‘ಕರ್ತೃತ್ವ’ ವನ್ನು ಜಯಿಸಲು ಮಾಡಬೇಕಾಗಿರುವ ಪ್ರಯತ್ನಗಳು
ಈ ಹಿಂದೆ ಅಹಂ ಎಂದರೇನು ? ಹಾಗೂ ಅಹಂ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ನಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ಕಾರಣಕ್ಕೆ ಅಹಂ ಇರುತ್ತದೆ. ಕಾರ್ಯ, ಜ್ಞಾನ, ಯಶಸ್ಸು, ಪ್ರಸಿದ್ಧಿ, ಸೌಂದರ್ಯ, ಪರಿವಾರ, ಜಾತಿ, ಪಂಥ, ದೇಶ, ದೇವರು, ಸಾಧನೆ ಈ ವಿಷಯಗಳ ಬಗ್ಗೆ ಅಹಂಕಾರವಿರುತ್ತದೆ. ಅಹಂಕಾರ ಇರುವುದು ಸಾಧನೆಯಲ್ಲಿ ಎಲ್ಲಕ್ಕಿಂತ ದೊಡ್ಡ ಅಡಚಣೆಯಾಗಿದೆ. ಅಹಂಕಾರವು ಎಲ್ಲ ದುಃಖಗಳ ಮೂಲವಾಗಿದೆ. ಅಹಂಕಾರವು ನಷ್ಟವಾದ ಹೊರತು ಈಶ್ವರಪ್ರಾಪ್ತಿಯಾಗಲು ಸಾಧ್ಯವೇ ಇಲ್ಲ. ಆದ್ದರಿಂದ ಎಲ್ಲ ಸಂತರೂ ಅಹಂ ನಿರ್ಮೂಲನೆಯ ಮಹತ್ವವನ್ನು ಹೇಳಿದ್ದಾರೆ. ಈ ಅಹಂಕಾರವು ಮೋಸ ಮಾಡುತ್ತದೆ. ನಮ್ಮ ವಿಚಾರಪ್ರಕ್ರಿಯೆಯಲ್ಲಿ ಯಾವುದಾದರೊಂದು ಅಹಂಯುಕ್ತವಾಗಿದೆ ಎಂಬುದು ಬಹಳಷ್ಟು ಬಾರಿ ನಮ್ಮ ಗಮನಕ್ಕೂ ಬರುವುದಿಲ್ಲ. ಅಹಂಕಾರದ ಸ್ವರೂಪವನ್ನು ತಿಳಿದುಕೊಳ್ಳುವುದಕ್ಕಾಗಿ ಇಲ್ಲಿ ಅಹಂನ ಕೆಲವು ಮುಖ್ಯ ಅಂಶಗಳ ಬಗ್ಗೆ ಅಭ್ಯಾಸ ಮಾಡುವವರಿದ್ದೇವೆ. ಇದರಿಂದ ನಮ್ಮ ಯಾವ ಕೃತಿ, ಯಾವ ವಿಚಾರ ಅಹಂಯುಕ್ತವಾಗಿದೆ, ನಮ್ಮನ್ನು ಈಶ್ವರನಿಂದ ದೂರ ಕರೆದೊಯ್ಯುವಂತಹದ್ದಾಗಿದೆ ಎಂಬುದು ನಮ್ಮ ಗಮನಕ್ಕೆ ಬರುವುದು ಮತ್ತು ಅದರ ಮೇಲೆ ಹೇಗೆ ಜಯ ಸಾಧಿಸುವುದು ಎಂಬುದನ್ನು ಕಲಿಯಲು ಸಹಾಯವಾಗುವುದು. ಈಗ ‘ಕರ್ತೃತ್ವ’ ಎಂಬ ಅಹಂನ ಅಂಶದ ಬಗ್ಗೆ ವಿವರವಾಗಿ ತಿಳಿದುಕೊಳ್ಳುವವರಿದ್ದೇವೆ.
ಅ. ಕರ್ತೃತ್ವ ಎಂದರೇನು ?
ಕರ್ತೃತ್ವ ಎಂದರೇನು ? ‘ನಾನು ಎಲ್ಲವನ್ನೂ ಮಾಡುತ್ತೇನೆ ಅಥವಾ ನನ್ನಿಂದ ಎಲ್ಲವೂ ಆಗುತ್ತದೆ’ ಎಂದೆನಿಸುವುದು. ಒಳ್ಳೆಯ ಸಂಗತಿಗಳ ಶ್ರೇಯಸ್ಸನ್ನು (ಕ್ರೆಡಿಟ್) ತಾನೇ ತೆಗೆದುಕೊಳ್ಳುವುದೆಂದರೆ ಕರ್ತೃತ್ವ!
‘ಎಲ್ಲವನ್ನೂ ನಾನೇ ನಿಭಾಯಿಸಬೇಕಾಗುತ್ತದೆ ಅಥವಾ ಸಂಭಾಳಿಸಬೇಕಾಗುತ್ತದೆ’, ‘ನಾನು ‘ಹೌದು’ ಎಂದರೆ ನಾನೇ ಮಾಡಬೇಕಾಗುತ್ತದೆ’, ‘ನಾನು ಇದ್ದಿದ್ದರಿಂದ ಆ ಕೆಲಸವಾಯಿತು, ಇಲ್ಲದಿದ್ದರೆ ಆಗುತ್ತಿರಲಿಲ್ಲ’ ಎಂಬ ವಿಚಾರಪ್ರಕ್ರಿಯೆಯು ಕರ್ತೃತ್ವವನ್ನು ಬಲಪಡಿಸುವಂತಹದ್ದಾಗಿದೆ. ವ್ಯಕ್ತಿಯ ನಡೆ-ನುಡಿಯಿಂದ ಹಾಗೂ ವಿಚಾರಗಳಿಂದ ಕರ್ತೃತ್ವವು ಗಮನಕ್ಕೆ ಬರುತ್ತದೆ. ಈ ಕರ್ತೃತ್ವವು ನಮ್ಮೆಲ್ಲರಲ್ಲಿಯೂ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಇದ್ದೇ ಇರುತ್ತದೆ.
ಆ. ಕರ್ತೃತ್ವದ ವಿಚಾರಗಳ ಕೆಲವು ಉದಾಹರಣೆಗಳು
ಕೆಲವರು ತಮ್ಮ ಕುಟುಂಬದವರಿಗೆ ಆಧಾರವಾಗಿ ನಿಂತುಕೊಂಡು ತನಗಿಂತ ಚಿಕ್ಕವರಾಗಿರುವ ಒಡಹುಟ್ಟಿದವರಿಗೆ ಶಿಕ್ಷಣ ಪಡೆಯಲು ಸಹಾಯ ಮಾಡಿರುತ್ತಾರೆ. ಈ ಒಡಹುಟ್ಟಿದವರು ದೊಡ್ಡವರಾದ ಮೇಲೆ ಇದರ ಅರಿವನ್ನು ಇಟ್ಟುಕೊಳ್ಳದೇ ಅವರ ಕಡೆ ದುರ್ಲಕ್ಷ ಮಾಡುತ್ತಾರೆ. ಆಗ ‘ಇವರಿಗಾಗಿ ನಾನು ಎಷ್ಟು ಮಾಡಿದೆ, ಇವರಿಗೆ ಶಿಕ್ಷಣ ಕೊಡಿಸಿದೆ; ಆದರೆ ಯಾರಿಗೂ ಅದರ ಅರಿವೇ ಇಲ್ಲ’ ಈ ವಿಧದ ವಿಚಾರಗಳು ಬರುತ್ತವೆ. ಇದಾಯಿತು ಕರ್ತೃತ್ವ!
‘ನಾನು ನಾದಿನಿಗಾಗಿ ಎಲ್ಲ ಮಾಡಿದೆ, ಅವಳಿಗೆ ಯಾವ ಕೊರತೆಯೂ ಇಲ್ಲದಂತೆ ನೋಡಿಕೊಂಡೆ, ಆದರೂ ಅವಳು ನನ್ನ ಬಗ್ಗೆ ತಕರಾರು ಮಾಡುತ್ತಲೇ ಇರುತ್ತಾಳೆ’ ಎಂದೆನಿಸಿ ದುಃಖವಾಗುತ್ತದೆ; ಇದೂ ಕರ್ತೃತ್ವವಾಯಿತು!
‘ನಾನು ಸ್ವಬಲದ ಮೇಲೆ ನೌಕರಿ ಗಳಿಸಿಕೊಂಡೆ’, ‘ನಾನು ವಿದ್ಯಾರ್ಥಿಗಳಿಗಾಗಿ ತೆಗೆದುಕೊಂಡ ಕಷ್ಟದಿಂದಲೇ ಶಾಲೆಗೆ ಉತ್ತಮ ಫಲಿತಂಶ ಬಂದಿತು’, ‘ನಾನು ಯೋಗ್ಯ ಡಯಗ್ನೊಸಿಸ್ (ರೋಗ ನಿದಾನ) ಮಾಡಿದ್ದರಿಂದ ರೋಗಿಯ ಪ್ರಾಣ ಉಳಿಯಿತು’, ‘ನಾನು ಕಛೆರಿಯಲ್ಲಿ ನನ್ನ ಪ್ರೊಜೆಕ್ಟ ನಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಮಾಡಿದ್ದರಿಂದ ಪ್ರೊಜೆಕ್ಟ್ ಮುಂದುವರೆಯಿತು, ಇಲ್ಲದಿದ್ದರೆ ನಿಂತು ಹೋಗುತ್ತಿತ್ತು’, ‘ನಾನು ಉತ್ತಮ ಅಡುಗೆ ಮಾಡುತ್ತೇನೆ, ನಾನು ಮಾಡುವ ಚಕ್ಕಲಿ ಯಾವಾಗಲೂ ಚೆನ್ನಾಗೇ ಇರುತ್ತದೆ, ಬೆರಳು ತೋರಿಸುವಂತೇನೂ ಇರುವುದಿಲ್ಲ’, ‘ನಾನು ಸಾಧನೆ ಮಾಡುತ್ತೇನೆ, ಆದ ಕಾರಣ ನನ್ನ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತದೆ’, ಇಂತಹ ವಿಚಾರಗಳು ಅಹಂಯುಕ್ತ ವಿಚಾರಗಳಾಗಿವೆ. ಈ ವಿಚಾರಪ್ರಕ್ರಿಯೆಯ ಮೂಲದಲ್ಲಿ ಏನಿದೆ ? ಇದರ ಮೂಲದಲ್ಲಿರುವುದೇನೆಂದರೆ ‘ನಾನು ಮಾಡಿದೆ’ ಎಂಬ ಅರಿವು ! ಇಂತಹ ಕರ್ತೃತ್ವದ ವಿಚಾರಗಳು ನಮ್ಮ ಮನಸ್ಸಿಗೆ ಬರುತ್ತವೆ ಅಲ್ಲವೇ ? ನಮ್ಮ ಮನಸ್ಸಿನಲ್ಲಿ ಯಾವ ವಿಧದ ಕರ್ತೃತ್ವದ ವಿಚಾರಗಳು ಬರುತ್ತವೆ ಎಂದು ಯೋಚನೆ ಮಾಡಿ.
ಇ. ಮನಸ್ಸಿನ ಅಯೋಗ್ಯ ವಿಚಾರಪ್ರಕ್ರಿಯೆ
‘ನನ್ನ’ ತನದ ವಿಚಾರ ಮನಸ್ಸಿಗೆ ಬಂದೊಡನೆ ಮೊದಲ ವಿಚಾರ ಯಾವುದು ? “ನನಗೆ ಏನೆನಿಸುತ್ತದೆಯೋ ಅದೇ ಸರಿ, ‘ತಪ್ಪು ಎದುರಿನ ವ್ಯಕ್ತಿಯದ್ದೇ’ , ‘ನನ್ನ ವಿಚಾರವು ಯೋಗ್ಯವೇ ಆಗಿದೆ” ಇಂತಹ ವಿಚಾರಗಳು ಎಲ್ಲರ ಮನಸ್ಸಿಗೆ ಬರುತ್ತವೆ ಅಲ್ಲವೇ ? ಮೊದಲು ನಮಗೆ ನಮ್ಮ ನಿಲುವು ಸರಿಯೇ ಆಗಿದೆ ಎಂದೆನಿಸುತ್ತಿರುತ್ತದೆ; ಆದರೆ ಮೂರನೆಯ ವ್ಯಕ್ತಿಯಾಗಿ ವಿಚಾರ ಮಾಡಿ ನೋಡಿದರೆ ನಮ್ಮ ಗಮನಕ್ಕೆ ಬರುವುದೇನೆಂದರೆ ಅನುಕೂಲಕರ ಪರಿಸ್ಥಿತಿ, ದೇವರ ಸಹಾಯ ಇವುಗಳಿಂದ ನಮ್ಮಿಂದ ಆ ಸಂಗತಿಯು ಸಾಧ್ಯವಾಗಿರುತ್ತದೆ.
ಈ. ಮನಸ್ಸಿಗೆ ಯೋಗ್ಯ ದಿಶೆ ಕೊಡುವ ಬಗ್ಗೆ ಉದಾಹರಣೆಗಳು
ನಾನು ಒಂದು ತಿಂಡಿಯನ್ನು ರುಚಿಕರವಾಗಿ ತಯಾರಿಸುತ್ತೇನೆ ಎಂಬ ಕರ್ತೃತ್ವದ ಭಾವನೆಯ ಮೇಲೆ ಜಯ ಪಡೆಯಲು ಮನಸ್ಸಿಗೆ ಯೋಗ್ಯ ದಿಶೆ ಕೊಡಬೇಕು ಎಂದು ಭಾವಿಸೋಣ. ಅಡುಗೆ ಮಾಡಲು ಬೇಕಾಗಿದ್ದ ಎಲ್ಲ ಸಾಮಗ್ರಿಯು ಸಿಕ್ಕಿತು, ದೇವರು ಅಡುಗೆ ಮಾಡಲು ಶಕ್ತಿ ಕೊಟ್ಟರು, ಯಾವ ಅಡಚಣೆಗಳೂ ಬರಲಿಲ್ಲ; ಆದ್ದರಿಂದ ಅಡುಗೆ ಒಳ್ಳೆಯದಾಗಿ ಆಗಲು ಸಾಧ್ಯವಾಯಿತು. ಯಾರೋ ಒಬ್ಬರು ಆ ತಿಂಡಿಯನ್ನು ಮಾಡಲು ಕಲಿಸಿದರು, ಅದರಲ್ಲಿರುವ ಸೂಕ್ಷ್ಮ ವಿಷಯಗಳನ್ನು ತಿಳಿಸಿಕೊಟ್ಟರು ಅಥವಾ ದೇವರು ಅದನ್ನು ಸೂಚಿಸಿದರು; ಆದ್ದರಿಂದ ತಿಂಡಿ ಒಳ್ಳೆಯದಾಗಿ ಆಯಿತು. ಈ ರೀತಿ ವಿಚಾರ ಮಾಡಿದರೆ, ಯಾವುದೇ ಒಂದು ಕೃತಿಯು ಒಳ್ಳೆಯದಾಗಿ ಆಗುವುದರಲ್ಲಿ ಹಲವರ ಸಹಭಾಗವಿರುತ್ತದೆ ಎಂಬುದು ಗಮನಕ್ಕೆ ಬರುತ್ತದೆ. ತನ್ನ ಬಗ್ಗೆ ದೊಡ್ಡಸ್ತಿಕೆ ಅನಿಸುವಂತಹದ್ದೇನೂ ಇರುವುದಿಲ್ಲ!
ಉ. ಕರ್ತೃತ್ವವು ಅಜ್ಞಾನದಿಂದ ಉಂಟಾಗಿರುವುದು
ನಮ್ಮ ಶ್ವಾಸೋಚ್ಛವಾಸ, ಹೃದಯದ ಬಡಿತ, ತಿಂದ ಅನ್ನ ಜೀರ್ಣವಾಗುವುದು ಇದೆಲ್ಲವನ್ನೂ ಯಾರು ಮಾಡುತ್ತಿದ್ದಾನೆ ? ನಮ್ಮ ಕಣ್ಣೂ ರೆಪ್ಪೆಗಳ ಅಲುಗಾಟ ಕೂಡ ನಮ್ಮ ಕೈಯಲ್ಲಿಲ್ಲ. ಜನನ-ಮರಣ ನಮ್ಮ ಕೈಯಲ್ಲಿಲ್ಲ. ಇಷ್ಟೇ ಅಲ್ಲ, ನಾವು ಮಾಡಿರುವ ಆಯೋಜನೆಯಂತೆ ನಡೆಯುವುದು ಅಥವಾ ನಡೆಸುವುದು ಕೂಡ ನಮ್ಮ ಕೈಯ್ಯಲ್ಲಿಲ್ಲ. ಅಂದ ಮೇಲೆ, ‘ನಾನು ಮಾಡುತ್ತೇನೆ’, ‘ನನ್ನಿಂದ ಆಗುತ್ತದೆ’, ಎಂಬ ವೃಥಾ ಅಭಿಮಾನವೇಕೆ ? ಅಂದರೆ ಕರ್ತೃತ್ವದ ವಿಚಾರಗಳು ಅಜ್ಞಾನದ ಲಕ್ಷಣವಾಗಿವೆ. ಈ ಅಜ್ಞಾನದಿಂದ ಚಿಕ್ಕ ಚಿಕ್ಕ ಸಂಗತಿಗಳ ಕರ್ತೃತ್ವವನ್ನು ತೆಗೆದುಕೊಳ್ಳುವುದು ಮತ್ತು ಅಹಂಕಾರವನ್ನು ಕಾಪಾಡಿಕೊಳ್ಳುವುದು ಹೀಗೆ ನಡೆಯುತ್ತಲೇ ಇರುತ್ತದೆ. ಕರ್ತೃತ್ವದ ವಿಚಾರಗಳು ಅಜ್ಞಾನದಿಂದ ಉಂಟಾಗಿರುತ್ತವೆ. ಎಲ್ಲಿ ಹುಲ್ಲು ಕಡ್ಡಿ ಕೂಡ ದೇವರ ಇಚ್ಛೆಯಿಲ್ಲದೆ ಅಲುಗಾಡಲಾರದೋ ಅಲ್ಲಿ ಯಾವುದೇ ಒಂದು ಸಂಗತಿಯು ನನ್ನಿಂದ ನಡೆಯಿತು ಅಥವಾ ನಡೆಯುತ್ತಿದೆ ಎಂದು ಭಾವಿಸುವುದು ಹುಚ್ಚುತನವೇ. ದೇವರು ಎಲ್ಲವನ್ನೂ ಮಾಡಿ ಅನಾಮಧೇಯನಾಗಿರುತ್ತಾನೆ. ನಾವು ಸಾಧನೆ ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳಬೇಕಾಗಿದ್ದರೆ, ನಾವು ದೇವರ ಇಂತಹ ಗುಣಗಳನ್ನು ನಮ್ಮಲ್ಲಿ ತರಲು ಪ್ರಯತ್ನಿಸಬೇಕು.
ಉ. ಚಿಂತೆಯ ಮೂಲದಲ್ಲಿ ಕರ್ತೃತ್ವವಿದೆ
ಶ್ರೀ ಗೋಂದವಲೇಕರ್ ಮಹಾರಾಜರು ಹೇಳಿದ್ದಾರೆ, ‘ಚಿಂತೆಯ ಮೂಲದಲ್ಲಿ ಕರ್ತೃತ್ವವಿದೆ’. ಯಾರು ಈ ಸಂಸಾರವನ್ನು ನಿರ್ಮಿಸಿದ್ದಾನೆಯೋ ಅವನಿಗೆ ಅದನ್ನು ರಕ್ಷಿಸುವ ಶಕ್ತಿಯಿರುತ್ತದೆ ಮತ್ತು ಅವನು ಅದನ್ನು ತನ್ನ ಇಚ್ಛೆಯಂತೆ ಮಾಡುತ್ತಲೇ ಇರುತ್ತಾನೆ. ಆದರೆ ಅಲ್ಲಿ ನಾವು ಕರ್ತೃತ್ವವನ್ನು ನಮ್ಮ ಮೇಲೆ ಎಳೆದುಕೊಂಡು ಚಿಂತೆ ಮಾಡುತ್ತಾ ಕೂರುತ್ತೇವೆ. ಪರಮಾತ್ಮನು ತಾನು ಏನನ್ನು ಮಾಡಬೇಕಾಗಿದೆಯೋ ಅದನ್ನು ಮಾಡುತ್ತಲೇ ಇರುತ್ತಾನೆ. ಆದರೆ ನಾವು ಮಾತ್ರ ಚಿಂತೆ ಮಾಡಿ ಒತ್ತಡ ಮಾಡಿಕೊಳ್ಳುತ್ತೇವೆ; ಆದ್ದರಿಂದ ನಾವು ಚಿಂತೆ ಬಿಟ್ಟು ಭಗವಂತನಲ್ಲಿ ಶರಣಾಗಿರಬೇಕು.
ಒಬ್ಬ ವ್ಯಕ್ತಿಗೆ ತನ್ನ ಮಗನಿಗೆ ಒಳ್ಳೆಯ ನೌಕರಿ ಸಿಗಬೇಕೆಂಬ ಚಿಂತೆಯಿತ್ತು. ಮುಂದೆ ಆತನಿಗೆ ಬಯಸಿದ್ದಂತಹ ನೌಕರಿ ಸಿಕ್ಕಿದ ನಂತರ ಮಗನ ವಿವಾಹದ ಚಿಂತೆ ಶುರುವಾಯಿತು. ಕೆಲ ಕಾಲದ ನಂತರ ವಿವಾಹವಾಯಿತು ಮತ್ತು ಮುಂದೆ ಸೊಸೆಯು ಯೋಗ್ಯ ರೀತಿಯಲ್ಲಿ ವರ್ತಿಸುವುದಿಲ್ಲ ಎಂದು ಚಿಂತೆ ಶುರುವಾಯಿತು. ನಂತರ ಅವಳಿಗೆ ಸಂತಾನವಿಲ್ಲವೆಂದು ಚಿಂತೆ ಶುರುವಾಯಿತು. ಸ್ವಲ್ಪ ಕಾಲದ ನಂತರ ಮಗು ಹುಟ್ಟಿತು. ತದನಂತರ ಮಗುವಿಗೆ ಅಪಸ್ಮಾರ (ಫಿಟ್ಸ್) ಬರತೊಡಗಿದರಿಂದ ಅದರ ಚಿಂತೆ ಶುರುವಾಯಿತು. ನಂತರ ಮಗುವಿಗೆ ಬರುತ್ತಿದ್ದ ಫಿಟ್ಸ್ ನಿಂತು ಹೋಯಿತು ಆದರೆ ಈ ಅಜ್ಜನಿಗೇ ಫಿಟ್ಸ್ ಬರಲಾರಂಭಿಸಿತು. ಕೊನೆಗೆ ಚಿಂತೆ ಮಾಡುತ್ತಲೇ ಮರಣ ಹೊಂದಿದನು. ಚಿಂತೆಯ ಮೂಲ ಕರ್ತೃತ್ವ ಮತ್ತು ಕರ್ತೃತ್ವದ ಮೂಲ ಭಗವಂತನ ವಿಸ್ಮರಣೆ. ಸಂಕಟ ಬಂದರೂ ಚಿಂತೆ ಮಾಡಬಾರದು. ಭಗವಂತನು ಮಾಡಿದ್ದೆಲ್ಲವೂ ನಮ್ಮ ಹಿತಕ್ಕಾಗಿಯೇ ಇರುತ್ತದೆ ಎಂಬ ದೃಷ್ಟಿಯನ್ನು ಇಟ್ಟುಕೊಳ್ಳಬೇಕು.
ಎ. ಕರ್ತೃತ್ವದ ದುಷ್ಪರಿಣಾಮಗಳು
೧. ಭಾವ ನಿರ್ಮಾಣವಾಗುವಲ್ಲಿ ಅದಚಣೆ ಬರುತ್ತದೆ : ಕರ್ತೃತ್ವದಿಂದ ದೊಡ್ಡ ಪ್ರಮಾಣದ ದುಷ್ಪರಿಣಾಮಗಳಿವೆ. ಸಾಧನೆಯ ದೃಷ್ಟಿಯಿಂದ ವಿಚಾರ ಮಾಡಿದರೆ, ಕರ್ತೃತ್ವವು ಭಾವಜಾಗೃತಿಯಲ್ಲಿ ಒಂದು ಭಾರಿ ಅಡಚಣೆಯಾಗಿದೆ. ‘ದೇವರಿಂದ ಅಲ್ಲ, ನನ್ನಿಂದ ಒಳ್ಳೆಯದಾಯಿತು’ ಎಂದೆನಿಸಿದರೆ ದೇವರ ಬಗ್ಗೆ ಭಾವ ಅನಿಸುವುದೇ ? ಇಲ್ಲವಲ್ಲ ! ಅಹಂಕಾರದಿಂದ ಸಾಧನೆಯಲ್ಲಿ ಅಧೋಗತಿಯಾಗುತ್ತದೆ. ನಾವು ಈಶ್ವರನಿಂದ ದೂರ ಹೋಗುತ್ತೇವೆ. ‘ಭಾವ ಇದ್ದಲ್ಲಿ ದೇವ’ ಹೀಗಿರುವುದರಿಂದ ಅಖಂಡ ಭಾವಾವಸ್ಥೆಯಲ್ಲಿರಲು ಸಾಧ್ಯವಾಗುವುದಕ್ಕಾಗಿ, ಈಶ್ವರನನ್ನು ಅಖಂಡವಾಗಿ ಅನುಭವಿಸಲು ಸಾಧ್ಯವಾಗಬೇಕು. ಇದಕ್ಕಾಗಿ ಕರ್ತೃತ್ವವನ್ನು ತ್ಯಾಗ ಮಾಡಲು ಸಾಧ್ಯವಾಗಬೇಕು. ಕರ್ತೃತ್ವದ ತ್ಯಾಗ ಅಂದರೆ ಮನಸ್ಸಿಗೆ ಸತತವಾಗಿ ‘ನಾನು ಏನೂ ಮಾಡುತ್ತಿಲ್ಲ, ಎಲ್ಲವನ್ನೂ ಮಾಡುವವನು-ಮಾಡಿಸುವವನು ಭಗವಂತನೇ‘ ಎಂಬುದರ ಅರಿವು ಮಾಡಿಕೊಡುವುದು.
೨. ಬೇಸರವಾಗುವುದು : ಕರ್ತೃತ್ವದಿಂದ ಮೆಚ್ಚುಗೆಯ ಅಪೇಕ್ಷೆ ನಿರ್ಮಾಣವಾಗುತ್ತದೆ ಮತ್ತು ಅಪೇಕ್ಷೆ ಪೂರ್ಣವಾಗದಿದ್ದರೆ, ತನಗೆ ಗಮನ ಸಿಗದಿದ್ದಾಗ ಬೇಸರವೆನಿಸುತ್ತದೆ. ಉದಾಹರಣೆಗೆ, ನಾವು ಕುಟುಂಬದವರಿಗಾಗಿ ಒಂದು ತಿಂಡಿಯನ್ನು ತಯಾರಿಸಿದಾಗ ಅದರ ಬಗ್ಗೆ ಯಾರೂ ಏನೂ ಮಾತನಾಡದಿದ್ದರೆ, ಮೆಚ್ಚುಗೆ ವ್ಯಕ್ತಪಡಿಸದಿದ್ದರೆ ‘ನಾನು ಇಷ್ಟು ಕಷ್ಟಪಟ್ಟು ಸಮಯ ಕೊಟ್ಟು ಈ ತಿಂಡಿಯನ್ನು ತಯಾರಿಸಿದೆ; ಆದರೆ ಅದರ ಬಗ್ಗೆ ಯಾರಿಗೂ ಏನೂ ಅನಿಸುವುದಿಲ್ಲ’ ಎಂದೆನಿಸಿ ದುಃಖವಾಗುತ್ತದೆ. ಇದಕ್ಕೆ ವಿರುದ್ಧವಾಗಿ ಕರ್ತೃತ್ವವನ್ನು ದೇವರ ಚರಣಗಳಲ್ಲಿ ಅರ್ಪಿಸಿದರೆ ಅಪೇಕ್ಷೆಗಳು ತನ್ನಷ್ಟಕ್ಕೇ ಕಡಿಮೆಯಾಗುತ್ತವೆ.
೩. ಮೆಚ್ಚುಗೆ ಸಿಕ್ಕಾಗ ಅತಿ ಉತ್ಸಾಹಕ್ಕೊಳಗಾಗುವುದು : ಕೆಲವೊಮ್ಮೆ ಒಳ್ಳೆಯ ಕೃತಿಗಳ ಬಗ್ಗೆ ಮೆಚ್ಚುಗೆ ಸಿಕ್ಕಿದರೆ ನಾವು ಬಹಳ ಉತ್ಸಾಹಿತರಾಗುತ್ತೇವೆ ಮತ್ತು ಅದರಿಂದ ತನ್ನಲ್ಲಿ ಶ್ರೇಷ್ಠತನದ ಭಾವನೆ ನಿರ್ಮಾಣವಾಗುವ ಸಾಧ್ಯತೆಯಿರುತ್ತದೆ. ಹೀಗಾಗಬಾರದೆಂದು ಕರ್ತೃತ್ವವನ್ನು ದೇವರ ಚರಣಗಳಲ್ಲಿ ಅರ್ಪಿಸುವುದು ಮಹತ್ವದ್ದಾಗಿದೆ. ಕರ್ತೃತ್ವವನ್ನು ಭಗವಂತನ ಚರಣಗಳಲ್ಲಿ ಅರ್ಪಿಸುವುದೆಂದರೆ ತನ್ನಿಂದ ಆದ ಕೃತಿಯು ಭಗವಂತನಿಂದ ಸಾಧ್ಯವಾಯಿತು ಎಂಬುದನ್ನು ಗಮನಕ್ಕೆ ತೆಗೆದುಕೊಳ್ಳುವುದು. ಯಾರಾದರೂ ಮೆಚ್ಚುಗೆ ವ್ಯಕ್ತಪಡಿಸಿದಾಗ ‘ನನ್ನ ಅಹಂ ಹೆಚ್ಚಾಗಲಾರದು ತಾನೇ’ ಎಂಬ ಭಯವೆನಿಸುತ್ತಿದ್ದರೆ, ‘ನನ್ನಿಂದ ಮೆಚ್ಚುಗೆಯು ಭಗವಂತನಿಗೆ ಅರ್ಪಣೆಯಾಗುತ್ತಿಲ್ಲ’ ಎಂದು ತಿಳಿಯಬೇಕು.
೪. ಶ್ರೇಯಸ್ಸನ್ನು ಇತರರು ತೆಗೆದುಕೊಂಡರೆ ಬೇಸರವೆನಿಸಿ ಅಗಲಿಕೆ ಬೇಸರವೆನಿಸುವುದು : ನಾವು ಮಾಡಿದ ಒಂದು ಕೃತಿಯ ಶ್ರೇಯಸ್ಸನ್ನು (ಕ್ರೆಡಿಟ್) ಇತರರು ತೆಗೆದುಕೊಂಡರೆ ಅದನ್ನು ಸ್ವೀಕರಿಸಲು ಬರುವುದಿಲ್ಲ ಮತ್ತು ಬೇಸರವೆನಿಸುತ್ತದೆ. ನಿಮಗೂ ಹೀಗಾಗುತ್ತದೆಯೇ ? ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ಸರ್ವಜ್ಞ ಹಾಗೂ ಸರ್ವವ್ಯಾಪಿ ಪರಮೇಶ್ವರನಿಗೆ ಎಲ್ಲವೂ ತಿಳಿದಿರುತ್ತದೆ. ನಾವು ಏನು ಮಾಡಿದ್ದೇವೆ, ಏನು ಮಾಡಿಲ್ಲ ಎಂಬುದೂ ದೇವರಿಗೆ ತಿಳಿದಿರುತ್ತದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡರೆ ಇತರರು ಶ್ರೇಯ/ಕ್ರೆಡಿಟ್ ತೆಗೆದುಕೊಳ್ಳುವುದರ ಬಗೆಗಿನ ವಿಚಾರಗಳಿಂದ ತೊಂದರೆಯಾಗುವುದಿಲ್ಲ.
೫. ಭಯವೆನಿಸುವುದು ಮತ್ತು ಒತ್ತಡ ಉಂಟಾಗುವುದು : ಕರ್ತೃತ್ವದ ವಿಚಾರಗಳಿಂದ ಏನಾಗುತ್ತದೆ ? ನಮಗೆ ನಮ್ಮಿಂದಾಗುವ ತಪ್ಪುಗಳ ಬಗ್ಗೆ ಹೆಚ್ಚು ಭಯವೆನಿಸುತ್ತದೆ. ಪ್ರತಿಯೊಂದು ಕೃತಿಯನ್ನು ಮಾಡುವಾಗ ನಮ್ಮಲ್ಲಿ ಕರ್ತೃತ್ವದ ಅರಿವು ಜಾಗೃತವಾಗಿದ್ದರೆ ನಮಗೆ, ‘ನನಗೆ ಸರಿಯಾಗಿ ಮಾಡಲು ಸಾಧ್ಯಾವಾಗುವುದು ತಾನೆ?’, ‘ನನಗೆ ಸರಿಯಾಗಿ ಮಾಡಲು ಸಾಧ್ಯವಾಗುತ್ತಿದೆಯೇ’ ಇವುಗಳಂತಹ ವಿಚಾರಗಳಿಂದ ಒತ್ತಡ ಉಂಟಾಗುತ್ತದೆ. ‘ಕೃತಿ ಸರಿಯಾಗಿ ಆಗದಿದ್ದರೆ ಏನಾದೀತು’ ಈ ವಿಚಾರಗಳಿಂದ ನಕಾರಾತ್ಮಕತೆಯು ಹೆಚ್ಚಾಗುತ್ತದೆ ಮತ್ತು ‘ಏನನ್ನೂ ಮಾಡುವುದು ಬೇಡ’ ಎಂದೆನಿಸುತ್ತದೆ.
೬. ದುಃಖಿತ ಹಾಗೂ ನಿರಾಶರಾಗುವುದು ಮತ್ತು ಇತರರಿಗೆ ದೋಷ ಕೊಡುವುದು : ಕರ್ತೃತ್ವದ ಅರಿವು ತೀವ್ರವಾಗಿದ್ದರೆ ನಮಗೆ ಬೇಗ ದುಃಖವಾಗುತ್ತದೆ. ನಮಗೆ ನಿರಾಶೆ ಬೇಗ ಬರುತ್ತದೆ ಮತ್ತು ನಾವು ಇತರರಿಗೆ ದೋಷ ಕೊಡುತ್ತೇವೆ. ಇದನ್ನು ಒಂದು ಉದಾಹರಣೆಯ ಮೂಲಕ ತಿಳಿದುಕೊಳ್ಳೋಣ. ಮಹಾವಿದ್ಯಾಲಯದಲ್ಲಿ ಖೊ-ಖೊ ಸ್ಪರ್ಧೆಯಲ್ಲಿ ಕು. ಸುನೀತಾಳ ತಂಡವು ಸೆಮಿಫೈನಲ್ ನಲ್ಲಿ ಸೋತು ಹೋಯಿತು. ಸುನೀತಾಳಲ್ಲಿ ಕರ್ತೃತ್ವದ ಅರಿವು ಬಹಳ ತೀವ್ರವಾಗಿದ್ದರೆ, ಈ ಪರಾಜಯದಿಂದ ಅವಳ ಅಹಂಗೆ ಪೆಟ್ಟಾಗಿ ಅವಳು ದುಃಖಿತಳಾಗಿ ನಿರಾಶಳಾಗುತ್ತಾಳೆ. ‘ಈ ಸೋಲಿಗೆ, ತಂಡದಲ್ಲಿನ ಇತರ ಹುಡುಗಿಯರು ಹೇಗೆ ಹೊಣೆಯಾಗಿದ್ದಾರೆ’ ಎಂಬ ವಿಚಾರಗಳೇ ಅವಳ ಮನಸ್ಸಿನಲ್ಲಿ ಬರುತ್ತವೆ ಮತ್ತು ಅವಳು ಅವರನ್ನು ದೂಷಿಸತೊಡಗುತ್ತಾಳೆ. ಇದೆಲ್ಲವೂ ಆಗುತ್ತಿರುವುದು ಯಾವುದರಿಂದ ? ಇದೆಲ್ಲವೂ ಆಗುತ್ತಿರುವುದು ಕರ್ತೃತ್ವದ ವಿಚಾರಗಳಿಂದ ! ನಮಗೆ ಅಪೇಕ್ಷಿತವಿಲ್ಲದಿರುವ ಪರಿಸ್ಥಿತಿಯು ಉಂಟಾದಾಗ, ಕರ್ತೃತ್ವದಿಂದಾಗಿ ಅದನ್ನು ಸ್ವೀಕರಿಸಲು ಸಾಧ್ಯವಾಗುವುದಿಲ್ಲ.
ಇದುವರೆಗೆ ಹೇಳಿದ ಕರ್ತೃತ್ವದ ಪರಿಣಾಮಗಳ ಪೈಕಿ ಯಾವುದಾದರೂ ಪರಿಣಾಮಗಳು ನಿಮ್ಮ ಗಮನಕ್ಕೆ ಬಂದಿವೆಯೇ ? ಕರ್ತೃತ್ವದ ವಿಚಾರಗಳಿಂದಾಗಿ ನಮ್ಮ ಪಾಲಿಗೆ ಹೇಗೆ ದುಃಖ ಬರುತ್ತದೆ ಎಂಬ್ದುದು ತಿಳಿಯಿತಲ್ಲವೇ ? ಈಗ ಇದನ್ನು ಜಯಿಸಲು ಹೇಗೆ ಪ್ರಯತ್ನಿಸಬೇಕೆಂಬುದನ್ನು ತಿಳಿದುಕೊಳ್ಳೋಣ.
ಏ. ಕರ್ತೃತ್ವದ ಮೇಲೆ ಜಯ ಪಡೆಯಲು ಮಾಡಬೇಕಾದ ಕೃತಿಯ ಸ್ತರದ ಪ್ರಯತ್ನಗಳು
೧. ಇತರರಿಗೆ ಶ್ರೇಯಸ್ಸನ್ನು ಕೊಡುವುದು : ಕರ್ತೃತ್ವದ ಮೇಲೆ ಜಯ ಸಾಧಿಸಲು, ನಮ್ಮಿಂದ ಆಗುತ್ತಿರುವ ಕಾರ್ಯದಲ್ಲಿ ಇತರರಿಂದ ಏನಾದರೂ ಸಹಾಯ ಸಿಕ್ಕಿದ್ದರೆ ಅದನ್ನು ಗಮನದಲ್ಲಿಟ್ಟುಕೊಂಡು ಅದರ ಶ್ರೇಯಸ್ಸನ್ನು ಅವರಿಗೆ ಕೊಡಬೇಕು. ಇದರಿಂದ ‘ನನ್ನಿಂದ ಆಯಿತು’ ಎಂಬ ಕರ್ತೃತ್ವ ಬರುವುದಿಲ್ಲ. ಇತರರು ಮಾಡಿದ ಕೃತಿಗಳ ಬಗ್ಗೆ ಮನಃಪೂರ್ವಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದರೆ ನಮ್ಮಲ್ಲಿ ವ್ಯಾಪಕತ್ವವೂ ಬರುತ್ತದೆ, ಇತರರಲ್ಲಿರುವ ಗುಣಗಳನ್ನು ನೋಡುವ ಅಭ್ಯಾಸವಾಗುತ್ತದೆ, ಕಲಿಯುವ ವೃತ್ತಿ ಹೆಚ್ಚಾಗುತ್ತದೆ. ಸತತ ಕಲಿಯುವ ಸ್ಥಿತಿಯಲ್ಲಿದ್ದರೆ ಅಹಂ ಹೆಚ್ಚಾಗುವುದಿಲ್ಲ.
೨. ತನ್ನಲ್ಲಿ ಕರ್ತವ್ಯ ಭಾವನೆಯನ್ನು ಬೇರೂರಿಸುವುದು : ಚಿಕ್ಕ ಚಿಕ್ಕ ಸಂಗತಿಗಳಿಗೆ ಸಂಬಂಧಪಟ್ಟಂತೆ ಕರ್ತೃತ್ವದ ವಿಚಾರಗಳು ಬರುತ್ತಿದ್ದರೆ ಕರ್ತವ್ಯಭಾವನೆಯನ್ನು ಬೇರೂರಿಸಲೂ ಪ್ರಯತ್ನಿಸಬೇಕು. ಉದಾಹರಣೆಗೆ, ನಾನು ವಾಹನವನ್ನು ಒಳ್ಳೆಯ ರೀತಿಯಲ್ಲಿ ಓಡಿಸಿದೆ ಎಂದೆನಿಸಿದರೆ ವಾಹನವನ್ನು ಒಳ್ಳೆಯ ರೀತಿಯಲ್ಲಿ ಓಡಿಸುವುದು ನನ್ನ ಕರ್ತವ್ಯವೇ ಆಗಿದೆ ಎಂದೂ, ಅಡುಗೆ ಚನ್ನಾಗಿ ಆದರೆ ಚನ್ನಾಗಿ ಅಡುಗೆ ಮಾಡುವುದು ನನ್ನ ಕರ್ತವ್ಯವೇ ಆಗಿದೆ ಎಂದೂ, ಮನೆಯವರ ಕಾಳಜಿ ತೆಗೆದುಕೊಂಡರೆ ಅದು ನನ್ನ ಕರ್ತವ್ಯವೇ ಆಗಿದೆ ಎಂದು ಗಮನಕ್ಕೆ ತಂದುಕೊಳ್ಳಬಹುದು.
೩. ಶರಣಾಗುವುದು : ಭಗವಂತನ ಚರಣಗಳಲ್ಲಿ ಸಂಪೂರ್ಣ ಶರಣಾಗುವುದರ ಮಹತ್ವವು ಎಷ್ಟು ಹೆಚ್ಚಿದೆ ಎಂಬುದು ನಮಗೆ ಮಹಾಭಾರತದಲ್ಲಿನ ದ್ರೌಪದಿ ವಸ್ತ್ರಾಪಹರಣದ ಪ್ರಸಂಗದಿಂದ ಕಲಿಯಲು ಸಿಗುತ್ತದೆ. ವಸ್ತ್ರಾಪಹರಣವಾಗುತ್ತಿದ್ದ ಸಮಯದಲ್ಲಿ, ಅವಳ ಮಾನವನ್ನು ಕಾಪಾಡಲು ಭಗವಾನ್ ಶ್ರೀಕೃಷ್ಣನು ತಡವಾಗಿ ಬಂದಿದ್ದು ಏಕೆ ಎಂದು ದ್ರೌಪದಿಯು ಶ್ರೀಕೃಷ್ಣನಲ್ಲಿ ಕೇಳಿದಳು. ಆಗ ಶ್ರೀಕೃಷ್ಣನು, ‘ನೀನು ಎಲ್ಲಿಯ ತನಕ ನಿನ್ನ ವಸ್ತ್ರವನ್ನು ಹಿಡಿದಿಟ್ಟುಕೊಂಡಿದ್ದೆಯೋ ಅಲ್ಲಿಯ ತನಕ ನಿನಗೆ, ನೀನೇ ನಿನ್ನ ಮಾನವನ್ನು ಕಾಪಾಡಿಕೊಳ್ಳಬಹುದು ಎಂಬ ವಿಶ್ವಾಸವಿತ್ತು; ನಿನ್ನ ಮಾನವನ್ನು ಕಾಪಾಡಿಕೊಳ್ಳುವುದು ನಿನ್ನಿಂದ ಸಾಧ್ಯವಿಲ್ಲ ಎಂಬುದರ ಅರಿವಾದಾಗ ನೀನು ನನ್ನಲ್ಲಿ ಸಂಪೂರ್ಣವಾಗಿ ಶರಣಾಗಿ ಎರಡೂ ಕೈಗಳನ್ನು ಎತ್ತಿದೆ ಮತ್ತು ಅದೇ ಕ್ಷಣದಲ್ಲಿ ನಾನು ನಿನ್ನ ಸಹಾಯಕ್ಕೆ ಬಂದೆ’. ಈಶ್ವರನನ್ನು ಅನುಭವಿಸಬೇಕಾದರೆ, ಕರ್ತೃತ್ವವನು ತ್ಯಜಿಸಿ ಈಶ್ವರನಲ್ಲಿ ಶರಣಾಗುವುದು, ಎಷ್ಟು ಮಹತ್ವದ್ದಾಗಿದೆ ಎಂಬುದು ಇದರಿಂದ ನಮಗೆ ತಿಳಿಯುತ್ತದೆ.
೪. ಪ್ರಾರ್ಥನೆ-ಕೃತಜ್ಞತೆ ವ್ಯಕ್ತಪಡಿಸುವುದು : ಪ್ರತಿಯೊಂದು ಪ್ರಸಂಗದಲ್ಲಿ ಈಶ್ವರನಲ್ಲಿ ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿ ಯಾಚಕಭಾವವು ಹೆಚ್ಚಾಗುತ್ತದೆ, ನಮ್ಮ ಅಸಮರ್ಥತೆಯು ವ್ಯಕ್ತವಾಗುತ್ತದೆ, ‘ನಾನು ಏನನ್ನೂ ಮಾಡುತ್ತಿಲ್ಲ, ಈಶ್ವರನೇ ಎಲ್ಲವನ್ನೂ ಮಾಡುತ್ತಿದ್ದಾನೆ’ ಎಂಬುದರ ಅರಿವಾಗಿ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ. ಪ್ರಾರ್ಥೆನೆಯ ಮೂಲಕ ವ್ಯಕ್ತವಾದ ಶರಣಾಗತಿಯ ಈ ಪ್ರಕ್ರಿಯೆಯು ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದಲೇ ಪೂರ್ಣವಾಗುತ್ತದೆ. ಕೃತಜ್ಞತೆ ಅರ್ಪಿಸುವುದರಿಂದ ಕರ್ತೃತ್ವವು ಈಶ್ವರನಿಗೆ ಅರ್ಪಿತವಾಗಿ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.
೫. ಸ್ವಯಂಸೂಚನೆಗಳನ್ನು ನೀಡುವುದು : ನಮ್ಮಲ್ಲಿ ಕರ್ತೃತ್ವದ ತೀವ್ರ ವಿಚಾರಗಳಿದ್ದರೆ, ಸ್ವಯಂಸೂಚನೆಗಳನ್ನೂ ನೀಡಬೇಕು. ಉದಾಹರಣೆಗೆ, “ಮನೆಯು ನನ್ನಿಂದ ನಡೆಯುತ್ತದೆ’ ಎಂಬ ವಿಚಾರ ತೀವ್ರವಾಗಿದ್ದರೆ ಸ್ವಯಂಸೂಚನೆಯನ್ನು ನೀಡಬಹುದು. ಉದಾಹರಣೆಗೆ, ‘ಮನೆಯು ನನ್ನಿಂದ ನಡೆಯುತ್ತಿದೆ ಎಂಬ ವಿಚಾರ ತೀವ್ರವಾಗಿದ್ದಾಗ, ದೇವರ ಕೃಪೆಯಿಂದಲೇ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂಬುದನ್ನು ಗಮನಕ್ಕೆ ತೆಗೆದುಕೊಂಡು ನಾನು ಕರ್ತೃತ್ವವನ್ನು ದೇವರ ಚರಣಗಳಲ್ಲಿ ಅರ್ಪಿಸುವೆನು ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವೆನು’ ಈ ರೀತಿ ನಮ್ಮ ಮನಸ್ಸಿನಲ್ಲಿರುವ ಕರ್ತೃತ್ವದ ವಿಚಾರಗಳ ಮೇಲೆ ಸ್ವಯಂಸೂಚನೆಯನ್ನು ಕೊಡಬಹುದು.
ಕರ್ತೃತ್ವದ ವಿಚಾರಗಳನ್ನು ಜಯಿಸಲು ‘ನಮ್ಮಿಂದ ಏನೇನು ಉತ್ತಮವಾಗಿ ನಡೆಯುತ್ತಿದೆಯೋ ಅದು ಕೇವಲ ಈಶ್ವರನ ಕೃಪೆಯಿಂದಲೇ ಆಗುತ್ತಿದೆ’ ಎಂಬ ಭಾವವನ್ನು ಇಟ್ಟುಕೊಳ್ಳೋಣ. ದೇವರ ಚರಣಗಳಲ್ಲಿ ಹೆಚ್ಚು-ಹೆಚ್ಚು ಕೃತಜ್ಞತೆ ವ್ಯಕ್ತಪಡಿಸಲು, ಶ್ರೇಯಸ್ಸನ್ನು ಇತರರಿಗೆ ಕೊಡಲು, ಇತರರ ಒಳ್ಳೆಯ ಕೃತಿಗಳ ಬಗ್ಗೆ ಮನಸಾರೆ ಮೆಚ್ಚುಗೆ ವ್ಯಕ್ತಪಡಿಸಲು ಪ್ರಯತ್ನಿಸೋಣ!