ಶ್ರಾವಣ ಕೃಷ್ಣ ಪಕ್ಷ ಅಷ್ಟಮಿಯಂದು ಮಧ್ಯರಾತ್ರಿ, ರೋಹಿಣಿ ನಕ್ಷತ್ರದಲ್ಲಿ, ಚಂದ್ರನು ವೃಷಭ ರಾಶಿಯಲ್ಲಿರುವಾಗ ಭಗವಾನ ಶ್ರೀಕೃಷ್ಣನ ಜನ್ಮವಾಯಿತು. ಈ ದಿನ ಶ್ರೀಕೃಷ್ಣನ ತತ್ತ್ವವು ೧ ಸಾವಿರ ಪಟ್ಟು ಕಾರ್ಯರತವಿರುತ್ತದೆ. ಈ ತಿಥಿಗೆ ಶ್ರೀಕೃಷ್ಣಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂಬ ಹೆಸರುಗಳಿಂದ ಸಂಬೋಧಿಸಲಾಗುತ್ತದೆ. ಈ ನಿಮಿತ್ತ ನಾವು ಭಗವಾನ ಶ್ರೀಕೃಷ್ಣನ ಮಾಹಿತಿ, ಅವನ ವಿವಿಧ ಗುಣವೈಶಿಷ್ಟ್ಯಗಳು, ಅವನ ಜೀವನದಲ್ಲಿ ಘಟಿಸಿದ ಪ್ರಸಂಗಗಳು ಮತ್ತು ಅವುಗಳ ಆಧ್ಯಾತ್ಮಿಕ ಮಹತ್ವ ಮತ್ತು ಅವನ ಲೀಲೆ ಇವುಗಳ ಮಾಹಿತಿಯನ್ನು ತಿಳಿದುಕೊಳ್ಳೋಣ.
೧. ಸಂಬಂಧಿತ ಋಷಿಗಳು, ಭಕ್ತರು ಮತ್ತು ಸಂತರು
ಅ. ಸಂಬಂಧಿತ ಋಷಿಗಳು
ಶಾಂಡಿಲ್ಯ ಋಷಿಗಳು, ಗಂಗಾಚಾರ್ಯರು, ಸಾಂದಿಪನಿ ಋಷಿಗಳು, ಮಹರ್ಷಿ ವ್ಯಾಸರು ಮುಂತಾದ ಋಷಿಗಳು ಶ್ರೀಕೃಷ್ಣನ ಭಕ್ತರಾಗಿದ್ದರು.
ಆ. ಸಂಬಂಧಿತ ಭಕ್ತರು
ವಸುದೇವ, ದೇವಕಿ, ಯಶೋದಾ, ನಂದರಾಜಾ, ಬಲರಾಮ, ರಾಧಾ, ಗೋಪಿಯರು, ಸುದಾಮಾ, ಅರ್ಜುನ, ಅಕ್ರೂರ, ಉದ್ಧವ, ಭೀಷ್ಮಾಚಾರ್ಯರು, ವಿದುರ, ಹೀಗೆ ಶ್ರೀಕೃಷ್ಣನ ಅನೇಕ ಭಕ್ತರಿದ್ದರು.
ಭಕ್ತಿಯ ವಿವಿಧ ಪ್ರಕಾರಗಳಿಂದ ಶ್ರೀಕೃಷ್ಣನ ಉಪಾಸನೆಯನ್ನು ಮಾಡುವ ಕೃಷ್ಣಭಕ್ತರು
೧. ವಾತ್ಸಲ್ಯಭಾವವಿರುವ ದೇವಕಿ ಮತ್ತು ವಸುದೇವ ಮತ್ತು ನಂದರಾಜಾ ಮತ್ತು ಯಶೋದಾ
೨. ಸಖ್ಯಭಾವವಿರುವ ಗೋಪರು
೩. ಮಧುರಾಭಕ್ತಿಯನ್ನು ಮಾಡುವ ಗೋಪಿಯರು ಮತ್ತು ರಾಧಾ
೪. ಕಾಂತಾಭಕ್ತಿಯನ್ನು ಮಾಡುವ ರುಕ್ಮಿಣಿ, ಸತ್ಯಭಾಮಾ, ಕಾಲಿಂದಿ ಮುಂತಾದ ರಾಣಿಯರು
೫. ವಂದನಭಕ್ತಿಯನ್ನು ಮಾಡುವ ಅಕ್ರೂರ
೬. ಸಖ್ಯಭಕ್ತಿಯನ್ನು ಮಾಡುವ ಅರ್ಜುನ
೭. ಆತ್ಮನಿವೇದನ ಭಕ್ತಿಯನ್ನು ಮಾಡುವ ಬಲಿರಾಜಾ
೮. ವಿರೋಧಭಕ್ತಿಯನ್ನು ಮಾಡುವ ಕಂಸ, ಚಾಣೂರ, ಬಾಣಾಸೂರ, ಜರಾಸಂಧ, ದುರ್ಯೋಧನ, ಶಕುನಿ, ಶಿಶುಪಾಲ ಮುಂತಾದ ದುರ್ಜನರು.
ಇ. ಸಂಬಂಧಿತ ಸಂತರು
ಕಲಿಯುಗದಲ್ಲಿ ಸಂತ ಮೀರಾ, ಸಂತ ಸೂರದಾಸ, ಸಂತ ನರಸಿ ಮೇಹತಾ, ಸಂತ ಜ್ಞಾನೇಶ್ವರ, ಸಂತ ಏಕನಾಥ, ಸಂತ ಕನಕದಾಸ, ಚೈತನ್ಯ ಮಹಾಪ್ರಭು ಮುಂತಾದ ಸಂತರು ಶ್ರೀಕೃಷ್ಣನ ನಿಸ್ಸೀಮ ಭಕ್ತಿಯನ್ನು ಮಾಡಿದರು.
೨. ಶ್ರೀಕೃಷ್ಣನ ಕಾರ್ಯಕ್ಕನುಸಾರವಿರುವ ವಿವಿಧ ರೂಪಗಳು
ಭಗವಾನ ಶ್ರೀಕೃಷ್ಣನು ಕಾರ್ಯಕ್ಕನುಸಾರ ವಿವಿಧ ರೂಪಗಳನ್ನು, ಉದಾ. ಮುರಲೀಧರ, ಸುದರ್ಶನಚಕ್ರಧಾರಿ, ಗೋಪಾಲನೆಯನ್ನು ಮಾಡುವ ಶ್ರೀಕೃಷ್ಣ, ಗೋವರ್ಧನಗಿರಿಧಾರಿ ಕೃಷ್ಣ ಆದಿ ಧರಿಸಿದನು.
ಅ. ಶ್ರೀಕೃಷ್ಣನ ತಾರಕ ರೂಪಗಳು
ಅ ೧. ಬಾಲಕೃಷ್ಣ : ಬಾಲರೂಪದಲ್ಲಿನ ಬೆಣ್ಣೆಯನ್ನು ಕದ್ದು ಬಾಲಲೀಲೆಯನ್ನು ಮಾಡುವ ಕೃಷ್ಣ.
ಅ ೨. ಮುರಲೀಧರ ಕೃಷ್ಣ : ಕೊಳಲನ್ನು ಊದಿ ಎಲ್ಲರನ್ನು ಮಂತ್ರಮುಗ್ಧ ಮಾಡಿ ಆಕರ್ಷಿಸುವ ಕಿಶೋರ ವಯಸ್ಸಿನ ಮುರಲೀಧರ ಕೃಷ್ಣ.
ಅ ೩. ಅರ್ಜುನನಿಗೆ ಗೀತೆಯನ್ನು ಹೇಳುವ ಜಗದ್ಗುರು ರೂಪದಲ್ಲಿನ ಶ್ರೀಕೃಷ್ಣ : ಮಹಾಭಾರತದ ಯುದ್ಧ ಆರಂಭವಾಗುವ ಮೊದಲು ಅರ್ಜುನನು ಭಯಗೊಂಡು ಕೈಕಾಲು ಆಡದ ಹಾಗೆ ಆದಾಗ, ಅವನಿಗೆ ಮಾರ್ಗದರ್ಶನ ಮಾಡಲು ಶ್ರೀಕೃಷ್ಣನು ಅವನಿಗೆ ಶ್ರೀಮದ್ಭಗವದ್ಗೀತೆಯ ಉಪನ್ಯಾಸ ಮಾಡಿ ಮತ್ತು ಅವನ ಜಗದ್ಗುರು ರೂಪವನ್ನು ಪ್ರಕಟಗೊಳಿಸಿ ಅರ್ಜುನನಿಗೆ ಆತ್ಮಜ್ಞಾನವನ್ನು ನೀಡಿದನು.
ಆ. ಶ್ರೀಕೃಷ್ಣನ ಮಾರಕ ರೂಪಗಳು
ಆ ೧. ಸುದರ್ಶನಚಕ್ರಧಾರಿ ಕೃಷ್ಣ : ತಾರುಣ್ಯಾದಲ್ಲಿ ಅನೇಕ ದೈತ್ಯರನ್ನು, ಅಸುರರನ್ನು ಮತ್ತು ದುರ್ಜನರನ್ನು ನಾಶಮಾಡಲು ಶ್ರೀಕೃಷ್ಣನು ಸುದರ್ಶನಚಕ್ರದ ಧಾರಣೆ ಮಾಡಿದನು.
ಆ ೨. ರಥದ ಚಕ್ರವನ್ನು ಕೈಯಲ್ಲಿ ತೆಗೆದುಕೊಂಡು ಭೀಷ್ಮಚಾರ್ಯರ ದಿಶೆಯಲ್ಲಿ ಓಡುವ ರಣಕ್ಷೇತ್ರದ ಶ್ರೀಕೃಷ್ಣ : ಮಹಾಭಾರತದ ಯುದ್ಧದಲ್ಲಿ ಅರ್ಜುನನು ಭೀಷ್ಮಾಚಾರ್ಯರೊಂದಿಗೆ ನಿರ್ಣಾಯಕ ಯುದ್ಧವನ್ನು ಮಾಡದೇ ಇದ್ದುದರಿಂದ ಅವರನ್ನು ಪರಾಜಯಗೊಳಿಸಲು ದಿಕ್ಕಿರಲ್ಲಿಲ್ಲ. ಆಗ ಭೀಷ್ಮಾಚಾರ್ಯರ ಮೇಲೆ ಕ್ರೋಧಗೊಂಡು ಶ್ರೀಕೃಷ್ಣನು ಅರ್ಜುನನ ರಥದ ಸಾರಥ್ಯ ಮಾಡುವುದನ್ನು ಬಿಟ್ಟು ಕೈಯಲ್ಲಿ ರಥ ಒಂದರ ಚಕ್ರವನ್ನು ಹಿಡಿದು ಭೀಷ್ಮಾಚಾರ್ಯರ ದಿಕ್ಕಿನಲ್ಲಿ ಓಡಿದನು. ಆಗ ಅರ್ಜುನನಿಗೆ ತನ್ನ ತಪ್ಪು ಗಮನಕ್ಕೆ ಬಂತು ಮತ್ತು ಅವನು ಓಡುತ್ತಾ ಹೋಗಿ ಶ್ರೀಕೃಷ್ಣನ ಚರಣಗಳನ್ನು ಹಿಡಿದನು ಮತ್ತು ಶ್ರೀಕೃಷ್ಣನು ‘ತಾನು ಕೈಯಲ್ಲಿ ಶಸ್ತ್ರವನ್ನು ಧಾರಣೆ ಮಾಡುವುದಿಲ್ಲ’ವೆಂಬ ಪ್ರಮಾಣವನ್ನು ತೆಗೆದುಕೊಂಡಿರುವ ಬಗ್ಗೆ ಅವನಿಗೆ ನೆನಪಿಸಿದನು.
೩. ಯುಗಗಳಿಗನುಸಾರ ಶ್ರೀಕೃಷ್ಣನ ಕಾರ್ಯ, ಅವತಾರ ಮತ್ತು ರೂಪಗಳು
೩ ಅ. ದ್ವಾಪರಯುಗದಲ್ಲಿ ತೆಗೆದುಕೊಂಡ ಅವತಾರ
೩ ಅ ೧. ಬ್ರಹ್ಮದೇವರ ಅಹಂಕಾರ ನಷ್ಟ ಮಾಡಲು ಶ್ರೀಕೃಷ್ಣನು ಗೋಪಬಾಲಕ ಮತ್ತು ಕರುವಿನ ರೂಪದಲ್ಲಿ ಅವತರಿಸುವುದು : ಯೋಗಮಾಯೆಯ ಪ್ರಭಾವದಿಂದಾಗಿ ಬ್ರಹ್ಮದೇವರ ಮನಸ್ಸಿನಲ್ಲಿ ‘ಶ್ರೀಕೃಷ್ಣನು ನಿಜವಾಗಿ ಪೂರ್ಣವತಾರವೇ ?’, ಎಂಬ ಸಂದೇಹ ನಿರ್ಮಾಣವಾಯಿತು. ಅವನು ಶ್ರೀಕೃಷ್ಣನ ಪರೀಕ್ಷೆ ಮಾಡಲು ಗೋಪಬಾಲಕ ಮತ್ತು ಹುಲ್ಲು ತಿನ್ನಲು ಹೋದ ಕರುಗಳನ್ನು ಅದೃಶ್ಯ ಮಾಡಿ ಅವುಗಳನ್ನು ಬ್ರಹ್ಮಲೋಕಕ್ಕೆ ತೆಗೆದುಕೊಂಡು ಹೋದರು. ಶ್ರೀಕೃಷ್ಣನಿಗೆ, ‘ಈ ಕೃತ್ಯವನ್ನು ಬ್ರಹ್ಮದೇವರು ಮಾಡಿದ್ದಾರೆ’, ಎಂದು ಗೊತ್ತಾಯಿತು. ಸಾಯಂಕಾಲ ಮನೆಗೆ ಬಂದ ನಂತರ ಗೋಪಬಾಲಕರ ತಾಯಿ ಮತ್ತು ಕರುಗಳ ಗೋಮಾತೆಯರಿಗೆ ಅನುಕ್ರಮವಾಗಿ ಗೋಪಬಾಲಕ ಮತ್ತು ಕರುಗಳು ಭೇಟಿಯಾಗದ ಕಾರಣ ಅವರು ದುಃಖಿತರಾಗುವರು; ಎಂದು ಶ್ರೀಕೃಷ್ಣನು ತನ್ನ ರೂಪವನ್ನು ವಿಸ್ತರಿಸಿ ಗೋಪಬಾಲಕ ಮತ್ತು ಕರುಗಳ ರೂಪಗಳನ್ನು ಧಿರಿಸಿದನು. ಈ ರೀತಿ ಶ್ರೀಕೃಷ್ಣ ಯೋಗಮಾಯೆಯ ಬಲದಿಂದ ಗೋಪ ಮತ್ತು ಕರುಗಳ ರೂಪದಲ್ಲಿ ಅವತರಿಸಿದನು. ಅವನು ಗೋಪಬಾಲಕ ಮತ್ತು ಕರುಗಳ ರೂಪವನ್ನು ಒಂದು ವರ್ಷ ಧಾರಿಸಿದನು. ವೃಂದಾವನದಲ್ಲಿ ಶ್ರೀಕೃಷ್ಣನ ದಶೆ ನೋಡಲು ಬಂದಂತಹ ಬ್ರಹ್ಮದೇವರಿಗೆ ಗೋಪಬಾಲಕ ಮತ್ತು ಕರುಗಳು ಶ್ರೀಕೃಷ್ಣನೊಂದಿಗೆ ಉಪಸ್ಥಿತರಿದ್ದ ದೃಶ್ಯ ಕಾಣಿಸಿತು, ಆಗ ಬ್ರಹ್ಮದೇವರಿಗೆ ಪ್ರತಿಯೊಬ್ಬ ಗೋಪಬಾಲಕ ಮತ್ತು ಕರುವಿನಲ್ಲಿ ಶ್ರೀಮನ್ನಾರಾಯಣನ ದರ್ಶನವಾಯಿತು. ಅದರ ನಂತರ ಬ್ರಹ್ಮದೇವರ ಅಹಂಕಾರ ನಷ್ಟವಾಯಿತು ಮತ್ತು ಬ್ರಹ್ಮಲೋಕಕ್ಕೆ ತೆಗೆದುಕೊಂಡು ಹೋದಂತಹ ಗೋಪಬಾಲಕ ಮತ್ತು ಕರುಗಳನ್ನು ಮತ್ತೇ ವೃಂದಾವನದಕ್ಕೆ ತಂದು ಬಿಟ್ಟರು. ಆಗ ಶ್ರೀಕೃಷ್ಣನು ವಹಿಸಿದ ಗೋಪಬಾಲಕ ಮತ್ತು ಕರುಗಳ ರೂಪ ಅದೃಶ್ಯವಾಯಿತು.
೩ ಅ ೨. ಮಹರ್ಷಿ ವ್ಯಾಸರು : ಮಹರ್ಷಿ ವ್ಯಾಸರನ್ನು ಶ್ರೀಕೃಷ್ಣನ ಜ್ಞಾನಾವತಾರವೆಂದು ಗೌರವಿಸಲಾಗುತ್ತದೆ.
೩ ಅ ೩. ವಸ್ತ್ರಾವತಾರ : ಯಾವಾಗ ದುಃಶಾಸನನು ಕೌರವರ ಸಭೆಯಲ್ಲಿ ದ್ರೌಪದಿಯ ವಸ್ತ್ರಹರಣ ಮಾಡುತ್ತಿದ್ದನೋ, ಆಗ ದ್ರೌಪದಿಯು ತನ್ನ ರಕ್ಷಣೆ ಮಾಡಲು ಶ್ರೀಕೃಷ್ಣನಿಗೆ ಕಳಕಳಿಯಿಂದ ಪ್ರಾರ್ಥನೆ ಮಾಡಿದಳು. ದ್ರೌಪದಿಯ ರಕ್ಷಣೆ ಮಾಡಲು ಶ್ರೀಕೃಷ್ಣನು ವಸ್ತ್ರದ ಅವತಾರವನ್ನು ಧಾರಣೆ ಮಾಡಿ ಅವಳಿಗೆ ಕೊನೆಯಿಲ್ಲದ ಸೀರೆಯನ್ನು ಪೂರೈಸಿದನು.
೩ ಆ. ಕಲಿಯುಗದಲ್ಲಿ ತೆಗೆದುಕೊಂಡಂತಹ ಅವತಾರ ಮತ್ತು ರೂಪ
೩ ಆ ೧. ವಿಠ್ಠಲನ ಅವತಾರ : ಭಕ್ತ ಪುಂಡಲೀಕನ ಭಕ್ತಿಗೆ ಪ್ರಸನ್ನಗೊಂಡು ಶ್ರೀವಿಷ್ಣುವು ವಿಠ್ಠಲನ ಅವತಾರ] ಧಾರಣೆ ಮಾಡಿದನು. ಶ್ರೀವಿಠ್ಠಲನೆಂದರೆ ಶ್ರೀಕೃಷ್ಣನ ತಾರಕ ರೂಪವೇ.
೩ ಆ ೨. ಶ್ರೀಖಂಡ್ಯಾ : ಮಹಾರಾಷ್ಟ್ರದ ಪೈಠಣ ಎಂಬಲ್ಲಿ ವಾಸಿಸುವ ಶ್ರೇಷ್ಠ ಕೃಷ್ಣಭಕ್ತ ಸಂತರಾದ ಏಕನಾಥ ಮಹಾರಾಜರ ಭಕ್ತಿಗೆ ಪ್ರಸನ್ನಗೊಂಡು ಶ್ರೀಕೃಷ್ಣನು ಶ್ರೀಖಂಡ್ಯಾನ ರೂಪ ಧಾರಣೆ ಮಾಡಿ ನಾಥರ ಮನೆಯಲ್ಲಿ ಹನ್ನೆರಡು ವರ್ಷಗಳಿದ್ದು ಮನೆಯಲ್ಲಿನ ಎಲ್ಲ ಕೆಲಸಗಳನ್ನು ಮಾಡಿ ಅವರ ಮನೋಭಾವದಿಂದ ಸೇವೆಯನ್ನು ಮಾಡಿದನು.
೪. ವಿವಿಧ ಗುಣವೈಶಿಷ್ಟ್ಯಗಳು ಮತ್ತು ವೈಶಿಷ್ಟ್ಯಪೂರ್ಣ ಘಟನೆಗಳು
೪ ಅ. ಶ್ರೀಕೃಷ್ಣನ ಕುಮಾರ ಮತ್ತು ತಾರುಣ್ಯಾವಸ್ಥೆ : ಶ್ರೀಕೃಷ್ಣನು ಕುಮಾರ ಮತ್ತು ತಾರುಣ್ಯಾವಸ್ಥೆಯಲ್ಲಿರುವಾಗ ಗೋಕುಲದಲ್ಲಿ ವಿವಿಧ ಬಾಲಲೀಲೆಯನ್ನು ಮಾಡಿದನು. ಅವನು ಯಶೋದಾಮಾತೆಗೆ ತನ್ನ ಬಾಯಿಯಲ್ಲಿ ಅಖಿಲ ಬ್ರಹ್ಮಾಂಡದ ದರ್ಶನ ಮಾಡಿಸಿದನು, ಹಣ್ಣುಗಳ ಮಾರಾಟ ಮಾಡುವ ಮಾಹಿಳೆಯ ನೀಡಿದ ಹಣ್ಣುಗಳ ಪ್ರತಿಫಲವಾಗಿ ಅವಳ ಹಣ್ಣುಗಳ ಬುಟ್ಟಿಯನ್ನು ರತ್ನಗಳಿಂದ ತುಂಬಿಸಿದನು. ಗೋಪಿಯರ ಮನೆಗೆ ಹೋಗಿ ಅವರು ನೆಲುವಿಗೆ ಕಟ್ಟಿಟ್ಟ ಬೆಣ್ಣೆಯನ್ನು ಕದ್ದು ತಿಂದನು. ಈ ರೀತಿಯ ಅನೇಕ ಬಾಲಲೀಲೆಯನ್ನು ಶ್ರೀಕೃಷ್ಣನು ಮಾಡಿದನು.
೪ ಆ. ಕಂಸ ಕಳುಹಿಸಿದ ವಿವಿಧ ದೈತ್ಯರ ನಾಶ ಮಾಡುವುದು : ಶ್ರೀಕೃಷ್ಣನು ವೃಂದಾವನದಲ್ಲಿರುವಾಗ ಕಂಸನು ಕೃಷ್ಣನನ್ನು ಕೊಲ್ಲಲು ಕಳುಹಿಸಿದ ಪೂತನಿ, ತೃಣಾವರ್ತ, ಕಾಗಾಸುರ, ಆಗಾಸುರ, ಕೇಶಿ, ಅರಿಷ್ಟಾಸುರ, ಪ್ರಲಂಬಾಸುರ, ಧೆನುಕಾಸುರ, ವ್ಯೋಮಾಸುರ ಮುಂತಾದ ಅಸುರರನ್ನು ಯಮಲೋಕಕ್ಕೆ ಕಳುಹಿಸಿದನು.
೪ ಇ. ಕಾಲಿಯಾಮರ್ದನ : ಯಮುನೆಯ ನೀರನ್ನು ವಿಷಮಯವನ್ನಾಗಿ ಮಾಡುವ ಮತ್ತು ೧೦೦ ಹೆಡೆಗಳಿರುವ ಕಾಲಿಯಾ ನಾಗನನ್ನು ಶ್ರೀಕೃಷ್ಣನು ಪರಾಭವಗೊಳಿಸಿ ಅವನ ಹೆಡೆಗಳ ಮೇಲೆ ನಿಂತು ನೃತ್ಯವನ್ನು ಮಾಡಿದನು. ಆ ದಿನ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ, ಎಂದರೆ ನಾಗಪಂಚಮಿಯಾಗಿತ್ತು.
೪ ಈ. ಗೋವರ್ಧನ ಪರ್ವತವನ್ನು ಎತ್ತುವುದು : ಇಂದ್ರನು ಮಾಡಿದ ಅತಿವೃಷ್ಟಿಯಿಂದಾಗಿ ಗೋಕುಲದ ನಿವಾಸಿಗಳ ರಕ್ಷಣೆ ಮಾಡಲು ಶ್ರೀಕೃಷ್ಣನು ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ ಹಿಡಿದನು. ಈ ರೀತಿ ಗೋಪಗೋಪಿಯರ ರಕ್ಷಣೆಯನ್ನು ಮಾಡಿದನು.
೪ ಉ. ರಾಸಲೀಲೆಯನ್ನು ಮಾಡುವುದು : ಶರದ ಋತುವಿನ ಹುಣ್ಣಿಮೆಗೆ ತರುಣ ಶ್ರೀಕೃಷ್ಣನು ಗೋಪಿಯರೊಂದಿಗೆ ಯಮುನೆಯ ತೀರದ ಮೇಲೆ ರಾಸಲೀಲೆಯನ್ನು ಮಾಡಿ ಅವರಿಗೆ ಆತ್ಮಾನುಭೂತಿಯನ್ನು ನೀಡಿದನು.
೪ ಊ. ಕಂಸ – ಚಾಣೂರರನ್ನು ನಾಶಗೊಳಿಸಿ ತಂದೆ – ತಾಯಿಯರನ್ನು ಕಾರಾಗೃಹದಿಂದ ಬಿಡುಗಡೆ ಮಾಡುವುದು : ಶ್ರೀಕೃಷ್ಣನು ಕುಮಾರಾವಸ್ಥೆಯಲ್ಲಿರುವಾಗ ಬಲರಾಮನೊಂದಿಗೆ ಅಕ್ರೂರನ ಜೊತೆಗೆ ಮಥುರೆಗೆ ಹೋದನು ಮತ್ತು ಅವನ ಮೈ ಮೇಲೆ ಏರಿ ಬಂದ ಕುವಲಯಾಪೀಡ ಎಂಬ ಮದೋನ್ಮತ್ತವಾದ ಆನೆಯೊಂದಿಗೆ ಮುಷ್ಟಿಯುದ್ಧ ಮಾಡಿ ಅದನ್ನು ಕೊಂದು ಹಾಕಿದನು. ಅದರ ನಂತರ ರಂಗಶಾಲೆಯನ್ನು ಪ್ರವೇಶಿಸಿದಾಗ ಕಂಸನು ಕಳಿಸಿದ ಮಲ್ಲರೊಂದಿಗೆ ಶ್ರೀಕೃಷ್ಣ ಮತ್ತು ಬಲರಾಮರು ದ್ವಂದ್ವಯುದ್ಧ ಮಾಡಿ ಅವರ ಜೀವಲೀಲೆಯನ್ನು ಕೊನೆಗೊಳಿಸಿದರು. ಅದರ ನಂತರ ಶ್ರೀಕೃಷ್ಣನು ಚಾಣೂರ ಮತ್ತು ಕಂಸರೊಂದಿಗೆ ಮುಷ್ಟಿಯುದ್ಧ ಮತ್ತು ದ್ವಂದ್ವಯುದ್ಧ ಮಾಡಿ ಅವರನ್ನು ನಾಶಗೊಳಿಸಿದನು. ಕಂಸನ ಬಂದಿವಾಸದಲ್ಲಿರುವ ಶ್ರೀಕೃಷ್ಣನ ತಂದೆ-ತಾಯಿ ವಸುದೇವ ಮತ್ತು ದೇವಕಿ, ಹಾಗೂ ತಾತ ಉಗ್ರಸೇನನನ್ನು ಶ್ರೀಕೃಷ್ಣನು ಮುಕ್ತಗೊಳಿಸಿದನು ಮತ್ತು ಮಥುರೆಯ ರಾಜ್ಯವನ್ನು ಉಗ್ರಸೇನನಿಗೆ ಒಪ್ಪಿಸಿದನು.
೪ ಎ. ಸಾಂದಿಪನಿ ಋಷಿಗಳ ಆಶ್ರಮದಲ್ಲಿದ್ದು ಗುರುಕುಲದ ಶಿಕ್ಷಣವನ್ನು ಪೂರ್ಣಗೊಳಿಸುವುದು : ತಾರುಣ್ಯಕ್ಕೆ ಪ್ರವೇಶ ಮಾಡುತ್ತಲೇ ಶ್ರೀಕೃಷ್ಣನು ಬಲರಾಮಸಹಿತ ಉಜ್ಜೈನಿಗೆ ಹೋದನು ಮತ್ತು ಅವನು ಸಾಂದಿಪನಿ ಋಷಿಗಳ ಆಶ್ರಮದಲ್ಲಿದ್ದು ಗುರುಕುಲದ ಶಿಕ್ಷಣವನ್ನು ಪೂರ್ಣಗೊಳಿಸಿದನು. ಅವನು ೬೪ ದಿನಗಳಲ್ಲಿ ೬೪ ಕಲೆ, ೧೪ ವಿದ್ಯೆ ಮತ್ತು ೬ ಶಾಸ್ತ್ರಗಳನ್ನು ಕಲಿತನು.
೪ ಏ. ಮೃತನಾದ ಗುರುಪುತ್ರನಿಗೆ ಪುನರ್ಜೀವ ನೀಡಿ ಗುರುದಕ್ಷಿಣೆಯನ್ನು ನೀಡುವುದು : ಶ್ರೀಕೃಷ್ಣನು ಸಾಂದಿಪನಿ ಋಷಿಗಳ ಮಗನಿಗೆ ಯಮಪುರಿಯಿಂದ ಮತ್ತೇ ವಾಪಸ್ಸು ಕರೆತಂದು ಸಾಂದಿಪನಿ ಋಷಿಗಳಿಗೆ ಗುರುದಕ್ಷಿಣೆಯನ್ನು ನೀಡಿದನು.
೪ ಐ. ಮಥುರೆಯ ಮೇಲೆ ದಾಳಿ ಮಾಡುವ ಜರಾಸಂಧನೊಂದಿಗೆ ೧೭ ಬಾರಿ ಯುದ್ಧ ಮಾಡಿ ಅವನನ್ನು ಸೋಲಿಸುವುದು : ಗುರುಕುಲದಲ್ಲಿನ ಶಿಕ್ಷಣ ಪೂರ್ಣವಾದ ನಂತರ ಶ್ರೀಕೃಷ್ಣನು ಮಥುರೆಗೆ ಮರಳಿ ಬಂದನು, ಆಗ ಜರಾಸಂಧನು ದೊಡ್ಡ ಸೈನ್ಯದೊಂದಿಗೆ ಮಥುರೆಯ ಮೇಲೆ ೧೭ ಬಾರಿ ದಾಳಿ ಮಾಡಿದನು. ಪ್ರತಿಯೊಂದು ಬಾರಿ ಶ್ರೀಕೃಷ್ಣ ಮತ್ತು ಬಲರಾಮರು ಜರಾಸಂಧನೊಂದಿಗೆ ಯುದ್ಧ ಮಾಡಿ ಅವನನ್ನು ಸೋಲಿಸಿ ಅವನನ್ನು ಬಿಟ್ಟುಬಿಟ್ಟರು.
೪ ಒ. ಕಾಲಯವನನ ವಧೆಯ ನಿಮಿತ್ತದಿಂದ ಶ್ರೀಕೃಷ್ಣನು ಮುಚುಕುಂದ ರಾಜನಿಗೆ ದರ್ಶನ ನೀಡಿ ಅವನನ್ನು ಕೃತಾರ್ಥನನ್ನಾಗಿ ಮಾಡುವುದು : ಯಾವುದೇ ಶಸ್ತ್ರದಿಂದ ಸಾಯದಿರುವ ವರವನ್ನು ಪಡೆದಂತಹ ಕಾಲಯವನನು ಯಾವಾಗ ಶ್ರೀಕೃಷ್ಣನ ಮೇಲೆ ಆಕ್ರಮಣ ಮಾಡಲು ಬಂದನೋ, ಆಗ ಶ್ರೀಕೃಷ್ಣನು ಪಲಾಯನ ಮಾಡಿ ಅವನ ಹಿಂದೆ ಕಾಲಯವನು ಬೆನ್ನಟ್ಟುವಂತೆ ಮಾಡಿದನು ಮತ್ತು ಶ್ರೀಕೃಷ್ಣನು ಮುಚುಕುಂದ ರಾಜನು ನಿದ್ರಿಸ್ಥನಾಗಿರುವ ಗುಹೆಯನ್ನು ಪ್ರವೇಶಿಸಿದನು. ಶ್ರೀಕೃಷ್ಣನು ಮುಚುಕುಂದ ರಾಜನ ಶರೀರದ ಮೇಲೆ ತನ್ನ ಶಲ್ಯೆಯನ್ನು ಹೊದಿಸಿದನು. ಇದರಿಂದ ಕಾಲಯವನನಿಗೆ ಇಲ್ಲಿ ಶ್ರೀಕೃಷ್ಣನೇ ನಿದ್ದೆ ಮಾಡುವ ನಾಟಕ ಮಾಡುತ್ತಿದ್ದಾನೆಂದು ಮುಚುಕುಂದ ರಾಜನನ್ನು ಎಚ್ಚರಿಸಿದನು. ಮುಚುಕುಂದ ರಾಜನು ಕಣ್ಣು ತೆರೆದ ತಕ್ಷಣ ಅವನ ಕಣ್ಣುಗಳಿಂದ ಪ್ರಕ್ಷೇಪಿತವಾಗುವ ಅಗ್ನಿಜ್ವಾಲೆಯಿಂದಾಗಿ ಕಾಲಯವನನು ಭಸ್ಮನಾದನು. ಈ ರೀತಿಯಲ್ಲಿ ಕಾಲಯವನನ ವಧೆಯ ನಿಮಿತ್ತದಿಂದ ಶ್ರೀಕೃಷ್ಣನು ಮುಚುಕುಂದ ರಾಜನಿಗೆ ದರ್ಶನ ನೀಡಿ ಕೃತಾರ್ಥ ಮಾಡಿದನು.
೪ ಓ. ಶ್ರೀಕೃಷ್ಣನು ಮಥುರೆಯಿಂದ ದ್ವಾರಕಾ ನಗರಕ್ಕೆ ಸ್ಥಲಾಂತರವಾಗುವುದು : ಶ್ರೀಕೃಷ್ಣನ ಆಜ್ಞೆಗನುಸಾರ ವಿಶ್ವಕರ್ಮನು ಪಶ್ಚಿಮ ಸಮುದ್ರದಲ್ಲಿನ ಒಂದು ನಡುಗಡ್ಡೆಯ ಮೇಲೆ ‘ದ್ವಾರಕಾ’ ಹೆಸರಿನ ಒಂದು ಹೊಸ ನಗರವನ್ನು ನಿರ್ಮಿಸಿದನು. ಜರಾಸಂಧನ ಆಕ್ರಮಣದಿಂದ ಮಥುರೆಯ ಮತ್ತು ವೃಂದಾವನದ ಸಂರಕ್ಷಣೆಗಾಗಿ ಶ್ರೀಕೃಷ್ಣನು ಮಥುರೆಯಿಂದ ದ್ವಾರಕೆಗೆ ಸ್ಥಲಾಂತರಿಸಿದನು.
೪ ಔ. ದ್ವಾಪರಯುಗದಲ್ಲಿ ಕೌರವ – ಪಾಂಡವರ ಮಹಾಭಾರತಯುದ್ಧದಲ್ಲಿ ಪಾಂಡವರ ರಕ್ಷಣೆ ಮಾಡುವುದು : ಮಹಾಭಾರತ ಯುದ್ಧದ ಮೊದಲು ಭಗವಾನ ಶ್ರೀಕೃಷ್ಣನು ಹನುಮಂತನಿಗೆ ಅರ್ಜುನನ ರಥದ ಮೇಲೆ ಸೂಕ್ಷ್ಮ ರೂಪದಿಂದ ಉಪಸ್ಥಿತನಿರಲು ಹೇಳಿದನು. ಆ ರೀತಿಯಲ್ಲಿ ಅರ್ಜುನನ ಕಪಿಧ್ವಜದಲ್ಲಿ ಹನುಮಂತನು ಸೂಕ್ಷ್ಮರೂಪದಲ್ಲಿ ಸ್ಥಿತನಾದನು. ಮಹಾಭಾರತದ ಧರ್ಮಯುದ್ಧದಲ್ಲಿ ಭೀಷ್ಮಾಚಾರ್ಯರು, ದ್ರೋಣಾಚಾರ್ಯರು, ಕರ್ಣ ಮತ್ತು ಅಶ್ವತ್ಥಾಮಾರಂತಹ ಮಹಾರಥಿಗಳು ಅರ್ಜುನನ ಮೇಲೆ ಮಾರಣಾಂತಿಕ, ಹಾಗೆಯೇ ಸೃಷ್ಟಿಸಂಹಾರಕ ದಿವ್ಯಾಸ್ತ್ರಗಳನ್ನು ಬಿಟ್ಟರು; ಆದರೆ ಭಗವಾನ ಶ್ರೀಕೃಷ್ಣನ ಕೃಪೆಯಿಂದ ಅರ್ಜುನನಿಗೆ ಯಾವುದೂ ತಾಗಲಿಲ್ಲ, ಹಾಗೆಯೇ ಪಾಂಡವರ ರಕ್ಷಣೆಯೂ ಆಯಿತು. ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣನು ಸ್ಥೂಲದಿಂದ ಯಾವುದೇ ಶಸ್ತ್ರವನ್ನು ಧರಿಸದೇ ಸೂಕ್ಷ್ಮದಿಂದ ಎಲ್ಲ ಕೌರವರ ನಾಶ ಮಾಡಿದನು ಮತ್ತು ಯುದ್ಧದಲ್ಲಿ ಜಯಗಳಿಸಿದ ಶ್ರೇಯವನ್ನು ಪಾಂಡವರಿಗೆ ನೀಡಿದನು. ಮೇಲಿನ ಉದಾಹರಣೆಯಿಂದ ‘ಧರ್ಮಯುದ್ಧದಲ್ಲಿ ಸೂಕ್ಷ್ಮದಿಂದ ಕಾರ್ಯವನ್ನು ಮಾಡಿ ಕತೃತ್ವವನ್ನು ತೆಗೆದುಕೊಳ್ಳದೇ ಧರ್ಮರಕ್ಷಣೆಯ ಜವಾಬ್ದಾರಿಯನ್ನು ಹೇಗೆ ಪೂರ್ಣಗೊಳಿಸಬೇಕು’, ಎಂಬುದನ್ನು ಶ್ರೀಕೃಷ್ಣನಿಂದ ಕಲಿಯಲು ಸಿಕ್ಕಿತು.
೪ ಅಂ. ಸ್ಯಮಂತಕ ಮಣಿಯನ್ನು ಶೋಧಿಸುವ ನಿಮಿತ್ತದಿಂದ ಜಾಂಬವತಿಯೊಂದಿಗೆ ಭೇಟಿಯಾಗುವುದು : ರಾಜಾ ಪ್ರಸೇನಜೀತನಿಗೆ ಸೂರ್ಯದೇವರ ಕೃಪಾಶೀರ್ವಾದದಿಂದ ದಿನವೂ ಎಷ್ಟೋ ಮಣ ಬಂಗಾರವನ್ನು ನೀಡುವ ಸ್ಯಮಂತಕ ಮಣಿಯು ದೊರಕಿತ್ತು. ಪ್ರಸೇನಜೀತನು ದ್ವಾರಕೆಯಲ್ಲಿ ವಾಸಿಸುತ್ತಿದ್ದನು. ಆದುದರಿಂದ ಕೆಲವು ಸರದಾರರಿಗೆ, ಆ ಮಣಿಯು ರಾಜ್ಯದ ಖಜಾನೆಯಲ್ಲಿ ಜಮೆಯಾಗಬೇಕು ಎಂಬ ಅಭಿಪ್ರಾಯವಿತ್ತು. ಆದರೆ ಪ್ರಸೇನಜೀತನಿಗೆ ಆ ಮಣಿಯನ್ನು ಶ್ರೀಕೃಷ್ಣನಿಗೆ ಕೊಡುವ ಮನಸ್ಸಿರಲಿಲ್ಲ. ಒಂದು ಬಾರಿ ಪ್ರಸೇನಜೀತನ ಅಣ್ಣನು ಆ ಮಣಿಯನ್ನು ತನ್ನೊಂದಿಗೆ ತೆಗೆದುಕೊಂಡು ಕಾಡಿಗೆ ಹೋದನು. ಅಲ್ಲಿ ಒಂದು ಹುಲಿಯು ಅವನನ್ನು ಕೊಂದಿತು ಮತ್ತು ಅವನ ಬಳಿಯಿರುವ ಮಣಿಯನ್ನು ಎಸೆದುಬಿಟ್ಟಿತು. ಕಾಡಿನ ಒಂದು ಗುಹೆಯಲ್ಲಿ ಜಾಂಬವಂತನಿರುತ್ತಿದ್ದನು. ಅವನು ಆ ಸ್ಯಮಂತಕ ಮಣಿಯನ್ನು ತನ್ನ ಬಳಿ ಇಟ್ಟುಕೊಂಡನು. ಇಲ್ಲಿ ಪ್ರಸೇನಜೀತನಿಗೆ, ಸ್ಯಮಂತಕ ಮಣಿಯ ಆಸೆಗಾಗಿ ಶ್ರೀಕೃಷ್ಣನು ಅವನ ಅಣ್ಣನ ವಧೆಯನ್ನು ಮಾಡಿ ಆ ಮಣಿಯನ್ನು ಕದ್ದಿದ್ದಾನೆ ಎಂದೆನಿಸಿತು. ಶ್ರೀಕೃಷ್ಣನ ಮೇಲೆ ಸ್ಯಮಂತಕ ಮಣಿಯನ್ನು ಕದ್ದ ಆರೋಪವನ್ನು ಹೊರಿಸಿದನು. ಅದಕ್ಕಾಗಿ ಶ್ರೀಕೃಷ್ಣನು ಆ ಸ್ಯಮಂತಕ ಮಣಿಯನ್ನು ಹುಡುಕಲು ನಿಶ್ಚಯಿಸಿದನು ಮತ್ತು ಆ ಕಾಡಿನಲ್ಲಿ ಹೋದನು. ಹುಲಿಯ ಪಂಜಿನ ಗುರುತನ್ನು ಹಿಂಬಾಲಿಸುತ್ತ ಶ್ರೀಕೃಷ್ಣನು ಒಂದು ಗುಹೆಯ ಬಳಿ ಬಂದನು ಮತ್ತು ಅವನು ಆ ಗುಹೆಯಲ್ಲಿ ಪ್ರವೇಶಿಸಿದನು. ಅಲ್ಲಿ ಅವನಿಗೆ ಜಾಂಬವಂತನ ಮಗಳಾದ ಜಾಂಬವತಿಯ ಕೈಯಲ್ಲಿ ಸ್ಯಮಂತಕ ಮಣಿಯನ್ನು ಹಿಡಿದು ಆಡುತ್ತಿರುವುದು ಕಂಡು ಬಂತು. ಶ್ರೀಕೃಷ್ಣನು ಆ ಸ್ಯಮಂತಕ ಮಣಿಯನ್ನು ಬೇಡಿದಾಗ ಅಲ್ಲಿ ಜಾಂಬವಂತನು ಬಂದನು ಮತ್ತು ಇಬ್ಬರ ನಡುವೆ ಯುದ್ಧ ನಡೆಯಿತು. ಕೊನೆಗೆ ಜಾಂಬವಂತನು ದಣಿದನು ಮತ್ತು ಸೋಲೊಪ್ಪಿಕೊಂಡನು. ಅದರ ನಂತರ ಅವನಿಗೆ ಶ್ರೀಕೃಷ್ಣನಲ್ಲಿ ಪ್ರಭು ಶ್ರೀರಾಮನ ದರ್ಶನವಾಯಿತು. ಆಗ ಜಾಂಬವಂತನು ಶ್ರೀಕೃಷ್ಣನಿಗೆ ಶರಣು ಬಂದನು. ಈ ರೀತಿಯಲ್ಲಿ ಸ್ಯಮಂತಕ ಮಣಿಯನ್ನು ಶೋಧಿಸುವ ನಿಮಿತ್ತ ಶ್ರೀಕೃಷ್ಣನಿಗೆ ಜಾಂಬವತಿಯೊಂದಿಗೆ ಭೇಟಿಯಾಯಿತು.
೪ ಅಃ. ತ್ರೇತಾಯುಗದ ನಂತರ ದ್ವಾಪರಯುಗದಲ್ಲಿ ಹನುಮಂತನೊಂದಿಗೆ ಭೇಟಿಯಾಗುವುದು : ತ್ರೇತಾಯುಗದಲ್ಲಿನ ಕಾರ್ಯವು ಮುಕ್ತಾಯವಾದನಂತರ ದ್ವಾಪರಯುಗದವರೆಗೆ ಹನುಮಂತನು ಹಿಮಾಲಯದಲ್ಲಿನ ಗಂಧಮಾಧನ ಪರ್ವತದ ಮೇಲೆ ಧ್ಯಾನಸ್ಥನಾಗಿ ಕುಳಿತುಕೊಂಡಿದ್ದನು. ಅವನು ಪ್ರತಿ ವರ್ಷದ ರಾಮನವಮಿಗೆ ಅಯೋಧ್ಯೆಗೆ ಹೋಗಿ ಬ್ರಾಹ್ಮಣನ ವೇಶವನ್ನು ಧರಿಸಿ ಯಜ್ಞಯಾಗ ಮಾಡುತ್ತಿದ್ದನು ಮತ್ತು ಕೆಲವು ಬ್ರಾಹ್ಮಣರಿಗೆ ಅನ್ನದಾನ ಮಾಡುತ್ತಿದ್ದನು. ಒಂದು ಬಾರಿ ನಾರದಮುನಿಗಳಿಗೆ ಹನುಮಂತನು ಶ್ರೀಕೃಷ್ಣನ ರೂಪದಲ್ಲಿರುವ ಶ್ರೀರಾಮನನ್ನು ಗುರುತಿಸಲು ಸಾಧ್ಯವಿಲ್ಲವೆಂದೆನಿಸಿತು; ಹೀಗೆಂದು ಅವರು ಶ್ರೀಕೃಷ್ಣನೊಂದಿಗೆ ಬ್ರಾಹ್ಮಣನ ವೇಶವನ್ನು ಧರಿಸಿ ಅಯೋಧ್ಯೆಗೆ ಹೋದರು ಮತ್ತು ಇತರ ಬ್ರಾಹ್ಮಣರಲ್ಲಿ ಸೇರಿಕೊಂಡರು. ಯಜ್ಞವಾದನಂತರ ಹನುಮಂತನು ಪಂಕ್ತಿಯಲ್ಲಿ ಕುಳಿತುಕೊಂಡ ಬ್ರಾಹ್ಮಣರಿಗೆ ಖೀರು-ಪೂರಿ ಬಡಿಸತೊಡಗಿದನು. ಆಗ ಹನುಮಂತನಿಗೆ ಬ್ರಾಹ್ಮಣರ ಪಂಕ್ತಿಯಲ್ಲಿ ಕುಳಿತಿರುವ ಶ್ರೀಕೃಷ್ಣನ ಚರಣಗಳ ದರ್ಶನವಾಯಿತು. ‘ಈ ಚರಣಗಳು ಪ್ರಭು ಶ್ರೀರಾಮನದ್ದೇ ಆಗಿವೆ’, ಎಂಬುದನ್ನು ಹನುಮಂತನು ಗುರುತಿಸಿದನು ಮತ್ತು ಅವನು ಬ್ರಾಹ್ಮಣರೂಪದಲ್ಲಿರುವ ಶ್ರೀಕೃಷ್ಣನಿಗೆ ಸಾಷ್ಟಾಂಗ ನಮಸ್ಕಾರ ಮಾಡಿದನು. ಈ ರೀತಿಯಲ್ಲಿ ತ್ರೇತಾಯುಗದ ನಂತರ ದ್ವಾಪರಯುಗದಲ್ಲಿ ಹನುಮಂತನಿಗೆ ಶ್ರೀಕೃಷ್ಣನ ಭೇಟಿಯಾಯಿತು.
೪ ಕ. ವಿವಿಧ ದುಷ್ಟ ರಾಜರ ನಾಶ ಮಾಡಿ ಅವರ ಜಾಗದಲ್ಲಿ ಒಳ್ಳೆಯ ರಾಜರ ನಿಯುಕ್ತಿ ಮಾಡುವುದು : ಶ್ರೀಕೃಷ್ಣನು ಕಂಸ, ಶಿಶುಪಾಲ, ವಕ್ರದಂತ, ಪೌಂಡರಂಗ, ಕಾಶೀನರೇಶ, ನರಕಾಸುರ ಮುಂತಾದ ದುಷ್ಟ ರಾಜರ ನಾಶ ಮಾಡಿ ಅವರ ಬದಲಿಗೆ ಒಳ್ಳೆಯ ರಾಜರ ನಿಯುಕ್ತಿ ಮಾಡಿದನು. ಇದರಿಂದ ಶ್ರೀಕೃಷ್ಣನಿಗೆ ರಾಜ್ಯಾವಾಳುವ ಸ್ವಲ್ಪವು ಸಹ ಮೋಹವಿರಲಿಲ್ಲವೆಂದು ಸ್ಪಷ್ಟವಾಗಿ ಕಂಡು ಬರುತ್ತದೆ.
೪ ಖ. ಪರಮ ಮಿತ್ರ ಸುದಾಮನ ದಾರಿದ್ರ್ಯವನ್ನು ದೂರಗೊಳಿಸುವುದು : ಯಾವಾಗ ಸುದಾಮಾನು ಶ್ರೀಕೃಷ್ಣನ ಭೇಟಿಗಾಗಿ ದ್ವಾರಕೆಗೆ ಬಂದನೋ, ಆಗ ಅವನು ದರಿದ್ರನಾಗಿದ್ದರೂ, ಶ್ರೀಕೃಷ್ಣನು ಅವನನ್ನು ಪ್ರೀತಿಯಿಂದ ಮತ್ತು ಗೌರವದಿಂದ ಬರಮಾಡಿಕೊಂಡು ಆದರಾತಿಥ್ಯವನ್ನು ಮಾಡಿದನು. ಅವನ ದೈನ್ಯವನ್ನು ದೂರ ಮಾಡಲು ಅವನು ವಿಶ್ವಕರ್ಮದೇವರಿಗೆ ಸುದಾಮಪುರಿಯ ರಚನೆಯನ್ನು ಮಾಡಿ ಸುದಾಮನಿಗಾಗಿ ದೊಡ್ಡ ಅರಮನೆಯನ್ನು ಕಟ್ಟಲು ಆಜ್ಞೆಯನ್ನು ನೀಡಿದನು. ಆ ರೀತಿಯಲ್ಲಿ ವಿಶ್ವಕರ್ಮನು ಸುದಾಮಪುರಿಯ ನಿರ್ಮಾಣ ಮಢಿ ಸುದಾಮನಿಗಾಗಿ ರತ್ನಜಡಿತ ಅರಮನೆಯನ್ನು ಸಿದ್ಧಪಡಿಸಿದನು.
೫. ಶ್ರೀಕೃಷ್ಣನು ಅನೇಕರ ಅಹಂ ನಿರ್ಮೂಲನೆಯನ್ನು ಮಾಡುವುದು
೫ ಅ. ಶ್ರೀಕೃಷ್ಣನು ದೇವತೆಗಳ ಅಹಂ ನಿರ್ಮೂಲನೆ ಮಾಡುವುದು
೫ ಅ ೧. ಇಂದ್ರನ ಗರ್ವಹರಣ : ಉತ್ತಮ ಮಳೆ ಬೀಳಬೇಕು ಎಂಬುದಕ್ಕಾಗಿ ವೃಂದಾವನವಾಸಿಗಳು ಪರಂಪರಾಗತವಾಗಿ ಇಂದ್ರನ ಪೂಜೆಯನ್ನು ಮಾಡುತ್ತಿದ್ದರು. ‘ನನ್ನಿಂದಾಗಿ ಎಲ್ಲ ಕಡೆಗಳಲ್ಲಿ ಮಳೆ ಬರುತ್ತದೆ, ಆದುದರಿಂದ ನಾನೇ ಸೃಷ್ಟಿಯ ಪಾಲಕ’ ಎಂಬ ಅಹಂಕಾರ ಇಂದ್ರನಲ್ಲಿ ನಿರ್ಮಾಣವಾಯಿತು. ಅವನ ಅಹಂಕಾರವನ್ನು ನಷ್ಟ ಮಾಡಲು ಭಗವಾನ ಶ್ರೀಕೃಷ್ಣನು ಎಲ್ಲ ಗೋಪಗೋಪಿಯರಿಗೆ ಇಂದ್ರನ ಬದಲಾಗಿ ಗೋವರ್ಧನ ಪರ್ವತದ ಪೂಜೆಯನ್ನು ಮಾಡಲು ಹೇಳಿದನು. ಗೋಪಗೋಪಿಯರು ಇಂದ್ರನ ಬದಲಾಗಿ ಗೋವರ್ಧನದ ಪೂಜೆಯನ್ನು ಮಾಡಿದಾಗ ಇಂದ್ರನು ಅವರ ಮೇಲೆ ಕೋಪಗೊಂಡು ಅತಿವೃಷ್ಟಿ ಮಾಡಿ ನೆರಯ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದನು. ಗೋಪಗೋಪಿಯರನ್ನು ಮತ್ತು ಗೋ-ಕರುಗಳನ್ನು ಮಳೆ ಮತ್ತು ನೀರಿನ ಪ್ರವಾಹ ಇವುಗಳಿಂದ ರಕ್ಷಿಸಲು ಶ್ರೀಕೃಷ್ಣನು ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿದನು. ಏಳು ದಿನ ಮತ್ತು ಏಳು ರಾತ್ರಿ ಸತತವಾಗಿ ಧಾರಾಕಾರ ಮಳೆಯಾಯಿತು; ಆದರೆ ಎಲ್ಲ ಗೋಪಗೋಪಿಯರು ಗೋವರ್ಧನ ಪರ್ವತದ ಛತ್ರದ ಕೆಳಗೆ ಸುರಕ್ಷಿತರಾಗಿದ್ದರು. ಕೊನೆಗೆ ಇಂದ್ರನ ಮಳೆ ಬೀಳಿಸುವ ಕ್ಷಮತೆ ಮುಗಿಯಿತು ಮತ್ತು ಇಂದ್ರನು ಶ್ರೀಕೃಷ್ಣನಿಗೆ ಶರಣು ಬಂದನು. ಈ ರೀತಿಯಲ್ಲಿ ಶ್ರೀಕೃಷ್ಣನು ಇಂದ್ರನ ಗರ್ವಹರಣ ಮಾಡಿದನು.
೫ ಅ ೨. ಬ್ರಹ್ಮದೇವರ ಅಹಂಕಾರ ನಷ್ಟ ಮಾಡುವುದು : ಸೂತ್ರ ‘೩ ಅ ೧’ ನೋಡಿ.
೫ ಆ. ಶ್ರೀಕೃಷ್ಣನು ಸತ್ಯಭಾಮೆಯ ಗರ್ವಹರಣ ಮಾಡುವುದು
ಸತ್ಯಭಾಮೆಗೆ ತನ್ನ ಬಳಿಯಿರುವ ಧನ ಮತ್ತು ಸೌಂದರ್ಯ ಇವುಗಳ ಅಹಂಕಾರವಿತ್ತು. ಅವಳು ಎಲ್ಲ ರಾಣಿಯರಲ್ಲಿ ತನ್ನನ್ನು ತಾನು ಶ್ರೇಷ್ಠ ಎಂದುಕೊಂಡಿದ್ದಳು ಮತ್ತು ರುಕ್ಮಿಣಿಯನ್ನು ಕೀಳಾಗಿ ನೋಡುತ್ತಿದ್ದಳು. ಒಂದು ಬಾರಿ ಅವಳಿಗೆ ಕಾಮ್ಯಕ ವೃತ ಮಾಡಿ ಶ್ರೀಕೃಷ್ಣನ ಎಲ್ಲರಿಗಿಂತ ಪ್ರಿಯ ರಾಣಿಯಾಗಬೇಕಿತ್ತು. ಅದಕ್ಕಾಗಿ ಶ್ರೀಕೃಷ್ಣನು ಅವಳಿಗೆ ಸ್ವರ್ಗದಲ್ಲಿನ ಪಾರಿಜಾತದ ವೃಕ್ಷವನ್ನು ತಂದು ಕೊಟ್ಟನು. ಸತ್ಯಭಾಮೆಯು ನಾರದಮುನಿಗಳ ಮಾರ್ಗದರ್ಶನಕ್ಕನುಸಾರ ಪಾರಿಜಾತ ವೃಕ್ಷದ ಪೂಜೆಯನ್ನು ಮಾಡಿ ಕಾಮ್ಯಕ ವೃತದ ವಿಧಿಯನ್ನು ಆರಂಭಿಸಿದಳು. ವೃತ ಮುಕ್ತಾಯಗೊಳಿಸಲು ಯಾವಾಗ ನಾರದಮುನಿಗಳು ಸತ್ಯಭಾಮೆಗೆ ಎಲ್ಲಕ್ಕಿಂತ ಪ್ರಿಯ ವಸ್ತುವಿನ ದಾನವನ್ನು ಮಾಡಲು ಹೇಳಿದಾಗ, ಅವಳು ನಾರದಮುನಿಗಳಿಗೆ ಶ್ರೀಕೃಷ್ಣನ ದಾನವನ್ನು ನೀಡಿದಳು. ಅದರನಂತರ ಅವಳಿಗೆ ತನ್ನ ತಪ್ಪಿನ ಅರಿವಾಯಿತು. ನಾರದಮುನಿಗಳಿಂದ ಶ್ರೀಕೃಷ್ಣನನ್ನು ಮತ್ತೇ ಪ್ರಾಪ್ತ ಮಾಡಿಕೊಳ್ಳಲು ಶ್ರೀಕೃಷ್ಣನ ತೂಕದಷ್ಟು ಬಂಗಾರ, ಬೆಳ್ಳಿ, ವಜ್ರ, ಮಾಣಿಕ್ಯ, ಮುತ್ತು ಮುಂತಾದ ವಸ್ತುಗಳಿಂದ ಶ್ರೀಕೃಷ್ಣನ ತುಲಾದಾನವನ್ನು ಮಾಡಲು ನಿಶ್ಚಯಿಸಿದಳು. ಸತ್ಯಭಾಮೆಗೆ ಅವಳ ಶ್ರೀಮಂತಿಕೆಯ ಗರ್ವವಿತ್ತು. ಆದುದರಿಂದ ಅವಳ ಹತ್ತಿರವಿರುವ ಎಲ್ಲ ಸಂಪತ್ತನ್ನು ತಕ್ಕಡಿಯಲ್ಲಿ ಹಾಕಿದರೂ ಶ್ರೀಕೃಷ್ಣನಿಗೆ ಸರಿಸಮಾನವಾಗಲಿಲ್ಲಿ. ಆಗ ಸತ್ಯಭಾಮೆಯ ಗರ್ವವು ನಷ್ಟವಾಯಿತು ಮತ್ತು ಅವಳು ಹತಾಶಳಾಗಿ ಸಹಾಯಕ್ಕಾಗಿ ರುಕ್ಮಿಣಿಯ ಕಡೆಗೆ ಬಂದಳು. ರುಕ್ಮಿಣಿಯು ಭಕ್ತಿಭಾವದಿಂದ ಒಂದು ತುಳಸಿಪತ್ರವನ್ನು ತಕ್ಕಡಿಯ ಮೇಲಿದ್ದ ಸಂಪತ್ತಿನ ಮೇಲಿಟ್ಟ ತಕ್ಷಣ ತಕ್ಕಡಿ ಶ್ರೀಕೃಷ್ಣನ ಬದಿಯಲ್ಲಿ ಹಗುರವಾಯಿತು. ಈ ರೀತಿಯಲ್ಲಿ ಸತ್ಯಭಾಮೆಗೆ ರುಕ್ಮಿಣಿಯ ಮಹತ್ವ ಗಮನಕ್ಕೆ ಬಂತು ಮತ್ತು ಅವಳ ಗರ್ವಹರಣವಾಯಿತು.
೫ ಇ. ಹನುಮಂತನ ಮಾಧ್ಯಮದಿಂದ ಅನೇಕರ ಅಹಂನಿರ್ಮೂಲನೆ ಮಾಡುವುದು
ಭಗವಾನ ಶ್ರೀಕೃಷ್ಣನು ಹನುಮಂತನ ಮಾಧ್ಯಮದಿಂದ ನಾರದಮುನಿ, ಸುದರ್ಶನಚಕ್ರ, ಗರುಡ, ಬಲರಾಮ, ಅರ್ಜುನ ಮತ್ತು ಭೀಮ ಮುಂತಾದ ಭಕ್ತರ ಗರ್ವಹರಣ ಮಾಡಿದನು. ಹನುಮಂತನು ರಾಮಭಕ್ತನಾಗಿದ್ದನು. ಅವನಿಗೆ ಶ್ರೀಕೃಷ್ಣನಲ್ಲಿ ರಾಮನ ದರ್ಶನವಾಗುತ್ತಿದ್ದುದ್ದರಿಂದ ಅವನು ಶ್ರೀಕೃಷ್ಣನದ್ದೂ ಆಜ್ಞಾಪಾಲನೆಯನ್ನು ಮಾಡುತ್ತಿದ್ದನು.
೬. ವಿವಿಧ ಜೀವಗಳ ಉದ್ಧಾರ ಮಾಡುವುದು
೬ ಅ. ಯಮಲಾರ್ಜುನ ವೃಕ್ಷಗಳ ರೂಪ ಧರಸಿದ್ದ ನಲಕುಬೇರ ಮತ್ತು ಮಣಿಗ್ರೀವರ ಉದ್ಧಾರ : ದೇವತೆಗಳ ಕೋಶನಾಥನಾಗಿರುವ ಕುಬೇರನ ಪುತ್ರರಾದ ನಲಕುಬೇರ ಮತ್ತು ಮಣಿಗ್ರೀವ ಇವರು ಅಹಂಕಾರಿ ಮತ್ತು ಉನ್ಮತ್ತರಾಗಿದ್ದರು. ಒಂದು ಬಾರಿ ಅವರಿಬ್ಬರೂ ಕೈಲಾಸದ ಹತ್ತಿರವಿರುವ ಒಂದು ಪವಿತ್ರ ಸರೋವರದಲ್ಲಿ ಮಧ್ಯಪಾನ ಮಾಡಿ ನಗ್ನಾವಸ್ಥೆಯಲ್ಲಿ ಕೆಲವು ಅಪ್ಸರೆಯರೊಂದಿಗೆ ಜಲಕ್ರೀಡೆಯನ್ನಾಡುತ್ತಿದ್ದರು. ದೇವರ್ಷಿ ನಾರದರು ಅಲ್ಲಿಂದ ಹೋಗುತ್ತಿದ್ದರು. ಅವರಿಗೆ ಕುಬೇರಪುತ್ರರ ಪತನವನ್ನು ನೋಡಿ ದುಃಖವಾಯಿತು. ಅವರು ಸರೋವರದ ಹತ್ತಿರ ಬಂದರು, ಆಗ ಅವರನ್ನು ನೋಡಿ ನಾಚಿಕೆಗೊಂಡ ಅಪ್ಸರೆಯರು ವಸ್ತ್ರಗಳಿಂದ ತಮ್ಮ ಶರೀರವನ್ನು ತಕ್ಷಣ ಮುಚ್ಚಿಕೊಂಡರು; ಆದರೆ ನಲಕುಬೇರ ಮತ್ತು ಮಣಿಗ್ರೀವ ಮದೋನ್ಮತ್ತರಾಗಿ ಹಾಗೆಯೇ ನಗ್ನಾವಸ್ಥೆಯಲ್ಲಿ ನಿರ್ಲಜ್ಜರಾಗಿ ಎದ್ದು ನಿಂತಿದ್ದರು. ಆಗ ನಾರದಮುನಿಗಳಿಗೆ ಅವರ ಮೇಲೆ ಕೋಪ ಬಂತು ಮತ್ತು ಅವರ ಹೆಚ್ಚಿನ ಅಧಃಪತನವಾಗಿ ಅವರು ನರಕವಾಸ ಭೋಗಿಸುವುದು ಬೇಡ, ಎಂದು ಅವರು ಇಬ್ಬರಿಗೂ ಯಮಲಾರ್ಜುನ ವೃಕ್ಷವಾಗುವ ಶಾಪವನ್ನು ನೀಡಿದರು. ‘ವೃಕ್ಷಯೋನಿಯಲ್ಲಿರುವಾಗ ನಿಮ್ಮ ಸ್ಮೃತಿ ಜಾಗೃತವಿರುತ್ತದೆ ಮತ್ತು ದೇವತೆಗಳ ೧೦೦ ವರ್ಷ ಪೂರ್ಣಗೊಂಡ ನಂತರ ನಿಮ್ಮ ಉದ್ಧಾರವನ್ನು ಬಾಲಕೃಷ್ಣನು ಮಾಡುವನು’, ಎಂಬ ಶಾಪದಿಂದ ಮುಕ್ತವಾಗುವ ಮಾರ್ಗವನ್ನೂ ನಾರದಮುನಿಗಳು ಇಬ್ಬರಿಗೂ ನೀಡಿದರು. ಆ ರೀತಿಯಲ್ಲಿ ನಲಕುಬೇರ ಮತ್ತು ಮಣಿಗ್ರೀವ ಯಮಲಾರ್ಜುನದ ಅವಳಿಜವಳಿ ವೃಕ್ಷಗಳಾಗಿ ನಂದರಾಜನ ಅಂಗಳದಲ್ಲಿ ಹುಟ್ಟಿದರು. ಆಗ ಬಾಲಕೃಷ್ಣನು ಗೋಕುಲಕ್ಕೆ ಬಂದು ನಂದರಾಜನ ಮನೆಯಲ್ಲಿ ಬೆಳೆಯತೊಡಗಿದನು. ಅವನ ತುಂಟ ಸ್ವಭಾವಕ್ಕೆ ಬೇಸತ್ತು ಒಂದು ಬಾರಿ ಯಶೋದೆಯು ಬಾಲಕೃಷ್ಣನನ್ನು ಹಗ್ಗದಿಂದ ಒರಳಿಗೆ ಗಟ್ಟಿಯಾಗಿ ಕಟ್ಟಿಹಾಕಿದಳು. ಯಶೋದಾಮಾತೆಯು ನೀರು ತರಲು ಯುಮುನೆಯ ದಡಕ್ಕೆ ಹೋದಳು. ಇಲ್ಲಿ ಬಾಲಕೃಷ್ಣನು ಒರಳಿಗೆ ಕಟ್ಟಿದ ಅವಸ್ಥೆಯಲ್ಲಿ ಒಬ್ಬನೇ ಅಂಗಳದಲ್ಲಿದ್ದನು. ಅವನ ದೃಷ್ಟಿ ಅಂಗಳದಲ್ಲಿ ಬೆಳೆದ ಯಮಲಾರ್ಜುನದ ಅವಳಿಜವಳಿ ವೃಕ್ಷಗಳ ಮೇಲೆ ಬಿದ್ದಿತು ಮತ್ತು ಅವನು ವೃಕ್ಷರೂಪದಲ್ಲಿರುವ ನಲಕುಬೇರ ಮತ್ತು ಮಣಿಗ್ರೀವರ ಉದ್ಧಾರ ಮಾಡಬೇಕೆಂದು ನಿರ್ಧರಿಸಿದನು. ಅವನು ಒರಳುಸಹಿತ ಅಂಬೆಗಾಲಿಡುತ್ತಾ ವೃಕ್ಷಗಳ ಕಡೆಗೆ ಹೋದನು ಮತ್ತು ಎರಡೂ ವೃಕ್ಷಗಳ ನಡುವಿನಿಂದ ಮುಂದೆ ಹೋಗಲು ಪ್ರಯತ್ನಮಾಡತೊಡಗಿದನು. ಶ್ರೀಕೃಷ್ಣನು ಎರಡೂ ವೃಕ್ಷಗಳ ಮಧ್ಯದಿಂದ ಸಹಜವಾಗಿ ಅಂಬೆಗಾಲಿಡುತ್ತಾ ಮುಂದೆ ಹೋದನು ; ಆದರೆ ಒರಳು ದೊಡ್ಡದಾಗಿದ್ದುದರಿಂದ ಮತ್ತೆ ಅದು ಅಡ್ಡ ಬಿದ್ದುದರಿಂದ ಎರಡೂ ವೃಕ್ಷಗಳ ನಡುವಿನಿಂದ ಬರಲಿಲ್ಲ. ಆಗ ಅಂಬೆಗಾಲಿಡುತ್ತಾ ಮುಂದೆ ಹೋದ ಬಾಲಕೃಷ್ಣನು ಸೊಂಟಕ್ಕೆ ಕಟ್ಟಿಕೊಂಡ ಹಗ್ಗವನ್ನು ಜೋರಾಗಿ ಎಳೆದು ಎರಡೂ ವೃಕ್ಷಗಳ ಮಧ್ಯದಿಂದ ಒರಳನ್ನು ಎಳೆಯುವ ಪ್ರಯತ್ನವನ್ನು ಮಾಡತೊಡಗಿದನು. ಇದರಿಂದ ಎರಡೂ ವೃಕ್ಷಗಳ ಮೇಲೆ ಒರಳು ಅಪ್ಪಳಿಸಿದುದರಿಂದ ಎರಡೂ ವೃಕ್ಷಗಳು ಅಲುಗಾಡತೊಡಗಿದವು. ಶ್ರೀಕೃಷ್ಣನು ಇಷ್ಟು ಜೋರಾಗಿ ಒರಳನ್ನು ಎಳೆದನೆಂದರೆ, ಒರಳು ವೃಕ್ಷಗಳಿಗೆ ಅಪ್ಪಳಿಸಿದುದರಿಂದ ಎರಡೂ ವೃಕ್ಷಗಳು ಬುಡ ಮೇಲಾದವು. ಆ ಎರಡೂ ವೃಕ್ಷಗಳಿಂದ ನಲಕುಬೇರ ಮತ್ತು ಮಣಿಗ್ರೀವ ಇವರ ದಿವ್ಯ ರೂಪಗಳು ಹೊರಗೆ ಬಂದವು ಮತ್ತು ಅವರು ಶ್ರೀಕೃಷ್ಣನಿಗೆ ವಂದಿಸಿ ಅವರನ್ನು ಉದ್ಧರಿಸಿದ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಿದರು ಮತ್ತು ಕುಬೇರನ ಅಲಕಾಪುರಿಗೆ ಹೊರಟು ಹೋದರು. ಈ ಪ್ರಕಾರ ಬಾಲಕೃಷ್ಣನು ವೃಕ್ಷದ ರೂಪದಲ್ಲಿರುವ ಕುಬೇರಪುತ್ರರ ಉದ್ಧಾರ ಮಾಡಿದನು.
೬ ಆ. ಕುಬ್ಜೆಯ ಉದ್ಧಾರ : ಶ್ರೀರಾಮನಿಗೆ ವನವಾಸ ಮತ್ತು ಭರತನಿಗೆ ಅಯೋಧ್ಯೆಯ ಪಟ್ಟ ದೊರಕಬೇಕು ಎಂಬುದಕ್ಕಾಗಿ ಮಹಾರಾಣಿ ಕೈಕೇಯಿಯ ಉದ್ಯುಕ್ತ ಮಾಡುವ ಮಂಥರೆ ದ್ವಾಪರಯುಗದಲ್ಲಿ ಕುಬ್ಜೆಯಾಗಿ ಮಥುರೆಯಲ್ಲಿ ಜನ್ಮ ತಾಳಿದಳು. ಅವಳು ಪ್ರತಿದಿನ ಚಂದನವನ್ನು ತೇಯ್ದು ಕಂಸನಿಗೆ ಹಚ್ಚುತ್ತಿದ್ದಳು. ಅವಳು ನೋಡಲು ಅತ್ಯಂತ ಕುರೂಪೆಯಾಗಿದ್ದು, ಗೂನು ಬೆನ್ನು ಹೊಂದಿದ್ದಳು; ಹೀಗಾಗಿ ಎಲ್ಲರೂ ಅವಳನ್ನು ‘ಕುರೂಪೆ, ಕುಬ್ಜೆ’ ಎಂದು ಅಣಕಿಸುತ್ತಿದ್ದರು. ಯಾವಾಗ ಕಂಸನು ಅಕ್ರೂರನಿಗೆ ಹೇಳಿ ಶ್ರೀಕೃಷ್ಣ ಮತ್ತು ಬಲರಾಮರನ್ನು ಮಥುರೆಗೆ ಕರೆದುತಂದನೋ, ಆಗ ಶ್ರೀಕೃಷ್ಣ ಮತ್ತು ಬಲರಾಮರು ಮಥುರಾ ನಗರದ ಅವಲೋಕನ ಮಾಡಲು ನಗರದಲ್ಲಿ ತಿರುಗಾಡುತ್ತಿದ್ದರು. ಕುಬ್ಜೆಯ ಕೈಯಲ್ಲಿ ತೇಯ್ದ ಚಂದನವನ್ನು ಬೆಳ್ಳಿಯ ಬಟ್ಟಲಲ್ಲಿಟ್ಟುಕೊಂಡು ಕೋಣೆಯಿಂದ ಬಗ್ಗಿದ ಸ್ಥಿತಿಯಲ್ಲಿ ಅವಸರದಿಂದ ನಡೆಯುತ್ತಿದ್ದಳು. ಆಗ ಅಕಸ್ಮಾತ ಅವಳೆದುರು ಶ್ರೀಕೃಷ್ಣ ಮತ್ತು ಬಲರಾಮರು ಬಂದರು. ಅವಳು ಶ್ರೀಕೃಷ್ಣನಿಗೆ ಡಿಕ್ಕಿ ಹೊಡೆದುದರಿಂದ ಅವಳ ಬಟ್ಟಲಿನಲ್ಲಿನ ಚಂದನವು ಶ್ರೀಕೃಷ್ಣನ ಚರಣಗಳ ಮೇಲೆ ಚೆಲ್ಲಿತು. ಅವಳು ಚಂದನವನ್ನು ಒರೆಸಲು ಶ್ರೀಕೃಷ್ಣ ಚರಣಗಳನ್ನು ಸ್ಪರ್ಶಿಸಿದಳು, ಆಗ ಅವಳಿಗೆ ದಿವ್ಯತ್ವದ ಅನುಭೂತಿ ಬಂದಿತು ಮತ್ತು ಶ್ರೀಕೃಷ್ಣನೇ ಬಗ್ಗಿ ಅವಳನ್ನು ಎದ್ದು ನಿಲ್ಲಿಸಲು ಮೇಲೆತ್ತಿದನು. ಆಗ ಅವಳ ಗೂನು ಬೆನ್ನು ಸರಿಯಾಗಿ ಅವಳು ಸಾಮಾನ್ಯ ಮನುಷ್ಯಳ ಹಾಗೆ ನೆಟ್ಟಗೆ ಎದ್ದು ನಿಂತಳು. ಶ್ರೀಕೃಷ್ಣನ ಕರಕಮಲಗಳ ಸ್ಪರ್ಶವು ಕುಬ್ಜೆಗೆ ಆದುದರಿಂದ ಅವಳ ಕುರುಪವು ನಷ್ಟವಾಗಿ ಅವಳು ಸುಂದರ ಯುವತಿಯಾಗಿ ಬದಲಾದಳು. ಈ ರೀತಿಯಲ್ಲಿ ಶ್ರೀಕೃಷ್ಣನು ಕುಬ್ಜೆಯ ಉದ್ಧಾರ ಮಾಡಿದನು.
೬ ಇ. ಶ್ರೀಕೃಷ್ಣನು ಊಸರವಳ್ಳಿಯಾಗಿ ಬಾವಿಯಲ್ಲಿ ಬಿದ್ದ ನೃಗ ರಾಜನ ಉದ್ಧಾರ ಮಾಡುವುದು : ನೃಗ ರಾಜನು ಇಕ್ಷ್ವಾಕುವಂಶದ ರಾಜನಾಗಿದ್ದನು. ಅವನು ಪರಮ ದಾನವೀರನಾಗಿದ್ದನು. ಅವನು ವಿದ್ವಾನ ಬ್ರಾಹ್ಮಣರಿಗೆ ಸಾವಿರಾರು ಗೋವುಗಳ ದಾನವನ್ನು ನೀಡುತ್ತಿದ್ದನು. ಒಂದು ಬಾರಿ ಅವನು ಓರ್ವ ಬ್ರಾಹ್ಮಣನಿಗೆ ದಾನವಾಗಿ ನೀಡಿದ ಗೋವುಗಳ ಪೈಕಿ ಒಂದು ಗೋವು ಮತ್ತೇ ಅರಮನೆಯ ಗೋವುಗಳ ಹಿಂಡುಗಳಲ್ಲಿ ಬಂದು ಸೇರಿಕೊಂಡಿತು. ಇದರ ಜ್ಞಾನ ನೃಗ ರಾಜನಿಗಿರಲಿಲ್ಲ. ಅವನು ಕೆಲವು ದಿನಗಳಲ್ಲಿ ಅರಮನೆಯಲ್ಲಿದ್ದ ಗೋವುಗಳನ್ನು ಇನ್ನೊಬ್ಬ ಬ್ರಾಹ್ಮಣನಿಗೆ ದಾನ ನೀಡಿದನು. ಆಗ ರಾಜನಿಗೆ ಗೊತ್ತಾಗದ ರೀತಿಯಲ್ಲಿ ಅವನಿಂದ ಒಂದೇ ಆಕಳನ್ನು ಎರಡು ಬ್ರಾಹ್ಮಣರಿಗೆ ದಾನವನ್ನು ನೀಡಲಾಯಿತು. ಇದರಿಂದ ಇಬ್ಬರೂ ಬ್ರಾಹ್ಮಣರು ಅವನ ಕಡೆಗೆ ಬಂದರು ಮತ್ತು ಆ ಗೋವಿನ ಮೇಲೆ ತಮ್ಮ ಹಕ್ಕು ಇದ್ದ ಬಗ್ಗೆ ಹೇಳತೊಡಗಿದರು. ಈ ವಾದವು ಏನು ಮಾಡಿದರೂ ಮುಕ್ತಾಯಗೊಳ್ಳಲಿಲ್ಲ. ಆಗ ಇಬ್ಬರೂ ಬ್ರಾಹ್ಮಣರು ರಾಜನ ಮೇಲೆ ಕೋಪಗೊಂಡು ಹೊರಟು ಹೋದರು. ನೃಗ ರಾಜನು ಮೃತನಾದ ನಂತರ ಯಮದೇವನು ಅವನಿಗೆ, ‘ಒಂದೇ ಆಕಳನ್ನು ಎರಡು ಬ್ರಾಹ್ಮಣರಿಗೆ ದಾನ ನೀಡಿದ ಪಾಪ ಭೋಗಿಸಲು ಊಸರವಳ್ಳಿಯಾಗಿ ಜನ್ಮ ತಾಳಿ ಬಾವಿಯಲ್ಲಿ ಬೀಳುವಿ’, ಎಂದು ಹೇಳಿದನು; ಆದರೆ ‘ಈ ಪಾಪವು ಅಜ್ಞಾನದಿಂದ ಆದ ಕಾರಣ ನಿನ್ನ ಉದ್ಧಾರವನ್ನು ಭಗವಾನ ಶ್ರೀಕೃಷ್ಣನು ಮಾಡುವನು’, ಎಂಬ ಆಶೀರ್ವಾದವನ್ನೂ ನೀಡಿದನು. ಆ ರೀತಿಯಲ್ಲಿ ನೃಗ ರಾಜನು ಒಂದು ಕಾಡಿನಲ್ಲಿನ ಹಾಳು ಬಾವಿಯಲ್ಲಿ ಊಸರವಳ್ಳಿಯಾಗಿ ಅನೇಕ ವರ್ಷ ಬಿದ್ದಿದ್ದನು. ಶ್ರೀಕೃಷ್ಣನ ಪ್ರದ್ಯುಮ್ನ, ಸಾಂಬ ಮುಂತಾದ ಮಕ್ಕಳು ಕಾಡಿನಲ್ಲಿ ಹೋಗುತ್ತಿರುವಾಗ ಅವರಿಗೆ ಈ ವಿಶಾಲ ಶರೀರವುಳ್ಳ ಊಸರವಳ್ಳಿ ಕಣ್ಣಿಗೆ ಬಿದ್ದಿತು. ಅವರು ಅದನ್ನು ಬಾವಿಯಿಂದ ಹೊರಗೆ ತೆಗೆಯಲು ಬಹಳ ಪ್ರಯತ್ನಿಸಿದರು; ಆದರೆ ಅವರಿಗೆ ಅದನ್ನು ಹೊರ ತೆಗೆಯಲು ಸಾಧ್ಯವಾಗಲಿಲ್ಲ; ಆದುದರಿಂದ ಅವರು ಈ ಬಗ್ಗೆ ಭಗವಾನ ಶ್ರೀಕೃಷ್ಣನಿಗೆ ಹೇಳಿದರು. ಭಗವಾನ ಶ್ರೀಕೃಷ್ಣನು ಕಾಡಿನಲ್ಲಿನ ಆ ಬಾವಿಯ ಬಳಿಗೆ ಹೋದನು ಮತ್ತು ಅವನು ತನ್ನ ಎಡಗೈಯನ್ನು ಉದ್ದ ಮಾಡಿ ಊಸರವಳ್ಳಿಯನ್ನು ಬಾವಿಯಿಂದ ಹೊರಗೆ ತೆಗೆದನು. ಭಗವಾನ ಶ್ರೀಕೃಷ್ಣನ ಹಸ್ತಸ್ಪರ್ಶವಾದ ತಕ್ಷಣ ಆ ಊಸರವಳ್ಳಿಯ ರೂಪಾಂತರ ದಿವ್ಯ ಪುರುಷನಲ್ಲಾಯಿತು. ಆಗ ನೃಗ ರಾಜನ ಹಿಂದಿನ ಜನ್ಮದ ಸ್ಮೃತಿ ಜಾಗೃತವಾಯಿತು ಮತ್ತು ಅವನು ನಡೆದ ಪ್ರಸಂಗವನ್ನು ಶ್ರೀಕೃಷ್ಣನಿಗೆ ಹೇಳಿದನು. ಶ್ರೀಕೃಷ್ಣನ ದರ್ಶನವನ್ನು ಪಡೆದ ನಂತರ ನೃಗ ರಾಜನಿಗೆ ಸ್ವರ್ಗಕ್ಕೆ ಕರೆದುಕೊಂಡು ಹೋಗಲು ಬಂದ ವಿಮಾನದಲ್ಲಿ ಕುಳಿತುಕೊಳ್ಳಲು ಸಹ ಇಚ್ಛೆಯಿರಲಿಲ್ಲ. ಆಗ ಶ್ರೀಕೃಷ್ಣನು ಅವನಿಗೆ ‘ಸ್ವರ್ಗಕ್ಕೆ ಹೋದನಂತರವೂ ನಿನ್ನ ಭಕ್ತಿಯು ನಡೆಯುತ್ತದೆ’, ಎಂಬ ಆಶೀರ್ವಾದವನ್ನು ನೀಡಿ ಕಳುಹಿಸಿದನು. ಈ ರೀತಿಯಲ್ಲಿ ಊಸರವಳ್ಳಿಯ ಯೋನಿಯಲ್ಲಿ ಕೆಲಸವಿಲ್ಲದೇ ಬಿದ್ದುಕೊಂಡಂತಹ ನೃಗ ರಾಜನ ಉದ್ಧಾರವು ಭಗವಾನ ಶ್ರೀಕೃಷ್ಣನ ಪಾವನ ಸ್ಪರ್ಶದಿಂದಾಯಿತು.’ (ಆಧಾರ : ಶ್ರೀಕೃಷ್ಣ – ಪೂರ್ಣ ಪುರುಷೋತ್ತಮ ಗ್ರಂಥ)
೭. ಉಪಾಸನೆ
೭ ಅ. ಸಂಬಂಧಿತ ಗ್ರಂಥ
ಮಹರ್ಷಿ ವ್ಯಾಸರು ರಚಿಸಿದ ಶ್ರೀಮದ್ಭಗವದ್ಗೀತಾ, ಮಹಾಭಾರತ ಮತ್ತು ಶ್ರೀಮದ್ಭಾಗವತ, ಸಂತ ಏಕನಾಥರು ಬರೆದಂತಹ ಏಕನಾಥಿ ಭಾಗವತ, ಸಂತ ಜ್ಞಾನೇಶ್ವರರು ಜ್ಞಾನೇಶ್ವರಿಯ ರೂಪದಲ್ಲಿ ಮಾಡಿದ
ಶ್ರೀಮದ್ಭಗವದ್ಗೀತೆಯ ಮರಾಠಿಯಲ್ಲಿನ ಅನುವಾದ ಮತ್ತು ಸನಾತನ ನಿರ್ಮಿತ ಶ್ರೀಕೃಷ್ಣ ಮತ್ತು ರಾಸಲೀಲಾ ಈ ಗ್ರಂಥಗಳು ಶ್ರೀಕೃಷ್ಣನಿಗೆ ಸಂಬಂಧಿಸಿವೆ.
೭ ಆ. ಶ್ರೀ ಕೃಷ್ಣನ ಶ್ಲೋಕ
೭ ಆ ೧ ಅ. ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ |
ಪ್ರಣತಕ್ಲೇಶನಾಶಾಯ ಗೋವಿಂದಾಯ ನಮೋ ನಮಃ ||
೭ ಆ ೧ ಆ. ವಸುದೇವಸುತಂ ದೇವಂ ಕಂಸಚಾಣೂರಮರ್ದನಂ|
ದೇವಕಿಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ ||
೭ ಆ ೨. ಶ್ರೀಕೃಷ್ಣ ಗೋವಿಂದ ಹರೆ ಮುರಾರೆ ಹೇ ನಾಥ ನಾರಾಯಣ ವಾಸುದೇವ|
ಪ್ರದ್ಯುಮ್ನ ದಾಮೋದರ ವಿಶ್ವನಾಥ ಮುಕುಂದ ವಿಷ್ಣೋ ಭಗವನ್ ನಮಸ್ತೆ ||
೮ ಇ. ಶ್ರೀಕೃಷ್ಣನ ನಾಮಜಪ
೭ ಇ ೧. ಪ್ರಚಲಿತ ನಾಮಜಪ : ‘ಓಂ ನಮೋ ವಾಸುದೇವಾಯ |’ ಇದು ಅಷ್ಟಾಕ್ಷರಿ ಮತ್ತು ‘ಓಂ ನಮೋ ಭಗವತೇ ವಾಸುದೇವಾಯ |’ ಇದು ದ್ವಾದಶಾಕ್ಷರಿ ನಾಮಜಪವಾಗಿದೆ.
೭ ಇ ೨. ಪಂಚಮಹಾಭೂತಗಳೊಂದಿಗೆ ಸಂಬಂಧಿಸಿದ ನಾಮಜಪ : ‘ಓಂ ನಮೋ ಭಗವತೇ ವಾಸುದೇವಾಯ |’ ಈ ನಾಮಜಪವು ಆಪ, ತೇಜ ಹಾಗೆಯೇ ಆಕಾಶ ಈ ತತ್ತ್ವಗಳೊಂದಿಗೆ ಸಂಬಂಧಿಸಿದೆ.
೭ ಈ. ಕೃಷ್ಣಗಾಯತ್ರಿ ಮಂತ್ರ
೭ ಈ ೧. ಓಂ ದೇವಕೀನಂದನಾಯ ವಿದ್ಮಹೇ | ವಾಸುದೇವಾಯ ಧೀಮಹಿ | ತನ್ನಃ ಕೃಷ್ಣಃ ಪ್ರಚೋದಯಾತ್ ||
ಅರ್ಥ: ನಾವು ದೇವಕೀಪುತ್ರನಾದ ಕೃಷ್ಣನನ್ನು ಅರಿತಿದ್ದೇವೆ. ನಾವು ವಾಸುದೇವನ (ವಸುದೇವಪುತ್ರ ಕೃಷ್ಣನ) ಧ್ಯಾನವನ್ನು ಮಾಡುತ್ತೇವೆ. ಆ ಕೃಷ್ಣನು ನಮ್ಮ ಬುದ್ಧಿಗೆ ಸತ್ಪ್ರೇರಣೆಯನ್ನು ನೀಡಲಿ.
೭ ಈ ೨. ಓಂ ದಾಮೋದರಾಯ ವಿದ್ಮಹೇ | ವಾಸುದೇವಾಯ ಧೀಮಹಿ | ತನ್ನಃ ಕೃಷ್ಣಃ ಪ್ರಚೋದಯಾತ್ ||
ಅರ್ಥ : ನಾವು ದಾಮೋದರನನ್ನು ಅರಿತಿದ್ದೇವೆ. ನಾವು ವಾಸುದೇವರ ಧ್ಯಾನವನ್ನು ಮಾಡುತ್ತೇವೆ. ಆ ಕೃಷ್ಣನು ನಮ್ಮ ಬುದ್ಧಿಗೆ ಸತ್ಪ್ರೇರಣೆಯನ್ನು ನೀಡಲಿ.
೭ ಉ. ಸಂಬಂಧಿತ ಬೀಜಮಂತ್ರ
‘ಉಂ’ ಮಧುಸೂದನನೊಂದಿಗೆ, ‘ಲೃಂ’ ಶ್ರೀಧರನೊಂದಿಗೆ ಮತ್ತು ‘ಆಂ’ ವಾಸುದೇವನೊಂದಿಗೆ ಸಂಬಂಧಿತ ಬೀಜಮಂತ್ರಗಳಾಗಿವೆ. ‘ಕ್ಲೀಂ’ ಇದು ಕೃಷ್ಣಬೀಜ ಅಥವಾ ಕಾಮಬೀಜವಿದ್ದು ಅದರಿಂದ ಸುಖಪ್ರಾಪ್ತಿಯಾಗುತ್ತದೆ. (ಆಧಾರ : ಸನಾತನದ ಗ್ರಂಥ `ಮಂತ್ರಯೋಗ’)
೭ ಊ. ಸಂಬಂಧಿಸಿದ ಯಜ್ಞ
‘ಗೀತಾಯಜ್ಞ’ ಮತ್ತು ‘ಸುದರ್ಶನಯಾಗ’ ಇವು ಶ್ರೀಕೃಷ್ಣನೊಂದಿಗೆ ಸಂಬಂಧಿಸಿದ ಯಜ್ಞಗಳಾಗಿವೆ.
೭ ಎ. ಸಂಬಂಧಿಸಿದ ವೃತ
ಗೋಕುಲಾಷ್ಟಮಿಗೆ ದಿನವಿಡಿ ಶ್ರೀಕೃಷ್ಣನಿಗಾಗಿ ಉಪವಾಸ ಮಾಡಿ ರಾತ್ರಿ ಹನ್ನೆರಡು ಗಂಟೆಗೆ ಶ್ರೀಕೃಷ್ಣನ ಜನ್ಮವಾದನಂತರ ಉಪವಾಸವನ್ನು ಮುಗಿಸುತ್ತಾರೆ.
೭ ಏ. ಸಂಬಂಧಿತ ಹಬ್ಬ
ದೀಪಾವಳಿಯ ನರಕಚತುರ್ದಶಿಯಂದು ಶ್ರೀಕೃಷ್ಣನ ಪೂಜೆಯನ್ನು ಮಾಡಿ ದೀಪೋತ್ಸವವನ್ನು ಆಚರಿಸುತ್ತಾರೆ. ದೇವತೆಗಳು ದೀಪಾವಳಿಯ ಸಮಯದಲ್ಲಿ ಶ್ರೀಕೃಷ್ಣನೊಂದಿಗೆ ತುಳಸಿಯ ವಿವಾಹವನ್ನು ನೆರವೇರಿಸಲು ಬರುತ್ತಾರೆ.
೭ ಐ. ಸಂಬಂಧಿತ ಉತ್ಸವ
ಗೋಕುಲಾಷ್ಟಮಿ, ಮೊಸರುಕುಡಿಕೆ ಮತ್ತು ರಂಗಪಂಚಮಿ ಇವು ಶ್ರೀಕೃಷ್ಣನೊಂದಿಗೆ ಸಂಬಂಧಿಸಿದ ಉತ್ಸವಗಳಾಗಿವೆ.
ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತೆ ಮತ್ತು ಪ್ರಾರ್ಥನೆ !
ಎಂಟು ಲಕ್ಷಣಗಳ ವ್ಯಕ್ತಿಮತ್ತ್ವವಿರುವ ಶ್ರೀಕೃಷ್ಣನ ಚರಣಗಳಲ್ಲಿ ಕೃತಜ್ಞತಾಭಾವದಿಂದ ನತಮಸ್ತಕರಾಗಿ ಅವನಿಗೆ ಸಂಪೂರ್ಣ ಶರಣು ಹೋಗಿ ಮುಂದಿನ ಪ್ರಾರ್ಥನೆಯನ್ನು ಮಾಡೋಣ. ‘ಹೇ ಶ್ರೀಕೃಷ್ಣಾ ನೀನೇ ನಮ್ಮ ಉದ್ಧಾರ ಮಾಡು ಮತ್ತು ನೀನು ನಮ್ಮ ಮೇಲೆ ಕೃಪಾವಂತನಾಗಿ ನಮ್ಮಲ್ಲಿ ಭಕ್ತಿಭಾವವನ್ನು ನಿರ್ಮಾಣ ಮಾಡು ಮತ್ತು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡು, ಎಂಬುದೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.’
– ಶ್ರೀಕೃಷ್ಣನ ಅಂಶವಿರುವ,
ಕು. ಮಧುರಾ ಭೋಸಲೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೭.೨೦೧೭)