೧. ತರಕಾರಿಗಳನ್ನು ಬೆಳೆಸಲು ಆವಶ್ಯಕ ಘಟಕಗಳು
ವನಸ್ಪತಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಈ ಪ್ರಕ್ರಿಯೆಗೆ ದ್ಯುತಿಸಂಶ್ಲೇಷಣೆ (ಫೋಟೋಸಿಂಥೆಸಿಸ್) ಎಂದು ಹೇಳುತ್ತಾರೆ. ಈ ಪ್ರಕ್ರಿಯೆಗಾಗಿ ಇಂಗಾಲದ ಡೈಆಕ್ಸೈಡ್ (ಕಾರ್ಬನ್ ಡೈಆಕ್ಸೈಡ್), ನೀರು ಮತ್ತು ಸೂರ್ಯಪ್ರಕಾಶ ಇವು ಆವಶ್ಯಕವಾಗಿರುತ್ತವೆ. ಈ ೩ ಘಟಕಗಳನ್ನು ಹೊರತುಪಡಿಸಿ ಬೇಕಾಗುವ ಘಟಕಗಳನ್ನು ಗಿಡಗಳು ಮಣ್ಣಿನಿಂದ ಹೀರಿಕೊಳ್ಳುತ್ತವೆ. ಆದುದರಿಂದ ಗಿಡಗಳಿಗೆ ಗೊಬ್ಬರವನ್ನು ಹಾಕಬೇಕಾಗುತ್ತದೆ.
ಪ್ರಾಣಿಗಳಿಗೆ ವಿವಿಧ ಕೀಟಗಳು ತೊಂದರೆ ಕೊಡುತ್ತವೆ ಅಥವಾ ಕಚ್ಚುತ್ತವೆ, ಅದೇ ರೀತಿ ವನಸ್ಪತಿಗಳಿಗೂ ಕೀಟಗಳಿಂದ ತೊಂದರೆಯಾಗುತ್ತದೆ. ಈ ಹಾನಿಕರ ಕೀಟಗಳಿಂದ ಗಿಡಗಳ ರಕ್ಷಣೆಯಾಗಬೇಕೆಂದು ಗಿಡಗಳಿಗೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಯಾವ ರೀತಿ ಪ್ರಾಣಿಗಳಿಗೆ ಜೀವಾಣು (Bacteria), ವಿಷಾಣು (Virus) ಮತ್ತು ಬುರುಸು (Fungus) ಗಳಿಂದಾಗಿ ರೋಗವಾಗುತ್ತದೋ, ಅದೇ ರೀತಿ ವನಸ್ಪತಿಗಳಿಗೂ ರೋಗವಾಗುತ್ತದೆ. ಇದನ್ನು ತಡೆಗಟ್ಟಲು ಜೀವಾಣುನಾಶಕ, ವಿಷಾಣುನಾಶಕ ಹಾಗೆಯೇ ಬುರುಸುನಾಶಕಗಳನ್ನು ಬಳಸಬೇಕಾಗುತ್ತದೆ.
ಸ್ವಲ್ಪದರಲ್ಲಿ ತರಕಾರಿಗಳನ್ನು ಬೆಳೆಸಲು ಗಾಳಿ ಮತ್ತು ಸೂರ್ಯಪ್ರಕಾಶ ಇವು ನಿಸರ್ಗದಿಂದ ಲಭ್ಯವಾಗುತ್ತವೆ ಮತ್ತು ಮಣ್ಣು, ಗೊಬ್ಬರ, ಕೀಟನಾಶಕಗಳು, ಬುರುಸುನಾಶಕಗಳು ಇತ್ಯಾದಿಗಳ ವ್ಯವಸ್ಥೆಯನ್ನು ನಾವು ಮಾಡಬೇಕಾಗುತ್ತದೆ. ‘ಸುಭಾಷ ಪಾಳೆಕರ ನೈಸರ್ಗಿಕ ಕೃಷಿ’ಯ ಪದ್ಧತಿಯಲ್ಲಿ ಬಳಸಲಾಗುವ ಜೀವಾಮೃತ ಮತ್ತು ಬೀಜಾಮೃತ ಪದಾರ್ಥಗಳು ಪೂರ್ಣ ನೈಸರ್ಗಿಕ ಮತ್ತು ದುಷ್ಪರಿಣಾಮರಹಿತವಾಗಿದ್ದು ಇವು ಗೊಬ್ಬರ ಮತ್ತು ಬುರುಸುನಾಶಕಗಳಾಗಿ ಕೆಲಸ ಮಾಡುತ್ತವೆ. ಈ ಪದ್ಧತಿಯಲ್ಲಿ ತಯಾರಿಸಲಾಗುವ ‘ನೀಮಾಸ್ತ್ರ’, ‘ದಶಪರ್ಣೀ ಅರ್ಕ’ ಇವುಗಳಂತಹ ಪದಾರ್ಥಗಳು ಕೀಟನಾಶಕಗಳೆಂದು ಕೆಲಸ ಮಾಡುತ್ತವೆ.
೨. ಕೃಷಿಗಾಗಿ ವಸ್ತುಗಳನ್ನು ಖರೀದಿಸುವುದಕ್ಕಿಂತ ಮನೆಯಲ್ಲಿ ಲಭ್ಯವಿರುವ ವಸ್ತುಗಳನ್ನು ಬಳಸಿ !
೨ ಅ. ಕುಂಡಗಳ ಪರ್ಯಾಯಗಳು : ಕುಂಡಗಳ ಬದಲು ನಿರುಪಯುಕ್ತ ಪ್ಲಾಸ್ಟಿಕಿನ ಡಬ್ಬಿಗಳು, ಬಾಟಲಿಗಳು, ಚೀಲಗಳು, ಹಾಗೆಯೇ ಚಪ್ಪಟೆ ಪಾತ್ರೆಗಳನ್ನು ಬಳಸಬಹುದು. ಅವುಗಳ ಆಕಾರವು ಕನಿಷ್ಠ ೨ ರಿಂದ ೪ ಇಂಚಿನಷ್ಟು ಮಣ್ಣು ಅಥವಾ ಗಿಡಗಳ ಒಣಗಿದ ಎಲೆಗಳು, ಕಡ್ಡಿಗಳ ಪದರು ಹರಡುವಷ್ಟಿರಬೇಕು. ಹೆಚ್ಚುವರಿ ನೀರು ಹರಿದು ಹೋಗಲು ಅವುಗಳ ತಳಕ್ಕೆ ೨ ರಿಂದ ೪ ಛಿದ್ರಗಳನ್ನು ಮಾಡಬೇಕು. ಇವುಗಳಲ್ಲಿ ಲಭ್ಯವಿರುವ ಮಣ್ಣು, ಒಣಗಿದ ಎಲೆಗಳು ಅಥವಾ ‘ಕಂಪೋಸ್ಟ್ (ಕಸದಿಂದ ತಯಾರಿಸಿದ ಗೊಬ್ಬರ)’ವನ್ನು ತುಂಬಿ ಅದರ ಮೇಲೆ ನೀರು, ಜೀವಾಮೃತ ಅಥವಾ ಮುಸುರೆ ನೀರನ್ನು ಸಿಂಪಡಿಸಿ ಮಣ್ಣನ್ನು ಒದ್ದೆ ಮಾಡಬೇಕು.
೨ ಆ. ಬೀಜಗಳ ಖರೀದಿಗೆ ಪರ್ಯಾಯ : ಕೆಲವು ಸೊಪ್ಪುತರಕಾರಿಗಳ ಬೀಜಗಳು ಮನೆಯಲ್ಲಿಯೇ ಲಭ್ಯವಿರುತ್ತವೆ, ಉದಾ. ಕೊತ್ತುಂಬರಿ ಬೀಜ, ಮೆಂತ್ಯೆ ಕಾಳು, ಹರಿವೆಸೊಪ್ಪು, ಸಾಸಿವೆ (ಸಾಸಿವೆ ಎಲೆಗಳಿಂದ ಪಲ್ಯವನ್ನು ಮಾಡಬಹುದು. ಇದಕ್ಕೆ ಹಿಂದಿಯಲ್ಲಿ ‘ಸರಸೊ ಕಾ ಸಾಗ’ ಎಂದು ಹೇಳುತ್ತಾರೆ.) ಇದನ್ನು ಹೊರತುಪಡಿಸಿ ಚಿಕ್ಕ ನೀರುಳ್ಳಿಗಳು ಅಥವಾ ಬೆಳ್ಳುಳ್ಳಿಗಳ ಪಕಳೆಗಳನ್ನೂ ಮಣ್ಣಿನಲ್ಲಿ ಹೂತರೆ ಅವುಗಳಿಂದ ಸಸಿಗಳು ತಯಾರಾಗುತ್ತವೆ. ಒಣಗಿದ ಮೆಣಸಿನಕಾಯಿಗಳ ಬೀಜಗಳು, ಟೊಮೆಟೊ ಬೀಜಗಳು, ಚವಳಿ, ಪುದೀನ (ಕಾಂಡಸಹಿತ ಬೇರು) ಇವುಗಳಿಂದಲೂ ಕೃಷಿಯನ್ನು ಮಾಡಬಹುದು.
ಈ ಬೀಜಗಳನ್ನು ಕುಂಡಗಳಲ್ಲಿ ಅಥವಾ ಪಾತಿಗಳಲ್ಲಿ ಆಳಕ್ಕೆ ಬಿತ್ತದೇ ಬೀಜಗಳ ದಪ್ಪಳತೆಯಷ್ಟು ಆಳವಾಗಿ ಬಿತ್ತಬೇಕು. ಈ ಎಲ್ಲ ತರಕಾರಿಗಳು ೪ ರಿಂದ ೮ ದಿನಗಳ ನಂತರ ಅಂಕುರಿಸುತ್ತವೆ.
೩. ಸಸ್ಯಗಳಿಗೆ ಆವಶ್ಯಕವಿರುವಷ್ಟು ಬಿಸಿಲು ಮತ್ತು ನೀರು ಸಿಗಬೇಕು !
ನಾವು ಬೆಳೆಸುವ ಗಿಡಗಳ ಮೇಲೆ, ಕನಿಷ್ಠ ೨ ರಿಂದ ೪ ಗಂಟೆ ಬೆಳಗಿನ ಬಿಸಿಲು ಬೀಳುವಂತೆ ನೋಡಬೇಕು. ಗಿಡಗಳ ನಿಯಮಿತವಾಗಿ ನಿರೀಕ್ಷಣೆ ಮಾಡಬೇಕು. ಮಣ್ಣು ಒಣಗಿದ್ದರೆ ಕೈಗಳಿಂದ ನಿಧಾನವಾಗಿ ನೀರನ್ನು ಸಿಂಪಡಿಸಬೇಕು. ನೀರು ಸಿಂಪಡಿಸುವಾಗ ಅಂಕುರಿಸಲು ಹಾಕಿದ ಬೀಜಗಳು ಹೊರಗೆ ಬರದಂತೆ ಕಾಳಜಿ ವಹಿಸಬೇಕು. ಆರಂಭದಲ್ಲಿ ಸಸಿಗಳು ನಾಜೂಕಾಗಿರುವಾಗ ನೀರಿನ ಒಂದು ದೊಡ್ಡ ಹನಿಯಿಂದಲೂ ಅವುಗಳು ನಶಿಸಬಹುದು. ಅದಕ್ಕಾಗಿ ಪ್ಲಾಸ್ಟಿಕಿನ ಬಾಟಲಿಯ ಮುಚ್ಚಳಕ್ಕೆ ಚಿಕ್ಕ ತೂತು ಮಾಡಿ ಅಭಿಷೇಕದ ಧಾರೆಯಂತೆ ನಿಧಾನವಾಗಿ ನೀರನ್ನು ಹಾಕಬೇಕು. ಅತಿಯಾಗಿ ನೀರು ಹಾಕಿದರೆ ಬುರುಸುಜನ್ಯ ರೋಗಗಳು ಹೆಚ್ಚಾಗಬಹುದು. ಹಾಗಾಗಿ ಗಿಡಗಳಿಗೆ ಸರಿಯಾದ ಪ್ರಮಾಣದಲ್ಲಿ ನೀರನ್ನು ಹಾಕಬೇಕು.
– ಓರ್ವ ಕೃಷಿತಜ್ಞರು, ಪುಣೆ (೨.೧೨.೨೦೨೧)
ತರಕಾರಿಗಳನ್ನು ಬೆಳೆಸುವುದರ ವೇಳಾಪಟ್ಟಿ
ತರಕಾರಿಗಳು | ಬಿತ್ತುವುದು ಅಥವಾ ಕೃಷಿ | ಬೆಳೆಯುವಿಕೆ | ಕೊಯ್ಲು |
---|---|---|---|
೧. ನೀರುಳ್ಳಿ ಮತ್ತು ನೀರುಳ್ಳಿಯ ಸೊಪ್ಪು | ಮೇ ಮತ್ತು ಜೂನ್ | ಜುಲೈ ಮತ್ತು ಆಗಸ್ಟ್ | ಸೆಪ್ಟೆಂಬರ್ ಮತ್ತು ಅಕ್ಟೋಬರ್ |
ಆಗಸ್ಟ್ ಮತ್ತು ಸೆಪ್ಟೆಂಬರ್ | ಅಕ್ಟೋಬರ್ ಮತ್ತು ನವೆಂಬರ್ | ಡಿಸೆಂಬರ್ ಮತ್ತು ಜನವರಿ | |
೨. ನೀರುಳ್ಳಿ ಮತ್ತು ಬೆಳ್ಳುಳ್ಳಿ | ಅಕ್ಟೋಬರ್ ಮತ್ತು ನವೆಂಬರ್ | ಡಿಸೆಂಬರ್ ಮತ್ತು ಜನವರಿ | ಫೆಬ್ರವರಿಯಿಂದ ಎಪ್ರಿಲ್ |
೩. ಸೌತೆಕಾಯಿ ವರ್ಗದ ತರಕಾರಿಗಳು (ಸೌತೆಕಾಯಿ, ಹಾಲುಗುಂಬಳ, ಹೀರೆಕಾಯಿ, ಹಾಗಲಕಾಯಿ, ಪಡವಲಕಾಯಿ) | ಮೇ ಮತ್ತು ಜೂನ್ | ಜೂನ್ ಮತ್ತು ಜುಲೈ | ಜುಲೈ ಮತ್ತು ಆಗಸ್ಟ್ |
ಸೆಪ್ಟೆಂಬರ್ ಮತ್ತು ಅಕ್ಟೋಬರ್ | ಅಕ್ಟೋಬರ್ ಮತ್ತು ನವೆಂಬರ್ | ನವೆಂಬರ್ ಮತ್ತು ಡಿಸೆಂಬರ್ | |
ಜನವರಿ ಮತ್ತು ಫೆಬ್ರವರಿ | ಫೆಬ್ರವರಿ ಮತ್ತು ಮಾರ್ಚ್ | ಮಾರ್ಚ್ ಮತ್ತು ಎಪ್ರಿಲ್ | |
೪, ಟೊಮೆಟೊ, ಬದನೆಕಾಯಿ, ಮೆಣಸಿನಕಾಯಿ ಮತ್ತು ಡೊಣ್ಣಮೆಣಸಿನಕಾಯಿ (ದೊಡ್ಡಮೆಣಸಿನಕಾಯಿ) | ಮೇ ಮತ್ತು ಜೂನ್ | ಜೂನ್ ಮತ್ತು ಜುಲೈ | ಆಗಸ್ಟ್, ಸೆಪ್ಟೆಂಬರ್ ಮತ್ತು ಅಕ್ಟೋಬರ್ |
ಸೆಪ್ಟೆಂಬರ್ ಮತ್ತು ಅಕ್ಟೋಬರ್ | ಅಕ್ಟೋಬರ್ ಮತ್ತು ನವೆಂಬರ್ | ಡಿಸೆಂಬರ್ ಮತ್ತು ಜನವರಿ | |
ಜನವರಿ ಮತ್ತು ಫೆಬ್ರವರಿ | ಫೆಬ್ರವರಿ ಮತ್ತು ಮಾರ್ಚ್ | ಮಾರ್ಚ್ ಮತ್ತು ಎಪ್ರಿಲ್ | |
೫. ಕ್ಯಾಬೇಜ್, ಹೂಕೋಸು ಮತ್ತು ನವಿಲುಕೋಸು | ಜೂನ್ ಮತ್ತು ಜುಲೈ | ಜುಲೈ ಮತ್ತು ಆಗಸ್ಟ್ | ಸೆಪ್ಟೆಂಬರ್ ಮತ್ತು ಅಕ್ಟೋಬರ್ |
ಆಗಸ್ಟ್ ಮತ್ತು ಸೆಪ್ಟೆಂಬರ್ | ಸೆಪ್ಟೆಂಬರ್ ಮತ್ತು ಅಕ್ಟೋಬರ್ | ನವೆಂಬರ್ ಮತ್ತು ಡಿಸೆಂಬರ್ | |
ಅಕ್ಟೋಬರ್ ಮತ್ತು ನವೆಂಬರ್ | ನವೆಂಬರ್ ಮತ್ತು ಡಿಸೆಂಬರ್ | ಜನವರಿ ಮತ್ತು ಫೆಬ್ರವರಿ | |
ಡಿಸೆಂಬರ್ ಮತ್ತು ಜನವರಿ | ಜನವರಿ ಮತ್ತು ಫೆಬ್ರವರಿ | ಮಾರ್ಚ್ | |
೬. ಚಳ್ಳವರೆ, ಚವಳಿ, ಬಟಾಣಿ ಇತ್ಯಾದಿಗಳು | ಮೇ ಮತ್ತು ಜೂನ್ | ಜೂನ್ ಮತ್ತು ಜುಲೈ | ಜುಲೈ ಮತ್ತು ಆಗಸ್ಟ್ |
ಜುಲೈ ಮತ್ತು ಆಗಸ್ಟ್ | ಆಗಸ್ಟ್ ಮತ್ತು ಸೆಪ್ಟೆಂಬರ್ | ಸೆಪ್ಟೆಂಬರ್ ಮತ್ತು ಅಕ್ಟೋಬರ್ | |
ಸೆಪ್ಟೆಂಬರ್ ಮತ್ತು ಅಕ್ಟೋಬರ್ | ಅಕ್ಟೋಬರ್ ಮತ್ತು ನವೆಂಬರ್ | ನವೆಂಬರ್ ಮತ್ತು ಡಿಸೆಂಬರ್ | |
ನವೆಂಬರ್ ಮತ್ತು ಡಿಸೆಂಬರ್ | ಡಿಸೆಂಬರ್ ಮತ್ತು ಜನವರಿ | ಜನವರಿ ಮತ್ತು ಫೆಬ್ರವರಿ | |
ಜನವರಿ ಮತ್ತು ಫೆಬ್ರವರಿ | ಫೆಬ್ರವರಿ ಮತ್ತು ಮಾರ್ಚ್ | ಮಾರ್ಚ್ ಮತ್ತು ಎಪ್ರಿಲ್ | |
೭. ಬೆಂಡೆಕಾಯಿ ಮತ್ತು ಗೋರಿಕಾಯಿ | ಮೇ ಮತ್ತು ಜೂನ್ | ಜೂನ್ | ಜುಲೈ ಮತ್ತು ಆಗಸ್ಟ್ |
ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | |
ಜನವರಿ ಮತ್ತು ಫೆಬ್ರವರಿ | ಫೆಬ್ರವರಿ | ಮಾರ್ಚ್ ಮತ್ತು ಎಪ್ರಿಲ್ | |
೮. ಬಟಾಟೆ | ಜೂನ್ | ಜುಲೈ ಮತ್ತು ಅಗಸ್ಟ್ | ಸೆಪ್ಟೆಂಬರ್ |
ಸೆಪ್ಟೆಂಬರ್ ಮತ್ತು ಅಕ್ಟೋಬರ್ | ನವೆಂಬರ್ ಮತ್ತು ಡಿಸೆಂಬರ್ | ಜನವರಿ | |
೯. ಲೆಟ್ಯೂಸ್ (ಸಾಲಾಡ ಗೆ ಉಪಯೋಗಿಸಲ್ಪಡುವ ಎಲೆಗಳು), ಗಜ್ಜರಿ (ಕಜ್ಜರಿ, ಕ್ಯಾರೆಟ್), ಬೀಟರೂಟ್ ಮತ್ತು ಮೂಲಂಗಿ | ಜೂನ್ ಮತ್ತು ಜುಲೈ | ಜುಲೈ | ಆಗಸ್ಟ್ |
ಆಗಸ್ಟ್ ಮತ್ತು ಸೆಪ್ಟೆಂಬರ್ | ಸೆಪ್ಟೆಂಬರ್ | ಅಕ್ಟೋಬರ್ | |
ಅಕ್ಟೋಬರ್ ಮತ್ತು ನವೆಂಬರ್ | ನವೆಂಬರ್ | ಡಿಸೆಂಬರ್ | |
ಡಿಸೆಂಬರ್ ಮತ್ತು ಜನವರಿ | ಜನವರಿ | ಫೆಬ್ರವರಿ | |
೧೦. ತೊಂಡೆಕಾಯಿ, ಒಂದು ಜಾತಿಯ ಅವರೆಕಾಯಿ (ಪಾಪಡಿ), ಡಬಲ್ ಬೀನ್ಸ್, ಅವರೆ, ಚಳ್ಳವರೆ, ನುಗ್ಗೇಕಾಯಿ, ಸುವರ್ಣಗಡ್ಡೆ, ಶುಂಠಿ, ಅರಿಶಿಣ, ಹುಳಿ ಅರಿಶಿಣ, ಕರಿಬೇವು ಮತ್ತು ಮೆಕ್ಕೆಜೋಳ | ಮೇ | ಜೂನ್‌ನಿಂದ ಸೆಪ್ಟೆಂಬರ್ | ಅಕ್ಟೋಬರ್‌ನಿಂದ ಫೆಬ್ರವರಿ |
೧೧. ಎಲ್ಲ ಪ್ರಕಾರದ ಸೊಪ್ಪು ತರಕಾರಿಗಳು | ಮೇಯಿಂದ ಎಪ್ರಿಲ್ (ವರ್ಷವಿಡಿ) | ಜೂನ್‌ನಿಂದ ಮೇ (ಕೃಷಿಯ ಒಂದು ತಿಂಗಳ ನಂತರ) | ಜೂನ್‌ನಿಂದ ಮೇ (ಕೃಷಿಯ ಒಂದು ತಿಂಗಳ ನಂತರ) |
Tumba atyuttam mahiti. Dhanyavadgalu.