ರೋಗಿಯು ಬೇಗನೆ ಗುಣಮುಖನಾಗಬೇಕು; ಎಂದು ಜ್ಯೋತಿಷ್ಯಶಾಸ್ತ್ರಕ್ಕನುಸಾರ ಧನ್ವಂತರಿ ದೇವತೆಗೆ ಪ್ರಾರ್ಥನೆ ಮಾಡಿ ಔಷಧಿ ಸೇವಿಸಬೇಕು. ಔಷಧಿಯನ್ನು ಪ್ರಾರಂಭಿಸುವಾಗ ಸಾಧ್ಯವಾದರೆ ಯೋಗ್ಯ ನಕ್ಷತ್ರ, ತಿಥಿ, ವಾರಗಳನ್ನು ನೋಡಬೇಕು. ಹಾಗೆ ಮಾಡಲು ಸಾಧ್ಯವಿಲ್ಲದಿದ್ದರೆ ಧನ್ವಂತರಿ ದೇವತೆಯ ಪ್ರಸಾದವೆಂದು ತಿಳಿದು ದೇವರ ಮೇಲೆ ಸಂಪೂರ್ಣ ಶ್ರದ್ಧೆಯನ್ನಿಟ್ಟು ಔಷಧಿ ಸೇವಿಸಬೇಕು. ರೋಗಿಗೆ ಉಪಚಾರ ನೀಡುವವರು, ಉದಾ. ವೈದ್ಯರು, ಪರಿಚಾರಕಿ, ಅವರ ಸಹವಾಸದಲ್ಲಿರುವ ವ್ಯಕ್ತಿ ಮುಂತಾದವರ ಗ್ರಹಗತಿ ಅನುಕೂಲವಾಗಿದ್ದರೆ ರೋಗಿಯು ಬೇಗನೆ ಗುಣಮುಖನಾಗಬಹುದು. ರೋಗಿಗೆ ವೈದ್ಯರ ಮೇಲೆ ಶ್ರದ್ಧೆ ಇದ್ದರೂ, ಕೆಲವೊಮ್ಮೆ ಆ ರೋಗಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬರುವುದಿಲ್ಲ; ಏಕೆಂದರೆ ಅವರ ಗ್ರಹಗತಿಯಲ್ಲಿ ಹೋಲಿಕೆ ಇರುವುದಿಲ್ಲ. ಅದೇ ಇನ್ನೊಬ್ಬ ರೋಗಿಯು ತಕ್ಷಣ ಗುಣಮುಖನಾಗುತ್ತಾನೆ. ಇದಕ್ಕಾಗಿ ‘ರೋಗಿಯು ಔಷಧಿಯನ್ನು ಸೇವಿಸುವಾಗ ಹೇಗೆ ಕಾಳಜಿ ವಹಿಸಬೇಕು ಮತ್ತು ರೋಗಿಯ ಸೇವೆಯಲ್ಲಿರುವ ವ್ಯಕ್ತಿಯ ಗ್ರಹಗತಿ ಹೇಗಿರಬೇಕು ?’, ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಮುಂದೆ ಕೊಡಲಾಗಿದೆ.
‘ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರತಿಯೊಂದು ವಿಷಯ ಬಗ್ಗೆ ಎಷ್ಟೊಂದು ಆಳವಾಗಿ ವಿಚಾರ ಮಾಡಲಾಗಿದೆ ಎಂಬುದರ ಅರಿವಾದಾಗ ಆಶ್ಚರ್ಯವೆನಿಸುತ್ತದೆ. ‘ನನಗೆ ಎಲ್ಲವೂ ತಿಳಿಯುತ್ತದೆ’, ಎಂಬ ಅಹಂಕಾರ ಇರುವವರು ಮತ್ತು ಎನೂ ಕಲಿಯುವ ಇಚ್ಛೆ ಇಲ್ಲದ ಬುದ್ಧಿಪ್ರಾಮಾಣ್ಯವಾದಿಗಳಿಗಂತೂ ಜ್ಯೋತಿಷ್ಯ ಶಾಸ್ತ್ರವು ಅಸತ್ಯ ಎಂದೆನಿಸುತ್ತದೆ !’ – (ಪರಾತ್ಪರ ಗುರು) ಡಾ. ಆಠವಲೆ |
೧. ಔಷಧಿಯನ್ನು ಸೇವಿಸುವ ಮುಹೂರ್ತ
೧ ಅ. ಔಷಧಿ ಸೇವಿಸಲು ಪ್ರಾರಂಭಿಸುವಾಗ ಇವುಗಳ ಪೈಕಿ ನಕ್ಷತ್ರಗಳು ಇರಲಿ
ಔಷಧಿ ಸೇವಿಸುವಾಗ ಮತ್ತು ಶ್ರೀ ಗುರುಗಳ ಸೇವೆಯನ್ನು ಪ್ರಾರಂಭಿಸುವಾಗ ಅಶ್ವಿನಿ, ಮೃಗಶಿರಾ, ಪುಷ್ಯ, ಹಸ್ತ, ಚಿತ್ರಾ, ಅನುರಾಧಾ ಮತ್ತು ರೇವತಿ ನಕ್ಷತ್ರಗಳು ಇರಬೇಕು. ಜನ್ಮ ನಕ್ಷತ್ರದ ಸಮಯದಲ್ಲಿ ಔಷಧಿಯನ್ನು ಸೇವಿಸದಿರಿ.
೧ ಆ. ರೋಗಿಯ ಸೇವೆಯನ್ನು ಆರಂಭಿಸುವಾಗ ಯಾವ ವಾರ ಇರಬೇಕು ?
ರೋಗಿಯ ಸೇವೆಯನ್ನು ಪ್ರಾರಂಭಿಸುವಾಗ ಅಥವಾ ಔಷಧಿಯನ್ನು ಕೊಡುವಾಗ ರವಿವಾರ, ಬುಧವಾರ, ಗುರುವಾರ ಅಥವಾ ಶುಕ್ರವಾರ ಇರಬೇಕು. ಇವುಗಳಲ್ಲಿ ರವಿವಾರವು ಅತ್ಯಂತ ಶುಭವೆಂದು ಹೇಳಲಾಗಿದೆ; ಏಕೆಂದರೆ ರವಿ ಗ್ರಹವು ತೇಜತತ್ತ್ವದ ಕಾರಕವಾಗಿದೆ. ಯಾವುದೇ ಔಷಧಿಯನ್ನು ರವಿವಾರದಂದು ತೆಗೆದುಕೊಳ್ಳಲು ಪ್ರಾರಂಭಿಸಿದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.
೧ ಇ. ಔಷಧಿಯನ್ನು ಸೇವಿಸಲು ಈ ತಿಥಿಗಳನ್ನು ತಪ್ಪಿಸಿ
ಔಷಧಿಯನ್ನು ಸೇವಿಸುವಾಗ ಶುಭ ತಿಥಿ ಇರಬೇಕು. ಕ್ಷಯತಿಥಿ, ಅಮಾವಾಸ್ಯೆ ಮತ್ತು ಪೂರ್ಣಿಮೆಯ ತಿಥಿಗಳನ್ನು ತಪ್ಪಿಸಿ.
೨. ರೋಗಿ ಮತ್ತು ಅವರ ಸೇವೆ ಮಾಡುವ ವ್ಯಕ್ತಿ ಇವರ ಜಾತಕದಲ್ಲಿ ಏನು ಇರಬೇಕು ಮತ್ತು ಏನು ಇರಬಾರದು ?
೨ ಅ. ಸೇವಕರ ಜಾತಕದಲ್ಲಿ ಅಶುಭ ಗ್ರಹಗಳು ಇರಬಾರದು !
ಸೇವಕರ ಜಾತಕದಲ್ಲಿ ರವಿ, ಚಂದ್ರ, ಬುಧ, ಗುರು, ಶುಕ್ರ ಈ ಗ್ರಹಗಳು ಶುಭವಾಗಿರಬೇಕು. ಸೇವಕರ ಜಾತಕದಲ್ಲಿ ಗ್ರಹಗಳು ಅಶುಭ ಅಥವಾ ನೀಚ ರಾಶಿಯಲ್ಲಿ ಇದ್ದರೆ ರೋಗಿಯ ತೊಂದರೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಅಧಿಕವಾಗಿರುತ್ತದೆ ಅಥವಾ ರೋಗಿಯು ತಡವಾಗಿ ಗುಣಮುಖನಾಗುತ್ತಾನೆ; ಏಕೆಂದರೆ ಸೇವಕರ ಜಾತಕದಲ್ಲಿನ ಗ್ರಹ ಅಶುಭವಾಗಿದ್ದರೆ ಅದರ ಪರಿಣಾಮ ರೋಗಿಯ ಮೇಲಾಗುವುದು ಕಂಡುಬರುತ್ತದೆ.
೨ ಆ. ಗ್ರಹ, ಗ್ರಹದ ನೀಚ ರಾಶಿ ಮತ್ತು ರಾಶಿಯ ಅನುಕ್ರಮಾಂಕ
ಗ್ರಹ | ಗ್ರಹದ ನೀಚ ರಾಶಿ | ರಾಶಿಯ ಅನುಕ್ರಮಾಂಕ |
---|---|---|
೧. ರವಿ | ತುಲಾ | ೭ |
೨. ಚಂದ್ರ | ವೃಶ್ಚಿಕ | ೮ |
೩. ಮಂಗಳ | ಕರ್ಕ | ೪ |
೪. ಬುಧ | ಮೀನ | ೧೨ |
೫. ಗುರು | ಮಕರ | ೧೦ |
೬. ಶುಕ್ರ | ಕನ್ಯಾ | ೬ |
೭. ಶನಿ | ಮೇಷ | ೧ |
೮. ರಾಹು | ಧನು | ೯ |
೯. ಕೇತು | ಮಿಥುನ | ೩ |
೨ ಇ. ರೋಗಿ ಮತ್ತು ಸೇವಕರಲ್ಲಿ ಗ್ರಹಮೈತ್ರಿ ಇರಬೇಕು !
ಗ್ರಹಮೈತ್ರಿ ಅಂದರೆ ಇಬ್ಬರು ವ್ಯಕ್ತಿಗಳ ರಾಶಿಯ ಸ್ವಾಮಿ ಒಂದಕ್ಕೊಂದು ಮಿತ್ರ ಗ್ರಹ ಆಗಿರಬೇಕು, ಉದಾ. ರೋಗಿಯ ರಾಶಿ ಮಕರ ಆಗಿದ್ದರೆ, ಆ ರಾಶಿಯ ಸ್ವಾಮಿ ಶನಿಗ್ರಹವಾಗಿದ್ದಾನೆ. ಶನಿ ಗ್ರಹಕ್ಕೆ ಬುಧ ಮತ್ತು ಶುಕ್ರ ಇವು ಮಿತ್ರಗ್ರಹಗಳಾಗಿವೆ. ಇದರರ್ಥ ಮಕರ ರಾಶಿಯ ವ್ಯಕ್ತಿಗಳಿಗೆ ಬುಧ ಗ್ರಹಕ್ಕೆ ಸಂಬಂಧಪಟ್ಟ (ಮಿಥುನ ಮತ್ತು ಕನ್ಯಾ) ರಾಶಿ ಮತ್ತು ಶುಕ್ರ ಗ್ರಹದೊಂದಿಗೆ ಸಂಬಂಧಪಟ್ಟ (ವೃಷಭ ಮತ್ತು ತುಲಾ) ರಾಶಿಯ ವ್ಯಕ್ತಿಗಳೊಡನೆ ಗ್ರಹಮೈತ್ರಿ ಇರುತ್ತದೆ; ಆದುದರಿಂದ ‘ಈ ರಾಶಿಯ ವ್ಯಕ್ತಿಗಳ ಸೇವೆ ಅಧಿಕ ಲಾಭದಾಯಕವಾಗಿರುತ್ತದೆ’, ಎಂಬುದಾಗಿ ಗಮನಕ್ಕೆ ಬಂದಿದೆ. ಮುಂದಿನ ಕೋಷ್ಟಕದಲ್ಲಿ ಗ್ರಹ, ಗ್ರಹಕ್ಕನುಸಾರ ರಾಶಿ ಮತ್ತು ಗ್ರಹಕ್ಕನುಸಾರ ಮಿತ್ರಗ್ರಹಗಳನ್ನು ಕೊಡಲಾಗಿದೆ.
ಗ್ರಹ | ಗ್ರಹದ ಅಧಿಪತ್ಯದಲ್ಲಿರುವ ರಾಶಿ | ಮಿತ್ರಗ್ರಹ |
ರವಿ | ಸಿಂಹ | ಚಂದ್ರ, ಮಂಗಳ, ಗುರು |
ಚಂದ್ರ | ಕರ್ಕ | ರವಿ. ಬುಧ |
ಮಂಗಳ | ಮೇಷ, ವೃಶ್ಚಿಕ | ರವಿ, ಗುರು, ಚಂದ್ರ |
ಬುಧ | ಮಿಥುನ, ಕನ್ಯಾ | ರವಿ, ಶುಕ್ರ |
ಗುರು | ಧನು, ಮೀನ | ರವಿ. ಚಂದ್ರ, ಮಂಗಳ |
ಶುಕ್ರ | ವೃಷಭ, ತುಲಾ | ಬುಧ, ಶನಿ |
ಶನಿ | ಮಕರ, ಕುಂಭ | ಬುಧ, ಶುಕ್ರ |
೨ ಇ. ರೋಗಿಯ ನಕ್ಷತ್ರದಿಂದ ಸೇವಕರ ನಕ್ಷತ್ರ ದ್ವಿತೀಯ ಆಗಿರಬಾರದು !
ಯಾರ ಸೇವೆ ಮಾಡುವುದಿದೆಯೋ, ಅವರ ನಕ್ಷತ್ರದಿಂದ ಸೇವಕರ ನಕ್ಷತ್ರವು ಎರಡನೇಯದಾಗಿದ್ದರೆ, ಸೇವೆ ವ್ಯರ್ಥವಾಗುತ್ತದೆ. (ಉದಾ. ಪರಾತ್ಪರ ಗುರು ಡಾಕ್ಟರರ ನಕ್ಷತ್ರ ‘ಉತ್ತರಾಷಾಢಾ’ ಆಗಿರುವುದರಿಂದ ಅವರ ನಕ್ಷತ್ರದಿಂದ ಎರಡನೇ ನಕ್ಷತ್ರ ಅಂದರೆ, ‘ಶ್ರವಣ’ ನಕ್ಷತ್ರ ಇರುವ ಸಾಧಕರು ಅವರ ಸೇವೆ ಮಾಡಬಾರದು.)
– ಸೌ. ಪ್ರಾಜಕ್ತಾ ಜೋಶಿ (ಜ್ಯೋತಿಷ್ಯ ಫಲಿತ ವಿಶಾರದೆ), ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಜ್ಯೋತಿಷ್ಯ ವಿಭಾಗ, ಸನಾತನ ಆಶ್ರಮ ರಾಮನಾಥಿ, ಗೋವಾ.