ಕೃತಜ್ಞತೆ
ಕಳೆದ ಲೇಖನದಲ್ಲಿ ಪ್ರಾರ್ಥನೆಯನ್ನು ಏಕೆ ಮಾಡಬೇಕು? ಪ್ರಾರ್ಥನೆಯ ಮೂಲಕ ದೇವರಲ್ಲಿ ಏನು ಕೇಳಬೇಕು? ಮುಂತಾದ ಕೆಲವು ಅಂಶಗಳನ್ನು ತಿಳಿದುಕೊಂಡಿದ್ದೆವು. ಈಗ ಪ್ರಾರ್ಥನೆಗೆ ಜೊಡಿಸಿರುವ ಕೃತಜ್ಞತೆಯ ವಿಷಯವನ್ನು ತಿಳಿದುಕೊಳ್ಳೋಣ. ಕೃತಜ್ಞತೆಯ ಸುಲಭವಾದ ಅರ್ಥವೇನು? ಎಂದರೆ ಉಪಕಾರ ಸ್ಮರಣೆ. ವ್ಯವಹಾರದಲ್ಲಿ ಯಾರಾದರೂ ಏನಾದರೂ ಸಹಾಯ ಮಾಡಿದರೆ, ನಾವು ಅವರು ಮಾಡಿರುವ ಉಪಕಾರವನ್ನು ಸ್ಮರಿಸುತ್ತೇವೆ. ಅಧ್ಯಾತ್ಮದಲ್ಲಿಯೂ ಈಶ್ವರನಿಗೆ ನಮ್ಮೆಲ್ಲರ ಮೇಲಿರುವ ಕೃಪೆಯನ್ನು ಸ್ಮರಿಸಿ ಮನ್ನಣೆ ನೀಡುವುದೆಂದರೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು.
ಸಾಮಾನ್ಯವಾಗಿ ಯಾವುದಾದರೊಂದು ಸಂಕಟದಿಂದ ಹೊರಗೆ ಬಿದ್ದಾಗ ಅಥವಾ ದೊಡ್ಡ ದೊಡ್ಡ ಸಂಕಟಗಳಿಂದ ರಕ್ಷಿಣೆ ದೊರೆತಾಗ ನಾವು ‘ಈಶ್ವರನ ಕೃಪೆಯಾಯಿತು’ ಎನ್ನುತ್ತೇವೆ. ಆದರೆ ಪ್ರತ್ಯಕ್ಷವಾಗಿ ನೋಡಿದರೆ ಕೇವಲ ಸಂಕಟದ ಸಮಯದಲ್ಲಿ ಮಾತ್ರವಲ್ಲ, ಪರಮದಯಾಮಯನಾದ ಈಶ್ವರನು ಪ್ರಾಣಿಮಾತ್ರರ ಮೇಲೆ ಪ್ರತಿಯೊಂದು ಕ್ಷಣಕ್ಷಣಕ್ಕೂ ಕೃಪೆ ತೋರುತ್ತಿರುತ್ತಾನೆ. ಒಂದು ವೇಳೆ ನಮ್ಮ ಮೇಲೆ ಏನಾದರೂ ಸಂಕಟ ಬಂದಲ್ಲಿ, ಅಥವಾ ದುಃಖ ಭೋಗಿಸಬೇಕಾಗಿ ಬಂದರೂ ಆಗ ಅದು ನಮ್ಮ ಪೂರ್ವಜನ್ಮದ ಕರ್ಮಗಳ ಫಲವಾಗಿರುತ್ತದೆ. ದೇವರು ಅದನ್ನು ನಮ್ಮಿಂದ ತೀರಿಸಿಕೊಂಡು ನಮ್ಮ ಪ್ರಾರಬ್ಧವನ್ನು ಕಡಿಮೆ ಮಾಡುತ್ತಾನೆ. ನಾವು ಸಾಧನೆಯನ್ನು ಮಾಡುತ್ತಿದ್ದಲ್ಲಿ ನಮ್ಮ ಪ್ರಾರಬ್ಧಭೋಗವು ಸಹ ಸುಸಹ್ಯವಾಗುತ್ತದೆ.
ಅ. ಕೃತಜ್ಞತೆ ಎಂದರೇನು?
ಈಶ್ವರನು ಸೃಷ್ಟಿಯ ನಿರ್ಮಾಪಕನಾಗಿದ್ದಾನೆ. ನಾವು ಈ ಸೃಷ್ಟಿಯ ಒಂದು ಘಟಕವಾಗಿದ್ದೇವೆ. ಈಶ್ವರನ ವಿಷಯದಲ್ಲಿ ಅಥವಾ ಯಾವುದಾದರೊಂದು ಸ್ವರೂಪದ ವಿಷಯದಲ್ಲಿ ಅರಿವು ಇರುವುದು ಮತ್ತು ಈ ಅರಿವಿನ ಎಲ್ಲ ಶ್ರೇಯಸ್ಸನ್ನು ಈಶ್ವರನಿಗೆ ಅರ್ಪಿಸುವುದು, ಇದಕ್ಕೆ ಕೃತಜ್ಞತೆ ಎನ್ನುತ್ತಾರೆ. ಉದಾಹರಣೆಗೆ, ಪ್ರತಿದಿನ ನಮಗೆ ಸೂರ್ಯನಿಂದ ಬಹಳ ಪ್ರಕಾಶವು ಸಿಗುತ್ತದೆ, ಶಕ್ತಿ ಸಿಗುತ್ತದೆ ಅದು ಸಹ ಉಚಿತವಾಗಿ! ಯುಗಾನುಯುಗಗಳಿಂದ ಒಂದೇ ಒಂದು ದಿನ ವಿಶ್ರಾಂತಿಯನ್ನು ಪಡೆಯದೇ ಒಂದು ದಿನವೂ ಹಿಂದೆಮುಂದೆ ಮಾಡದೇ ಸೂರ್ಯದೇವರು ನಮಗೆ ಪ್ರಕಾಶವನ್ನು ನೀಡುತ್ತಾರೆ. ನಿಸರ್ಗಚಕ್ರಕ್ಕನುಸಾರ ಮಳೆಯು ಬಂದು ನಮಗೆ ನೀರನ್ನು ಲಭ್ಯ ಮಾಡಿಕೊಡುತ್ತದೆ. ನಾವು ಎನೆಲ್ಲ ಆಹಾರವನ್ನು ತಿನ್ನುತ್ತೇವೆಯೋ ಅದು ಜೀರ್ಣವಾಗಿ ಸಿಗುವ ಶಕ್ತಿ ಇರಬಹುದು, ನಮಗೆ ನಿದ್ದೆಯಿಂದ ಎಚ್ಚರವಾಗುವ ಪ್ರಕ್ರಿಯೆ ಇರಬಹುದು, ಇದೆಲ್ಲವನ್ನೂ ಯಾರು ಮಾಡುತ್ತಾರೆ? ಮಾಡುವವನು ಅವನೇ, ಮಾಡಿಸಿಕೊಳ್ಳುವವನೂ ಅವನೇ! ನಮ್ಮ ಶ್ವಾಸವು ನಡೆಯುತ್ತಿದೆ. ನಮ್ಮ ದೇಹದಲ್ಲಿರುವ ಚೈತನ್ಯವು ಕಾರ್ಯನಿರತವಿರುವುದು, ದೇಹವು ನಡೆದಾಡುವುದು, ಮಾತುಕತೆ, ಬುದ್ಧಿಯಿಂದ ವಿಚಾರ ಮಾಡುವುದು, ಕಣ್ರೆಪ್ಪೆ ಮುಚ್ಚುವುದು ಮತ್ತು ತೆರೆಯುವುದು, ಇವೆಲ್ಲವೂ ನಮ್ಮಿಂದ ಯಾವುದೇ ಕೃತಿಯಾಗದೇ ಹಗಲೂ ರಾತ್ರಿ ನಡೆಯುತ್ತಿರುತ್ತವೆ. ಇದು ನಮ್ಮ ಮೇಲಿರುವ ದೇವರ ಕೃಪೆಯಲ್ಲದೇ ಬೇರೆ ಇನ್ನೇನು ಆಗಿರಲು ಸಾಧ್ಯ? ಇವೆಲ್ಲವುಗಳ ಅರಿವನ್ನಿಟ್ಟುಕೊಂಡು ನಾವು ಈಶ್ವರನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಆ. ಭಾವಜಾಗೃತಿಯ ದೃಷ್ಟಿಯಿಂದ ಕೃತಜ್ಞತೆಯ ಮಹತ್ವ
ಕೃತಜ್ಞತೆಗೆ ಭಾವಜಾಗೃತಿಯ ದೃಷ್ಟಿಯಿಂದಲೂ ಅಪಾರ ಮಹತ್ವವಿದೆ. ನಮ್ಮಲ್ಲಿ ಹೆಚ್ಚಿನವರು ಭಕ್ತಿಮಾರ್ಗಿಗಳಾಗಿದ್ದೇವೆ. ಭಕ್ತಿಮಾರ್ಗದಲ್ಲಿ ದೇವರ ಬಗ್ಗೆ ಭಾವಕ್ಕೆ ಅಪಾರ ಮಹತ್ವವಿದೆ. ‘ಭಾವವಿದ್ದಲ್ಲಿ ದೇವರು’ ಎಂದು ಹೇಳಲಾಗಿದೆ. ಹೀಗಿದ್ದರೂ ಪ್ರತಿಯೊಂದು ಕ್ಷಣ ಭಾವಾವಸ್ಥೆಯಲ್ಲಿರುವುದು ಅಥವಾ ಭಾವಜಾಗೃತಿಯಾಗುವುದು ಈಗಿನ ಕಾಲದಲ್ಲಿ ಕಠಿಣವಾಗಿದೆ. ಏಕೆಂದರೆ ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ಹೆಚ್ಚು-ಕಮ್ಮಿ ಪ್ರಮಾಣದಲ್ಲಿ ಸ್ವಭಾವದೋಷ ಮತ್ತು ಅಹಂಗಳ ಗಂಟು ಇದೆ. ಅದು ಎಲ್ಲಿಯ ತನಕ ಇದೆಯೋ ಅಲ್ಲಿಯ ತನಕ ಈಶ್ವರನ ಕೃಪೆ ಅಥವಾ ದೇವರ ಅಸ್ತಿತ್ವವನ್ನು ಸಾತತ್ಯದಿಂದ ಅನುಭವಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು? ಇದಕ್ಕೆ ಅತ್ಯಂತ ಸುಲಭ ಉಪಾಯವಿದೆ, ಅದೇನೆಂದರೆ ಕೃತಜ್ಞತಾಭಾವದಲ್ಲಿರುವುದು! ಕೃತಜ್ಞತಾಭಾವವಿದ್ದಲ್ಲಿ ನಮ್ಮ ದೃಷ್ಟಿಯೇ ಭಾವಮಯ ಮತ್ತು ಸಕಾರಾತ್ಮಕವಾಗುತ್ತದೆ.
ಇ. ಕೃತಜ್ಞತಾಭಾವವನ್ನು ಹೇಗೆ ನಿರ್ಮಾಣ ಮಾಡಬೇಕು?
ಈಗ ಮಹತ್ವದ ಅಂಶವೇನೆಂದರೆ ಕೃತಜ್ಞತಾಭಾವವನ್ನು ಹೇಗೆ ಮೂಡಿಸುವುದು? ಅಥವಾ ಕೃತಜ್ಞತಾಭಾವವನ್ನು ಹೇಗೆ ಹೆಚ್ಚಿಸಿಕೊಳ್ಳುವುದು? ಅದಕ್ಕಾಗಿ ಒಂದು ಸುಲಭವಾದ ಪ್ರಯತ್ನವನ್ನು ನಾವು ಮಾಡಬಹುದು. ಅದೇನೆಂದರೆ ಪ್ರತಿಯೊಂದು ಕೃತಿಯಾದ ನಂತರ ಅದನ್ನು ದೇವರ ಚರಣಗಳಿಗೆ ಅರ್ಪಣೆ ಮಾಡಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಯಾವುದಾದರೊಂದು ವಿಷಯವು ಉತ್ತಮವಾಗಿ ಆದ ನಂತರ, ಅಥವಾ ಯಾರಾದರೂ ನಮ್ಮನ್ನು ಪ್ರಶಂಸಿಸಿದಾಗ ಆಗ ನಮಗೆ ಏನು ಅನಿಸುತ್ತದೆ? ಉದಾಹರಣೆಗೇ ನಾವು ಮಾಡಿದ ಅಡುಗೆಯು ಉತ್ತಮವಾದಾಗ ಮತ್ತು ಕುಟುಂಬದವರು ಅದನ್ನು ಬಹಳ ಹೊಗಳಿದಾಗ ನಮಗೆ ಏನು ಅನಿಸುತ್ತದೆ? ಯಾರಾದರೂ ನಮ್ಮನ್ನು ಪ್ರಶಂಶಿಸುತ್ತಿದ್ದರೆ, ಆಗ ನಮ್ಮ ಮನಸ್ಸು ಸುಖಿಸುತ್ತದೆ, ನಮಗೆ ಒಳ್ಳೆಯದೆನಿಸುತ್ತದೆ, ಮತ್ತು ‘ನಾನು ಚೆನ್ನಾಗಿ ಮಾಡಿದೆ‘ ಎಂದು ಅನಿಸುತ್ತದೆ. ಸರಿಯಿದೆಯಲ್ಲ? ಇಲ್ಲಿ ನಮ್ಮ ವಿಚಾರಗಳ ದಿಶೆಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂದರೆ ‘ದೇವರು ನನ್ನಿಂದ ಈ ಕೃತಿಯನ್ನು ಮಾಡಿಸಿಕೊಂಡರು; ಒಳ್ಳೆಯ ಅಡುಗೆಯನ್ನು ಮಾಡಲು ದೇವರು ಆವಶ್ಯಕವಿರುವ ಎಲ್ಲ ವಸ್ತುಗಳನ್ನು ಒದಗಿಸಿ ಕೊಟ್ಟರು, ಗ್ಯಾಸ್ ಒದಗಿಸಿಕೊಟ್ಟರು, ಎಲ್ಲ ವಸ್ತುಗಳನ್ನು ಯೋಗ್ಯ ಪ್ರಮಾಣದಲ್ಲಿ ಹಾಕಿಸಿಕೊಂಡರು, ನನ್ನ ಮನಸ್ಸಿನ ಸ್ಥಿತಿಯನ್ನು ಉತ್ತಮವಾಗಿರಿಸಿ ನನಗೆ ಅಡುಗೆಯನ್ನು ಮಾಡಲು ಶಕ್ತಿಯನ್ನು ನೀಡಿದರು. ಹಾಗಾಗಿ ಅಡುಗೆಯು ಚೆನ್ನಾಗಿ ಆಗಲು ಸಾಧ್ಯವಾಯಿತು’. ಈ ರೀತಿ ವಿಚಾರಪ್ರಕ್ರಿಯೆಯಾದಲ್ಲಿ ‘ಅಡುಗೆಯು ಚೆನ್ನಾಗಿ ಆಗುವುದು’ ಇದು ಸಹ ದೇವರ ಕೃಪೆಯೇ ಆಗಿದೆ ಎಂದು ಗಮನಕ್ಕೆ ಬರುತ್ತದೆ ಮತ್ತು ದೇವರಲ್ಲಿ ಕೃತಜ್ಞತೆಯು ವ್ಯಕ್ತವಾಗುತ್ತದೆ. ಎಲ್ಲಿ ಮರದ ಒಂದು ಎಲೆಯು ಸಹ ದೇವರ ಇಚ್ಛೆಯಿಲ್ಲದೆ ಅಲುಗಾಡಲಾರದೋ ಅಲ್ಲಿ ನಮ್ಮಿಂದ ಏನಾದರೂ ಆಯಿತು ಎಂದು ತಿಳಿಯವುದು ಎಂದರೆ ಇದು ದಡ್ಡತನ ಅಲ್ಲವೇ?
ಈ. ಕೃತಜ್ಞತೆಯನ್ನು ವ್ಯಕ್ತಪಡಿಸುವುದರ ಮಹತ್ವ ಏನು?
ಅದೇನೆಂದರೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಮ್ಮಲ್ಲಿರುವ ಅಹಂಭಾವ ಕಡಿಮೆಯಾಗುತ್ತದೆ. ಏಕೆಂದರೆ ಕೃತಜ್ಞತೆಯಲ್ಲಿ ಜೀವನದಲ್ಲಿ ಘಟಿಸುವ ಪ್ರತಿಯೊಂದು ಕೃತಿಯ ಶ್ರೇಯಸ್ಸನ್ನು ಈಶ್ವರನಿಗೆ ಅಥವಾ ಗುರುಗಳಿಗೆ ನೀಡಲಾಗುತ್ತದೆ. ಎಲ್ಲವನ್ನೂ ದೇವರೇ ಮಾಡಿಸಿಕೊಳ್ಳುತ್ತಿದ್ದಾರೆ, ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಪ್ರಸಂಗಗಳು ನನಗೆ ಕಲಿಸುವುದಕ್ಕಾಗಿಯೇ ಮತ್ತು ಸಾಧನೆಯಲ್ಲಿ ನನ್ನ ಪ್ರಗತಿಯನ್ನು ಮಾಡಿಸಿಕೊಳ್ಳಲಿಕ್ಕಾಗಿಯೇ ಘಟಿಸುತ್ತಿವೆ ಎಂಬ ಭಾವವು ಮೂಡುತ್ತದೆ. ಕೃತಜ್ಞತೆಯಲ್ಲಿ ಕರ್ಮದ ಫಲವನ್ನು ಈಶ್ವರನಿಗೆ ಅರ್ಪಿಸುತ್ತಾರೆ. ಕರ್ಮಫಲದ ತ್ಯಾಗವಾದುದರಿಂದ ನಮ್ಮಿಂದಾಗುವ ಕರ್ಮಗಳು ‘ಅಕರ್ಮ ಕರ್ಮ’ಗಳಾಗುತ್ತವೆ. ಅಂದರೆ ಕರ್ಮವನ್ನು ದೇವರಿಗೆ ಅರ್ಪಿಸುವುದರಿಂದ ಅದರಿಂದ ಪಾಪ-ಪುಣ್ಯ ಅಥವಾ ಕೊಡಕೊಳ್ಳುವಿಕೆಯ ಲೆಕ್ಕಾಚಾರವು ಉಂಟಾಗುವುದಿಲ್ಲ.
ಉ. ಕೃತಜ್ಞತಾಭಾವದಲ್ಲಿದ್ದ ಕಾರಣ ಆಗುವ ಲಾಭಗಳು
ಕೃತಜ್ಞತಾಭಾವದಲ್ಲಿದ್ದ ಕಾರಣ ಆಧ್ಯಾತ್ಮಿಕ ಸ್ತರದಲ್ಲಿಯೂ ಬಹಳ ಲಾಭವಾಗುತ್ತದೆ. ನಮಗೆ ದೇವರ ಮೇಲಿರುವ ಶ್ರದ್ಧೆ ಹೆಚ್ಚಾಗುತ್ತದೆ. ಮನಸ್ಸಿನ ವಿರುದ್ಧ ಘಟಿಸುವ ಪ್ರಸಂಗಗಳಲ್ಲಿ ಸ್ಥಿರವಾಗಿರಲು ಸಾಧ್ಯವಾಗುತ್ತದೆ. ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯ ಬರುತ್ತದೆ ಮತ್ತು ಜಿಗುಟುತನ ಹೆಚ್ಚಾಗಿ ಪ್ರಯತ್ನಗಳ ವೇಗವು ಹೆಚ್ಚಾಗುತ್ತದೆ. ಪ್ರತಿಯೊಂದು ಕ್ಷಣದಲ್ಲಿ ಆನಂದವನ್ನು ಪಡೆಯಲು ಸಾಧ್ಯವಾಗುತ್ತದೆ.
ಊ. ಕೃತಜ್ಞತೆಯ ಕೆಲವು ಉದಾಹರಣೆಗಳು
ಆರಂಭದ ಹಂತದಲ್ಲಿ ದೇವರ ಕೃಪೆ ಮತ್ತು ದೇವರ ಅಸ್ತಿತ್ವದ ಅರಿವಾಗಲು ಪ್ರಯತ್ನಪೂರ್ವಕವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಉದಾಹರಣೆಗೆ ಬೆಳಗ್ಗೆ ಎದ್ದ ತಕ್ಷಣ ‘ದೇವರೆ, ನಿನ್ನ ಕೃಪೆಯಿಂದ ಎಚ್ಚರವಾಯಿತು ಮತ್ತು ಸಾಧನೆಗೆ ಹೊಸ ದಿನವು ಸಿಕ್ಕಿತು; ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇನೆ’. ಊಟ, ತಿಂಡಿ ಮಾಡಿದ ನಂತರ, ‘ದೇವರೇ, ನಿಮ್ಮ ಕೃಪೆಯಿಂದ ಇಂದು ಈ ಆಹಾರವು ಸಿಕ್ಕಿತು, ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇವೆ’. ಅಡುಗೆಯನ್ನು ಮಾಡಿದ ನಂತರ, ‘ಹೇ ಅನ್ನಪೂರ್ಣೇಶ್ವರಿ ಮಾತೆ, ನಿನ್ನ ಕೃಪೆಯಿಂದ ಇಂದು ಅಡುಗೆಯನ್ನು ಮಾಡಲು ಸಾಧ್ಯವಾಯಿತು. ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞರಾಗಿದ್ದೇನೆ’. ‘ದೇವರೆ ನೀವೇ ನಾಮಜಪವನ್ನು ನೆನಪಿಸಿಕೊಟ್ಟಿದ್ದೀರಿ ಮತ್ತು ನನ್ನಿಂದ ನಾಮಜಪವನ್ನು ಮಾಡಿಸಿಕೊಳ್ಳುತ್ತಿದ್ದೀರಿ ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇನೆ’. ನಮ್ಮ ಮನಸ್ಸಿನ ಸ್ಥಿತಿ ಚೆನ್ನಾಗಿದ್ದು ಆನಂದಿಯಾಗಿದ್ದರೆ – ‘ದೇವರೇ, ನಿಮ್ಮ ಕೃಪೆಯಿಂದಲೇ ಎಲ್ಲವೂ ಸುರಳೀತವಾಗಿ ನಡೆಯುತ್ತಿದೆ, ಮನಸ್ಸು ಆನಂದಿಯಾಗಿದೆ. ಅದಕ್ಕಾಗಿ ನಿಮ್ಮ ಚರಣಗಳಲ್ಲಿ ಕೃತಜ್ಞರಾಗಿದ್ದೇನೆ’ ಎಂದು ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಸಾಧನೆಯನ್ನು ತಿಳಿಸಿ ಕೊಟ್ಟಿದ್ದಕ್ಕೆ ಕೃತಜ್ಞರಾಗಿರಬಹುದು. ಮನುಷ್ಯಜನ್ಮದ ನಿಜವಾದ ಸಾರ್ಥಕತೆಯು ಮೋಕ್ಷಪ್ರಾಪ್ತಿ ಮಾಡಿಕೊಳ್ಳುವಲ್ಲಿಯೇ ಇದೆ. ಜಗತ್ತಿನಲ್ಲಿ ೭೦೦ ಕೋಟಿ ಜನರು ಇದ್ದಾರೆ ಮತ್ತು ಅವರಲ್ಲಿ ಅನೇಕ ಜನರು ಈ ಭೌತಿಕ ಜಗತ್ತನ್ನೇ ಅಂತಿಮ ಎಂದು ತಿಳಿದು ಜೀವಿಸುತ್ತಿದ್ದಾರೆ. ಆದರೆ ಇಷ್ಟು ಜನರಲ್ಲಿ ದೇವರು ನನ್ನನ್ನು ಮಾತ್ರ ಸಾಧನೆಯ ಪಥದಲ್ಲಿ ತಂದಿದ್ದಾರೆ ಎಂಬುದನ್ನು ಗಮನದಲ್ಲಿರಿಸಿದರೆ ನಾವೆಷ್ಟು ಭಾಗ್ಯಶಾಲಿಗಳು ಅನಿಸುತ್ತದೆ ಅಲ್ಲವೇ? ಈ ವಿಚಾರಗಳಿಂದ ಮನಸ್ಸಿನಲ್ಲಿ ಸತತ ಕೃತಜ್ಞತಾಭಾವವು ಮೂಡುತ್ತದೆ.
ಎ. ಕೃತಜ್ಞತಾಭಾವದ ಪರಿಣಾಮ
ಕೃತಜ್ಞತೆಯನ್ನು ವ್ಯಕ್ತಪಡಿಸಲು ದೇವರ ಎದುರಿಗೆ ಹೋಗಿ ನಿಂತುಕೊಳ್ಳುವ ಆವಶ್ಯಕತೆಯಿಲ್ಲ. ಮಾಡುತ್ತಿದ್ದ ಕೃತಿಯಾದ ನಂತರ ನಾವು ಎಲ್ಲಿದ್ದೇವೆಯೋ ಅಲ್ಲಿಂದಲೇ ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಸ್ನಾನಕ್ಕಾಗಿ ಸಿಗುವ ನೀರು, ನಾವು ಧರಿಸುತ್ತಿರುವ ಬಟ್ಟೆ, ಚಪ್ಪಲಿ, ನಮಗೆ ಸಿಕ್ಕಿರುವ ಮೊಬೈಲ್, ಒಳ್ಳೆಯ ಕುಟುಂಬ, ಸಹಾಯ ಮಾಡುವ ಮಿತ್ರರು, ನಮ್ಮ ಅವಯವಗಳು ಇವೆಲ್ಲವುಗಳ ಬಗ್ಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಆರಂಭಿಕ ಹಂತದಲ್ಲಿ ನಮಗೆ ನಾನು ಕೃತಜ್ಞತೆಯನ್ನು ಶಬ್ದಗಳಿಂದ ವ್ಯಕ್ತಪಡಿಸುತ್ತಿದ್ದೇನೆ, ಆದರೆ ಅದು ಯಾಂತ್ರಿಕವಾಗಿ ಆಗುತ್ತಿದೆ, ಮನಸ್ಸಿನಲ್ಲಿ ಆ ಭಾವ ಇರುವುದಿಲ್ಲ ಎಂದು ಅನಿಸುತ್ತದೆ. ಅದರ ಬಗ್ಗೆ ಹೆಚ್ಚು ಚಿಂತೆಯನ್ನು ಮಾಡಬೇಕಾಗಿಲ್ಲ. ನಾವು ಆರಂಭದಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಲು ಮನಸ್ಸಿಗೆ ರೂಢಿ ಮಾಡಿಸಬೇಕು. ಒಂದು ಸಲ ಕೃತಜ್ಞತೆಯ ಸಂಸ್ಕಾರವು ಮನಸ್ಸಿನಲ್ಲಿ ಉಂಟಾದರೆ ೪-೬ ವಾರಗಳಲ್ಲಿಯೇ ಕೃತಜ್ಞತಾಭಾವವು ಮೂಡಲು ಆರಂಭವಾಗುತ್ತದೆ. ಮುಂದೇ ಮುಂದೆ ಆ ಭಾವವು ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಸಾಧನೆಯಲ್ಲಿ ಪ್ರಗತಿಯಾಗತೊಡಗುತ್ತದೆ. ಕೃತಜ್ಞತಾಭಾವವು ಉಂಟಾದರೆ ಕೃತಿಯನ್ನು ಮಾಡುವ ಮೊದಲು, ಕೃತಿಯನ್ನು ಮಾಡುತ್ತಿರುವಾಗ ಮತ್ತು ಕೃತಿಯಾದ ನಂತರ ‘ಈಶ್ವರೇಚ್ಛೆಯಿಂದಲೇ ಎಲ್ಲವೂ ಆಗುತ್ತದೆ, ದೇವರೇ ಎಲ್ಲವನ್ನೂ ಮಾಡುತ್ತಾರೆ,’ ಎಂಬುದರ ಅರಿವಾಗುತ್ತದೆ. ಯಾವುದಾದರೊಂದು ವಿಷಯವು ಮನಸ್ಸಿನ ಇಚ್ಛೆಗನುಸಾರ ನಡೆಯದಿದ್ದರೆ, ಸಿಗದಿದ್ದರೆ, ಸಂಕಟಗಳು ಬಂದರೆ ಅದರಲ್ಲಿಯೂ ದೇವರದ್ದೇ ಕೃಪೆಯನ್ನು ಅನುಭವಿಸಲು ಆಗುತ್ತದೆ, ಮತ್ತು ಆನಂದಿಯಾಗಿರಲು ಸಾಧ್ಯವಾಗುತ್ತದೆ.
ಏ. ಧ್ಯೇಯ
ನಾವು ಈ ವಾರದಲ್ಲಿ ಕೃತಿಯ ಸ್ತರದಲ್ಲಿ ಯಾವ್ಯಾವ ಪ್ರಯತ್ನಗಳನ್ನು ಮಾಡಲಿದ್ದೇವೆ ಎಂದರೆ ಮೊತ್ತಮೊದಲಿಗೆ ನಮಗೆ ಯಾವ್ಯಾವ ವಿಷಯಗಳ ಬಗ್ಗೆ ಕೃತಜ್ಞತೆ ಅನಿಸುತ್ತದೆ ಅಥವಾ ನಾವು ಎಲ್ಲೆಲ್ಲಿ ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು, ಅದನ್ನೆಲ್ಲ ಒಂದು ನೋಟಬುಕ್ ನಲ್ಲಿ ಬರೆಯಬೇಕು ಮತ್ತು ದಿನದಲ್ಲಿ ಕಡಿಮೆಪಕ್ಷ ೧೫ ಸಲ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಏನೂ ಹೊಳೆಯುವುದೇ ಇಲ್ಲ ಎಂದಾದರೆ ದೇವರೇ, ನಿನಗೆ ನಾನು ಕೃತಜ್ಞನಾಗಿದ್ದೇನೆ ಎಂದಾದರೂ ಹೇಳಬಹುದು. ನಾವು ಎಷ್ಟು ಹೆಚ್ಚು ಕೃತಜ್ಞತಾಭಾವದಲ್ಲಿರಲು ಪ್ರಯತ್ನಿಸುತ್ತೇವೆಯೋ ಅಷ್ಟು ನಮ್ಮ ಮನಸ್ಸು, ಹೆಚ್ಚು ಶಾಂತ, ಆನಂದಿ ಮತ್ತು ಸಕಾರಾತ್ಮಕವಾಗಿದೆ ಎಂದು ನಮ್ಮ ಗಮನಕ್ಕೆ ಬರುತ್ತದೆ. ಹಾಗಾಗಿ ಈ ವಾರದಲ್ಲಿ ನಾವೆಲ್ಲರೂ ಹಾಗೆ ಪ್ರಯತ್ನಿಸೋಣ ಅಲ್ಲವೇ?