೧. ತಿಥಿ : ಭಾದ್ರಪದ ಶುಕ್ಲ ಪಕ್ಷ ಪಂಚಮಿ
೨. ಋಷಿ : ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಮದಗ್ನಿ ಮತ್ತು ವಸಿಷ್ಠ ಇವರು ಸಪ್ತರ್ಷಿಗಳಾಗಿದ್ದಾರೆ.
೩. ಉದ್ದೇಶ
ಅ. ಯಾವ ಋಷಿಗಳು ತಮ್ಮ ತಪೋಬಲದಿಂದ ಜಗತ್ತಿನಲ್ಲಿರುವ ಮಾನವರ ಮೇಲೆ ಅನಂತ ಉಪಕಾರಗಳನ್ನು ಮಾಡಿದ್ದಾರೆಯೋ, ಮಾನವರ ಜೀವನಕ್ಕೆ ಯೋಗ್ಯ ದಿಶೆಯನ್ನು ಕೊಟ್ಟಿದ್ದಾರೆಯೋ, ಅಂತಹ ಋಷಿಗಳನ್ನು ಈ ದಿನದಂದು ಸ್ಮರಿಸಲಾಗುತ್ತದೆ. – ಪ.ಪೂ. ಪರಶರಾಮ ಪಾಂಡೆ ಮಹಾರಾಜರು, ಸನಾತನ ಆಶ್ರಮ, ದೇವದ, ಪನವೇಲ.
ಆ. ಮಾಸಿಕ ಋತು, ಅಶೌಚ ಮತ್ತು ಸ್ಪರ್ಶಾಸ್ಪರ್ಶದಿಂದ ಸ್ತ್ರೀಯರ ಮೇಲಾಗುವ ಪರಿಣಾಮಗಳು ಈ ವ್ರತದಿಂದ, ಹಾಗೆಯೇ ಗೋಕುಲಾಷ್ಟಮಿಯ ಉಪವಾಸದಿಂದಲೂ ಕಡಿಮೆಯಾಗುತ್ತವೆ. (ಪುರುಷರ ಮೇಲಾಗುವ ಪರಿಣಾಮಗಳು ಕ್ಷೌರಾದಿ ಪ್ರಾಯಶ್ಚಿತ್ತ ಕರ್ಮಗಳಿಂದ ಮತ್ತು ವಾಸ್ತುವಿನ ಮೇಲಾಗುವ ಪರಿಣಾಮಗಳು ಉದಕಶಾಂತಿಯಿಂದ ಕಡಿಮೆಯಾಗುತ್ತವೆ.)
೪. ವ್ರತ ಮಾಡುವ ಪದ್ಧತಿ
ಅ. ಈ ದಿನದಂದು ಸ್ತ್ರೀಯರು ಬೆಳಗ್ಗೆ ಉತ್ತರಣೆಯ ಕಡ್ಡಿಯಿಂದ (ಒಂದು ವನಸ್ಪತಿ) ಹಲ್ಲುಜ್ಜಬೇಕು.
ಆ. ಸ್ನಾನದ ನಂತರ ಪೂಜೆಯ ಮೊದಲು ‘ಮಾಸಿಕ ಋತುಸ್ರಾವದ ಸಮಯದಲ್ಲಿ ತಿಳಿದು ಅಥವಾ ತಿಳಿಯದೇ ಮಾಡಿದ ಸ್ಪರ್ಶಗಳಿಂದ ಯಾವ ದೋಷಗಳು ತಗಲುತ್ತವೆಯೋ, ಅವುಗಳ ನಿವಾರಣೆಗಾಗಿ ಅರುಂಧತಿಯೊಂದಿಗೆ ಸಪ್ತರ್ಷಿಗಳನ್ನು ಪ್ರಸನ್ನಗೊಳಿಸಲು ನಾನು ಈ ವ್ರತವನ್ನು ಮಾಡುತ್ತಿದ್ದೇನೆ’, ಎಂದು ಸಂಕಲ್ಪವನ್ನು ಮಾಡಬೇಕು.
ಇ. ಮಣೆಯ ಮೇಲೆ ಅಕ್ಕಿಯ ಎಂಟು ಗುಡ್ಡೆಗಳನ್ನು ಮಾಡಿ ಅವುಗಳ ಮೇಲೆ ಎಂಟು ಅಡಿಕೆಯನ್ನಿಟ್ಟು ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯರ ಆವಾಹನೆ ಮತ್ತು ಷೋಡಶೋಪಚಾರ ಪೂಜೆಯನ್ನು ಮಾಡಬೇಕು.
ಈ. ಈ ದಿನದಂದು ಗೆಡ್ಡೆಗೆಣಸುಗಳ ಆಹಾರವನ್ನು ತೆಗೆದುಕೊಳ್ಳಬೇಕು ಮತ್ತು ಎತ್ತುಗಳ ಶ್ರಮದಿಂದ ತಯಾರಾದ ಯಾವುದೇ ಆಹಾರವನ್ನು ಸ್ವೀಕರಿಸಬಾರದು ಎಂದು ಹೇಳಲಾಗಿದೆ.
ಉ. ಮರುದಿನ ಕಶ್ಯಪಾದಿ ಸಪ್ತಋಷಿ ಮತ್ತು ಅರುಂಧತಿಯ ವಿಸರ್ಜನೆಯನ್ನು ಮಾಡಬೇಕು.
ಹನ್ನೆರಡು ವರ್ಷಗಳ ನಂತರ ಅಥವಾ ಐವತ್ತನೆಯ ವಯಸ್ಸಿನ ನಂತರ ಈ ವ್ರತದ ಉದ್ಯಾಪನೆ ಮಾಡಬಹುದು. ಉದ್ಯಾಪನೆಯ ನಂತರವೂ ಈ ವ್ರತವನ್ನು ಮುಂದುವರಿಸಬಹುದು.
(ಆಧಾರ : ಸನಾತನ ಸಂಸ್ಥೆ ನಿರ್ಮಿಸಿದ ಗ್ರಂಥ “ಹಬ್ಬ, ಧಾರ್ಮಿಕ ಉತ್ಸವ ಮತ್ತು ವ್ರತಗಳು”)