ತಮಿಳುನಾಡಿನ ಮುಖ್ಯ ಗಣಪತಿ ದೇವಸ್ಥಾನಗಳ ಪೈಕಿ ಮೊದಲನೆಯದಾದ ಸ್ವಯಂಭೂ ಶ್ರೀ ಕರ್ಪಗ ವಿನಾಯಗರ ದೇವಸ್ಥಾನ !
ಭಾರತದ ಕೆಲವು ರಾಜ್ಯಗಳಲ್ಲಿ ಗಣೇಶೋತ್ಸವವು ಅತೀ ಉತ್ಸಾಹದಿಂದ ಹಾಗೂ ಸಾರ್ವಜನಿಕವಾಗಿ ದೊಡ್ಡ ಸ್ತರದಲ್ಲಿ ಆಚರಿಸಲಾಗುತ್ತದೆ. ಮಾತ್ರವಲ್ಲ ಭಾರತದಾದ್ಯಂತ ಪೌರಾಣಿಕ ಇತಿಹಾಸವಿರುವ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಆಪತ್ಕಾಲದ ಹಿನ್ನೆಲೆಯಲ್ಲಿ ಆಚರಿಸುತ್ತಿರುವ ಈ ಗಣೇಶೋತ್ಸವದಲ್ಲಿ ಅಪರಿಚಿತ, ಪುರಾತನ ದೇವಸ್ಥಾನಗಳ ದರ್ಶನವಾಗುವುದೆಂದರೆ, ಇದು ಶ್ರೀ ಗಣೇಶನ ಕೃಪೆಯೇ ಆಗಿದೆ ! ಈ ಸಂಕಟದಿಂದ ಪಾರಾಗಲು ಮತ್ತು ಭಕ್ತರ ಆರೋಗ್ಯದ ರಕ್ಷಣೆ ಮಾಡುವುದಕ್ಕಾಗಿ ಶ್ರೀ ಗಣೇಶನ ಚರಣಗಳಲ್ಲಿ ಪ್ರಾರ್ಥನೆ ಮಾಡೋಣ ! ಆ ವಿಘ್ನಹರ್ತನ ಚರಣಗಳಲ್ಲಿ ದೃಢ ಶ್ರದ್ಧೆಯನ್ನಿಟ್ಟು ಗಣೇಶೋತ್ಸವವನ್ನು ಆಚರಿಸಿ ಮನಃಪೂರ್ವಕವಾಗಿ ಶ್ರೀ ಗಣೇಶನ ಉಪಾಸನೆಯನ್ನು ಮಾಡೋಣ !
ಸೂಚನೆ: ಇದು ೨೦೨೦ರಲ್ಲಿ ಕೊರೊನಾ ಸಾಂಕ್ರಾಮಿಕದಿಂದ ಉತ್ಪನ್ನವಾದ ಆಪತ್ಕಾಲದಲ್ಲಿ ಪ್ರಕಟಿಸಲಾದ ಲೇಖನವಾಗಿದೆ.
ಸ್ವಯಂಭೂ ಶ್ರೀ ಕರ್ಪಗ ವಿನಾಯಗರ (ಗಣಪತಿ) ಚೈತನ್ಯಮಯ ಮೂರ್ತಿ
ದೇವಸ್ಥಾನದ ಇತಿಹಾಸ
ಪಿಳ್ಳೈಯಾರಪಟ್ಟಿ (ಪಿಳ್ಳೈಯಾರ ಅಂದರೆ ತಮಿಳು ಭಾಷೆಯಲ್ಲಿ ಶ್ರೀ ಗಜಾನನ) ಇಲ್ಲಿನ ಸ್ವಯಂಭೂ ಗಣಪತಿಯ ದೇವಸ್ಥಾನವು ತಮಿಳುನಾಡಿನಲ್ಲಿರಿವ ಗಣಪತಿಯ ಮುಖ್ಯ ಮೂರು ದೇವಸ್ಥಾನಗಳ ಪೈಕಿ ಮೊದಲನೇ ದೇವಸ್ಥಾನವಾಗಿದೆ. ಈ ದೇವಸ್ಥಾನವು ಒಂದು ಸಾವಿರ ವರ್ಷಗಳ ಹಿಂದೆ ಪಲ್ಲವ ರಾಜರ ಕಾಲದಲ್ಲಿ ಕಟ್ಟಲಾಗಿದೆ. ಗಣಪತಿಯ ಆಕಾರವು ಬೆಟ್ಟದಿಂದಲೇ ಉದ್ಭವಿಸಿದೆ. ದೇವಸ್ಥಾನದ ಹಿಂದೆ ಹೋದರೆ ನಮಗೆ ಈ ಬೆಟ್ಟದ ದರ್ಶನವಾಗುತ್ತದೆ. ಗಣೇಶನ ಸ್ವಯಂಭೂ ಆಕಾರದ ರಹಸ್ಯದ ಕಾಲಖಂಡವು (ಇತಿಹಾಸವು) ಯಾರಿಗೂ ಗೊತ್ತಿಲ್ಲ. ಈ ಗಣಪತಿಯ ಬಲಗೈಯಲ್ಲಿ ಶಿವಲಿಂಗವನ್ನು ಹಿಡಿದಿರುವುದನ್ನು ಕಂಡುಬರುತ್ತದೆ. ಸಾಮಾನ್ಯವಾಗಿ ಶ್ರೀ ಗಣೇಶನಿಗೆ ೪ ಕೈಗಳಿರುತ್ತವೆ. ಈ ಸ್ವಯಂಭೂ ಮೂರ್ತಿಗೆ ಮಾತ್ರ ೨ ಕೈಗಳಿವೆ. ಮೂರ್ತಿಯ ಹಿಂದೆ ಬೆಟ್ಟದಲ್ಲಿಯೇ ಒಂದು ಶಿವಲಿಂಗವೂ ತನ್ನಷ್ಟಕ್ಕೆ ಸಿದ್ಧವಾಗಿದೆ; ಆದರೆ ಈ ಶಿವಲಿಂಗದ ದರ್ಶನವನ್ನು ನಮಗೆ ಪಡೆಯಲು ಸಾಧ್ಯವಾಗುವುದಿಲ್ಲ.
ಸ್ವಯಂಭೂ ಶ್ರೀ ಗಜಾನನನ ದೇವಸ್ಥಾನ ಮತ್ತು ದೇವಸ್ಥಾನದ ಎದುರಿಗೆ ಇರುವ ಪವಿತ್ರ ಕೆರೆಗಳು