೧. ಹಾಲು ಪೌಷ್ಟಿಕವಾಗಿದ್ದರೂ, ಜೀರ್ಣವಾಗದಿದ್ದರೆ ತೊಂದರೆಯುಂಟು ಮಾಡುತ್ತದೆ
‘ಹಾಲು’ ಇದು ಪೃಥ್ವಿ ಮತ್ತು ಆಪ ಈ ತತ್ತ್ವಪ್ರಧಾನ ಒಂದು ಪೌಷ್ಟಿಕ ಆಹಾರವಾಗಿದೆ. ಇವೆರಡೂ ಅಗ್ನಿಗೆ ವಿರುದ್ಧ ಗುಣಧರ್ಮದಾಗಿದ್ದು ಅಗ್ನಿಯನ್ನು ಮಂದ ಮಾಡುತ್ತವೆ. ಮಳೆಗಾಲದಲ್ಲಿ ಶರೀರದಲ್ಲಿನ ಅಗ್ನಿಯು (ಪಚನಶಕ್ತಿ / ಜೀರ್ಣಿಸುವ ಕ್ಷಮತೆ) ಮಂದವಾಗಿರುತ್ತದೆ. ಇಂತಹ ಅಗ್ನಿಯು ಕೆಲವೊಮ್ಮೆ ಹಾಲನ್ನು ಅರಗಿಸಲು ಅಸಮರ್ಥವಾಗಿರುತ್ತದೆ. ಹಾಲು ಎಷ್ಟೇ ಒಳ್ಳೆಯದಿದ್ದರೂ, ಅದು ಜೀರ್ಣವಾಗದಿದ್ದರೆ ಶರೀರಕ್ಕೆ ತೊಂದರೆಯಾಗುತ್ತದೆ. ಆದುದರಿಂದ ಮಳೆಗಾಲದ ದಿನಗಳಲ್ಲಿ ಬೆಳಗ್ಗೆ ಎದ್ದ ತಕ್ಷಣ ಹಾಲು ಅಥವಾ ಹಾಲು ಹಾಕಿದ ಚಹಾ ಅಥವಾ ಕಷಾಯ ಕುಡಿಯುವುದನ್ನು ತಪ್ಪಿಸಬೇಕು. ಪಾಲಕರು ತಮ್ಮ ಮಕ್ಕಳಿಗೆ ಬೆಳಗ್ಗೆ ಶಾಲೆಗೆ ಹೋಗುವ ಸಮಯದಲ್ಲಿ ಹಾಲನ್ನು ಕೊಡುತ್ತಾರೆ. ಅದನ್ನೂ ತಪ್ಪಿಸಬೇಕು. ವೈದ್ಯರು ಹಾಲಿನ ಜೊತೆ ಔಷಧಿಯನ್ನು ತೆಗೆದುಕೊಳ್ಳಲು ಹೇಳಿದ್ದಾರೆಂದು ಕೆಲವರು, ಬೆಳಗ್ಗೆ ಎದ್ದ ತಕ್ಷಣ ಹಾಲು ಕುಡಿಯುತ್ತಾರೆ. ಅಂತಹವರು ‘ಮಳೆಗಾಲದ ದಿನಗಳಲ್ಲಿ ಅದನ್ನು ಮುಂದುವರಿಸಬೇಕೋ ಬೇಡವೋ’, ಎಂದು ವೈದ್ಯರಲ್ಲಿ ಕೇಳಿಕೊಳ್ಳಬೇಕು.
೨. ಹಾಲು ಯಾವಾಗ ಕುಡಿಯಬೇಕು ?
‘ಬೆಳಗ್ಗೆ ಬೇಗನೆ ಎದ್ದು ಶೌಚವು ಸರಿಯಾಗಿ ಆಗಿದೆ. ವ್ಯಾಯಾಮವಾಗಿದೆ. ಸ್ನಾನ ಮಾಡಿ ಶರೀರವು ಹಗುರ ಎನಿಸುತ್ತಿದೆ. ಆಕಾಶವು ಶುಭ್ರವಾಗಿದ್ದು, ಚೆನ್ನಾಗಿ ಹಸಿವಾಗಿದೆ’, ಎಂದಾದರೆ ನಂತರ ಹಾಲನ್ನು ಕುಡಿಯಬೇಕು. ಈ ಹೊತ್ತಿನಲ್ಲಿ ೧-೨ ಕಪ್ ಹಾಲಿನಲ್ಲಿ ೨ ಚಮಚ ತುಪ್ಪ ಹಾಕಿ ಕುಡಿದರೆ ಅದು ಶರೀರಕ್ಕೆ ಅಮೃತದ ಹಾಗೆ ನೆರವಾಗುತ್ತದೆ. ವಯೋವೃದ್ಧರಿಗಂತೂ ಇದು ಸರ್ವಶ್ರೇಷ್ಠ ಔಷಧಿಯಾಗಿದೆ; ಆದರೆ ಮಳೆಗಾಲದಲ್ಲಿ ಈ ರೀತಿಯ ಶರೀರಸ್ಥಿತಿಯು ಬಹಳ ಕಡಿಮೆ ಜನರಲ್ಲಿ ಕಂಡು ಬರುತ್ತದೆ. ಆದುದರಿಂದ ಮಳೆಗಾಲದಲ್ಲಿ ಹಾಲನ್ನು ಕುಡಿಯಬಾರದು. ಚಳಿಗಾಲದಲ್ಲಿ ಅಗ್ನಿಯು (ಜೀರ್ಣಶಕ್ತಿಯು) ಬಲಿಷ್ಠವಾಗಿರುವುದರಿಂದ ಈ ರೀತಿಯ ಶರೀರಸ್ಥಿತಿಯು ಸಹಜವಾಗಿ ನಿರ್ಮಾಣವಾಗುತ್ತದೆ. ಆಗ ಹಾಲನ್ನು ಕುಡಿಯಬೇಕು. ಹಾಲಿನ ಜೊತೆಗೆ ಉಪ್ಪಿರುವ ಪದಾರ್ಥಗಳನ್ನು ತಿನ್ನಬಾರದು. ಬಹುತೇಕ ಎಲ್ಲ ಪದಾರ್ಥಗಳಲ್ಲಿ ಉಪ್ಪು ಇರುತ್ತದೆ. ಆದುದರಿಂದ ಹಾಲು ಕುಡಿದ ನಂತರ ಕನಿಷ್ಠ ಪಕ್ಷ ಒಂದು ಗಂಟೆಯಾದರು ಏನೂ ತಿನ್ನಬಾರದು ಅಥವಾ ಕುಡಿಯಬಾರದು.
೩. ಮಳೆಗಾಲದಲ್ಲಿ ಹಾಲಿಗೆ ಪರ್ಯಾಯ
ಮಳೆಗಾಲದಲ್ಲಿ ಪೌಷ್ಟಿಕ ಆಹಾರವೆಂದು ಹಾಲಿನ ಬದಲಾಗಿ ಒಣ ಹಣ್ಣುಗಳು (ಡ್ರೈಫ್ರೂಟ್), ಶೇಂಗಾಬೀಜ ಅಥವಾ ಪುಟಾಣಿಯನ್ನು ತಿನ್ನಬೇಕು. ಇದನ್ನು ಊಟದ ನಂತರ ಸ್ವಲ್ಪ ಪ್ರಮಾಣದಲ್ಲಿ ತಿನ್ನಬೇಕು. ತುಪ್ಪ, ಮೊಸರು, ಮಜ್ಜಿಗೆ ಈ ದುಗ್ಧಜನ್ಯ ಪದಾರ್ಥಗಳನ್ನು ಊಟ ಮಾಡುವಾಗ ಹಸಿವಿನ ಪ್ರಮಾಣದಲ್ಲಿ ಸೇವಿಸಬೇಕು.’
– ವೈದ್ಯ ಮೇಘರಾಜ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೧.೭.೨೦೨೨)