ಆತ್ಮನಿವೇದನ ಭಕ್ತಿ
ಅಧ್ಯಾತ್ಮದಲ್ಲಿ ಭಾವ ಎಂಬ ಘಟಕಕ್ಕೆ ಬಹಳ ಮಹತ್ವವಿದೆ. ಇಂದಿನ ತನಕ ನಾವು ಸಾಧನೆಯನ್ನು ಮಾಡುತ್ತಿರುವಾಗ ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸಬೇಕು? ಮಾನಸ ಪೂಜೆ ಮಾಡುವುದು ಹೇಗೆ? ನಮ್ಮಲ್ಲಿ ದೇವರ ಬಗ್ಗೆ ಭಾವವು ಉಂಟಾಗಲು ದೈನಂದಿನ ಕೃತಿಗಳಿಗೆ ಭಾವವನ್ನು ಜೋಡಿಸುವುದು ಹೇಗೆ ಎಂಬ ಅಂಶಗಳನ್ನು ತಿಳಿದುಕೊಂಡಿದ್ದೆವು. ಇಂದು ನಾವು ಭಾವಜಾಗೃತಿಯ ಅಂತರ್ಗತ ಆತ್ಮನಿವೇದನ ಭಕ್ತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
ಕೆಲವೊಮ್ಮೆ ನಮಗೆ ಎದುರಿಸಬೇಕಾದ ಪ್ರಸಂಗಗಳಿಂದ ಮನಸ್ಸಿನ ಮೇಲೆ ಒತ್ತಡ ಉಂಟಾಗಿರುತ್ತದೆ. ಒಳಗಿಂದೊಳಗೆ ಉಸಿರುಗಟ್ಟಿದಂತಾಗುತ್ತದೆ ಮತ್ತು ನಾವು ಅಸ್ವಸ್ಥರಾಗುತ್ತೇವೆ. ಈ ಸಮಯದಲ್ಲಿ ಯಾರೊಂದಿಗಾದರೂ ಮಾತನಾಡಿ ಮನಸ್ಸನ್ನು ಹಗುರ ಮಾಡಿಕೊಳ್ಳಬೇಕು ಎಂದು ಅನಿಸುತ್ತದೆ. ಆದರೆ ಕೆಲವೊಮ್ಮೆ ಅದು ಸಹ ಅಸಾಧ್ಯವಾಗಿರುತ್ತದೆ. ಯಾರಿಗೂ ಹೇಳಲು ಆಗುವುದಿಲ್ಲ ಮತ್ತು ಉದ್ವಿಗ್ನತೆಯನ್ನು ಸಹಿಸಲು ಸಹ ಆಗುವುದಿಲ್ಲ ಎಂಬಂತಹ ಸ್ಥಿತಿ. ಇಂತಹ ಸಮಯದಲ್ಲಿ ಭಗವಂತನಿಗೆ ಸಂಪೂರ್ಣ ಶರಣಾಗಿ ಆತ್ಮನಿವೇದನೆಯನ್ನು ಮಾಡಿದರೆ ಮನಸ್ಸಿಗೆ ಒಂದು ಬೇರೆಯೇ ರೀತಿಯ ಶಾಂತಿ, ಸ್ಥಿರತೆ, ಸಕಾರಾತ್ಮಕತೆಯನ್ನು ಅನುಭವಿಸಲು ಸಾಧ್ಯವಾಗುತ್ತದೆ. ಅನೇಕ ಸಂತರು ಸಹ ಆತ್ಮನಿವೇದನೆಯನ್ನು ‘ಸರ್ವಶ್ರೇಷ್ಠ ಭಕ್ತಿ’ಯಾಗಿದೆ ಎಂದು ಹೇಳಿದ್ದಾರೆ. ಇಲ್ಲಿ ನಾವು ಆತ್ಮನಿವೇದನೆ ಎಂದರೇನು, ಅದನ್ನು ಹೇಗೆ ಮತ್ತು ಎಲ್ಲಿ ಮಾಡಬೇಕು, ಮನಸ್ಸಿನ ಎಲ್ಲ ವಿಚಾರಗಳನ್ನು ಭಗವಂತನಿಗೆ ಹೇಳುವುದರಿಂದ ಮನಸ್ಸು ಹೇಗೆ ಆನಂದಿತ, ಸಕಾರಾತ್ಮಕ, ಹಗುರ ಮತ್ತು ನಿರಾತಂಕ ಅನಿಸುತ್ತದೆ. ಇದನ್ನೇ ನಾವಿಂದು ತಿಳಿದುಕೊಳ್ಳುವವರಿದ್ದೇವೆ.
ಅ. ಆತ್ಮನಿವೇದನೆ ಎಂದರೇನು?
ಆತ್ಮನಿವೇದನೆ ಎಂದರೆ ದೇವರಿಗೆ ನಾವು ಅರ್ಪಣೆಯಾಗುವುದು (ನಮ್ಮನ್ನು ನಾವೇ ಅರ್ಪಿಸಿಕೊಳ್ಳುವುದು). ಒಳ್ಳೆಯದಿರಲಿ, ಕೆಟ್ಟದಿರಲಿ, ಬಾಹ್ಯ ಅಥವಾ ಆಂತರಿಕವಿರಲಿ, ಅದೆಲ್ಲವನ್ನೂ ಪ್ರಭುವಿಗೆ ಸಂಪೂರ್ಣ ತೆರೆದ ಮನಸ್ಸಿನಿಂದ ಮಂಡಿಸುವುದು. ನಮ್ಮ ಎಲ್ಲ ಭಾರವನ್ನು ಪ್ರಭುವಿಗೆ ವಹಿಸಿಕೊಡುವುದು, ಇದಕ್ಕೆ ಆತ್ಮನಿವೇದನೆ ಭಕ್ತಿ ಎಂಬ ಹೆಸರಿದೆ. ತಮ್ಮಲ್ಲಿ ಹೆಚ್ಚು ಕಮ್ಮಿ ಎಲ್ಲರೂ ಪ್ರಾಪಂಚಿಕ ಅಥವಾ ಗೃಹಸ್ಥಾಶ್ರಮಿಗಳಾಗಿದ್ದೀರಿ. ಜೀವನವನ್ನು ಸಾಗಿಸುವಾಗ ನಮಗೆ ಯಾರ ಆಧಾರವು ಶಾಶ್ವತವೆನಿಸುತ್ತದೆ? ತಮಗೆ ಏನು ಅನಿಸುತ್ತದೆ ? ಯಾವುದೇ ವ್ಯಕ್ತಿ ನಮಗೆ ಶಾಶ್ವತವಾಗಿ ಜೊತೆ ನೀಡಲಾರರು. ಹೀಗಿರುವಾಗ ನಮಗೆ ಶಾಶ್ವತವಾದ ಆಧಾರವನ್ನು ಅಂದರೆ ಶಾಶ್ವತ ಆನಂದವನ್ನು ಯಾರು ನೀಡಬಲ್ಲರು? ಸರ್ವಶಕ್ತಿವಂತ, ಸರ್ವವ್ಯಾಪೀ ಮತ್ತು ಸರ್ವಜ್ಞನಾಗಿರುವ ಭಗವಂತ ಮಾತ್ರ. ವ್ಯಕ್ತಿಗಳಿಗೆ ಮಿತಿಯಿರುತ್ತದೆ; ಭಗವಂತನಿಗಿರುವುದಿಲ್ಲ. ಆತ್ಮನಿವೇದನೆಯ ಮೂಲಕ ನಾವು ದೇವರ ಹತ್ತಿರ ಮನಸ್ಸಿನ ದ್ವಂದ್ವ, ಎಲ್ಲ ವಿಚಾರಗಳನ್ನು ಹೇಳಿದರೆ ಮನಸ್ಸಿಗೆ ಲವಲವಿಕೆ ಬರುತ್ತದೆ ಎಂಬುದನ್ನು ಅನೇಕರು ಅನುಭವಿಸಿದ್ದಾರೆ.
ಆ. ನವವಿಧಭಕ್ತಿ
ಜ್ಞಾನಯೋಗ, ಕರ್ಮಯೋಗ, ಭಕ್ತಿಯೋಗ ಇವೆಲ್ಲ ಈಶ್ವರಪ್ರಾಪ್ತಿಯ ಮಾರ್ಗಗಳಾಗಿವೆ. ಹೆಚ್ಚಿನ ಜನರು ಭಕ್ತಿಮಾರ್ಗಿಗಳಾಗಿರುತ್ತಾರೆ. ದೇವರ ಭಕ್ತಿಯನ್ನು ಮಾಡುವ ವಿವಿಧ ಮಾರ್ಗಗಳಿವೆ. ತಾವೆಲ್ಲರೂ ನವವಿಧ ಭಕ್ತಿಯ ಬಗ್ಗೆ ಕೇಳಿರಬಹುದು. ಶ್ರವಣ, ಕೀರ್ತನ, ಸ್ಮರಣ, ಪಾದಸೇವನ, ಅರ್ಚನ, ವಂದನ, ದಾಸ್ಯ, ಸಖ್ಯ, ಮತ್ತು ಆತ್ಮನಿವೇದನ ಹೀಗೆ ಭಕ್ತಿಯ ಬೇರೇ ಬೇರೆ ೯ ಸ್ಥಿತಿಗಳಿವೆ. ಶ್ರವಣ ಎಂದರೆ ದೇವರ ಗುಣವರ್ಣನೆಯನ್ನು ಆಲಿಸುವುದು, ಕೀರ್ತನೆ ಎಂದರೆ ದೇವರ ಸ್ತುತಿಯನ್ನು ಮಾಡುವುದು, ಸ್ಮರಣೆ ಎಂದರೆ ದೇವರನ್ನು ಸ್ಮರಿಸುವುದು, ನಾಮಸ್ಮರಣೆ ಮಾಡುವುದು, ಪಾದಸೇವನ, ಅರ್ಚನ ಎಂದರೆ ಪೂಜೆಯನ್ನು ಮಾಡುವುದು, ವಂದನ ಎಂದರೆ ಭಗವಂತನ ಚರಣಗಳಲ್ಲಿ ಲೀನರಾಗುವುದು, ದಾಸ್ಯ ಎಂದರೆ ದೇವರ ಸೇವಕರಾಗಿದ್ದೇವೆ ಎಂಬ ಭಾವವನ್ನು ಇಟ್ಟುಕೊಳ್ಳುವುದು, ಸಖ್ಯ ಎಂದರೆ ದೇವರೊಂದಗೆ ಮೈತ್ರಿಯ ಭಾವವನ್ನು ಇಟ್ಟುಕೊಳ್ಳುವುದು, ಮತ್ತು ಆತ್ಮನಿವೇದನೆ ಎಂದರೆ ದೇವರೊಂದಿಗೆ ಸಂವಾದವನ್ನು ಸಾಧಿಸುವುದು. ಇವೆಲ್ಲ ನವವಿಧ ಭಕ್ತಿಯ ವಿಧಗಳಾಗಿವೆ. ಹನುಮಂತನಲ್ಲಿ ದಾಸ್ಯಭಕ್ತಿಯಿತ್ತು, ಮತ್ತು ಅರ್ಜುನನಲ್ಲಿ ಸಖ್ಯಭಕ್ತಿಯಿತ್ತು. ನವವಿಧ ಭಕ್ತಿಯಲ್ಲಿ ಆತ್ಮನಿವೇದನ ಭಕ್ತಿಗೆ ಅತ್ಯಧಿಕ ಅಂದರೆ ೬೫% ಮಹತ್ವವಿದೆ.
ಇ. ಆರಂಭಿಕ ಹಂತದಲ್ಲಿ ಆತ್ಮನಿವೇದನೆಯನ್ನು ಹೇಗೆ ಮಾಡಬೇಕು?
ಆತ್ಮನಿವೇದನೆಯನ್ನು ನಿರ್ದಿಷ್ಠವಾಗಿ ಹೇಗೆ ಮಾಡಬೇಕು? ಎಂದರೆ ನಮಗೆ ಯಾವ ದೇವರಲ್ಲಿ, ಯಾವ ಸಂತರಲ್ಲಿ ಶ್ರದ್ಧೆಯಿದೆಯೋ ಅವರನ್ನು ಸ್ಮರಿಸಿ ಅವರ ರೂಪವನ್ನು ಕಣ್ಣೆದುರು ತಂದುಕೊಂಡು ಅವರೊಂದಿಗೆ ಸಂವಾದವನ್ನು ಸಾಧಿಸಬೇಕು. ನಾವು ಶ್ರೀಕೃಷ್ಣನಲ್ಲಿಯೂ ಆತ್ಮನಿವೇದನೆಯನ್ನು ಮಾಡಬಹುದು. ಆತ್ಮನಿವೇದನೆಗೆ ಯಾವುದೇ ರೂಪುರೇಷೆಗಳಿಲ್ಲ, ಯಾವುದೇ ಸೂತ್ರ ‘ಫಾರ್ಮ್ಯುಲಾ’ ಇಲ್ಲ. ಆತ್ಮನಿವೇದನೆ ಎಂದರೆ ಸ್ವಲ್ಪದರಲ್ಲಿ ಹೇಳುವುದಾದರೆ ದೇವರೊಂದಿಗೆ ಮಾತನಾಡುವುದು. ನಮಗೆ ದೇವರೊಂದಿಗೆ ಏನು ಮಾತನಾಡಲಿಕ್ಕಿದೆಯೋ ಅದನ್ನು ಹೇಗೆ ಮಾತನಾಡಲಿಕ್ಕಿದೆಯೋ ಮತ್ತು ಎಷ್ಟು ಹೊತ್ತು ಮಾತನಾಡಲಿಕ್ಕಿದೆಯೋ ಅಷ್ಟು ಹೊತ್ತು ದೇವರೊಂದಿಗೆ ಸಂವಾದವನ್ನು ಮಾಡಬೇಕು. ದೇವರಿಗೆ ಏನು ಹೇಳಬೇಕು? ಅಂದರೆ ದಿನವಿಡೀ ಏನೆಲ್ಲ ಆಗಿದೆಯೋ ಅದೆಲ್ಲವನ್ನೂ ಹೇಳಬೇಕು. ಇಂದು ದಿನವಿಡೀ ಏನೇನು ಮಾಡಲಿಕ್ಕಿದ್ದೇವೆ? ಅದನ್ನು ಹೇಳಬೇಕು. ನಮ್ಮಿಂದ ಏನಾದರೂ ತಪ್ಪುಗಳಾಗಿದ್ದಲ್ಲಿ ಅದನ್ನು ಹೇಳಬೇಕು. ನಮ್ಮಿಂದ ಏನಾದರೂ ಒಳ್ಳೆಯ ಕೃತಿಗಳಾಗಿದ್ದಲ್ಲಿ ಅದನ್ನೂ ಹೇಳಬೇಕು. ದೇವರ ಬಳಿ ನಾವು ನಮ್ಮ ಮನಸ್ಸನ್ನು ಮುಕ್ತಗೊಳಿಸಬೇಕಾಗಿದೆ. ಭಗವಂತನ ಹತ್ತಿರ ಮನಸ್ಸನ್ನು ಮುಕ್ತಗೊಳಿಸಿದೊಡನೆ ನಮ್ಮ ಮನಸ್ಸು ಹಗುರವಾಗುತ್ತದೆ. ಭಗವಂತನು ನಮ್ಮ ನಿಜವಾದ ಮಿತ್ರ, ಸಖ, ಜೊತೆಗಾರ, ಹಿತಚಿಂತಕ, ಮತ್ತು ಮಾರ್ಗದರ್ಶಕನಾಗಿದ್ದಾರೆ. ತಾಯಿಗೆ ತನ್ನ ಮಗುವಿಗೆ ಕೆಟ್ಟದಾಗಬೇಕು ಎಂದು ಯಾವತ್ತಾದರೂ ಅನಿಸುತ್ತದೆಯೇ? ತಾಯಿಗೆ ಮಗುವಿನಲ್ಲಿ ನಿರಪೇಕ್ಷ ಪ್ರೇಮವಿರುತ್ತದೆ. ಅದೇ ರೀತಿ ಭಗವಂತನಿಗೂ ನಮ್ಮ ಮೇಲೆ ಅಪಾರ ಪ್ರೇಮವಿದೆ. ಚರಾಚರ ಸೃಷ್ಟಿಯನ್ನು ನಿರ್ಮಿಸಿದ ಭಗವಂತನು ಪರಮದಯಾಳುವಾಗಿದ್ದಾನೆ. ಹಾಗಾಗಿ ನಮ್ಮಿಂದ ಜನ್ಮಜನ್ಮಾಂತರಗಳಿಂದ ಅನೇಕಾನೇಕ ತಪ್ಪುಗಳಾಗಿದ್ದರೂ ದೇವರು ಯಾವತ್ತೂ ತನ್ನ ಕೃಪೆಯ ವೇಗವನ್ನು ಕಮ್ಮಿ ಮಾಡಿಲ್ಲ. ಭಗವಂತನ ಕೃಪೆಯ ಸುರಿಮಳೆಯು ಸತತ ನಿರಂತರವಾಗಿ ಸುರಿಯುತ್ತಿರತ್ತದೆ. ಆದರೆ ನಮ್ಮಲ್ಲಿ ಅದನ್ನು ಗ್ರಹಿಸುವ ಸ್ಥಿತಿಯಿರುವುದಿಲ್ಲ. ಭಗವಂತನ ಪ್ರೇಮ ಮತ್ತು ಕೃಪೆಯನ್ನು ಗುರುತಿಸಲಿಕ್ಕಾಗಿಯೇ ದೃಷ್ಟಿಯು ಬೇಕಾಗುತ್ತದೆ. ಅದು ಸಾಧನೆಯಿಂದ ಸಿಗುತ್ತದೆ.
ಈ. ಆತ್ಮನಿವೇದನೆ ದೇವರಿಗೆ ತಲುಪುತ್ತದೆ ಮತ್ತು ದೇವರು ಸ್ಪಂದಿಸುತ್ತಾರೆ
ಆತ್ಮನಿವೇದನೆಯನ್ನು ಮಾಡುವಾಗ ಅದು ದೇವರಿಗೆ ತಲುಪುತ್ತದೆಯೋ ಇಲ್ಲವೋ ಎಂಬ ಸಂದೇಹವನ್ನು ಇಟ್ಟುಕೊಳ್ಳಬೇಕಾಗಿಲ್ಲ. ಭಗವಂತನು ಅಂತರ್ಯಾಮಿಯಾಗಿದ್ದಾನೆ. ನಮ್ಮ ಮನಸ್ಸಿನ ಪ್ರತಿಯೊಂದು ವಿಚಾರವು ದೇವರಿಗೆ ಗೊತ್ತಿರುತ್ತದೆ. ಪರಮೇಶ್ವರನು ತ್ರಿಕಾಲಜ್ಞಾನಿಯಾಗಿದ್ದಾನೆ. ಕೇವಲ ಈ ಜನ್ಮದ್ದು ಮಾತ್ರವಲ್ಲ, ಕಳೆದ ಅದೆಷ್ಟೋ ಜನ್ಮಗಳಲ್ಲಿ ನಾವು ಮಾಡಿದ ಎಲ್ಲ ಕೃತ್ಯಗಳು ದೇವರಿಗೆ ಗೊತ್ತಿರುತ್ತದೆ. ಹೀಗಿರುವಾಗ ದೇವರಿಂದ ಏನನ್ನು ಅಡಗಿಸಿಡಬಹುದು? ಇರುವೆಯ ಕಾಲಿಗೆ ಕಟ್ಟಿದ ಗೆಜ್ಜೆಯ ಸದ್ದು ಸಹ ಭಗವಂತನಿಗೆ ಕೇಳಿಸುತ್ತದೆ, ಹೀಗಿರುವಾಗ ನಮ್ಮ ಧ್ವನಿಯು ಅವನಿಗೆ ತಲುಪುವುದಿಲ್ಲವೇನು? ಹಾಗಾಗಿ ನಿಸ್ಸಂಕೋಚ ಮನಸ್ಸಿನಿಂದ ಆತ್ಮನಿವೇದನೆಯನ್ನು ಮಾಡಬೇಕು. ಆರಂಭದಲ್ಲಿ ಅದರಲ್ಲಿ ಕೃತ್ರಿಮತೆಯ ಅರಿವಾದರೂ ತೊಂದರೆಯಿಲ್ಲ. ಆತ್ಮನಿವೇದನೆಯ ರೂಢಿಯಾದ ಹಾಗೆ ಅದರಲ್ಲಿರುವ ಆರ್ದ್ರತೆಯ ಅನುಭವವಾಗುತ್ತದೆ ಮತ್ತು ದೇವರು ನಮಗೆ ಏನು ಹೇಳಲು ಬಯಸುತ್ತಿದ್ದಾರೆ ಎಂದು ಸಹ ಗಮನಕ್ಕೆ ಬರುವುದು.
ಉ. ಆತ್ಮನಿವೇದನೆಯ ಮಹತ್ವ
ಚರಾಚರ ಸೃಷ್ಟಿಯ ನಿರ್ಮಾಪಕನಾಗಿರುವ ಭಗವಂತನು ಶಿಲೆಯನ್ನೂ ಉದ್ಧಾರ ಮಾಡಬಲ್ಲನು ಹೀಗಿರುವಾಗ ನಮ್ಮ ಉದ್ಧಾರ ಮಾಡಲಾರನೇನು? ಹಾಗಾಗಿ ಯಾವುದೇ ಉತ್ತರದ ಅಥವಾ ಫಲದ ಅಪೇಕ್ಷೆಯನ್ನು ಇಟ್ಟುಕೊಳ್ಳದೇ ನಾವು ದೇವರ ಹತ್ತಿರ ನಮ್ಮ ಮನಸ್ಸನ್ನು ಬಿಚ್ಚಿಡಬೇಕು. ಸನಾತನ ಸಂಸ್ಥೆಯ ಸಂಸ್ಥಾಪಕ ಪರಾತ್ಪರ ಗುರು ಡಾ. ಆಠವಲೆಯವರೂ ಆತ್ಮನಿವೇದನೆಯ ಮಹತ್ವವನ್ನು ಹೇಳುವಾಗ ‘ಏನೆಲ್ಲ ಆಗುತ್ತಿದೆ ಅದನ್ನು ದೇವರಿಗೆ ಹೇಳುತ್ತಿರಬೇಕು. ಹಾಗಾಗಿ ಏನಾಗುತ್ತಿದೆ ಅದು ‘ಸರಿಯೋ ತಪ್ಪೋ’ ಎಂದು ದೇವರು ಹೇಳಬಹುದು. ಇಲ್ಲವಾದರೆ ನನಗೆ ಗೊತ್ತಿದೆ, ನನಗೆ ಬರುತ್ತದೆ ಎಂದಾಗುತ್ತದೆ’ ಎಂದು ಹೇಳಿದ್ದಾರೆ.
ಊ. ಆತ್ಮನಿವೇದನೆಯನ್ನು ಮಾಡುವುದರಿಂದಾಗುವ ಲಾಭಗಳು
ಆತ್ಮನಿವೇದನೆ ಭಕ್ತಿ ಇದು ಕೊನೆಯ ಮತ್ತು ಸರ್ವೋಚ್ಛ ಮೆಟ್ಟಿಲಾಗಿದೆ. ಆತ್ಮನಿವೇದನೆಗೆ ಸಾಧನೆಯಲ್ಲಿ ವಿಶೇಷ ಮಹತ್ವವಿದೆ. ಏಕೆಂದರೆ ಇದೇ ಮಾಧ್ಯಮದಿಂದ ನಾವು ಅದ್ವೈತದ ಅನುಭೂತಿಯನ್ನು ಪಡೆಯಬಹುದು. ಆತ್ಮನಿವೇದನೆಯ ಮೂಲಕ ಭಗವಂತನೊಂದಿಗೆ ಅಖಂಡವಾಗಿ ಅನುಸಂಧಾನವನ್ನು ಸಾಧಿಸಬಹುದು. ಭಗವಂತನ ಬಳಿ ಆತ್ಮನಿವೇದನೆಯನ್ನು ಮಾಡುವುದರಿಂದ ನಮಗೆ ಮನಸ್ಸಿನ ಒತ್ತಡವು ಕಡಿಮೆಯಾಗುತ್ತದೆ. ಮನಸ್ಸು ಸಕಾರಾತ್ಮಕ, ಆನಂದಿ ಮತ್ತು ಉತ್ಸಾಹಿಯಾಗುತ್ತದೆ. ಭಗವಂತನೇ ಆಧಾರ ಎಂದು ಅನಿಸಿ ಅವರಲ್ಲಿ ಶ್ರದ್ಧೆಯು ಇನ್ನಷ್ಟು ದೃಢವಾಗುತ್ತದೆ. ಭಗವಂತನ ಆಧಾರವನ್ನು ಪಡೆಯುವ ವೃತ್ತಿಯು ನಿರ್ಮಾಣವಾದೊಡನೆ ಸಾಧಕನು ನಿರ್ಭಯನಾಗುತ್ತಾನೆ. ಆತ್ಮಬಲ ಹೆಚ್ಚಾದುದರಿಂದ ಭಗವಂತನ ಮೇಲಿನ ಶ್ರದ್ಧೆಯಿಂದ ಜೀವನದ ಕಠಿಣ ಪ್ರಸಂಗಗಳನ್ನು ಸಹಜವಾಗಿ ಎದುರಿಸಲು ಆಗುತ್ತದೆ. ನಾವು ದೇವರೊಂದಿಗೆ ಮಾತನಾಡಲು ಪ್ರಯತ್ನಿಸಿದರೆ ನಮಗೂ ‘ಭಗವಂತನನ್ನು’ ಅನುಭವಿಸಲು ಸಾಧ್ಯವಾಗುವುದು. ಭಗವಂತನು ಎಲ್ಲೆಡೆ ವ್ಯಾಪಿಸಿಕೊಂಡಿದ್ದಾನೆ. ನಾವು ಕೇವಲ ಅವನನ್ನು ಅನುಭವಿಸಬೇಕಾಗಿದೆ. ನಾವು ಎಷ್ಟು ಭಗವಂತನೊಂದಿಗೆ ಮಾತನಾಡುತ್ತೇವೆಯೋ ಅಷ್ಟು ಅವನ ತತ್ತ್ವವು ನಮಗಾಗಿ ಕಾರ್ಯನಿರತವಾಗುತ್ತದೆ. ಭಗವಂತನಲ್ಲಿ ಕಳಕಳಿಯಿಂದ ಆತ್ಮನಿವೇದನೆಯನ್ನು ಮಾಡಿದರೆ ಆ ಸರ್ವಜ್ಞನಾದ ಭಗವಂತನು ನಮ್ಮ ಕರೆಗೆ ಓಡಿ (ಧಾವಿಸಿ) ಬರುವನು.
ಎ. ಆನಂದದ ಸಮಯದಲ್ಲಿಯೂ ಭಗವಂತನನ್ನು ಸ್ಮರಿಸಿ
ಎಲ್ಲಕ್ಕಿಂತ ಮಹತ್ವದ್ದೇನೆಂದರೆ ಕೇವಲ ಅಡಚಣೆ ಮತ್ತು ಒತ್ತಡ-ಉದ್ವಿಗ್ನತೆ ಬಂದಾಗ ಮಾತ್ರ ನಾವು ದೇವರೊಂದಿಗೆ ಮಾತನಾಡುವುದಲ್ಲ, ಆನಂದದ ಕ್ಷಣದಲ್ಲಿಯೂ ದೇವರ ಸ್ಮರಣೆ ಮಾಡುವ ರೂಢಿ ಮಾಡಿಕೊಳ್ಳಬೇಕು. ಹೆಚ್ಚಾಗಿ ನಮಗೆ ಯಾವಾಗಲೂ ಕಂಡುಬರುವ ಒಂದು ವಿರೋಧಾಭಾಸವು ಹೇಗಿದೆ ಎಂದರೆ ಏನಾದರೂ ಅಪ್ರಿಯವಾದ ಪ್ರಸಂಗ ಘಟಿಸಿದೊಡನೆ ‘ದೇವರು ನನ್ನ ವಿಷಯದಲ್ಲಿ ಹೀಗೇಕೆ ಮಾಡಿದನು’ ಎನ್ನುತ್ತಾ ದೇವರಿಗೆ ದೋಷವನ್ನು ನೀಡಲಾಗುತ್ತದೆ. ಆದರೆ ಏನಾದರೂ ಒಳ್ಳೆಯದು ಘಟಿಸಿದಾಗ, ‘ದೇವರೇ ನಿನ್ನಿಂದಾಯಿತು’ ಎಂದು ಯಾರೂ ಹೇಳುವುದಿಲ್ಲ. ಒಳ್ಳೆಯ ಘಟನೆಗಳ ಶ್ರೇಯಸ್ಸನ್ನು ತನ್ನಲ್ಲಿ ಇಟ್ಟುಕೊಳ್ಳುವುದು ಮತ್ತು ಕೆಟ್ಟ ಘಟನೆಗಳಿಗೆ ದೇವರನ್ನು ದೂಷಿಸುವುದು ಇದು ಯೋಗ್ಯವೇ? ಇಲ್ಲವಲ್ಲ? ನಮ್ಮ ಆನಂದದ ಕ್ಷಣಗಳಲ್ಲಿಯೂ ನಾವು ದೇವರಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಏಕೆಂದರೆ ನಮಗೆ ಆನಂದವನ್ನು ನೀಡುವವರು ಸಹ ಭಗವಂತನೇ ಆಗಿರುತ್ತಾರೆ.
ಏ. ಪ್ರಾಯೋಗಿಕ ಭಾಗ
ಉದಾಹರಣೆಗಾಗಿ ನಾವೆಲ್ಲರೂ ದೇವರಲ್ಲಿ ಒಂದು ಚಿಕ್ಕ ಆತ್ಮನಿವೇದನೆಯನ್ನು ಮಾಡೋಣ. ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡು ಈ ಪ್ರಯೋಗವನ್ನು ಮಾಡಿ.
ಭಗವಾನ ಶ್ರೀಕೃಷ್ಣನು ವಿರಾಟ ರೂಪದಲ್ಲಿ ನಮ್ಮೆದುರಿನಲ್ಲಿ ನಿಂತಿದ್ದಾನೆ ಮತ್ತು ನಾವು ಶ್ರೀಕೃಷ್ಣನ ಚರಣಗಳ ಹತ್ತಿರ ಶರಣಾಗತಭಾವದಿಂದ ನಿಂತುಕೊಂಡಿದ್ದೇವೆ. ನಮ್ಮ ತೊದಲು ಮಾತಿನ ಶಬ್ದಗಳು ಪ್ರಭುವಿನ ಚರಣಗಳಲ್ಲಿ ಜಮೆಯಾಗುತ್ತಿವೆ ಎಂಬ ಭಾವವನ್ನಿಟ್ಟುಕೊಂಡು ದೇವರಿಗೆ ಆತ್ಮನಿವೇದನೆಯನ್ನು ಮಾಡೋಣ. ‘ಹೇ ಪ್ರಭು, ಹೇ ಶ್ರೀಕೃಷ್ಣಾ, ನಿಮ್ಮ ಕೃಪೆಯಿಂದ ನಮಗೆ ಈ ಅಮೂಲ್ಯವಾದ ಮನುಷ್ಯಜನ್ಮವು ದೊರಕಿದೆ. ಈ ಜನ್ಮವನ್ನು ಸಾರ್ಥಕಗೊಳಿಸಲು ನಿನ್ನ ಪ್ರಾಪ್ತಿಗಾಗಿ ನಾವು ಸಾಧನೆಯನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ದೇವಾ, ನಿನಗೆ ಅಪೇಕ್ಷಿತವಿರುವಂತೆ ನಮಗೆ ಇನ್ನೂ ವರ್ತಿಸಲು ಗೊತ್ತಾಗುತ್ತಿಲ್ಲ. ನಮ್ಮಿಂದ ಅನೇಕ ತಪ್ಪುಗಳಾಗುತ್ತಿವೆ. ಅಯೋಗ್ಯ ರೀತಿಯಲ್ಲಿ ಮಾತನಾಡುವುದರಿಂದ ಕೆಲವೊಮ್ಮೆ ಇತರರ ಮನಸ್ಸನ್ನು ನೋಯಿಸುತ್ತೇವೆ. ಹೇ ಶ್ರೀಕೃಷ್ಣಾ, ನೀನು ನಮ್ಮನ್ನು ನಿನ್ನಂತೆಯೇ ಮಾಡು. ಹೇ ಪರಮ ದಯಾಮಯ ಭಗವಂತಾ, ನಾವು ಈ ಸಂಸಾರಚಕ್ರದಲ್ಲಿ ಸಿಲುಕಿಕೊಂಡಿದ್ದೇವೆ. ಆದರೆ ಅದರಿಂದ ನೀವೇ ನಮ್ಮನ್ನು ಮುಕ್ತಗೊಳಿಸುವವರಿದ್ದೀರಿ. ಇದರ ಅರಿವು ಸತತ ನಮ್ಮ ಮನಸ್ಸಿನಲ್ಲಿರಲಿ. ಹೇ ಶ್ರೀಕೃಷ್ಣಾ, ಪ್ರತಿಯೊಂದು ಕೃತಿಯನ್ನು ಮಾಡುತ್ತಿರುವಾಗ ನಮಗೆ ನಿನ್ನ ಸ್ಮರಣೆಯಾಗಲಿ. ನಾವು ಅಜ್ಞಾನಿಗಳು ಹಾಗೂ ಅಸಮರ್ಥರು. ನಮಗೆ ಏನೂ ತಿಳಿಯುವುದಿಲ್ಲ. ನೀವೇ ನಮಗೆ ಹೇಗೆ ವರ್ತಿಸಬೇಕು, ಹೇಗೆ ಮಾತನಾಡಬೇಕು, ಪ್ರತಿಯೊಂದು ಕ್ಷಣ ಹೇಗೆ ಆನಂದದಿಂದ ಇರಬೇಕು ಎಂದು ಕಲಿಸು. ದಿನವಿಡೀ ಆಯೋಜನೆಯನ್ನು ಹೇಗೆ ಮಾಡುವುದು, ಮನೆಯ ಕೆಲಸಗಳು, ಕಚೇರಿಯ ಕೆಲಸಗಳು, ಸಾಧನೆ ಇವುಗಳ ಹೊಂದಾಣಿಕೆ ಹೇಗೆ ಮಾಡುವುದು ಇದನ್ನೆಲ್ಲ ನೀವೇ ನಮಗೆ ಕಲಿಸಿಕೊಡಿ ಹೇ ಶ್ರೀಕೃಷ್ಣಾ, ನೀವೇ ನೀಡುತ್ತಿರುವ ಪ್ರತಿಯೊಂದು ಕ್ಷಣದ ಬಗ್ಗೆ ನಮ್ಮ ಮನಸ್ಸಿನಲ್ಲಿ ಕೃತಜ್ಞತೆಯಿರಲಿ. ನೀನು ಘಟಿಸುತ್ತಿರುವ ಪ್ರತಿಯೊಂದು ಪ್ರಸಂಗವು ನೀನು ನಮ್ಮ ಒಳಿತಿಗಾಗಿಯೇ ಮತ್ತು ನಮ್ಮ ಕಲ್ಯಾಣಕ್ಕಾಗಿಯೇ ಘಟಿಸುತ್ತಿರುವೇ ಎಂಬ ಭಾವವು ನಮ್ಮಲ್ಲಿರಲಿ. ನಮ್ಮನ್ನು ಸತತ ಕಲಿಯುವ ಸ್ಥಿತಿಯಲ್ಲಿರಿಸಿರಿ. ಹೇ ಶ್ರೀಕೃಷ್ಣಾ, ಈಗ ಪುನಃ ಈ ಜನ್ಮಮೃತ್ಯುವಿನ ಚಕ್ರದಲ್ಲಿ ನಮಗೆ ಸಿಲುಕಲಿಕ್ಕಿಲ್ಲ. ಸಾಧನೆಯನ್ನು ಮಾಡುವಂತಹ ದೃಢನಿರ್ಧಾರವನ್ನು ನೀವೇ ನಮ್ಮಿಂದ ಮಾಡಿಸಿಕೊಳ್ಳಿರಿ. ಕ್ಷಣಕ್ಷಣಕ್ಕೂ ನಿಮ್ಮ ಸ್ಮರಣೆಯಾಗಲಿ. ನಾವು ನಿಮಗೆ ಸಂಪುರ್ಣವಾಗಿ ಶರಣಾಗಿದ್ದೇವೆ. ನಮ್ಮನ್ನು ಉದ್ಧರಿಸಿರಿ ಭಗವಂತಾ, ನಮ್ಮನ್ನು ಉದ್ಧರಿಸಿ!!’
ನಾವು ಈ ರೀತಿಯಲ್ಲಿ ನಮ್ಮ ಶಬ್ದಗಳಲ್ಲಿ ದಿನವಿಡೀ ಕಡಿಮೆಪಕ್ಷ ೨-೩ ಸಲ ದೇವರಲ್ಲಿ ಆತ್ಮನಿವೇದನೆಯನ್ನು ಮಾಡೋಣ. ಆತ್ಮನಿವೇದನೆ ಅಥವಾ ಪ್ರಾರ್ಥನೆಯನ್ನು ಮಾಡುವಾಗ ವ್ಯಾವಹಾರಿಕ ಅಥವಾ ಮಾಯೆಯ ಸುಖವನ್ನು ಬೇಡುವ ಬದಲು ಆಧ್ಯಾತ್ಮಿಕ ಸಹಾಯವನ್ನು ಬೇಡಬೇಕು.
ಐ. ದೇವರಲ್ಲಿ ಏನನ್ನು ಬೇಡಬೇಕು?
ಸನಾತನದ ಪ್ರೇರಣಾಸ್ಥಾನ ಮತ್ತು ಇಂದೂರ ಪ್ರಸಿದ್ಧ ಸಂತ ಭಕ್ತರಾಜ ಮಹಾರಾಜರು ‘ದೇವರಲ್ಲಿ ಅಮೃತವನ್ನು ಬೇಡಬೇಡಿ. ವಿಷವನ್ನು ಜೀರ್ಣಿಸುವಂತಹ ಶಕ್ತಿಯನ್ನು ಬೇಡಿ’ ಎಂದು ಯಾವಾಗಲೂ ಹೇಳುತ್ತಿದ್ದರು. ಅದರ ಭಾವಾರ್ಥವು ಹೀಗಿದೆ – ದೇವರಲ್ಲಿ ಸುಖವನ್ನು ಬೇಡಬಾರದು. ದುಃಖವನ್ನು ಸಹಿಸುವ ಶಕ್ತಿಯನ್ನು ಬೇಡಬೇಕು. ನಾವು ಸಹ ಸಾಧನೆಯ ಪ್ರಯತ್ನಗಳ ಅಂತರ್ಗತ ನಮಗೆ ಹೇಗೆ ಅನಿಸುತ್ತದೆಯೋ ಹಾಗೆ ನಮ್ಮ ಮನಸ್ಸಿನಲ್ಲಿ ಯಾವ ಭಾವವು ಮೂಡುತ್ತದೆಯೋ ಅದಕ್ಕನುಸಾರ ಆತ್ಮನಿವೇದನೆಯನ್ನು ಮಾಡಲು ಪ್ರಯತ್ನಿಸೋಣ.