ಶರಣಾಗತ ಭಾವ
ಅ. ಭಾವ ಎಂದರೇನು ?
ಹಿಂದಿನ ಲೇಖನಗಳಲ್ಲಿ ನಾವು ಭಾವ ಎಂದರೇನು? ಭಾವಜಾಗೃತಿಗಾಗಿ ಏನು ಪ್ರಯತ್ನ ಮಾಡಬೇಕು ಎಂಬ ವಿಷಯಗಳ ಬಗ್ಗೆ ತಿಳಿದುಕೊಂಡಿದ್ದೆವು. ಭಾವ ಎಂದರೆ ಈಶ್ವರನ ಅಸ್ತಿತ್ವದ ನಿರಂತರ ಅರಿವಿರುವುದು. ಶ್ರೀಕೃಷ್ಣನ ಗೋಪಿಯರು ಉತ್ಕಟ ಭಾವದ ಮೂರ್ತಿಮಂತ ಉದಾಹರಣೆಯಾಗಿದ್ದಾರೆ. ಗೋಪಿಯರಿಗೆ ಧ್ಯಾನದಲ್ಲಿ, ಮನಸ್ಸಿನಲ್ಲಿ, ಕೂರುವಾಗ-ಏಳುವಾಗ, ಮನೆಗೆಲಸ ಮಾಡುವಾಗ ನಿರಂತರವಾಗಿ ಶ್ರೀಕೃಷ್ಣನ ನಿದಿಧ್ಯಾಸವಿರುತ್ತಿತ್ತು. ನಮ್ಮೆಲ್ಲರಲ್ಲಿಯೂ ಭಾವವಿದೆ; ಆದರೆ ಅದನ್ನು ಜಾಗೃತಗೊಳಿಸಲು ಹಾಗೂ ಹೆಚ್ಚಿಸಲು ನಾವು ಪ್ರಯತ್ನಿಸಬೇಕಾಗಿದೆ. ತಾರಕ ಭಾವ, ಮಾರಕ ಭಾವ, ಮಾತೃತ್ವ ಭಾವ, ಪ್ರೀತಿ ಭಾವ, ಕೃತಜ್ಞತಾ ಭಾವ, ಕ್ಷಮಾ ಭಾವ, ದಯಾ ಭಾವ, ಸಾಕ್ಷೀ ಭಾವ, ಶರಣಾಗತ ಭಾವ ಹೀಗೆ ಭಾವದ ಹಲವು ವಿಧಗಳಿವೆ. ಭಾವದ ಪ್ರತಿಯೊಂದು ವಿಧಕ್ಕೂ ಮಹತ್ವ ಇದ್ದೇ ಇದೆ; ಆದರೆ, ಭಗವಂತನಿಗೆ ಶರಣಾಗತ ಭಾವವು ಅತ್ಯಂತ ಪ್ರಿಯವಾದುದು. ಶರಣಾಗತ ವಾತ್ಸಲ್ಯವು ಕೃಪಾಳು ಭಗವಂತನ ವಿಶೇಷತೆಯಾಗಿದೆ. ಶರಣಾಗತನ ಹೃದಯವು ಭಗವಂತನ ನಿವಾಸ ಸ್ಥಾನವಾಗಿರುತ್ತದೆ.
ಆ. ಶರಣಾಗತ ಭಾವದ ಮಹತ್ವ
ವ್ಯಷ್ಟಿ ಸಾಧನೆಗೆ ಸಾಕ್ಷೀಭಾವ ಮತ್ತು ಸಮಷ್ಟಿ ಸಾಧನೆಗೆ ಶರಣಾಗತ ಭಾವವು ಮಹತ್ವದ್ದಾಗಿರುತ್ತದೆ. ಸಾಕ್ಷೀಭಾವ ಎಂದರೆ ಏನೇನು ಘಟಿಸುತ್ತದೆಯೋ ಅದೆಲ್ಲವನ್ನೂ ಭಗವಂತನೇ ಮಾಡಿಸುತ್ತಿದ್ದಾನೆ ಎಂಬ ಭಾವವನ್ನು ಇಟ್ಟುಕೊಂಡು ನಿರ್ಲಿಪ್ತರಾಗಿರುವುದು. ಶರಣಾಗತ ಭಾವ ಎಂದರೆ ಭಗವಂತನಲ್ಲಿ ಶರಣಾಗುವುದು. ಶರಣಾಗತ ಭಾವಕ್ಕೆ ಏನು ಮಹತ್ವವಿದೆ ಎಂಬುದನ್ನು ತಿಳಿದುಕೊಳ್ಳೋಣ. ಶರಣಾಗತ ಭಾವದಿಂದಾಗಿ ಅತ್ಯಂತ ಕಠಿಣವಾಗಿರುವ ಕಾರ್ಯವೂ ಅತ್ಯಂತ ಸುಲಭವಾಗಿ ಆಗುತ್ತದೆ; ಏಕೆಂದರೆ ಶರಣಾಗತ ಭಾವವಿರುವ ಸಾಧಕನ ಮಾಧ್ಯಮದಿಂದ ಸಾಕ್ಷಾತ್ ಈಶ್ವರನೇ ಕಾರ್ಯ ಮಾಡುತ್ತಾನೆ. ಶರಣಾಗತಿಯಲ್ಲಿ ಕರ್ತೃತ್ವದ ಲವಲೇಶವೂ ಇರುವುದಿಲ್ಲ, ಮಾತ್ರವಲ್ಲ ‘ಸರ್ವವೂ ಭಗವಂತನೇ’ ಎಂಬುದರ ಅರಿವು ಆಂತರ್ಯದಲ್ಲಿ ದೃಢವಾಗಿರುತ್ತದೆ. ಆದ್ದರಿಂದ ಭಗವಂತನೂ ಶರಣಾಗತರಾದ ಭಕ್ತರ ಮೇಲೆ ಕೃಪೆಯನ್ನು ಸುರಿಸುತ್ತಾನೆ. ನಮ್ಮೆಲ್ಲೆರಿಗೂ ಮಹಾಭಾರತದಲ್ಲಿನ ದ್ರೌಪದಿ ವಸ್ತ್ರಾಪಹರಣದ ಪ್ರಸಂಗ ತಿಳಿದಿದೆ. ಎಲ್ಲಿಯ ತನಕ ದ್ರೌಪದಿಗೆ ತನ್ನನ್ನು ತಾನು ಅಥವಾ ಪಾಂಡವರು ರಕ್ಷಿಸುವರು ಎಂದೆನೆಸುತ್ತಿತ್ತೋ ಅಲ್ಲಿಯ ತನಕ ಭಗವಂತನು ಅವಳ ಸಹಾಯಕ್ಕೆ ಬರಲಿಲ್ಲ; ಆದರೆ ದ್ರೌಪದಿಯು ಯಾವಾಗ ಶರಣಾಗತ ಭಾವದಿಂದ ಆರ್ತಳಾಗಿ ಶ್ರೀಕೃಷ್ಣನನ್ನು ಕರೆದಳೋ ಆವಾಗ ಶ್ರೀಕೃಷ್ಣನು ಓಡೋಡಿ ಬಂದನು. ಇದು ಶರಣಾಗತಿಯ ಮಹತ್ವ.
ಬಹಳಷ್ಟು ಸಂದರ್ಭಗಳಲ್ಲಿ ನಾವು ಏನೂ ಮಾಡಲು ಸಾಧ್ಯವಿಲ್ಲದಿರುವಾಗ ಅಥವಾ ಯಾವುದಾದರೊಂದು ವಿಷಯವು ನಮ್ಮ ಕ್ಷಮತೆಯನ್ನು ಮೀರಿರುತ್ತದೆಯೋ ಆಗ ನಾವು ಭಗವಂತನನ್ನು ಮೊರೆಹೋಗುತ್ತೇವೆ ಅಥವಾ ಅವನಲ್ಲಿ ಶರಣಾಗುತ್ತೇವೆ. ಆದರೆ ಯಾವ ವಿಷಯಗಳು ನಮ್ಮ ಕ್ಷಮತೆಯನ್ನು ಮೀರಿರುವುದಿಲ್ಲವೋ ಅವುಗಳ ಸಂದರ್ಭದಲ್ಲಿಯೂ ನಾವು ಶರಣಾಗತರಾಗಿರಬೇಕು. ಯಾವುದೇ ವಿಷಯವು ನಮ್ಮಿಂದ ಸಾಧ್ಯವಾಗುತ್ತಿದ್ದರೂ ಭಗವಂತನಲ್ಲಿ ಶರಣಾಗಿ, ’ಹೇ ಭಗವಂತ, ನೀನು ನನ್ನಿಂದ ನಿನಗೆ ಅಪೇಕ್ಷಿತವಾದ ಕೃತಿಯನ್ನು ಮಾಡಿಸಿಕೊ, ನೀನು ನನ್ನಿಂದ ನಾಮಜಪವನ್ನು ಮಾಡಿಸಿಕೊ’ ಎಂದು ಪ್ರಾರ್ಥನೆ ಮಾಡಬೇಕು. ಇದರಿಂದ ತನ್ನಲ್ಲಿ ಶರಣಾಗತ ಭಾವವು ನಿರ್ಮಾಣವಾಗಲು ಸಹಾಯವಾಗುತ್ತದೆ. ಯಾವ ಜೀವಿಗಳಲ್ಲಿ ಶರಣಾಗತ ಭಾವವಿರುತ್ತದೆಯೋ ಆ ಜೀವಿಗಳ ಮೇಲೆ ಶ್ರೀಗುರುಗಳು ತುಂಬಿ-ತುಂಬಿ ಕೃಪೆಯನ್ನು ಸುರಿಸುತ್ತಾರೆ ಮತ್ತು ಇದರಿಂದ ಆ ಜೀವಿಗಳು ಅಲ್ಪಾವಧಿಯಲ್ಲಿ ಈಶ್ವರನೆಡೆಗೆ ಎಂದರೆ ನಿರ್ಗುಣದೆಡೆಗೆ ಹೋಗುತ್ತಾನೆ. ಶರಣಾಗತಿಯಿಂದಾಗಿ ಜೀವಿಯಲ್ಲಿ ಭಗವಂತನ ತತ್ತ್ವವು ಕಾರ್ಯರತವಾಗಿ ಎಲ್ಲವೂ ಸಹಜವಾಗಿ ಆಗಿಬಿಡುತ್ತದೆ.
ಶ್ರೀಮದ್ಭಗವದ್ಗೀತೆಯೆ 18 ನೆಯ ಅಧ್ಯಾಯದಲ್ಲಿ ಶ್ರೀಕೃಷ್ಣ ಹೇಳಿದಾನೆ, ’ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ |’
ಭಗವಾನ ಶ್ರೀಕೃಷ್ಣ ಹೇಳುತ್ತಾನೆ, ’ಎಲ್ಲ ಧರ್ಮಗಳನ್ನೂ (ಕರ್ತವ್ಯಗಳನ್ನೂ) ಬಿಟ್ಟು ಎಂದರೆ ’ನಾನು ಏನು ಮಾಡಬೇಕು ಮತ್ತು ಏನು ಮಾಡಬಾರದು’, ಇಂತಹ ಎಲ್ಲ ವಿಚಾರಗಳನ್ನೂ ಬಿಟ್ಟು ನೀನು ಕೇವಲ ನನ್ನಲ್ಲಿ ಶರಣಾಗು. ನಾನು ನಿನಗೆ ಎಲ್ಲಾ ಪಾಪಗಳಿಂದ ಮುಕ್ತಿ ಕೊಡುವೆನು.’ ಜೀವಿಯು ಶರಣಾಗತನಾದಾಗ ಭಗವಂತನು ಆ ಜೀವಿಯು ಈ ಮೊದಲು ಯಾವ ಪಾಪ-ಪುಣ್ಯಗಳನ್ನು ಮಾಡಿದ್ದಾನೆ ಎಂಬುದನ್ನು ನೋಡುವುದಿಲ್ಲ; ಸ್ವತಃ ಶರಣಾಗತನಾದ ಜೀವಿಯ ಕಲ್ಯಾಣದ ಸಂಪೂರ್ಣ ಭಾರವನ್ನು ತೆಗೆದುಕೊಳ್ಳುತ್ತಾನೆ.
ಶರಣಾಗತ ಭಾವವಿರುವ ಜೀವಿಯ ಪಾರಲೌಕಿಕ ಯಾತ್ರೆಯೂ ಉತ್ತಮವಾಗುತ್ತದೆ. ಮರಣ ಸಮಯದಲ್ಲಿ ಮುಖದಲ್ಲಿ ದೇವರ ನಾಮವಿದ್ದರೆ ಆ ಜೀವಿಯ ಮರಣೋತ್ತರ ಯಾತ್ರೆಯು ಉತ್ತಮವಾಗುತ್ತದೆ ಎಂದು ಹೇಳಲಾಗುತ್ತದೆ; ಆದರೆ ಮರಣ ಸಮಯದಲ್ಲಿ ನಾಮಸ್ಮರಣೆಗಿಂತ ಶರಣಾಗತ ಭಾವಕ್ಕೆ ಹೆಚ್ಚಿನ ಮಹತ್ವವಿದೆ. ಮರಣ ಸಮಯದಲ್ಲಿ ಜೀವಿಯು ಗುರುಚರಣಗಳಲ್ಲಿ ಶರಣಾಗತನಾಗಿದ್ದರೆ ಆ ಜೀವಿಯ ಮುಂದಿನ ಲೋಕಗಳ ಯಾತ್ರೆಯು ವಿಹಂಗಮ ವೇಗದಲ್ಲಿ ಆಗುತ್ತದೆ; ಏಕೆಂದರೆ ಇಂತಹ ಜೀವಿಗಳಿಗೆ ಭೂಲೋಕದಲ್ಲಿಯೇ ಶರಣಾಗತ ಭಾವದ ಸಂಸ್ಕಾರ ಸಿಕ್ಕಿರುವುದರಿಂದ ಇಂತಹ ಜೀವಿಗಳ ಅಹಂಭಾವ ಹೆಚ್ಚಾಗುವ ಸಾಧ್ಯತೆಯು ಅತ್ಯಂತ ಕಡಿಮೆಯಿರುತ್ತದೆ.
ಈ. ಸೂಕ್ಷ್ಮ ಇಂದ್ರಿಯಗಳ ಪ್ರಯೋಗ
ಶರಣಾಗತ ಭಾವದ ಮಹತ್ವವನ್ನು ತಿಳಿದುಕೊಳ್ಳುವುದರೊಂದಿಗೆ ಈಗ ನಾವು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಚಿಕ್ಕ ಪ್ರಯೋಗವನ್ನು ಮಾಡೋಣ. ಕಣ್ಣು ಮುಚ್ಚಿಕೊಳ್ಳೋಣ ಮತ್ತು ’ನನಗೆ ಬರುತ್ತದೆ. ನಾನು ಮಾಡುವೆನು’ ಎಂಬ ವಾಕ್ಯವನ್ನು 1 ನಿಮಿಷ ಮನಸ್ಸಿನಲ್ಲಿ ಹೇಳೋಣ. ಈಗ ನಾವು 1 ನಿಮಿಷ ’ಹೇ ಭಗವಂತಾ, ನೀನು ಮಾಡಿಸಿಕೊ. ನಾನು ನಿನ್ನಲ್ಲಿ ಶರಣಾಗಿದ್ದೇನೆ’ ಎಂಬ ವಾಕ್ಯವನ್ನು ಪುನರುಚ್ಚರಿಸಿ ಮತ್ತು ಏನೆನಿಸುತ್ತದೆ ಎಂದು ನೋಡಿ. ಮೊದಲನೆಯ ಮತ್ತು ಎರಡನೆಯ ಜಪವನ್ನು ಮಾಡುವುದರಿಂದ ನಿಮಗೇನೆನಿಸಿತು ? ಯವ ಜಪವನ್ನು ಮಾಡಿದಾಗ ಒಳ್ಳೆಯದೆನಿಸಿತು?
’ನನಗೆ ಬರುತ್ತದೆ. ನಾನು ಮಾಡುವೆನು’ ಎಂದು ಹೇಳುವುದರ ಹಿಂದೆ ಅಹಂಕಾರವಿದೆ; ಆದ್ದರಿಂದ ಅಲ್ಲಿ ಜಡತ್ವವೆನಿಸುತ್ತದೆ. ಭಗವಂತನಲ್ಲಿ ಶರಣಾದಾಗ ಅಹಂಕಾರವು ಲಯವಾಗುತ್ತದೆ. ಆದ್ದರಿಂದ ಎರಡನೆಯ ಜಪವನ್ನು ಮಾಡಿದಾಗ ಹಗುರವೆನಿಸುತ್ತದೆ, ಅಲ್ಲವೇ?
ಉ. ಶರಣಾಗತ ಭಾವವನ್ನು ಹೆಚ್ಚಿಸಲು ಉಪಾಯ/ಮಾರ್ಗ
ಶರಣಾಗತಿಯ ಮಹತ್ವವನ್ನು ತಿಳಿದುಕೊಂಡ ನಂತರ ನಿಮ್ಮ ಮನಸ್ಸಿನಲ್ಲಿ ಶರಣಾಗತ ಭಾವವನ್ನು ಹೇಗೆ ಹೆಚ್ಚಿಸಿಕೊಳ್ಳುವುದು ಎಂಬ ಪ್ರಶ್ನೆಯು ಉಂಟಾಗುತ್ತಿರಬಹುದು. ಈಗ ಅದನ್ನು ತಿಳಿದುಕೊಳ್ಳೋಣ. ಶರಣಾಗತಿಯು ಮನಸ್ಸಿನ ಒಂದು ಅವಸ್ಥೆಯಾಗಿದೆ. ಯಾವುದೇ ವಯಸ್ಸಿನಲ್ಲಿ ಮತ್ತು ಪರಿಸ್ಥಿತಿಯಲ್ಲಿ ಮನುಷ್ಯನು ಭಗವಂತನಲ್ಲಿ ಶರಣಾಗಬಹುದು. ಶರಣಾಗತ ಭಾವದೆಡೆಗೆ ಸಾಗಲು ಪ್ರಾರ್ಥನೆಯು ಒಂದು ಸರಳವಾದ ಉಪಾಯವಾಗಿದೆ. ನಾವು ಪ್ರಾರ್ಥನೆಯ ಬಗ್ಗೆ ವಿವರವಾಗಿ ತಿಳಿದುಕೊಂಡಿದ್ದೆವು. ಪ್ರಾರ್ಥನೆಯಲ್ಲಿ ಯಾಚಕ ಭಾವ ಮತ್ತು ಅರ್ತ ಭಾವವನ್ನು ತರಲು ಪ್ರಯತ್ನಿಸುವುದು ಒಂದು ರೀತಿ ಭಗವಂತನಲ್ಲಿ ಶರಣು ಹೋಗುವುದೇ ಆಗಿದೆ. ನಾವು ಪ್ರತಿದಿನ ಯಾವ ಪ್ರಾರ್ಥನೆಗಳನ್ನು ಮಾಡುತ್ತೇವೋ ಅವುಗಳನ್ನು ಯಾಚಕರಾಗಿ ಮತ್ತು ಆರ್ತತೆಯಿಂದ ಮಾಡಲು ಪ್ರಯತ್ನಿಸೋಣ. ’ಹೇ ಭಗವಂತಾ, ನನಗೆ ಏನೂ ಬರುವುದಿಲ್ಲ. ನೀನೇ ಬಂದು ನನಗೆ ಸೂಚಿಸು. ನೀನೇ ನನ್ನ ಮನಸ್ಸನ್ನು ಸಂಪೂರ್ಣವಾಗಿ ಶುದ್ಧಗೊಳಿಸು. ಅದನ್ನು ನಿನ್ನ ಚರಣಗಳಲ್ಲಿ ಅರ್ಪಿಸಿಕೊ. ನಾನು ಏನೇನು ಮಾಡುತ್ತಿದ್ದೇನೋ ಅದೆಲ್ಲವೂ ನಿನ್ನ ಚರಣಗಳಲ್ಲಿ ಅರ್ಪಿತವಾಗಲಿ,’ ಎಂಬ ಆಶಯದ ಪ್ರಾರ್ಥನೆಗಳನ್ನು ನಾವು ಮಾಡಬಹುದು. ಪ್ರತಿದಿನ ಭಗವಂತನಿಗೆ ಸಾಷ್ಟಾಂಗ ನಮಸ್ಕಾರ ಮಾಡುವುದರಿಂದ ಶರಣಾಗತ ಭಾವವನ್ನು ಜಾಗೃತಗೊಳಿಸಲು ಸಹಾಯವಾಗುತ್ತದೆ. ಶಿವಾಲಯದಲ್ಲಿ ನಂದಿಯ ಬಲಬದಿಯಿಂದ ಶಿವನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದರೆ ಶರಣಾಗತ ಭಾವವು ಹೆಚ್ಚಾಗುತ್ತದೆ. ಯಾವುದನ್ನೂ ಮಾಡಲು ಸಾಧ್ಯವಾಗದಿದ್ದರೆ ‘ಹೇ ಭಗವಂತ ನಾನು ನಿನ್ನಲಿ ಶರಣು ಬಂದಿದ್ದೇನೆ’ ಎಂದು ಖಂಡಿತ ಹೇಳಬಹುದು.
ಊ. ಶರಣಾಗತಿಯ ಪರಿಣಾಮಗಳು
ಶರಣಾಗತರಾಗುವುದು ಬಹಳ ಕಠಿಣವಲ್ಲ. ನಾವು ಎಷ್ಟು ಅಂತರ್ಮುಖರಾಗುವೆವೋ ಹಾಗೂ ಅಹಂ ನಿರ್ಮೂಲನೆಗಾಗಿ ಪ್ರಯತ್ನ ಮಾಡುವೆವೋ ಶರಣಾಗತಿಯು ಅಷ್ಟೇ ವೇಗದಿಂದ ಸಾಧಿಸಲ್ಪಡುತ್ತದೆ. ಶರಣಾಗತ ಭಾವದಿಂದ ದೇಹದ ಶುದ್ಧಿಯಾಗುತ್ತದೆ. ಶರಣಾಗತ ಭಾವದಲ್ಲಿ ಅಹಂ ಅತ್ಯಂತ ಕಡಿಮೆಯಿರುತ್ತದೆ, ಅಲ್ಲದೇ ಚೈತನ್ಯವು ದೇಹದಲ್ಲಿ ಉಳಿಯುವ ಪ್ರಮಾಣವೂ ಹೆಚ್ಚು ಇರುತ್ತದೆ. ಶರಣಾಗತ ಭಾವದಿಂದಿರುವ ವ್ಯಕ್ತಿಯು ಪ್ರಾರಬ್ಧವನ್ನು ಸ್ವೀಕರಿಸುತ್ತಾನೆ. ಕೆಲವು ಬಾರಿ ಹಲವರಿಂದ ಯಾವ ತಪ್ಪಾಗುತ್ತದೆಯೆಂದರೆ, ತನ್ನ ಮನಸ್ಸಿಗೆ ಅನುರೂಪವಾಗಿ ಆಗದಿದ್ದಾಗ ಅದರ ದೋಷವನ್ನು ಭಗವಂತನ ಮೇಲೆ ಹೇರಲಾಗುತ್ತದೆ.
ಎ. ಶರಣಾಗತಿಯಲ್ಲಿ ಬರುವ ಮುಖ್ಯ ಅಡ್ಡಿ ಎಂದರೆ ಅಹಂಕಾರ !
ಯಾವುದೇ ವಿಷಯದ ಬಗ್ಗೆ ಕೋಪವುಂಟಾಗುವುದು ಮತ್ತು ಕೆಟ್ಟದೆನಿಸುವುದು ಅಹಂಕಾರದ ಲಕ್ಷಣಗಳಾಗಿವೆ. ಆದ್ದರಿಂದ ಶರಣಾಗತ ಭಾವವನ್ನು ಹೆಚ್ಚಿಸಬೇಕಿದ್ದರೆ ತನ್ನಲ್ಲಿರುವ ಅಹಂಕಾರವನ್ನು ಸದಾ ದಮನ ಮಾಡಲು ಪ್ರಯತ್ನ ಮಾಡಬೇಕು. ಶರಣಾಗತರಾಗಲು ಕೆಲವೊಮ್ಮೆ ಬುದ್ಧಿಯೂ ಅಡ್ಡಿಯಾಗುತ್ತದೆ. ಬುದ್ಧಿಯ ಅಡ್ಡಿ ಎಂದರೇನು ? ’ನನ್ನ ಪ್ರಾರ್ಥನೆಯು ಭಗವಂತನವರೆಗೆ ತಲಪುವುದೇ ?’ ಎಂದೆನಿಸುವುದು ಅಥವಾ ’ಭಗವಂತನಲ್ಲಿ ಏಕೆ ಶರಣಾಗಬೇಕು ?’ ಎಂದೆನಿಸುವುದು. ಈ ಅಡ್ಡಿಗಳನ್ನು ನಾವು ಪಾರು ಮಾಡಿದಷ್ಟೂ ಶರಣಾಗತಿಯ ಪ್ರಕ್ರಿಯೆಯು ಸುಲಭ ಹಾಗೂ ಸರಳವಾಗುವುದು.
ಏ. ಪ್ರಾರ್ಥನೆ
ಶರಣಾಗತ ಭಾವವನ್ನು ಹೆಚ್ಚಿಸಲು ನಾವು ಈ ವಾರದಿಂದ ಕೃತಿಯ ಸ್ತರದಲ್ಲಿ ಆವಶ್ಯಕವಿರುವ ಪ್ರಯತ್ನಗಳ ಅಂತರ್ಗತ ನಾವು ದಿನವಿಡೀ ಆರ್ತಭಾವದಿಂದ ಕನಿಷ್ಠ ಐದು ಬಾರಿ ಪ್ರಾರ್ಥನೆಯನ್ನು ಮಾಡೋಣ. ಯಾರಿಗೆ ಸಾಧ್ಯವಿಲ್ಲವೋ ಅವರು ಪ್ರತಿದಿನ ಭಗವಂತನಿಗೆ ಸಾಷ್ಟಾಂಗ ನಮಸ್ಕಾರವನ್ನು ಮಾಡತಕ್ಕದ್ದು. ಈಗ ನಾವು ಭಗವಂತನಿಗೆ ಶರಣಾಗತ ಭಾವದಿಂದ ಪ್ರಾರ್ಥನೆಯನ್ನು ಮಾಡೋಣ. ಕಣ್ಣುಗಳನ್ನು ಮುಚ್ಚಿಕೊಳ್ಳೋಣ. ನಮ್ಮ ಇಷ್ಟದೇವತೆ, ಶ್ರೀಗುರುಗಳ ರೂಪವನ್ನು ಕಣ್ಮುಂದೆ ತಂದುಕೊಳ್ಳೋಣ. ಆ ರೂಪದ ಮುಂದೆ ಸಂಪೂರ್ಣ ಶರಣಾಗತರಾಗಿ ಪ್ರಾರ್ಥನೆಯನ್ನು ಮಾಡೋಣ, ‘ಹೇ ಕೃಪಾಳು ಭಗವಂತ, ಅನಂತ ಜನ್ಮಗಳ ಭೋಗಗಳನ್ನು ಭೋಗಿಸಿದ ನಂತರ ನೀವು ನನಗೆ ಈ ಮನುಷ್ಯಜನ್ಮವನ್ನು ಪ್ರದಾನಿಸಿ ಬಹುದೊಡ್ಡ ಕೃಪೆಯನ್ನು ಮಾಡಿದ್ದೀರಿ; ಆದರೆ, ಹೇ ನಾರಾಯಣ, ನನ್ನ ಜನನವಾದ ನಂತರ ನನ್ನ ಮೂಲ ಧ್ಯೇಯದ ವಿಸ್ಮರಣೆಯಾಯಿತು. ಈಶ್ವರಪ್ರಾಪ್ತಿಯ ಧ್ಯೇಯವನ್ನು ಮರೆತು ಮಾಯೆಯಲ್ಲಿ ಸಿಲುಕಿಕೊಂಡೆನು. ಹೇ ಭಗವಂತಾ, ಈ ಮಾಯೆಯ ಪ್ರಭಾವವು ಎಷ್ಟು ಇದೆಯೆಂದರೆ ಕೆಲವೊಮ್ಮೆ ಇಚ್ಛೆಯಿದ್ದರೂ ನಿಮ್ಮವರೆಗೂ ತಲುಪಲು ನನ್ನ ಪ್ರಯತ್ನಗಳು ಬಹಳ ಕಡಿಮೆಯಾಗುತ್ತವೆ; ಆದರೆ ಹೇ ಭಗವಂತಾ ನಾನು ಸದಾ ನಿಮ್ಮ ಸಾನ್ನಿಧ್ಯದಲ್ಲಿರಬೇಕು. ಹೇ ಭಗವಂತಾ, ನಾನು ನಿಮ್ಮ ಚರಣಗಳಲ್ಲಿ ಸಂಪೂರ್ಣ ಶರಣಾಗಿದ್ದೇನೆ. ನೀವು ಏನು ಮಾಡುತ್ತಿದ್ದೀರೋ ಅದು ನನ್ನ ಒಳಿತಿಗಾಗಿಯೇ ಇದೆ ಎಂಬ ಭಾವವು ಸದಾ ನನ್ನ ಮನಸ್ಸಿನಲ್ಲಿ ನೆಲೆಯಾಗಿರಲಿ. ದಿನೇದಿನೇ ನನ್ನ ಶ್ರದ್ಧೆಯು ದೃಢವಾಗಲಿ. ನೀವು ಈ ಜೀವದಿಂದ ನಿಮಗೆ ಅಪೇಕ್ಷಿತವಿರುವ ಕೃತಿಯನ್ನು ಮಾಡಿಸಿಕೊಳ್ಳಿ. ನನ್ನ ಮನಸ್ಸಿನಲ್ಲಿ ನಿಮಗೆ ಅಪೇಕ್ಷಿತವಿರುವ ವಿಚಾರಗಳೇ ಬರಲಿ. ನಾನು ಸಂಪೂರ್ಣವಾಗಿ ನಿಮ್ಮಲ್ಲಿ ಶರಣಾಗಿ ಬಂದಿದ್ದೇನೆ ಭಗವಂತಾ. ನನ್ನನ್ನು ಉದ್ಧಾರ ಮಾಡಿ. ನಾನು ನಿಮ್ಮಲ್ಲಿ ಸಂಪೂರ್ಣ ಶರಣಾಗಿ ಬಂದಿದ್ದೇನೆ.’
ಈಗ ನಾವು ನಿಧಾನವಾಗಿ ಕಣ್ಣುಗಳನ್ನು ತೆರೆಯೋಣ. ಶರಣಾಗತಿಯಿಂದಾಗಿ ಮನಸ್ಸು ಶಾಂತ ಮತ್ತು ಹಗುರವಾಗುತ್ತದೆ. ನಾವು ಈ ರೀತಿ ಭಗವಂತನಲ್ಲಿ ಶರಣಾಗಲು ಪ್ರಾರ್ಥನೆಯನ್ನು ಮಾಡೋಣ. ನೀವೆಲ್ಲರೂ ಈ ರೀತಿ ಪ್ರಯತ್ನ ಮಾಡುತ್ತೀರಲ್ಲವೇ?