ದೃಷ್ಟಿ ತೆಗೆಯುವುದು (ನಿವಾಳಿಸುವುದು)
ನಾವು ಇಲ್ಲಿಯವರೆಗೆ ಆಧ್ಯಾತ್ಮಿಕ ತೊಂದರೆ ಎಂದರೇನು ಮತ್ತು ಅದನ್ನು ದೂರ ಮಾಡಲು ಯಾವ ಆಧ್ಯಾತ್ಮಿಕ ಉಪಾಯವನ್ನು ಮಾಡಬೇಕು ಇವುಗಳ ಬಗ್ಗೆ ತಿಳಿದುಕೊಂಡೆವು. ಇಲ್ಲಿಯವರೆಗೆ ಕರ್ಪೂರ-ಅತ್ತರ ಉಪಾಯ, ಆವರಣವನ್ನು ದೂರ ಮಾಡುವುದು, ಉಪ್ಪು ನೀರಿನ ಉಪಾಯದಂತಹ ಕೆಲವು ಸರಳ ಉಪಾಯಗಳ ಬಗ್ಗೆ ತಿಳಿದುಕೊಂಡೆವು. ಇಂದು ನಾವು ಆಧ್ಯಾತ್ಮಿಕ ಉಪಾಯಗಳ ಅಂತರ್ಗತ ದೃಷ್ಟಿ ತೆಗೆಯುವ (ದೃಷ್ಟಿ ನಿವಾಳಿಸುವುದು) ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
ಮಗುವಿಗೆ ಕಾಡಿಗೆಯ ಬೊಟ್ಟನ್ನಿಡುವ ಸಂಸ್ಕಾರವು ಇಂದಿಗೂ ಸಮಾಜದಲ್ಲಿ ಕಾಪಾಡಿಕೊಂಡು ಬರಲಾಗಿದೆ. ಹಿಂದಿನ ಕಾಲದ ಮಹಿಳೆಯರು ಇಂದಿಗೂ ಮನೆಗೆ ಬಂದ ಅತಿಥಿಗಳ ದೃಷ್ಟಿಯನ್ನು ತೆಗೆಯುತ್ತಾರೆ. ಯಾವಾಗ ಪರಂಪರೆಯನ್ನು ನೂರಾರು ವರ್ಷಗಳ ಕಾಲ ಸಂರಕ್ಷಿಸಲಾಗುತ್ತದೋ, ಆಗ ಅದರ ಹಿಂದೆ ನಿಶ್ಚಿತವಾಗಿಯೂ ಏನಾದರೂ ಶಾಸ್ತ್ರವಿರುತ್ತದೆ. ಕುಟುಂಬದಲ್ಲಿ ಜಗಳಗಳಾಗುವುದು, ಕಾಯಿಲೆ, ಆರ್ಥಿಕ ಮುಗ್ಗಟ್ಟು, ಕೆಟ್ಟ ಕನಸುಗಳು ಬೀಳುವುದು, ನಿರಾಶೆ, ಧೂಮ್ರಪಾನ ಅಥವಾ ಕುಡಿತದ ಚಟ ಇವುಗಳಂತಹ ಸಮಸ್ಯೆಗಳು ಈಗ ನಿತ್ಯದ್ದಾಗಿವೆ. ಈ ಸಮಸ್ಯೆಗಳ ಹಿಂದೆ ‘ದೃಷ್ಟಿ ತಾಗುವುದು’ ಇದೂ ಒಂದು ಕಾರಣವಾಗಿರಬಹುದು. ಜೀವನದಲ್ಲಿ ಎದುರಾಗುವ ಶೇ. ೮೦ ರಷ್ಟು ಸಮಸ್ಯೆಗಳಿಗೆ ಸ್ಥೂಲ ಕಾರಣಗಳು ಹಿಂದಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ, ಮೂಲ ಕಾರಣ ಸೂಕ್ಷ್ಮದ್ದಾಗಿರುತ್ತದೆ, ಅಂದರೆ ಕೆಟ್ಟ ಶಕ್ತಿಗಳ ತೊಂದರೆಯಾಗಿರುತ್ತದೆ. ಕೆಟ್ಟ ಶಕ್ತಿಗಳ ತೊಂದರೆ ಇದೂ ದೃಷ್ಟಿ ತಗಲುವುದರ ಒಂದು ವಿಧವಾಗಿದೆ. ಕಲಿಯುಗದಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ಯಾವುದಾದರೊಂದು ದೃಷ್ಟಿ ತಾಗುತ್ತಲೇ ಇರುತ್ತದೆ. ಶಾರೀರಿಕ ಕಾಯಿಲೆಗಳು ಮನುಷ್ಯನ ಮೃತ್ಯುವಿನ ನಂತರ ಮುಗಿಯುತ್ತವೆ; ಆದರೆ ಆಧ್ಯಾತ್ಮಿಕ ಕಾಯಿಲೆಯು ಮಾತ್ರ ಜನ್ಮಜನ್ಮಾಂತರಗಳವರೆಗೆ ಹಾಗೆಯೇ ಚಾಲನೆಯಲ್ಲಿರುತ್ತದೆ. ಈ ಕಾಯಿಲೆಗಳನ್ನು ತೀವ್ರ ಸಾಧನೆಯಿಂದ ಹಾಗೆಯೇ ಆಗಾಗ ದೃಷ್ಟಿ ತೆಗೆಯುವುದು ಮತ್ತು ಇತರ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವಂತಹ ಮಾಧ್ಯಮಗಳಿಂದ ದೂರ ಮಾಡಬೇಕಾಗುತ್ತದೆ. ಆಗ ಮಾತ್ರ ಕಲಿಯುಗದ ಮನುಷ್ಯನು ಜೀವನದಲ್ಲಿ ಸುಖ, ಶಾಂತಿ ಮತ್ತು ಸಮಾಧಾನವನ್ನು ಪಡೆಯಬಹುದು; ಹಾಗಾಗಿ ನಾವಿಂದು ದೃಷ್ಟಿ ತೆಗೆಯುವ ಶಾಸ್ತ್ರೀಯ ಪದ್ಧತಿ ಅಂದರೇನು, ಎಂದು ತಿಳಿದುಕೊಳ್ಳಲಿದ್ದೇವೆ.
ಅ. ದೃಷ್ಟಿಯನ್ನು ತೆಗೆಯಲು ಸಾಮಾನ್ಯವಾಗಿ ಬಳಸಬಹುದಾದ ಗೃಹೋಪಯೋಗಿ ವಸ್ತುಗಳು
ದೃಷ್ಟಿಯನ್ನು ತೆಗೆಯಲು ವಿವಿಧ ಪದಾರ್ಥಗಳನ್ನು ಉಪಯೋಗಿಸಲಾಗುತ್ತದೆ. ಉಪ್ಪು-ಸಾಸಿವೆ, ಕೆಂಪು ಮೆಣಸಿಕಾಯಿ, ನಿಂಬೆಹಣ್ಣು, ತೆಂಗಿನಕಾಯಿ, ಎಳ್ಳೆಣ್ಣೆ, ಉದ್ದು, ವೀಳ್ಯೆದೆಲೆ, ಅಕ್ಕಿ, ಪಟಕಾರ, ಭೀಮಸೇನಿ ಕರ್ಪುರ, ಮಣ್ಣಿನ ಕುಡಿಕೆ, ಈಚಲು ಎಲೆಗಳಿಂದ ತಯಾರಿಸಲಾದ ಚಿಕ್ಕ ಕಸಬರಿಗೆ, ಚಪ್ಪಲಿಗಳು ಇಂತಹ ವಸ್ತುಗಳಿಂದ ದೃಷ್ಟಿಯನ್ನು ತೆಗೆಯಬಹುದು. ಯಾವಾಗಲೂ ಬಿಡುವಂತಹ ಯಾವುದೇ ಚಿಕ್ಕ ಬಿಳಿ ಹೂವುಗಳು ಅಥವಾ ತಾಯಿಯ ಸೆರಗಿನಿಂದ ಚಿಕ್ಕ ಮಗುವಿನ ದೃಷ್ಟಿಯನ್ನು ತೆಗೆಯಲು ಬರುತ್ತದೆ. ಈಗ ಹೇಳಿದ ವಸ್ತುಗಳಲ್ಲಿ ವ್ಯಕ್ತಿಯಲ್ಲಿನ ತೊಂದರೆದಾಯಕ ಸ್ಪಂದನಗಳನ್ನು ಸೆಳೆಯುವ ಕ್ಷಮತೆ ಹೆಚ್ಚಾಗಿರುತ್ತದೆ. ಆದುದರಿಂದ ದೃಷ್ಟಿಯನ್ನು ತೆಗೆಯುವಾಗ ಆ ಪದಾರ್ಥಗಳನ್ನು ಉಪಯೋಗಿಸಲಾಗುತ್ತದೆ. ಇಂದು ನಾವು ಸರ್ವಸಾಮಾನ್ಯವಾಗಿ ಉಪಯೋಗಕ್ಕೆ ತರಲಾಗುವ ಪದಾರ್ಥಗಳು, ಉದಾ- ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿ, ನಿಂಬೆಹಣ್ಣು, ಕರ್ಪುರ, ಹಾಗೆಯೇ ತೆಂಗಿನಕಾಯಿ ಇವುಗಳಿಂದ ದೃಷ್ಟಿಯನ್ನು ಹೇಗೆ ತೆಗೆಯಬೇಕು, ಎಂದು ತಿಳಿದುಕೊಳ್ಳುವವರಿದ್ದೇವೆ.
ಆ. ದೃಷ್ಟಿಯನ್ನು ತೆಗೆಯುವ ಪದ್ಧತಿ
೧. ಯಾವ ವ್ಯಕ್ತಿಯ ದೃಷ್ಟಿ ತೆಗೆಯುವುದಿದೆಯೋ ಅವರು ಮಣೆಯ ಮೇಲೆ ಮೊಣಕಾಲುಗಳನ್ನು ಮಡಚಿ ಅದರ ಮೇಲೆ ಮೇಲಿನ ದಿಕ್ಕಿಗೆ ಕೈಗಳನ್ನಿಟ್ಟು ಕುಳಿತುಕೊಳ್ಳಬೇಕು.
೨. ಯಾವ ಘಟಕಗಳಿಂದ ದೃಷ್ಟಿಯನ್ನು ತೆಗೆಯುವುದಿದೆಯೋ, ಆ ಘಟಕಗಳು ಉದಾ – ಉಪ್ಪು-ಸಾಸಿವೆ, ನಿಂಬೆಹಣ್ಣು, ಕರ್ಪುರ ಅಥವಾ ತೆಂಗಿನಕಾಯಿ ದೃಷ್ಟಿ ತಾಗಿದ ವ್ಯಕ್ತಿಯ ಎದುರು ಕೈಯಲ್ಲಿ ಹಿಡಿಯಬೇಕು.
೩. ‘ಬಂದವರ-ಹೋದವರ, ದಾರಿಹೋಕರ, ಪಶು-ಪಕ್ಷಿಗಳ, ದನಕರುಗಳ, ಭೂತ-ಪಿಶಾಚಿಗಳ, ಮಾಂತ್ರಿಕರ ಮತ್ತು ವಿಶ್ವದ ಯಾವುದೇ ಪ್ರಕಾರದ ಶಕ್ತಿಯ ದೃಷ್ಟಿ ತಾಗಿದ್ದರೆ, ಅದು ದೂರವಾಗಲಿ’, ಎಂದು ಹೇಳುತ್ತಾ ನಾವು ಯಾವ ಘಟಕದಿಂದ ದೃಷ್ಟಿಯನ್ನು ತೆಗೆಯುವವರಿದ್ದೇವೆಯೋ, ಆ ಘಟಕವನ್ನು ತೊಂದರೆಯಿರುವ ವ್ಯಕ್ತಿಯ ಮೇಲಿಂದ ಸರ್ವಸಾಮಾನ್ಯವಾಗಿ ೩ ಬಾರಿ ನಿವಾಳಿಸಬೇಕು.
೪. ಪ್ರತಿಬಾರಿ ನಿವಾಳಿಸಿದ ನಂತರ ನೆಲಕ್ಕೆ ಕೈಯನ್ನು ಊರಬೇಕು (ತಗಲಿಸಬೇಕು). ಹೀಗೆ ಮಾಡುವುದರಿಂದ ಆ ವಸ್ತುಗಳಲ್ಲಿ ಯಾವ ತೊಂದರೆದಾಯಕ ಸ್ಪಂದನಗಳು ಸೆಳೆಯಲ್ಪಟ್ಟಿವೆಯೋ, ಅವು ಭೂಮಿಯಲ್ಲಿ ವಿಸರ್ಜಿತವಾಗುತ್ತವೆ.
೫. ಅನಂತರ ದೃಷ್ಟಿಯನ್ನು ತೆಗೆಯಲು ತೆಗೆದುಕೊಂಡ ವಸ್ತುಗಳನ್ನು ಸುಡಬೇಕು ಅಥವಾ ವಿಸರ್ಜಿಸಬೇಕು.
೬. ದೃಷ್ಟಿಯನ್ನು ತೆಗೆದ ನಂತರ ಅದನ್ನು ವಿಸರ್ಜಿಸಲು ತೆಗೆದುಕೊಂಡು ಹೋಗುವಾಗ ಹಿಂದೆ ತಿರುಗಿ ನೋಡಬಾರದು, ಯಾರೊಂದಿಗೂ ಮಾತನಾಡಬಾರದು.
೭. ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯನ್ನು ತೆಗೆಯುವ ಮತ್ತು ಯಾರ ದೃಷ್ಟಿಯನ್ನು ತೆಗೆಯಲಾಗಿದೆಯೋ, ಅವರು ಕೈ-ಕಾಲುಗಳನ್ನು ತೊಳೆಯಬೇಕು. ಶರೀರದ ಮೇಲೆ ಗೋಮೂತ್ರ ಅಥವಾ ವಿಭೂತಿ ಬೆರೆಸಿರುವ ನೀರನ್ನು ಸಿಂಪಡಿಸಬೇಕು. ದೇವರ ಅಥವಾ ಗುರುಗಳ ಸ್ಮರಣೆಯನ್ನು ಮಾಡಿ ಅವರ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಬೇಕು. ವಿಭೂತಿಯನ್ನು ಹಚ್ಚಿಕೊಳ್ಳಬೇಕು ಮತ್ತು ನಮ್ಮ ಮುಂದಿನ ಕೆಲಸಗಳನ್ನು ಆರಂಭಿಸಬೇಕು.
೮. ದೃಷ್ಟಿಯನ್ನು ತೆಗೆಯುವವರು ಮತ್ತು ಯಾರ ದೃಷ್ಟಿಯನ್ನು ತೆಗೆಯಲಾಗಿದೆಯೋ, ಅವರು, ಯಾರೊಂದಿಗೂ ಮಾತನಾಡದೇ, ಮನಸ್ಸಿನಲ್ಲಿ ೧೫-೨೦ ನಿಮಿಷಗಳ ಕಾಲ ನಾಮಜಪ ಮಾಡುತ್ತಾ ಮುಂದಿನ ಕೆಲಸಗಳನ್ನು ಮಾಡಬೇಕು.
ಇ. ದೃಷ್ಟಿಯನ್ನು ತೆಗೆಯುವಾಗ ಮಾಡಬೇಕಾದ ಪ್ರಾರ್ಥನೆ
ದೃಷ್ಟಿಯನ್ನು ತೆಗೆಯುವುದರಿಂದ ವ್ಯಕ್ತಿಯಲ್ಲಿನ ನಕಾರಾತ್ಮಕ ಸ್ಪಂದನಗಳು, ಹಾಗೆಯೇ ಕೆಟ್ಟಶಕ್ತಿಗಳ ತೊಂದರೆ ದೂರವಾಗುತ್ತಿರುವುದರಿಂದ ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು, ಹಾಗೆಯೇ ಯಾವ ವ್ಯಕ್ತಿಯ ದೃಷ್ಟಿಯನ್ನು ತೆಗೆಯುವುದಿದೆಯೋ, ಅವರು ಪ್ರಾರ್ಥನೆ ಮಾಡುವುದು ಆವಶ್ಯಕವಾಗಿರುತ್ತದೆ. ದೃಷ್ಟಿ ತಾಗಿದ ವ್ಯಕ್ತಿಯು ಉಪಾಸ್ಯದೇವತೆಗೆ, ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸಲಾಗುವ ವಸ್ತುಗಳಲ್ಲಿ ನನ್ನ ಶರೀರದಲ್ಲಿನ, ಹಾಗೆಯೇ ಶರೀರದ ಹೊರಗಿನ ತೊಂದರೆದಾಯಕ ಸ್ಪಂದನಗಳು ಸೆಳೆಯಲ್ಪಟ್ಟು ಅವುಗಳು ಬೇರು ಸಹಿತ ನಾಶವಾಗಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು, ‘ದೃಷ್ಟಿಯನ್ನು ತೆಗೆಯಲು ಉಪಯೋಗಿಸಲಾಗಿರುವ ವಸ್ತುಗಳಲ್ಲಿ ದೃಷ್ಟಿ ತಾಗಿದ ಜೀವದ ದೇಹದಲ್ಲಿನ ಮತ್ತು ದೇಹದ ಹೊರಗಿನ ತೊಂದರೆದಾಯಕ ಸ್ಪಂದನಗಳು ಸೆಳೆಯಲ್ಪಟ್ಟು ಅವುಗಳು ಬೇರುಸಹಿತ ನಾಶವಾಗಲಿ. ದೃಷ್ಟಿಯನ್ನು ತೆಗೆಯುತ್ತಿರುವಾಗ ದೇವರ ಕೃಪೆಯ ಸಂರಕ್ಷಣ ಕವಚವು ನನ್ನ ಸುತ್ತಲೂ ಇರಲಿ’, ಎಂದು ಪ್ರಾರ್ಥನೆಯನ್ನು ಮಾಡಬೇಕು.
ಉ. ದೃಷ್ಟಿಯನ್ನು ಯಾವಾಗ ತೆಗೆಯಬೇಕು ?
ದೃಷ್ಟಿಯನ್ನು ಸಾಧ್ಯವಿದ್ದಷ್ಟು ಸಾಯಂಕಾಲ ತೆಗೆಯಬೇಕು; ಏಕೆಂದರೆ ತೊಂದರೆ ದೂರವಾಗಲು ಆ ಸಮಯವು ಹೆಚ್ಚು ಒಳ್ಳೆಯದಾಗಿರುತ್ತದೆ.
ಊ. ದೃಷ್ಟಿಯನ್ನು ತೆಗೆಯುವ ಪದ್ಧತಿ
ಈಗ ನಾವು ದೃಷ್ಟಿಯನ್ನು ತೆಗೆಯುವ ಕೆಲವು ಪದ್ಧತಿಗಳನ್ನು ತಿಳಿದುಕೊಳ್ಳೋಣ.
೧. ಉಪ್ಪು ಮತ್ತು ಸಾಸಿವೆಯ ಸಹಾಯದಿಂದ ದೃಷ್ಟಿ ತೆಗೆಯುವುದು
ಅ. ಪದ್ಧತಿ : ತಾವು ಉಪ್ಪು-ಸಾಸಿವೆಯಿಂದ ದೃಷ್ಟಿಯನ್ನು ತೆಗೆಯುವವರಿದ್ದೀರಿ, ಎಂದು ತಿಳಿಯೋಣ, ಆಗ ಕೈಯ ಐದೂ ಬೆರಳುಗಳನ್ನು ಜೋಡಿಸಿ ಅದರಲ್ಲಿ ಹಿಡಿಸುವಷ್ಟು ಉಪ್ಪು ಸಾಸಿವೆಯನ್ನು ಎರಡೂ ಕೈಗಳಲ್ಲಿ ತೆಗೆದುಕೊಂಡು ಕೈಯನ್ನು ಮುಷ್ಠಿ ಗಟ್ಟಬೇಕು. ಉಪ್ಪು ಮತ್ತು ಸಾಸಿವೆಯನ್ನು ಒಟ್ಟು ಮಾಡುವಾಗ ಉಪ್ಪಿನ ಪ್ರಮಾಣ ಜಾಸ್ತಿ ಮತ್ತು ಸಾಸಿವೆಯ ಪ್ರಮಾಣ ಕಡಿಮೆ ಇರಬೇಕು.
ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು ಹೊರಳಿಸಿದ ಮುಷ್ಠಿಯು ಕೆಳಗಿನ ಅಂದರೆ ಭೂಮಿಯ ದಿಕ್ಕಿಗೆ ಮಾಡಿ ಕೈಗಳ ಸ್ಥಿತಿ ‘ಕತ್ತರಿ’ (X) ಆಕಾರದಂತೆ ಮಾಡಿ ಎದ್ದು ನಿಂತುಕೊಳ್ಳಬೇಕು. ಅನಂತರ ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು ತನ್ನ ಕೈಗಳನ್ನು ಕೆಳಗಿನಿಂದ ಮೇಲಿನ ದಿಕ್ಕಿಗೆ ವರ್ತುಲಾಕಾರ ಪದ್ಧತಿಯಲ್ಲಿ ಒಳಗಿನಿಂದ ಹೊರಗಿನ ದಿಶೆಗೆ ತಿರುಗಿಸಬೇಕು. ದೃಷ್ಟಿಯನ್ನು ತೆಗೆದ ನಂತರ ಉಪ್ಪು-ಸಾಸಿವೆಯನ್ನು ಕೆಂಡದಲ್ಲಿ ಹಾಕಿ ಸುಡಬೇಕು.
ಆ. ಉಪ್ಪು-ಸಾಸಿವೆಯಿಂದ ದೃಷ್ಟಿಯನ್ನು ತೆಗೆದ ನಂತರ ದೃಷ್ಟಿಯು ಎಷ್ಟು ಪ್ರಮಾಣದಲ್ಲಿ ತಾಗಿದೆ ಎಂದು ಹೇಗೆ ಗುರುತಿಸುವುದು ? ಒಂದು ವೇಳೆ ಉಪ್ಪು-ಸಾಸಿವೆ ಕೆಂಡದ ಮೇಲೆ ಸುಟ್ಟ ನಂತರ ದುರ್ಗಂಧ ಬಂದರೆ ದೃಷ್ಟಿ ತಾಗಿದೆ, ದುರ್ಗಂಧ ಬರದಿದ್ದರೆ, ದೃಷ್ಟಿ ತಾಗಿಲ್ಲ ಮತ್ತು ಸ್ವಲ್ಪ ದುರ್ಗಂಧ ಬಂದರೆ, ದೃಷ್ಟಿಯು ಮಂದ ಸ್ವರೂಪದಲ್ಲಿ ತಾಗಿದೆ, ಎಂದು ತಿಳಿಯಬೇಕು.
೨. ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿಗಳ ಸಹಾಯದಿಂದ ದೃಷ್ಟಿ ತೆಗೆಯುವುದು
ಉಪ್ಪು- ಸಾಸಿವೆಯ ಬದಲು ಉಪ್ಪು-ಸಾಸಿವೆ ಮತ್ತು ಕೆಂಪು ಮೆಣಸಿನಕಾಯಿಯನ್ನು ಉಪಯೋಗಿಸಿಯೂ ದೃಷ್ಟಿಯನ್ನು ತೆಗೆಯಬಹುದು. ಅದರ ಪದ್ಧತಿ ಉಪ್ಪು-ಸಾಸಿವೆಯಿಂದ ದೃಷ್ಟಿಯನ್ನು ತೆಗೆಯುವ ಪದ್ಧತಿಯಂತೆಯೇ ಇದೆ. ಕೇವಲ ಕೆಂಪು ಮೆಣಸಿನಕಾಯಿಗಳನ್ನು ತೆಗೆದುಕೊಳ್ಳುವಾಗ ಅವುಗಳನ್ನು ವಿಷಮ (ಬೆಸ) ಸಂಖ್ಯೆಯಲ್ಲಿ ಅಂದರೆ ೩, ೫, ೭ ಅಥವಾ ೯ ಹೀಗೆ ತೆಗೆದುಕೊಳ್ಳಬೇಕು. ಉಪ್ಪು-ಮೆಣಸಿನಕಾಯಿ ಅಥವಾ ಉಪ್ಪು-ಸಾಸಿವೆ-ಕೆಂಪು ಮೆಣಸಿನಕಾಯಿಗಳಿಂದ ದೃಷ್ಟಿಯನ್ನು ತೆಗೆಯುವಾಗ ಘಾಟ ಬಂದು ಕೆಮ್ಮು ಬಂದರೆ, ದೃಷ್ಟಿ ತಾಗಿಲ್ಲ ಮತ್ತು ಘಾಟ ಬಂದರೂ ಕೆಮ್ಮು ಬರದಿದ್ದರೆ, ದೃಷ್ಟಿ ತಾಗಿದೆ, ಎಂದು ತಿಳಿಯಬೇಕು. ಸ್ವಲ್ಪದರಲ್ಲಿ, ಆಯಾ ಘಟಕಪದಾರ್ಥಗಳ ನೈಸರ್ಗಿಕ ಗುಣಧರ್ಮದ ವಿಪರೀತ ಪರಿಣಾಮ ಕಂಡು ಬಂದರೆ, ದೃಷ್ಟಿ ತಾಗಿದೆ, ಎಂದು ತಿಳಿಯಬೇಕು.
೩. ನಿಂಬೆಯಿಂದ ದೃಷ್ಟಿ ತೆಗೆಯುವುದು
ಅ. ಒಂದು ವೇಳೆ ತಾವು ನಿಂಬೆಯಿಂದ ದೃಷ್ಟಿ ತೆಗೆಯುವುದಿದ್ದರೆ, ಎರಡೂ ಕೈಗಳಲ್ಲಿ ನಿಂಬೆಯನ್ನು ಹಿಡಿದು ಅದನ್ನು ತೊಂದರೆ ಇರುವ ವ್ಯಕ್ತಿಯ ಕಾಲುಗಳಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳ ದಿಕ್ಕಿಗೆ ಪೂರ್ಣ ವರ್ತುಲಾಕಾರವಾಗಿ ನಿವಾಳಿಸಬೇಕು. ನಿಂಬೆಯನ್ನು ನಿವಾಳಿಸಿದ ನಂತರ ಅದನ್ನು ಕೆಂಡದಲ್ಲಿ ಸುಡಬೇಕು ಅಥವಾ ಹರಿಯುವ ನೀರಿನಲ್ಲಿ ವಿಸರ್ಜಿಸಬೇಕು.
ಆ. ದೃಷ್ಟಿ ತಾಗಿದುದರ ಪ್ರಮಾಣವು ಎಷ್ಟಿದೆ, ಎಂದು ಹೇಗೆ ಗುರುತಿಸಬೇಕು ? : ನಿಂಬೆಯಿಂದ ದೃಷ್ಟಿಯನ್ನು ತೆಗೆದ ನಂತರ ಅದು ಎಷ್ಟು ಪ್ರಮಾಣದಲ್ಲಿ ತಾಗಿತ್ತು ಎಂದು ಹೇಗೆ ಗುರುತಿಸಬೇಕು ? ದೃಷ್ಟಿ ತಾಗದಿದ್ದರೆ, ನಿಂಬೆಯು ನೀರಿನಲ್ಲಿ ತಕ್ಷಣ ಮುಳುಗುತ್ತದೆ, ಮಂದ ದೃಷ್ಟಿಯು ತಾಗಿದ್ದರೆ, ಅದು ತಕ್ಷಣ ಹರಿದು ಹೋಗುತ್ತದೆ. ಮಧ್ಯಮ ದೃಷ್ಟಿ ತಾಗಿದ್ದರೆ, ನಿಂಬೆಯು ನೀರಿನಲ್ಲಿಯೇ ಗರಗರ ತಿರುಗುತ್ತಿರುತ್ತದೆ ಮತ್ತು ತೀವ್ರ ದೃಷ್ಟಿಯಾಗಿದ್ದರೆ, ನಿಂಬೆಯು ನೀರಿನಲ್ಲಿ ಎಲ್ಲಿದ್ದಲ್ಲಿ ತೇಲುತ್ತದೆ. ಮುಂದೆ ಹೋಗುವುದಿಲ್ಲ. ದೃಷ್ಟಿಯನ್ನು ತೆಗೆದ ನಂತರ ನಾವು ನಿಂಬೆಯನ್ನು ಸುಟ್ಟೆವು ಎಂದು ತಿಳಿಯೋಣ. ಮತ್ತು ಅದು ಯಾವುದೇ ಸದ್ದು ಮಾಡದೇ ತಕ್ಷಣ ಸುಟ್ಟುಹೋಯಿತು ಎಂದಾದರೆ ದೃಷ್ಟಿಯು ತಾಗಿಲ್ಲ ಎಂದು ತಿಳಿಯಬೇಕು. ಮಂದ ದೃಷ್ಟಿಯು ತಾಗಿದ್ದರೆ, ನಿಂಬೆಯು ಸದ್ದು ಮಾಡುತ್ತಾ ಮೊದಲ ಪ್ರಯತ್ನದಲ್ಲಿಯೇ ಸುಟ್ಟುಹೋಗುತ್ತದೆ. ಮಧ್ಯಮ ದೃಷ್ಟಿ ತಾಗಿದ್ದರೆ, ಸುಟ್ಟ ನಂತರವೂ ನಿಂಬೆ ನೆರಿಗೆ ಬಿದ್ದಂತೆ ಕಾಣಿಸುತ್ತದೆ ಮತ್ತು ಅದರಿಂದ ದುರ್ಗಂಧ ಬರುತ್ತದೆ. ತೀವ್ರ ದೃಷ್ಟಿ ತಾಗಿದ್ದರೆ, ನಿಂಬೆಯು ತಕ್ಷಣ ಸುಡುವುದಿಲ್ಲ ಅಥವಾ ಅರ್ಧದಷ್ಟು ಸುಡುತ್ತದೆ, ನಿಂಬೆಯಿಂದ ಫಟ್ ಎಂಬ ಸದ್ದು ಬರುತ್ತದೆ, ಅಗ್ನಿಯು ಫರ್ ಫರ್ ಎಂದು ಉರಿಯತೊಡಗುತ್ತದೆ ಅಥವಾ ಅದರಿಂದ ನೇರಳೆ ಬಣ್ಣದ ಹೊಗೆಯು ಬರುತ್ತದೆ.
೪. ಕರ್ಪೂರದಿಂದ ದೃಷ್ಟಿ ತೆಗೆಯುವುದು
ಅ. ಭೀಮಸೇನಿ ಕರ್ಪೂರದಿಂದಲೂ ದೃಷ್ಟಿಯನ್ನು ತೆಗೆಯಬಹುದು. ಕರ್ಪೂರದಿಂದ ದೃಷ್ಟಿಯನ್ನು ತೆಗೆಯುವಾಗ ಕರ್ಪೂರದ ೧ ತುಂಡನ್ನು ಬಲಗೈಯಲ್ಲಿ ಹಿಡಿದು ಅದನ್ನು ದೃಷ್ಟಿ ತಾಗಿದ ವ್ಯಕ್ತಿಯ ಸುತ್ತಲೂ ಗಡಿಯಾರದ ಮುಳ್ಳುಗಳ ದಿಕ್ಕಿಗೆ ಕಾಲಿನಿಂದ ತಲೆಯವರೆಗೆ ಮತ್ತು ಪುನಃ ಕೆಳಗೆ ಹೀಗೆ ಮೂರು ಸಲ ನಿವಾಳಿಸಬೇಕು. ಅನಂತರ ಕರ್ಪೂರವನ್ನು ಕೆಂಡದಲ್ಲಿ ಹಾಕದೇ ಭೂಮಿಯ ಮೇಲೆಯೇ ಇಟ್ಟು ಸುಡಬೇಕು.
ಆ. ದೃಷ್ಟಿ ತಾಗಿದುದರ ಪ್ರಮಾಣವು ಎಷ್ಟಿದೆ, ಎಂದು ಹೇಗೆ ಗುರುತಿಸಬೇಕು ? : ದೃಷ್ಟಿ ತಾಗದಿದ್ದರೆ, ಕರ್ಪೂರವನ್ನು ಸುಟ್ಟ ನಂತರ ಜ್ಯೋತಿಯು ಸ್ಥಿರ ಮತ್ತು ಹೊಗೆರಹಿತವಿರುತ್ತದೆ. ಮಂದ ದೃಷ್ಟಿಯು ತಾಗಿದ್ದರೆ, ಕರ್ಪೂರವನ್ನು ಸುಟ್ಟ ನಂತರ ಜ್ಯೋತಿಯು ಚಂಚಲ ಮತ್ತು ಹೊಗೆ ರಹಿತವಿರುತ್ತದೆ. ಜ್ಯೋತಿಯು ಹೆಚ್ಚು ಚಂಚಲ ಮತ್ತು ಹೊಗೆಯು ಕಡಿಮೆ ಪ್ರಮಾಣದಲ್ಲಿದ್ದರೆ, ಆಗ ಮಧ್ಯಮ ಸ್ವರೂಪದ ದೃಷ್ಟಿ ತಾಗಿರುತ್ತದೆ. ಕರ್ಪೂರವು ಸುಟ್ಟ ನಂತರ ಕರ್ಪೂರದ ಜ್ಯೋತಿಯಿಂದ ಬಹಳ ಕಪ್ಪು ಹೊಗೆ ಹೊರಟರೆ, ತೀವ್ರ ಸ್ವರೂಪದ ದೃಷ್ಟಿಯು ತಾಗಿದೆ, ಎಂದು ತಿಳಿಯಬೇಕು.
೫. ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದು
ಅ ಪದ್ಧತಿ : ಉಪ್ಪು-ಸಾಸಿವೆ, ನಿಂಬೆ, ಕರ್ಪೂರ ಇವುಗಳ ವ್ಯತಿರಿಕ್ತ ತೆಂಗಿನಕಾಯಿಯಿಂದಲೂ ದೃಷ್ಟಿಯನ್ನು ತೆಗೆಯುತ್ತಾರೆ. ತೆಂಗಿನಕಾಯಿಯಲ್ಲಿ ಇತರ ಘಟಕಗಳಿಗಿಂತ ದೃಷ್ಟಿ ತೆಗೆಯುವ ಕ್ಷಮತೆ ಹೆಚ್ಚಾಗಿರುತ್ತದೆ. ಯಾವ ತೆಂಗಿನಕಾಯಿಯಿಂದ ದೃಷ್ಟಿಯನ್ನು ತೆಗೆಯುವುದಿರುತ್ತದೋ ಆ ತೆಂಗಿನಕಾಯಿಗೆ ಕೇವಲ ಜುಟ್ಟನ್ನು ಇಟ್ಟು ಉಳಿದ ನಾರನ್ನು ಸುಲಿದು ತೆಗೆಯಬೇಕು. ದೃಷ್ಟಿ ತೆಗೆಯುವವರು ಈ ತೆಂಗಿನಕಾಯಿಯನ್ನು ತಮ್ಮ ಅಂಗೈಯಲ್ಲಿ ಹಿಡಿದು ದೃಷ್ಟಿ ತೆಗೆಯಬೇಕಾದ ವ್ಯಕ್ತಿಯ ಎದುರು ನಿಂತುಕೊಳ್ಳಬೇಕು. ತೆಂಗಿನಕಾಯಿಯ ಜುಟ್ಟು ದೃಷ್ಟಿ ತೆಗೆಯಬೇಕಾಗಿರುವ ವ್ಯಕ್ತಿಯ ಕಡೆಗೆ ಇರಬೇಕು. ದೃಷ್ಟಿ ತೆಗೆಯಬೇಕಾದ ವ್ಯಕ್ತಿಯು ತೆಂಗಿನಕಾಯಿಯ ಜುಟ್ಟಿನ ಕಡೆಗೆ ನೋಡಬೇಕು. ದೃಷ್ಟಿ ತೆಗೆಯಬೇಕಾದ ವ್ಯಕ್ತಿಯ ಕಾಲಿನಿಂದ ತಲೆಯವರೆಗೆ ಗಡಿಯಾರದ ಮುಳ್ಳುಗಳ ದಿಶೆಗೆ ವರ್ತುಲಾಕಾರ ಪದ್ಧತಿಯಲ್ಲಿ ತೆಂಗಿನಕಾಯಿಯನ್ನು ಮೂರು ಸಲ ತಿರುಗಿಸಬೇಕು. ಅನಂತರ ಆ ವ್ಯಕ್ತಿಯ ಸುತ್ತಲೂ ಮೂರು ಸುತ್ತು ಹಾಕಬೇಕು. ಈ ತೆಂಗಿನಕಾಯಿಯನ್ನು ಮೂರು ರಸ್ತೆಗಳು ಸೇರುವ ಸ್ಥಳದಲ್ಲಿ ಅಥವಾ ಮಾರುತಿಯ ದೇವಸ್ಥಾನದಲ್ಲಿ ಒಡೆಯಬೇಕು.
ಆ. ದೃಷ್ಟಿಯು ತಾಗಿದ ಪ್ರಮಾಣವು ಎಷ್ಟಿದೆ, ಎಂದು ಹೇಗೆ ಗುರುತಿಸುವುದು ? : ದೃಷ್ಟಿಯು ಮಧ್ಯಮ ಪ್ರಮಾಣದಲ್ಲಿ ತಾಗಿದ್ದರೆ ತೆಂಗಿನಕಾಯಿಯು ಒಡೆದ ನಂತರ ಅದರಲ್ಲಿನ ನೀರು ವೇಗದಿಂದ ಮೇಲೆ ಚಿಮ್ಮುತ್ತದೆ. ತೆಂಗಿನಕಾಯಿಯನ್ನು ಒಡೆದಾಗ ಅದು ಕೆಟ್ಟು ಹೋಗಿರುವುದು ಗೊತ್ತಾಗುತ್ತದೆ. ದೃಷ್ಟಿಯು ತೀವ್ರವಾಗಿ ತಾಗಿದ್ದರೆ, ತೆಂಗಿನಕಾಯಿಯು ಉದ್ದಕ್ಕೆ ಸೀಳುತ್ತದೆ. ತೆಂಗಿನಕಾಯಿಯು ಒಡೆದ ನಂತರ ಅದರ ತುಂಡುಗಳಾಗುತ್ತವೆ ಅಥವಾ ತೆಂಗಿನಕಾಯಿಯು ಬೇಗನೆ ಒಡೆಯುವುದಿಲ್ಲ.
ಈಗ ತಾವು ದೃಷ್ಟಿಯನ್ನು ತೆಗೆಯುವ ಕೆಲವು ಪದ್ಧತಿಗಳ ಬಗ್ಗೆ ತಿಳಿದುಕೊಂಡಿರಿ. ಅದರಿಂದ ದೃಷ್ಟಿಯನ್ನು ತೆಗೆಯುವುದು ಕೂಡ ಒಂದು ಪರಿಪೂರ್ಣ ಶಾಸ್ತ್ರವಾಗಿದೆ ಎಂದು ತಮ್ಮ ಗಮನಕ್ಕೆ ಬರುತ್ತದೆ. ದೃಷ್ಟಿ ತೆಗೆಯುವುದು ಮನೆಯಲ್ಲಿ ಮಾಡುವಂತಹ ಒಂದು ಸುಲಭ ಆಧ್ಯಾತ್ಮಿಕ ಉಪಾಯವಾಗಿದೆ. ಉಪ್ಪು-ಸಾಸಿವೆ, ನಿಂಬೆ, ಕರ್ಪೂರ ಅಥವಾ ತೆಂಗಿನಕಾಯಿ ಈ ಘಟಕಗಳು ಸರ್ವಸಾಮಾನ್ಯವಾಗಿ ಸಹಜವಾಗಿ ಮನೆಯಲ್ಲಿ ಸಿಗುತ್ತವೆ. ಅವುಗಳನ್ನು ಬಳಸಿ ದೃಷ್ಟಿ ತೆಗೆದರೆ, ಆಧ್ಯಾತ್ಮಿಕ ಸ್ತರದಲ್ಲಿ ಅದರ ಬಹಳ ಲಾಭವಾಗುತ್ತದೆ. ಹುಣ್ಣಿಮೆ-ಅಮಾವಾಸ್ಯೆ ಈ ತಿಥಿಗಳಂದು ವಾತಾವರಣದಲ್ಲಿ ಕೆಟ್ಟ ಶಕ್ತಿಗಳ ಪ್ರಮಾಣವು ಹೆಚ್ಚಾಗಿರುತ್ತದೆ. ಆದುದರಿಂದ ಈ ತಿಥಿಗಳಂದು ಅಥವಾ ತಮಗೆ ಯಾವ ಸಮಯದಲ್ಲಿ ತೊಂದರೆ ಅನಿಸುವುದೋ, ಆ ಸಮಯದಲ್ಲಿ ತಾವು ಅವಶ್ಯವಾಗಿ ಮನೆಯಲ್ಲಿ ಕುಟುಂಬದವರಿಂದ ತಮ್ಮ ದೃಷ್ಟಿಯನ್ನು ತೆಗೆಸಿಕೊಳ್ಳಬಹುದು.
ಎ. ದೃಷ್ಟಿಯನ್ನು ತೆಗೆಯುವ ಪ್ರಕ್ರಿಯೆಯಲ್ಲಿ ಭಾವವು ಮಹತ್ವದ್ದಾಗಿದೆ
ಅಧ್ಯಾತ್ಮದಲ್ಲಿ ‘ಭಾವ’ಕ್ಕೆ ಬಹಳ ಮಹತ್ವವಿದೆ. ಭಾವವನ್ನಿಟ್ಟು ಯಾವುದಾದರೊಂದು ಕೃತಿಯನ್ನು ಮಾಡಿದರೆ ಅದರ ಫಲಿತಾಂಶದ ಗುಣಮಟ್ಟವೂ ಬಹಳ ಹೆಚ್ಚಾಗುತ್ತದೆ. ಆದುದರಿಂದ ದೃಷ್ಟಿಯನ್ನು ತೆಗೆಯುವಾಗ ಪ್ರಾರ್ಥನೆ ಮಾಡುವುದರೊಂದಿಗೆ ಭಾವವನ್ನಿಟ್ಟುಕೊಳ್ಳುವುದೂ ಮಹತ್ವದ್ದಾಗಿರುತ್ತದೆ. ಯಾವ ವ್ಯಕ್ತಿಯ ದೃಷ್ಟಿಯನ್ನು ತೆಗೆಯಬೇಕಾಗಿದೆಯೋ, ಆ ವ್ಯಕ್ತಿಯು ಮುಂದಿನ ರೀತಿ ಭಾವವಿಟ್ಟುಕೊಳ್ಳಬೇಕು, ‘ದೃಷ್ಟಿಯನ್ನು ತೆಗೆಯುವ ವ್ಯಕ್ತಿಯೆಂದರೆ ಪ್ರತ್ಯಕ್ಷ ನ/ನನ್ನ ಉಪಾಸ್ಯದೇವತೆಯಾಗಿದ್ದು ಅವರು ದೃಷ್ಟಿಯನ್ನು ತೆಗೆಯುತ್ತಿರುವ ಘಟಕದಲ್ಲಿ ನನ್ನ ಶರೀರದಲ್ಲಿನ ಮತ್ತು ಶರೀರದ ಸುತ್ತಲಿನ ತೊಂದರೆದಾಯಕ ಶಕ್ತಿ ಸೆಳೆಯುತ್ತಿದ್ದು ಮತ್ತು ನನ್ನ ಸುತ್ತಲೂ ಚೈತನ್ಯದ ಸಂರಕ್ಷಣ ಕವಚವನ್ನು ನಿರ್ಮಿಸುತ್ತಿದ್ದಾರೆ.’ ದೃಷ್ಟಿಯನ್ನು ತೆಗೆಯುವ ವ್ಯಕ್ತಿಯು ಇಂತಹ ಭಾವವನ್ನು ಇಟ್ಟುಕೊಳ್ಳಬಹುದು, ‘ನನ್ನ ಸ್ಥಳದಲ್ಲಿ ದೇವರೇ ಇರುವರು, ಅವರು ಎದುರಿರುವ ವ್ಯಕ್ತಿಯ ದೃಷ್ಟಿಯನ್ನು ತೆಗೆಯುತ್ತಿದ್ದಾರೆ ಮತ್ತು ಎದುರಿರುವ ವ್ಯಕ್ತಿಯಲ್ಲಿನ ಎಲ್ಲ ತೊಂದರೆದಾಯಕ ಶಕ್ತಿಯು ದೃಷ್ಟಿಯನ್ನು ತೆಗೆಯುವ ಘಟಕದಲ್ಲಿ ಸೆಳೆಯಲ್ಪಡುತ್ತಿದೆ.’.
ಏ. ಅನುಭೂತಿ
ದೃಷ್ಟಿಯನ್ನು ತೆಗೆದ ನಂತರ ಆಧ್ಯಾತ್ಮಿಕ ತೊಂದರೆಯು ಕಡಿಮೆಯಾದ ಬಗ್ಗೆ ಅನುಭೂತಿಯನ್ನೂ ಅನೇಕ ಜನರು ಪಡೆದಿದ್ದಾರೆ. ಓರ್ವ ಸಾಧಕರಿದ್ದರು. ಅವರಿಗೆ ಸತತ ೭-೮ ದಿನ ಮಾನಸಿಕ ತೊಂದರೆಯಾಗುತ್ತಿತ್ತು. ಆ ಕಾಲದಲ್ಲಿ ಅವರ ಸಿಡಿಮಿಡಿಗೊಳ್ಳುವಿಕೆ ಮತ್ತು ನಕಾರಾತ್ಮಕತೆಯಲ್ಲಿಯೂ ಹೆಚ್ಚಾಗಿತ್ತು. ಅವರಿಗೆ ಸತತವಾಗಿ ೩ ದಿನ ದೃಷ್ಟಿಯನ್ನು ತೆಗೆದ ನಂತರ ಅವರಿಗಾಗುವ ತೊಂದರೆ ಬಹಳಷ್ಟು ಪ್ರಮಾಣದಲ್ಲಿ ಕಡಿಮೆಯಾಯಿತು. ತಾವೂ ಸಹ ಪ್ರತ್ಯಕ್ಷ ಕೃತಿ ಮಾಡಿ ಅನುಭವವನ್ನು ಪಡೆಯಿರಿ.
ಅಧ್ಯಾತ್ಮವು ಕೃತಿಯ ಮತ್ತು ಅನುಭೂತಿಯ ಶಾಸ್ತ್ರವಾಗಿದೆ. ಇಲ್ಲಿ ಹೇಳಲಾಗುವ ಆಧ್ಯಾತ್ಮಿಕ ಉಪಾಯಗಳನ್ನು ಪ್ರತ್ಯಕ್ಷ ಮಾಡಿ ಅದರ ಅನುಭವವನ್ನು ಪಡೆಯಿರಿ!