ವಾಯು, ಜಲ, ದೇಶ ಮತ್ತು ಕಾಲ ಇವುಗಳಲ್ಲಿ ವಿಕೃತಿ ನಿರ್ಮಾಣವಾದರೆ ಮಹಾಮಾರಿಗಳು ಹರಡುತ್ತವೆ!
ಮಹಾಮಾರಿ ಎಂದರೆ, ಅನೇಕ ಜನರನ್ನು ಮತ್ತು ಜನಸಮುದಾಯವನ್ನು ಮೃತ್ಯುಕೂಪಕ್ಕೆ ತಳ್ಳಲು ಗಂಭೀರ ಸ್ವರೂಪವನ್ನು ಧರಿಸಿದ ರೋಗ ಅಥವಾ ವ್ಯಾಧಿ. ಗ್ರಾಮಗಳಲ್ಲಿ, ಜಿಲ್ಲೆಗಳಲ್ಲಿ, ರಾಜ್ಯಗಳಲ್ಲಿ, ದೇಶಗಳಲ್ಲಿ ಅಥವಾ ಭೂಖಂಡದಲ್ಲಿರುವ ಎಲ್ಲ ಜನರಿಗೆ ಇಂತಹ ರೋಗವನ್ನು ಎದುರಿಸಬೇಕಾಗುತ್ತದೆ. ಯಾವುದೇ ರೋಗ ಅಥವಾ ವ್ಯಾಧಿಯ ಕಾರಣವನ್ನು ಸಾಧಾರಣ ಮತ್ತು ಅಸಾಧಾರಣ ಹೀಗೆ ಎರಡು ಭಾಗಗಳಲ್ಲಿ ವಿಂಗಡಿಸಲಾಗುತ್ತದೆ. ಜನಸಮುದಾಯಕ್ಕಾಗಿ ಸಾಮಾನ್ಯವಾಗಿ ಸಾಧಾರಣ ಕಾರಣಗಳು ಅನ್ವಯಿಸುತ್ತವೆ. ವ್ಯಕ್ತಿವಿಶಿಷ್ಟ ದೋಷಗಳ ಪ್ರಕೋಪವನ್ನು ಮಾಡುವ ಮತ್ತು ಅವುಗಳನ್ನು ಕೆಡಿಸುವ ಕಾರಣಗಳನ್ನು ಅಸಾಧಾರಣ ಕಾರಣಗಳಲ್ಲಿ ಪರಿಗಣಿಸಲಾಗುತ್ತದೆ. ಈ ಕಾರಣಗಳು ಆ ವಿಶಿಷ್ಟ ವ್ಯಕ್ತಿಗೆ ಮಾತ್ರ ಸೀಮಿತವಾಗಿರುತ್ತವೆ. ಮನುಷ್ಯರ ಜೊತೆಗೆ ಪ್ರಾಣಿಗಳಿಗೂ ಉಪಯೋಗವಾಗುವ ವಾಯು (ಸುತ್ತಮುತ್ತಲಿನ ವಾತಾವರಣದಲ್ಲಿನ ಗಾಳಿ), ಜಲ (ಉಪಯೋಗದಲ್ಲಿರುವ ನೀರು), ದೇಶ (ಜನಸಮುದಾಯ ಇರುವ ಭೂಮಿಯ ಭಾಗ), ಹಾಗೆಯೇ ಕಾಲ (ಆ ಸ್ಥಳದಲ್ಲಿ ನಡೆಯುತ್ತಿರುವ ಋತು-ಕಾಲ ಅಥವಾ ಜ್ಯೋತಿಷ್ಯಶಾಸ್ತ್ರಾನುಸಾರ ವಿಕೃತ ಗ್ರಹಗಳಿಂದಾಗಿ ಉತ್ಪನ್ನವಾಗಿರುವ ಅನಿಷ್ಟ ಕಾಲಾವಧಿ) ಹೀಗೆ ಎಲ್ಲ ವಿಷಯಗಳಲ್ಲಿ ಯಾವಾಗ ವಿಕೃತಿ ಉತ್ಪನ್ನವಾಗುತ್ತದೆಯೋ, ಆಗ ಆಯುರ್ವೇದಕ್ಕನುಸಾರ ಮಹಾಮಾರಿ ಹರಡುತ್ತದೆ.
ಕಾಲ ದೂಷಿತವಾದರೆ ಎಲ್ಲರೂ ಅದರ ಪರಿಣಾಮವನ್ನು ಭೋಗಿಸಬೇಕಾಗುತ್ತದೆ!
ಗಾಳಿ ದೂಷಿತವಾದರೆ ನೀವು ಬೇರೆ ಸ್ಥಳಕ್ಕೆ ಹೋಗಬಹದು. ನೀರಿನಲ್ಲಿ ದೋಷ ಉತ್ಪನ್ನವಾದರೆ, ಆ ನೀರನ್ನು ಕುದಿಸಿ ಅಥವಾ ಔಷಧಗಳನ್ನು ಹಾಕಿ ಶುದ್ಧ ಮಾಡಿ ಉಪಯೋಗಿಸಬಹುದು. ಭೂಮಿಯಲ್ಲಿ ದೋಷ ಉತ್ಪನ್ನವಾದರೆ, ಆ ದೇಶವನ್ನು ಬಿಟ್ಟು ಹೋಗುವುದು ಕಠಿಣವಾಗಿದ್ದರೂ, ಬೇರೆ ದೇಶಕ್ಕೆ ಹೋಗಬಹುದು; ಆದರೆ ‘ಕಾಲ ವಿಕೃತವಾದರೆ ನಾವು ಎಲ್ಲಿಗೆ ಹೋದರೂ ಅದನ್ನು ತಪ್ಪಿಸಲು ಸಾಧ್ಯವಾಗುವುದಿಲ್ಲ’. ಅದರ ಪರಿಣಾಮವನ್ನು ಎಲ್ಲರೂ ಭೋಗಿಸ ಬೇಕಾಗುತ್ತದೆ. ಸುತ್ತಮುತ್ತಲಿನ ಗಾಳಿ, ನೀರು, ಭೂಮಿ ಇವು ವಿಕೃತ ಗುಣಗಳಿಂದ ತುಂಬಿಕೊಳ್ಳುತ್ತವೆ ಎಂದರೆ, ಈ ಘಟಕಗಳಲ್ಲಿ ನಮ್ಮೆಲ್ಲರ ಆರೋಗ್ಯಕ್ಕಾಗಿ, ಆರೋಗ್ಯವಂತ ಶರೀರಕ್ಕಾಗಿ ಆವಶ್ಯಕವಿರುವ ಗುಣಗಳು ಕಡಿಮೆಯಾಗಿರುತ್ತವೆ ಮತ್ತು ರೋಗಾಣುಗಳಿಗೆ ಆವಶ್ಯಕವಿರುವ ವಾತಾವರಣ ಸಿದ್ಧವಾಗಿರುತ್ತದೆ. ಅದರ ಪರಿಣಾಮದಿಂದ ನಮ್ಮ ಸುತ್ತಮುತ್ತಲಿನ ವಾತಾವರಣದಲ್ಲಿರುವ ಈ ರೋಗಾಣುರೂಪಿ ರಾಕ್ಷಸರು ಸಹಜವಾಗಿ ನಮ್ಮ ಶರೀರದ ಮೇಲೆ ಆಘಾತವನ್ನು ಮಾಡಬಹುದು. ಅದರ ಪರಿಣಾಮದಿಂದಾಗಿ ನೈಸರ್ಗಿಕ ಪ್ರಕೋಪದಿಂದ ಇಂತಹ ಮಹಾಮಾರಿಯ ಸ್ವರೂಪವು ಗಂಭೀರ ರೂಪವನ್ನು ತಾಳಬಹುದು.
ಋತುಮಾನಗಳಲ್ಲಿನ ಬದಲಾವಣೆಯಿಂದ ಮಹಾಮಾರಿಗಳು ಉದ್ಭವಿಸುವುದು
ರೋಗಗಳನ್ನು ಎದುರಿಸುವ ಕ್ಷಮತೆ ನಮ್ಮಲ್ಲಿ ಎಷ್ಟೇ ಚೆನ್ನಾಗಿದ್ದರೂ, ಸುತ್ತಮುತ್ತಲಿನ ರೋಗಾಣುಗಳ ರಾಕ್ಷಸಿ ಪ್ರವೃತ್ತಿಯ ಹಾವಳಿ ಇದ್ದೇ ಇರುತ್ತದೆ. ಋತುಮಾನದ ಬದಲಾವಣೆಗಳು ಮಹಾಮಾರಿಗಳಿಗೆ ತುಂಬಾ ಉಪಯುಕ್ತವಾಗಿರುತ್ತವೆ. ಬೇಸಿಗೆಯ ಬಿಸಿಲಿನಲ್ಲಿ ಅನಿರೀಕ್ಷಿತವಾಗಿ ಮಳೆ ಬೀಳುವುದು, ಅಥವಾ ಚಳಿಗಾಲದಲ್ಲಿ ಮಳೆ ಬೀಳುವುದು ಋತುಚಕ್ರದಲ್ಲಿನ ವೈಷಮ್ಯವನ್ನು ತೋರಿಸುತ್ತವೆ. ಇದರ ಉದಾಹರಣೆ ಎಂದರೆ, ಸಾರ್ಸ್ (SARS) ರೋಗಾಣು, ಮರ್ಸ್ (MERS) ಆಕ್ರಮಣ, ಸ್ವೈನ್ ಫ್ಲೂವಿನ ಸೋಂಕು ಹಾಗೂ ಸದ್ಯ ಕೋಲಾಹಲವೆಬ್ಬಿಸಿದ ಕೊರೋನಾ. ಇಂತಹ ರೋಗಾಣುಗಳ ಸೋಂಕು ವಾಯು, ಜಲ, ದೇಶ ಮತ್ತು ಕಾಲದ ದೋಷಗಳಿಂದಲೇ ಆಗುತ್ತದೆ. ಎಲ್ಲ ಪ್ರಾಣಿಗಳನ್ನು ವ್ಯಾಪಿಸಿರುವ ಘಟಕಗಳು ಅನಿರೀಕ್ಷಿತವಾಗಿ ಏಕೆ ಕೆಡುತ್ತವೆ ? ಇದರ ಮಾರ್ಮಿಕ ಉತ್ತರ ಕೇವಲ ಆಯುರ್ವೇದದಲ್ಲಿದೆ.
ಧರ್ಮಪಾಲನೆಯಿಂದಲೇ ಮಹಾಮಾರಿಗಳಿಂದ ರಕ್ಷಣೆ!
ನಿಜವಾಗಿ ನೋಡಿದರೆ, ಭಾರತೀಯ ಭೂಖಂಡವನ್ನು ಧರ್ಮ ಮತ್ತು ಸಂಸ್ಕೃತಿಗಾಗಿ ಗುರುತಿಸಲಾಗುತ್ತದೆ. ಶಿಸ್ತುಬದ್ಧ ರೂಢಿ ಪರಂಪರೆಗಳನ್ನು ಪಾಲಿಸದಿದ್ದರೆ, ಶಾರೀರಿಕ ಮತ್ತು ಮಾನಸಿಕ ರೋಗಗಳಿಗೆ ಆಮಂತ್ರಿಸಿದಂತಾಗುತ್ತದೆ. ಆಯುರ್ವೇದದಲ್ಲಿ ಮಹಾಮಾರಿಯ ಪ್ರಮುಖ ಕಾರಣವನ್ನು ‘ಅಧರ್ಮರೂಪಿ ವ್ಯವಹಾರ’ ಎಂದೇ ಹೇಳಲಾಗಿದೆ. ಈ ವ್ಯವಹಾರವು ಬುದ್ಧಿಭೇದದಿಂದ ಆಗುತ್ತದೆ ! ಅಂದರೆ ಪ್ರಜ್ಞಾಪರಾಧ, ಅಂದರೆ ಬುದ್ಧಿಯಿಂದ ಆಗುತ್ತಿರುವ ತಪ್ಪುಗಳು. ಒಳ್ಳೆಯ ಅಥವಾ ಕೆಟ್ಟ ಪರಿಣಾಮಗಳ ಬಗ್ಗೆ ವಿಚಾರ ಮಾಡಿ ಬುದ್ಧಿಯು ನಮಗೆ ಯೋಗ್ಯ ಅಥವಾ ಅಯೋಗ್ಯ ವಿಷಯಗಳ ಮಾರ್ಗದರ್ಶನವನ್ನು ಮಾಡುತ್ತಿರುತ್ತದೆ; ಆದರೆ ನಗರೀಕರಣದ ಹೆಸರಿನಲ್ಲಿ ಋತುಚರ್ಯೆಗಳು ಅಥವಾ ದಿನಚರ್ಯೆ-ಋತುಚರ್ಯೆಗಳಿಗನುಸಾರ ಶರೀರಧರ್ಮವನ್ನು ಪಾಲಿಸದಿದ್ದರೆ, ಹಾಗೆಯೇ ಊಟ-ತಿಂಡಿತಿನಿಸುಗಳ ತಾಳ-ಮೇಳ ಕೆಟ್ಟಿತೆಂದರೆ, ಮಾನಸಿಕ ಕಾಮಕ್ರೋಧಾದಿ ಶತ್ರುಗಳು ಹೆಚ್ಚಾಗುತ್ತಾ ಹೋಗುತ್ತವೆ. ಇದರ ಪರಿಣಾಮ ನಮ್ಮ ಸುತ್ತಮುತ್ತಲಿನ ವಾತಾವರಣದ ಮೇಲಾಗುತ್ತದೆ. ಸುತ್ತಮುತ್ತಲಿನ ಮಾಲಿನ್ಯವು ಹೆಚ್ಚಾಗುತ್ತಾ ಹೋಗುತ್ತದೆ ಹಾಗೂ ರಾಕ್ಷಸಸ್ವರೂಪಿ ರೋಗಾಣುಗಳು ಮಹಾಮಾರಿಗಳ ರೂಪದಲ್ಲಿ ಸಂಪೂರ್ಣ ದೇಶವನ್ನು ಕಬಳಿಸಲು ಸಿದ್ಧವಾಗುತ್ತವೆ. ಶಾರೀರಿಕ ವಿಕಾಸ ಅಥವಾ ನೈತಿಕ ವಿಕಾಸ ಇವುಗಳೇ ನಿಜವಾದ ಧರ್ಮದ ಮೂಲಭೂತ ಅಡಿಪಾಯವಾಗಿವೆ. ಸತ್ಯ, ದಯೆ, ದಾನ, ದೇವತಾರ್ಚನೆ, ಸದ್‌ವರ್ತನೆ, ಇಂದ್ರಿಯ ನಿಗ್ರಹಗಳಂತಹ ವಿಷಯಗಳನ್ನು ಉದ್ದೇಶಪೂರ್ವಕವಾಗಿ ಪಾಲಿಸುವುದರಿಂದ ಸಕಾರಾತ್ಮಕ ಇಂಧನ ಹೆಚ್ಚಾಗುತ್ತದೆ. ಇದರ ಪರಿಣಾಮದಿಂದ ನಮ್ಮ ಮೇಲೆ ಇಂತಹ ರೋಗಾಣುಗಳ ಪರಿಣಾಮವಾಗುವುದಿಲ್ಲ ಮತ್ತು ಇಂತಹ ಮಹಾಮಾರಿಗಳಿಂದ ನಮ್ಮ ರಕ್ಷಣೆಯಾಗುತ್ತದೆ.
ಪ್ರಾಣಿಗಳ ಭಕ್ಷಣದಿಂದ ಮನುಷ್ಯನಿಗೆ ಅವುಗಳಿಂದ ಸಿಗುವ ಅಭಿಶಾಪವೂ ಮಹಾಮಾರಿಯ ಒಂದು ಕಾರಣ!
ಅಧರ್ಮವೆಂದರೆ ಶರೀರ, ವಿಶಿಷ್ಟ ಜಾತಿ-ಧರ್ಮ, ಜನಸಮುದಾಯ ಹಾಗೂ ದೇಶಕ್ಕಾಗಿ ಹಾಕಿಕೊಟ್ಟ ಚೌಕಟ್ಟನ್ನು ಬಿಟ್ಟು ವರ್ತಿಸುವ ಪ್ರವೃತ್ತಿ ! ಕೊರೋನಾ ರೋಗಾಣುಗಳ ಸೋಂಕು ಆಗಬಾರದೆಂದು ಜಾಗತಿಕ ಆರೋಗ್ಯ ಸಂಘಟನೆಯು ಕೆಲವು ನಿಯಮಗಳನ್ನು ಹಾಕಿಕೊಟ್ಟಿದೆ. ಈ ನಿಯಮಗಳನ್ನು ಕೇವಲ ಮುಖ ಮತ್ತು ಕೈಕಾಲುಗಳನ್ನು ತೊಳೆದುಕೊಳ್ಳುವುದು, ಇಷ್ಟಕ್ಕೆ ಸೀಮಿತವಾಗಿಡದೆ ಈ ಆಚರಣೆಯನ್ನು ಪವಿತ್ರದವರೆಗೆ ತರುವುದು ಅಪೇಕ್ಷಿತವಾಗಿದೆ. ಮನುಷ್ಯರು ಪ್ರಾಣಿಗಳಿಗೆ ದಯೆ ತೋರಿಸಬೇಕು, ಇದು ಭಾರತೀಯ ಸಂಸ್ಕೃತಿಯಾಗಿದೆ. ಇಂತಹ ಪ್ರಾಣಿಗಳ ಮೇಲೆ ದಯೆ ತೋರಿಸುವ ಬದಲು ಅವುಗಳನ್ನು ಕೊಂದು ತಿಂದರೆ, ಆ ಪ್ರಾಣಿಗಳ ಶರೀರದಲ್ಲಿರುವ ಜೀವಾಣು ಅಥವಾ ರೋಗಾಣುಗಳು ನಮ್ಮ ಮೇಲೆ ಆಕ್ರಮಣ ಮಾಡುವವು.
ನಾಗಪಂಚಮಿಗೆ ನಾಗನ, ಮಣ್ಣೆತ್ತಿನ ಅಮಾವಾಸ್ಯೆ ಸಮಯದಲ್ಲಿ ಎತ್ತುಗಳ ಮತ್ತು ದೀಪಾವಳಿಯ ಸಮಯದಲ್ಲಿ ಹಸುಗಳ ಪೂಜೆಯನ್ನು ಮಾಡುತ್ತಾರೆ. ಇಂತಹ ಅನೇಕ ಘಟಕಗಳು ನಮ್ಮ ಸಂಸ್ಕೃತಿಯಲ್ಲಿ ಪೂಜನೀಯವಾಗಿವೆ. ಪ್ರಾಣಿಗಳಿಗೆ ಅನ್ಯಾಯವಾಗಿ ತೊಂದರೆಗಳನ್ನು ಕೊಟ್ಟರೆ ಹಾಗೂ ಪ್ರಾಣಿಗಳನ್ನು ಕೊಂದು ತಿಂದರೆ, ಅವುಗಳ ಶಾಪ ತಗಲುತ್ತದೆ, ಆಯುರ್ವೇದದಲ್ಲಿ ಇದಕ್ಕೆ ‘ಅಭಿಶಾಪ’ ಎಂದು ಹೇಳುತ್ತಾರೆ. ಅಭಿಶಾಪವು ಕೊರೋನಾದಂತಹ ಮಹಾಮಾರಿಯ ಒಂದು ಕಾರಣವಾಗಿದೆ. ನಾವು ಮಂಗ, ಪಾರಿವಾಳ, ನವಿಲು ಮುಂತಾದವುಗಳ ಪೂಜೆಯನ್ನು ಮಾಡುತ್ತೇವೆ; ಆದರೆ ಮನುಷ್ಯನಿಂದ ಸಂಸ್ಕೃತಿಬಾಹ್ಯ ಆಚರಣೆಯಾದರೆ, ಇಂತಹ ಪ್ರಾಣಿಗಳಲ್ಲಿರುವ ರೋಗಾಣುಗಳು ತೊಂದರೆಗಳನ್ನು ಕೊಡುತ್ತವೆ.
ರೋಗಾಣುಗಳಿಂದ ರಕ್ಷಿಸಿಕೊಳ್ಳಲು ಪರಿಸರವನ್ನು ಸ್ವಚ್ಛವಾಗಿಡಬೇಕು!
ರಕ್ಷೋಗಣಾದಿಭಿಃ ವಾ ವಿವಿಧೈಃ ಭೂತಸಂಙ್ಘೈಃ ತಮ್ ಅಧರ್ಮಮ್ ಅನ್ಯಂದ ವಾ ಅಪಿ ಅಪಚಾರಾಂತರಮ್ ಉಪಲಭ್ಯ ಅಭಿಹನ್ಯಂತೆ | – ಚರಕಸಂಹಿತೆ, ವಿಮಾನಸ್ಥಾನ, ಅಧ್ಯಾಯ ೩, ಶ್ಲೋಕ ೨೨
ಅರ್ಥ : ಅಧರ್ಮ ಅಥವಾ ತಪ್ಪು ಕೆಲಸಗಳನ್ನು (ಕರ್ಮಗಳನ್ನು) ಮಾಡಿದರೆ ಜನರು ವಿವಿಧ ಪ್ರಾಣಿಗಳಿಂದ ಮರಣಕ್ಕೀಡಾಗುತ್ತಾರೆ.
ಈ ಶ್ಲೋಕದಿಂದ ಮನುಷ್ಯನ ಅತೀ ಅಧಾರ್ಮಿಕ ಪ್ರವೃತ್ತಿಯಿಂದ ಇಂತಹ ರೋಗಾಣುಗಳಿಂದ ತಯಾರಿಸಿದ ಘಾತಕ ಅಸ್ತ್ರಗಳು ಜನರಿಗೆ ಖಂಡಿತವಾಗಿಯೂ ಮಾರಕವಾಗಿರುತ್ತವೆ, ಎಂಬುದು ಗಮನಕ್ಕೆ ಬರುತ್ತದೆ. ಇಂತಹ ರೋಗಾಣುಗಳಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಕೇವಲ ಕೈಕಾಲು ಅಥವಾ ಮುಖ ತೊಳೆದುಕೊಂಡು ಕುಳಿತುಕೊಳ್ಳುವುದಕ್ಕಿಂತ ನಮ್ಮ ಪರಿಸರವನ್ನು ಸ್ವಚ್ಛವಾಗಿಡುವುದು, ಮನೆಯ ಮುಂದೆ ಸೆಗಣಿ ಸಾರಿಸಿ ರಂಗೋಲಿ ಹಾಕುವುದು ಮುಂತಾದ ಪ್ರಯತ್ನಗಳನ್ನೂ ಮಾಡಬೇಕು. ಅಕ್ಕಪಕ್ಕದಲ್ಲಿ ತುಳಸಿ, ನೆಕ್ಕಿ, ಮಾವು, ಆಡುಸೋಗೆ, ಕಹಿಬೇವು ಇತ್ಯಾದಿ ಗಿಡಗಳನ್ನು ಬೆಳೆಸಲು ಪ್ರಯತ್ನಿಸಬೇಕು. ಅಮವಾಸ್ಯೆ ಅಥವಾ ಹುಣ್ಣಿಮೆಯಂದು ದ್ವಿಚಕ್ರ ಅಥವಾ ಚತುಶ್ಚಕ್ರ ವಾಹನಗಳಿಗೂ ಪೂಜೆಯನ್ನು ಮಾಡಬೇಕು; ಏಕೆಂದರೆ ಇಂತಹ ಸಮಯದಲ್ಲಿ ಈ ರೋಗಾಣುಗಳ ಪ್ರಭಾವವು ತುಂಬಾ ಹೆಚ್ಚಿರುತ್ತದೆ. ಇದರ ಬಗ್ಗೆ ಹೇಳಿದರೆ, ಜನರು ನಮ್ಮನ್ನೇ ಮೂರ್ಖರೆಂದು ತಿಳಿಯುತ್ತಾರೆ !
– ವೈದ್ಯ ರೂಪೇಶ ಸಾಳುಂಖೆ, ಎಮ್.ಡಿ. ಆಯುರ್ವೇದ, ಕಾಯಚಿಕಿತ್ಸಾ ಪ್ರೊಫೆಸ್ಸರ್, ಎಸ್.ಜಿ.ವಿ. ಆಯುರ್ವೇದಿಕ್ ಮೆಡಿಕಲ್ ಕಾಲೇಜ್ ಮತ್ತು ಸಂಶೋಧನಾ ಕೇಂದ್ರ, ಬೈಲಹೊಂಗಲ, ಬೆಳಗಾವಿ ಜಿಲ್ಲೆ.