ಪದ್ಮಶ್ರೀ ಸುಭಾಷ ಪಾಳೆಕರ ಇವರು ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ ಪದ್ಧತಿಯನ್ನು ಕಂಡುಹಿಡಿದಿದ್ದಾರೆ. ಈಗ ಭಾರತ ಸರಕಾರವೂ ಇದನ್ನು ಅನುಮೋದಿಸಿ ಈ ಪದ್ಧತಿಯ ಪ್ರಸಾರವನ್ನು ಮಾಡಲು ನಿಶ್ಚಯಿಸಿದೆ. ಈ ಪದ್ಧತಿಯಲ್ಲಿ ‘ಜೀವಾಮೃತ’ ಹೆಸರಿನ ಪದಾರ್ಥವನ್ನು ಉಪಯೋಗಿಸಲಾಗುತ್ತದೆ. ಇದರ ಬಗ್ಗೆ ತಿಳಿದುಕೊಳ್ಳೋಣ.
ಗಿಡಕ್ಕೆ ಆಹಾರದ್ರವ್ಯಗಳು ಹೇಗೆ ಸಿಗುತ್ತವೆ ?
ಪ್ರತಿಯೊಂದು ಗಿಡವು ಅದರ ಬೇರುಗಳ ಮೂಲಕ ಆಹಾರದ್ರವ್ಯಗಳನ್ನು ಹೀರಿಕೊಳ್ಳುತ್ತದೆ. ಈ ಆಹಾರದ್ರವ್ಯಗಳು ಮಣ್ಣಿನಲ್ಲಿರುತ್ತವೆ. ಹೀಗಿದ್ದರೂ ಮಣ್ಣಿನಲ್ಲಿರುವ ಆಹಾರದ್ರವ್ಯಗಳು ಗಿಡಕ್ಕೆ ಸಿಗಲು ಕೆಲವು ಸೂಕ್ಷ್ಮ ಜೀವಾಣುಗಳ ಆವಶ್ಯಕತೆ ಇರುತ್ತದೆ. ಗಿಡಗಳಿಗಾಗಿ ಸಾರಜನಕ (ನೈಟ್ರೋಜನ್) ಅತಿ ಆವಶ್ಯಕವಾಗಿರುತ್ತದೆ. ಗಾಳಿಯಲ್ಲಿ ಸಾರಜನಕ ಬಹಳಷ್ಟು ಪ್ರಮಾಣದಲ್ಲಿ ಇರುತ್ತದೆ; ಆದರೆ ಗಿಡಗಳು ಗಾಳಿಯಿಂದ ಸಾರಜನಕವನ್ನು ತೆಗೆದುಕೊಳ್ಳಲಾರವು. ಗಿಡಗಳಿಗೆ ಮಣ್ಣಿನಿಂದಲೇ ಸಾರಜನಕವನ್ನು (ನೈಟ್ರೋಜನ್) ಹೀರಿಕೊಳ್ಳಲು ಸಾಧ್ಯವಾಗುತ್ತದೆ. ಗಿಡಗಳಿಗೆ ಆವಶ್ಯಕವಿರುವ ಸಾರಜನಕ ಮಣ್ಣಿನಲ್ಲಿ ಲಭ್ಯವಾಗಲು ಕೆಲವು ಜೀವಾಣುಗಳ ಆವಶ್ಯಕತೆ ಇರುತ್ತದೆ. ಜೀವಾಣುಗಳ ಕಾರ್ಯದ ಮೇಲೆ ಗಿಡಗಳ ಬೆಳವಣಿಗೆ ಅವಲಂಬಿಸಿರುತ್ತದೆ. ಈ ಜೀವಾಣುಗಳ ಕಾರ್ಯವು ಎಷ್ಟು ಒಳ್ಳೆಯ ರೀತಿಯಿಂದ ಆಗುತ್ತದೆಯೋ, ಅಷ್ಟು ಗಿಡಗಳಿಗೆ ಆಹಾರದ್ರವ್ಯಗಳು ಹೆಚ್ಚು ಪ್ರಮಾಣದಲ್ಲಿ ಸಿಗುತ್ತವೆ.
ದೇಶಿ ಹಸುವಿನ ಸೆಗಣಿಯ ಮಹತ್ವ
ದೇಶಿ ಹಸುವಿನ ಸೆಗಣಿಯಲ್ಲಿ ಗಿಡಗಳಿಗೆ ಅತ್ಯಂತ ಉಪಯುಕ್ತವಾಗಿರುವ ಜೀವಾಣುಗಳು ತುಂಬಾ ಪ್ರಮಾಣದಲ್ಲಿರುತ್ತವೆ. ಈ ಜೀವಾಣುಗಳು ಜರ್ಸಿಯಂತಹ ವಿದೇಶಿ ಹಸುಗಳ ಅಥವಾ ಎಮ್ಮೆಯ ಸೆಗಣಿಯಲ್ಲಿ ಇರುವುದಿಲ್ಲ. ಒಂದು ದೇಶಿ ಹಸು ದಿನಕ್ಕೆ ಸರಾಸರಿ ೧೦ ಕಿಲೋ ಸಗಣಿಯನ್ನು ಕೊಡುತ್ತದೆ. ಇಷ್ಟು ಸೆಗಣಿಯಿಂದ ೨೦೦ ಲೀಟರ್ ಜೀವಾಮೃತವನ್ನು ತಯಾರಿಸಬಹುದು. ಈ ಜೀವಾಮೃತವನ್ನು ೧೦ ಪಟ್ಟು ನೀರಿಗೆ ಸೇರಿಸಿ ೧ ಎಕರೆ (೪ ಸಾವಿರ ಚದರ ಮೀಟರ್) ಹೊಲಕ್ಕೆ ಗೊಬ್ಬರವೆಂದು ಉಪಯೋಗಿಸಬಹುದು. ಈ ಜೀವಾಮೃತವನ್ನು ತಿಂಗಳಿಗೊಮ್ಮೆ ಉಪಯೋಗಿಸಿದರೂ ಸಾಕಾಗುತ್ತದೆ. ಈ ರೀತಿ ಒಂದು ದೇಶಿ ಹಸುವಿನ ಒಂದು ದಿನದ ಸೆಗಣಿಯಿಂದ ಪ್ರತಿದಿನ ಒಂದು ಎಕರೆ ಹೊಲಕ್ಕಾಗಿ (ತೋಟಕ್ಕಾಗಿ) ಬೇಕಾಗುವಷ್ಟು ಗೊಬ್ಬರ ಸಿದ್ಧವಾಗುತ್ತದೆ, ಅಂದರೆ ತಿಂಗಳಿನ ೩೦ ದಿನಗಳಲ್ಲಿ ಒಂದು ದೇಶಿ ಹಸುವಿನ ಸೆಗಣಿಯಿಂದ ೩೦ ಎಕರೆ ಹೊಲಕ್ಕೆ (ತೋಟಕ್ಕೆ) ಗೊಬ್ಬರದ ವ್ಯವಸ್ಥೆಯಾಗುತ್ತದೆ.
’ಜೀವಾಮೃತ’ದ ಕಲ್ಪನೆಯ ಉಗಮ
ಪದ್ಮಶ್ರೀ ಸುಭಾಷ ಪಾಳೆಕರ ಇವರು ದೇಶಿ ಹಸುವಿನ ಸೆಗಣಿಯ ಮಹತ್ವವನ್ನು ತಿಳಿದುಕೊಂಡರು. ಅವರು ‘ದೇಶಿ ಹಸುವಿನ ಸೆಗಣಿಯಲ್ಲಿರುವ ಉಪಯುಕ್ತ ಜೀವಾಣುಗಳ ಪ್ರಮಾಣವನ್ನು ಗಿಡಗಳಿಗಾಗಿ ಹೇಗೆ ಹೆಚ್ಚಿಸಬೇಕು’, ಎಂಬುದರ ಚಿಂತನೆಯನ್ನು ಮಾಡಿದರು. ಇದರಿಂದಲೇ ‘ಜೀವಾಮೃತ’ದ ಸಂಕಲ್ಪನೆಯ ಉಗಮವಾಯಿತು. ಹಾಲಿನಲ್ಲಿ ಹೆಪ್ಪು ಬೆರೆಸಿದರೆ, ಹಾಲಿನಿಂದ ಮೊಸರು ತಯಾರಾಗುತ್ತದೆ. ಮೊಸರಿನಲ್ಲಿ ‘ಲ್ಯಾಕ್ಟೋಬ್ಯಾಸಿಲ್ಸ್’ ಹೆಸರಿನ ಅಸಂಖ್ಯಾತ ಸೂಕ್ಷ್ಮ ಜೀವಾಣುಗಳಿರುತ್ತವೆ. ಈ ಜೀವಾಣುಗಳು ಹಾಲಿನಲ್ಲಿರುವುದಿಲ್ಲ. ಮೊಸರು ಜೀವಾಣುಗಳ ಹೆಪ್ಪು (ಕಲ್ಚರ್) ಆಗಿರುತ್ತದೆ. ಮೊಸರಿನಂತೆ ಜೀವಾಮೃತವೂ ಜೀವಾಣುಗಳ ಒಂದು ಹೆಪ್ಪು (ಕಲ್ಚರ್) ಆಗಿದೆ. ದೇಶಿ ಹಸುವಿನ ಸೆಗಣಿ, ಗೋಮೂತ್ರ ಮತ್ತು ಮಣ್ಣು ಇವುಗಳಲ್ಲಿರುವ ಗಿಡಗಳಿಗೆ ಉಪಯುಕ್ತವಾಗಿರುವ ಜೀವಾಣುಗಳು ಬೆಲ್ಲ ಮತ್ತು ಕಡಲೆ ಹಿಟ್ಟಿನ ಸಹಾಯದಿಂದ ಶೀಘ್ರ ಗತಿಯಲ್ಲಿ ಬೆಳೆಯುತ್ತವೆ. ಜೀವಾಣುಗಳಿಗೆ ಬೆಳೆಯಲು ‘ಪ್ರೋಟೀನ್ಸ್’ ಆವಶ್ಯಕವಾಗಿರುತ್ತವೆ. ಜೀವಾಮೃತವನ್ನು ಸಿದ್ಧಪಡಿಸಲು ಯಾವ ಬೇಳೆಯ ಹಿಟ್ಟನ್ನು ಉಪಯೋಗಿಸಲಾಗುತ್ತದೆಯೋ, ಅದರಿಂದಲೂ ಈ ಆವಶ್ಯಕತೆ ಪೂರ್ಣವಾಗುತ್ತದೆ. ಬೆಳವಣಿಗೆಗಾಗಿ ಜೀವಾಣುಗಳಿಗೆ ಆವಶ್ಯಕವಿರುವ ಊರ್ಜೆಯು ಬೆಲ್ಲದಿಂದ ಸಿಗುತ್ತದೆ.
ಜೀವಾಮೃತವನ್ನು ಹೇಗೆ ತಯಾರಿಸಬೇಕು ?
ಮನೆಯಲ್ಲಿಯೇ ತರಕಾರಿಗಳನ್ನು ಬೆಳೆಸಲು ಜೀವಾಮೃತವನ್ನು ತಯಾರಿಸಲು ೧೦ ಲೀಟರ್ ನೀರಿನಲ್ಲಿ ದೇಶಿ ಹಸುವಿನ ಸುಮಾರು ಅರ್ಧದಿಂದ ೧ ಕಿಲೋ ತಾಜಾ ಸೆಗಣಿ ಮತ್ತು ಅರ್ಧದಿಂದ ೧ ಲೀಟರ್ ದೇಶಿ ಗೋಮೂತ್ರವನ್ನು ಚೆನ್ನಾಗಿ ಕಲಸಿಕೊಳ್ಳಿ. ಸೆಗಣಿ ಯಾವಾಗಲೂ ತಾಜಾ (ಹಸಿ) ಇರಬೇಕು (ಒಣಗಿರಬಾರದು). ಗೋಮೂತ್ರವು ಎಷ್ಟು ಹಳೆಯದಾದರೂ ನಡೆಯುತ್ತದೆ. ಗೋಶಾಲೆಯಲ್ಲಿ ಭೂಮಿಯ ಮೇಲೆ ಬಿದ್ದು ಹರಿದು ಹೋಗುವ ಗೋಮೂತ್ರವೂ ಇದಕ್ಕೆ ನಡೆಯುತ್ತದೆ. (ಗೋಅರ್ಕವನ್ನು ಉಪಯೋಗಿಸಬಾರದು.) ಈ ಮಿಶ್ರಣದಲ್ಲಿ ೧ ಹಿಡಿ ಮಣ್ಣು, ೧೦೦ ಗ್ರಾಮ ಬೇಸನ್ (ಕಡಲೆ ಹಿಟ್ಟು) ಅಥವಾ ಯಾವುದೇ ಬೇಳೆಯ ಹಿಟ್ಟು ಮತ್ತು ೧೦೦ ಗ್ರಾಮ್ ಸಾವಯವ ಬೆಲ್ಲವನ್ನು ಹಾಕಿ ಕಲಸಿಕೊಳ್ಳಬೇಕು. ಈ ಮಿಶ್ರಣವನ್ನು ಕೋಲಿನಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ೨ ನಿಮಿಷ ತಿರುಗಿಸಬೇಕು ಮತ್ತು ಅದರ ಮೇಲೆ ಗೋಣಿ ಚೀಲ ಅಥವಾ ಹಳೆಯ ಬಟ್ಟೆಯನ್ನು ಮುಚ್ಚಿ ನೆರಳಿನಲ್ಲಿಡಬೇಕು. ನಂತರ ೩ ದಿನಗಳ ವರೆಗೆ ಬೆಳಗ್ಗೆ ಮತ್ತು ಸಾಯಂಕಾಲ ಈ ಮಿಶ್ರಣವನ್ನು ೨ ನಿಮಿಷ ಕೋಲಿನಿಂದ ಗಡಿಯಾರದ ಮುಳ್ಳುಗಳು ತಿರುಗುವ ದಿಕ್ಕಿನಲ್ಲಿ ತಿರುಗಿಸಿ ಪುನಃ ಮುಚ್ಚಿಡಬೇಕು. ನಾಲ್ಕನೇ ದಿನದಿಂದ ಈ ಜೀವಾಮೃತವನ್ನು ಉಪಯೋಗಿಸಬಹುದು. ಜೀವಾಮೃತವನ್ನು ಲೋಹದ ಪಾತ್ರೆಯಲ್ಲಿ ತಯಾರಿಸದೇ ಮಣ್ಣಿನ ಅಥವಾ ಪ್ಲಾಸ್ಟಿಕಿನ ಪಾತ್ರೆಯಲ್ಲಿ ತಯಾರಿಸಬೇಕು. (ಜೀವಾಮೃತವನ್ನು ಹೇಗೆ ತಯಾರಿಸಬೇಕು, ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.)
ಜೀವಾಮೃತವನ್ನು ಉಪಯೋಗಿಸುವ ಪದ್ಧತಿ
ಜೀವಾಮೃತ ತಯಾರಾದ ನಂತರ ಅದನ್ನು ೭ ದಿನಗಳ ವರೆಗೆ ಉಪಯೋಗಿಸಬಹುದು; ಆದರೆ ಮೊದಲನೇ ೪ ದಿನಗಳಲ್ಲಿ, ಅಂದರೆ ಜೀವಾಮೃತದ ಘಟಕಗಳನ್ನು ಬೆರೆಸಿದ ನಾಲ್ಕನೇ ದಿನದಿಂದ ಏಳನೇ ದಿನದ ವರೆಗೆ ಉಪಯೋಗಿಸಿದರೆ ಹೆಚ್ಚು ಒಳ್ಳೆಯ ಪರಿಣಾಮ ಸಿಗುತ್ತದೆ. ಜೀವಾಮೃತವನ್ನು ಬಳಸುವಾಗ ಅದರಲ್ಲಿ ೧೦ ಪಟ್ಟು ನೀರು ಸೇರಿಸಿ ಬಳಸಬೇಕು. ಪ್ರತಿಸಲ ತಾಜಾ ಜೀವಾಮೃತವನ್ನು ತಯಾರಿಸಬೇಕು.
ಅ. ಕಸಕಡ್ಡಿಗಳಂತಹ ಕೊಳೆಯುವಂತಹ ಕಸದಿಂದ ಫಲವತ್ತಾದ ಮಣ್ಣನ್ನು (ಹ್ಯೂಮಸ್) ತಯಾರಿಸಲು ಪ್ರತಿ ವಾರಕ್ಕೊಮ್ಮೆ ಕಸದ ಮೇಲೆ ನೀರು ಸಿಂಪಡಿಸಿದಂತೆ ಜೀವಾಮೃತವನ್ನು ಸಿಂಪಡಿಸಬೇಕು. (ಕೊಳೆಯುವ ಕಸದಿಂದ ಫಲವತ್ತಾದ ಮಣ್ಣನ್ನು ತಯಾರಿಸುವ ಸವಿಸ್ತಾರ ಮಾಹಿತಿಯನ್ನು ಇಲ್ಲಿ ಕೊಡಲಾಗಿದೆ.)
ಆ. ೧೦ ಪಟ್ಟು ನೀರಿನಲ್ಲಿ ತೆಳ್ಳಗೆ ಮಾಡಿದ ಜೀವಾಮೃತವನ್ನು ಚಿಕ್ಕ ಗಿಡಗಳಿಗೆ ಒಂದು ಕಪ್ ಮತ್ತು ದೊಡ್ಡ ಗಿಡಗಳಿಗೆ ೧ ತಂಬಿಗೆ ಈ ಪ್ರಮಾಣದಲ್ಲಿ ಎಲ್ಲ ಬದಿಗಳಿಂದ ಬೇರುಗಳಿಗೆ ನೀರು ಹಾಕುವಂತೆ ಹಾಕಬೇಕು.
ಇ. ಗಿಡಗಳ ಮೇಲೆ ಮುಗ್ಗಲು (ಬುರುಸು) ಹಿಡಿಯುವುದನ್ನು ತಡೆಯಲು ಜೀವಾಮೃತವನ್ನು ೧೦ ಪಟ್ಟು ನೀರಿನಲ್ಲಿ ಸೇರಿಸಿ ಬಟ್ಟೆಯಿಂದ ಸೋಸಿ ‘ಸ್ಪ್ರೇ’ ಬಾಟಲಿಯಲ್ಲಿ ತುಂಬಿ ಗಿಡಗಳ ಮೇಲೆ ಸ್ಪ್ರೇ ಮಾಡಬೇಕು.
ಈ. ವಾರದಲ್ಲಿ ಒಂದು ಸಲ ಅಥವಾ ೧೫ ದಿನಗಳಿಗೊಮ್ಮೆ ಅಥವಾ ಅಷ್ಟೂ ಸಾಧ್ಯವಾಗದಿದ್ದರೆ ತಿಂಗಳಿಗೊಮ್ಮೆ ಎಲ್ಲ ಗಿಡಗಳಿಗೆ ಜೀವಾಮೃತವನ್ನು ಹಾಕಬೇಕು.
ಜೀವಾಮೃತವು ಹೇಗೆ ಕಾರ್ಯ ಮಾಡುತ್ತದೆ ?
ನೈಸರ್ಗಿಕ ಕಸವನ್ನು ವಿಘಟಿಸುವ ಅಸಂಖ್ಯಾತ ಜೀವಾಣುಗಳು ಜೀವಾಮೃತದಲ್ಲಿರುತ್ತವೆ. ಜೀವಾಮೃತವನ್ನು ನೈಸರ್ಗಿಕ ಕಸದ ಮೇಲೆ ಸಿಂಪಡಿಸಿದರೆ ಈ ಜೀವಾಣುಗಳು ಕಸವನ್ನು ಶೀಘ್ರಗತಿಯಲ್ಲಿ ವಿಘಟಿಸುತ್ತವೆ. ಕಸದ ವಿಘಟನೆಯಿಂದ ಗಿಡಗಳಿಗೆ ಆವಶ್ಯಕವಿರುವ ಫಲವತ್ತಾದ ಮಣ್ಣು (ಹ್ಯೂಮಸ್) ತಯಾರಾಗುತ್ತದೆ. ಜೀವಾಮೃತದಲ್ಲಿನ ಜೀವಾಣುಗಳು ಗಿಡಗಳಿಗೆ ಆಹಾರದ್ರವ್ಯಗಳನ್ನು ಬಹಳಷ್ಟು ಪ್ರಮಾಣದಲ್ಲಿ ದೊರಕಿಸಿ ಕೊಡುತ್ತವೆ. ಇದರಿಂದ ಗಿಡಗಳು ಸಶಕ್ತವಾಗುತ್ತವೆ. ಗಿಡಗಳ ಎಲೆಗಳ ಆಕಾರವೂ ದೊಡ್ಡದಾಗುತ್ತದೆ. ಗಿಡಗಳು ಅವುಗಳಿಗೆ ಬೇಕಾಗುವ ಆಹಾರವನ್ನು ದ್ಯುತಿಸಂಶ್ಲೇಷಣೆಯ ಕ್ರಿಯೆಯಿಂದ (‘ಫೊಟೋಸಿಂಥೆಸಿಸ್’ ಮೂಲಕ) ಮಾಡುತ್ತಿರುತ್ತವೆ. ಗಿಡಗಳು ಹಣ್ಣುಗಳಲ್ಲಿ ಹೊಸ ಬೀಜಗಳಿಗಾಗಿ ಆಹಾರವನ್ನು ಸಂಗ್ರಹಿಸಿಡುತ್ತವೆ. ದ್ಯುತಿಸಂಶ್ಲೇಷಣೆಯ ಕ್ರಿಯೆ ಮತ್ತು ಆಹಾರದ್ರವ್ಯಗಳ ಪೂರೈಕೆ ಎಷ್ಟು ಜಾಸ್ತಿಯಾಗುತ್ತದೆಯೋ, ಅಷ್ಟು ಫಲಧಾರಣೆ, ಅಂದರೆ ಆಹಾರವನ್ನು ಸಂಗ್ರಹಿಸುವ ಕ್ರಿಯೆಯು ಜಾಸ್ತಿಯಾಗುತ್ತದೆ. ಜೀವಾಮೃತದಿಂದ ಗಿಡಕ್ಕೆ ಆಹಾರದ್ರವ್ಯಗಳು ಹೆಚ್ಚು ಪ್ರಮಾಣದಲ್ಲಿ ಸಿಗುತ್ತಲೇ ಇರುತ್ತವೆ, ಹಾಗೆಯೇ ಎಲೆಗಳ ಆಕಾರವೂ ದೊಡ್ಡದಾಗುತ್ತದೆ. ಇದರಿಂದಾಗಿ ದ್ಯುತಿಸಂಶ್ಲೇಷಣೆಯ ಕ್ರಿಯೆಯೂ ಹೆಚ್ಚು ಪ್ರಮಾಣದಲ್ಲಿ ಆಗುತ್ತದೆ ಮತ್ತು ಹೆಚ್ಚು ಬೆಳೆ ಬರುತ್ತದೆ. ಇದರಿಂದ ಆದಾಯ ಹೆಚ್ಚಾಗುತ್ತದೆ. ಜೀವಾಮೃತದಲ್ಲಿ ಗಿಡಗಳ ರೋಗಗಳನ್ನು ತಡೆಯುವ ಗುಣಧರ್ಮವೂ ಇರುತ್ತದೆ.
ಜೀವಾಮೃತದ ಲಾಭ
ಅ. ಜೀವಾಮೃತವನ್ನು ತಯಾರಿಸುವುದು ಅತ್ಯಂತ ಸುಲಭ ಮತ್ತು ಅಗ್ಗವಾಗಿದೆ. ಇದರಿಂದ ಗೊಬ್ಬರಗಳಿಗಾಗಿ ಮಾಡುವ ವೆಚ್ಚವು ತುಂಬಾ ಕಡಿಮೆಯಾಗುತ್ತದೆ.
ಆ. ಇದು ಸಂಪೂರ್ಣ ನೈಸರ್ಗಿಕವಾಗಿದ್ದು ಗಿಡಗಳಿಗೆ ಅಮೃತಸಮಾನವಾಗಿದೆ. ವಿಷಮುಕ್ತ ಆಹಾರದ ನಿರ್ಮಿತಿಗಾಗಿ ಜೀವಾಮೃತವು ಮಹತ್ವದ ಘಟಕವಾಗಿದೆ.
ಇ. ಜೀವಾಮೃತದಿಂದ ನೈಸರ್ಗಿಕ ಕಸವು ಬೇಗನೇ ವಿಘಟನೆಯಾಗಿ ಅದು ಫಲವತ್ತಾದ ಮಣ್ಣಿನಲ್ಲಿ (‘ಹ್ಯೂಮಸ್’ಗೆ) ರೂಪಾಂತರವಾಗುತ್ತದೆ.
ಈ. ಮಣ್ಣಿನಲ್ಲಿ ಟೊಳ್ಳು ನಿರ್ಮಾಣವಾಗುತ್ತದೆ. ಇದರಿಂದ ಮಣ್ಣಿನಲ್ಲಿ ಕೆಲಸ ಮಾಡುವುದು ಸುಲಭವಾಗುತ್ತದೆ.
ಉ. ಮಣ್ಣಿನ ನೀರು ಹಿಡಿದಿಡುವ ಮತ್ತು ಅದನ್ನು ಗಿಡಗಳಿಗೆ ದೊರಕಿಸಿಕೊಡುವ ಕ್ಷಮತೆಯು ಹೆಚ್ಚುತ್ತದೆ. ಆದುದರಿಂದ ಕಡಿಮೆ ನೀರಿನಲ್ಲಿ ಗಿಡಗಳು ಚೆನ್ನಾಗಿ ಬೆಳೆಯುತ್ತವೆ ಮತ್ತು ನೀರಿನ ಉಳಿತಾಯವಾಗುತ್ತದೆ.
ಊ. ಗಿಡಗಳಿಗೆ ಆವಶ್ಯಕವಿರುವ ಆಹಾರದ್ರವ್ಯಗಳು ಮತ್ತು ‘ಮಿತ್ರ ಜೀವಾಣುಗಳು’ (ಉಪಯುಕ್ತ ಜೀವಾಣುಗಳು) ಬಹಳಷ್ಟು ಪ್ರಮಾಣದಲ್ಲಿ ದೊರಕುತ್ತವೆ.
ಎ. ಗಿಡಗಳಲ್ಲಿ ರೋಗನಿರೋಧಕಶಕ್ತಿ ನಿರ್ಮಾಣವಾಗಿರುವುದರಿಂದ ಗಿಡಗಳಿಗೆ ರೋಗವಾಗುವ ಪ್ರಮಾಣವೂ ಕಡಿಮೆಯಾಗುತ್ತದೆ.
ಏ. ಜೀವಾಮೃತವನ್ನು ಗಿಡಗಳ ಮೇಲೆ ಸಿಂಪಡಿಸುವುದರಿಂದ ಗಿಡಗಳ ಮೇಲೆ ನಿರ್ಮಾಣವಾಗುವ ಮುಗ್ಗಲನ್ನು (ಬುರುಸನ್ನು) ತಡೆಯಲು ಸಹಾಯವಾಗುತ್ತದೆ.
ಐ. ಗಿಡಗಳು ಕಠಿಣ ವಾತಾವರಣವನ್ನು ಸಹಿಸಿಕೊಳ್ಳುತ್ತವೆ. ಇದರಿಂದ ಉಷ್ಣತೆ, ಚಳಿ ಅಥವಾ ಮಳೆ ಹೆಚ್ಚು ಕಡಿಮೆ ಆದಾಗ ಆಗುವ ಹಾನಿಯು ಆಗುವುದಿಲ್ಲ.
ಜೀವಾಮೃತಕ್ಕಾಗಿ ದೇಶಿ ಹಸುವಿನ ಸೆಗಣಿ ಮತ್ತು ಗೋಮೂತ್ರವು ಎಲ್ಲಿ ಸಿಗುತ್ತದೆ ?
ಇತ್ತೀಚೆಗೆ ಎಲ್ಲೆಡೆ ದೇಶಿ ಹಸುಗಳ ಗೋಶಾಲೆಗಳಿರುತ್ತವೆ. ಬೆಂಗಳೂರು-ಮಂಗಳೂರುಗಳಂತಹ ನಗರಗಳಲ್ಲಿಯೂ ಗೋಶಾಲೆಗೆ ಭೇಟಿ ನೀಡಿ ಅವರಿಂದ ಜೀವಾಮೃತವನ್ನು ತಯಾರಿಸಲು ಸೆಗಣಿ ಮತ್ತು ಗೋಮೂತ್ರವನ್ನು ಕೊಂಡುಕೊಳ್ಳಬಹುದು ಅಥವಾ ಅರ್ಪಣೆಯ ಸ್ವರೂಪದಲ್ಲಿ ಪಡೆದುಕೊಳ್ಳಬಹುದು. ಅನೇಕ ದೇಶಿ ಹಸುಗಳು ರಸ್ತೆಯ ಮೇಲೆ ತಿರುಗಾಡುತ್ತಿರುತ್ತವೆ. ಅವುಗಳು ರಸ್ತೆಯಲ್ಲಿ ಹಾಕಿರುವ ಸೆಗಣಿಯನ್ನು ತೆಗೆದುಕೊಳ್ಳಬಹುದು. (ಹೀಗೆ ಮಾಡುವ ಮೊದಲು ಹಸುವು ದೇಶಿ ಹಸುವೇ ಆಗಿದೆ, ಎಂಬುದನ್ನು ತಿಳಿದವರನ್ನು ಕೇಳಿ ಖಚಿತಪಡಿಸಿಕೊಳ್ಳಬೇಕು.) ಕೆಲವು ಗೋಶಾಲೆಗಳು ಜೀವಾಮೃತವನ್ನು ತಯಾರಿಸಿ ಮಾರಾಟ ಮಾಡುತ್ತವೆ. ಅವರಿಂದ ಜೀವಾಮೃತವನ್ನು ಖರೀದಿಸಬಹುದು; ಆದರೆ ಅದನ್ನು ನಾವೇ ತಯಾರಿಸಿದರೆ ಅದು ಕಡಿಮೆ ಬೆಲೆಯಲ್ಲಿ ತಯಾರಾಗುತ್ತದೆ.
ಮನೆಮನೆಯಲ್ಲಿ ಕೈದೋಟ ಅಭಿಯಾನದ ಅಂತರ್ಗತ ನಿಯಮಿತವಾಗಿ ಜೀವಾಮೃತವನ್ನು ಉಪಯೋಗಿಸಿರಿ !
ಕೆಲವು ಸಾಧಕರು ಒಟ್ಟಿಗೆ ಸೇರಿ ಜೀವಾಮೃತವನ್ನು ತಯಾರಿಸಬಹುದು. ತಯಾರಿಸಿದ ಜೀವಾಮೃತವನ್ನು ಸಾಧಕರು ತಮ್ಮ ಆವಶ್ಯಕತೆಗನುಸಾರ ಹಂಚಿಕೊಳ್ಳಬಹುದು. ಹೀಗೆ ಮಾಡಿದರೆ ಶ್ರಮ ಕಡಿಮೆಯಾಗುವುದು. ತಮ್ಮ ಸಂಪರ್ಕದಲ್ಲಿನ ಹತ್ತಿರದ ಗೋಶಾಲೆಗಳಲ್ಲಿ ದೇಶಿ ಹಸುಗಳ ಸಗಣಿ ಮತ್ತು ಗೋಮೂತ್ರವು ಸಿಗಬಹುದು. ಜೀವಾಮೃತವನ್ನು ಬಳಸಿದರೆ ಯಾವುದೇ ದುಬಾರಿ ಗೊಬ್ಬರವನ್ನು ಬಳಸುವ ಆವಶ್ಯಕತೆ ಇರುವುದಿಲ್ಲ.
ಎಲ್ಲೆಡೆಯ ಸಾಧಕರಿಂದ ತಮ್ಮ ತಮ್ಮ ಮನೆಗಳಲ್ಲಿ ಆದಷ್ಟು ಬೇಗನೇ ತರಕಾರಿ, ಹಣ್ಣಿನ ಗಿಡಗಳು ಮತ್ತು ಔಷಧಿ ವನಸ್ಪತಿಗಳು ಬೆಳೆಯಲಿ, ಇದೇ ಭಗವಾನ ಶ್ರೀಕೃಷ್ಣನ ಚರಣಗಳಲ್ಲಿ ಪ್ರಾರ್ಥನೆ !
(ಪದ್ಮಶ್ರೀ ಸುಭಾಷ ಪಾಳೆಕರ ನೈಸರ್ಗಿಕ ಕೃಷಿತಂತ್ರದಲ್ಲಿನ ವಿವಿಧ ಲೇಖನಗಳ ಆಧಾರದಿಂದ ಸಂಕಲಿತ ಲೇಖನ)
ಸುಭಾಸ್ ಪಾಲೇಕಾರ್ ಒಳ್ಳೆಯ ಸಲಹೆ ನೀಡಿದ್ದಾರೆ ನಾವು ಸುಮಾರು 3ವರ್ಷ ಬಳಸಿದ್ದೇವೆ