೧. ಶಿಲೀಂಧ್ರ (ಬುರುಸು) ಸೋಂಕಿನ ಲಕ್ಷಣಗಳು
ತೊಡೆಗಳ ಸಂದುಗಳು, ಕಂಕುಳ, ತೊಡೆಗಳು, ನಿತಂಬ (ಪೃಷ್ಠ) ಇತ್ಯಾದಿ ಭಾಗಗಳಲ್ಲಿ ಎಲ್ಲಿ ಬೆವರಿನಿಂದ ಚರ್ಮವು ಹಸಿಯಾಗುತ್ತದೋ ಅಲ್ಲಿ ಕೆಲವೊಮ್ಮೆ ತುರಿಕೆಯುಂಟಾಗಿ ಚಿಕ್ಕ ಚಿಕ್ಕ ಗುಳ್ಳೆಗಳು ಬರುತ್ತವೆ ಮತ್ತು ಅವು ಹರಡುತ್ತಾ ಹೋಗಿ ಗೋಲಾಕಾರದ ಉಬ್ಬುಗಳು ರೂಪುಗೊಳ್ಳುತ್ತವೆ. ಈ ಗುಳ್ಳೆಗಳ ಅಂಚು ಉಬ್ಬಿದ್ದು, ಕೆಂಪು ಮತ್ತು ಗುಳ್ಳೆಗಳಿಂದ ಯುಕ್ತವಾಗಿರುತ್ತದೆ. ಮಧ್ಯಭಾಗದಲ್ಲಿ ಮಾತ್ರ ಬಿಳಿ ಮತ್ತು ಹೊಟ್ಟು ಇರುವಂತೆ ಕಾಣಿಸುತ್ತದೆ. ಇದು ಬುರುಸಿನ ಸೋಂಕು ಆದುದರ ಲಕ್ಷಣವಾಗಿರುತ್ತದೆ. ಈ ಬುರುಸಿನ ಸೋಂಕು ಗುಣಮುಖವಾಗಲು ಮುಂದಿನ ಪೈಕಿ ಯಾವುದೇ ಒಂದು ಚಿಕಿತ್ಸೆಯನ್ನು ಮಾಡಿ ನೋಡಬೇಕು, ಹಾಗೆಯೇ ಮುಂದೆ ನೀಡಿದ ಸಾಂದರ್ಭಿಕ ಸೂಚನೆಗಳನ್ನು ಪಾಲಿಸಬೇಕು.
೨. ಶಿಲೀಂಧ್ರ ಸೋಂಕಿಗೆ ಚಿಕಿತ್ಸೆ
ಅ. ತೆಂಗಿನಕಾಯಿಯ ಚಿಪ್ಪನ್ನು ಸುಟ್ಟು ಅದನ್ನು ಕಬ್ಬಿಣದ ಸ್ವಚ್ಛ ತಗಡಿನ ಮೇಲೆ ಅಥವಾ ಮಗುಚಿದ ತಂಬಿಗೆಯ ಮೇಲೆ ಇಡಬೇಕು. ಈ ಚಿಪ್ಪು ಸುಡುತ್ತಿರುವಾಗ ಚಿಪ್ಪಿನಿಂದ ಚಿಪ್ಪಿನ ಬಣ್ಣದ ಎಣ್ಣೆ ಹೊರಗೆ ಬರುತ್ತದೆ. ತಗಡಿನ ಮೇಲಿನ ಎಣ್ಣೆ ಒಣಗಿ ತಗಡಿಗೆ ಅಂಟಿಕೊಳ್ಳುವ ಮೊದಲೇ ಕೈ ಬೆರಳುಗಳಿಂದ ಕೂಡಲೇ ಎಲ್ಲೆಲ್ಲಿ ಬುರುಸಿನ ಸೋಂಕು ಆಗಿದೆಯೋ, ಅಲ್ಲಲ್ಲಿ ಹಚ್ಚಿಕೊಳ್ಳಬೇಕು. ತಗಡು ಬಿಸಿ ಇರುವುದರಿಂದ ಬೆರಳನ್ನು ಬಹಳ ಸಮಯದವರೆಗೆ ತಗಡಿಗೆ ಅಂಟಿಸಿ ಇಡಬಾರದು. ಕೆಲವರಿಗೆ ನೇರ ಚಿಪ್ಪಿನ ಎಣ್ಣೆಯನ್ನು ಹಚ್ಚಿಕೊಳ್ಳುವುದರಿಂದ ಚರ್ಮವು ಸುಡುತ್ತದೆ. ಹಾಗಾಗಬಾರದೆಂದು, ಮೊದಲು ಚರ್ಮದ ಮೇಲೆ ತೆಂಗಿನ ಎಣ್ಣೆಯನ್ನು ಲೇಪಿಸಬೇಕು ಮತ್ತು ನಂತರ ಅದರ ಮೇಲೆ ಚಿಪ್ಪಿನ ಎಣ್ಣೆಯನ್ನು ಹಚ್ಚಬೇಕು. ಈ ಚಿಕಿತ್ಸೆಯನ್ನು ಬೆಳಗ್ಗೆ – ಸಾಯಂಕಾಲ ಮಾಡಿದರೆ ಬುರುಸಿನ ಸೋಂಕು ಕೇವಲ ೩ – ೪ ದಿನಗಳಲ್ಲಿಯೇ ನಿಯಂತ್ರಣಕ್ಕೆ ಬರುತ್ತದೆ. ಬುರುಸಿನ ಸೋಂಕಿಗೆ ಇದು ಎಲ್ಲಕ್ಕಿಂತ ಜನಪ್ರಿಯವಾದ ಚಿಕಿತ್ಸೆಯಾಗಿದೆ. (ಈರೋಡ, ತಮಿಳುನಾಡಿನಲ್ಲಿ ‘ಎಸ್.ಕೆ.ಎಮ್.’ ಎಂಬ ಸಮೂಹದಿಂದ ಚಿಪ್ಪಿನ ಎಣ್ಣೆ ಸಿಗುತ್ತದೆ. ಇದಕ್ಕೆ ತಮಿಳು ಭಾಷೆಯಲ್ಲಿ ‘ಸಿರಟ್ಟೈ ತೈಲಮ್’ ಎಂದು ಹೇಳುತ್ತಾರೆ. ‘Chirattai thailam’ ಎಂದು ಅಂತರಜಾಲದಲ್ಲಿ ಹುಡುಕಿದರೆ ಈ ಎಣ್ಣೆ ‘ಆನ್‌ಲೈನ್’ ತರಿಸಬಹುದು. ಈ ಎಣ್ಣೆಯ ೨ – ೩ ಹನಿಗಳನ್ನು ಅಷ್ಟೇ ಪ್ರಮಾಣದ ತೆಂಗಿನ ಎಣ್ಣೆಯಲ್ಲಿ ಸೇರಿಸಿ ಬುರುಸಿನ ಸೋಂಕು ಆದ ಜಾಗದಲ್ಲಿ ಚರ್ಮಕ್ಕೆ ಹಚ್ಚಬೇಕು.)
ಆ. ಮೇಲಿನ ಚಿಕಿತ್ಸೆಯನ್ನು ಮಾಡಲು ಸಾಧ್ಯವಿಲ್ಲದಿದ್ದಲ್ಲಿ ಚಿಪ್ಪನ್ನು ಸುಟ್ಟು ಅದರ ಬೂದಿಯನ್ನು ತಯಾರಿಸಬೇಕು. ನಂತರ ಅದನ್ನು ಚಿಕ್ಕ ತೂತುಗಳಿರುವ ಜರಡಿಯಿಂದ ಗಾಳಿಸಿಡಬೇಕು. ದಿನದಲ್ಲಿ ೩-೪ ಬಾರಿ, ಹಾಗೆಯೇ ರಾತ್ರಿ ಮಲಗುವ ಮೊದಲು ಈ ಬೂದಿಯನ್ನು ತುರಿಕೆ ಬರುವ ಭಾಗಗಳ ಮೇಲೆ ಲೇಪಿಸಬೇಕು. ಒಂದು ಡಬ್ಬದ ಮುಚ್ಚಳಕ್ಕೆ ಚಿಕ್ಕ ಚಿಕ್ಕ ತೂತುಗಳನ್ನು ಮಾಡಿ ಅದರಲ್ಲಿ ಬೂದಿಯನ್ನು ತುಂಬಿಟ್ಟರೆ ಅದನ್ನು ಟ್ಯಾಲಕಮ್ ಪೌಡರ್‌ನಂತೆಯೂ ಹಚ್ಚಿಕೊಳ್ಳಬಹುದು.
ಇ. ಆಯುರ್ವೇದಿಕ ಔಷಧಿಗಳ ಅಂಗಡಿಗಳಲ್ಲಿ ‘ಗಂಧ ಕರ್ಪೂರ’ ಹೆಸರಿನ ಮಲಮ್ ಸಿಗುತ್ತದೆ. ‘ಎಸ್.ಡಿ.ಎಮ್.’ ವತಿಯಿಂದ ಈ ಮಲಮ್ ‘ಆನ್‌ಲೈನ್’ ಮೂಲಕವೂ ಸಿಗುತ್ತದೆ. ‘Gandha karpura’ ಎಂದು ಅಂತರಜಾಲದಲ್ಲಿ ಹುಡುಕಿದರೆ ಇದನ್ನು ‘ಆನ್‌ಲೈನ್’ ತರಿಸಬಹುದು. ಈ ಮಲಮ್‌ಅನ್ನು ತುರಿಕೆ ಬರುವ ಭಾಗಗಳ ಮೇಲೆ ದಿನದಲ್ಲಿ ೩ – ೪ ಬಾರಿ ಹಚ್ಚಬೇಕು. ಮಲಮ್ ಹಚ್ಚಿಕೊಳ್ಳುವ ಮೊದಲು ಶರೀರದ ಆಯಾ ಭಾಗಗಳನ್ನು ಸ್ವಚ್ಛ ತೊಳೆದು ಒಣಗಿಸಿ ನಂತರ ಹಚ್ಚಿಕೊಳ್ಳಬೇಕು.
ಈ. ರಾತ್ರಿ ಮಲಗುವ ಮೊದಲು ದೇಶಿ ಆಕಳ ಒಂದು ಚಮಚದಷ್ಟು ಗೋಮೂತ್ರ ಅಥವಾ ಗೋಮೂತ್ರದ ಅರ್ಕದಲ್ಲಿ ಚಿಟಿಕೆಯಷ್ಟು ಅರಿಶಿಣವನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು.
೩. ಕೆಲವು ಸಾಂದರ್ಭಿಕ ಸೂಚನೆಗಳು
ಅ. ಹೆಚ್ಚು ತೊಂದರೆಯಾಗುತ್ತಿದ್ದರೆ ದಿನದಲ್ಲಿ ೨ ಬಾರಿ ಸ್ನಾನ ಮಾಡಬೇಕು.
ಆ. ಸ್ನಾನ ಮಾಡುವಾಗ ಸಾಬೂನು ಬಳಸಬಾರದು. ಸಾಬೂನಿನಿಂದ ಚರ್ಮದ ಪ್ರತಿಕಾರ ಕ್ಷಮತೆ ಕಡಿಮೆಯಾಗುತ್ತದೆ. ಸಾಬೂನಿನ ಬದಲು ತ್ರಿಫಲಾ ಚೂರ್ಣ, ಕಡಲೆ ಹಿಟ್ಟು, ಉಟಣೆ ಅಥವಾ ಇವುಗಳ ಮಿಶ್ರಣವನ್ನು ಬಳಸಬೇಕು.
ಇ. ಯಾವಾಗಲೂ ಹತ್ತಿ ಬಟ್ಟೆಗಳನ್ನೇ ಧರಿಸಬೇಕು. ಹಸಿ ಅಥವಾ ಒದ್ದೆ ಬಟ್ಟೆಗಳನ್ನು ಧರಿಸಬಾರದು, ಬಟ್ಟೆಗಳು ಯಾವಾಗಲೂ ಒಣ ಇರಬೇಕು.
ಈ. ಬುರುಸಿನ ಸೋಂಕು ಇರುವ ವ್ಯಕ್ತಿಯು ತಾನು ಬಳಸಿದ ಬಟ್ಟೆಗಳನ್ನು ಪ್ರತಿನಿತ್ಯ ತೊಳೆಯಬೇಕು. ಪ್ರತಿದಿನ ಸ್ನಾನದ ನಂತರ ಮೈ ಒರಸಲು ಬಳಸಿದ ಚೌಕ (ಟಾವೆಲ್‌ಅನ್ನು) ತೊಳೆದುಹಾಕಬೇಕು. ಹೆಚ್ಚಿನ ಬಾರಿ ಬಳಸಿದ ಬಟ್ಟೆಗಳನ್ನು ಡೆಟಾಲ್ ಇತ್ಯಾದಿಗಳಿಂದ ತೊಳೆಯಲಾಗುತ್ತದೆ; ಆದರೆ ಚೌಕ ತೊಳೆಯಬೇಕೆಂದು ಗಮನಕ್ಕೆ ಬರುವುದಿಲ್ಲ. ಆದುದರಿಂದ ಚೌಕ ಕೂಡ ನೆನಪಿನಿಂದ ತೊಳೆಯಬೇಕು.
ಉ. ಇತರರ ಬಟ್ಟೆಗಳನ್ನು ಅಥವಾ ಸಾಬೂನನ್ನು ಬಳಸಬಾರದು.
ಊ. ಮೇಲಿನ ಚಿಕಿತ್ಸೆಗಳಿಂದ ಲಾಭವಾಗದಿದ್ದರೆ ಸ್ಥಳೀಯ ವೈದ್ಯರು ಅಥವಾ ಚರ್ಮರೋಗ ತಜ್ಞರನ್ನು ಭೇಟಿ ಮಾಡಬೇಕು.
ಎ. ಬುರುಸಿನ ಸೋಂಕಿಗೆ ಕೇವಲ ಇಲ್ಲಿ ನೀಡಲಾದ ಔಷಧಿಗಳನ್ನೇ ಬಳಸಬೇಕು ಎಂದೇನಿಲ್ಲ. ಯಾವುದೇ ಚಿಕಿತ್ಸಾಪದ್ಧತಿಗನುಸಾರ ಚಿಕಿತ್ಸೆ ಪಡೆದರೂ ನಡೆಯುತ್ತದೆ; ಆದರೆ ‘ಚಿಕಿತ್ಸೆಗಳಲ್ಲಿ ಸಾತತ್ಯ ಇರುವುದು’, ಇದು ಬುರುಸು ಸೋಂಕುಜನ್ಯ ರೋಗಗಳ ಚಿಕಿತ್ಸೆಗಳ ಎಲ್ಲಕ್ಕಿಂತ ಮಹತ್ವದ ಘಟಕವಾಗಿದೆ. ಆದುದರಿಂದ ಚಿಕಿತ್ಸೆ ಒಂದು ದಿನವೂ ತಪ್ಪದಂತೆ ಕಾಳಜಿವಹಿಸಬೇಕು. ಯಾವುದೇ ಚಿಕಿತ್ಸಾಪದ್ಧತಿಯ ತಜ್ಞರು ಹೇಳಿದ ಚಿಕಿತ್ಸೆಯನ್ನು ನಿಯಮಿತವಾಗಿ ಮಾಡಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೮.೨.೨೦೧೫)
ಸೂಚನೆ : ‘ಆಯುರ್ವೇದದ ಮಹತ್ವವು ಎಲ್ಲರಿಗೂ ತಿಳಿಯಬೇಕೆಂದು ಈ ಲೇಖನವಿದೆ. ಯಾವುದೇ ಔಷಧಿಯನ್ನು ವೈದ್ಯರ ಸಲಹೆಯಂತೆ ತೆಗೆದುಕೊಳ್ಳಿರಿ. ಈ ಲೇಖನದಲ್ಲಿ ಮಾರುಕಟ್ಟೆಯಲ್ಲಿ ಸಿದ್ಧ ಆಯುರ್ವೇದಿಕ ಔಷಧಿಗಳ ಹೆಸರುಗಳನ್ನು ವಾಚಕರ ಅನುಕೂಲಕ್ಕಾಗಿ ನೀಡಲಾಗಿದೆ. ಈ ಔಷಧಿಗಳಿಗೆ ಸಂಬಂಧಿಸಿದ ಕಂಪನಿಗಳೊಂದಿಗೆ ನಮಗೂ ಯಾವುದೇ ಆರ್ಥಿಕ ಹಿತಸಂಬಂಧವಿಲ್ಲ’, ಎಂಬುದನ್ನು ಓದುಗರು ದಯವಿಟ್ಟು ಗಮನಿಸಬೇಕು. – ಸಂಪಾದಕರು