ಹನುಮಂತನ ಜೀವನವು ಅವನಿಗಾಗಿ ಇರಲೇ ಇಲ್ಲ. ರಾಮಸೇವೆಯೇ ಹನುಮಂತನ ಜೀವನವಾಗಿತ್ತು. ಸ್ವಂತಕ್ಕಾಗಿ ಅವನಿಗೆ ಯಾವುದರ ಆವಶ್ಯಕತೆಯೂ ಇರಲಿಲ್ಲ. ಕೇವಲ ಪ್ರಭು ಶ್ರೀರಾಮನ ಸೇವೆ ! ಕೇವಲ ಅವರ ದಾಸ್ಯ ! ಕೇವಲ ಮತ್ತು ಕೇವಲ ಅದಕ್ಕಾಗಿಯೇ ಹನುಮಂತನ ಅಂತಃಕರಣವು ತಳಮಳಿಸುತ್ತಿತ್ತು. ಈ ಬಗ್ಗೆ ಸಾಕ್ಷಾತ ಪ್ರಭು ಶ್ರೀರಾಮ ಹೇಳುತ್ತಾರೆ, “ಸುಗ್ರೀವ ಮತ್ತು ವಿಭೀಷಣರ ದೃಷ್ಟಿ ಸಿಂಹಾಸನದ ಮೇಲಿತ್ತು. ಅದಕ್ಕಾಗಿ ಅವರಿಗೆ ನನ್ನ ಸಹಾಯ ಬೇಕಾಗಿತ್ತು; ಆದುದರಿಂದ ಅವರು ನನಗೆ ಸಹಕರಿಸಿದರು; ಆದರೆ ಹನುಮಂತನ ವಿಷಯದಲ್ಲಿ ಹಾಗಿರಲಿಲ್ಲ. ಕೇವಲ ‘ರಾಮದಾಸ್ಯ’ವೇ ಹನುಮಂತನ ಉತ್ಕಟ ಭಕ್ತಿಯಾಗಿತ್ತು”.
ಅತಿ ಪ್ರಚಂಡ ಶಕ್ತಿ ಸಂಪನ್ನ, ಸದ್ಗುಣಗಳಿಗೆ ಆಶ್ರಯಸ್ಥಾನನಾದ, ಸಾಕ್ಷಾತ ನಮ್ರತೆಯ ಪ್ರತೀಕನಾದ ಈ ಹನುಮಂತನು ರಾಜರ ರಾಜನಾಗಬಹುದಿತ್ತು. ತುಂಬ ಸುಲಭವಾಗಿ ಅವನು ಸಾಮ್ರಾಟನಾಗಬಹುದಿತ್ತು, ಆದರೂ ಹನುಮಂತನು ವೈಭವಶಾಲಿ ಸಾಮ್ರಾಟನಾಗಲಿಲ್ಲ. ಎಲ್ಲದರ ತ್ಯಾಗ ಮಾಡಿ ಮತ್ತು ಅವನು ಪ್ರಭು ಶ್ರೀರಾಮನ ದಾಸನಾಗಿ ಜೀವನವನ್ನು ಕಳೆದನು. ಅವನು ಶ್ರೀರಾಮನ ದಾಸ್ಯವನ್ನು ಸ್ವೀಕರಿಸಿದನು. ಅದಕ್ಕೆ ಕೇವಲ ಒಂದೇ ಕಾರಣವೆಂದರೆ ಪ್ರಭು ಶ್ರೀರಾಮನ ಮೇಲಿದ್ದ ಸೀಮಾತೀತ ಭಕ್ತಿ. ಪ್ರಭು ಶ್ರೀರಾಮನೇ ಅವನ ‘ಪ್ರಾಣ’ವಾಗಿದ್ದರು.
ಇಂತಹ ಈ ಅಸೀಮ, ಪರಮಭಕ್ತನಿಗೆ ಸಾಕ್ಷಾತ್ ಶ್ರೀವಿಷ್ಣುವಿನ ಅವತಾರನಾಗಿರುವ ಶ್ರೀರಾಮನಿಂದ ಸಹಜವಾಗಿ ಮೋಕ್ಷ ಸಿಗುತ್ತಿದ್ದರೂ, ಸಾಕ್ಷಾತ್ ಪ್ರಭು ಶ್ರೀರಾಮನು ಅವನಿಗೆ ಮೋಕ್ಷವನ್ನು ಕೊಡಲು ಸಿದ್ಧನಾಗಿದ್ದರೂ, ಯುಗಯುಗಾಂತರದ ಕೊನೆಯವರೆಗೂ ಹನುಮಂತನು ಶ್ರೀರಾಮನ ದಾಸನಾಗಿ ಇರುವುದನ್ನು ಸ್ವೀಕರಿಸಿದ್ದಾನೆ. ಹನುಮಂತನ ದಾಸ್ಯಭಕ್ತಿಯು ಪರಮೋಚ್ಚ, ಅವರ್ಣನೀಯ ಮತ್ತು ಅನಾಕಲನೀಯವಾಗಿದೆ, ಹಾಗೆಯೇ ಇಂದು ಸಹಸ್ರಾರು ವರ್ಷಗಳಿಂದ ಜನಸಮುದಾಯದ ಹೃದಯದಲ್ಲಿ ಶ್ರೀರಾಮನಷ್ಟೇ ಗೌರವದ ಸ್ಥಾನವು ಹನುಮಂತನಿಗೂ ಲಭಿಸಿದೆ.