Contents
ಸನಾತನದ ‘ಮನೆಮನೆಯಲ್ಲಿ ಕೈದೋಟ’ ಅಭಿಯಾನ
ಆಲುಗಡ್ಡೆಗಳು (ಬಟಾಟೆ) ಮನೆಯ ತೋಟದಲ್ಲಿಯೂ ಸುಲಭವಾಗಿ ಬೆಳೆಯುವ ಬೆಳೆಯಾಗಿದೆ. ಆಲುಗಡ್ಡೆಯ ಬೆಳೆಯು ಸುಲಭವಾಗಿ ಮತ್ತು ಅತ್ಯಂತ ಕಡಿಮೆ ಖರ್ಚಿನಲ್ಲಿ ಆಗುವುದು. ಆಲುಗಡ್ಡೆಯ ಬೆಳೆಯನ್ನು ನಾವು ಕುಂಡದಲ್ಲಿ, ಪ್ಲಾಸ್ಟಿಕ್ ಚೀಲ, ಗೋಣಿಚೀಲ (ತಟ್ಟು), ಹಳೆಯ ತಲೆದಿಂಬಿನ ಚೀಲ ಅಥವಾ ಗವಸಗಳಲ್ಲಿಯೂ ಬೆಳೆಸಬಹುದು.
೧. ಆಲುಗಡ್ಡೆ ಕೃಷಿಗಾಗಿ ಕುಂಡಗಳಿಗಿಂತ ಗೋಣಿ ಚೀಲಗಳು ಹೆಚ್ಚು ಸೂಕ್ತ
ಆಲುಗಡ್ಡೆ ಕೃಷಿಗಾಗಿ ಕುಂಡಗಳಿಗಿಂತ ೩೦ ಅಥವಾ ೫೦ ಕೆಜಿ ಧಾನ್ಯದ ಗೋಣಿಚೀಲಗಳನ್ನು ಉಪಯೋಗಿಸಿದರೆ, ಹೆಚ್ಚು ಲಾಭವಾಗುವುದು; ಏಕೆಂದರೆ ಗೋಣಿಚೀಲಗಳಲ್ಲಿ ಆಲುಗಡ್ಡೆಗಳನ್ನು ಬೆಳೆಸಲು ಕುಂಡಗಳಿಗಿಂತ ಹೆಚ್ಚು ಜಾಗ ಸಿಗುತ್ತದೆ. ಆಲುಗಡ್ಡೆಯ ಕೃಷಿಗಾಗಿ ೨೦ ಲೀಟರಿನ ನೀರಿನ ಬಾಟಲಿಗಳನ್ನೂ ಉಪಯೋಗಿಸಬಹುದು.
೨. ಬಿಸಿಲಿನ ಆವಶ್ಯಕತೆ
ಆಲುಗಡ್ಡೆಯ ಬೆಳೆಗೆ ಪ್ರತಿದಿನ ಕನಿಷ್ಟಪಕ್ಷ ೫-೬ ಗಂಟೆ ನೇರವಾಗಿ ಬೀಳುವ ಬಿಸಿಲಿನ ಆವಶ್ಯಕತೆ ಇರುತ್ತದೆ. ಆದುದರಿಂದ ಆಲುಗಡ್ಡೆಯ ಕೃಷಿಯನ್ನು ಹೆಚ್ಚು ಬಿಸಿಲು ಇರುವ ಸ್ಥಳದಲ್ಲಿ ಮಾಡಬೇಕು.
೩. ಮಣ್ಣು ಮತ್ತು ಸಾವಯವ ಗೊಬ್ಬರ
ಆಲುಗಡ್ಡೆಗೆ ಆಮ್ಲೀಯ (ಅಸಿಡಿಕ್) ಮಣ್ಣು ಹೆಚ್ಚು ಉಪಯೋಗವಾಗುತ್ತದೆ. ಇದಕ್ಕಾಗಿ ಮಣ್ಣಿನ ಪ್ರಮಾಣದಷ್ಟೇ ಕಂಪೋಸ್ಟನ್ನು (ಒಂದು ರೀತಿಯ ಸಾವಯವ ಗೊಬ್ಬರ) ಹಾಕಬೇಕು. ಆಲುಗಡ್ಡೆ ನೆಡಲು ತಟ್ಟು ಅಥವಾ ಚೀಲಗಳನ್ನು ತೆಗೆದುಕೊಳ್ಳುವುದಿದ್ದರೆ, ಚೀಲದ ಮೇಲಿನ ಅಂಚು ಹೊರಗಿನ ಬದಿಯಿಂದ ಮಡತ್ತ ಅರ್ಧಕ್ಕಿಂತಲೂ ಕೆಳಗೆ ತರಬೇಕು. ಕೆಳಗಿನ ಭಾಗದಲ್ಲಿ ಸುಮಾರು ೪ ಅಂಗುಲಗಳವರೆಗೆ ಮಣ್ಣು ಮತ್ತು ಕಂಪೋಸ್ಟನ್ನು ಸೇರಿಸಿ ತುಂಬಬೇಕು. ಅದರ ಮೇಲೆ ನಿಧಾನವಾಗಿ ನೀರು ಸಿಂಪಡಿಸಿ ಅದನ್ನು ಹಸಿಮಾಡಿಕೊಳ್ಳಬೇಕು.
೪. ಆಲುಗಡ್ಡೆಯ ಆಯ್ಕೆ ಮತ್ತು ಕೃಷಿ
ಮಳೆಗಾಲ ಮತ್ತು ಚಳಿಗಾಲದಲ್ಲಿ ಆಲುಗಡ್ಡೆಗೆ ಮೊಳಕೆ ಬರುತ್ತದೆ. ಈ ಮೊಳಕೆಗಳಿಗೆ ‘ಕಣ್ಣುಗಳು’ ಎನ್ನುತ್ತಾರೆ. ಬೇಸಿಗೆಯಲ್ಲಿ ಈ ಮೊಳಕೆ ಬಂದಿರುವ ಆಲುಗಡ್ಡೆಗಳನ್ನು ತೆಗೆದಿಡಬೇಕಾಗುತ್ತದೆ. ಹೆಚ್ಚು ಮೊಳಕೆಗಳು ಬಂದಿರುವ ಆಲುಗಡ್ಡೆಗಳಿದ್ದರೆ, ಅವುಗಳನ್ನು ಕೃಷಿಗಾಗಿ ಆರಿಸಿ ಇಡಬೇಕು. ಆಲುಗಡ್ಡೆಗಳನ್ನು ತುಂಡು ಮಾಡಿಯೂ ಕೃಷಿಯನ್ನು ಮಾಡಬಹುದು; ಆದರೆ ಪ್ರಾರಂಭದಲ್ಲಿ ಅದಕ್ಕೆ ಹೆಚ್ಚು ನೀರು ಹಾಕಿದರೆ, ಆ ತುಂಡುಗಳು ಕೊಳೆಯುವ ಸಾಧ್ಯತೆ ಇರುತ್ತದೆ; ಆದುದರಿಂದ ಆಲುಗಡ್ಡೆಯನ್ನು ತುಂಡು ಮಾಡದೇ ಪೂರ್ತಿಯಾಗಿ ಬಳಸುವುದೇ ಉತ್ತಮ. ಚೀಲ ಅಥವಾ ಕುಂಡದಲ್ಲಿ ೧ ಅಥವಾ ೨ ಆಲುಗಡ್ಡೆಗಳನ್ನು ಮಣ್ಣಿನಲ್ಲಿಟ್ಟು ಕನಿಷ್ಟಪಕ್ಷ ೨ ಅಂಗುಲ ಒಳಗೆ ಹೋಗುವಷ್ಟು ಮಣ್ಣನ್ನು ಅದರ ಮೇಲೆ ನಿಧಾನವಾಗಿ ಹರಡಬೇಕು ಮತ್ತು ನೀರು ಸಿಂಪಡಿಸಬೇಕು.
೫. ಮಣ್ಣು ತುಂಬುವುದು
ಮಣ್ಣಿನೊಳಗಿಂದ ಮೊಳಕೆಗಳು ಮೇಲೆ ಬರುತ್ತಿದ್ದಂತೆ, ಅದರ ಸುತ್ತಲೂ ಸಾವಯವ ಗೊಬ್ಬರವನ್ನು ಸೇರಿಸಿದ ಮಣ್ಣನ್ನು ಹಾಕುತ್ತಿರಬೇಕು. ಇದರಿಂದ ಮೊಳಕೆಗಳು ನೆಟ್ಟಗೆ ನಿಲ್ಲುವವು. ಆಲುಗಡ್ಡೆಯ ಸಸಿಗಳ ಬೇರು ತುಂಬಾ ಸೂಕ್ಷ್ಮವಾಗಿರುವುದರಿಂದ ಅವುಗಳಿಗೆ ಆಧಾರ ಕೊಡಬೇಕಾಗುತ್ತದೆ. ಮಣ್ಣು ಕಡಿಮೆಯಾಗುವುದರಿಂದ ಆಲುಗಡ್ಡೆಗಳು ಮಣ್ಣಿನ ಮೇಲಿನ ಭಾಗದಲ್ಲಿ ಕಾಣಿಸಿಕೊಂಡರೆ ಅವುಗಳನ್ನು ಮಣ್ಣಿನಿಂದ ತಕ್ಷಣ ಮುಚ್ಚಬೇಕು; ಇಲ್ಲದಿದ್ದರೆ ಮಣ್ಣಿನಿಂದ ಹೊರಗೆ ಬಂದ ಆಲುಗಡ್ಡೆಯ ಭಾಗವು ಹಸಿರಾಗುವುದು. ಸಮಯಕ್ಕೆ ಸರಿಯಾಗಿ ಮಣ್ಣು ಹಾಕುತ್ತಿದ್ದರೆ ಕುಂಡ ಅಥವಾ ಗೋಣಿ ತುಂಬಿದ ನಂತರ ಆಗಾಗ ಕೇವಲ ನೀರು ಅಷ್ಟೇ ಹಾಕುತ್ತಿರಬೇಕು.
೬. ಕೀಟಗಳ ನಿರ್ವಹಣೆ
ಆಲುಗಡ್ಡೆಗಳ ಮೇಲೆ ಸಾಮಾನ್ಯವಾಗಿ ಕೀಟಕಗಳು ಹತ್ತುವುದಿಲ್ಲ; ಆದರೆ ಒಂದು ವಿಶಿಷ್ಟ ರೀತಿಯ ಹುಳು (ಕೊಲೊರೆಡೋ ಪೊಟ್ಯಾಟೊ ಬೀಟಲ್) ಎಂದಾದರೂ ತೊಂದರೆ ಕೊಡಬಹುದು. ಹಳದಿ ಬಣ್ಣದ ಮೊಟ್ಟೆಗಳು ಎಲೆಗಳ ಕೆಳಗಿರುತ್ತವೆ. ಅವುಗಳು ಕಾಣಿಸಿಕೊಂಡರೆ ತಕ್ಷಣ ತೆಗೆದು ನಾಶಪಡಿಸಬೇಕು.
೭. ಆಲುಗಡ್ಡೆಗಳ ಕೊಯ್ಲು
೩-೪ ತಿಂಗಳಲ್ಲಿ ಸಸಿಗಳ ಎಲೆಗಳು ಹಳದಿಯಾಗತೊಡಗುತ್ತವೆ. ಸ್ವಲ್ಪಮಟ್ಟಿಗೆ ಹೂವುಗಳು ಬರುವವು. ಸಸಿಗಳು ಕೆಳಗೆ ಅಡ್ಡ ಬೀಳುವವು. ಇಂತಹ ಸ್ಥಿತಿಯಲ್ಲಿ ಒಂದು ವಾರ ಕಳೆದ ನಂತರ ತಮ್ಮ ಆಲುಗಡ್ಡೆಗಳ ಬೆಳೆಯನ್ನು ತೆಗೆಯುವ ಸಮಯ ಬಂದಿದೆ ಎಂದು ತಿಳಿಯಬೇಕು. ಆ ಸಮಯದಲ್ಲಿ ಆಲುಗಡ್ಡೆಗೆ ನೀರನ್ನು ಹಾಕಬಾರದು. ಆಲುಗಡ್ಡೆಯನ್ನು ಹಚ್ಚಿದ ಕುಂಡ ಅಥವಾ ಗೋಣಿಚೀಲವನ್ನು ನೆರಳಿನಲ್ಲಿ ಖಾಲಿ ಜಾಗದಲ್ಲಿ ತಲೆಕೆಳಗಾಗಿ ಹಾಕಬೇಕು. ಮಣ್ಣಿನೊಳಗಿನಿಂದ ಆಲುಗಡ್ಡೆಗಳನ್ನು ಕೈಯಿಂದ ಹೊರಗೆ ತೆಗೆಯಬೇಕು. ಒಣಗಿದ ಸಸಿಗಳನ್ನು ಕಂಪೋಸ್ಟ ಗೊಬ್ಬರವನ್ನು ತಯಾರಿಸಲು ಉಪಯೋಗಿಸಬೇಕು ಅಥವಾ ಇತರ ಕುಂಡಗಳಲ್ಲಿ ಹೊದಿಕೆಯೆಂದು ಹಾಕಬೇಕು. (‘ಗಿಡಗಳ ಬುಡದಲ್ಲಿ ಕಸಕಡ್ಡಿಗಳನ್ನು ಹರಡುವುದು’, ಇದಕ್ಕೆ ಹೊದಿಕೆ ಎನ್ನುತ್ತಾರೆ. – ಸಂಕಲಕರು) ಕುಂಡದಲ್ಲಿರುವ ಮಣ್ಣನ್ನು ಮರುಬಳಕೆ ಮಾಡುವ ಮೊದಲು ಒಂದು ವಾರದ ವರೆಗೆ ನೆರಳಿನಲ್ಲಿ ಹರಡಬೇಕು.
೮. ಆಲುಗಡ್ಡೆಗಳ ಮರುಕೃಷಿ
ಬಿತ್ತನೆಯಿಂದ ಕೊಯ್ಲಿನವರೆಗಿನ ಅವಧಿಯು ಮೂರರಿಂದ ಮೂರೂವರೆ ತಿಂಗಳು ಮತ್ತು ಮನೆಯಲ್ಲಿ ಆಲುಗಡ್ಡೆಗಳ ಬಳಕೆ ಈ ಎರಡೂ ವಿಷಯಗಳನ್ನು ಗಮನದಲ್ಲಿರಿಸಿ ಪ್ರತಿ ತಿಂಗಳು ಆಲುಗಡ್ಡೆಗಳನ್ನು ನೆಡುತ್ತಿದ್ದರೆ, ಮನೆಯಲ್ಲಿ ಯಾವಾಗಲೂ ಸಾವಯವ ಗೊಬ್ಬರದಲ್ಲಿ ಬೆಳೆದ ಆಲುಗಡ್ಡೆಗಳು ದೊರಕುವವು. ಮೊದಲಿಗೆ ಅಂಗಡಿಯಿಂದ ತಂದಿರುವ ಆಲುಗಡ್ಡೆಗಳನ್ನು ಬಿತ್ತನೆಗಾಗಿ ೨-೩ ಬಾರಿ ಬಳಸಿದರೂ ಸಹ, ನಂತರ ಮಾತ್ರ ಮನೆಯಲ್ಲಿ ಬೆಳೆದ ಆಲುಗಡ್ಡೆಗಳನ್ನೇ ಮರುಕೃಷಿಗಾಗಿ ಬಳಸಬಹುದು.
– ಶ್ರೀ. ರಾಜನ ಲೋಹಗಾಂವಕರ (೧೪.೬.೨೦೨೧)
ಆಲುಗಡ್ಡೆಯ ಕೃಷಿಯ ಪ್ರತ್ಯಕ್ಷಿಕೆ
ಸೂಚನೆ : ವೀಡಿಯೋ ಹಿಂದಿ ಭಾಷೆಯಲ್ಲಿದೆ.