Contents
ಗುಜರಾತಿನ ಆಣಂದ ಎಂಬಲ್ಲಿ ನೈಸರ್ಗಿಕ ಕೃಷಿಗೆ ಸಂಬಂಧಿಸಿದ ರಾಷ್ಟ್ರೀಯ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಗುಜರಾತಿನ ಮಾ. ರಾಜ್ಯಪಾಲ ಆಚಾರ್ಯ ದೇವವ್ರತ ಇವರು ನೈಸರ್ಗಿಕ ಕೃಷಿಯ ಬಗೆಗಿನ ತಮ್ಮ ಅನುಭವವನ್ನು ಹಂಚಿಕೊಂಡರು. ಇಲ್ಲಿಯವರೆಗೆ ನಾವು ಆಚಾರ್ಯ ದೇವವ್ರತ ಇವರು ರಾಸಾಯನಿಕ ಮತ್ತು ಸಾವಯವ ಕೃಷಿ ಪದ್ಧತಿಗಳಿಂದ ನೈಸರ್ಗಿಕ ಕೃಷಿಯ ಕಡೆಗೆ ಹೇಗೆ ಹೊರಳಿದರು, ರಾಸಾಯನಿಕ ಕೃಷಿಯಿಂದ ಅವರು ಬಾಡಿಗೆಯ ತತ್ತ್ವದ ಮೇಲೆ ನೀಡಿದ ೧೦೦ ಎಕರೆ ಭೂಮಿಯು ಹೇಗೆ ಬಂಜರಾಯಿತು, ಹಾಗೆಯೇ ಜೀವಾಮೃತದ ಬಳಕೆಯಿಂದ ಬಂಜರು ಭೂಮಿಯಲ್ಲಿಯೂ ಅತ್ಯಧಿಕ ಉತ್ಪನ್ನ ಹೇಗೆ ಬಂದಿತು, ಎಂಬುದನ್ನು ತಿಳಿದುಕೊಂಡೆವು. ಈಗ ಈ ಲೇಖನದಲ್ಲಿ ಅದರ ಮುಂದಿನ ಭಾಗವನ್ನು ನೋಡೋಣ…
೧೭. ಭೂಮಿಯ ಫಲವತ್ತತೆಯು ಭೂಮಿಯಲ್ಲಿನ ಕೃಷಿಗೆ ಉಪಯುಕ್ತವಾಗಿರುವ ಸೂಕ್ಷ್ಮ ಜೀವಾಣುಗಳ ಕಾರ್ಯದ ಮೇಲೆ ಅವಲಂಬಿಸಿರುತ್ತದೆ
ಭೂಮಿಯಲ್ಲಿ ಫಾಸ್ಫರಸ್, ಸತುವು (ಝಿಂಕ್), ಪೊಟ್ಯಾಶ್, ತಾಮ್ರ ಇವುಗಳಂತಹ ಅನೇಕ ಖನಿಜ ಲವಣಗಳಿರುತ್ತವೆ; ಆದರೆ ಈ ಘಟಕಗಳು ತಾವಾಗಿಯೇ ವನಸ್ಪತಿಗಳಿಗೆ ಆಹಾರವೆಂದು ಲಭ್ಯವಾಗುವುದಿಲ್ಲ. ಎರೆಹುಳಗಳು, ಹಾಗೆಯೇ ಭೂಮಿಯಲ್ಲಿನ ಸೂಕ್ಷ್ಮ ಜೀವಾಣುಗಳು ಈ ಘಟಕಗಳಿಂದ ಆಹಾರವನ್ನು ನಿರ್ಮಿಸುತ್ತವೆ ಮತ್ತು ವನಸ್ಪತಿಗಳ ಬೇರುಗಳಿಗೆ ನೀಡುತ್ತವೆ. ಇದರ ಅರ್ಥ ಹೊಲದಲ್ಲಿ ಎಷ್ಟು ಸೂಕ್ಷ್ಮ ಜೀವಾಣುಗಳಿರುತ್ತವೋ, ಅಷ್ಟು ಸಾವಯವ ಇಂಗಾಲ (ಕಾರ್ಬನ್) ಹೆಚ್ಚಾಗುತ್ತದೆ. ಸಾವಯವ ಇಂಗಾಲದ ಪ್ರಮಾಣವು ಎಷ್ಟು ಹೆಚ್ಚಾಗುತ್ತದೆಯೋ, ಅಷ್ಟು ಭೂಮಿಯ ಆರೋಗ್ಯ (ಫಲವತ್ತತೆ) ಚೆನ್ನಾಗಿರುತ್ತದೆ. ಭೂಮಿಯ ಆರೋಗ್ಯ ಎಷ್ಟು ಉತ್ತಮವೋ, ಅಷ್ಟು ಉತ್ಪನ್ನವೂ ಹೆಚ್ಚಾಗುತ್ತದೆ. ಇದು ಸರಳವಾದ ಸಮೀಕರಣ.
೧೮. ಸಾವಯವ ಕೃಷಿಯಲ್ಲಿನ ವಿದೇಶಿ ಎರೆಹುಳಗಳು ಮತ್ತು ನೈಸರ್ಗಿಕ ಕೃಷಿಯಲ್ಲಿ ಭಾರತೀಯ ಎರೆಹುಳಗಳ ನಡುವಿನ ವ್ಯತ್ಯಾಸ
ಯೂರಿಯಾ, ಡಿಎಪಿ ಇವುಗಳಂತಹ ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಎರೆಹುಳಗಳು ಭಯಪಡುತ್ತವೆ ಮತ್ತು ಅವು ಭೂಮಿಯಲ್ಲಿ ೧೫ ಅಡಿ ಆಳಕ್ಕೆ ಹೋಗಿ ಅಡಗಿಕೊಳ್ಳುತ್ತವೆ. ಯಾವಾಗ ಮಣ್ಣಿನಲ್ಲಿ ಘನಜೀವಾಮೃತವನ್ನು ಸೇರಿಸಲಾಗುತ್ತದೆಯೋ ಮತ್ತು ಅದು ಎಲ್ಲ ಕಡೆಗೆ ಹರಡುತ್ತದೆಯೋ, ಆಗ ಅದರ ಗಂಧ ಭೂಮಿಯಲ್ಲಿ ಹರಡುತ್ತದೆ. ಆಗ ಈ ಎರೆಹುಳಗಳು ಪುನಃ ಮೇಲೆ ಬರುತ್ತವೆ ಮತ್ತು ತಮ್ಮ ಕಾರ್ಯವನ್ನು ಪ್ರಾರಂಭಿಸುತ್ತವೆ. ಭಾರತೀಯ ಎರೆಹುಳಗಳು ಸೆಗಣಿ, ಮರದ ಕಸಕಡ್ಡಿಗಳು, ಹಾಗೆಯೇ ಮಣ್ಣನ್ನೂ ತಿನ್ನುತ್ತವೆ; ಆದರೆ ಸಾವಯವ ಕೃಷಿಯಲ್ಲಿ ಯಾವ ವಿದೇಶಿ ಎರೆಹುಳಗಳ ಬಳಕೆಯನ್ನು ಮಾಡಲಾಗುತ್ತದೆಯೋ, ಅವು ಮಣ್ಣನ್ನು ತಿನ್ನುವುದಿಲ್ಲ, ಅವು ಕೇವಲ ಸೆಗಣಿ ಮತ್ತು ಕಸಕಡ್ಡಿಗಳನ್ನು ತಿನ್ನುತ್ತವೆ. ಈ ವಿದೇಶಿ ಎರೆಹುಳಗಳು ೧೬ ಅಂಶ ಸೆಲ್ಸಿಯಸ್‌ಗಿಂತ ಕಡಿಮೆ ಮತ್ತು ೨೮ ಅಂಶ ಸೆಲ್ಸಿಯಸ್‌ಗಿಂತ ಹೆಚ್ಚು ತಾಪಮಾನದಲ್ಲಿ ಜೀವಂತವಿರಲಾರವು. ಭಾರತೀಯ ಎರೆಹುಳಗಳು ಮಾತ್ರ ಹಿಮದಿಂದ ಆಚ್ಛಾದಿತ ಬೆಟ್ಟಗಳಿಂದ, ಮರುಭೂಮಿಗಳವರೆಗೆ ಒಂದೇ ರೀತಿಯಲ್ಲಿ ಕೆಲಸವನ್ನು ಮಾಡುತ್ತವೆ. ಇದೆಲ್ಲವೂ ದೇವರ ಆಯೋಜನೆಯಾಗಿದೆ.
೧೯. ಭಾರತೀಯ ಎರೆಹುಳಗಳಿಂದ ಕೃಷಿಗಾಗುವ ಲಾಭ
೧೯ ಅ. ಎರೆಹುಳಗಳ ಕಾರ್ಯದಿಂದ ಗಿಡಗಳಿಗೆ ಆವಶ್ಯಕವಾಗಿರುವ ಪೋಷಕ ತತ್ತ್ವಗಳಲ್ಲಿ ಹೆಚ್ಚಳವಾಗುವುದು
ಎರೆಹುಳಗಳು ಭೂಮಿಯಲ್ಲಿ ಛಿದ್ರಗಳನ್ನು ಮಾಡಿ ನೇರವಾಗಿ ಹತ್ತು ಅಡಿಗಳ ವರೆಗೆ ಒಳಗೆ (ಕೆಳಗೆ) ಹೋಗುತ್ತವೆ ಮತ್ತು ಬೇರೆ ಒಂದು ಛಿದ್ರವನ್ನು ಮಾಡಿ ಮೇಲೆ ಬರುತ್ತವೆ. ಹೋಗುವಾಗ ಆ ಛಿದ್ರವನ್ನು ಶರೀರದಿಂದ ಹೊರಸೂಸುವ ಲೋಳದಿಂದ (ವಿಶಿಷ್ಟ ದ್ರವ ಪದಾರ್ಥದಿಂದ) ಒದ್ದೆ ಮಾಡುತ್ತಾ ಹೋಗುತ್ತವೆ. ಇದರಿಂದ ಛಿದ್ರವು ಬೇಗನೆ ಮುಚ್ಚುವುದಿಲ್ಲ. ಈ ಛಿದ್ರದಿಂದ ಭೂಮಿಗೆ ಪ್ರಾಣವಾಯು (ಆಕ್ಸಿಜನ್) ದೊರಕುತ್ತದೆ. ಎರೆಹುಳಗಳು ಭೂಮಿಯಲ್ಲಿನ ಖನಿಜಗಳನ್ನು ತಿನ್ನುತ್ತವೆ ಮತ್ತು ಮಲದ ರೂಪದಲ್ಲಿ ವನಸ್ಪತಿಗಳ ಬೇರುಗಳಿಗೆ ನೀಡುತ್ತವೆ. ಎರೆಹುಳಗಳ ಮಲದಲ್ಲಿ ಸಾಮಾನ್ಯ ಮಣ್ಣಿಗಿಂತ ೫ ಪಟ್ಟು ಹೆಚ್ಚು ನೈಟ್ರೋಜನ್, ೯ ಪಟ್ಟು ಹೆಚ್ಚು ಫಾಸ್ಫರಸ್ ಮತ್ತು ೧೧ ಪಟ್ಟು ಹೆಚ್ಚು ಪೊಟ್ಯಾಶ್ ಇರುತ್ತದೆ. (ನೈಟ್ರೋಜನ್, ಫಾಸ್ಫರಸ್ ಮತ್ತು ಪೊಟ್ಯಾಶ್ ಇವು ಗಿಡಗಳ ಬೆಳವಣಿಗೆಗೆ ಆವಶ್ಯಕವಾಗಿರುವ ಭೂಮಿಯಲ್ಲಿನ ಮೂಲಭೂತ ದ್ರವ್ಯಗಳಾಗಿವೆ. – ಸಂಕಲನಕಾರರು)
೧೯ ಆ. ಎರೆಹುಳಗಳ ಕಾರ್ಯದಿಂದ ಅಂತರ್ಜಲದ ಮಟ್ಟದಲ್ಲಿ ಹೆಚ್ಚಳವಾಗುವುದು
ಯಾವಾಗ ಹೊಲದಲ್ಲಿ ನೈಸರ್ಗಿಕ ಕೃಷಿ ಮಾಡುತ್ತೇವೆಯೋ, ಆಗ ಆ ಹೊಲದಲ್ಲಿ ಒಂದು ಎಕರೆಯಲ್ಲಿ ಲಕ್ಷಗಟ್ಟಲೇ ಎರೆಹುಳಗಳಿರುತ್ತವೆ. ‘ಈ ಎರೆಹುಳಗಳು ಹಗಲುರಾತ್ರಿ ಕಾರ್ಯನಿರತವಾಗಿದ್ದರೆ, ಅವು ರೈತರಿಗಾಗಿ ಉಚಿತವಾಗಿ ಎಷ್ಟು ಗೊಬ್ಬರವನ್ನು ತಯಾರು ಮಾಡುತ್ತಿರಬಹುದು’, ಎಂಬುದರ ಕಲ್ಪನೆಯನ್ನು ಮಾಡಿ! ವಿಶೇಷವೆಂದರೆ ಈ ಎರೆಹುಳಗಳು ಭೂಮಿಯಲ್ಲಿ ಎಷ್ಟು ಛಿದ್ರಗಳನ್ನು ಮಾಡುತ್ತವೆ ಎಂದರೆ, ಅವುಗಳನ್ನು ಎಣಿಸಲು ಸಹ ಸಾಧ್ಯವಾಗುವುದಿಲ್ಲ. ಮಳೆ ಬಿದ್ದಾಗ, ಮಳೆಯ ನೀರು ಈ ಛಿದ್ರಗಳಿಂದ ನೇರವಾಗಿ ಭೂಮಿಯ ಒಡಲಿಗೆ ಹೋಗುತ್ತದೆ ಮತ್ತು ನೈಸರ್ಗಿಕ ಜಲಸಂಗ್ರಹವಾಗುತ್ತದೆ. ಜಲಸಂಗ್ರಹಕ್ಕಾಗಿ ನಾವು ಕೋಟಿಗಟ್ಟಲೇ ರೂಪಾಯಿಗಳನ್ನು ಖರ್ಚು ಮಾಡುತ್ತಿರುತ್ತೇವೆ, ಆದರೆ ಎರೆಹುಳಗಳು ಈ ಕಾರ್ಯವನ್ನು ಉಚಿತವಾಗಿ ಮಾಡುತ್ತವೆ. ಈ ನೈಸರ್ಗಿಕ ಕೃಷಿಯನ್ನು ಎಲ್ಲ ಕಡೆಗಳಲ್ಲಿ ಮಾಡಿದರೆ, ಮಳೆಯ ನೀರು ಭೂಮಿಯಲ್ಲಿ ಉತ್ತಮ ರೀತಿಯಲ್ಲಿ ಸಂಗ್ರಹವಾಗುವುದು ಮತ್ತು ಅಂತರ್ಜಲದ ಮಟ್ಟವು ತಾನಾಗಿಯೇ ಹೆಚ್ಚಾಗುವುದು. ಇದೊಂದು ಆಶ್ಚರ್ಯವೇ ಆಗಿದೆ !
೨೦. ನೈಸರ್ಗಿಕ ಕೃಷಿಯಲ್ಲಿನ ಆಚ್ಛಾದನೆ ಪದ್ಧತಿ ಮತ್ತು ಅದರ ಲಾಭಗಳು
೨೦ ಅ. ಆಚ್ಛಾದನೆಯಿಂದ ನೀರಿನ ಉಳಿತಾಯವಾಗುವುದು
ನೈಸರ್ಗಿಕ ಕೃಷಿಯ ಇನ್ನೊಂದು ಮಹತ್ವದ ಭಾಗವೆಂದರೆ, ‘ಆಚ್ಛಾದನೆ’. ಹೊಲದಲ್ಲಿನ ಹುಲ್ಲನ್ನು ಸುಡಬೇಡಿರಿ. (ಅದರ ಅಚ್ಛಾದನೆಯನ್ನು ಮಾಡಿರಿ, ಅಂದರೆ ಅದನ್ನು ಕತ್ತರಿಸಿ ಹೊಲದಲ್ಲಿ ಹರಡಿರಿ.) ಇಂದು ನಾವು ಹುಲ್ಲನ್ನು ಸುಟ್ಟು ಮಾಲಿನ್ಯವನ್ನು ಹರಡುತ್ತಿದ್ದೇವೆ. ನಾನು ಒಂದು ಹುಲ್ಲಿನ ಕಂತೆಯನ್ನು ಸಹ ಸುಡುವುದಿಲ್ಲ. ನಾನು ಬೇರೆಯವರಿಂದ ಹುಲ್ಲನ್ನು ತರಿಸಿ ಅದನ್ನು ನನ್ನ ಹೊಲದಲ್ಲಿ ಹರಡಿಸುತ್ತೇನೆ. ಎರಡು ಸಸಿಗಳ ಮಧ್ಯೆ ಖಾಲಿ ಜಾಗವನ್ನು ಬಿಡಬೇಡಿ. ಅದರಲ್ಲಿ ಹುಲ್ಲನ್ನು ಹರಡಿ. (ಇದಕ್ಕೆ ಆಚ್ಛಾದನೆ ಎಂದು ಕರೆಯುತ್ತಾರೆ.) ಈ ಹುಲ್ಲಿನ ಹೊದಿಕೆ ವಾತಾವರಣದಲ್ಲಿನ ನೀರಿನ ಅಂಶವನ್ನು ಸೆಳೆದುಕೊಳ್ಳುತ್ತದೆ ಮತ್ತು ಭೂಮಿಯ ತೇವಾಂಶವನ್ನು (ಹಸಿಯನ್ನು) ಉಳಿಸುತ್ತದೆ. ಇದರಿಂದ ನೈಸರ್ಗಿಕ ಕೃಷಿಯಲ್ಲಿ ನೀರಿನ ಉಪಯೋಗ ಶೇ. ೫೦ ರಷ್ಟು ಕಡಿಮೆಯಾಗುತ್ತದೆ.
೨೦ ಆ. ಜಾಗತಿಕ ತಾಪಮಾನ ಹೆಚ್ಚಳದ (ಗ್ಲೊಬಲ್ ವಾರ್ಮಿಂಗ್) ಸಮಸ್ಯೆಗೆ ಆಚ್ಛಾದನೆ ಒಂದು ಉಪಾಯ !
ಯಾವಾಗ ಪೃಥ್ವಿಯ ತಾಪಮಾನ ೩೫ ಅಂಶ ಸೆಲ್ಸಿಯಸ್ ಇರುತ್ತದೆಯೋ, ಆಗ ಮಣ್ಣಿನಲ್ಲಿನ ಸಾವಯವ ಇಂಗಾಲ ಬಿಡುಗಡೆಯಾಗಿ ಗಾಳಿಯಲ್ಲಿ ಹರಡುತ್ತದೆ ಮತ್ತು ಅದು ಜಾಗತಿಕ ತಾಪಮಾನದ ಹೆಚ್ಚಳಕ್ಕೆ (ಗ್ಲೊಬಲ್ ವಾರ್ಮಿಂಗ್‌ಗೆ) ಕಾರಣವಾಗುತ್ತದೆ. ಒಂದು ವೇಳೆ ಭೂಮಿಯನ್ನು ಹುಲ್ಲಿನಿಂದ ಮುಚ್ಚಿದರೆ, ಆ ಸಾವಯವ ಇಂಗಾಲವು ಭೂಮಿಯಲ್ಲಿಯೇ ಉಳಿಯುತ್ತದೆ ಮತ್ತು ಅದರಿಂದಾಗಿ ಭೂಮಿಯ ಫಲವತ್ತತೆಯ ಪ್ರಮಾಣವು ತನ್ನಷ್ಟಕ್ಕೆ ಹೆಚ್ಚಾಗುತ್ತದೆ.
೨೦ ಇ. ಆಚ್ಛಾದನೆಯಿಂದ ಕೃಷಿಯಲ್ಲಿನ ದೇಶಿ ಎರೆಹುಳಗಳ ಕಾರ್ಯದಲ್ಲಿ ಹೆಚ್ಚಳವಾಗುತ್ತದೆ
ಎರೆಹುಳಗಳು ಹಗಲಿನಲ್ಲಿ ಕೆಲಸ ಮಾಡುವುದಿಲ್ಲ; ಏಕೆಂದರೆ ಹಗಲಿನಲ್ಲಿ ಅವು ಭೂಮಿಯ ಮೇಲ್ಭಾಗಕ್ಕೆ ಬಂದರೆ, ಪಕ್ಷಿಗಳು ಅವುಗಳನ್ನು ಎತ್ತಿಕೊಂಡು ಹೋಗುತ್ತವೆ. ಎರೆಹುಳಗಳಿಗೆ ತಮ್ಮ ಮೃತ್ಯುವಿನ ಭಯವಿರುವುದರಿಂದ ಅವು ಹಗಲಿನಲ್ಲಿ ಭೂಮಿಯೊಳಗೆ ಅಡಗಿಕೊಂಡಿರುತ್ತವೆ. ಯಾವಾಗ ನಾವು ಆಚ್ಛಾದನೆಯನ್ನು ಮಾಡುವೆವೋ, (ಭೂಮಿಯ ಮೇಲೆ ಹುಲ್ಲಿನ ಹೊದಿಕೆಯನ್ನು ಹಾಕುವೆವೋ), ಆಗ ಎರೆಹುಳಗಳಿಗೆ ಕತ್ತಲೆಯಾಗಿದೆ ಎಂದು ಅನಿಸುತ್ತದೆ ಮತ್ತು ಪಕ್ಷಿಗಳಿಗೂ ಅವು ಕಾಣಿಸುವುದಿಲ್ಲ. ಆದುದರಿಂದ ಎರೆಹುಳಗಳು ಹಗಲುರಾತ್ರಿ ಕೆಲಸವನ್ನು ಮಾಡುತ್ತವೆ. ಹಗಲಿನಲ್ಲಿಯೂ ಕೆಲಸ ಮತ್ತು ರಾತ್ರಿ ಸಮಯದಲ್ಲಿಯೂ ಕೆಲಸ ! ದೇವರು ಈ ರೀತಿಯಲ್ಲಿ ಸಂಬಳವನ್ನು ಪಡೆಯದೇ ಕೆಲಸ ಮಾಡುವ ಕಾರ್ಮಿಕರನ್ನು ರೈತರಿಗಾಗಿ ಕಳುಹಿಸಿದ್ದಾರೆ!
೨೦ ಈ. ಹೊಲದಲ್ಲಿನ ಸೂಕ್ಷ್ಮಜೀವಾಣುಗಳ ಮೂಲಕ ಆಚ್ಛಾದನೆಯು ಗೊಬ್ಬರವಾಗಿ ರೂಪಾಂತರವಾಗುವುದು
ಹೊಲದಲ್ಲಿ ಯಾವ ಸೂಕ್ಷ್ಮ ಜೀವಾಣುಗಳಿರುತ್ತವೆಯೋ, ಅವುಗಳಿಗೆ ಆಚ್ಛಾದನೆಯು ಒಂದು ಆಹಾರವಾಗಿದೆ. ಜೀವಾಣುಗಳು ಅದನ್ನು ತಿಂದು ಗೊಬ್ಬರವಾಗಿ ರೂಪಾಂತರಿಸುತ್ತವೆ ಮತ್ತು ಭೂಮಿಯನ್ನು ಫಲವತ್ತಾಗಿ ಮಾಡುತ್ತವೆ.