿಕ ಸ್ವಾರ್ಥ : ವಾಚಿಕ ಸ್ವಾರ್ಥ ಎಂದರೆ ‘ನನ್ನ ಮಾತನ್ನು ಎಲ್ಲರೂ ಗೌರವಿಸಬೇಕು ಮತ್ತು ನಾನು ಯಾರೊಂದಿಗಾದರೂ ಹೆಚ್ಚು ಕಡಿಮೆ ಮಾತನಾಡಿದರೆ ಅವರು ಅದನ್ನು ಪ್ರತಿರೋಧವಿಲ್ಲದೆ ಸಹಿಸಿಕೊಳ್ಳಬೇಕು’ ಎಂಬ ಮನೋಭಾವವನ್ನು ಹೊಂದಿರುವುದು! ಕೌಟುಂಬಿಕ ಜೀವನದಲ್ಲಿಯೂ ನಾವು ಬಹಳಷ್ಟು ಬಾರಿ ನೋಡುವುದೇನೆಂದರೆ ತನ್ನ ಮನಸ್ಸಿಗನುಸಾರ ನಡೆಯದಿದ್ದರೆ ಅಥವಾ ತನ್ನನ್ನು ಉತ್ತಮವಾಗಿ ವಿಚಾರಿಸಿಕೊಳ್ಳದಿದ್ದರೆ ವ್ಯಕ್ತಿಯು ಸಂಬಂಧಿಕರೊಂದಿಗೆ ಮಾತು ಬಿಟ್ಟು ಬಿಡುತ್ತಾನೆ. ಇದನ್ನು ವಾಚಿಕ ಸ್ವಾರ್ಥ ಎನ್ನುತ್ತಾರೆ.

ಇ. ಮಾನಸಿಕ ಸ್ವಾರ್ಥ : ’ನನ್ನ ಅಭಿಮತದಂತೆ ಎಲ್ಲರೂ ವರ್ತಿಸಬೇಕು’ ಎಂಬ ಇಚ್ಛೆಯನ್ನು ಮಾನಸಿಕ ಸ್ವಾರ್ಥ ಎನ್ನಬಹುದು.

ಅಹಂನ್ನು ನಷ್ಟ ಮಾಡುವುದಿದ್ದರೆ ಸ್ವಾರ್ಥವನ್ನು ತ್ಯಜಿಸುವ ಆವಶ್ಯಕತೆಯಿದೆ.

2. ಸ್ವಾರ್ಥವನ್ನು ತ್ಯಜಿಸುವುದು ಹೇಗೆ ? ಅಹಂ ಅನ್ನು ಹೇಗೆ ಕಡಿಮೆ ಮಾಡುವುದು ? ಇದಕ್ಕಾಗಿ ಚಿಕ್ಕ ಚಿಕ್ಕ ಪ್ರಯತ್ನಗಳನ್ನು ಮಾಡಬಹುದು. ಇವುಗಳಲ್ಲಿ ಒಂದು ಪ್ರಯತ್ನವೆಂದರೆ ತನಗೆ ಇಷ್ಟವಾಗುವ ವಸ್ತುವನ್ನು ಇನ್ನೊಬ್ಬರಿಗೆ ಕೊಡುವುದು, ಅಂದರೆ ತನ್ನ ಆಸೆಯನ್ನು ನಿಗ್ರಹಿಸುವುದು; ಕೃತಿಯನ್ನು ಮಾಡುವಾಗ ಇತರರ ಬಗ್ಗೆ ವಿಚಾರ ಮಾಡುವುದು; ಇತರರಿಗೆ ಸಹಾಯ ಮಾಡುವುದು! ಹೀಗೆ ಮಾಡುವುದರಿಂದ ನಿಧಾನವಾಗಿ ‘ಸ್ವ’ ಬಗೆಗಿನ ವಿಚಾರಗಳು ಕಡಿಮೆಯಾಗತೊಡಗುತ್ತವೆ ಮತ್ತು ಅಹಂ ಕಡಿಮೆ ಆಗ ತೊಡಗುತ್ತದೆ. ಬಹಳಷ್ಟು ಜನರಿಗೆ ತನ್ನ ಮನೆಯ ಬಗ್ಗೆ, ನೌಕರಿಯ ಬಗ್ಗೆ ಅಹಂಕಾರವಿರುತ್ತದೆ. ಅದನ್ನು ಕಡಿಮೆ ಮಾಡಿಕೊಳ್ಳಲು ತನ್ನ ಮನೆಯನ್ನು ಮನಸ್ಸಿನಲ್ಲಿಯೇ ಗುರುಗಳಿಗೆ ಅರ್ಪಿಸಿ ’ನಾನು ಅವರ ಮನೆಗೆ ವಿಶ್ವಸ್ತನಾಗಿದ್ದೇನೆ’ ಎಂಬ ಭಾವದಿಂದ ಅದನ್ನು ನೊಡಿಕೊಳ್ಳಬೇಕು. ಇದರಿಂದ ಮನೆ, ಮನೆಯಲ್ಲಿನ ವಸ್ತುಗಳು ಮುಂತಾದವುಗಳ ವಿಷಯದ ಅಹಂ ಕಡಿಮೆಯಾಗತೊಡಗುತ್ತದೆ. ನೌಕರಿ ಮಾಡುವಾಗ, ಅದು ಭಗವಂತನ ಕೃಪೆಯಿಂದ ಸಿಕ್ಕಿದೆ, ನಾನು ಮಾಡುತ್ತಿರುವ ಪ್ರತಿಯೊಂದು ಕೃತಿಯ ಕಡೆ ಭಗವಂತನ ಗಮನವಿದೆ ಎಂಬ ಭಾವವನ್ನಿಟ್ಟುಕೊಂಡು ಕೊಟ್ಟ ಕೆಲಸವನ್ನು ಪ್ರಾಮಾಣಿಕತೆಯಿಂದ ಮಾಡಲು ಪ್ರಯತ್ನಿಸಬೇಕು. ಈಶ್ವರನಿಗೆ ಸರ್ವಸ್ವವನ್ನೂ ಅರ್ಪಿಸಲು ಸಾಧ್ಯವಾಗಬೇಕೆಂಬ ಉದ್ದೇಶದಿಂದ ಹಂತಹಂತವಾಗಿ ತನ್ನ ತನು, ಮನ, ಧನ ಮತ್ತು ಪ್ರಾಣವನ್ನು ತ್ಯಾಗ ಮಾಡಲು ಸಾಧ್ಯವಾಗುವ ಅವಶ್ಯಕತೆಯಿದೆ.

ಇ. ತ್ಯಾಗದ ಪ್ರಯೋಜನಗಳು

ತ್ಯಾಗದ ಒಂದು ಪ್ರಮುಖ ಪ್ರಯೋಜನವೆಂದರೆ ತ್ಯಾಗದಿಂದ ಇತರರ ಬಗ್ಗೆ ಸದ್ಭಾವನೆಯು ಉಂಟಾಗಿ ಅವರ ಬಗ್ಗೆ ಪ್ರೀತಿಯೆನಿಸತೊಡಗುತ್ತದೆ. ಕೈವಲ್ಯೋಪನಿಷತ್ತಿನ ಮೂರನೆಯ ಶ್ಲೋಕದಲ್ಲಿ ಹೇಳಿರುವುದೇನೆಂದರ “ನ ಕರ್ಮಣಾ ನ ಪ್ರಜಯಾ ಧನೇನ ತ್ಯಾಗೇನೈಕೇ ಅಮೃತತ್ತ್ವ ಮಾನಶುಃ |’, ಅಂದರೆ ’ಕರ್ಮ, ವಂಶವೃದ್ಧಿ ಅಥವಾ ಧನಗಳಿಂದಲ್ಲ, ತ್ಯಾಗವೊಂದರಿಂದಲೇ ಅಮೃತತ್ತ್ವದ ಪ್ರಾಪ್ತಿಯಾಗುತ್ತದೆ.’

ಮನುಸ್ಮೃತಿಯಲ್ಲಿ ’ಪ್ರಾಪಣಾತ್ ಸರ್ವಕಾಮಾನಾಮ್ ಪರಿತ್ಯಾಗೋ ವಿಶಿಷ್ಯತೇ |’ ಎಂದರೆ ಎಲ್ಲ ಕಾಮನೆಗಳ ಪ್ರಾಪ್ತಿಗಿಂತ ಅವುಗಳ ತ್ಯಾಗದಲ್ಲಿ ಆನಂದವಿದೆ ಎಂದು ಹೇಳಲಾಗಿದೆ.

ಕೃತಿಯ ಸ್ತರದಲ್ಲಿ ತ್ಯಾಗದ ಪ್ರಾರಂಭವೆಂದರೆ ತನುವಿನ ತ್ಯಾಗ. ಕೃತಿಯಿಂದ ಭಾವ ನಿರ್ಮಾಣವಾದ ಮೇಲೆ ಕರ್ಮ ಆಗುತ್ತದೆ ಮತ್ತು ಮನಸ್ಸಿನ ತ್ಯಾಗ ಪ್ರಾರಂಭವಾಗುತ್ತದೆ. ಧನದ ತ್ಯಾಗದಿಂದ ಹಣದ ಆಸಕ್ತಿ ಬಿಟ್ಟು ಹೋಗುತ್ತದೆ. ತ್ಯಾಗದ ಮಹತ್ವವು ಮನವರಿಕೆಯಾದ ನಂತರವೇ ನಿಜವಾದ ಅರ್ಥದಲ್ಲಿ ಪರಮಾರ್ಥದೆಡೆ ನಡಿಗೆ ಪ್ರಾರಂಭವಾಗುತ್ತದೆ.

ಈ. ತನುವಿನ ತ್ಯಾಗ

ಈ ಲೇಖನದಲ್ಲಿ ನಾವು ತನುವಿನ ತ್ಯಾಗ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. ತನುವಿನ ತ್ಯಾಗವೆಂದರೆ  ಗುರುಸೇವೆಗಾಗಿ ದೇಹವನ್ನು ಸವೆಸುವುದು! ಈ ದೇಹವು, ಈ ಮಾನವಜನ್ಮವು ನಮಗೆ ಭಗವಂತನ ಕೃಪೆಯಿಂದ ಸಿಕ್ಕಿದೆ. ಈ ದೇಹದಿಂದ ಗುರುಸೇವೆ ಮಾಡುವುದು, ಧರ್ಮಕಾರ್ಯ ಮಾಡುವುದು, ಭಗವದ್ಭಕ್ತಿ ಮಾಡುವುದು ಎಂದರೆ ತನುವಿನ ತ್ಯಾಗ.

ನಾವು ಸತ್ಸಂಗ ಮತ್ತು ಸತ್ಸೇವೆಗಾಗಿ ಸಮಯ ನೀಡುವುದರ ಮೂಲಕ ನಮ್ಮಿಂದ ತಿಳಿದೋ-ತಿಳಿಯದೆಯೋ ತ್ಯಾಗವಾಗುತ್ತಲೇ ಇರುತ್ತದೆ. ಉದಾಹರಣೆಗೆ ನಾವು ಸತ್ಸಂಗಕ್ಕೆಂದು 1 ಗಂಟೆ ಕುಳಿತಾಗ ಅದು ಒಂದು ರೀತಿಯಲ್ಲಿ ನಮ್ಮ ದೇಹದ ತ್ಯಾಗವೇ ಆಗಿರುತ್ತದೆ . ಗುರುಸೇವೆ ಅಥವಾ ಸತ್ಸೇವೆ ಮಾಡುವುದರಿಂದ ನಮ್ಮ ತನುವಿನ ತ್ಯಾಗವಾಗುತ್ತದೆ.

ಹಿಂದಿನ ಸತ್ಸಂಗಗಳಲ್ಲಿ ನಾವು ಸತ್ಸೇವೆಯ ವಿವಿಧ ಮಾಧ್ಯಮಗಳ ಬಗ್ಗೆ ತಿಳಿದುಕೊಂಡಿದ್ದೇವೆ. ಯಾವುದೋ ಒಂದು ಕಡೆ ಸಾಧನೆಯ ಕುರಿತು ಪ್ರವಚನ ಮಾಡುತ್ತಿದ್ದೇವೆ, ಮನೆ-ಮನೆಗೆ ತೆರಳಿ ಪ್ರಸಾರ ಮಾಡುತ್ತಿದ್ದೇವೆ, ಅರ್ಪಣೆ ಪಡೆಯುವುದಕ್ಕಾಗಿ ಜಿಜ್ಞಾಸುಗಳನ್ನು ಭೇಟಿ ಮಾಡುತ್ತಿದ್ದೇವೆ, ಫಲಕಗಳನ್ನು ಬರೆಯಲು ಹೋಗುತ್ತಿದ್ದೇವೆ, ಕರಪತ್ರಗಳನ್ನು ಹಂಚುತ್ತಿದ್ದೇವೆ ಎಂದಿಟ್ಟುಕೊಳ್ಳಿ; ಇವೆಲ್ಲವುಗಳ ಮೂಲಕ ನಮ್ಮ ತನುವಿನ ತ್ಯಾಗವೇ ಆಗುತ್ತಿರುತ್ತದೆ. ಪ್ರತ್ಯಕ್ಷವಾಗಿ ಆಶ್ರಮಗಳಿಗೆ ಹೋಗಿ ಅಲ್ಲಿ ಸ್ವಚ್ಛತೆ ಮಾಡುವುದು, ಆಶ್ರಮದಲ್ಲಿ ಅಥವಾ ಅನ್ನ ಸಂತರ್ಪಣೆಯಲ್ಲಿ ಅಡುಗೆ ಮಾಡುವುದಂತಹ ಸೇವೆಗಳ ಮೂಲಕವೂ ನಮ್ಮ ತನುವು ಗುರುಕಾರ್ಯಕ್ಕಾಗಿ ಸವೆಯುತ್ತದೆ.

1. ತನುವಿನ ತ್ಯಾಗದಿಂದ ದೇಹಬುದ್ಧಿಯು ಕಡಿಮೆಯಾಗುವುದು : ತನುವಿನ ತ್ಯಾಗ ಮಾಡುವುದರಿಂದಾಗುವ ಎಲ್ಲಕ್ಕಿಂತ ಮಹತ್ವದ ಲಾಭವೆಂದರೆ ದೇಹಬುದ್ಧಿಯು ಕಡಿಮೆಯಾಗುವುದು. ಜನ್ಮ ತಾಳಿ ಬಂದಿರುವ ಪ್ರತಿಯೊಬ್ಬನಿಗೂ ದೇಹಬುದ್ಧಿಯು ಇದ್ದೇ ಇರುತ್ತದೆ. ಆದ್ದರಿಂದಲೇ ಯಾವುದಾದರೊಂದು ಕೃತಿ ಇಷ್ಟ ಅಥವ ಇಷ್ಟವಿಲ್ಲ, ಶ್ರಮದ ಕೆಲಸಗಳನ್ನು ಮಾಡುವುದು ಬೇಡ ಎಂದೆನಿಸುವುದು ಈ ರೀತಿ ಆಗುತ್ತಿರುತ್ತದೆ. ತನುವಿನ ತ್ಯಾಗದಿಂದ ಈ ದೇಹಬುದ್ಧಿಯು ಕಡಿಮೆಯಾಗುತ್ತದೆ.

ಈ ವಿಷಯದಲ್ಲಿ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರ ಉದಾಹರಣೆಯು ಸ್ಪೂರ್ತಿದಾಯಕವಾಗಿದೆ. ಪ.ಪೂ. ಡಾಕ್ಟರರಿಗೆ ಇಂದೂರ ನಿವಾಸಿ ಮಹಾನ ಸಂತರಾದ ಪ.ಪೂ. ಭಕ್ತರಾಜ ಮಹಾರಾಜರು ಗುರುರೂಪದಲ್ಲಿ ಲಭಿಸಿದಾಗ ಅವರು ಗುರುಗಳ ಸೇವೆ ಮಾಡಲು ತನ್ನನ್ನು ತಾನು ಸಂಪೂರ್ಣವಾಗಿ ತೊಡಗಿಸಿಕೊಂಡರು.  ಪ.ಪೂ. ಡಾಕ್ಟರ್ ಆಠವಲೆ ಇವರು ವಿಶ್ವಖ್ಯಾತಿ ಪಡೆದಿರುವ ಸಮ್ಮೋಹನೋಪಚಾರ ತಜ್ಞರಾಗಿದ್ದಾರೆ. ಆ ಕಾಲದಲ್ಲಿ ಅವರಿಗೆ ದೇಶವಿದೇಶಗಳಿಂದ ವ್ಯಾಖ್ಯಾನಗಳನ್ನು ನೀಡಲು ಅಹ್ವಾನಿಸಲಾಗುತ್ತಿತ್ತು. ಹಲವಾರು ಅಂತಾರಾಷ್ಟ್ರೀಯ ಸಂಶೋಧನಾ ನಿಯತಕಾಲಿಕೆಗಳಲ್ಲಿ (’ಜರ್ನಲ್’ಗಳಲ್ಲಿ) ಅವರ ಶೋಧಪ್ರಬಂಧಗಳು ಪ್ರಕಟವಾಗುತ್ತಿದ್ದವು. ಅವರು ಯಶಸ್ವಿ ಹಾಗೂ ವಿಶ್ವವಿಖ್ಯಾತ ಡಾಕ್ಟರರಾಗಿದ್ದರು; ಆದರೆ ಗುರುಗಳ ಆಶ್ರಮದಲ್ಲಿ ಸೇವೆ ಮಾಡುವಾಗ ಅವರಿಗೆ ಎಂದಿಗೂ ಕೀಳರಿಮೆ ಅನ್ನಿಸಲಿಲ್ಲ. ಅವರು ಆಶ್ರಮದಲ್ಲಿ ಸ್ವತಃ ಸ್ವಚ್ಛತೆ ಮಾಡುತ್ತಿದ್ದರು. ಎಲ್ಲಿಯಾದರೂ ಕಸ ಕಂಡರೆ ಅದನ್ನು ಎತ್ತಿ ಕಸದ ಬುಟ್ಟಿಗೆ ಹಾಕುತ್ತಿದ್ದರು; ಶೌಚಾಲಯವನ್ನೂ ಸ್ವಚ್ಛಗೊಳಿಸುತ್ತಿದ್ದರು.

ನಾವೂ ನಮ್ಮ ಅಭಿಮಾನ ಮತ್ತು ಅಹಂಕಾರವನ್ನು ಬದಿಗಿಟ್ಟು ಸಹಜತೆಯಿಂದ ವರ್ತಿಸುವಂತಿರಬೇಕು. ಹಾಗೆ ಮಾಡುವುದರಲ್ಲಿ ಬಹಳ ಆನಂದವಿದೆ. ನಾವು ಕೂಡ ನಾಚಿಕೆಯನ್ನು ಇಟ್ಟುಕೊಳ್ಳದೇ ಮನಃಪೂರ್ವಕವಾಗಿ ಸೇವೆಯನ್ನು ಮಾಡೋಣ. ಗುರುಸೇವೆ ಮಾಡಲು ಅವಕಾಶ ಸಿಕ್ಕಿರುವುದು ನಮ್ಮ ಮಹದ್ಭಾಗ್ಯ. ಅನೇಕ ಜನ್ಮಗಳ ಪುಣ್ಯವಿಲ್ಲದೆ ಮೋಕ್ಷಕ್ಕೆ ದಾರಿ ಸಿಗುವುದಿಲ್ಲ. ನಾವೆಲ್ಲರೂ ಈ  ದಾರಿಯಲ್ಲಿ ಪಯಣಿಸುತ್ತಿದ್ದೇವೆ ಹಾಗಾಗಿ ದಾರಿಯಲ್ಲಿ ಬರುವ ಅಹಂಕಾರ, ದೇಹಬುದ್ಧಿ ಎಂಬ ಅಡೆತಡೆಗಳನ್ನು ತೊರೆದು ಗುರುಸ್ಮರಣೆ ಮಾಡುತ್ತಾ ಸತ್ ಗಾಗಿ ತ್ಯಾಗ ಮಾಡುವ ಅಭ್ಯಾಸ ಮಾಡಿಕೊಳ್ಳೋಣ.

2. ತನುವಿನ ತ್ಯಾಗ ಮಾಡುವುದು ಹೇಗೆ? : ಸತ್ಸೇವೆಗೆ ಹೆಚ್ಚು ಸಮಯ ಕೊಟ್ಟಷ್ಟೂ ನಮ್ಮ ತನುವಿನ ತ್ಯಾಗ ಹೆಚ್ಚಾಗುವುದು. ಸತ್ಸೇವೆ ಮಾಡಲು ಗುರುಗಳ ಆಶ್ರಮಕ್ಕೆ ಹೋಗುವ ಅವಕಾಶ ಎಲ್ಲರಿಗೂ ಸಿಕ್ಕಿಯೇ ಸಿಕ್ಕುವುದು ಎಂದೇನಿಲ್ಲ; ಆದರೆ ‘ನಮ್ಮ ಮನೆಯು ಶ್ರೀಗುರುಗಳ ಆಶ್ರಮವೇ ಆಗಿದೆ’ ಎಂಬ ಭಾವದಿಂದ ಸೇವೆ ಮಾಡಬಹುದು. ಉದಾಹರಣೆಗೆ ಮನೆಯಲ್ಲಿ ಕಸ ಗುಡಿಸುವಾಗ, ಆಶ್ರಮದಲ್ಲಿ ಕಸ ಗುಡಿಸುತ್ತಿದ್ದೇನೆ ಎಂಬ ಭಾವದಿಂದ ಕಸ ಗುಡಿಸುವ ಕೃತಿಯನ್ನು ಸೇವೆಯೆಂದು ಮಾಡಬಹುದು; ಪಾತ್ರೆ ತೊಳೆಯುವಾಗ ಶ್ರೀಗುರುಗಳ ಪಾತ್ರೆ ತೊಳೆಯುತ್ತಿದ್ದೇವೆ ಎಂಬ ಭಾವವನ್ನು ಇಟ್ಟುಕೊಳ್ಳಬಹುದು. ಈಶ್ವರನ ಕೃಪೆಯಿಂದ ದೊರಕಿರುವ ಈ  ದೇಹವನ್ನು ನಾವು ದೇವರಿಗಾಗಿ ಸವೆಸಬೇಕಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ.

3. ಅನುಭೂತಿ : ದೈಹಿಕ ಸೇವೆಯನ್ನು ಮಾಡುವಾಗ, ಹಲವಾರು ಸಾಧಕರಿಗೆ ಬುದ್ಧಿಶಕ್ತಿಗೆ ಮೀರಿದ ಅನುಭೂತಿಗಳು ಬಂದಿವೆ. ಶ್ರೀ ಗುರುದಾಸ್ ಖಾಂಡೆಪಾರ್ಕರ್ ಎಂಬ ಸಾಧಕರು ಶಿಲ್ಪಿಯಾಗಿದ್ದಾರೆ. ಅವರು ದೇವತೆಗಳ ಸಾತ್ತ್ವಿಕ ವಿಗ್ರಹಗಳನ್ನು ತಯಾರಿಸುವ ಸೇವೆ ಮಾಡುತ್ತಾರೆ. ಒಮ್ಮೆ ಒಂದು ನಿರ್ದಿಷ್ಟ ಸಮಯಮಿತಿಯೊಳಗೆ ಅವರು ಶ್ರೀ ಭವಾನಿಮಾತೆಯ ವಿಗ್ರಹವನ್ನು ತಯಾರಿಸಬೇಕಾಗಿತ್ತು; ಆದರೆ ಅದೇ ಸಮಯದಲ್ಲಿ ಅವರಿಗೆ ಕೈ ನೋವು ಹೆಚ್ಚಾಗಿತ್ತು. ಅವರ ಕೈ ತುಂಬಾ ನೋಯುತ್ತಿತ್ತು. ಆದರೆ ಗುರುಗಳ ಆಜ್ಞೆಯ ಪಾಲನೆ ಮಾಡುವ ಭಾವದಿಂದಾಗಿ ಅವರು ಕೈ ನೋವನ್ನು ಗಮನಿಸದೇ ಹಗಲಿರುಳು ತನ್ನನ್ನು ತಾನು ಸಮರ್ಪಿಸಿಕೊಂಡು ಸೇವೆ ಮಾಡಿದರು.

ಕೈ ನೋವು ಇರುವಾಗ ಉಳಿ, ಸುತ್ತಿಗೆಯಿಂದ ನಿರ್ದಿಷ್ಟ ಸಮಯಮಿತಿಯೊಳಗೆ ಸಾತ್ತ್ವಿಕ ಮೂರ್ತಿಯನ್ನು ತಯಾರಿಸುವುದು ಎಷ್ಟು ಕಷ್ಟ ಎಂಬುದನ್ನು ನಾವು ಊಹಿಸಿಕೊಳ್ಳಬಹುದು. ಆದರೆ ಗುರುದಾಸ ರವರು ಆ ಸೇವೆಯನ್ನು ಪೂರ್ಣಗೊಳಿಸಿದರು ಮತ್ತು ಅದೂ ಅಚ್ಚರಿಯುಂಟುಮಾಡುವ ರೀತಿಯಲ್ಲಿ, ಅವರ ತೀವ್ರವಾದ ಕೈ ನೋವು ಸಹ ಮಾಯವಾಯಿತು. ದೇವರಿಗಾಗಿ ದೇಹವನ್ನು ತ್ಯಾಗ ಮಾಡಿದ ಮೇಲೆ ದೇವರು ಹೇಗೆ ಕಾಳಜಿ ವಹಿಸಿಕೊಳ್ಳುತ್ತಾರೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ. ಹಲವಾರು ಸಾಧಕರು, ಕಡು ಬಿಸಿಲಿನಲ್ಲಿ ಪ್ರಸಾರ ಮಾಡುವಾಗ ಸೂರ್ಯನ ಕಿರಣಗಳಿಂದ ತೊಂದರೆಯಾಗದಿರುವುದು, ತಂಪಾದ ಗಾಳಿಯು ಬಂದಂತೆ ಅನುಭವ ಬರುವುದು ಇಂತಹ ಅನುಭೂತಿಗಳನ್ನು ಪಡೆದಿದ್ದಾರೆ. ತ್ಯಾಗ ಮಾಡಿದಾಗ ದೇವರು ಹೇಗೆ ಕಾಳಜಿ ವಹಿಸುತ್ತಾರೆ ಎಂಬುದಕ್ಕೆ ಇದು ಪ್ರತ್ಯಕ್ಷ ಪ್ರಮಾಣವಾಗಿದೆ.

ಉ. ತ್ಯಾಗ ಮಾಡಿದರೆ ಮುಂದೆ ಸಮಸ್ಯೆಗಳು ಬರುವುದಿಲ್ಲವೇ ?

ತ್ಯಾಗ ಮಾಡಿದ ನಂತರ ಆ ವ್ಯಕ್ತಿಗೆ ಭವಿಷ್ಯತ್ಕಾಲದಲ್ಲಿ ತೊಂದರೆಗಳು ಎದುರಾಗುವವೇ ಎಂಬ ಪ್ರಶ್ನೆಯು ಸರ್ವೇಸಾಮಾನ್ಯ ವ್ಯಕ್ತಿಯ ಮನಸ್ಸಿನಲ್ಲಿ ಮೂಡುತ್ತದೆ. ಆದರೆ ಹಾಗಾಗುವುದಿಲ್ಲ. ತ್ಯಾಗದಿಂದ ವ್ಯಕ್ತಿಯ ಆನಂದವು ಹೆಚ್ಚಾಗುತ್ತದೆ. ಸಾಧಕನಿಗೆ ಈಶ್ವರನ ಮೇಲಿರುವ ಶ್ರದ್ಧೆಯು ಹೆಚ್ಚಾಗುತ್ತದೆ ಮತ್ತು ಆಧ್ಯಾತ್ಮಿಕ ಉನ್ನತಿಯು ಬೇಗನೇ ಆಗುತ್ತಾ ಹೋಗುತ್ತದೆ. ತ್ಯಾಗ ಮಾಡಿದರಿಂದ ನಷ್ಟವಾಯಿತು ಎಂಬುದಕ್ಕೇ ಒಂದೇ ಒಂದು ಉದಾಹರಣೆಯೂ ಇಲ್ಲ. ಇದಕ್ಕೆ ವಿರುದ್ಧವಾಗಿ ಸತ್ ಗಾಗಿ ತ್ಯಾಗ ಮಾಡಿದಾಗ ಸಾಧಕನಿಗೆ ಮುಂದುಮುಂದಿನ ಹಂತಗಳ ಅನುಭೂತಿಗಳು ಬರುತ್ತವೆ. ಅರ್ಥಾತ ಇದು ಅನುಭವಿಸಬೇಕಾದ ವಿಷಯವಾಗಿದೆ. ನಮ್ಮ ಪೈಕಿ ಪ್ರತಿಯೊಬ್ಬರ ತಂದೆ ತಾಯಿ ನಮಗಾಗಿ ಒಂದಲ್ಲ ಒಂದು ಸುಖದ ತ್ಯಾಗ ಮಾಡಿದ್ದಾರೆ. ನಾವು ಮನಃಪೂರ್ವಕವಾಗಿ ಮಾಡಿದ ತ್ಯಾಗದಿಂದ ಆಂತರಿಕ ಸಮಾಧಾನವೇ ಲಭಿಸುತ್ತದೆ. ಆದ್ದರಿಂದ, ತ್ಯಾಗ ಮಾಡಿದರೆ ವ್ಯಕ್ತಿಯ ಭವಿಷ್ಯ ಹೇಗಾಗಬಹುದು ಎಂಬುದರ ಬಗ್ಗೆ ಚಿಂತಿಸಬೇಕಾಗಿಲ್ಲ. ಸತ್ ಗಾಗಿ ತ್ಯಾಗ ಮಾಡಿರುವಂತಹ ಪ್ರತಿಯೊಂದು ಜೀವಿಯ ಸಂಪೂರ್ಣ ಕಾಳಜಿಯನ್ನು ವಹಿಸಿಕೊಳ್ಳಲು ಶ್ರೀಗುರುಗಳು ಸಮರ್ಥರಾಗಿರುತ್ತಾರೆ.

ಊ. ಆಪತ್ಕಾಲದ ಹಿನ್ನೆಲೆಯಲ್ಲಿ ದೇಹಬುದ್ಧಿಯನ್ನು ಕಡಿಮೆ ಮಾಡಿಕೊಳ್ಳುವುದರ ಮಹತ್ವ

ಸೇವೆಯ ಮಾಧ್ಯಮದಿಂದ ನಮ್ಮೆಲ್ಲರ ತನುವಿನ ತ್ಯಾಗವು ಆಗುತ್ತಲೇ ಇದೆ. ಹಾಗಾಗಿ ಸತ್ಸೇವೆಗೆ ಹೆಚ್ಚಿನ ಸಮಯವನ್ನು ನೀಡಿ ಅದನ್ನು ಮಾಡಲು ಪ್ರಯತ್ನಿಸೋಣ. ೨೦೨೦-೨೦೨೨ ರಲ್ಲಿ ನಾವು ಕೊರೊನಾ ಬಿಕ್ಕಟ್ಟನ್ನು ಎದುರಿಸುತ್ತಿದ್ದೇವೆ. ಇನ್ನು ಮುಂದಿನ ಕಾಲವು ಅತ್ಯಂತ ಭೀಕರವಾಗಿರಲಿದೆ ಎಂದು ಹಲವಾರು ಸಂತರು ಹೇಳಿದ್ದಾರೆ. ಆ ಅವಧಿಯಲ್ಲಿ ವಿದ್ಯುತ್ ಕೊರತೆ, ನೀರಿನ ಕೊರತೆ ಮತ್ತಿತರ ಸಮಸ್ಯೆಗಳನ್ನೂ ನಾವು ಎದುರಿಸಬೇಕಾಗುವುದು. ಇಂತಹ ಸಮಯದಲ್ಲಿ ನಮ್ಮ ದೇಹಬುದ್ಧಿಯು ಅತ್ಯಂತ ತೀವ್ರವಾಗಿದ್ದರೆ, ಉದಾಹರಣೆಗೆ ಊಟದಲ್ಲಿ ಇಂತಿಂತಹ ಪದಾರ್ಥಗಳು ಇರಲೇ ಬೇಕು ಅಥವಾ ಮಲಗುವಾಗ ನಿರ್ದಿಷ್ಟ ವೇಗದಲ್ಲಿ ಫ್ಯಾನ್ ಇರಲೇ ಬೇಕು, ಮಲಗಲು ಹಾಸಿಗೆಯೇ ಬೇಕು ಈ ವಿಧದ ಅಭ್ಯಾಸಗಳಿಂದ ನಮಗೆ ಅಡ್ಡಿಯುಂಟಾಗಬಹುದು. ನಮಗೆ ವೈದ್ಯಕೀಯ ದೃಷ್ಟಿಯಿಂದ ಕೆಲವು ಸಂಗತಿಗಳು ಆವಶ್ಯಕವಿದ್ದರೆ ಅವುಗಳನ್ನು ಮಾಡಲೇಬೇಕು. ಉದಾಹರಣೆಗೆ, ವೈದ್ಯರು ನಮಗೆ ಊಟದಲ್ಲಿ ಯಾವುದಾರೊಂದು ವಿಶಿಷ್ಟ ಪದಾರ್ಥವನ್ನು ಸೇವಿಸಲು ಹೇಳಿದ್ದರೆ, ಮಲಗುವಾಗ ವಿಶಿಷ್ಟ ವಿಧದ ಮಂಚವನ್ನು ಉಪಯೋಗಿಸಲು ಹೇಳಿದ್ದರೆ ಅದರಂತೆ ಮಾಡಬೇಕು. ಆದರೆ ಯಾವ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಲು ಅಥವಾ ದೇಹಬುದ್ಧಿಯನ್ನು ಕಡಿಮೆ ಮಾಡಲು ಪ್ರಯತ್ನಿಸಲು ಸಾಧ್ಯವಿದೆಯೋ ಅದನ್ನು ಮಾಡಲು ಪ್ರಯತ್ನಿಸೋಣ; ಏಕೆಂದರೆ ಅದರಿಂದ ನಮ್ಮ ತನುವಿನ ತ್ಯಾಗ ಆಗಲಿದೆ. ದೇಹಬುದ್ಧಿ ಕಡಿಮೆಯಾದರೆ ಯಾವುದೇ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತದೆ.

ಎ. ವಾರದ ಧ್ಯೇಯ

ನಾವು ಈ ವಾರದಲ್ಲಿ ತನುವಿನ ತ್ಯಾಗ ಮಾಡುವ ದೃಷ್ಟಿಯಿಂದ ಪ್ರಯತ್ನಿಸೋಣವೇ ? ಅದಕ್ಕಾಗಿ ಸೇವೆಗೆ ಕೊಡುವ ಸಮಯವನ್ನು ಹೆಚ್ಚು ಮಾಡಲು ಸಾಧ್ಯವಿದ್ದರೆ ಹಾಗೆ ಮಾಡೋಣ. ಉದಹರಣೆಗೆ, ಯಾರಾದರೂ ಪ್ರತಿದಿನ 2 ಗಂಟೆಗಳ ಕಾಲ ಸೇವೆ ಮಾಡುತ್ತಿದ್ದರೆ, ಎರಡೂಕಾಲು ಗಂಟೆ ಅಥವಾ ಎರಡೂವರೆ ಗಂಟೆ ಕಾಲ ಸೇವೆ ಮಾಡಬಹುದಾ ಎಂಬುದನ್ನು ಅಭ್ಯಾಸ ಮಾಡಿ ಹಾಗೆ ಮಾಡಲು ಪ್ರಯತ್ನ ಮಾಡೋಣ. ಮನೆಯಲ್ಲಿನ ಕೆಲಸಗಳನ್ನು ಮಾಡುತ್ತಿರುವಾಗ ನಾವು ಶ್ರೀಗುರುಗಳ ಆಶ್ರಮದಲ್ಲಿ ಸೇವೆ ಮಾಡುತ್ತಿದ್ದೇವೆ ಎಂಬ ಭಾವವನ್ನು ಇಟ್ಟುಕೊಂಡು ಸೇವೆಯನ್ನು ಮಾಡೋಣ. ದೇಹಬುದ್ಧಿಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಅನಾವಶ್ಯಕ ಅಭ್ಯಾಸಗಳನ್ನು ಬಿಡಲು ಸಾಧ್ಯವಿದ್ದರೆ ಅದಕ್ಕಾಗಿ ಪ್ರಯತ್ನಿಸೋಣ.

Leave a Comment