ಸಾಧಕರೇ, ಮನುಕುಲದ ಉದ್ಧಾರಕ್ಕಾಗಿ ಅವತರಿಸಿದ ಭಗವಂತನ ಬಗ್ಗೆ ಕೃತಜ್ಞತೆಯೆಂದು ಜೀವ ಸವೆಸಿ ಸಾಧನೆಯನ್ನು ಮಾಡಿ !

ಸದ್ಗುರು (ಶ್ರೀ.) ರಾಜೇಂದ್ರ ಶಿಂದೆ

ಇಂದು ಪೃಥ್ವಿಯ ಮೇಲೆ ಸಾಕ್ಷಾತ್ ಭಗವಾನ ವಿಷ್ಣುವು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ರೂಪದಲ್ಲಿ ಅವತರಿಸಿದ್ದಾನೆ. ಪರಾಕಾಷ್ಠೆಯ ಅಧೋಗತಿಯಾಗಿರುವ ಕಲಿಯುಗದ ಮಾನವನಿಗೆ ಇದು ತಿಳಿಯಲು ಕಠಿಣವಾಗಿದೆ. ‘ದೇವರು ಮನೆಗೆ ಬಂದರೂ, ಗುರುತಿಸಲಿಲ್ಲ’ ಎಂಬ ಪ.ಪೂ. ಭಕ್ತರಾಜ ಮಹಾರಾಜರ ಭಜನೆಯ ಸಾಲಿನಂತೆ ನಮ್ಮ ಸ್ಥಿತಿಯಾಗಿದೆ; ಆದುದರಿಂದ ಪರಮ ಕೃಪಾಳು ಭಗವಂತನು ಸಪ್ತರ್ಷಿಗಳು ಬರೆದಿರುವ ಅನೇಕ ಜೀವನಾಡಿಪಟ್ಟಿಗಳ ಮಾಧ್ಯಮದಿಂದ ಈ ರಹಸ್ಯವನ್ನು ಮನುಕುಲಕ್ಕೆ ಅರಿವು ಮಾಡಿಕೊಟ್ಟಿದ್ದಾನೆ.

‘ಭಗವಂತನು ಮಾನವನ ಕಲ್ಯಾಣಕ್ಕಾಗಿ ಪೃಥ್ವಿಯ ಮೇಲೆ ಜನ್ಮ ತಾಳಿದ್ದಾನೆ’, ಎಂಬುದನ್ನು ಸಹ ಭಗವಂತನು ಗೊತ್ತಾಗಲು ಬಿಡುವುದಿಲ್ಲ. ಅದೆಷ್ಟು ಆ ಭಗವಂತನ ಅಹಂಶೂನ್ಯತೆ ! ಎಂದು ವಿಚಾರ ಮಾಡುತ್ತಿದ್ದಾಗ ಭಗವಂತನೇ (ಪರಾತ್ಪರ ಗುರು ಡಾ. ಆಠವಲೆಯವರು) ಮುಂದಿನ ಅಂಶಗಳನ್ನು ಸೂಚಿಸಿದನು. ‘ಮುಂದೆ ಕೊಟ್ಟಿರುವ ಈ ಅಂಶಗಳು, ಅಂದರೆ ಭಗವಂತನ ಕಾರ್ಯದ ಒಂದು ಸಾವಿರ ಕೋಟಿಯ ಒಂದು ಭಾಗ ಸಹ ಪರಿಚಯ ಮಾಡಿಕೊಡುವಷ್ಟಿಲ್ಲ’, ಎಂಬುದರ ಅರಿವಾಗುತ್ತಿದೆ; ಅಂದರೆ ‘ಅವನ ಕಾರ್ಯವು ಎಷ್ಟು ವ್ಯಾಪಕವಾಗಿದೆ !’, ಎಂದು ತಿಳಿದಾಗ ಭಗವಂತನ ಮುಂದೆ ಶರಣಾಗತರಾಗಲು ಸಾಧ್ಯವಾಗುತ್ತದೆ ಮತ್ತು ‘ನಾವು ಕ್ಷುದ್ರರಾಗಿದ್ದೂ ಎಷ್ಟೊಂದು ಅಹಂಕಾರದಿಂದ ವರ್ತಿಸುತ್ತೇವೆ !’, ಎಂಬುದರ ಬಗ್ಗೆ ನಾಚಿಕೆಯಾಗುತ್ತದೆ.

೧. ಅನಂತ ಕೋಟಿ ಬ್ರಹ್ಮಾಂಡನಾಯಕ ಶ್ರೀವಿಷ್ಣುವು ಭೂಮಂಡಲದ ಮೇಲಿನ ಕ್ಷುದ್ರ ಮಾನವನ ಉದ್ಧಾರಕ್ಕಾಗಿ ಪೃಥ್ವಿಯ ಮೇಲೆ ಅವತಾರ ತಾಳುವುದು

ಈ ಅನಂತ ಕೋಟಿ ಬ್ರಹ್ಮಾಂಡಗಳ ವಿಸ್ತಾರದಲ್ಲಿ ಪೃಥ್ವಿಯ ಸ್ಥಾನವು ಅದೆಷ್ಟಿರಬಹುದು ? ಅದು ಒಂದು ಸೂಜಿಯ ಮೇಲ್ಭಾಗದ ಧೂಳಿನ ಕಣದಷ್ಟೂ ಇಲ್ಲ. ಹೀಗಿರುವಾಗ ಇಷ್ಟು ಚಿಕ್ಕ ಪೃಥ್ವಿಯ ಮೇಲಿನ ಕ್ಷುದ್ರ ಮಾನವನ ಉದ್ಧಾರಕ್ಕಾಗಿ ಅನಂತ ಕೋಟಿ ಬ್ರಹ್ಮಾಂಡಗಳ ನಾಯಕನಾದ ಶ್ರೀವಿಷ್ಣು ಸ್ವತಃ ಈ ಭೂಮಂಡಲದ ಮೇಲೆ ಅವತಾರ ತಾಳುತ್ತಾನೆ. ಅವನ ಈ ಪ್ರೀತಿಯ ಬಗ್ಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರೂ, ಅದು ಕಡಿಮೆಯೇ ಆಗುತ್ತದೆ.

೨. ಮನುಷ್ಯನ ಕೃತಘ್ನತೆ

ಮನುಕುಲದ ಉದ್ಧಾರಕ್ಕಾಗಿ ಅನಂತ ಕೋಟಿ ಬ್ರಹ್ಮಾಂಡ ನಾಯಕನು ಈ ಭೂಮಂಡಲದ ಮೇಲೆ ಅವತರಿಸುತ್ತಾನೆ. ಆಗ ಅಜ್ಞಾನಿ ಮನುಷ್ಯನು ಅವನ ಉದ್ಧಾರಕ್ಕಾಗಿ ಅವತರಿಸಿದ ಭಗವಂತನಿಗೆ ಮತ್ತು ಅವನ ಕಾರ್ಯಕ್ಕೆ ತುಂಬಾ ವಿರೋಧಿಸುತ್ತಾನೆ. ಮನುಷ್ಯನಲ್ಲಿ ಅದೆಷ್ಟು ಈ ಕೃತಘ್ನತೆ ! ಅದೆಷ್ಟು ಈ ಅಜ್ಞಾನ !

೩. ಎಂಬತ್ನಾಲ್ಕು ಲಕ್ಷ ಯೋನಿಗಳಲ್ಲಿರುವ ಎಲ್ಲ ಜೀವಗಳ ಯೋಗಕ್ಷೇಮವನ್ನು ನೋಡಿಕೊಳ್ಳುವ ಕೃಪಾಳು ಭಗವಂತ !

ಕೇವಲ ಈ ಪೃಥ್ವಿಯ ವಿಚಾರವನ್ನೇ ಮಾಡಿದರೆ, ಅದರಲ್ಲಿರುವ ಜನಸಂಖ್ಯೆಯು ೭೫೦ ಕೋಟಿಗಿಂತಲೂ ಹೆಚ್ಚಾಗಿದೆ. ೮೪ ಲಕ್ಷ ಯೋನಿಗಳಲ್ಲಿ ಕೋಟಿಗಟ್ಟಲೆ ಜೀವಗಳಿವೆ. ಕೆಲವು ಜೀವಿಗಳನ್ನು ಸೂಕ್ಷ್ಮದರ್ಶಕದಿಂದ (ಮೈಕ್ರೋಸ್ಕೋಪ್) ನೋಡಬೇಕಾಗುತ್ತದೆ. ಭಗವಂತನು ಪ್ರತಿಯೊಂದು ಜೀವದ ಕಾಳಜಿಯನ್ನು ತೆಗೆದುಕೊಳ್ಳುತ್ತಿರುತ್ತಾನೆ. ೮೪ ಲಕ್ಷ ಯೋನಿಗಳಲ್ಲಿರುವ ಅಬ್ಜಗಟ್ಟಲೆ ಜೀವಿಗಳ ಪ್ರತಿಯೊಂದು ಸಮಯದ ಊಟದ, ನಿವಾಸದ ಮತ್ತು ರಕ್ಷಣೆಯ ವ್ಯವಸ್ಥೆಯನ್ನು ಭಗವಂತನೇ ಮಾಡಿಟ್ಟಿದ್ದಾನೆ. ‘ಯಾರಿಗೆ ಯಾವಾಗ ಮತ್ತು ಏನು ತಿನ್ನಲು ಸಿಗುವುದು ?’, ಇದರ ವ್ಯವಸ್ಥೆಯನ್ನು ಭಗವಂತನೇ ಮಾಡಿ ಇಟ್ಟಿರುತ್ತಾನೆ.

೪. ಭಗವಂತನು ಬ್ರಹ್ಮಾಂಡದ ಪ್ರತಿಯೊಂದು ವಿಷಯದ ಕುರಿತು ಉತ್ತಮ ಆಯೋಜನೆಯನ್ನು ಮಾಡಿರುವುದು

ಭಗವಂತನು ಪ್ರತಿಯೊಂದು ಸಜೀವ ಮತ್ತು ನಿರ್ಜೀವ ವಿಷಯದ ಕುರಿತು ಉತ್ಪತ್ತಿ, ಸ್ಥಿತಿ ಮತ್ತು ಲಯ ಇವುಗಳ ಪರಿಪೂರ್ಣ ಆಯೋಜನೆಯನ್ನು ಮಾಡಿರುತ್ತಾನೆ. ಬ್ರಹ್ಮಾಂಡದಲ್ಲಿ ಅನೇಕ ಪೃಥ್ವಿಗಳಿವೆ. ಗ್ರಹ-ನಕ್ಷತ್ರಗಳ ಭ್ರಮಣಕಕ್ಷೆಗಳು ನಿರ್ಧರಿತವಾಗಿವೆ. ‘ಪ್ರತಿ ದಿನ ಸೂರ್ಯ ಮತ್ತು ಚಂದ್ರರು ಉದಯಿಸುವ ಮತ್ತು ಅಸ್ತದ ಸಮಯ ನಿಶ್ಚಿತವಾಗಿದೆ’. ಇಂದಿನಿಂದ ಮುಂದಿನ ಎಷ್ಟೇ ವರ್ಷಗಳವರೆಗೆ ಅಥವಾ ಹಿಂದಿನ ಸಾವಿರಾರು ವರ್ಷಗಳ ಅಧ್ಯಯನವನ್ನು ಮಾಡಿದರೂ, ನಾವು ಚಂದ್ರ ಮತ್ತು ಸೂರ್ಯ ಇವರ ಉದಯ ಮತ್ತು ಅಸ್ತದ ಸಮಯವನ್ನು ನಿಖರವಾಗಿ ಹೇಳಬಹುದು. ಭಗವಂತನ ನಿಯೋಜನೆ ಇಷ್ಟೊಂದು ಉತ್ತಮವಾಗಿದೆ. ಇಂತಹ ಅಸಂಖ್ಯಾತ ಉದಾಹರಣೆಗಳನ್ನು ಕೊಡಬಹುದು.

೫. ಪ್ರತಿಯೊಂದು ವಿಷಯದಲ್ಲಿ ಭಗವಂತನಿಗೆ ಪೂರ್ಣ ನಿಯಂತ್ರಣವಿರುವುದು

ಈ ವಿಸ್ತಾರವಾದ ಬ್ರಹ್ಮಾಂಡದ ಪ್ರತಿಯೊಂದು ವಿಷಯದ ಬಗ್ಗೆ ಭಗವಂತನಿಗೆ ಸಂಪೂರ್ಣ ನಿಯಂತ್ರಣವಿದೆ. ಅನಂತ ಕೋಟಿ ಬ್ರಹ್ಮಾಂಡಗಳಲ್ಲಿರುವ ಪ್ರತಿಯೊಂದು ಬ್ರಹ್ಮಾಂಡದಲ್ಲಿ ಪ್ರಚಂಡ ಆಕಾರದ ಅಸಂಖ್ಯಾತ ಗ್ರಹ ಮತ್ತು ನಕ್ಷತ್ರಗಳು, ಜೀವಸೃಷ್ಟಿ, ಹಾಗೆಯೇ ಸ್ಥೂಲ ಮತ್ತು ಸೂಕ್ಷ್ಮ ಸೃಷ್ಟಿ ಇವುಗಳ ಮೇಲೆ ಭಗವಂತನ ಸಂಪೂರ್ಣ ನಿಯಂತ್ರಣವಿದೆ.

೬. ಭಗವಂತನ ಪರಿಪೂರ್ಣತೆ

ಭಗವಂತನು ನಿರ್ಮಾಣ ಮಾಡಿದ ಪ್ರತಿಯೊಂದು ವಿಷಯವು ಪರಿಪೂರ್ಣವಾಗಿದೆ. ಸೃಷ್ಟಿಯ ನಿರ್ಮಿತಿಯು ಪರಿಪೂರ್ಣವಾಗಿದೆ. ಲಕ್ಷಗಟ್ಟಲೆ ವಿಜ್ಞಾನಿಗಳು ನೂರಾರು ವರ್ಷಗಳಿಂದ ಮನುಷ್ಯ ಶರೀರದ ಅಧ್ಯಯನವನ್ನು ಮಾಡುತ್ತಿದ್ದಾರೆ; ಆದರೆ ‘ಮನುಷ್ಯನ ಶರೀರ, ಮನಸ್ಸು ಮತ್ತು ಬುದ್ಧಿ ಇವುಗಳ ಕಾರ್ಯವು ಹೇಗೆ ನಡೆಯುತ್ತದೆ ?’, ಎಂಬುದನ್ನು ತಿಳಿದುಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಅವರು ಯಂತ್ರಮಾನವನನ್ನು ಸಿದ್ಧಗೊಳಿಸಲು ಪ್ರಯತ್ನಿಸಿದರು; ಆದರೆ ಎಲುಬು-ಮೂಳೆಗಳಿರುವ, ಮನಸ್ಸು ಮತ್ತು ಬುದ್ಧಿ ಇರುವ ಮನುಷ್ಯನನ್ನು ಸಿದ್ಧಗೊಳಿಸಲು ಅವರಿಂದ ಸಾಧ್ಯವಾಗಲಿಲ್ಲ. ಮನುಷ್ಯನ ಮನಸ್ಸಿನ ಸುಳಿವನ್ನು ಕಂಡುಹಿಡಿಯಲು ಇದುವರೆಗೂ ಯಾರಿಂದಲೂ ಆಗಲಿಲ್ಲ, ಅದು ಅಷ್ಟೊಂದು ವೈಶಿಷ್ಟ್ಯಪೂರ್ಣ ಮತ್ತು ಪರಿಪೂರ್ಣವಾಗಿದೆ. ಮನುಷ್ಯನ ಮೆದುಳಿನ ಕಾರ್ಯವು ಕಠಿಣ ಮತ್ತು ಪರಿಪೂರ್ಣವಾಗಿದೆ. ಮೆದುಳಿನ ರಚನೆ, ಕಾರ್ಯ, ಹಾಗೆಯೇ ‘ಅದರ ಕ್ಷಮತೆ ಎಷ್ಟಿದೆ ?’, ಎಂಬುದರ ಸುಳಿವು ವಿಜ್ಞಾನಿಗಳಿಗೆ ಗೊತ್ತಾಗಲಿಲ್ಲ.  ೬ ಋತುಗಳು ಆಯಾ ಸಮಯದಲ್ಲಿ ಕಾರ್ಯನಿರತವಾಗುತ್ತವೆ. ಪ್ರತಿಯೊಂದು ಸ್ಥಳದಲ್ಲಿನ ಋತುಗಳ ಚಕ್ರವು ವರ್ಷಗಟ್ಟಲೆ ಹಾಗೆಯೇ ನಡೆಯುತ್ತದೆ. ಇಂತಹ ಈ ಜೀವಸೃಷ್ಟಿಯನ್ನು ಪ್ರಾಣಕ್ಕಿಂತಲೂ ಹೆಚ್ಚು ಪ್ರೀತಿಸುವ ಭಗವಂತನ ಬಗ್ಗೆ ಎಷ್ಟು ಪ್ರೀತಿ ಎನಿಸಬೇಕು !

೭. ವಿವಿಧ ಪ್ರಕಾರದ ಗಿಡಗಳನ್ನು, ಹೂವುಗಳನ್ನು ಮತ್ತು ಹಣ್ಣುಗಳನ್ನು ಸಿದ್ಧಪಡಿಸುವ ಭಗವಂತನ ಕಲಾತ್ಮಕತೆ !

ಭಗವಂತನು ಅನೇಕ ಪ್ರಕಾರದ ಗಿಡಗಳನ್ನು ನಿರ್ಮಾಣ ಮಾಡಿದ್ದಾನೆ. ಅವುಗಳಿಗೆ ವಿವಿಧ ಆಕಾರಗಳಿವೆ. ಆ ಅನೇಕ ಪ್ರಕಾರದ ಗಿಡಗಳಲ್ಲಿ ಅನೇಕ ಪ್ರಕಾರದ, ವಿವಿಧ ಆಕಾರಗಳ ಬಣ್ಣಬಣ್ಣದ ಎಲೆಗಳು, ಹೂವುಗಳು ಮತ್ತು ಹಣ್ಣುಗಳು ಬರುತ್ತವೆ. ಅವುಗಳಲ್ಲಿ ಅನೇಕ ವಿಧದ ಪರಿಮಳವೂ ಇರುತ್ತವೆ. ಪ್ರತಿಯೊಂದು ಹಣ್ಣುಗಳ ರುಚಿಯು ಬೇರೆ ಇರುತ್ತದೆ.

ಪ್ರಾರ್ಥನೆ

‘ಇಂತಹ ಪರಮ ದಯಾಳು, ಪರಮ ಕೃಪಾಳು, ಸರ್ವಶಕ್ತಿವಂತ, ಸರ್ವಜ್ಞ ಮತ್ತು ಭಕ್ತವತ್ಸಲನಾದ ಭಗವಂತನ ಚರಣಗಳಲ್ಲಿ ಒಂದಾಗಲು ಮೈಮರೆತು ತೀವ್ರ ಸಾಧನೆಯನ್ನು ಮಾಡುವ ಬುದ್ಧಿಯು ಎಲ್ಲರಿಗೂ ಬರಲಿ, ಎಂದು ಶ್ರೀವಿಷ್ಣುವಿನ ಅವತಾರವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ ಇವರ ಚರಣಗಳಲ್ಲಿ ಶರಣಾಗತಭಾವದಿಂದ ಪ್ರಾರ್ಥನೆಯನ್ನು ಮಾಡುತ್ತೇನೆ’.

– (ಸದ್ಗುರು) ಶ್ರೀ. ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧೦.೭.೨೦೨೧)

Leave a Comment