ಸಾಧನಾವೃದ್ಧಿ ಸತ್ಸಂಗ (10)

ಇಂದಿನ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನೆ ಪ್ರಕ್ರಿಯೆಯ ಪುನರಾವರ್ತನೆ ಹಾಗೂ ಅಭ್ಯಾಸ ಮಾಡಲಿದ್ದೇವೆ. ನಾವು ಇಂದಿನವರೆಗೂ ಪ್ರಕ್ರಿಯೆ ಅಂತರ್ಗತವಾಗಿ ಅ-೧, ಅ-೨, ಅ-೩, ಆ -೧, ಆ-೨, ಹಾಗೂ ಇ-೨ ಸ್ವಯಂಸೂಚನೆಯ ಪದ್ಧತಿಗಳ ಅಭ್ಯಾಸ ಮಾಡಿದೆವು. ಸ್ವಯಂಸೂಚನೆ ಅಂದರೆ ಒಂದು ರೀತಿ ನಮ್ಮ ಜನ್ಮಜನ್ಮಾಂತರಗಳ ಸ್ವಭಾವದೋಷ ಹಾಗೂ ಅಹಂಗಳೆಂಬ ರೋಗಗಳಿಗಾಗಿ ಇರುವಂತಹ ಔಷಧಿಯಾಗಿದೆ.

ಅ. ಸ್ವಯಂಸೂಚನೆಯ ಮಹತ್ವ

ನಮ್ಮ ಅವಸ್ಥೆಯು ಎಷ್ಟೋ ಸಲ ಹೇಗಿರುತ್ತದೆ ಎಂದರೆ ನಮಗೆ ತಪ್ಪು ಮಾಡಲು ಇಚ್ಛೆಯಿರುವುದಿಲ್ಲ ಹಾಗೂ ಸರಿಯಾಗಿ ವರ್ತಿಸಲು ಸಹ ಆಗುವುದಿಲ್ಲ. ಉದಾ: ಸಿಟ್ಟು ಅಥವಾ ಕಿರಿಕಿರಿಯಾಗುವುದರಿಂದ ನಮಗೇ ಹಾನಿಯಾಗುತ್ತದೆ, ಎಂಬುದು ನಮಗೆ ತಿಳಿದಿರುತ್ತದೆ; ಆದರೂ ನಮಗೆ ನಮ್ಮ ಸಿಟ್ಟಿನ ಮೇಲೆ ನಿಯಂತ್ರಣವಿರುವುದಿಲ್ಲ. ನಮಗೆ ಮನೆ ಅಚ್ಚುಕಟ್ಟಾಗಿರಬೇಕು ಎಂದು ಇರುತ್ತದೆ; ಆದರೆ ನಮಗೆ ಹಾಗೆ ಮಾಡಲು ಆಗುವುದಿಲ್ಲ. ಹೀಗೆ ನಾವು ಅನುಭವಿಸಿದ್ದೇವಲ್ಲವೇ? ಇದಕ್ಕೆ ಕಾರಣವೆಂದರೆ ತಪ್ಪಾಗಲು ಕಾರಣವಾಗಿರುವ ಸ್ವಭಾವದೋಷದ ಸಂಸ್ಕಾರವು ನಮ್ಮ ಮನಸ್ಸಿನ ಮೇಲೆ ಪ್ರಬಲವಾಗಿರುತ್ತದೆ. ಸ್ವಯಂಸೂಚನೆಯಿಂದ ನಮಗೆ ಯಾವುದಾದರೂ ಒಂದು ಪ್ರಸಂಗದಲ್ಲಿ ಹೇಗೆ ನಡೆದುಕೊಳ್ಳಬೇಕು, ಸರಿಯಾದ ವಿಚಾರಪ್ರಕ್ರಿಯೆ ಏನು ಇಟ್ಟುಕೊಳ್ಳಬೇಕು, ಎಂಬುದು ತಿಳಿಯುತ್ತದೆ ಹಾಗೂ ಸ್ವಭಾವದೋಷ ನಿರ್ಮೂಲನೆಯಾಗತೊಡಗುತ್ತದೆ.

 ಸ್ವಯಂಸೂಚನೆಯಿಂದ ಅಂತರ್ಮನಸ್ಸಿನಲ್ಲಿರುವ ಸ್ವಭಾವದೋಷದ ಕೇಂದ್ರವು ನಾಶವಾಗುವುದು

ಮನಸ್ಸಿನಲ್ಲಿ ಬಾಹ್ಯಮನಸ್ಸು ಹಾಗೂ ಅಂತರ್ಮನಸ್ಸು ಎಂಬ ೨ ಭಾಗಗಳಿರುತ್ತವೆ. ಒಟ್ಟು ಮನಸ್ಸಿನಲ್ಲಿ ಬಾಹ್ಯಮನಸ್ಸಿನ ಭಾಗವು ಕೇವಲ ಶೇಕಡ ೧೦, ಹಾಗೂ ಅಂತರ್ಮನಸ್ಸು ಶೇಕಡ ೯೦ರಷ್ಟು ಇರುತ್ತದೆ. ಆ ಅಂತರ್ಮನಸ್ಸಿನಲ್ಲಿ ಇಚ್ಛೆ, ಇಷ್ಟಾನಿಷ್ಟಗಳು, ಕೊಡ-ಕೊಳ್ಳುವ ಲೆಕ್ಕ, ಕೌಶಲ್ಯ, ಸ್ವಭಾವದೋಷದ ಕೇಂದ್ರಗಳಿರುತ್ತದೆ. ನಮ್ಮ ಅಂತರ್ಮನಸ್ಸಿನಲ್ಲಿ ಕೇವಲ ಈ ಜನ್ಮದ ಮಾತ್ರವಲ್ಲ ಜನ್ಮಜನ್ಮಾಂತರಗಳ ಕೇಂದ್ರವಿರುತ್ತದೆ. ಸ್ವಯಂಸೂಚನೆಯ ಮಾಧ್ಯಮದಿಂದ ಈ ಕೇಂದ್ರವು ನಾಶವಾಗಲು ಆಧ್ಯಾತ್ಮಿಕ ಊರ್ಜೆ (ಶಕ್ತಿ) ಸಿಗುತ್ತದೆ ಹಾಗೂ ವ್ಯಕ್ತಿಯ ಜೀವನವು ಹೆಚ್ಚು ಆನಂದಮಯ, ಸಕಾರಾತ್ಮಕ ಹಾಗೂ ಸ್ಥಿರವಾಗುತ್ತದೆ; ಆದ್ದರಿಂದ ನಾವೆಲ್ಲರೂ ಸ್ವಯಂಸೂಚನೆಯ ಸತ್ರಗಳನ್ನು ಮಾಡಬೇಕು ಹಾಗೂ ತಖ್ತೆಯಲ್ಲಿ ತಪ್ಪುಗಳ ಎದುರಿಗೆ ಸ್ವಯಂಸೂಚನೆಯನ್ನು ಬರೆಯಬೇಕಾಗಿದೆ.

ಇಂದು ನಾವು ಪುನರಾವರ್ತನೆಯನ್ನು ಮಾಡುವಾಗ ಇಂದಿನವರೆಗೂ ಸ್ವಯಂಸೂಚನೆಯ ಪದ್ಧತಿಯನ್ನು ಅರಿತುಕೊಂಡೆವೋ, ಅದನ್ನು ಸರಿಯಾಗಿ ಯಾವಾಗ ಬಳಸಬೇಕು? ಯಾವ ಸ್ವರೂಪದ ಪ್ರಸಂಗಕ್ಕಾಗಿ ಯಾವ ರೀತಿಯ ಸ್ವಯಂಸೂಚನೆಯ ಪದ್ಧತಿಯನ್ನು ಬಳಸಬೇಕು? ಎಂಬುದನ್ನು ಅರ್ಥ ಮಾಡಿಕೊಳ್ಳೋಣ.

೧. ‘ಅ’ ಹಾಗೂ ‘ಆ’ ಸ್ವಯಂಸೂಚನೆ ಪದ್ಧತಿಗಳ ನಡುವಿನ ವ್ಯತ್ಯಾಸ

ತಪ್ಪಾಗಿದ್ದರೆ ಮೊಟ್ಟಮೊದಲು ಆ ತಪ್ಪು ತಮ್ಮ ಸ್ವಭಾವದೋಷದಿಂದ ಆಗಿದೆಯೇ ಅಥವಾ ಬೇರೆಯವರ ಸ್ವಭಾವದೋಷದಿಂದ ಆಗಿದೆಯೇ, ಎಂಬ ಬಗ್ಗೆ ಚಿಂತನೆ ಮಾಡಿರಿ. ಒಂದು ವೇಳೆ ತಪ್ಪಾಗಲು ತಮ್ಮ ಸ್ವಭಾವದೋಷವೇ ಪ್ರಮುಖವಾಗಿ ಕಾರಣವಾಗಿದ್ದರೆ, ಆಗ ‘ಅ’ ಪದ್ಧತಿಯ ಸ್ವಯಂಸೂಚನೆಯನ್ನು ತೆಗೆದುಕೊಳ್ಳಿರಿ ಹಾಗೂ ತಮಗೆ ಬರುವ ಒತ್ತಡದ ಹಿಂದೆ ಬೇರೆಯವರ ಸ್ವಭಾವದೋಷ ಅಥವಾ ಪರಿಸ್ಥಿತಿಯು ಕಾರಣವಾಗಿದ್ದರೆ, ಆಗ ‘ಆ’ ಪದ್ಧತಿಯ ಸ್ವಯಂಸೂಚನೆಯನ್ನು ನೀಡಿರಿ.

ಅ. ಉದಾಹರಣೆಗೆ, ‘ಎಷ್ಟೋ ಸಲ ವಿದ್ಯುತ್ ಅಂದರೆ ಕರೆಂಟ್ ಹೋಗುವುದರಿಂದ ನನಗೆ ಕಿರಿಕಿರಿಯಾಯಿತು, ಎಂಬ ಪ್ರಸಂಗ ಬರುತ್ತದೆ. ಈ ಪ್ರಸಂಗದಲ್ಲಿ ಕಿರಿಕಿರಿಯಾಗುವುದರ ಹಿಂದೆ ಪ್ರಮುಖವಾಗಿ ಪರಿಸ್ಥಿತಿ ಸ್ವೀಕರಿಸದೆ ಇರುವುದು ಅಥವಾ ಸಂಯಮದ ಅಭಾವ ಈ ಸ್ವಭಾವದೋಷಗಳು ಕಾರಣವಾಗಿವೆ. ಇದು ತಮ್ಮ ಸ್ವಭಾವದೋಷವಾಗಿರುವುದರಿಂದ ಈ ಪ್ರಸಂಗದಲ್ಲಿ ‘ಅ’ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು.

ಒಂದು ವೇಳೆ ‘ಮನೆಯಲ್ಲಿ ಕರೆಂಟ್ ಹೋಗಿದ್ದಕ್ಕೆ ದೂರು ನೀಡಿದರೂ ವಿದ್ಯುತ್ ಇಲಾಖೆಯ ಅಧಿಕಾರಿಗಳು ಅದರ ನೋಂದಣಿ ಮಾಡಿಕೊಳ್ಳಲಿಲ್ಲ ಎಂಬುದಕ್ಕೆ ಕಿರಿಕಿರಿಯಾಗುತ್ತದೆ. ಈ ಪ್ರಸಂಗದಲ್ಲಿ ಬೇರೆಯವರು ನಮ್ಮ ಸಮಸ್ಯೆಯನ್ನು ಬಗೆಹರಿಸುವುದಿಲ್ಲ ಎಂಬುದಕ್ಕಾಗಿ ನಮಗೆ ಕಿರಿಕಿರಿಯಾಗುತ್ತದೆ; ಅಂದರೆ ನಮ್ಮ ಕಿರಿಕಿರಿಯಾಗುವುದರ ಹಿಂದೆ ಪ್ರಮುಖವಾಗಿ ಬೇರೆ ವ್ಯಕ್ತಿಯ ಸ್ವಭಾವದೋಷ ಕಾರಣವಾಗಿದೆ. ಆದ್ದರಿಂದ ಈ ಪ್ರಸಂಗದಲ್ಲಿ ‘ಆ’ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು.

೨. ‘ಆ’ ಸ್ವಯಂಸೂಚನೆಯ ಪದ್ಧತಿಯಲ್ಲಿ ೨ ಉಪಪ್ರಕಾರಗಳಿವೆ

ಆ-೧ ಹಾಗೂ ಆ-೨. ಯಾವಾಗ ಬೇರೆಯವರ ಸ್ವಭಾವದೋಷ ಅಥವಾ ಪರಿಸ್ಥಿತಿಯನ್ನು ಬದಲಾಯಿಸಲು ಸಾಧ್ಯವಿದೆಯೋ, ಆಗ ಆ- ೧ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು ಹಾಗೂ ಯಾವಾಗ ಪರಿಸ್ಥಿತಿಯನ್ನು ಬದಲಾಯಿಸಲು ಅಥವಾ ಬೇರೆಯವರ ಸ್ವಭಾವದೋಷ ಬದಲಾಯಿಸಲು ಸಾಧ್ಯವಾಗುವುದಿಲ್ಲವೋ, ಆಗ ಆ-೨ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು.

ಉದಾಹರಣೆಗೆ, ‘ಕಿರಿಯ ಮಗ ರವಿ ಮೊಬೈಲ್ ನೋಡಲು ಹಠ ಹಿಡಿಯುತ್ತಿದ್ದದರಿಂದ ನಾನು ಜೋರಾಗಿ ಗದರಿದೆ’, ಎಂಬಂತಹ ತಪ್ಪು ಇದೆ. ಈ ಪ್ರಸಂಗದಲ್ಲಿ ನಮಗೆ ಸಿಟ್ಟು ಬರುವುದರ ಹಿಂದೆ ಪ್ರಮುಖವಾಗಿ ಕಿರಿಯ ಮಗನು ತಪ್ಪಾದ ವಿಷಯದ ಬಗ್ಗೆ ಹಠ ಹಿಡಿದಿದ್ದು ಕಾರಣವಾಗಿದೆ. ನಮ್ಮ ಮಕ್ಕಳ ಸ್ವಭಾವದೋಷವನ್ನು ಬದಲಾಯಿಸಲು ಅಥವಾ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸುವುದು ನಮ್ಮ ಕೈಯ್ಯಲ್ಲಿರುವುದರಿಂದ ಅಂತಹ ಪರಿಸ್ಥಿತಿಯಲ್ಲಿ ಆ-೧ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬಹುದು. ಪೋಷಕರು-ಮಕ್ಕಳು, ಶಿಕ್ಷಕರು-ವಿದ್ಯಾರ್ಥಿಗಳು, ಹಾಗೂ ಅಧಿಕಾರಿ-ಸಿಬ್ಬಂದಿವರ್ಗದ ಸಂದರ್ಭದಲ್ಲಿ ಅವರ ಸ್ವಭಾವದೋಷಗಳನ್ನು ಬದಲಾಯಿಸಲು ಆ-೧ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬಹುದು. ಆ-೧ ಸ್ವಯಂಸೂಚನೆಯನ್ನು ಬೇರೆಯವರಲ್ಲಿ ಬದಲಾವಣೆಯನ್ನು ತರಲಿಕ್ಕಾಗಿ ಇದೆಯಾದರೂ ಪ್ರಕ್ರಿಯೆಯ ಉದ್ದೇಶ ತಮ್ಮಲ್ಲಿ ಬದಲಾಯಿಸಲಿಕ್ಕಾಗಿಯೇ ಇರಬೇಕು.

‘ಅಡುಗೆ ಮಾಡುವ ವಿಷಯದಲ್ಲಿ ಅತ್ತೆಯವರು ತುಂಬಾ ಸೂಚನೆಗಳನ್ನು ನೀಡುತ್ತಿದ್ದರೆ ನನಗೆ ಕಿರಿಕಿರಿಯಾಯಿತು’, ಎಂಬ ಒಂದು ಪ್ರಸಂಗವಿದೆ. ಈ ಪ್ರಸಂಗದಲ್ಲಿ ನಾವು ಅತ್ತೆಯವರಿಗೆ ಏನೂ ಹೇಳಲು ಸಾಧ್ಯವಾಗುವುದಿಲ್ಲ ಅಥವಾ ಅವರಲ್ಲಿ ಬದಲಾವಣೆ ತರುವಂತಹ ಸ್ಥಿತಿಯೂ ಇರುವುದಿಲ್ಲ. ಅಂತಹ ಸಮಯದಲ್ಲಿ ಆ-೨ ಪದ್ಧತಿಯಂತೆ ಸ್ವಯಂಸೂಚನೆ ನೀಡಿರಿ.

೩. ಅ-೧, ಅ-೨, ಹಾಗೂ ಅ-೩ ಸ್ವಯಂಸೂಚನೆಯ ಪದ್ಧತಿ

‘ಅ’ ಸ್ವಯಂಸೂಚನೆಯ ಪದ್ಧತಿಯಲ್ಲಿ ಮತ್ತೆ ೩ ಉಪಪ್ರಕಾರಗಳಿವೆ – ಅ-೧, ಅ-೨ ಹಾಗೂ ಅ-೩. ನಮ್ಮಿಂದ ಆಗುವ ಅಯೋಗ್ಯ ಕೃತಿ, ನಮ್ಮ ಮನಸ್ಸಿಗೆ ಬರುವ ಅಯೋಗ್ಯ ವಿಚಾರ ಹಾಗೂ ಅಯೋಗ್ಯ ಭಾವನೆಗಳಿಗೋಸ್ಕರ ‘ಅ-೧’ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಬೇಕು. ಒಂದು ವೇಳೆ ೧-೨ ನಿಮಿಷಗಳಿಗಿಂತ ಕಡಿಮೆ ಸಮಯಮಿತಿಯ ಪ್ರಸಂಗಗಳಲ್ಲಿ ನಮ್ಮಿಂದ ಅಯೋಗ್ಯ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದ್ದರೆ, ಆಗ ‘ಅ-೨’ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಬೇಕು. ಒಂದು ವೇಳೆ ಪ್ರಸಂಗವನ್ನು ಎದುರಿಸಲು ಒತ್ತಡವೆನಿಸುತ್ತಿದ್ದರೆ, ಆಗ ‘ಅ-೩’ ಪದ್ಧತಿಯಂತೆ ಸ್ವಯಂಸೂಚನೆ ನೀಡಿರಿ. ಉದಾ : ಸಂದರ್ಶನಕ್ಕೆ ಹೋಗುವುದು, ಎಲ್ಲಾದರೂ ಹೋಗಿ ಭಾಷಣ ನೀಡುವುದು, ಬ್ಯಾಂಕಿಗೆ ಒಬ್ಬರೇ ಹೋಗುವುದು, ಕಛೇರಿಯಲ್ಲಿ ಹಿರಿಯ ಅಧಿಕಾರಿಗಳೊಂದಿಗೆ ಅಥವಾ ಯಾರಾದರೂ ಬಂಧುಬಳಗದವರೊಂದಿಗೆ ಮಾತನಾಡಬೇಕೆಂದರೆ ಒತ್ತಡ ಬರುತ್ತಿದ್ದರೆ ಆಗ ‘ಅ-೩’ ಪದ್ಧತಿಯಂತೆ ಸ್ವಯಂಸೂಚನೆ ನೀಡಿ ಪ್ರಸಂಗದ ಅಭ್ಯಾಸ ಮಾಡಬೇಕು. ಯಾವಾಗ ನಮಗೆ ಪ್ರತಿಕ್ರಿಯೆಗಳು ಬರುತ್ತದೋ ಆಗ ಅ-೨ ಪದ್ಧತಿಯಂತೆ ಸ್ವಯಂಸೂಚನೆ ನೀಡಿರಿ. ಉದಾ: “ನಾನು ಚೆನ್ನಾಗಿ ಅಡುಗೆ ಮಾಡಿದೆ; ಆದರೆ ಮನೆಯಲ್ಲಿ ಯಾರೂ ಕೂಡ ಅದನ್ನು ಹೊಗಳಲಿಲ್ಲ, ಆದ್ದರಿಂದ ‘ಯಾರಿಗೂ ನನ್ನ ಕಷ್ಟಗಳ ಬೆಲೆಯಿಲ್ಲ, ಎಂದು ವಿಚಾರ ಬಂತು” ಎಂಬಂತಹ ಪ್ರಸಂಗವಿದೆ. ಅದರಲ್ಲಿ ನಾವು ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿರಬಹುದು ಅಥವಾ ಮನಸ್ಸಿನೊಳಗೆ ಆ ರೀತಿಯ ವಿಚಾರ ಬಂದಿರಬಹುದು, ಆಗ ‘ಅ-೨’ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು.

ನಮ್ಮಿಂದ ಯಾವುದಾದರೂ ಒಂದು ಅಯೋಗ್ಯ ಕೃತಿಯಾದಾಗ, ಅಯೋಗ್ಯ ವಿಚಾರ ಅಥವಾ ಅಯೋಗ್ಯ ಭಾವನೆ ಉಮ್ಮಳಿಸಿ ಬರುವಾಗ ‘ಅ-೧’ ಪದ್ಧತಿಯಂತೆ ಸ್ವಯಂಸೂಚನೆ ನೀಡಬೇಕು.

೪. ಯಾವ ಸ್ವಯಂಸೂಚನೆಯ ಪದ್ಧತಿ ಯಾವಾಗ ಬಳಸಬೇಕು ?

 

ತಪ್ಪಾದ ಬಳಿಕ ಮೊಟ್ಟಮೊದಲು ಅದು ತಮ್ಮಲ್ಲಿನ ಸ್ವಭಾವದೋಷದಿಂದ ಆಯಿತೇ ಅಥವಾ ಆ ರೀತಿಯ ತಪ್ಪಾಗಲು ಬೇರೆ ವ್ಯಕ್ತಿಯ ಸ್ವಭಾವದೋಷ ಅಥವ ಪರಿಸ್ಥಿತಿ ಕಾರಣವಾಗಿದೆಯೇ, ಎಂಬ ಬಗ್ಗೆ ಚಿಂತನೆ ಮಾಡಿರಿ. ಒಂದು ವೇಳೆ ತಪ್ಪಿಗೆ ತಮ್ಮಲ್ಲಿರುವ ಸ್ವಭಾವದೋಷವೇ ಕಾರಣವಾಗಿದ್ದರೆ, ಆಗ ‘ಅ’ ಪದ್ಧತಿಯ ಸ್ವಯಂಸೂಚನೆಯನ್ನು ನೀಡಬೇಕು ಹಾಗೂ ತಮಗಾಗುತ್ತಿರುವ ಒತ್ತಡಕ್ಕೆ ಬೇರೆ ವ್ಯಕ್ತಿಯ ಸ್ವಭಾವದೋಷ ಅಥವಾ ಪರಿಸ್ಥಿತಿಯು ಕಾರಣವಾಗಿದ್ದರೆ ಆಗ ‘ಆ’ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಿರಿ.

‘ಅ’ ಸ್ವಯಂಸೂಚನೆಯ ಪದ್ಧತಿಯಲ್ಲಿ ಇನ್ನೂ ೩ ಉಪಪ್ರಕಾರಗಳನ್ನು ನೋಡೋಣ

ಯಾವಾಗ ಯಾವುದಾದರೂ ಅಯೋಗ್ಯ ಕೃತಿಯಾದಾಗ ಅಥವಾ ಮನಸ್ಸಿನಲ್ಲಿ ತಪ್ಪಾದ ವಿಚಾರ ಬರುತ್ತದೆ ಅಥವಾ ತಪ್ಪಾದ ಭಾವನೆಗಳು ಮೂಡುತ್ತದೆ ಆಗ ಅ-೧ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಬೇಕು.

೧-೨ ನಿಮಿಷಗಳಿಗಿಂತ ಕಡಿಮೆ ಕಾಲಾವಧಿಯಲ್ಲಾಗುವ ಪ್ರಸಂಗಗಳಲ್ಲಿ ಮನಸ್ಸಿನಲ್ಲಿ ಪ್ರತಿಕ್ರಿಯೆ ಬರುತ್ತಿದ್ದರೆ, ಆಗ ಅ-೨ ಪದ್ಧತಿಯಂತೆ ಸ್ವಯಂಸೂಚನೆ ನೀಡಬೇಕು. ಈ ಸಮಯಮಿತಿಯು ಪ್ರಸಂಗದ ಕುರಿತಾಗಿದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿರಿ. ಒಂದುವೇಳೆ ಅದು ೧-೨ ನಿಮಿಷಗಳ ಪ್ರಸಂಗಗಳಲ್ಲಿ ಬಂದಂತಹ ಪ್ರತಿಕ್ರಿಯೆಗಳು ಇಡೀ ದಿನದವರೆಗೂ ಇರಬಹುದು. ಉದಾಹರಣೆಗೆ, ‘ಅತ್ತೆಯವರು ಅಡುಗೆಯಲ್ಲಿ ಉಪ್ಪು ಕಡಿಮೆಯಿದೆ, ಎಂದು ಎಲ್ಲರ ಎದುರಿನಲ್ಲಿ ಹೇಳಿದಾಗ ನನಗೆ ಅವರು ನನ್ನ ತಪ್ಪನ್ನು ಯಾವಾಗಲೂ ಹೇಳುತ್ತಿರುತ್ತಾರೆ. ಅವರಿಗೆ ನಾನು ಮಾಡಿದ್ದೇನೂ ಇಷ್ಟವಾಗುವುದಿಲ್ಲ’, ಎಂಬ ರೀತಿ ಪ್ರತಿಕ್ರಿಯೆ ಬಂದ ಪ್ರಸಂಗವಿದೆ. ಅತ್ತೆಯವರು ತೋರಿಸಿದ ಕೊರತೆಯ ಪ್ರಸಂಗದ ಕಾಲಾವಧಿಯು ಒಂದು ನಿಮಿಷಕ್ಕಿಂತ ಕಡಿಮೆಯದ್ದಾಗಿದೆ; ಆದರೆ ಈ ಪ್ರಸಂಗದಲ್ಲಿ ಮನಸ್ಸಿಗೆ ಬರುವ ಅಥವಾ ವ್ಯಕ್ತವಾಗುವ ಪ್ರತಿಕ್ರಿಯೆಯು ಕೆಲವೊಮ್ಮೆ ಗಂಟೆಗಟ್ಟಲೆ ಕೂಡ ಉಳಿಯಬಹುದು. ನಮಗೆ ಪ್ರತಿಕ್ರಿಯೆಗಳ ಸಮಯಮಿತಿಯಲ್ಲ, ಬದಲಾಗಿ ಪ್ರಸಂಗದ ಕಾಲಾವಧಿಯನ್ನು ಗಮನದಲ್ಲಿಟ್ಟುಕೊಳ್ಳಬೇಕಾಗಿದೆ. ಅದೇನಾದರೂ ಒಂದು ವೇಳೆ ೧-೨ ನಿಮಿಷಗಳಿಗಿಂತ ಕಡಿಮೆಯಿದ್ದರೆ, ಆಗ ಅ-೨ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಿರಿ.

ಯಾವುದಾದರೊಂದು ಪ್ರಸಂಗವನ್ನು ಎದುರಿಸಲು ಒತ್ತಡ ಉಂಟಾಗುತ್ತಿದ್ದರೆ ಆಗ ಅ-೩ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಿರಿ.

ಬೇರೆಯವರ ಸ್ವಭಾವದೋಷ ಬದಲಾಯಿಸಲು ಸಾಧ್ಯವಾಗಿದ್ದಲ್ಲಿ ಆ-೧ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಬೇಕು. ಉದಾಹರಣೆಗೆ ಶಿಕ್ಷಕರು ವಿದ್ಯಾರ್ಥಿಗಳನ್ನು, ಪೋಷಕರು ತಮ್ಮ ಮಕ್ಕಳನ್ನು ಅದೇ ರೀತಿ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗಕ್ಕೆ ಸಂಬಂಧಪಟ್ಟಂತೆ ಈ ರೀತಿಯ ಸ್ವಯಂಸೂಚನೆಯ ಪದ್ಧತಿಯನ್ನು ಬಳಸಬಹುದು.

ಯಾವಾಗ ಬೇರೆಯವರ ಸ್ವಭಾವದೋಷವನ್ನು ಬದಲಾಯಿಸಲು ಸಾಧ್ಯವಿಲ್ಲವೋ ಆಗ ತತ್ವಜ್ಞಾನದ ಭೂಮಿಕೆಯನ್ನು ನೀಡಿ ಆ-೨ ಪದ್ಧತಿಯಂತೆ ಸ್ವಯಂಸೂಚನೆಯನ್ನು ನೀಡಿರಿ.

ಅ-೧ ಸ್ವಯಂಸೂಚನೆಯ ಪದ್ಧತಿ

ಅ. ಇಂದು ನಾವು ಮುಖ್ಯವಾಗಿ ಅ-೧ ಸ್ವಯಂಸೂಚನೆಯನ್ನು ಹೇಗೆ ತಯಾರಿಸುವುದು, ಎಂಬ ಬಗ್ಗೆ ಪುನರಾವರ್ತನೆಯನ್ನು ಮಾಡೋಣ. ನಾವು ನೋಡಿದಂತೆ, ಅಯೋಗ್ಯ ಕೃತಿ, ಅಯೋಗ್ಯ ಪ್ರತಿಕ್ರಿಯೆ ಹಾಗೂ ಅಯೋಗ್ಯ ಭಾವನೆಗಳ ಸಂದರ್ಭದಲ್ಲಿ ಅ-೧ ಪದ್ಧತಿಯ ಸ್ವಯಂಸೂಚನೆಯನ್ನು ನೀಡಲಾಗುತ್ತದೆ. ಅಯೋಗ್ಯ ಕೃತಿಗಳ ಅನೇಕ ಉದಹಾರಣೆಗಳಿವೆ. ದೈನಂದಿನ ಜೀವನದಲ್ಲಿ ನಮ್ಮಿಂದ ಅನೇಕ ತಪ್ಪು ಕೃತ್ಯಗಳಾಗುತ್ತವೆ. ಉದಾ : ಪಾತ್ರೆಗಳನ್ನು ಸರಿಯಾಗಿ ತೊಳೆಯದೆ ಇರುವುದು, ಚಪ್ಪಲಿಗಳನ್ನು ಅಡ್ಡಾದಿಡ್ಡಿಯಾಗಿ ಇಡುವುದು, ಗಣಕಯಂತ್ರವನ್ನು ಆರಿಸದೆ ಇರುವುದು, ಮಹತ್ವವಾದ ವಸ್ತುವನ್ನು ಜಾಗದಲ್ಲಿ ಇಡದೆ ಇರುವುದು, ಯಾರಿಗಾದರೂ ಸಂದೇಶ ನೀಡುವುದನ್ನು ಮರೆಯುವುದು ಈ ರೀತಿಯಲ್ಲಿ ನಮ್ಮಿಂದ ಅಯೋಗ್ಯ ಕೃತಿಗಳಾಗುತ್ತಿರುತ್ತವೆ.

ಅಯೋಗ್ಯ ವಿಚಾರವೆಂದರೆ ನಮ್ಮ ವಿಚಾರಪ್ರಕ್ರಿಯೆಯೇ ಅಯೋಗ್ಯವಾಗಿರುವುದು, ಉದಾ : ಬೇರೆಯವರ ವಸ್ತುಗಳನ್ನು ಅವರನ್ನು ಕೇಳದೆಯೇ ಬಳಸಲು ತೆಗೆದುಕೊಳ್ಳುವುದು, ನನ್ನಿಂದ ಏನೂ ಸಾಧ್ಯವಾಗುವುದಿಲ್ಲ, ಎಂದು ವಿಚಾರ ಮಾಡುವುದು, ಯಾರಿಗಾದರೂ ಸಮಯ ನೀಡಿ ಒಂದು ವೇಳೆ ಅದನ್ನು ಪಾಲಿಸಲು ಸಾಧ್ಯವಾಗದೆ ಹೋದರೆ ಅದನ್ನು ಹೇಳದೆ ಇರುವುದು, ಈ ರೀತಿಯ ಪ್ರಕಾರಗಳು. ಅಯೋಗ್ಯ ಭಾವನೆಗಳನ್ನು ಅಂದಾಜಾಗಿ ಹೇಳಬೇಕೆಂದರೆ ಸರಳವಾದ ಭಾಷೆಯಲ್ಲಿ ಷಡ್ರಿಪು ಹಾಗೂ ಅಹಂಕಾರ ಎಂದು ಹೇಳಬಹುದು. ಸಿಟ್ಟು, ದ್ವೇಷ, ಲೋಭ, ದುಃಖ, ಭಯ, ಕೆಟ್ಟದೆನಿಸುವುದು ಇತರರನ್ನು ಕೀಳಾಗಿ ನೋಡುವುದು, ತನ್ನನ್ನು ತಾನು ಶ್ರೇಷ್ಠವೆಂದು ತಿಳಿದುಕೊಳ್ಳುವುದು ಇವೆಲ್ಲ ಅಯೋಗ್ಯ ಭಾವನೆಗಳಾಗಿವೆ.

ಅಯೋಗ್ಯ ಕೃತಿ, ವಿಚಾರ ಮತ್ತು ಭಾವನೆ : ನಾವು ಅದನ್ನು ಒಂದು ಉದಾಹರಣೆಯ ಮೂಲಕ ಅರ್ಥಮಾಡಿಕೊಳ್ಳೋಣ. ಸಿಗ್ನಲ್ ಕೆಂಪಾಗಿರುವಾಗ ವಾಹನವನ್ನು ಮುಂದಕ್ಕೆ ಒಯ್ಯುವುದು, ಇದು ಅಯೋಗ್ಯ ಕೃತಿಯಾಗಿದೆ. ಒಂದುವೇಳೆ ‘ಚೌಕದಲ್ಲಿ ಪೊಲೀಸರಿಲ್ಲ ಎಂದು ಯಾರೂ ಕೂಡ ಸಿಗ್ನಲ್ ನಿಯಮ ಪಾಲಿಸಲಿಲ್ಲ’ ಎಂದಾದರೆ ಅದು ಅಯೋಗ್ಯ ವಿಚಾರ. ‘ಹೊಸತಾಗಿ ಕೊಂಡುಕೊಂಡಿರುವ ವಾಹನಕ್ಕೆ ಯಾರೂ ಡಿಕ್ಕಿ ಹೊಡೆಯುವುದಿಲ್ಲ ತಾನೆ’, ಎಂದು ಸತತವಾಗಿ ಭಯವೆನಿಸುವುದು, ಇದು ಅಯೋಗ್ಯ ಭಾವನೆಯಾಯಿತು ! ಅಯೋಗ್ಯ ಕೃತ್ಯ, ವಿಚಾರ ಹಾಗೂ ಭಾವನೆಗಳ ನಡುವೆ ಇರುವ ವ್ಯತ್ಯಾಸವು ಗಮನಕ್ಕೆ ಬಂತಲ್ಲವೇ ! ಈಗ ನಾವು ಮುಂದಿನ ಅಂಶವನ್ನು ನೋಡೋಣ.

ಆ. ಅ-೧ ಸ್ವಯಂಸೂಚನೆಯ ಪದ್ಧತಿಯ ಅಂಶ : ಅ-೧ ಪದ್ಧತಿಯಂತೆ ಸ್ವಯಂಸೂಚನೆಯನ್ನು ತಯಾರಿಸಲು ಸೂತ್ರ (ಫಾರ್ಮುಲಾ) ಹೀಗಿದೆ, ‘ಯಾವಾಗ + ಅಯೋಗ್ಯ ಕೃತಿ + ಯೋಗ್ಯ ದೃಷ್ಟಿಕೋನ ಅಥವಾ ಪರಿಣಾಮದ ಮನವರಿಕೆ + ಯೋಗ್ಯ ಕೃತಿ’

ಈಗ ನಾವು ಪ್ರತ್ಯಕ್ಷವಾಗಿ ಕೆಲವು ಉದಾಹರಣೆಗಳ ಮೂಲಕ ಸ್ವಯಂಸೂಚನೆಯ ಅಭ್ಯಾಸ ಮಾಡೋಣ. ಒಂದು ತಪ್ಪು ಹೀಗಿದೆ –

ಅ. ತಪ್ಪು : ವಾಹನವನ್ನು ನಡೆಸುವಾಗ ಕೆಂಪು ಸಿಗ್ನಲ್ ನಿಯಮವನ್ನು ಉಲ್ಲಂಘಿಸುವುದು.

ಆ. ಅಭ್ಯಾಸ : ಇಲ್ಲಿ ಅಯೋಗ್ಯ ಕೃತಿ ಏನೆಂದರೆ ವಾಹನವನ್ನು ನಡೆಸುವಾಗ ಕೆಂಪು ಸಿಗ್ನಲ್ ನಿಯಮವನ್ನು ಉಲ್ಲಂಘಿಸುವುದು ಈ ತಪ್ಪಿನ ಪರಿಣಾಮ ಏನಾಗಬಹುದು, ಅಂದರೆ ಇದರಿಂದ ಸಿಗ್ನಲ್ ಮುರಿಯಲಾಯಿತು; ಎಂಬುದಕ್ಕಾಗಿ ಆರ್ಥಿಕ ದಂಡ ಹೇರಬಹುದು. ಈ ಪ್ರಸಂಗಕ್ಕೆ ಸರಿಯಾದ ದೃಷ್ಟಿಕೋನ ಏನಿರಬೇಕು, ಅಂದರೆ ನಿಯಮಗಳನ್ನು ಪಾಲಿಸುವುದು ನನ್ನ ಕರ್ತವ್ಯವಾಗಿದೆ. ಎಲ್ಲದ್ದಕ್ಕಿಂತ ಕೊನೆಯಲ್ಲಿ ಸರಿಯಾದ ಕೃತ್ಯ ಏನಿರಬೇಕೆಂದರೆ, ಸಿಗ್ನಲ್ ಅನ್ನು ಪಾಲಿಸುವುದು.

ಇ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಸೂತ್ರಕ್ಕೆ ಅನುಸಾರವಾಗಿ ನಮ್ಮ ಸ್ವಯಂಸೂಚನೆಯು ಮುಂದಿನಂತಿರುವುದು, ‘ಯಾವಾಗ ನಾನು ವಾಹನವನ್ನು ನಡೆಸುವಾಗ ಕೆಂಪು ಸಿಗ್ನಲ್ ಉಲ್ಲಂಘಿಸುವೆನೋ ಆಗ ಇದರಿಂದ ಆರ್ಥಿಕ ದಂಡ ಹೇರಬಹುದು ಎಂದು ಮನವರಿಕೆಯಾಗುವುದು ಹಾಗೂ ನಾನು ಕೆಂಪು ಸಿಗ್ನಲ್ ಕಾಣಿಸಿದ ತಕ್ಷಣ ವಾಹನವನ್ನು ನಿಲ್ಲಿಸುವೆನು’.

ಸ್ವಯಂಸೂಚನೆಯಲ್ಲಿ ನಾವು ಪರಿಣಾಮಗಳ ಬದಲು ಸರಿಯಾದ ದೃಷ್ಟಿಕೋನವನ್ನು ಕೂಡ ಸೇರಿಸಿಕೊಳ್ಳಬಹುದು. ಉದಾಹರಣೆಗೆ, ‘ಯಾವಾಗ ನಾನು ಕೆಂಪು ಸಿಗ್ನಲ್ ಇರುವಾಗ ವಾಹನವನ್ನು ಮುನ್ನಡೆಸಲಿರುವೆನೋ, ಆಗ ವಾಹನಗಳ ನಿಯಮಗಳನ್ನು ಪಾಲಿಸುವುದು, ನನ್ನ ಕರ್ತವ್ಯವೇ ಆಗಿದೆ, ಎಂಬುದು ಮನವರಿಕೆಯಾಗುವುದು ಹಾಗೂ ಕೆಂಪು ಸಿಗ್ನಲ್ ಕಾಣಿಸಿದ ತಕ್ಷಣ ವಾಹನವನ್ನು ನಿಲ್ಲಿಸುವೆನು’. ಪರಿಣಾಮ ಅಥವಾ ಸರಿಯಾದ ದೃಷ್ಟಿಕೋನ ಇವುಗಳ ಪೈಕಿ ನಮ್ಮ ಮನಸ್ಸಿಗೆ ಯಾವುದು ಸರಿಯಾಗಿ ಅನಿಸುತ್ತದೋ, ಅದನ್ನು ನಾವು ಸ್ವಯಂಸೂಚನೆಯಲ್ಲಿ ಉಲ್ಲೇಖಿಸಬಹುದು.

ಅ. ತಪ್ಪು : ಈಗ ನಾವು ಮತ್ತೊಂದು ಉದಾಹರಣೆಯನ್ನು ನೋಡೋಣ. ನಾನು ಬ್ಯಾಂಕಿಗೆ ಹೋಗುವಾಗ ಪಾಸ್ ಬುಕ್ ಕೊಂಡೊಯ್ಯಲು ಮರೆತುಹೋದದ್ದರಿಂದ ಬ್ಯಾಂಕಿನ ಕೆಲಸಗಳನ್ನು ಮಾಡಲು ಸಾಧ್ಯವಾಗಲಿಲ್ಲ.

ಆ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಅಯೋಗ್ಯ ಕೃತಿ ಏನು ಅಂದರೆ ಬ್ಯಾಂಕಿಗೆ ಹೋಗುವಾಗ ಪಾಸ್ ಬುಕ್ ತೆಗೆದುಕೊಂಡು ಹೋಗಲು ಮರೆತುಹೋಗುವುದು ಹಾಗೂ ಯೋಗ್ಯ ಕೃತಿ ಏನೆಂದರೆ ಬ್ಯಾಂಕಿಗೆ ಹೋಗುವಾಗ ಪಾಸ್ ಬುಕ್ ತೆಗೆದುಕೊಂಡು ಹೋಗುವುದು. ಆದ್ದರಿಂದ ಈ ಸಂದರ್ಭದಲ್ಲಿ ಸ್ವಯಂಸೂಚನೆ ಹೇಗಿರಬೇಕೆಂದರೆ – ‘ಯಾವಾಗ ನಾನು ಬ್ಯಾಂಕಿಗೆ ಹೋಗಲು ಮನೆಯಿಂದ ಹೊರಗೆ ಹೋಗುವೆನೋ, ಆಗ ನನಗೆ ಪಾಸ್ ಬುಕ್ ತೆಗೆದುಕೊಂಡು ಹೋಗಬೇಕೆಂದು ಅರಿವಾಗುವುದು ಹಾಗೂ ನಾನು ಪಾಸ್ ಬುಕ್ ತೆಗೆದುಕೊಂಡೇ ಮನೆಯಿಂದ ಹೊರಡುವೆನು’.

ಇ. ಅಭ್ಯಾಸ : ಸ್ವಯಂಸೂಚನೆಯ ಜೊತೆಗೆ ನಾವು ತಪ್ಪಾಗಬಾರದು ಎಂಬುದಕ್ಕಾಗಿ ಪಾಸ್ ಬುಕ್ ತೆಗೆದುಕೊಂಡು ಹೋಗಲು ಮೊಬೈಲ್ ನಲ್ಲಿ ‘ರಿಮೈಂಡರ್’ ಇಟ್ಟುಕೊಳ್ಳಬಹುದು. ನಮ್ಮ ದೋಷಗಳನ್ನು ದೂರಮಾಡಲು ಅಥವಾ ತಪ್ಪನ್ನು ಸುದಾರಿಸಿಕೊಳ್ಳಲು ಸ್ವಯಂಸೂಚನೆಯ ಜೊತೆಗೆ ಕೃತಿಯ ಮಟ್ಟದಲ್ಲಿ ಯಾವ ರೀತಿಯಲ್ಲಿ ಪ್ರಯತ್ನಿಸಬಹುದು, ಅದನ್ನು ಹೇಗೆ ಮಾಡಬೇಕು, ಎಂಬುದನ್ನು ಗಮನದಲ್ಲಿಟ್ಟುಕೊಳ್ಳೋಣ.

ಅ. ತಪ್ಪು : ಗೆಳತಿಯರಿಬ್ಬರು ಪರಸ್ಪರ ಮಾತನಾಡಿಕೊಳ್ಳುತ್ತಿರುವುದನ್ನು ನೋಡಿ ನನಗೆ ಅವರು ‘ನನ್ನ ಬಗ್ಗೆ ಮಾತನಾಡುತ್ತಿರಬಹುದು’, ಎಂದು ಅನಿಸಿತು ಹಾಗೂ ನಾನು ಸ್ವಲ್ಪ ಅಸ್ಥಿರಳಾದೆ.

ಆ. ಅಭ್ಯಾಸ : ಈ ಪ್ರಸಂಗದಲ್ಲಿ ತಪ್ಪೇನಿದೆ ಅಂದರೆ ಇಬ್ಬರು ಮಾತನಾಡುತ್ತಿರುವುದನ್ನು ನೋಡಿ ನಕಾರಾತ್ಮಕ ತೀರ್ಮಾನಕ್ಕೆ ಬರುವುದು ! ಇದು ಅಯೋಗ್ಯ ವಿಚಾರ ! ಇಲ್ಲಿ ಗಮನದಲ್ಲಿಟ್ಟುಕೊಳ್ಳಬೇಕಾದ ಯೋಗ್ಯ ದೃಷ್ಟಿಕೋನ ಏನೆಂದರೆ ಗೆಳತಿಯರಿಬ್ಬರು ಪರಸ್ಪರ ಇತರ ಯಾವುದೋ ವಿಷಯದಲ್ಲಿ ಚರ್ಚಿಸುತ್ತಿರಬಹುದು ! ಆಗ ಮನಸ್ಸಿನಲ್ಲಿಯೇ ತೀರ್ಮಾನಕ್ಕೆ ಬಂದು ನಮ್ಮನ್ನು ನಾವು ಕೀಳಾಗಿ ಭಾವಿಸುತ್ತೇವೆ ಅಥವಾ ಇತರರ ಬಗ್ಗೆ ಮನಸ್ಸಿನಲ್ಲಿ ಒಂದು ಪೂರ್ವಗ್ರಹವಿಟ್ಟುಕೊಳ್ಳುತ್ತೇವೆ. ಯಾವುದೇ ನಿರ್ಣಯಕ್ಕೆ ಬರುವ ಮೊದಲು ವಸ್ತುನಿಷ್ಠ ಹಾಗೂ ಸಕಾರಾತ್ಮಕವಾಗಿದ್ದುಕೊಂಡರೆ ಆಗ ಅದು ಯೋಗ್ಯ ವಿಚಾರಪ್ರಕ್ರಿಯೆಯಾಯಿತು.

ಇ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಸ್ವಯಂಸೂಚನೆ ಹೇಗಿರಬೇಕು ಎಂದರೆ “ಇಬ್ಬರು ಸ್ನೇಹಿತೆಯರು ಪರಸ್ಪರ ಮಾತನಾಡುತ್ತಿರುವುದನ್ನು ನೋಡಿದಾಗ ‘ಅವರು ನನ್ನ ಬಗ್ಗೆಯೇ ಮಾತನಾಡುತ್ತಿರಬಹುದು’ ಎಂಬ ವಿಚಾರ ಬರುವುದೋ ಆಗ ನಾನು ತೀರ್ಮಾನಕ್ಕೆ ಬರುತ್ತಿದ್ದೇನೆ, ಎಂಬುದರ ಮನವರಿಕೆಯಾಗುವುದು. ಅವರಿಬ್ಬರೂ ಬೇರೆ ಯಾವುದಾದರೂ ಒಂದು ವಿಷಯದ ಬಗ್ಗೆ ಮಾತನಾಡುತ್ತಿರಬಹುದು, ಎಂದು ಗಮನಕ್ಕೆ ತಂದುಕೊಂಡು ನಾಮಜಪ ಮಾಡುವೆನು”.

ಇಲ್ಲಿ ಸರಿಯಾದ ದೃಷ್ಟಿಕೋನವನ್ನು ಮನಸ್ಸಿಗೆ ನೀಡುವುದರೊಂದಿಗೆ ನಾಮಜಪದ ಕಡೆ ಗಮನ ನೀಡುವುದು ಅಗತ್ಯವಾಗಿದೆ; ಏಕೆಂದರೆ ನಾಮಜಪದಿಂದ ಅಯೋಗ್ಯ ವಿಚಾರಗಳ ವಿರುದ್ಧ ಹೋರಾಡಲು ಆಧ್ಯಾತ್ಮಿಕ ಬಲ ಸಿಗುತ್ತದೆ. ಇಲ್ಲದಿದ್ದರೆ ಎಷ್ಟೋ ಸಲ ಮಾನಸಿಕ ಸಂಘರ್ಷದಲ್ಲಿಯೇ ನಮ್ಮ ಬಹಳ ಸಮಯವು ಖರ್ಚಾಗುತ್ತದೆ; ಆದ್ದರಿಂದ ನಾಮಜಪ ಅಗತ್ಯವಾಗಿದೆ.

ಅ. ತಪ್ಪು : ಈಗ ನಾವು ಮತ್ತೊಂದು ಪ್ರಸಂಗವನ್ನು ನೋಡೋಣ. ಈ ಪ್ರಸಂಗದಲ್ಲಿ ನಾನು ನನ್ನ ಸ್ನೇಹಿತೆ ಅಶ್ವಿನಿಗೆ ಒಂದು ಕೆಲಸದಲ್ಲಿ ಅವಳಿಗೆ ಸಹಾಯ ಮಾಡಲು ಹೋಗುವವಳಿದ್ದೆ; ಆದರೆ ನನ್ನ ಆಯೋಜನೆಯಲ್ಲಿ ಬದಲಾವಣೆಯಾದ್ದರಿಂದ ನನಗೆ ಅವಳ ಕಡೆಗೆ ಬರಲು ಸಾಧ್ಯವಿಲ್ಲ ಎಂದು ಕೊನೆಯ ಗಳಿಗೆಯಲ್ಲಿ ಹೇಳಿದೆ.

ಆ. ಅಭ್ಯಾಸ : ಈ ಪ್ರಸಂಗದಲ್ಲಿ ತಪ್ಪಾದ ವಿಚಾರವೇನೆಂದರೆ ಯಾರಿಗಾದರೂ ನೀಡಿದ ಸಮಯವನ್ನು ಪಾಲಿಸಲು ಸಾಧ್ಯವಾಗದೆ ಇದ್ದರೆ ಅದನ್ನು ಕೊನೆಯ ಗಳಿಗೆಯಲ್ಲಿ ಹೇಳುವುದು ! ಕೊನೆಯ ಗಳಿಗೆಯಲ್ಲಿ ಸಂದೇಶ ನೀಡುವುದರಿಂದ ಎದುರಿಗಿನ ವ್ಯಕ್ತಿಗೆ ಅಡಚಣೆಗಳು ಬರಬಹುದು; ಆದ್ದರಿಂದ ಸಮಯಕ್ಕೆ ಸರಿಯಾಗಿ ಸಂದೇಶ ನೀಡಬೇಕು, ಅದೇ ರೀತಿ ಪ್ರಾಮಾಣಿಕವಾಗಿ ತಮಗೇನು ಅಡಚಣೆಯಿದೆಯೋ ಅದನ್ನು ಕೂಡ ಮಂಡಿಸಬೇಕು.

ಇ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಆದರ್ಶ ಸ್ವಯಂಸೂಚನೆಯನ್ನು ಹೇಗೆ ತಯಾರಿಸಬಹುದು ಅಂದರೆ ‘ಯಾವಾಗ ನನ್ನ ಆಯೋಜನೆ ಬದಲಾದ್ದರಿಂದ ಅಶ್ವಿನಿಗೆ ಸಹಾಯ ಮಾಡುವುದು ಅಸಾಧ್ಯವೆಂದು ಹೇಳಲು ತಡ ಮಾಡುವೆನೋ ಆಗ ಕೊನೆಯ ಗಳಿಗೆಯಲ್ಲಿ ಹೇಳಿದರೆ, ಅವಳಿಗೆ ಅಡಚಣೆಯಾಗಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ಅವಳಿಗೆ ತಕ್ಷಣ ಹೇಳುವೆನು’.

ಈ ಪ್ರಸಂಗದಲ್ಲಿ ಬೇರೆಯವ ಬಗ್ಗೆ ವಿಚಾರ ಮಾಡುವುದರ ಬಗ್ಗೆ ಕಡಿಮೆ ಬೀಳುತ್ತಿರುವುದು ಗಮನಕ್ಕೆ ಬರುತ್ತದೆ. ಆದ್ದರಿಂದ ಸ್ವಯಂಸೂಚನೆಯನ್ನು ನೀಡುವುದರೊಂದಿಗೆ ಇತರರ ಬಗ್ಗೆ ಯೋಚಿಸುವುದನ್ನು ಹೆಚ್ಚಿಸಲು ಪ್ರಯತ್ನಿಸುವುದು ಕೂಡ ಅಗತ್ಯವಾಗಿದೆ.

ಅ. ತಪ್ಪು : ನೆರೆಕೆರೆಯ ಶ್ರೀ. ಜೋಶಿಯವರಿಗಿಂತ ನಾನು ಇತರರಿಗೆ ಚೆನ್ನಾಗಿ ಸಹಾಯ ಮಾಡುತ್ತೇನೆ, ಎಂದು ವಿಚಾರ ಬಂತು.

ಆ. ಅಭ್ಯಾಸ : ಇತರರರಿಗಿಂತ ನಾನು ಒಳ್ಳೆಯವನು ಎಂದು ಅನಿಸುವುದು, ಅಯೋಗ್ಯ ಭಾವನೆಯಾಗಿದೆ ! ಇಂತಹ ಭಾವನೆಗಳಲ್ಲಿ ಇತರರನ್ನು ತಿಳಿದೋ-ತಿಳಿಯದೆಯೋ ಕೀಳಾಗಿ ನೋಡಲಾಗುತ್ತದೆ. ಪ್ರತ್ಯಕ್ಷವಾಗಿ ಪ್ರತಿಯೊಬ್ಬರಲ್ಲಿಯೂ ಕೂಡ ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಸ್ವಭಾವದೋಷ ಹಾಗೂ ಗುಣಗಳಿರುತ್ತದೆ. ನಾವು ನಮ್ಮ ಸಂಪರ್ಕಕ್ಕೆ ಬರುವ ವ್ಯಕ್ತಿಗಳ ಅವಗುಣಗಳ ಬಗ್ಗೆ ಚರ್ಚಿಸುವುದಕ್ಕಿಂತ ಅವರಲ್ಲಿರುವ ಗುಣಗಳನ್ನು ನೋಡಿ ಅವನ್ನು ಕಲಿತುಕೊಳ್ಳಲು ಪ್ರಯತ್ನಿಸಬೇಕು.

ಇ. ಸ್ವಯಂಸೂಚನೆ : ಇತರರಿಗಿಂತ ನಾನು ಒಳ್ಳೆಯವನು, ಎಂಬ ತಪ್ಪಾದ ಭಾವನೆಯಿರುವ ಪ್ರಸಂಗದಲ್ಲಿ ಯಾವ ರೀತಿಯ ಸ್ವಯಂಸೂಚನೆ ನೀಡಬಹುದು ಅಂದರೆ ‘ಯಾವಾಗ ಪಕ್ಕದ ಶ್ರೀ. ಜೋಶಿಯವರಿಗಿಂತ ನಾನು ಚೆನ್ನಾಗಿ ಸಹಾಯ ಮಾಡುತ್ತೇನೆ ಎಂದು ನನಗೆ ಅನಿಸುವುದೋ, ಆಗ ಶ್ರೀ. ಜೋಶಿಯವರಿಂದ ನಾನು ಕಲಿಯಬಹುದಾದಂತಹ ಸಾಕಷ್ಟು ಒಳ್ಳೆಯ ಗುಣಗಳಿವೆ ಎಂದು ನಾನು ಅವರ ಗುಣಗಳನ್ನು ನೋಡುವೆನು’.

ಅ. ತಪ್ಪು : ‘ಒಂದು ವೇಳೆ ನನ್ನನ್ನು ಕೆಲಸದಿಂದ ತೆಗೆದುಹಾಕಬಹುದು’, ಎಂಬ ವಿಚಾರ ಬರುವುದು ಎಂಬ ಒಂದು ತಪ್ಪು ಇದೆ. ಯಾವುದೇ ಕಾರಣವಿಲ್ಲದಿರುವಾಗ ಕೆಲಸದಿಂದ ತೆಗೆದು ಹಾಕುವರು ಎಂದು ಭಯವೆನಿಸುವುದು, ಇದಾಯಿತು ಅಯೋಗ್ಯ ಭಾವನೆ ! ಯಾರಿಗಾದರೂ ಕಾರಣವಿಲ್ಲದೆ ಕಾಳಜಿ (ಚಿಂತೆ) ಮಾಡುವ ಸ್ವಭಾವವಿದ್ದರೆ ಅಥವಾ ಎಷ್ಟೋ ಸಲ ಕೆಟ್ಟ ಶಕ್ತಿಗಳ ತೊಂದರೆಯಿಂದ ನಮಗೆ ಕಾರಣವಿಲ್ಲದೆ ಭಯವೆನಿಸುತ್ತದೆ.

ಆ. ಅಭ್ಯಾಸ : ಪ್ರತ್ಯಕ್ಷವಾಗಿ ಏನು ಅಪೇಕ್ಷಿತವಾಗಿದೆ? ನಕಾರಾತ್ಮಕ ವಿಚಾರ ಮಾಡುವುದಕ್ಕಿಂತ, ಭವಿಷ್ಯದ ಬಗ್ಗೆ ಕಾಳಜಿ ಮಾಡುವುದಕ್ಕಿಂತ ಅಥವಾ ಭೂತಕಾಲದ ಪ್ರಸಂಗವನ್ನು ನೆನಪಿಸಿಕೊಳ್ಳುವುದಕ್ಕಿಂತ ‘ವರ್ತಮಾನಕಾಲ’ದಲ್ಲಿರುವುದು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಆಠವಲೆಯವರು ಕೂಡ ‘ಸತತವಾಗಿ ವರ್ತಮಾನಕಾಲದಲ್ಲಿರಿ’ ಎಂದು ಮಾರ್ಗದರ್ಶನ ನೀಡಿದ್ದಾರೆ. ಸಾಧನೆ ಮಾಡುವ ಜೀವಿಗಳಿಗೆ ಕೇವಲ ಒಂದೇ ಒಂದು ಕಾಲವಿರುತ್ತದೆ, ಅದು ವರ್ತಮಾನಕಾಲ ! ವರ್ತಮಾನಕಾಲದಲ್ಲಿ ಸಾಧನೆ ಮಾಡುವುದರಿಂದ ಸಾಧಕರ ಭೂತಕಾಲವು ಅಳಿಸಿ ಹೋಗುವುದು ಅಂದರೆ ಕೊಡ-ಕೊಳ್ಳುವ ಲೆಕ್ಕವೇ ನಾಶವಾಗುತ್ತದೆ ಹಾಗೂ ಭವಿಷ್ಯಕಾಲವು ಕೂಡ ಒಳ್ಳೆಯದಾಗುತ್ತದೆ.

ಇ. ಸ್ವಯಂಸೂಚನೆ : ಯಾವಾಗ ನನಗೆ ಕೆಲಸದಿಂದ ತೆಗೆದು ಹಾಕುವರು, ಎಂದು ಅನಿಸುತ್ತಿರುತ್ತದೋ, ಆಗ ಎಲ್ಲವೂ ಪ್ರಾರಬ್ಧಾನುಸಾರವಾಗಿ ನಡೆಯುತ್ತದೆ ಎಂಬುದರ ಮನವರಿಕೆಯಾಗುವುದು ಹಾಗೂ ನಾನು ವರ್ತಮಾನಕಾಲದಲ್ಲಿದ್ದುಕೊಂಡು ನಾಮಜಪ ಮಾಡುವೆನು.

ಜೀವನದಲ್ಲಿ ಶೇಕಡ ೬೫ ರಷ್ಟು ಘಟನೆಗಳು ಪ್ರಾರಬ್ಧಾನುಸಾರ ನಡೆಯುತ್ತದೆ. ಪ್ರಾರಬ್ಧವನ್ನು ಅನುಭವಿಸಿ ತೀರಿಸಬೇಕಾಗುತ್ತದೆ. ಸಾಧನೆ ಮಾಡುವುದರಿಂದ ಪ್ರಾರಬ್ಧವನ್ನು ಭೋಗಿಸಲು ಬಲ ಸಿಗುತ್ತದೆ. ನಾಮಜಪದಿಂದ ಮನಸ್ಸಿನಲ್ಲಿರುವ ನಕಾರಾತ್ಮಕ, ಅನಾವಶ್ಯಕ, ಅಯೋಗ್ಯ ವಿಚಾರಗಳು ನಾಶವಾಗುತ್ತವೆ; ಆದ್ದರಿಂದ ಸ್ವಯಂಸೂಚನೆಯ ಜೊತೆಗೆ ಆಯಾ ಪ್ರಸಂಗದಲ್ಲಿ ನಾಮಜಪ ಮಾಡುವುದು ಕೂಡ ಮಹತ್ವವಾಗಿರುತ್ತದೆ.

ಅ. ತಪ್ಪು : ಪ್ರಸಂಗ ಹೀಗಿದೆ, ಸ್ನೇಹಿತೆ ಸರಳಾ ನನ್ನನ್ನು ತನ್ನ ವಿವಾಹಕ್ಕೆ ಕರೆಯಲಿಲ್ಲ ಎಂದು ಬೇಸರವಾಯಿತು ! ಇದು ಅಯೋಗ್ಯ ಭಾವನೆಯಾಯಿತು. ಯಾರಾದರೂ ನಮ್ಮನ್ನು ಕಾರ್ಯಕ್ರಮಕ್ಕೆ ಕರೆಯಲಿಲ್ಲ ಎಂದು ಬೇಸರವಾಗುವುದು, ಎಂದರೆ ಇದು ಭಾವನಾಶೀಲತೆಯಾಗಿದೆ! ಈ ರೀತಿಯ ಪ್ರಸಂಗಗಳು ನಿಮ್ಮ ವಿಷಯದಲ್ಲಿಯೂ ನಡೆಯುತ್ತದಲ್ಲವೇ?  ಇಂತಹ ಪ್ರಸಂಗದಲ್ಲಿ ಬೇಸರ ಪಡುವುದರಿಂದ ಅಥವಾ ಬೇರೆಯವರನ್ನು ದೂಷಿಸುವುದರಿಂದ ನಮ್ಮ ಮಾನಸಿಕ ಶಕ್ತಿ ಖರ್ಚಾಗುತ್ತದೆ, ಅದೇ ರೀತಿ ಸಮಯ ಕೂಡ ವ್ಯರ್ಥವಾಗುತ್ತದೆ. ಈ ರೀತಿ ಆಗುವುದು ಬೇಡ ಎಂದು ಸ್ವಯಂಸೂಚನೆ ನೀಡಿ ಆಧ್ಯಾತ್ಮಿಕ ಮಟ್ಟದಲ್ಲಿ ಪ್ರಯತ್ನಿಸಬೇಕಾಗುತ್ತದೆ.

ಆ. ಅಭ್ಯಾಸ : ಯಾರಾದರೂ ನಮ್ಮನ್ನು ಯಾವುದಾದರೂ ಕಾರ್ಯಕ್ರಮಕ್ಕೆ ಕರೆಯಲಿಲ್ಲ, ಎಂಬ ಬಗ್ಗೆ ನಾವು ಸಮರ್ಥವಾಗಿ ಅದನ್ನು ಸ್ವೀಕರಿಸಬೇಕು. ಕೆಲವೊಮ್ಮೆ ಏನಾದರೂ ಅಡಚಣೆಗಳಿರಬಹುದು. ಆದ್ದರಿಂದ ಬೇಸರ ಪಟ್ಟುಕೊಳ್ಳುವುದಕ್ಕಿಂತ ನಾಮಜಪ ಮಾಡಿ ಸಕಾರಾತ್ಮಕವಾಗಿದ್ದುಕೊಂಡು ಆ ಪ್ರಸಂಗದಿಂದ ಹೊರಗೆ ಬರುವುದು ಮಹತ್ವವಾಗಿರುತ್ತದೆ. ಆದ್ದರಿಂದ ಈ ರೀತಿಯ ಪ್ರಸಂಗಗಳಲ್ಲಿ ನಕಾರಾತ್ಮಕ ತೀರ್ಮಾನಕ್ಕೆ ಬರುವುದಕ್ಕಿಂತ ಸಕಾರಾತ್ಮಕವಾಗಿದ್ದುಕೊಂಡು ನಮ್ಮ ಗಮನವನ್ನು ಸಾಧನೆಯ ಮೇಲೆ ಕೇಂದ್ರಿತಗೊಳಿಸಬೇಕು.

ಇ. ಸ್ವಯಂಸೂಚನೆ : ಈ ಪ್ರಸಂಗದಲ್ಲಿ ಯಾವ ರೀತಿಯ ಸ್ವಯಂಸೂಚನೆ ನೀಡಬಹುದು, ಅಂದರೆ ಸರಳಾಳು ತನ್ನ ವಿವಾಹಕ್ಕೆ ಕರೆಯಲಿಲ್ಲ ಎಂದು ಬೇಸರವೆನಿಸಿದಾಗ, ಕಾರ್ಯಕ್ರಮಕ್ಕೆ ಯಾರನ್ನು ಕರೆಯಬೇಕು, ಎಂಬದನ್ನು ಆಯೋಜಕರು ನಿರ್ಧರಿಸುತ್ತಾರೆ. ನನ್ನನ್ನು ಕರೆಯದೆ ಇರುವುದರ ಹಿಂದೆ ಏನಾದರೂ ಅಡಚಣೆಯಿರಬಹುದು, ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾನು ನಾಮಜಪ ಮಾಡುವೆನು.

ಸ್ವಯಂ ಸೂಚನೆ ನೀಡುವುದರಿಂದ ಹಾಗೂ ನಾಮಜಪ ಮಾಡಿದ್ದರಿಂದ ನಾವು ಆ ಪ್ರಸಂಗದಲ್ಲಿ ಸಿಲುಕಿಕೊಳ್ಳುವುದಿಲ್ಲ. ಪರಿಣಾಮವಾಗಿ ನಮಗೆ ನಮ್ಮ ದೈನಂದಿನ ಪ್ರಸಂಗಗಳನ್ನು ಚೆನ್ನಾಗಿ ನಿಭಾಯಿಸಲು ಬರುತ್ತದೆ ಹಾಗೂ ನಮ್ಮ ಮನಸ್ಸು ಕೂಡ ಆದಷ್ಟು ಸಕಾರಾತ್ಮಕ ಹಾಗೂ ಆನಂದದಲ್ಲಿ ಇರುತ್ತದೆ.

Leave a Comment