ಪ್ರಾರ್ಥನೆ
ಬಹುತೇಕ ಜನರು ದೇವರ ದರ್ಶನಕ್ಕಾಗಿ ದೇವಸ್ಥಾನಕ್ಕೆ ಹೋದಾಗ ಪ್ರಾರ್ಥನೆ ಮಾಡುತ್ತಾರೆ. ಈ ಪ್ರಾರ್ಥನೆಯನ್ನು ಏಕೆ ಮಾಡಬೇಕು? ಪ್ರಾರ್ಥನೆಯ ಮೂಲಕ ದೇವರನ್ನು ಏನು ಕೇಳಬೇಕು? ಪ್ರಾರ್ಥನೆಯ ಮೂಲಕ ದೇವರನ್ನು ವ್ಯವಹಾರಿಕ ವಿಷಯಗಳನ್ನು ಕೇಳಿದರೆ, ಅದು ಸರಿಯೇ – ಮುಂತಾದ ಕೆಲವು ಅಂಶಗಳನ್ನು ಇಂದು ನಾವು ಅರ್ಥಮಾಡಿಕೊಳ್ಳಲಿದ್ದೇವೆ.
ಪ್ರಾರ್ಥಿಸುವುದರಿಂದ ಆಗುವ ಮುಖ್ಯ ಪ್ರಯೋಜನವೇನು? ಪ್ರಾರ್ಥನೆಯಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ದಿನವಿಡಿ ಯಾರೊಂದಿಗಾದರೂ ಸಿಟ್ಟಿಗೇಳುವುದು, ನಮ್ಮ ಮನಸ್ಸಿನಂತೆ ಏನೂ ಆಗುವುದಿಲ್ಲ, ಕೆಲಸಗಳು ನಿಧಾನವಾಗಿ ಆಗುತ್ತವೆ, ತಡವಾಗುತ್ತದೆ, ಓಡಾಟವಾಗುತ್ತದೆ ಇದನ್ನೆಲ್ಲ ಅನೇಕರು ಅನುಭವಿಸಿರಬಹುದು. ಇವೆಲ್ಲವುಗಳಿಂದ ದಿನನಿತ್ಯದ ಒತ್ತಡಭರಿತ ಜೀವನದಲ್ಲಿ ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಪ್ರಾರ್ಥನೆಯ ಮೂಲಕ ಆ ಮನಃಶಾಂತಿಯು ದೊರಕುತ್ತದೆ. ಪ್ರಾರ್ಥನೆಯಿಂದ ಸಕಾರಾತ್ಮಕತೆ ಉತ್ಪನ್ನವಾಗುತ್ತದೆ. ಅಸಾಧ್ಯ ವಿಷಯಗಳು ಸಾಧ್ಯವೆಂದು ತೋರುತ್ತವೆ; ಏಕೆಂದರೆ ಪ್ರಾರ್ಥನೆಯಿಂದ ದೇವರ ಆಶೀರ್ವಾದ ಸಿಗುತ್ತದೆ. ಪ್ರಾರ್ಥನೆಗೆ ಅಧ್ಯಾತ್ಮದಲ್ಲಿ ಮಾತ್ರ ಮಹತ್ತ್ವವಿದೆ ಎಂದೇನಿಲ್ಲ, ಅದನ್ನು ವಿಜ್ಞಾನಿಗಳೂ ಒಪ್ಪಿಕೊಂಡಿದ್ದಾರೆ.
ಅ. ಪ್ರಾರ್ಥನೆ ಎಂದರೇನು
ಪ್ರಾರ್ಥನೆ ಅರ್ಥಾತ್ ಒಂದು ವಿಷಯವನ್ನು ಆರ್ತರಾಗಿ ಬೇಡುವುದು ! ಪ್ರಾರ್ಥನೆ ಎಂದರೆ ಬೇಡುವುದು ! ನಮಗೆ ಬೇಕಾದುದನ್ನು ದೇವರಲ್ಲಿ ನಮ್ರತೆಯಿಂದ ಕೇಳುವುದನ್ನು ‘ಪ್ರಾರ್ಥನೆ’ ಎಂದು ಕರೆಯಲಾಗುತ್ತದೆ. ಪ್ರಾರ್ಥನೆಯಲ್ಲಿ ಗೌರವ, ಪ್ರೀತಿ, ಆರ್ತತೆ, ನಂಬಿಕೆ ಮತ್ತು ಭಕ್ತಿಯು ಒಳಗೊಂಡಿರುತ್ತದೆ. ದೇವರನ್ನು ಪ್ರಾರ್ಥಿಸಿ ನಾವು ಯಾವುದೇ ಕೆಲಸವನ್ನು ಮಾಡಿದರೆ, ಆ ಕಾರ್ಯಕ್ಕೆ ಆ ದೇವತೆಯ ಆಶೀರ್ವಾದ ಸಿಗುತ್ತದೆ. ಅಲ್ಲದೆ, ಪ್ರಾರ್ಥನೆಯು ಆತ್ಮಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದ್ದರಿಂದ ಕೆಲಸವು ಉತ್ತಮ ಮತ್ತು ಯಶಸ್ವಿಯಾಗುತ್ತದೆ.
ಆ. ಸ್ಥೂಲದಿಂದ ಸೂಕ್ಷ್ಮದೆಡೆಗೆ ಕೊಂಡೊಯ್ಯುವ ಪ್ರಾರ್ಥನೆ
ಬಹುತೇಕ ಜನರು ತಮ್ಮ ಜೀವನದುದ್ದಕ್ಕೂ ಪೂಜೆ-ಅರ್ಚನೆ, ಧಾರ್ಮಿಕ ಆಚರಣೆಗಳು ಮುಂತಾದ ಕರ್ಮಕಾಂಡಕ್ಕನುಸಾರ ಪೂಜೆಯನ್ನು ಮಾಡುತ್ತಿರುತ್ತಾರೆ. ಕರ್ಮಕಾಂಡಕ್ಕನುಸಾರ ಮಾಡುವ ಪೂಜೆ ಎಂದರೆ ಸ್ಥೂಲದಲ್ಲಿನ ಪೂಜೆ. ಭಗವಂತನ ಸ್ವರೂಪ ಸೂಕ್ಷ್ಮವಾಗಿರುತ್ತದೆ. ಭಗವಂತನನ್ನು ಪಡೆಯಲು, ಆರಾಧನೆಯು ಸಹ ಸ್ಥೂಲದಿಂದ ಸೂಕ್ಷ್ಮದೆಡೆಗೆ ಕರೆದೊಯ್ಯುವಂತಹದ್ದಾಗಿರಬೇಕು. ‘ಸ್ಥೂಲಕ್ಕಿಂತ ಸೂಕ್ಷ್ಮವು ಶ್ರೇಷ್ಠ’ ಎಂಬ ಆಧ್ಯಾತ್ಮಿಕ ತತ್ತ್ವವನ್ನು ಹಿಂದಿನ ಲೇಖನಗಳಲ್ಲಿ ನೋಡಿದ್ದೇವೆ. ದೇವರಿಗೆ ನಾವು ಮನಸ್ಸಿನ ಮಟ್ಟದಲ್ಲಿ ಪ್ರಾರ್ಥನೆ ಮಾಡಲಿಕ್ಕಿರುತ್ತದೆ; ಆದ್ದರಿಂದ ಇದು ‘ಸ್ಥೂಲದಿಂದ ಸೂಕ್ಷ್ಮ’ಕ್ಕೆ ಕೊಂಡೊಯ್ಯುವ ಸರಳವಾದ ಆರಾಧನೆಯಾಗಿದೆ (ಉಪಾಸನೆಯ ಪದ್ಧತಿ). ಸಾಧನೆ ಮಾಡುವಾಗ ದೇವರ ಅನುಸಂಧಾನದಲ್ಲಿರುವುದು ಮುಖ್ಯ. ಸ್ವಲ್ಪ ಸ್ವಲ್ಪ ಸಮಯದ ಅಂತರದಲ್ಲಿ ಪ್ರಾರ್ಥನೆ ಮಾಡುವುದರಿಂದ ದೇವರೊಂದಿಗೆ ಅನುಸಂಧಾನ ಮಾಡಲು ಸುಲಭವಾಗುತ್ತದೆ.
ಇ. ಪ್ರಾರ್ಥನೆಯ ಪರಿಣಾಮಗಳು
ಯಾವಾಗ ನಾವು ಶ್ರದ್ಧೆಯಿಂದ ಪ್ರಾರ್ಥಿಸುತ್ತೇವೆಯೋ ಆಗ ನಮ್ಮ ಅಡಚಣೆ ಅಥವಾ ಚಿಂತೆಗಳು ಕಡಿಮೆಯಾಗುತ್ತವೆ. ಪ್ರಾರ್ಥನೆಯು ಚಿಂತೆಯನ್ನು ಕಡಿಮೆ ಮಾಡುತ್ತದೆ ಮತ್ತು ಚಿಂತನೆಯನ್ನು ಹೆಚ್ಚಿಸುತ್ತದೆ. ಮನಸ್ಸು ಕಾರ್ಯನಿರತವಿರುವ ತನಕ ಆಲೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರುತ್ತವೆ. ನಾವು ದೈಹಿಕವಾಗಿ ಆರೋಗ್ಯವಂತರಾಗಿದ್ದರೂ, ಮನಸ್ಸಿನಲ್ಲಿ ಆಲೋಚನೆ(ವಿಚಾರ)ಗಳು ಬರುತ್ತಲೇ ಇರುತ್ತವೆ. ನಮ್ಮ ಹೆಚ್ಚಿನ ಶಕ್ತಿ ಈ ಆಲೋಚನೆಗಳಲ್ಲಿ ಖರ್ಚಾಗುತ್ತದೆ. ಆಲೋಚನೆಗಳಿಂದ ಮನಸ್ಸಿನ ಶಕ್ತಿ ವ್ಯಯವಾಗುವುದನ್ನು ತಪ್ಪಿಸಲು ಪ್ರಾರ್ಥನೆಯು ಉಪಯುಕ್ತವಾಗಿದೆ. ಪ್ರಾರ್ಥನೆಯು ಅಸಾಧ್ಯವಾದುದನ್ನು ಸಾಧ್ಯಗೊಳಿಸುತ್ತದೆ. ದ್ರೌಪದಿಯ ವಸ್ತ್ರಾಪಹರಣದ ಘಟನೆಯು ನಮಗೆಲ್ಲ ಗೊತ್ತೇ ಇದೆ. ಎಲ್ಲಿಯ ತನಕ ದ್ರೌಪದಿ ತನ್ನನ್ನು ತಾನು ರಕ್ಷಿಸಿಕೊಳ್ಳಬಲ್ಲೆ ಅಥವಾ ಪಾಂಡವರು ತನ್ನನ್ನು ರಕ್ಷಿಸುತ್ತಾರೆ ಎಂದು ಭಾವಿಸುತ್ತಿದ್ದಳೋ ಅಲ್ಲಿಯ ತನಕ ಶ್ರೀಕೃಷ್ಣನು ಅವಳ ಸಹಾಯಕ್ಕೆ ಬರಲಿಲ್ಲ; ಆದರೆ ದ್ರೌಪದಿಯು ಉತ್ಕಟ ಭಾವದೊಂದಿಗೆ ಶ್ರೀಕೃಷ್ಣನಲ್ಲಿ ಮೊರೆಯಿಟ್ಟಾಗ, ಶ್ರೀಕೃಷ್ಣನು ಅವಳ ಸಹಾಯಕ್ಕೆ ಧಾವಿಸಿ ಬಂದನು. ಇದೇ ಪ್ರಾರ್ಥನೆಯ ಮಹತ್ವ.
ಪ್ರಾರ್ಥನೆಯು ನಮ್ಮ ಅಹಂಕಾರವನ್ನು ಬೇಗನೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಹಂಕಾರವು ಮಾನವ ಜೀವನದಲ್ಲಿ ದುಃಖವನ್ನು ಉಂಟುಮಾಡುತ್ತದೆ. ದೇವರು ಸರ್ವಶಕ್ತಿವಂತ, ಸರ್ವಜ್ಞ, ಸರ್ವವ್ಯಾಪಿಯಾಗಿದ್ದಾನೆ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಮನುಷ್ಯನು ಪ್ರಾರ್ಥನೆಯ ಮೂಲಕ ಸರ್ವಶಕ್ತಿವಂತ ದೇವರಿಗೆ ಶರಣಾಗುತ್ತಾನೆ. ಪ್ರಾರ್ಥನೆಯ ಮೂಲಕ ಅವನು ದೇವರಲ್ಲಿ ಕಾರ್ಯವನ್ನು ಮಾಡಲು ಬೇಡುತ್ತಾರೆ; ಆದ್ದರಿಂದ ಇದು ಅವನ ಕರ್ತೃತ್ವವನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.
ಈ. ಪ್ರಾರ್ಥನೆಯಲ್ಲಿ ಏನನ್ನು ಬೇಡಬೇಕು?
ಪ್ರಾರ್ಥನೆ ಮಾಡಿದುದರಿಂದಾಗುವ ಪರಿಣಾಮಗಳು ಅಥವಾ ಲಾಭಗಳನ್ನು ನಾವು ತಿಳಿದುಕೊಂಡೆವು; ಆದರೆ ಪ್ರಾರ್ಥನೆಯಿಂದ ಸಾಧನೆಯ ವಿಷಯದಲ್ಲಿ ನಮಗೆ ಯಾವಾಗ ಲಾಭ ಸಿಗುತ್ತದೆ ? ನಮ್ಮ ಪ್ರಾರ್ಥನೆಗಳು ನಿಷ್ಕಾಮವಾಗಿರುವಾಗ, ನಮ್ಮ ಪ್ರಾರ್ಥನೆಗಳು ಆಧ್ಯಾತ್ಮಿಕ ಮಟ್ಟದಲ್ಲಿದ್ದಾಗ ನಮಗೆ ಪ್ರಾರ್ಥನೆಯ ಲಾಭ ಸಿಗುತ್ತದೆ! ವ್ಯವಹಾರಿಕ ಯಶಸ್ಸನ್ನು ಸಾಧಿಸಲು, ಇಚ್ಛೆಗಳನ್ನು ಪೂರೈಸಲು ಅಥವಾ ನಮ್ಮ ಯಾವುದಾದರೊಂದು ವ್ಯಾವಹಾರಿಕ ತೊಂದರೆಗಳನ್ನು ತೊಡೆದುಹಾಕಲು ಪ್ರಾರ್ಥನೆ ಮಾಡುವುದಕ್ಕಿಂತ, ಸಾಧನೆಗೆ ಪೂರಕವಾದಂತಹ ಪ್ರಾರ್ಥನೆಯನ್ನೇ ದೇವರಲ್ಲಿ ಮಾಡಬೇಕು. ಏಕೆಂದರೆ ನಮ್ಮ ವ್ಯವಹಾರಿಕ ಜೀವನದಲ್ಲಿ ಹೆಚ್ಚಿನ ಘಟನೆಗಳು ಪ್ರಾರಬ್ಧದಿಂದ ಉಂಟಾಗಿರುತ್ತವೆ ಮತ್ತು ನಾವು ಆ ಪ್ರಾರಬ್ಧವನ್ನು ಭೋಗಿಸಿಯೇ ತೀರಿಸಬೇಕಾಗುತ್ತದೆ. ಸಾಧನೆ ಮಾಡಿದರೆ ಪ್ರಾರಬ್ಧವನ್ನು ಸಹಿಸುವ ಶಕ್ತಿಯು ಸಿಗುತ್ತದೆ. ಅದಲ್ಲದೆ, ಪ್ರಾರಬ್ಧದಲ್ಲಿ ಇಂತಿಂತಹ ವಿಷಯವು ಸಿಗಬೇಕು ಎಂದಿದ್ದಲ್ಲಿ, ಪ್ರಾರ್ಥಿಸದಿದ್ದರೂ ಅದು ಸಿಗುತ್ತದೆ. ಮತ್ತು ] ಪ್ರಾರಬ್ಧದಲ್ಲಿ ಇಂತಿಂತಹ ವಿಷಯ ಸಿಗಲಾರದು ಎಂದಿದ್ದಲ್ಲಿ, ಪಾರ್ಥನೆ ಮಾಡಿದರೂ ಅದು ಸಿಗುವುದಿಲ್ಲ. ಆದ್ದರಿಂದ, ದೇವರಲ್ಲಿ ಪ್ರಾರ್ಥಿಸುವಾಗ ಮಾಯೆಗೆ ಸಂಬಂಧಿಸಿರುವ ಏನನ್ನಾದರೂ ಕೇಳುವುದು ಎಂದರೆ ಶಾಶ್ವತನಾದ ಭಗವಂತನಲ್ಲಿ ಅಶಾಶ್ವತವಾದದ್ದನ್ನು ಬೇಡಿದಂತಾಗುತ್ತದೆ! ನಾವು ಪ್ರಾರ್ಥನೆಯಲ್ಲಿ ಮಾಯೆಗೆ ಸಂಬಂಧಿತ ವಿಷಯಗಳನ್ನು ಕೇಳಬಾರದು ಎಂಬುದಕ್ಕೆ ಇನ್ನೊಂದು ಕಾರಣವೆಂದರೆ ನಾವು ಕೆಲವು ವ್ಯಾವಹಾರಿಕ ಆಸೆಗಳು ಪೂರ್ಣವಾಗಬೇಕೆಂದು ದೇವರನ್ನು ಪೂಜಿಸುತ್ತಿದ್ದರೆ ಅದು ಸಕಾಮ ಸಾಧನೆಯಾಗಿದೆ. ಅದರಿಂದ ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ನಿಜವಾದ ಅರ್ಥದಿಂದ ಏನೂ ಲಾಭವಾಗುವುದಿಲ್ಲ. ಆದ್ದರಿಂದ, ಪ್ರಾರ್ಥನೆ ಮಾಡುವಾಗ, ಸಾಧನೆಗೆ ಪೂರಕವಾದುದನ್ನೇ ದೇವರಲ್ಲಿ ಬೇಡಬೇಕು. ಸಂತರು ಸಹ ದೇವರ ಬಳಿ “ದೇವರೇ, ನಾನು ನಿನ್ನ ಮರೆವಾಗದಂತಹ ಶಾಶ್ವತ ಆಶೀರ್ವಾದವನ್ನೇ ನೀಡು ಉಡುಗೊರೆಯಾಗಿ ನೀಡು” ಎಂದು ಶಾಶ್ವತ ಹಾಗೂ ಚಿರಂತನವಾದುದನ್ನೇ ಬೇಡಿದ್ದಾರೆ.
ಉ. ಆಧ್ಯಾತ್ಮಿಕ ಸ್ತರದ ಪ್ರಾರ್ಥನೆಯ ಕೆಲವು ಉದಾಹರಣೆಗಳು
ಆಧ್ಯಾತ್ಮಿಕ ಸ್ತರದ ಪ್ರಾರ್ಥನೆ ಮಾಡುವುದು ಅಥವಾ ಸಾಧನೆಗೆ ಪೂರಕವಾದ ಪ್ರಾರ್ಥನೆ ಎಂದರೆ ಏನು, ಅವುಗಳನ್ನು ಹೇಗೆ ಮಾಡಲು ಸಾಧ್ಯವಿದೆ ಎಂಬ ಪ್ರಶ್ನೆಗಳು ನಿಮ್ಮ ಮನಸ್ಸಿನಲ್ಲಿ ಇರಬಹುದು. ಅವುಗಳ ಕುರಿತು ಈಗ ನಾವು ತಿಳಿದುಕೊಳ್ಳೋಣ. ದೇವಸ್ಥಾನಕ್ಕೆ ಹೋದ ನಂತರ ಅಥವಾ ದೇವರ ಮುಂದೆ ನಿಂತ ನಂತರ ಮಾತ್ರ ಪ್ರಾರ್ಥನೆ ಮಾಡಬೇಕು ಎಂದೇನೂ ಇಲ್ಲ. ನಾವು ದಿನವಿಡೀ ಅನೇಕ ಕೆಲಸಗಳನ್ನು ಮಾಡುತ್ತೇವೆ. ನಾವು ಅದನ್ನು ಮಾಡುವ ಮೊದಲು, ನಾವು ದೇವರಿಗೆ ಪ್ರಾರ್ಥನೆ ಮಾಡಬಹುದು.
ಹೇ ಭಗವಂತ, ನನ್ನ ಸಾಧನೆಯಲ್ಲಿ ಬರುವ ಅಡೆತಡೆಗಳು ದೂರವಾಗಲಿ.
ನನಗೆ ನಾಮಜಪ ಮಾಡಲು ನೆನಪಾಗಲಿ. ಹೇ ಭಗವಂತ, ನನ್ನಿಂದ ಏಕಾಗ್ರತೆಯಿಂದ ಮತ್ತು ಭಾವಪೂರ್ಣವಾಗಿ ಜಪ ಮಾಡಿಸಿಕೊ.
ಹೇ ಭಗವಂತಾ, ದೇವರಲ್ಲಿ ನನ್ನ ಶ್ರದ್ಧೆ ಬೆಳೆಯಲಿ.
ದಿನವಿಡೀ ನಡೆಯುವ ಪ್ರತಿಯೊಂದು ಘಟನೆಯಲ್ಲಿ ನಾನು ಶಾಂತವಾಗಿ, ಸ್ಥಿರವಾಗಿ ಮತ್ತು ಸಂತೋಷವಾಗಿ ಇರುವಂತಾಗಲಿ.
ನನ್ನ ಪ್ರತಿಯೊಂದು ಕ್ರಿಯೆಯೂ ಒಂದು ಸಾಧನೆಯಾಗಲಿ, ಎಂದು ಪ್ರಾರ್ಥನೆ ಮಾಡಬಹುದು.
ಹೇ ನಾರಾಯಣಾ, ನನಗೆ ಪ್ರತಿಯೊಂದು ಪರಿಸ್ಥಿತಿಯನ್ನು ಸ್ವೀಕರಿಸಲು ಆಗಲಿ. ನಿಮ್ಮ ಅಸ್ತಿತ್ವವನ್ನು ನಾನು ಅನುಭವಿಸುವಂತಾಗಲಿ. ನನ್ನಲ್ಲಿ ನಿನ್ನ ಅನನ್ಯ ಭಕ್ತಿಯು ಸೃಷ್ಟಿಯಾಗಲಿ. ಒಂದು ಕ್ಷಣವೂ ನಿನ್ನನ್ನು ಮರೆಯಲು ಬಿಡಬೇಡ. ನಾನು ಎಲ್ಲಿ ತಪ್ಪುತ್ತಿದ್ದರೂ, ನನಗೆ ಅದರ ಅರಿವಾಗಲಿ ಮತ್ತು ನನ್ನಿಂದ ಸರಿಯಾದ ಕೃತಿಯಾಗಲಿ.
ಹೇ ಭಗವಂತಾ, ಅನಿಷ್ಟ ಮತ್ತು ನಕಾರಾತ್ಮಕ ಶಕ್ತಿಗಳಿಂದ ನನ್ನ ರಕ್ಷಣೆಯಾಗಲಿ. ನಿನ್ನ ಸಂರಕ್ಷಣೆಯ ಕವಚ ನನ್ನೊಂದಿಗೆ ಇರಲಿ. ಹೇ ಭಗವಂತಾ, ನನಗೆ ನಾಮಸ್ಮರಣೆ ಮಾಡಲು ನೆನಪಾಗಲಿ, ಎಂದು ನಾವು ಪ್ರಾರ್ಥನೆ ಮಾಡಬಹುದು.
ಬೆಳಿಗ್ಗೆ ಎದ್ದ ನಂತರ ದೇವಗೆ ಪ್ರಾರ್ಥನೆ ಮಾಡಬಹುದು – ಹೇ ಭಗವಂತಾ, ನಿನ್ನ ಕೃಪೆಯಿಂದ ನಾನು ಈ ದಿನವನ್ನು ನೋಡುತ್ತಿದ್ದೇನೆ. ನೀನೇ ದಿನವಿಡೀ ನನಗೆ ಸಾಧನೆಯನ್ನು ಮಾಡಲು ನನ್ನಿಂದ ಪ್ರಯತ್ನಗಳನ್ನು ಮಾಡಿಸಿಕೊ.
ಊಟಕ್ಕೆ ಮೊದಲು ಪ್ರಾರ್ಥನೆ ಮಾಡಬಹುದು, ‘ಹೇ ಅನ್ನಪೂರ್ಣಾ ಮಾತೆ, ನಿನ್ನ ಕೃಪೆಯಿಂದ ನಾನು ಪಡೆದ ಆಹಾರವನ್ನು ‘ಪ್ರಸಾದ’ ಎಂದು ಸ್ವೀಕರಿಸುತ್ತೇನೆ. ಇದರಿಂದ ಸಾಧನೆ ಮಾಡಲು ನನಗೆ ಶಕ್ತಿ ಮತ್ತು ಚೈತನ್ಯ ಸಿಗಲಿ.
ಸ್ನಾನ ಮಾಡುವ ಮೊದಲು ಜಲದೇವತೆಗೆ ಪ್ರಾರ್ಥಿಸಬೇಕು, ‘ಹೇ ಜಲದೇವತೆ, ನನ್ನ ಸುತ್ತಲಿನ ರಜ-ತಮದ ಆವರಣವು ನಷ್ಟವಾಗಲಿ. ನನಗೆ ಚೈತನ್ಯ ಸಿಗಲಿ.
ರಾತ್ರಿ ಮಲಗುವಾಗ ಪ್ರಾರ್ಥನೆ ಮಾಡಬಹುದು, ‘ಹೇ ನಿದ್ರಾದೇವಿ, ನಿನ್ನ ರಕ್ಷಣಾತ್ಮಕ ಕವಚವು ನನ್ನ ಸುತ್ತಲೂ ಉಳಿಯಲಿ. ನಿದ್ದೆಯಲ್ಲೂ ನನ್ನ ನಾಮಜಪ ಮುಂದುವರೆಯಲಿ.
ಈ ರೀತಿಯ ಪ್ರಾರ್ಥನೆಗಳು ನಮಗೆ ಸಾಧ್ಯವಾದ ಹಾಗೆ ಮಾಡಬಹುದು.
ಊ. ಪ್ರಾರ್ಥನೆಯನ್ನು ನೆನಪಿಟ್ಟುಕೊಳ್ಳಲು ಮಾಡಬೇಕಾದ ಪ್ರಯತ್ನಗಳು ಮತ್ತು ಧ್ಯೇಯಗಳು
ಈ ವಾರ ನಾವು ಪ್ರತಿಯೊಂದು ಕೃತಿಗೆ ಪ್ರಾರ್ಥನೆಯನ್ನು ಜೋಡಿಸಿ ದಿನಕ್ಕೆ ಕನಿಷ್ಠ ೨೫ ಬಾರಿ ಪ್ರಾರ್ಥಿಸಲು ಪ್ರಯತ್ನಿಸೋಣ. ಪ್ರಾರ್ಥನೆಯು ನೆನಪಾಗಬೇಕೆಂದು ನೀವು ನಿಮ್ಮ ಸಂಚಾರಿವಾಣಿಯಲ್ಲಿ ‘ಅಲಾರ್ಮ’ ಹಾಕಿಡಬಹುದು. ಕೆಲವು ಪ್ರಾರ್ಥನೆಗಳನ್ನು ಬರೆದು ಮನೆಯಲ್ಲಿ ನಮಗೆ ಆಚೀಚೇ ಹೋಗುವಾಗ ಎದ್ದುಕಾಣುವಂತಹ ಗೋಡೆಯ ಮೇಲೆ ಅಂಟಿಸಬಹುದು ಅಥವಾ ಪುಸ್ತಕದಲ್ಲಿ ಬರೆದು ಓದಬಹುದು. ಪ್ರಾರ್ಥನೆಯಲ್ಲಿ ಶಬ್ದಗಳಿಗಿಂತ ಭಾವವು ಮಹತ್ವದ್ದಾಗಿರುತ್ತದೆ. ಪ್ರಾರ್ಥನೆಯ ನಂತರ ಅನೇಕರು ಬುದ್ಧಿಯಾಚೆಗಿನ ಅನುಭವಗಳನ್ನು ಪಡೆದಿದ್ದಾರೆ. ಪ್ರಾರ್ಥನೆ ಮಾಡುವ ಮೂಲಕ ನಾವೂ ಅನುಭವಿಸೋಣ. ಇನ್ನೊಂದು ಮುಖ್ಯ ಅಂಶವೆಂದರೆ ನಿಮ್ಮ ಪ್ರಾರ್ಥನೆಯು ದೇವರಿಗೆ ಅಥವಾ ಗುರುಗಳಿಗೆ ತಲುಪುತ್ತದೆಯೇ ಎಂಬ ಸಂದೇಹವನ್ನು ಮನಸ್ಸಿನಲ್ಲಿ ತಂದುಕೊಳ್ಳಬಾರದು. ಇರುವೆಯ ಕಾಲಿಗೆ ಕಟ್ಟಿರುವ ಗೆಜ್ಜೆಯ ಸದ್ದು ಸಹ ದೇವರನ್ನು ತಲುಪುತ್ತದೆ, ಹೀಗಿರುವಾಗ ನಮ್ಮ ಪ್ರಾರ್ಥನೆಗಳು ದೇವರನ್ನು ತಲುಪುವುದಿಲ್ಲವೇ? ಪ್ರತಿಯೊಂದು ಪ್ರಾರ್ಥನೆಯು ದೇವರಿಗೆ ತಲುಪುತ್ತದೆ ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಈ ವಾರದಿಂದ ಹೆಚ್ಚು ಹೆಚ್ಚು ಪ್ರಾರ್ಥಿಸಲು ಪ್ರಯತ್ನಿಸೋಣ. ಪ್ರಯತ್ನಿಸುತ್ತೀರಿ ಅಲ್ಲವೇ?