Contents
- ೧. ಆರಂಭದಲ್ಲಿ ಗುರುಕುಲದ ಒಂದೂವರೆ ಸಾವಿರ ನಿವಾಸಿ ವಿದ್ಯಾರ್ಥಿಗಳಿಗಾಗಿ ಇತರರ ಹಾಗೆಯೇ ರಾಸಾಯನಿಕ ಕೃಷಿ ಮಾಡುತ್ತಿದ್ದ ಆಚಾರ್ಯ ದೇವವ್ರತ
- ೨. ರಾಸಾಯನಿಕ ಕೃಷಿಯು ವಿಷಯುಕ್ತ ಕೃಷಿಯಾಗಿದ್ದು ಅದು ಅಯೋಗ್ಯ ಪದ್ಧತಿಯೆಂದು ಅರಿವಾಗುವುದು
- ೩. ಕೃಷಿ ತಜ್ಞರ ಸಲಹೆಗನುಸಾರ ಸಾವಯವ ಕೃಷಿಯನ್ನು ಪ್ರಾರಂಭಿಸುವುದು, ಆದರೆ ಅದರಿಂದ ನಷ್ಟ ಅನುಭವಿಸುವುದು
- ೪. ಸಾವಯವ ಕೃಷಿಯು ಕೇವಲ ತೋರಿಕೆಗಾಗಿ ಇದೆ. ಸಾಮಾನ್ಯ ರೈತನಿಗೆ ಇದು ದುಬಾರಿಯಾಗುತ್ತದೆ, ಎಂದು ಅರಿವಾಗುವುದು
- ೫. ಪದ್ಮಶ್ರೀ ಸುಭಾಷ ಪಾಳೆಕರ ಇವರ ಮಾರ್ಗದರ್ಶನಕ್ಕನುಸಾರ ೫ ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡಿ ನೋಡಲು ನಿರ್ಧರಿಸುವುದು
- ೬. ನೈಸರ್ಗಿಕ ಕೃಷಿಯಿಂದ ಹಂತಹಂತವಾಗಿ ರಾಸಾಯನಿಕ ಕೃಷಿಗಿಂತಲೂ ಹೆಚ್ಚು ಉತ್ಪನ್ನ ಸಿಗುವುದು
- ೭. ರಾಸಾಯನಿಕಗಳಿಂದ ಭೂಮಿ ಬರಡಾಗಿರುವುದರಿಂದ ರೈತರು ಭೂಮಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರಾಕರಿಸುವುದು
- ೮. ಭೂಮಿಯಲ್ಲಿನ ಕಾರ್ಬನ್‌ನ ಪ್ರಮಾಣ ತುಂಬಾ ಕಡಿಮೆಯಾಗಿರುವುದು
- ೯. ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳು ಕಾರ್ಬನ್ ಉತ್ಪತ್ತಿ ಮಾಡುವ ಜೀವಾಣುಗಳನ್ನು ಕೊಂದು ಹಾಕುತ್ತಿದ್ದ ಕಾರಣ ಭೂಮಿ ಬರಡಾಗುವುದು
೧. ಆರಂಭದಲ್ಲಿ ಗುರುಕುಲದ ಒಂದೂವರೆ ಸಾವಿರ ನಿವಾಸಿ ವಿದ್ಯಾರ್ಥಿಗಳಿಗಾಗಿ ಇತರರ ಹಾಗೆಯೇ ರಾಸಾಯನಿಕ ಕೃಷಿ ಮಾಡುತ್ತಿದ್ದ ಆಚಾರ್ಯ ದೇವವ್ರತ
ಸ್ವತಃ ನಾನೊಬ್ಬ ಶಿಕ್ಷಕನಾಗಿದ್ದೇನೆ. ಅದರ ಜೊತೆಗೆ ನಾನು ಕೃಷಿಕನೂ ಆಗಿದ್ದೇನೆ. ಕೃಷಿಗಾಗಿ ನನ್ನ ನಿಯಮ ಏನಿದೆಯೋ, ಅದೇ ನಿಯಮಗಳು ಭಾರತದ ಪ್ರತಿಯೊಬ್ಬ ಕೃಷಿಕನ ಕೃಷಿಗೆ ಅನ್ವಯವಾಗುತ್ತದೆ. ನಾನು ಹರಿಯಾಣದ ಕುರುಕ್ಷೇತ್ರದಲ್ಲಿರುವ ಗುರುಕುಲದಲ್ಲಿ ೩೫ ವರ್ಷ ಪ್ರಾಚಾರ್ಯನಾಗಿದ್ದೆನು. ಅಲ್ಲಿ ಒಂದೂವರೆ ಸಾವಿರ ಮಕ್ಕಳು ವಾಸಿಸಿ ಶಿಕ್ಷಣ ಪಡೆಯುತ್ತಾರೆ. ಅವರ ಊಟಕ್ಕಾಗಿ ಆಹಾರಧಾನ್ಯಗಳನ್ನು ಬೆಳೆಸುವ ವ್ಯವಸ್ಥೆಯನ್ನು ನಮ್ಮ ಗುರುಕುಲದ ೨೦೦ ಎಕರೆ ಹೊಲದಲ್ಲಿ ಮಾಡಲಾಗಿದೆ. ನಾನು ಸ್ವತಃ ೯೦ ಎಕರೆ ಕೃಷಿ ಮಾಡಿ ಅದರಿಂದ ಆ ಮಕ್ಕಳಿಗೆ ಗೋಧಿ, ಇತರ ದವಸಧಾನ್ಯ ಹಾಗೂ ತರಕಾರಿಗಳ ವ್ಯವಸ್ಥೆ ಮಾಡುತ್ತಿದ್ದೆ. ನನ್ನಲ್ಲಿರುವ ಹೆಚ್ಚುವರಿ ಭೂಮಿಯನ್ನು ನಾನು ಇತರ ರೈತರಿಗೆ ಕೃಷಿ ಮಾಡಲು ಬಾಡಿಗೆಗೆ ಕೊಟ್ಟಿದ್ದೆನು.
೨. ರಾಸಾಯನಿಕ ಕೃಷಿಯು ವಿಷಯುಕ್ತ ಕೃಷಿಯಾಗಿದ್ದು ಅದು ಅಯೋಗ್ಯ ಪದ್ಧತಿಯೆಂದು ಅರಿವಾಗುವುದು
ನನ್ನ ಹೊಲದಲ್ಲಿ ಘಟನೆಯೊಂದು ಸಂಭವಿಸಿತು. ನನಗೆ ಒಂದು ಸುದ್ದಿ ಬಂತು, ಹೊಲದಲ್ಲಿ ಒಬ್ಬ ಕೆಲಸಗಾರನು ಕೀಟನಾಶಕವನ್ನು ಸಿಂಪಡಿಸುತ್ತಿದ್ದನು. ಬೇಸಿಗೆಯ ಕಾಲವಾಗಿತ್ತು. ಕೀಟನಾಶಕದ ವಾಸನೆಯಿಂದ ಅವನು ಹೊಲದಲ್ಲಿಯೇ ಮೂರ್ಛಿತನಾಗಿದ್ದನು. ನಾವು ಅವನನ್ನು ಆಸ್ಪತ್ರೆಗೆ ದಾಖಲಿಸಿದೆವು. ೨-೩ ದಿನಗಳಲ್ಲಿ ಅವನು ಸಾಮಾನ್ಯ ಸ್ಥಿತಿಗೆ ಬಂದನು. ಇಂತಹ ಘಟನೆಗಳು ಪದೇ ಪದೇ ಘಟಿಸುತ್ತವೆ, ಇದು ಎಲ್ಲ ರೈತರಿಗೂ ತಿಳಿದಿದೆ. ಆ ದಿನ ನನ್ನ ಮನಸ್ಸಿನಲ್ಲಿ ಒಂದು ವಿಚಾರ ಬಂತು, ನಾನು ಮಕ್ಕಳಿಗೆ ಉಣಿಸುವ ಅನ್ನಕ್ಕೆ ಅಂದರೆ ಗೋಧಿ, ಅಕ್ಕಿ, ಬೇಳೆ, ತರಕಾರಿ ಇತ್ಯಾದಿಗಳಿಗೆ ಕೀಟನಾಶಕವನ್ನು ಸಿಂಪಡಿಸುತ್ತಿದ್ದೇನೆ. ಕೇವಲ ವಾಸನೆಯಿಂದಲೇ ಕೆಲಸಗಾರನಿಗೆ ಮೂರ್ಛೆ ತಪ್ಪುವಂತಹ ಆ ಕೀಟನಾಶಕವನ್ನು ನಾನು ಆಹಾರದಲ್ಲಿ ಬೆರೆಸಿ ಮುಗ್ಧ ಮಕ್ಕಳಿಗೆ ಕೊಡುತ್ತಿದ್ದೇನೆ. ಇದರ ಅರ್ಥ ನಾನು ದೊಡ್ಡ ಅಪರಾಧವನ್ನು ಮಾಡುತ್ತಿದ್ದೇನೆ. ಆ ದಿನದಿಂದ ನಾನು ‘ಇನ್ನು ಹೀಗೆ ಮಾಡುವುದಿಲ್ಲ’ ಎಂದು ನಿರ್ಧರಿಸಿದೆನು.
೩. ಕೃಷಿ ತಜ್ಞರ ಸಲಹೆಗನುಸಾರ ಸಾವಯವ ಕೃಷಿಯನ್ನು ಪ್ರಾರಂಭಿಸುವುದು, ಆದರೆ ಅದರಿಂದ ನಷ್ಟ ಅನುಭವಿಸುವುದು
ನಾನು ಕೃಷಿ ತಜ್ಞರನ್ನು ಹಾಗೂ ಕೃಷಿ ಇಲಾಖೆಯ ಜನರನ್ನು ಭೇಟಿಯಾದೆನು. ಅವರು ‘ನಿಮಗೆ ಸಾವಯವ ಕೃಷಿಯ ಪರ್ಯಾಯವಿದೆ. ನೀವು ಸಾವಯವ ಕೃಷಿ ಮಾಡಬಹುದು’ ಎಂದು ಹೇಳಿದರು. ನಾನು ತಕ್ಷಣ ಹೊಂಡವನ್ನು ತೋಡಿಸಿದೆನು. ಅದರಲ್ಲಿ ಸೆಗಣಿಯನ್ನು ಹಾಕಿದೆನು. ಎರೆಹುಳಗಳನ್ನು ತರಿಸಿದೆನು ಹಾಗೂ ಪದ್ಧತಿಗನುಸಾರ ಸಾವಯವ ಕೃಷಿಯನ್ನು ಆರಂಭಿಸಿದೆನು. ಮೊದಲನೆಯ ವರ್ಷ ೫ ಎಕರೆಯಲ್ಲಿ ನಾನು ಈ ಕೆಲಸ ಮಾಡಿದೆನು. ನನಗೆ ಏನೂ ಉತ್ಪನ್ನ ಬರಲಿಲ್ಲ. ಕೀಟಗಳು ಎಲ್ಲ ಉತ್ಪನ್ನವನ್ನು ತಿಂದುಹಾಕಿದವು. ಮುಂದಿನ ವರ್ಷವೂ ನಾನು ಅದನ್ನು ಹಾಗೆಯೇ ಮುಂದುವರಿಸಿದೆನು. ನನಗೆ ರಾಸಾಯನಿಕ ಕೃಷಿಯಿಂದ ಸಿಗುತ್ತಿದ್ದ ಉತ್ಪನ್ನದ ಶೇ. ೫೦ ರಷ್ಟು ಉತ್ಪನ್ನ ಸಿಕ್ಕಿತು. ಮೂರನೆಯ ವರ್ಷವೂ ನಾನು ಪುನಃ ಪ್ರಯತ್ನಿಸಿದೆನು. ಎಡೆಬಿಡದೆ ಪರಿಶ್ರಮಪಟ್ಟ ನಂತರ ನನಗೆ ಸುಮಾರು ಶೇ. ೮೦ ರಷ್ಟು ಉತ್ಪನ್ನವನ್ನು ಗಳಿಸಲು ಸಾಧ್ಯವಾಯಿತು.
೪. ಸಾವಯವ ಕೃಷಿಯು ಕೇವಲ ತೋರಿಕೆಗಾಗಿ ಇದೆ. ಸಾಮಾನ್ಯ ರೈತನಿಗೆ ಇದು ದುಬಾರಿಯಾಗುತ್ತದೆ, ಎಂದು ಅರಿವಾಗುವುದು
ಆದ್ದರಿಂದ ನಾನು ವಿಚಾರ ಮಾಡಿದೆ, ನನ್ನಲ್ಲಿ ೨೦೦ ಎಕರೆ ಭೂಮಿಯಾದರೂ ಇದೆ. ಒಬ್ಬ ರೈತನಲ್ಲಿ ಕೇವಲ ೨-೩ ಎಕರೆಭೂಮಿ ಇದ್ದರೆ, ಅವನು ಈ ಸಾವಯವ ಕೃಷಿ ಮಾಡಿದರೆ, ಅವನಿಗೆ ನಷ್ಟವೇ ಆಗುವುದು. ಹೀಗಾದರೆ ಅವರ ಮಕ್ಕಳು-ಮರಿಗಳು ಹೇಗೆ ತಾನೆ ಬದುಕುವುದು? ಈ ಸಾವಯವ ಪದ್ಧತಿಯಿಂದ ನನ್ನ ಖರ್ಚು ಸ್ವಲ್ಪವೂ ಕಡಿಮೆಯಾಗಲಿಲ್ಲ. ನನ್ನ ಶ್ರಮವೂ ಕಡಿಮೆಯಾಗಲಿಲ್ಲ. ಉತ್ಪನ್ನ ಮಾತ್ರ ಕಡಿಮೆಯಾಯಿತು. ಈ ಕೃಷಿಯನ್ನು ಹೀಗೆ ನಡೆಸಲು ಸಾಧ್ಯವಿಲ್ಲ. ಆದ್ದರಿಂದ ಪುನಃ ರಾಸಾಯನಿಕ ಕೃಷಿಯನ್ನೇ ಮಾಡಬೇಕೇ? ಎನ್ನುವ ವಿಚಾರ ಬರಲು ಆರಂಭವಾಯಿತು.
೫. ಪದ್ಮಶ್ರೀ ಸುಭಾಷ ಪಾಳೆಕರ ಇವರ ಮಾರ್ಗದರ್ಶನಕ್ಕನುಸಾರ ೫ ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡಿ ನೋಡಲು ನಿರ್ಧರಿಸುವುದು
ಇದೇ ಸಮಯದಲ್ಲಿ ನನಗೆ ಶ್ರೀ. ಸುಭಾಷ ಪಾಳೆಕರ ಇವರ ಪರಿಚಯವಾಯಿತು. ಶ್ರೀ. ಸುಭಾಷ ಪಾಳೆಕರ ಇವರು ನೈಸರ್ಗಿಕ ಕೃಷಿಯ ವಿಷಯದಲ್ಲಿ ಅಗಾಧ ಸಂಶೋಧನೆಯನ್ನು ಮಾಡಿದ್ದಾರೆ. ನಾನು ಅವರನ್ನು ನನ್ನ ಗುರುಕುಲಕ್ಕೆ ಕರೆದು ೫೦೦ ರೈತರಿಗಾಗಿ ೫ ದಿನಗಳ ಶಿಬಿರವನ್ನು ಇಟ್ಟುಕೊಂಡೆನು. ಅದರಲ್ಲಿ ನಾನು ಸ್ವತಃ ಭಾಗವಹಿಸಿ ನೈಸರ್ಗಿಕ ಕೃಷಿಯ ಎಲ್ಲ ಮಾಹಿತಿಗಳನ್ನು ತಿಳಿದುಕೊಂಡೆನು ಹಾಗೂ ನನ್ನ ೫ ಎಕರೆ ಭೂಮಿಯಲ್ಲಿ ‘ನೈಸರ್ಗಿಕ ಕೃಷಿ’ಯನ್ನು ಆರಂಭಿಸಿದೆನು.
೬. ನೈಸರ್ಗಿಕ ಕೃಷಿಯಿಂದ ಹಂತಹಂತವಾಗಿ ರಾಸಾಯನಿಕ ಕೃಷಿಗಿಂತಲೂ ಹೆಚ್ಚು ಉತ್ಪನ್ನ ಸಿಗುವುದು
ನನಗಾದ ಒಂದು ಒಳ್ಳೆಯ ಅನುಭವವೆಂದರೆ, ನೈಸರ್ಗಿಕ ಕೃಷಿಯಿಂದ ಮೊದಲ ವರ್ಷದಲ್ಲಿಯೇ ನನಗೆ ರಾಸಾಯನಿಕ ಕೃಷಿಯಿಂದ ಸಿಗುವ ಉತ್ಪನ್ನದಷ್ಟೇ ಉತ್ಪನ್ನವನ್ನು ಪಡೆಯಲು ಸಾಧ್ಯವಾಯಿತು. ಅದರ ಮುಂದಿನ ವರ್ಷ ನಾನು ೧೦ ಎಕರೆ ಭೂಮಿಯಲ್ಲಿ ನೈಸರ್ಗಿಕ ಪದ್ಧತಿಯ ಕೃಷಿ ಮಾಡಿದೆನು. ಅದರಲ್ಲಿಯೂ ಒಳ್ಳೆಯ ಅನುಭವವಾಯಿತು. ಅನಂತರ ನಾನು ನೇರವಾಗಿ ೯೦ ಎಕರೆ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡಿದೆನು, ಅದರಲ್ಲಿಯೂ ನನಗೆ ರಾಸಾಯನಿಕ ಕೃಷಿಯಲ್ಲಿ ಎಷ್ಟು ಉತ್ಪನ್ನ ಬರುತ್ತಿತ್ತೋ, ಅಷ್ಟೇ ಉತ್ಪನ್ನ ಬಂತು. ಈಗ ನನಗೆ ರಾಸಾಯನಿಕ ಕೃಷಿಗಿಂತಲೂ ಹೆಚ್ಚು ಉತ್ಪನ್ನ ಬರುತ್ತಿದೆ.
೭. ರಾಸಾಯನಿಕಗಳಿಂದ ಭೂಮಿ ಬರಡಾಗಿರುವುದರಿಂದ ರೈತರು ಭೂಮಿಯನ್ನು ಬಾಡಿಗೆಗೆ ತೆಗೆದುಕೊಳ್ಳಲು ನಿರಾಕರಿಸುವುದು
೨೦೧೭ ರಲ್ಲಿ ಇನ್ನೊಂದು ಘಟನೆ ಘಟಿಸಿತು. ನನ್ನ ಗುರುಕುಲದ ೧೧೦ ಎಕರೆ ಭೂಮಿಯನ್ನು ನಾನು ಕಳೆದ ೩೫ ವರ್ಷಗಳಿಂದ ರೈತರಿಗೆ ಬಾಡಿಗೆಗೆ ಕೊಡುತ್ತಿದ್ದೆನು, ಆ ರೈತರು ನನ್ನ ಭೂಮಿಯನ್ನು ವಾಪಾಸು ಬಿಟ್ಟುಕೊಟ್ಟರು. ಆ ಭೂಮಿಯಲ್ಲಿ ಏನೂ ಬೆಳೆ ಬರುವುದಿಲ್ಲ. ಅದರಲ್ಲಿ ನಮ್ಮ ಖರ್ಚು ಕೂಡ ದಕ್ಕುವುದಿಲ್ಲ. ಆದ್ದರಿಂದ ನಾವು ನಿಮ್ಮ ಭೂಮಿಯನ್ನು ಬಾಡಿಗೆಗೆ ತೆಗೆದುಕೊಳ್ಳುವುದಿಲ್ಲ, ಎಂದು ಹೇಳಿ ಅವರು ಹೊಲವನ್ನು ಬಿಟ್ಟುಕೊಟ್ಟರು. ನನ್ನ ಚಿಂತೆ ಹೆಚ್ಚಾಯಿತು; ಏಕೆಂದರೆ ನಾನು ಅವರಿಗೆ ಫಲವತ್ತಾದ ಭೂಮಿಯನ್ನು ಕೊಟ್ಟಿದ್ದೆನು ಹಾಗೂ ಅವರು ಅದರಲ್ಲಿ ಏನೂ ಬೆಳೆಯುವುದಿಲ್ಲ ! ಎಂದು ಹೇಳುತ್ತಿದ್ದರು.
೮. ಭೂಮಿಯಲ್ಲಿನ ಕಾರ್ಬನ್‌ನ ಪ್ರಮಾಣ ತುಂಬಾ ಕಡಿಮೆಯಾಗಿರುವುದು
ನಾನು ಹಿಸ್ಸಾರ್, ಹರಿಯಾಣದ ಕೃಷಿ ವಿದ್ಯಾಪೀಠದ ಹಿರಿಯ ಕೃಷಿ ತಜ್ಞರು ಮತ್ತು ಕೃಷಿ ವಿಜ್ಞಾನ ಕೇಂದ್ರದ ಪ್ರಮುಖರಾಗಿರುವ ಡಾ. ಹರಿ ಓಂ ಇವರನ್ನು ಭೇಟಿಯಾಗಿ ಈ ಸಮಸ್ಯೆಯನ್ನು ಅವರ ಮುಂದಿಟ್ಟೆನು. ಅವರು, ‘ಮಣ್ಣಿನ ಮಾದರಿಯನ್ನು ಪರೀಕ್ಷಣೆಗಾಗಿ ಪ್ರಯೋಗಾಲಯಗಳಿಗೆ ಕಳುಹಿಸಿ. ಅದರಿಂದ ಭೂಮಿಯ ಸ್ಥಿತಿ ಹೇಗಿದೆಯೆಂಬುದು ತಿಳಿಯುತ್ತದೆ’ ಎಂದು ಹೇಳಿದರು. ನಾವು ಭೂಮಿಯ ವಿವಿಧ ಭಾಗದ ನೂರಾರು ಮಾದರಿಗಳನ್ನು ವಿಶ್ವವಿದ್ಯಾಲಯಕ್ಕೆ ಕಳುಹಿಸಿದೆವು. ನನ್ನ ಭೂಮಿಯಲ್ಲಿನ ಸಾವಯವ ಇಂಗಾಲದ ಪ್ರಮಾಣ ೦.೩ ಕ್ಕಿಂತಲೂ ಕಡಿಮೆಯಾಗಿದೆ ಎಂದು ವರದಿ ಬಂತು. ನಾನು ‘ಇದರ ಅರ್ಥವೇನು’, ಎಂದು ಕೇಳಿದಾಗ ಡಾ. ಹರಿ ಓಮ್ ಇವರು ‘ನಿಮ್ಮ ಭೂಮಿ ಬರಡಾಗಿದೆ, ರೈತರು ಹೇಳುತ್ತಿದ್ದ ವಿಷಯ ನಿಜವಾಗಿದೆ. ನಿಮ್ಮ ಭೂಮಿಗೆ ಏನೂ ಉತ್ಪನ್ನ ಕೊಡುವ ಕ್ಷಮತೆಯಿಲ್ಲ’ ಎಂದು ಹೇಳಿದರು.
೯. ಹೊಲದಲ್ಲಿ ಬಳಸಿದ ಹಾನಿಕರ ರಾಸಾಯನಿಕಗಳು ಕಾರ್ಬನ್ ಉತ್ಪತ್ತಿ ಮಾಡುವ ಜೀವಾಣುಗಳನ್ನು ಕೊಂದು ಹಾಕುತ್ತಿದ್ದ ಕಾರಣ ಭೂಮಿ ಬರಡಾಗುವುದು
ನಾನು ಸಂಪೂರ್ಣ ಭಾರತದ ಕೃಷಿಕರಲ್ಲಿ ವಿನಂತಿಸುವುದೆಂದರೆ ಈ ಪರಿಸ್ಥಿತಿ ಉದ್ಭವಿಸಲು ಕಾರಣವೇನೆಂದು, ನೀವು ವಿಚಾರ ಮಾಡಬೇಕು. ರೈತರು ನನ್ನ ಭೂಮಿಯನ್ನು ಬಾಡಿಗೆಗೆ ತೆಗೆದುಕೊಂಡರು. ಅವರು ಹೆಚ್ಚೆಚ್ಚು ಬೆಳೆ ಬರಬೇಕೆಂದು ಹೆಚ್ಚೆಚ್ಚು ಯೂರಿಯಾ, ಡಿಎಪಿ ಹಾಗೂ ಕೀಟನಾಶಕಗಳನ್ನು ಉಪಯೋಗಿಸಿದ ಕಾರಣ ನನ್ನ ಫಲವತ್ತಾದ ಭೂಮಿಯು ಬರಡುಭೂಮಿಯಾಯಿತು. ಇಡೀ ದೇಶದ ಭೂಮಿಯ ಅವಸ್ಥೆ ಇದೇ ರೀತಿಯಾಗಿದೆ. ರಾಸಾಯನಿಕ ಕೃಷಿಯಲ್ಲಿನ ಯೂರಿಯಾ, ಡಿಎಪಿ ಹಾಗೂ ಕೀಟನಾಶಕ ಇತ್ಯಾದಿಗಳಿಂದಾಗಿ ಹೊಲದಲ್ಲಿನ ಕಾರ್ಬನ್ ಉತ್ಪತ್ತಿ ಮಾಡುವ ಎರೆಹುಳಗಳು ಮತ್ತು ಜೀವಾಣುಗಳು ಸತ್ತು ಹೋಗುತ್ತವೆ. ನನ್ನ ಹೊಲದಲ್ಲಿನ ಉಪಯುಕ್ತ ಜೀವಾಣುಗಳು ನಾಶವಾಗಿರುವುದರಿಂದ ನನ್ನ ಭೂಮಿ ಬರಡುಭೂಮಿಯಾಯಿತು.