ಸ್ವಯಂಸೂಚನಾ ಸತ್ರಗಳು ಪ್ರಭಾವಶಾಲಿಯಾಗಲು ಮಾಡಬೇಕಾದ ಪ್ರಯತ್ನಗಳು
ನಾವು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ ಮತ್ತು ಪ್ರಕ್ರಿಯೆಯನ್ನು ಹೇಗೆ ನಡೆಸಬೇಕು? ಎಂದು ತಿಳಿದುಕೊಂಡಿದ್ದೆವು. ಅದರ ಜೊತೆಗೆ ಸ್ವಯಂಸೂಚನೆಯನ್ನು ನೀಡುವ ಬೇರೆ ಬೇರೆ ಪದ್ಧತಿಗಳು ಉದಾಹರಣೆಗಾಗಿ ಅ-೧, ಅ-೨, ಅ-೩, ಆ-೧, ಆ-೨, ಇದನ್ನು ಸಹ ತಿಳಿದುಕೊಂಡಿದ್ದೆವು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಅಂತರ್ಗತ ತಖ್ತೆಯನ್ನು ಬರೆಯುವುದು, ಮತ್ತು ಸ್ವಯಂಸೂಚನೆ ಅಭ್ಯಾಸಸತ್ರಗಳನ್ನು ಮಾಡುವುದು ಇವು ೨ ಮಹತ್ವದ ಹಂತಗಳಾಗಿವೆ. ಈಗ ನಾವು ಸ್ವಯಂಸೂಚನೆಯ ಸತ್ರದ ಬಗ್ಗೆ ಮತ್ತೊಮ್ಮೆ ನೋಡೋಣ ಮತ್ತು ಅದು ಇನ್ನೂ ಹೆಚ್ಚು ಪರಿಣಾಮಕಾರಿಯಾಗಲು ಅದರಲ್ಲಿ ಸಾತತ್ಯವಿಡಲು ಏನೇನು ಪ್ರಯತ್ನಗಳನ್ನು ಮಾಡಬೇಕಾಗಿದೆ ಈ ವಿಷಯದಲ್ಲಿ ಅಂಶಗಳನ್ನು ಸಹ ತಿಳಿದುಕೊಳ್ಳೋಣ.
ಅ. ದುಃಖ ನಿವಾರಣೆಯ ಮಾರ್ಗ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ
ಪ್ರತಿಯೊಬ್ಬ ಮನುಷ್ಯನು ಆನಂದಪ್ರಾಪ್ತಿಗಾಗಿ ಚಡಪಡಿಸುತ್ತಿರುತ್ತಾನೆ ಎಂದು ನಮಗೀಗ ತಿಳಿದಿದೆ. ಸ್ವಲ್ಪ ದುಃಖ ಬರಲಿ, ನಮಗೆ ಸ್ವಲ್ಪ ಕಷ್ಟವಾಗಲಿ ಎಂದು ಯಾರಿಗಾದರೂ ಅನಿಸುತ್ತಿದೆಯೇ ? ಎಲ್ಲರ ಒದ್ದಾಟವು ಆನಂದ ಪಡೆಯುವುದರತ್ತವಿರುತ್ತದೆ. ಆದರೆ ಈ ಆನಂದವು ನಮಗೆ ನಿರಂತರವಾಗಿ ಸಿಗುತ್ತದೆಯೇನು? ಇಲ್ಲವಲ್ಲ? ನಮ್ಮೆಲ್ಲರ ಒದ್ದಾಟವೂ ಆನಂದಪ್ರಾಪ್ತಿಗಾಗಿ ಇರುತ್ತದೆ ಮತ್ತು ನಮ್ಮ ಪಾಲಿಗೆ ದುಃಖವೇ ಹೆಚ್ಚು ಪ್ರಮಾಣದಲ್ಲಿ ಬರುತ್ತದೆ. ಸಂತ ತುಕಾರಾಮ ಮಹಾರಾಜರು, ‘ಸುಖ ಎಳ್ಳಷ್ಟು, ಮತ್ತು ದುಃಖಗಳು ಪರ್ವತದಷ್ಟು’ ಎಂದು ಹೇಳಿದ್ದಾರೆ. ಅಂದರೆ ನಮ್ಮ ಪಾಲಿಗೆ ಸುಖವು ಕಣದಷ್ಟು ಬರುತ್ತದೆ ಮತ್ತು ದುಃಖವು ದೊಡ್ಡ ಪ್ರಮಾಣದಲ್ಲಿ ಬರುತ್ತದೆ. ಈ ದುಃಖ ನಿವಾರಣೆಯ ಮಾರ್ಗವು ಭೌತಿಕ ಜಗತ್ತಿನಲ್ಲಿ ಸಿಗುವುದಿಲ್ಲ, ಆದರೆ ಅಧ್ಯಾತ್ಮದಲ್ಲಿದೆ. ಹೆಚ್ಚಿನ ಜನರಿಗೆ ಹಣ ಗಳಿಸಿದರೆ ದುಃಖ ದೂರವಾಗಬಹುದು ಎಂದು ಅನಿಸುತ್ತದೆ; ಆದರೆ ಹಾಗಿಲ್ಲ. ಸುಖ-ದುಃಖಗಳ ಸಂಬಂಧವು ಹಣ, ಜಮೀನು, ಮನೆ-ಬಂಗಲೆ ಬಂಧು-ಬಳಗ ಇವರೊಂದಿಗಲ್ಲ, ಮನಸ್ಸಿನೊಂದಿಗಿದೆ! ಅದನ್ನು ನಾವು ಮೊದಲು ತಿಳಿದುಕೊಳ್ಳಬೇಕಾಗಿದೆ. ಸಮರ್ಥ ರಾಮದಾಸ ಸ್ವಾಮಿಯವರು ಸಹ ಇದನ್ನೇ ಹೇಳಿದ್ದಾರೆ.
ಜಗೀ ಸರ್ವ ಸುಖೀ ಅಸಾ ಕೊಣ ಆಹೆ? ವಿಚಾರ ಮನಾ ತೂಚಿ ಶೋಧುನಿ ಪಾಹೆ|
ಮನಾ ವಿಚಾರೆ ತೆ ಪೂರ್ವಸಂಚಿತ ಕೆಲೆ, ತಯಾಸಾರಖೇ ಭೋಗಣೆ ಪ್ರಾಪ್ತ ಝಾಲೆ||
ಇದರ ಅರ್ಥ : ಜಗತ್ತಿನಲ್ಲಿ ಸುಖಿ ಎಂದು ಯಾರೂ ಇಲ್ಲ. ಪ್ರತಿಯೊಬ್ಬರ ಪೂರ್ವಸಂಚಿತಕ್ಕನುಸಾರ ಅವರ ಪಾಲಿನ ಭೋಗಗಳು ಬರುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಆಂತರಿಕ ಸಮಾಧಾನ ಪಡೆಯಲು ಎಲ್ಲ ಸಂತರೂ ವಿಕಾರ ಅಥವಾ ಅರಿಷಡ್ವರ್ಗಗಳನ್ನು ದೂರಗೊಳಿಸುವ ಉಪದೇಶ ನೀಡಿದ್ದಾರೆ.
ಆ. ಸ್ವಭಾವದೋಷ ನಿರ್ಮೂಲನದ ಮಹತ್ವ
ಎಲ್ಲಿಯ ತನಕ ಗದ್ದೆಯಲ್ಲಿನ ಕಳೆಯನ್ನು ತೆಗೆಯುವುದಿಲ್ಲವೋ ಅಲ್ಲಿಯ ತನಕ ಒಳ್ಳೆಯ ಫಸಲು ಸಿಗುವುದಿಲ್ಲ. ಅದೇ ರೀತಿ ನಕಾರಾತ್ಮಕ ವಿಚಾರಗಳು, ವಿಕಲ್ಪಗಳಂತಹ ಷಡ್ವೈರಿಗಳನ್ನು ಮತ್ತು ಅಹಂರೂಪೀ ಕಳೆಯನ್ನು ಎಲ್ಲಿಯ ತನಕ ದೂರಗೊಳಿಸಲು ಪ್ರಯತ್ನಿಸುವುದಿಲ್ಲವೋ ಅಲ್ಲಿಯ ತನಕ ಅಂತರಂಗದಲ್ಲಿರುವ ಈಶ್ವರನು ಕಾಣಿಸುವುದಿಲ್ಲ. ಕೇವಲ ನಮ್ಮ ಸಾಧನೆ ಮಾತ್ರವಲ್ಲ, ನಮಗೆ ಜೀವಿಸಲು ಸಹ ಕಷ್ಟವಾಗುತ್ತದೆ. ನಮಗೆ ಉಂಟಾಗುವ ಒತ್ತಡ-ಉದ್ವಿಗ್ನತೆ, ನಿರಾಶೆ, ಉದಾಸೀನತೆ, ದುಃಖ ಇವುಗಳಿಗೆಲ್ಲ ನಮ್ಮಲ್ಲಿರುವ ಸ್ವಭಾವದೋಷಗಳೇ ಕಾರಣವಾಗಿರುತ್ತವೆ. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರು ನಮ್ಮ ವ್ಯಕ್ತಿತ್ವದಲ್ಲಿರುವ ಸ್ವಭಾವದೋಷಗಳನ್ನು ಶಾಶ್ವತವಾಗಿ ದೂರಗೊಳಿಸಲು ಶಾಸ್ತ್ರೋಕ್ತ ಮತ್ತು ಆಧ್ಯಾತ್ಮಿಕ ಪದ್ಧತಿಯನ್ನು ಹುಡುಕಿ ತೆಗೆದಿದ್ದಾರೆ. ಅದುವೇ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ! ಈ ಪ್ರಕ್ರಿಯೆಯನ್ನು ನಡೆಸಿದ ನಂತರ ಅನೇಕ ಜನರು ಆನಂದಿತ, ಒತ್ತಡರಹಿತರಾಗಿ ಮತ್ತು ಸಕಾರಾತ್ಮಕ ಜೀವನವನ್ನು ಸಾಗಿಸುತ್ತಿದ್ದಾರೆ. ಸ್ವಯಂಸೂಚನೆಯ ಅಭ್ಯಾಸಸತ್ರಗಳನ್ನು ಮಾಡುವುದು ಇದು ಈ ಪ್ರಕ್ರಿಯೆಯ ಅಂತರ್ಗತವಿರುವ ಒಂದು ಮಹತ್ವದ ಹಂತವಾಗಿದೆ. ನೀವು ಈಗಾಗಲೇ ಸ್ವಯಂಸೂಚನೆಯ ಸತ್ರದಿಂದಾಗಿರುವ ಬದಲಾವಣೆಯನ್ನು ಅನುಭವಿಸಿರಬಹುದು.
ಇ. ಸ್ವಯಂಸೂಚನೆಯ ಸತ್ರದ ಮಹತ್ವ
ಸ್ವಯಂಸೂಚನೆಯ ಸತ್ರ ಎಂದರೇನು? ನಮ್ಮಿಂದಾಗುವ ತಪ್ಪುಗಳು, ಅಯೋಗ್ಯ ಕೃತಿಗಳನ್ನು ತಡೆಗಟ್ಟಿ ಅದರ ಬದಲು ಮಾಡಬೇಕಾದ ಯೋಗ್ಯ ಕೃತಿ ಯಾವುದು ಎಂಬುವುದರ ಬಗ್ಗೆ ಮನಸ್ಸಿಗೆ ದಿಶೆ ನೀಡುವುದು! ಮನಸ್ಸಿನಲ್ಲಿ ನಕಾರಾತ್ಮಕ ಅಥವಾ ನಿರಾಶೆಯ ವಿಚಾರ ಬರುತ್ತಿದ್ದಲ್ಲಿ ಅದರ ಬದಲು ಮನಸ್ಸಿಗೆ ಸಕಾರಾತ್ಮಕ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ವಿಚಾರ ಮಾಡುವ ಅಭ್ಯಾಸ ಮಾಡಿಸುವುದು!
ಯಾವುದಾದರೊಂದು ವಿಶಿಷ್ಟ ಪ್ರಸಂಗ ಘಟಿಸಿದಾಗ ಅಥವಾ ಏನಾದರೊಂದು ವಿಶಿಷ್ಟ ಪರಿಸ್ಥಿತಿ ಉದ್ಭವಿಸಿದೊಡನೆ ನಮಗೆ ಕೋಪವನ್ನು ನಿಯಂತ್ರಿಸಲು ಆಗುವುದಿಲ್ಲ ಎಂಬಂತಹ ಪ್ರಸಂಗವನ್ನು ತಾವೆಲ್ಲರೂ ಅನುಭವಿಸಿರಬಹುದು. ಯಾವುದಾದರೊಂದು ಪ್ರಸಂಗದಲ್ಲಿ ಮನಸ್ಸು ಅಸ್ಥಿರವಾಗುತ್ತದೆ. ಸ್ವಭಾವದೋಷ ಉಮ್ಮಳಿಸಿ ಬಂದು ಕೊನೆಗೆ ನಮಗೇ ಹಾನಿಯಾಗುತ್ತದೆ. ಸ್ವಯಂಸೂಚನೆಯ ಮೂಲಕ ಯಾವುದಾದರೊಂದು ಪ್ರಸಂಗದಲ್ಲಿ ಹೇಗೆ ಯೋಗ್ಯವಾಗಿ ವರ್ತಿಸಬೇಕು ಎಂಬುದರ ಬಗ್ಗೆ ಮನಸ್ಸಿಗೆ ದಿಶೆ ಸಿಗುತ್ತದೆ. ಸ್ವಯಂಸೂಚನೆಯ ಸತ್ರ ಎಂದರೆ ಒಂದು ದಿಕ್ಸೂಚಿಯ ಹಾಗಿದೆ. ದಿಕ್ಸೂಚಿಯಿಂದ ದಿಕ್ಕು ಗೊತ್ತಾಗುತ್ತದೆ. ಆದರೆ ಈ ದಿಕ್ಕಿನಲ್ಲಿ ಹಡಗು ಹೋಗಬೇಕಾದರೆ ನಾವಿಕನು ಆ ಹಡಗನ್ನು ಸ್ವತಃ ಆ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಾಗುತ್ತದೆ. ಅದೇ ರೀತಿ ಸ್ವಯಂಸೂಚನೆಯ ಸತ್ರವು ನಮಗೆ ಯೋಗ್ಯ ವಿಚಾರವನ್ನು ಹೇಗೆ ಮಾಡಬೇಕು, ಯೋಗ್ಯ ಕೃತಿಯನ್ನು ಹೇಗೆ ಮಾಡಬೇಕು ಇದರ ಬಗ್ಗೆ ಮನಸ್ಸಿಗೆ ದಿಶೆ ನೀಡುತ್ತದೆ. ಆದರೆ ಆ ಸ್ವಯಂಸೂಚನೆಗನುಸಾರ ಕೃತಿಯನ್ನು ಮಾಡಲು ವ್ಯಕ್ತಿಯು ಸ್ವತಃ ಪ್ರಯತ್ನಿಸಬೇಕಾಗುತ್ತದೆ. ಹಾಗೆ ಮಾಡಿದರೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗೆ ವೇಗವು ಬರುತ್ತದೆ.
ಈ. ಸ್ವಯಂಸೂಚನೆಯ ಸತ್ರದ ವಿಷಯದಲ್ಲಿ ಕೆಲವು ಪ್ರಾಥಮಿಕ ಅಂಶಗಳು
೧. ಪ್ರಕ್ರಿಯೆಗಾಗಿ ಸ್ವಭಾವದೋಷಗಳನ್ನು ಆರಿಸಿ ಅದರ ವ್ಯಾಪ್ತಿಯನ್ನು ತೆಗೆಯಬೇಕು : ನಾವು ಹಿಂದೊಮ್ಮೆ ಸ್ವಯಂಸೂಚನೆಯ ಸತ್ರವನ್ನು ಹೇಗೆ ಮಾಡುವುದು ಎಂದು ತಿಳಿದುಕೊಂಡಿದ್ದೆವು. ಆದರೆ ಇಂದು ಪುನಃ ಸ್ವಲ್ಪದರಲ್ಲಿ ಅದರ ಪುನರಾವರ್ತನೆ ಮಾಡಿ ನಾವು ಈ ಸತ್ರವು ಪರಿಣಾಮಕಾರಿಯಾಗಲು ಹೇಗೆ ಪ್ರಯತ್ನಿಸಬೇಕು ಎಂದು ತಿಳಿದುಕೊಳ್ಳೋಣ. ಸ್ವಯಂಸೂಚನೆಯ ಸತ್ರವನ್ನು ಮಾಡುವ ಮೊದಲು ಮೊಟ್ಟಮೊದಲಿಗೆ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ನಮ್ಮಲ್ಲಿರುವ ೩ ಪ್ರಬಲ ಸ್ವಭಾವದೋಷಗಳನ್ನು ಆರಿಸಬೇಕು. ಆ ಸ್ವಭಾವದೋಷಗಳ ವ್ಯಾಪ್ತಿಯನ್ನು ತೆಗೆಯಬೇಕು. ವ್ಯಾಪ್ತಿ ಎಂದರೆ ಆ ಸ್ವಭಾವದೋಷಗಳು ಎಲ್ಲೆಲ್ಲಿ ಉಮ್ಮಳಿಸಿ ಬರುತ್ತವೆ ಅದರ ನೋಂದಣಿ ಮಾಡಿಟ್ಟುಕೊಳ್ಳುವುದು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಗಾಗಿ ಅವ್ಯವಸ್ಥಿತತೆ ಎಂಬ ಸ್ವಭಾವದೋಷವನ್ನು ಆರಿಸಿದ್ದಲ್ಲಿ ಅದು ಎಲ್ಲೆಲ್ಲಿ ಕಂಡು ಬರುತ್ತದೆ ಅದನ್ನು ಬರೆದಿಡಬೇಕು. ಉದಾ. : ಬಟ್ಟೆಗಳನ್ನು ಅವ್ಯವಸ್ಥಿತವಾಗಿಡುವುದು, ಚಪ್ಪಲಿಗಳನ್ನು ರಾಕ್ ನಲ್ಲಿ ಇಡದಿರುವುದು, ಅಡುಗೆಮನೆಯಲ್ಲಿ ಕಟ್ಟೆಯ ಮೇಲೆ ಎಲ್ಲ ಹರಡಿಡುವುದು, ಪುಸ್ತಕದಲ್ಲಿ ಏನಾದರೂ ಬರೆಯುವಾಗ ಅದನ್ನು ಅಂಕುಡೊಂಕಾಗಿ ಅಥವಾ ಹೇಗೆ ಬೇಕೋ ಹಾಗೆ ಬರೆಯುವುದು, ಕಚೇರಿಯ ಮೇಜಿನ ಮೇಲೆ ಸಾಮಾನುಗಳನ್ನು ಅವ್ಯವಸ್ಥಿತವಾಗಿಡುವುದು ಇತ್ಯಾದಿ. ಇಂತಹ ರೀತಿಯಲ್ಲಿ ಪ್ರಕ್ರಿಯೆಗಾಗಿ ಆರಿಸಿದ ೨ ಇತರ ಸ್ವಭಾವದೋಷಗಳ ವ್ಯಾಪ್ತಿಯನ್ನು ಸಹ ತೆಗೆಯಬೇಕು.
೨. ಸ್ವಯಂಸೂಚನೆ ತಯಾರಿಸುವುದು : ವ್ಯಾಪ್ತಿ ತೆಗೆದು ಆದ ನಂತರ ನಮ್ಮ ತಪ್ಪುಗಳ ತೀವ್ರತೆ, ಪುನರಾವರ್ತನೆ, ಕಾಲಾವಧಿ ಇವುಗಳ ಆಧಾರದಲ್ಲಿ ಸ್ವಭಾವದೋಷಗಳ ಯಾವುದಾದರೊಂದು ಅಭಿವ್ಯಕ್ತಿಯನ್ನು ಆರಿಸಿ ಅದಕ್ಕೆ ಸ್ವಯಂಸೂಚನೆಯನ್ನು ತಯಾರಿಸಬೇಕು. ಸ್ವಯಂಸೂಚನೆಯ ಸತ್ರವನ್ನು ಮಾಡಲು ಮೊದಲಿಗೆ ನಮಗೆ ನಮ್ಮಲ್ಲಿರುವ ೩ ಪ್ರಬಲ ಸ್ವಭಾವದೋಷಗಳನ್ನು ಆರಿಸಿ ಅದರ ವ್ಯಾಪ್ತಿಯನ್ನು ತೆಗೆಯಲಿಕ್ಕಿರುತ್ತದೆ. ಆ ವ್ಯಾಪ್ತಿಯಲ್ಲಿ ಯಾವ ಮಜಲು ಹೆಚ್ಚು ತೀವ್ರವಿದೆಯೋ ಅದರ ಪುನರಾವರ್ತನೆಯು ಹೆಚ್ಚು ಇದೆ ಅಥವಾ ನಮಗೆ ತೊಂದರೆಯಾಗುವ ಕಾಲಾವಧಿ ಹೆಚ್ಚು ಇದೆ ಆ ಮಜಲನ್ನು ಆರಿಸಿ ಅದಕ್ಕೆ ಸ್ವಯಂಸೂಚನೆಯನ್ನು ತಯಾರಿಸಬೇಕು. ಈ ರೀತಿಯಲ್ಲಿ ನಾವು ಆರಿಸಿದ ೩ ಸ್ವಭಾವದೋಷಗಳ ೩ ಸ್ವಯಂಸೂಚನೆಗಳು ಆಗುತ್ತವೆ. ಆರಂಭದಲ್ಲಿ ನಾವು ಪ್ರಕ್ರಿಯೆಗಾಗಿ ೨ ಸ್ವಭಾವದೋಷಗಳನ್ನು ಆರಿಸಿ ಮೂರನೆಯ ಸೂಚನೆಯನ್ನು ನಾಮಜಪಕ್ಕಾಗಿಯೂ ನೀಡಬಹುದು. ನಾಮಜಪಕ್ಕಾಗಿ ನಾವು ಯಾವ ಸ್ವಯಂಸೂಚನೆಯನ್ನು ನೀಡುತ್ತೇವೆ? ನಾವು ಈ ಮೊದಲು ಇ-೧ ಪದ್ಧತಿಯಿಂದ ಸ್ವಯಂಸೂಚನೆಯನ್ನು ತಿಳಿದುಕೊಂಡಿದ್ದೆವು. ಪರಾತ್ಪರ ಗುರು ಡಾ. ಆಠವಲೆಯವರು ನಾಮಜಪವಾಗಬೇಕೆಂದು ಒಂದು ಸಿದ್ಧ(ರೆಡಿಮೆಡ್) ಸ್ವಯಂಸೂಚನೆಯನ್ನು ಎಲ್ಲರಿಗಾಗಿ ನೀಡಿದ್ದಾರೆ. ಅದನ್ನು ನಿಯಮಿತವಾಗಿ ಕೊಡುವುದರಿಂದ ಅನೇಕ ಜನರ ನಾಮಜಪದಲ್ಲಿ ಹೆಚ್ಚಳವಾಗಿರುವುದರ ಅನುಭೂತಿಯು ಬಂದಿದೆ. ಆ ಸ್ವಯಂಸೂಚನೆಯು ಯಾವುದು ? ‘ಯಾವಾಗ ನಾನು ಯಾರೊಂದಿಗೂ ಸಂಭಾಷಣೆ ಮಾಡುತ್ತಿರುವುದಿಲ್ಲವೋ ಅಥವಾ ನನ್ನ ಮನಸ್ಸಿನಲ್ಲಿ ನಿರರ್ಥಕ ವಿಚಾರಗಳು ಬರುತ್ತಿವೆಯೋ ಆಗ ನನ್ನ ನಾಮಜಪವು ಪ್ರಾರಂಭವಾಗುವುದು’
೩. ಸತ್ರಸಂಖ್ಯೆ : ದಿನವಿಡೀ ನಾವು ಕಡಿಮೆಪಕ್ಷ ೫ ಸ್ವಯಂಸೂಚನೆಯ ಸತ್ರಗಳನ್ನು ಮಾಡಬೇಕು. ನಮ್ಮ ಸತ್ರಗಳ ಸಂಖ್ಯೆಯು ಎಷ್ಟು ಹೆಚ್ಚು ಇರುತ್ತದೆಯೋ ಅಷ್ಟು ಪ್ರಕ್ರಿಯೆಯ ಪ್ರಯತ್ನಗಳಿಗೆ ವೇಗವು ಸಿಗಲಿದೆ. ೨ ಸತ್ರಗಳ ನಡುವೆ ಕಡಿಮೆಪಕ್ಷ ೧೫ ನಿಮಿಷಗಳ ಅಂತರವನ್ನು ಇಟ್ಟುಕೊಳ್ಳಬೇಕು.
೪. ಸ್ವಯಂಸೂಚನೆಯ ಸತ್ರದ ಸ್ವರೂಪ
ಅ. ಒಂದು ಅಭ್ಯಾಸಸತ್ರವು ಸುಮಾರು ೮ ನಿಮಿಷಗಳದ್ದಾಗಿರುತ್ತದೆ.
ಆ. ಸ್ವಯಂಸೂಚನೆಯ ಸತ್ರದ ಆರಂಭದಲ್ಲಿ ಪ್ರಾರ್ಥನೆಯನ್ನು ಮಾಡಿ ಎರಡೂವರೆ ನಿಮಿಷ ತಮ್ಮ ಕುಲದೇವರ ಅಥವಾ ಉಪಾಸ್ಯ ದೇವರ ನಾಮಜಪವನ್ನು ಮಾಡಿ ಮನಸ್ಸು ಎಕಾಗ್ರಗೊಳಿಸಿ ಸ್ವಯಂಸೂಚನೆಯನ್ನು ನೀಡಿದರೆ ಅದು ಅಂತರ್ಮನಸ್ಸಿಗೆ ತಲುಪಲು ಸಹಾಯವಾಗುತ್ತದೆ. ನಾಮಜಪದಿಂದ ಮನಸ್ಸು ಏಕಾಗ್ರವಾಗುತ್ತದೆ. ಹಾಗಾಗಿ ಸತ್ರದ ಆರಂಭದಲ್ಲಿ ನಾಮಜಪದೊಂದಿಗೆ ಮನಸ್ಸನ್ನು ಏಕಾಗ್ರಗೊಳಿಸುವುದು ಮಹತ್ವದ್ದಾಗಿದೆ.
ಇ. ಸತ್ರಗಳನ್ನು ಮಾಡುವಾಗ ಮೊದಲು ಒಂದು ಸ್ವಭಾವದೋಷದ ಪ್ರಕಟೀಕರಣಕ್ಕೆ ೫ ಸಲ ಸ್ವಯಂಸೂಚನೆಯನ್ನು ನೀಡಿದ ನಂತರ ಮಧ್ಯದಲ್ಲಿ ಒಮ್ಮೆ ನಿಲ್ಲಿಸಿ ಪ್ರಾರ್ಥನೆಯನ್ನು ಮಾಡಬೇಕು. ಅನಂತರ ಮುಂದಿನ ಸ್ವಭಾವದೋಷಕ್ಕೆ ಸ್ವಯಂಸೂಚನೆಯನ್ನು ನೀಡಬೇಕು. ೨ ಸ್ವಯಂಸೂಚನೆಗಳ ನಡುವೆ ನಾಮಜಪಿಸುವ ಆವಶ್ಯಕತೆಯಿಲ್ಲ. ನಾವು ಅ-೩ ಪದ್ಧತಿಯಿಂದ ಅಂದರೆ ಪ್ರಸಂಗದ ಅಭ್ಯಾಸದ ಪದ್ಧತಿಯಲ್ಲಿ ಸ್ವಯಂಸೂಚನೆಯನ್ನು ನೀಡುತ್ತಿದ್ದಲ್ಲಿ ಅದನ್ನು ೫ ಸಲ ನೀಡದೇ ಒಂದೇ ಸಲ ನೀಡಬೇಕು.
ಈ. ಸ್ವಯಂಸೂಚನೆಯನ್ನು ನೀಡಿದ ಬಳಿಕ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಇಲ್ಲಿ ಒಂದು ಮಹತ್ವದ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕು ಸತ್ರದ ಕಾಲಾವಧಿಯಲ್ಲಿ ಕಡಿಮೆ ಅಥವಾ ಹೆಚ್ಚು ಆದರೆ ಏನೂ ವ್ಯತ್ಯಾಸವಾಗುವುದಿಲ್ಲ. ಕಾಲಾವಧಿಗಿಂತ ಸ್ವಯಂಸೂಚನಾ ಸತ್ರವನ್ನು ಪರಿಣಾಮಕಾರಿಯಾಗಿ ಮಾಡುವುದು ಮಹತ್ವದ್ದಾಗಿರುತ್ತದೆ!
೫.ಸ್ವಯಂಸೂಚನೆಯ ಸತ್ರವನ್ನು ಎಷ್ಟು ದಿನ ನೀಡಬೇಕು?
೧. ಸ್ವಯಂಸೂಚನೆಯ ಸತ್ರವನ್ನು ಕಡಿಮೆಪಕ್ಷ ೧ ವಾರದ ತನಕ ನೀಡಬೇಕು. ಸ್ವಭಾವದೋಷದಲ್ಲಿ ಬದಲಾವಣೆ ಆಗದಿದ್ದರೆ ೩-೪ ವಾರಗಳ ತನಕ ನೀಡಬಹುದು
೨. ಒಂದು ವಾರವಿಡೀ ನಿಯಮಿತವಾಗಿ ಅಭ್ಯಾಸಸತ್ರಗಳನ್ನು ಮಾಡಿದ ನಂತರ ಯಾವುದಾದರೊಂದು ಸ್ವಭಾವದೋಷದಲ್ಲಿ ಏನಾದರೂ ಸುಧಾರಣೆಯಾದಲ್ಲಿ ಆ ಸ್ವಯಂಸೂಚನೆಯನ್ನು ನಿಲ್ಲಿಸಿ ಅದೇ ಸ್ವಭಾವದೋಷದ ಇನ್ನೊಂದು ಅಭಿವ್ಯಕ್ತಿಯನ್ನು ಆರಿಸಬಹುದು. ಉದಾಹರಣೆಗಾಗಿ, ಅವ್ಯವಸ್ಥಿತತೆ ಎಂಬ ಸ್ವಭಾವದೋಷದ ಅಂತರ್ಗತ ನಾವು ಬಟ್ಟೆಗಳನ್ನು ಯೋಗ್ಯರೀತಿಯಲ್ಲಿ ಮಡಚಿಡುವ ಬಗ್ಗೆ ಸ್ವಯಂಸೂಚನೆಯ ಸತ್ರವನ್ನು ಮಾಡಿದೆವು ಮತ್ತು ಅದಕ್ಕನುಸಾರ ನಮ್ಮಲ್ಲಿ ಬದಲಾವಣೆಯಾದಲ್ಲಿ ವಾರದ ನಂತರ ನಾವು ಅವ್ಯವಸ್ಥಿತತೆ ದೋಷದ ಇನ್ನೊಂದು ಅಭಿವ್ಯಕ್ತಿಯನ್ನು ಆರಿಸಿ, ಉದಾಹರಣೆಗಾಗಿ ರಾತ್ರಿ ಅಡುಗೆಮನೆಯ ಕಟ್ಟೆಯನ್ನು ವ್ಯವಸ್ಥಿತವಾಗಿ ಸ್ವಚ್ಛಮಾಡಿ ಇಡದಿರುವುದು ಎಂಬ ಅಭಿವ್ಯಕ್ತಿಯನ್ನು ಆರಿಸಿ ಅದಕ್ಕೆ ಸ್ವಯಂಸೂಚನಾಸತ್ರವನ್ನು ಪ್ರಾರಂಭಿಸಬಹುದು. ನಾವು ತೆಗೆದ ವ್ಯಾಪ್ತಿಗನುಸಾರ ನಮಗೆ ಬಹಳಷ್ಟು ಅಯೋಗ್ಯ ಕೃತಿಗಳನ್ನು ಹಿಡಿತದಲ್ಲಿರಿಸಲು ಸಾಧ್ಯವಾಯಿತೆಂದರೆ ನಾವು ಸತ್ರ ಮಾಡಲು ಬೇರೆ ಸ್ವಭಾವದೋಷವನ್ನು ಆರಿಸಿಕೊಳ್ಳಬಹುದು
ಉ. ಸ್ವಯಂಸೂಚನೆಗಳ ಅಭ್ಯಾಸಸತ್ರಗಳು ಪರಿಣಾಮಕಾರಿಯಾಗಿಸುವ ಉಪಾಯಗಳು
೧. ಒಂದು ವಿಷಯವು ನಿಮ್ಮ ಗಮನಕ್ಕೆ ಬಂದಿರಬಹುದು, ಅದೇನೆಂದರೆ ಕೆಲವೊಮ್ಮೆ ಸ್ವಯಂಸೂಚನೆಯನ್ನು ನಿರ್ದಿಷ್ಠವಾಗಿ ಏನೆಂದು ಕೊಡಬೇಕೆಂದು ಗಮನದಲ್ಲಿರುವುದಿಲ್ಲ. ಸೂಚನೆಯಲ್ಲಿರುವ ಶಬ್ದಗಳು ಮರೆತುಹೋಗುತ್ತವೆ. ಇಂತಹ ಸಮಯದಲ್ಲಿ ಸ್ವಯಂಸೂಚನೆಯನ್ನು ಕಾಗದದಲ್ಲಿ ಬರೆದು ಸತ್ರದ ಸಮಯವಾದೊಡನೆ ಪ್ರತ್ಯಕ್ಷವಾಗಿ ಕಾಗದದಲ್ಲಿ ಬರೆದ ಸೂಚನೆಯನ್ನು ಓದಬಹುದು. ತಮ್ಮ ಬಳಿ ಸ್ಮಾರ್ಟ ಫೋನ್ ಇದ್ದರೆ ಕಾಗದದ ಬದಲು ನಾವು ಅದರಲ್ಲಿಯೂ ಸ್ವಯಂಸೂಚನೆಯನ್ನು ಬರೆದಿಡಬಹುದು. ಸೂಚನಾಸತ್ರದ ಸಮಯವಾದೊಡನೆ ಪ್ರತ್ಯಕ್ಷ ಆ ಸ್ವಯಂಸೂಚನೆಯನ್ನು ಓದಬೇಕು.
೨. ಅಲರಾಂ ಇಟ್ಟುಕೊಳ್ಳುವುದು : ಕೆಲವೊಮ್ಮೆ ಅಭ್ಯಾಸಸತ್ರಗಳನ್ನು ಮಾಡಲಿಕ್ಕಿದೆ ಎಂದು ಸಹ ಮರೆತುಹೋಗಿರುತ್ತದೆ. ಇಂತಹ ಸಮಯದಲ್ಲಿ ಸತ್ರವನ್ನು ಮಾಡಲು ಸಂಚಾರಿವಾಣಿಯಲ್ಲಿ ಅಲರಾಂ ಇಟ್ಟುಕೊಳ್ಳಬಹುದು.
೩. ಕೃತಿಗಳನ್ನು ಜೋಡಿಸಿ ಸ್ವಯಂಸೂಚನೆಯ ಸತ್ರಗಳನ್ನು ಮಾಡಲು ನಿಶ್ಚಯಿಸಿಕೊಳ್ಳಬಹುದು. ಉದಾಹರಣೆಗಾಗಿ ಬೆಳಗ್ಗೆ ಎದ್ದ ನಂತರ, ಬೆಳಗ್ಗೆ ಮತ್ತು ಸಂಜೆಯ ಚಹಾ-ತಿಂಡಿ, ಎರಡೂ ಸಲ ಊಟದ ಮೊದಲು, ರಾತ್ರಿ ಮಲಗುವ ಮೊದಲು ಸ್ವಯಂಸೂಚನೆಯ ಸತ್ರವನ್ನು ಮಾಡಬಹುದು. ಸ್ವಯಂಸೂಚನೆಯ ಸತ್ರವಾದ ನಂತರ ಇಂತಹ ಒಂದು ಕೃತಿಯನ್ನು ಮಾಡುವೆವು ಎಂದು ನಿರ್ಧರಿಸಿದರೆ ಸ್ವಯಂಸೂಚನಾ ಸತ್ರದ ಸಂಖ್ಯೆಯನ್ನು ಹೆಚ್ಚಿಸಬಹುದು.
೪. ಪೂಜೆಯ ನಂತರ ಅಥವಾ ನಾಮಜಪದ ನಂತರ ಸತ್ರ ಮಾಡುವುದು : ನಾಮಜಪ ಅಥವಾ ಪೂಜೆಯಾದ ನಂತರ ಸ್ವಯಂಸೂಚನೆಯ ಸತ್ರವನ್ನು ಮಾಡಬೇಕು. ನಾಮಜಪದ ಸಮಯದಲ್ಲಿ ಹಾಗೂ ಆರತಿಯ ನಂತರ ವಾತಾವರಣದಲ್ಲಿ ಚೈತನ್ಯ ಮತ್ತು ಸಾತ್ತ್ವಿಕತೆಯಲ್ಲಿ ಹೆಚ್ಚಳವಾಗುತ್ತದೆ. ನಾಮಜಪದಿಂದ ಹಾಗೂ ಆರತಿಯ ನಂತರ ಭಾವಜಾಗೃತಿಯಾಗುವುದರಿಂದ ಮನಸ್ಸಿನ ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ ಮತ್ತು ಏಕಾಗ್ರತೆಯು ಹೆಚ್ಚಾಗುತ್ತದೆ.
೫. ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದು : ಸ್ವಯಂಸೂಚನೆಯ ಸತ್ರವು ಸ್ವಭಾವದೋಷಗಳ ವಿರುದ್ಧದ ಒಂದು ಬಹುದೊಡ್ಡ ಶಸ್ತ್ರವಾಗಿದೆ. ಹಾಗಾಗಿ ಕೆಲವೊಮ್ಮೆ ನಮ್ಮ ಮೇಲೆ ಬಂದಿರುವ ಆವರಣದಿಂದ ಅಥವಾ ಕೆಟ್ಟ ಶಕ್ತಿಗಳ ತೊಂದರೆಯಿಂದ ಸತ್ರ ಮಾಡುವುದು ಬೇಡ ಎಂದು ಅನಿಸುತ್ತದೆ, ಸೂಚನೆಗಳು ಮನಸ್ಸಿನೊಳಗೆ ಹೋಗುವುದಿಲ್ಲ ಅಥವಾ ಅದು ಅಂತರ್ಮನದ ತನಕ ತಲುಪುವುದಿಲ್ಲ. ನೀವು ಸಹ ಇದನ್ನೆಲ್ಲ ಅನುಭವಿಸಿದ್ದೀರೇನು? ಸ್ವಯಂಸೂಚನೆಯ ಸತ್ರವು ಪ್ರಕ್ರಿಯೆಯ ಒಂದು ಮಹತ್ವದ ಹಂತವಾಗಿದೆ. ಅದು ಆಗಬಾರದು ಎಂದು ಕೆಟ್ಟ ಶಕ್ತಿಗಳು ಅಡಚಣೆ ತರುವ ಸಾಧ್ಯತೆಯಿದೆ. ಇಂತಹ ಸಮಯದಲ್ಲಿ ಸ್ವಯಂಸೂಚನೆಯ ಸತ್ರವನ್ನು ಮಾಡುವ ಮೊದಲು ೨-೩ ನಿಮಿಷ ನಮ್ಮ ಮೇಲಿರುವ ಆವರಣವನ್ನು ತೆಗೆಯಬೇಕು. ಕರ್ಪೂರ-ಅತ್ತರ ಉಪಾಯವನ್ನು ಮಾಡಬೇಕು. ಜಿಗುಟುತನದಿಂದ ಮತ್ತು ನಿರ್ಧಾರಪೂರ್ವಕವಾಗಿ ಸ್ವಯಂಸೂಚನೆಯ ಸತ್ರ ಮಾಡಲು ಪ್ರಯತ್ನಿಸಬೇಕು.
೬. ಸತ್ರ ಮಾಡುವಾಗ ಭಾವವನ್ನಿಟ್ಟುಕೊಳ್ಳುವುದು : ಸ್ವಯಂಸೂಚನೆಯ ಸತ್ರವನ್ನು ಮಾಡುವಾಗ ಭಾವವನ್ನು ಇಟ್ಟುಕೊಳ್ಳಬಹುದು. ಉದಾಹರಣೆಗಾಗಿ, ಸ್ವಯಂಸೂಚನೆಯ ಮೂಲಕ ನನ್ನಲ್ಲಿರುವ ಸ್ವಭಾವದೋಷಗಳಿಗೆ ದೇವತೆಯ ಅಸ್ತ್ರಗಳು ತಗಲಿ ಆ ದೋಷಗಳು ನಾಶವಾಗುತ್ತಿವೆ ಅಥವಾ ಕುಲದೇವರು, ಉಪಾಸ್ಯದೇವರು ಅಥವಾ ಗುರುಗಳಿಗೆ ಆತ್ಮನಿವೇದನೆಯನ್ನು ಮಾಡುತ್ತಿದ್ದೇನೆ. ದೇವರ ಚರಣಗಳಲ್ಲಿ ಕುಳಿತು ಸೂಚನಾಸತ್ರ ಮಾಡುತ್ತಿದ್ದೇವೆ, ಎಂಬ ಭಾವವನ್ನು ಇಟ್ಟುಕೊಂಡು ಸತ್ರಗಳನ್ನು ಮಾಡುವುದರಿಂದ ಅದು ಹೆಚ್ಚು ಪರಿಣಾಮಕಾರಿಯಾಗುತ್ತದೆ.
೭. ಜವಾಬ್ದಾರ ವ್ಯಕ್ತಿಯಿಂದ ಸ್ವಯಂಸೂಚನೆಯನ್ನು ತಪಾಸಣೆ ಮಾಡಿಸಿಕೊಳ್ಳುವುದು : ಸ್ವಯಂಸೂಚನೆಯ ಸತ್ರವನ್ನು ಮಾಡುವಾಗ ಅದರಲ್ಲಿನ ಸ್ವಯಂಸೂಚನೆಯು ಸಹ ಯೋಗ್ಯವಾಗಿರುವುದು ಆವಶ್ಯವಾಗಿರುತ್ತದೆ. ಹಿಂದೆ ನಾವು ಸ್ವಯಂಸೂಚನೆಯನ್ನು ಹೇಗೆ ತಯಾರಿಸಬೇಕು ಎಂದು ಸವಿಸ್ತಾರವಾಗಿ ತಿಳಿದುಕೊಂಡಿದ್ದೆವೆ. ಆದರೂ ಸತ್ರ ಮಾಡುವ ಮೊದಲು ಮತ್ತೊಮ್ಮೆ ಜವಾಬ್ದಾರ ವ್ಯಕ್ತಿಯಿಂದ ಅದರ ತಪಾಸಣೆಯನ್ನು ಮಾಡಿಸಿಕೊಳ್ಳಬೇಕು. ಸ್ವಯಂಸೂಚನೆಯನ್ನು ತಪಾಸಣೆ ಮಾಡಿಸಿಕೊಳ್ಳುವುದು ಬಹಳ ಮಹತ್ವದ್ದಾಗಿದೆ. ಏಕೆದರೆ ನಾವು ನೀಡುತ್ತಿರುವ ಸ್ವಯಂಸೂಚನೆಯು ಯೋಗ್ಯವಿದ್ದರೆ ಅದರಿಂದ ಬೇಗನೇ ಪರಿಣಾಮವಾಗುತ್ತದೆ. ಹಾಗಾಗಿ ನಾವು ಸಹ ಸತ್ರ ಮಾಡುವಾಗ ಆ ಸ್ವಯಂಸೂಚನೆಯನ್ನು ಒಮ್ಮೆ ತಪಾಸಣೆ ಮಾಡಿಸಿಕೊಳ್ಳೋಣ.
ಊ. ಸ್ವಯಂಸೂಚನೆಯ ಸತ್ರದ ಸಂದರ್ಭದಲ್ಲಿ ತಡೆಗಟ್ಟಬೇಕಾದ ತಪ್ಪುಗಳು
ಸ್ವಯಂಸೂಚನೆಯ ಸತ್ರವನ್ನು ಮಾಡುವಾಗ ಕೆಲವು ಜನರು ಒಂದೇ ಸಲ ಸತತ ೧೫-೨೦ ನಿಮಷ ಕುಳಿತುಕೊಂಡು ಒಂದರ ಹಿಂದೆ ಒಂದರಂತೆ ೫ ಸ್ವಯಂಸೂಚನೆಯ ಸತ್ರಗಳನ್ನು ಮಾಡುತ್ತಾರೆ. ಹೀಗೆ ಮಾಡದೇ ನಾವು ದಿನವಿಡೀ ಸ್ವಲ್ಪ ಸ್ವಲ್ಪ ಸಮಯ ಬಿಟ್ಟು ಸ್ವಯಂಸೂಚನೆಯ ಸತ್ರಗಳನ್ನು ಮಾಡುವುದಿರುತ್ತದೆ. ಸತ್ರಗಳನ್ನು ಮಾಡುವಾಗ ಅದನ್ನು ಗಡಿಬಿಡಿಯಿಂದ, ಸರಸರನೇ ಮಾಡದೇ ಏಕಾಗ್ರತೆಯಿಂದ ಮಾಡಲು ಪ್ರಯತ್ನಿಸಬೇಕು. ಮುಖ್ಯವೇನೆಂದರೆ ನಮಗೆ ಕೃತಿಯಲ್ಲಿಯೂ ಬದಲಾವಣೆ ಮಾಡುವುದಿದೆ, ಹಾಗೆ ಮಾಡಿದರೆ ಪ್ರಕ್ರಿಯೆಗೆ ವೇಗ ಬಂದು ನಮಗೆ ಅದರಲ್ಲಿರುವ ಆನಂದವನ್ನು ಅನುಭವಿಸಲು ಸಾಧ್ಯವಾಗುತ್ತದೆ.
ಎ. ಅನುಭೂತಿ
ಸತತವಾಗಿ ಮತ್ತು ಪ್ರಾಮಾಣಿಕವಾಗಿ ಸತ್ರವನ್ನು ಮಾಡಲು ಆರಂಭಿಸಿದ ನಂತರ ನಮಗೆ ನಮ್ಮ ವರ್ತನೆಯಲ್ಲಿ ಖಂಡಿತವಾಗಿಯೂ ಬದಲಾವಣೆಯ ಅರಿವಾಗುವುದು. ಅನೇಕ ಸಾಧಕರಿಗೂ ಆ ವಿಷಯದಲ್ಲಿ ಅನುಭೂತಿಗಳು ಬಂದಿವೆ. ಸ್ವಯಂಸೂಚನೆಯ ಸತ್ರವನ್ನು ಮಾಡಿದ ನಂತರ ಒಬ್ಬ ಸಾಧಕಿಗೆ ಕನಸಿನಲ್ಲಿ ಓರ್ವ ಸಂತರು ಅವಳ ತಲೆಯೊಳಗೆ ಕೈಯನ್ನು ಹಾಕಿ ಏನೋ ಒಂದು ಕಾಗದವನ್ನು ಹೊರತೆಗೆಯುತ್ತಿದ್ದಾರೆ ಮತ್ತು ಕಾಗದವನ್ನು ಎಸೆಯುತ್ತಿದ್ದಾರೆ ಎಂದು ಅರಿವಾಯಿತು. ಹೀಗೆ ಸತತ ೧೫ ದಿನಗಳ ಕಾಲ ಅವಳಿಗೆ ಇದೇ ಕನಸು ಬೀಳುತ್ತಿತ್ತು. ನಿಧಾನವಾಗಿ ಆ ಕಾಗದದ ಆಕಾರವು ಚಿಕ್ಕದಾಯಿತು. ಆ ಸಾಧಕಿಯು ಅತ್ಯಂತ ಪ್ರಾಮಾಣಿಕವಾಗಿ ಸತ್ರಗಳನ್ನು ಮಾಡುತ್ತಿದ್ದರು. ಆ ಕಾಗಗದ ಆಕಾರವು ಚಿಕ್ಕದಾಗುತ್ತಾ ಹೋದಂತೆ ಆ ಸಾಧಕಿಗೂ ತನಗೆ ಇತರರ ಬಗ್ಗೆ ಮನಸ್ಸಿನಲ್ಲಿ ಬರುತ್ತಿದ್ದ ಪ್ರತಿಕ್ರಿಯೆಗಳು ಸಹ ಬಹಳ ಕಮ್ಮಿಯಾದುದರ, ಅಪೇಕ್ಷೆ ಕಮ್ಮಿಯಾದುದರ, ಮನಸ್ಸು ಸ್ಥಿರ ಮತ್ತು ಆನಂದಿತವಾದುದು ಅನುಭವಕ್ಕೆ ಬಂತು. ನಮ್ಮ ಮನಸ್ಸಿನಲ್ಲಿರುವ ಜನ್ಮಜನ್ಮಾಂತರದ ಸಂಸ್ಕಾರಗಳು, ಸ್ವಭಾವದೋಷಗಳನ್ನು ನಾಶ ಮಾಡುವುದು ನಿಜವಾಗಿಯೂ ನಮ್ಮ ಕೈಯಲ್ಲಿಲ್ಲ. ಆದರೆ ಪ್ರಾಮಾಣಿಕವಾಗಿ ಮತ್ತು ಮನಸ್ಸಿಟ್ಟು ಪ್ರಯತ್ನಿಸುವುದು ನಮ್ಮ ಕೈಯಲ್ಲಿದೆ. ಹಾಗೆ ಪ್ರಯತ್ನಿಸಿದರೆ ಗುರುಕೃಪೆಯಿಂದಲೇ ಈ ಸ್ವಭಾವದೋಷಗಳು ದೂರವಾಗಿ ನಮಗೆ ಹೆಚ್ಚು ಆನಂದ ಸಿಗಲಿದೆ.