ಕೂರ್ಮಾವತಾರ

ಕೂರ್ಮಜಯಂತಿ

ವೈಶಾಖ ಹುಣ್ಣಿಮೆಯಂದು ಕೂರ್ಮಜಯಂತಿಯನ್ನು ಆಚರಿಸಲಾಗುತ್ತದೆ. ಕೂರ್ಮ ಜಯಂತಿಯು ಹಿಂದೂಗಳಿಗೆ ಒಂದು ಮಂಗಲಮಯ ಉತ್ಸವವಾಗಿದೆ. ಈ ದಿನ ಹಿಂದೂಗಳು ಶ್ರೀವಿಷ್ಣುವಿನ ಕೂರ್ಮಾವತಾರದ ರೂಪದಲ್ಲಿ ಆರಾಧಿಸುತ್ತಾರೆ. ಯಾವುದೇ ಸ್ಥಳದಲ್ಲಿ ಶ್ರೀವಿಷ್ಣುವಿನ ದೇವಸ್ಥಾನವಿದ್ದಲ್ಲಿ ಅಲ್ಲಿ ದೊಡ್ಡ ಹಬ್ಬವಾಗಿ ಆಚರಿಸಲಾಗುತ್ತದೆ. ಜನರು ಒಂದು ದಿನ ಮೊದಲೇ ಶ್ರದ್ಧೆಯಿಂದ ಈ ವ್ರತ ಮತ್ತು ಉಪವಾಸವನ್ನು ಮಾಡುತ್ತಾರೆ. ಉಪವಾಸದ ನಂತರ ದೇವಸ್ಥಾನದಲ್ಲಿ ಪೂಜೆ ಮತ್ತು ಸೇವೆಯನ್ನು ಮಾಡುತ್ತಾರೆ. ತಮ್ಮ ಇಚ್ಛೆಗನುಸಾರ ದಾನ ಧರ್ಮ ಮಾಡುತ್ತಾರೆ ಮತ್ತು ಬ್ರಾಹ್ಮಣರಿಗೆ ದಕ್ಷಿಣೆಯನ್ನು ನೀಡಲಾಗುತ್ತದೆ.

ಕೂರ್ಮ ಜಯಂತಿಯ ಮಹತ್ವ

ಭಗವಾನ ಶ್ರೀವಿಷ್ಣುವಿನ ಕೂರ್ಮಾವತಾರವಿಲ್ಲದಿದ್ದರೆ ಕ್ಷೀರಸಾಗರದ ಮಂಥನ ಆಗುತ್ತಿರಲಿಲ್ಲ. ಅದರಲ್ಲಿ ೧೪ ರತ್ನಗಳು ಸಹ ಸಿಗುತ್ತಿರಲಿಲ್ಲ ಮತ್ತು ಅಮೃತಕಲಶವೂ ಸಹ ಸಿಗುತ್ತಿರಲಿಲ್ಲ. ಅದರಿಂದಾಗಿ ಕೂರ್ಮಜಯಂತಿಗೆ ಒಂದು ಧಾರ್ಮಿಕ ಮಹತ್ವವು ಪ್ರಾಪ್ತವಾಗಿದೆ. ಭಕ್ತರು ಶ್ರೀವಿಷ್ಣುವಿನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸತೊಡಗಿದರು. ಯಾವುದಾದರೂ ಕಾರ್ಯವನ್ನು ಪ್ರಾರಂಭಿಸಿಬೇಕಾದರೆ ಕೂರ್ಮಜಯಂತಿಯು ಅತ್ಯಂತ ಶುಭದಿನವೆಂದು ಪರಿಗಣಿಸಲ್ಪಡುತ್ತದೆ. ಶ್ರೀವಿಷ್ಣುವಿನ ಕೂರ್ಮಾವತಾರದಲ್ಲಿ ಯೋಗಮಾಯೆಯ ಸ್ಥಾನ ಸಹ ಸುನಿಶ್ಚಿತವಾಗಿರುತ್ತದೆ. ಈ ದಿನ ವಾಸ್ತುವಿಗೆ ಸಂಬಂಧಿತ ಅಥವಾ ನಮಗೆ ಹೊಸ ಮನೆ ಖರೀದಿಸುವುದು ಮತ್ತು ಬದಲಾಯಿಸಲು ಇದ್ದಲ್ಲಿ ಅದಕ್ಕಾಗಿ ಕೂರ್ಮಜಯಂತಿಯು ಶುಭದಿನವೆಂದು ತಿಳಿಯಲಾಗುತ್ತದೆ.

ಕೂರ್ಮಾವತಾರದ ಕತೆ

ಒಂದು ಸಲ ದೇವತೆಗಳು ಯುದ್ಧದಲ್ಲಿ ಅಸುರರ ಕೈಯಲ್ಲಿ ಸೋತುಹೋಗುತ್ತಾರೆ ಮತ್ತು ಚಿಂತಿತರಾಗಿ ಭಗವಾನ ಶ್ರೀವಿಷ್ಣುವಿಗೆ ಶರಣಾಗುತ್ತಾರೆ. ಎಲ್ಲ ದೇವತೆಗಳು ಭಗವಾನ ಶ್ರೀವಿಷ್ಣುವಿನ ಚರಣಗಳಿಗೆ ನಮಸ್ಕರಿಸುತ್ತಾರೆ. ಆಗ ಭಗವಾನ ಶ್ರೀವಿಷ್ಣು ದೇವತೆಗಳಿಗೆ, ‘ನೀವೆಲ್ಲ ಏಕೆ ಇಷ್ಟು ಚಿಂತಿತರಾಗಿದ್ದೀರಿ’ ಎಂದು ವಿಚಾರಿಸುತ್ತಾರೆ. ಆಗ ಎಲ್ಲ ದೇವತೆಗಳು, ‘ಅಸುರರು ನಮ್ಮನ್ನು ಯುದ್ಧದಲ್ಲಿ ಸೋಲಿಸಿಬಿಟ್ಟಿದ್ದಾರೆ. ಈ ಅಸುರರ ಮೇಲೆ ಜಯ ಸಾಧಿಸಲು ನಮಗೇನಾದರೂ ಉಪಾಯ ಹೇಳಿ’ ಎನ್ನುತ್ತಾರೆ. ಆಗ ಭಗವಾನ ಶ್ರೀವಿಷ್ಣುವು, ‘ನೀವೆಲ್ಲರೂ ಸಮುದ್ರ ತೀರಕ್ಕೆ ಹೋಗಿ ಅಸುರರಿಗೆ ತಿಳಿಸಿ ಹೇಳಿರಿ. ನೀವು ಮಂದಾರ ಪರ್ವತ ಮತ್ತು ವಾಸುಕಿ ನಾಗನಿಗೂ ಅಲ್ಲಿಗೆ ಬರಲು ಹೇಳಿರಿ. ಮಂದಾರ ಪರ್ವತವು ಕಡೆಗೋಲಿನ ಕಾರ್ಯವನ್ನು ಮಾಡುವುದು ಮತ್ತು ವಾಸುಕಿಯು ಹಗ್ಗದ ಕಾರ್ಯವನ್ನು ಮಾಡುವನು. ನೀವೆಲ್ಲರೂ ಪರ್ವತದಲ್ಲಿರುವ ಔಷಧೀ ಸಸ್ಯಗಳನ್ನು ತೆಗೆದು ಸಮುದ್ರದಲ್ಲಿ ಹಾಕಿರಿ ಮತ್ತು ಅಸುರರ ಜೊತೆಗೆ ಸಮುದ್ರಮಂಥನ ಮಾಡಿರಿ. ಆಗ ಸಮುದ್ರದಲ್ಲಿ ಅಮೃತವು ಉತ್ಪನ್ನವಾಗುವುದು. ಅದನ್ನು ಕುಡಿದು ನೀವೆಲ್ಲರೂ ಅಮೃತಶಕ್ತಿಯನ್ನು ಪಡೆದು ಅಮರರಾಗುವಿರಿ, ಎಲ್ಲ ದೇವಗಣಗಳು ಶಕ್ತಿಶಾಲಿಯಾಗುವವು ಮತ್ತು ಆ ಶಕ್ತಿಯಿಂದಾಗಿ ಅಸುರರನ್ನು ಸೋಲಿಸಲು ಸಾಧ್ಯವಾಗುವುದು’, ಎನ್ನುತ್ತಾರೆ. ಭಗವಾನ ಶ್ರೀವಿಷ್ಣುವಿನ ಈ ಮಾರ್ಗದರ್ಶನವನ್ನು ಕೇಳಿ ಭಗವಾನ ಶ್ರೀವಿಷ್ಣುವಿಗೆ ನಮಸ್ಕಾರ ಮಾಡಿ ಎಲ್ಲ ದೇವತೆಗಳು ಅಸುರರಿಗೆ ತಿಳಿಸಿ ಹೇಳತೊಡಗಿದರು ಮತ್ತು ಅನಂತರ ಸಮುದ್ರಮಂಥನ ತಯಾರಿ ಮಾಡಲು ಪ್ರಾರಂಭಿಸಿದರು.

ಕೆಲವು ಕಡೆಗಳಲ್ಲಿ ಹೀಗೂ ಹೇಳಲಾಗುತ್ತದೆ ಏನೆಂದರೆ ಒಂದು ಸಲ ಅಸುರರು ಅಮೃತಕಲಶವನ್ನು ಕದ್ದಿದ್ದರು. ಅದರಿಂದಾಗಿ ದೇವಾಸುರರ ನಡುವೆ ಯುದ್ಧವು ಪ್ರಾರಂಭವಾಗಿತ್ತು. ಯುದ್ಧದ ಸಮಯದಲ್ಲಿ ಆ ಅಮೃತಕಲಶವು ಅವರ ಕೈಯಿಂದ ಜಾರಿ ಸಮುದ್ರದಲ್ಲಿ ಬೀಳುತ್ತದೆ. ಈಗ ಈ ಅಗಾಧವಾದ ಸಮುದ್ರದಿಂದ ಅಮೃತವನ್ನು ಹೇಗೆ ಪ್ರತ್ಯೇಕಿಸುವುದು? ಎಂಬ ಪ್ರಶ್ನೆಯು ಬರುತ್ತದೆ. ಆಗ ಎಲ್ಲ ದೇವತೆಗಳು ಭಗವಾನ ಶ್ರೀವಿಷ್ಣುವಿನ ಬಳಿ ಉಪಾಯವನ್ನು ಕೇಳಿದಾಗ ಅವರು ಸಮುದ್ರಮಂಥನ ಮಾಡಲು ಆದೇಶ ನೀಡುತ್ತಾರೆ. ಅದರ ನಂತರ ಸಮುದ್ರಮಂಥನದ ತಯಾರಿಯು ಪ್ರಾರಂಭವಾಗುತ್ತದೆ.

ಸಮುದ್ರಮಂಥನದಲ್ಲಿ ಮಂದರಾಚಲ ಪರ್ವತವು ಕಡೆಗೋಲಿನ ಕಾರ್ಯವನ್ನು ಮಾಡಲಿತ್ತು. ಅದನ್ನು ಎತ್ತಿಕೊಂಡು ಸಮುದ್ರದ ಬಳಿ ತರಲಾಯಿತು. ಭಗವಾನ ಶ್ರೀವಿಷ್ಣುವಿನ ಆಜ್ಞೆಯಂತೆ ವಾಸುಕಿ ನಾಗನು ಅಲ್ಲಿಗೆ ಬಂದಿದ್ದನು. ಅಲ್ಲಿ ಭಗವಾನ ಶ್ರೀವಿಷ್ಣುವೂ ಉಪಸ್ಥಿತರಿದ್ದರು. ದೇವರು ಮತ್ತು ಅಸುರರು ಭಗವಾನ ಶ್ರೀವಿಷ್ಣುವಿನ ಬಳಿ ಪ್ರಾರ್ಥನೆಯನ್ನು ಮಾಡಿದರು ‘ಹೇ ಭಗವಂತಾ, ನಾವು ಈ ಸಮುದ್ರ ಮಂಥನ ಯಶಸ್ವಿಯಾಗಲಿ ಎಂದು ನಮ್ಮನ್ನು ಆಶೀರ್ವದಿಸಿ’. ಭಗವಾನ ಶ್ರೀವಿಷ್ಣುವು ಅಸುರರನ್ನು ವಾಸುಕಿಯ ಮುಖದ ಬಳಿ ಮತ್ತು ವಾಸುಕಿಯ ಬಾಲದ ಬಳಿ ದೇವತೆಗಳನ್ನು ನಿಲ್ಲಿಸಿದರು.

ಮಂಥನ ಆರಂಭವಾಗುವ ಕೆಲವೇ ಕ್ಷಣ ಮೊದಲು ಮಂದರಾಚಲ ಪರ್ವತವು ಮುಳುಗತೊಡಗಿತು. ಆಗ ಭಗವಾನ ಶ್ರೀವಿಷ್ಣುವು ದೇವತೆಗಳ ರಕ್ಷಣೆಗಾಗಿ ಈಗ ಏನಾದರೂ ಮಾಡಬೇಕು ಎಂದು ವಿಚಾರ ಮಾಡಿ ತಕ್ಷಣ ಕೂರ್ಮ ಅಂದರೆ ಆಮೆಯ ಅವತಾರವನ್ನು ಧರಿಸಿ ಆ ಮಂದರಾಚಲದ ಕೆಳಗೆ ಹೋಗಿ ಪರ್ವತಕ್ಕೆ ಆಧಾರ ನೀಡಿದರು. ಇದರಿಂದಾಗಿ ಸಮುದ್ರ ಮಂಥನವು ಯಶಸ್ವಿಯಾಯಿತು ಮತ್ತು ಅದರಿಮದ ೧೪ ರತ್ನಗಳು, ಅನೇಕ ದಿವ್ಯ ವಸ್ತುಗಳು, ಮತ್ತು ಅದರ ಜೊತೆಗೆ ಅಮೃತವೂ ಹೊರಗೆ ಬಂತು. ಎಲ್ಲ ಜೀವಗಳ ಉದ್ಧಾರಕ್ಕಾಗಿ ಅಮೃತಸ್ವರೂಪ ಉಪಹಾರವನ್ನು ಪ್ರದಾನಿಸಿದ ಭಗವಾನ ಶ್ರೀವಿಷ್ಣುವಿನ ಚರಣಗಳಲ್ಲಿ ಎಷ್ಟು ಕೃತಜ್ಞತೆಗಳನ್ನು ವ್ಯಕ್ತಪಡಿಸಲು ಇಚ್ಛಿಸಿದರೂ ಅದು ಕಡಿಮೆಯೇ ಆಗುತ್ತದೆ.

ಭಗವಾನ ಶ್ರೀವಿಷ್ಣುವು ಕೂರ್ಮಾವತಾರದಲ್ಲಿ ಕೇವಲ ಮಂದರಾಚಲ ಪರ್ವತಕ್ಕೆ ಆಧಾರ ನೀಡಿದ್ದು ಮಾತ್ರವಲ್ಲ ಅವರ ಅಗಾಧ ಕೃಪೆಯಿಂದಲೇ ಈ ಮಂಥನವು ಯಶಸ್ವಿಯಾಗಿತ್ತು, ಅದರ ಬಗ್ಗೆ ಭಾಗವತದಲ್ಲಿ ನೀಡಲಾಗಿರುವ ಒಂದು ಸುಂದರ ವರ್ಣನೆಯನ್ನು ಈಗ ನೋಡೋಣ.

ಸಮುದ್ರಮಂಥನವು ಆರಂಭವಾದಾಗ ಬಲಶಾಲಿಗಳಾದ ದೇವತೆಗಳ ಮತ್ತು ಅಸುರರಿಂದ ಹಿಡಿಯಲ್ಪಟ್ಟಿದ್ದರೂ ಕೆಳಗೆ ಆಧಾರವಿಲ್ಲದ ಕಾರಣ ಮಂದಾರಾಚಲವು ಸಮುದ್ರದಲ್ಲಿ ಮುಳುಗತೊಡಗಿತು. ನಮ್ಮ ಕಠಿಣವಾದ ಪ್ರಾರಬ್ಧದಿಂದಾಗಿ ನಮ್ಮ ಪ್ರಯತ್ನಗಳೆಲ್ಲವೂ ಮಣ್ಣುಪಾಲಾಗುತ್ತಿವೆ. ಇದನ್ನು ನೋಡಿ ಎಲ್ಲರೂ ನಿರಾಶರಾದರು. ಎಲ್ಲರ ಮುಖದ ಮೇಲೆ ಬೇಸರ ಮಡುಗಟ್ಟಿತು. ಆಗ ಭಗವಾನ ಶ್ರೀವಿಷ್ಣುವಿಗೆ ಇದು ವಿಘ್ನರಾಜನ ಕರಾಮತ್ತು ಎಂದು ಅರಿವಾಯಿತು. ಹಾಗಾಗಿ ಅವರು ಅದರ ನಿವಾರಣೆಗಾಗಿ ಉಪಾಯವನ್ನು ಹುಡುಕಿ ಅತ್ಯಂತ ವಿಶಾಲ ಮತ್ತು ವಿಸ್ಮಯಕಾರಿ ಕೂರ್ಮರೂಪವನ್ನು ಧರಿಸಿದರು ಮತ್ತು ಸಮುದ್ರವನ್ನು ಪ್ರವೇಶಿಸಿ ಮಂದರಾಚರಲವನ್ನು ಮೇಲೆ ಎತ್ತಿದರು. ಭಗವಾನ ಶ್ರೀವಿಷ್ಣುವಿನ ಶಕ್ತಿಯು ಅಪಾರವಾಗಿದೆ ಮತ್ತು ಅದು ಸತ್ಯಸಂಕಲ್ಪವಾಗಿದೆ. ಹಾಗಾಗಿ ಅವರಿಗೆ ಅಸಾಧ್ಯವೆಂಬುವುದೇನೂ ಇಲ್ಲ. ದೇವತೆಗಳು ಮತ್ತು ಅಸುರರು ಮಂದರಾಚಲವು ಮೇಲೆ ಬರುತ್ತಿರುವುದನ್ನು ನೋಡಿ ಉತ್ಸಾಹದಿಂದ ಮತ್ತೊಮ್ಮೆ ಮಂಥನಕ್ಕಾಗಿ ಸಿದ್ಧರಾದರು. ಆ ಸಮಯದಲ್ಲಿ ಭಗವಾನ ಶ್ರೀವಿಷ್ಣುವು ಜಂಬೂದ್ವೀಪದಷ್ಟು ಅಂದರೆ ಒಂದು ಲಕ್ಷ ಯೋಜನದಷ್ಟು ವಿಶಾಲವಾದ ಮಂದಾರಾಚಲವನ್ನು ತನ್ನ ಬೆನ್ನ ಮೇಲೆ ಹಿಡಿದಿದ್ದರು. ದೊಡ್ಡ ದೊಡ್ಡ ದೇವತೆಗಳು ಮತ್ತು ಅಸುರರು ತಮ್ಮ ಬಾಹುಬಲದಿಂದ ಮಂದರಾಚಲವನ್ನು ತಿರುಗಿಸಲು ಪ್ರಾರಂಭಿಸಿದಾಗ ಅದು ಭಗವಂತನ ಬೆನ್ನ ಮೇಲೆ ತಿರುಗತೊಡಗಿತು. ಅತಿಶಕ್ತಿಶಾಲಿ ಆದಿಕೂರ್ಮ ಭಗವಂತನಿಗೆ ಬೆನ್ನ ಮೇಲೆ ತಿರುಗುತ್ತಿದ್ದ ಮಂದಾರಾಚಲದಿಂದ ಕಚಗುಳಿಯಾದಷ್ಟೆ ಅನುಭವವಾಗುತ್ತಿತ್ತು. ಇಷ್ಟು ಮಾತ್ರವಲ್ಲ, ಸಮುದ್ರಮಂಥನವನ್ನು ಯಶಸ್ವಿಗೊಳಿಸಲು ಆ ಪರಮ ಕೃಪಾಮಯ ಭಗವಂತನು ಅಸುರರ ಶಕ್ತಿಯನ್ನು ಹೆಚ್ಚಿಸಲು ಅಸುರರ ಶಕ್ತಿಯ ರೂಪದಲ್ಲಿ ಅಸುರರೊಳಗೆ ಪ್ರವೇಶಿಸಿದರು. ಹಾಗೂ ದೇವತೆಗಳಲ್ಲಿ ಉತ್ಸಾಹ ಹೆಚ್ಚಿಸಲು ಅವರೊಳಗೆ ದೇವರೂಪದಲ್ಲಿ ಪ್ರವೇಶಿಸಿದರು. ಹಾಗೂ ವಾಸುಕಿ ನಾಗನೊಳಗೆ ನಿದ್ದೆಯ ರೂಪದಲ್ಲಿ ಪ್ರವೇಶಿಸಿದರು. ಒಂದು ಪರ್ವತದ ಮೇಲೆ ಇನ್ನೊಂದು ಪರ್ವತವನ್ನಿಟ್ಟಂತೆ ಭಗವಂತನು ತನ್ನ ಸಹಸ್ರಬಾಹುಗಳಿಂದ ಮಂದಾರಾಚಲವನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದನು. ಆ ಸಮಯದಲ್ಲಿ ಆಕಾಶದಲ್ಲಿ ಬ್ರಹ್ಮದೇವರು, ಶಂಕರ, ಇಂದ್ರ ಮುಂತಾದರವರು ಅವರ ಸ್ತುತಿಯನ್ನು ಮಾಡಿ ಅವರ ಮೇಲೆ ಪುಷ್ಪವೃಷ್ಟಿಗೈದರು. ಈ ರೀತಿಯಲ್ಲಿ ಭಗವಂತನು ಪರ್ವತವನ್ನು ಗಟ್ಟಿ ಹಿಡಿದು ಅಸುರರಲ್ಲಿ ಅಸುರೀ ಶಕ್ತಿಯಾಗಿ, ಪರ್ವತದಲ್ಲಿ ದೃಢತೆಯ ರೂಪದಿಂದ, ವಾಸುಕಿ ನಾಗನಲ್ಲಿ ನಿದ್ದೆಯ ರೂಪದಿಂದ ಎಲ್ಲ ರೀತಿಯಲ್ಲಿ ಎಲ್ಲರನ್ನೂ ಶಕ್ತಿಸಂಪನ್ನ ಗೊಳಿಸಿದರು. ಮತ್ತು ಅವರೆಲ್ಲರೂ ತಮ್ಮ ಶಕ್ತಿಯಿಂದ ಉತ್ಸಾಹಿಗಳಾಗಿ ಮಂದರಾಚಲದ ಸಹಾಯದಿಂದ ಸಮುದ್ರಮಂಥನ ಮಾಡತೊಡಗಿದರು.

ಈಗ ನಾವು ನೋಡಿದೆವಲ್ಲವೇ, ಭಗವಂತನನ್ನು ಯಾರು ಆರ್ತಭಾವದಿಂದ ಮೊರೆಯಿಡುತ್ತಾರೆಯೋ ಅವರು ರಾಜನೇ ಆಗಿರಲಿ, ಬಡವನೇ ಆಗಿರಲಿ, ಚಿಕ್ಕ ಗುಬ್ಬಚ್ಚಿಯೇ ಇರಲಿ, ಬಲಶಾಲಿ ಗಜೇಂದ್ರನಾಗಿರಲಿ, ಬಾಲಕ ಪ್ರಹ್ಲಾದನಾಗಿರಲಿ, ಅಥವಾ ದೇವತೆಗಳೇ ಆಗಿರಲಿ, ಭಗವಂತನು ಆ ಆರ್ತಮೊರೆಯನ್ನು ಕೇಳಿ ತಕ್ಷಣ ಸಹಾಯಕ್ಕಾಗಿ ಪ್ರತ್ಯಕ್ಷನಾಗುತ್ತಾನೆ. ಇಲ್ಲಿ ಕರುಣಾಮಯ ಭಗವಂತನ ಒಂದು ಅಲೌಕಿಕ ಮಹಿಮೆಯನ್ನು ನಾವು ನೋಡಿದೆವು. ಭಕ್ತರ ಕಷ್ಟಗಳ ನಿವಾರಣೆಗಾಗಿ ಅವರು ಹೇಗೆ ಬೇಕಾದರೂ ಯಾವ ರೂಪದಲ್ಲಿ, ಬೇಕಾದರೆ ಪ್ರಾಣಿಯ ರೂಪವನ್ನು ಸಹ ಧರಿಸಲು ಸಿದ್ಧರಿದ್ದಾರೆಂಬುದು ಗಮನಕ್ಕೆ ಬರುತ್ತದೆ. ಅವರಿಗೆ ಕೇವಲ ತನಗೆ ಶರಣಾದವರ ಮತ್ತು ಭಕ್ತರ ಸಹಾಯ ಮಾಡುವುದರಲ್ಲಿಯೇ ಆನಂದ ಸಿಗುತ್ತದೆ. ಹಾಗಾಗಿಯೇ ಅವರು ಇಲ್ಲಿ ಆಮೆಯ ರೂಪವನ್ನು ಧರಿಸಿದರು. ಮತ್ತು ಕೇವಲ ಕೂರ್ಮದ ರೂಪವನ್ನು ಧರಿಸುವುದು ಮಾತ್ರವಲ್ಲ, ರಾಕ್ಷಸರಿಗೆ, ದೇವತೆಗಳಿಗೆ ಬಲ ನೀಡಿದರು, ಮಂದರಾಚಲನಿಗೇ ಆಧಾರ ನೀಡಿದರು ಮತ್ತು ವಾಸುಕಿ ನಾಗನಿಗೆ ನಿದ್ದೆಯನ್ನು ನೀಡಿ ಕಷ್ಟವನ್ನು ಪರಿಹರಿಸಿದರು.

ರಾಕ್ಷಸರಿಗೆ ಮತ್ತು ದೇವತೆಗಳಿಗೆ ಶಕ್ತಿಯನ್ನು ನೀಡುವುದು, ಅವರ ಕಷ್ಟ ನಿವಾರಿಸುವುದು ಇದೆಲ್ಲ ಅವರು ಸೂಕ್ಷ್ಮ ರೂಪದಿಂದ ಮಾಡುತ್ತಿದ್ದರು. ಇಂತಹ ಪರಮದಯಾಳು ಭಗವಂತ ನಮಗೂ ಒಂದಲ್ಲ ಒಂದು ರೂಪದಲ್ಲಿ ಸಂಕಟಗಳಲ್ಲಿ ಆಧಾರವನ್ನು ನೀಡುತ್ತಾರೆ, ಆ ಕಷ್ಟಗಳನ್ನು ಎದುರಿಸುವ ಶಕ್ತಿಯನ್ನು ಸಹ ನೀಡುತ್ತಾರೆ. ಮತ್ತು ಸೂಕ್ಷ್ಮ ರೂಪದಲ್ಲಿ ನಮ್ಮ ಕಷ್ಟಗಳನ್ನು ಸಹ ಪರಿಹರಿಸುತ್ತಾರೆ. ನಮ್ಮ ಭಾವವನ್ನು ಹೆಚ್ಚಿಸಲು ಪ್ರಯತ್ನಗಳು ಹೆಚ್ಚಾದರೆ ಹೆಜ್ಜೆಹೆಜ್ಜೆಗೆ ನಮ್ಮ ಮೇಲಾಗುವ ಕೃಪೆಯ ಸುರಿಮಳೆಯ ಲಾಭವನ್ನು ನಾವೂ ಪಡೆಯಬಹುದು.

Leave a Comment