ಭಗವಂತನು ಓರ್ವ ಶಿಷ್ಯನಿಗೆ ಗುರುಗಳ ಮಹತ್ವವನ್ನು ಹೇಳುವುದು
ಒಂದು ಸಲ ಗುರು ಮತ್ತು ಭಗವಂತ ಇಬ್ಬರೂ ಓರ್ವ ಶಿಷ್ಯನ ಮನೆಗೆ ಬರುತ್ತಾರೆ. ಆಗ ಗುರು ಮತ್ತು ಭಗವಂತ ಇವರೊಂದಿಗಾದ ಶಿಷ್ಯನ ಸಂಭಾಷಣೆಯನ್ನು ಮುಂದೆ ನೀಡಲಾಗಿದೆ.
ಗುರು (ಶಿಷ್ಯನನ್ನು ಉದ್ದೇಶಿಸಿ) : ನೀನು ಮೊದಲು ಭಗವಂತನ ಚರಣಗಳಿಗೆ ನಮಸ್ಕರಿಸು, ಹೋಗು.
ಭಗವಂತ : ನೀನು ಮೊದಲು ಗುರುಗಳಿಗೆ ನಮಸ್ಕಾರ ಮಾಡು. (ಶಿಷ್ಯನು ಗುರುಗಳ ಚರಣಗಳನ್ನು ನಮಸ್ಕರಿಸಲು ಹೋಗುತ್ತಾನೆ.)
ಗುರು : ನಾನು ಭಗವಂತನನ್ನು ನಿನ್ನ ಮನೆಗೆ ಕರೆದುಕೊಂಡು ಬಂದಿದ್ದೇನೆ. ಆದುದರಿಂದ ಮೊದಲು ನೀನು ಭಗವಂತನಿಗೆ ನಮಸ್ಕಾರ ಮಾಡು. (ಶಿಷ್ಯನು ಪುನಃ ಭಗವಂತನ ಚರಣಗಳ ಬಳಿಗೆ ಬರುತ್ತಾನೆ.)
ಭಗವಂತ : ನಿನ್ನ ಗುರುಗಳು ಭಗವಂತನನ್ನು ನಿನ್ನ ಜೀವನದಲ್ಲಿ ತಂದಿದ್ದಾರೆ. ಅವರು ನನ್ನ ನೆಚ್ಚಿನ ಭಕ್ತನಾಗುವ ಮಾರ್ಗವನ್ನು ನಿನಗೆ ಹೇಳಿದ್ದಾರೆ. ಆದುದರಿಂದ ಮೊದಲು ನೀನು ಗುರುಗಳ ಚರಣಗಳ ಹತ್ತಿರ ಹೋಗು. (ಶಿಷ್ಯನು ಗುರುಗಳ ಚರಣಗಳ ಬಳಿಗೆ ಹೋಗುತ್ತಾನೆ.)
ಗುರು : ನಾನು ನಿನಗೆ ಕೇವಲ ಭಕ್ತಿಯ ಮಾರ್ಗವನ್ನು ಹೇಳಿದೆನು; ಆದರೆ ಭಗವಂತನು ನಿನ್ನನ್ನು ನಿರ್ಮಿಸಿದ್ದಾನೆ. ಅಲ್ಲವೇ ? ಆದುದರಿಂದ ನೀನು ಮೊದಲು ಭಗವಂತನ ಚರಣಗಳಲ್ಲಿ ನತಮಸ್ತಕನಾಗು. (ಮತ್ತೊಮ್ಮೆ ಆ ಶಿಷ್ಯನು ಭಗವಂತನ ಚರಣಗಳ ಬಳಿಗೆ ಹೋಗುತ್ತಾನೆ.)
ಭಗವಂತ : (ಶಿಷ್ಯನನ್ನು ಉದ್ದೇಶಿಸಿ) ನಿಲ್ಲು. ಇದೆಲ್ಲವೂ ಸರಿಯಿದೆ; ಆದರೆ ಈಗ ನಾನು ನಿನಗೆ ಭಗವಂತನ ಮತ್ತು ಗುರುಗಳ ಪ್ರಮುಖ ತತ್ತ್ವಗಳ ಬಗ್ಗೆ ಹೇಳುವವನಿದ್ದೇನೆ.
ಭಗವಂತನ ತತ್ತ್ವಕ್ಕನುಸಾರ ‘ನ್ಯಾಯವ್ಯವಸ್ಥೆ’ ಇದೆ. ಒಂದು ವೇಳೆ ನೀನು ಉತ್ತಮ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಉತ್ತಮ ಫಲ, ಉತ್ತಮ ಆಯುಷ್ಯ ಮತ್ತು ಮುಕ್ತಿ ಸಿಗುವುದು; ಆದರೆ ಒಂದು ವೇಳೆ ನೀನು ಕೆಟ್ಟ ಕರ್ಮಗಳನ್ನು ಮಾಡಿದರೆ, ನಿನಗೆ ಅದರ ಕೆಟ್ಟ ಫಲವೇ ಸಿಗುವುದು ಮತ್ತು ನಿನಗೆ ಶಿಕ್ಷೆಯಾಗುವುದು. ನೀನು ಈ ಮಾಯಾಜಾಲದಲ್ಲಿ ಸಿಲುಕುವಿ ಮತ್ತು ಅದರಲ್ಲಿ ಮುಳುಗಿ ಹೋಗುವೆ. ನಿನ್ನ ಆತ್ಮಕ್ಕೆ ಸಂಘರ್ಷವೇ ಮುಂದುವರಿಯುವುದು.
ಈಗ ನಾನು ನಿನಗೆ ಗುರುಗಳ ತತ್ತ್ವಗಳನ್ನು ಹೇಳುವೆನು. ಗುರು ಎಂದರೆ ಪ್ರೇಮಮಯ ಶಾಂತಿಯ ಮೂರ್ತಿ. ಶಿಷ್ಯನು ಹೇಗೆ ಇದ್ದರೂ ಮತ್ತು ಹೇಗೆ ನಡೆದುಕೊಂಡರೂ, ಅವನ ಕರ್ಮಗಳು ಹೇಗಿದ್ದರೂ, ಗುರುಗಳು ತಮ್ಮ ಶಿಷ್ಯನನ್ನು ಪ್ರೀತಿಯಿಂದ ತಮ್ಮ ಮಡಿಲಲ್ಲಿ ಕುಳ್ಳಿರಿಸಿಕೊಳ್ಳುತ್ತಾರೆ. ಅವರು ತಮ್ಮ ಶಿಷ್ಯನನ್ನು ಶುದ್ಧ ಮಾಡುತ್ತಾರೆ ಮತ್ತು ನಂತರ ಅವರು ನನ್ನ ಚರಣಗಳ ವರೆಗೆ ತರುತ್ತಾರೆ. ಗುರುಗಳು ಎಂದಿಗೂ ಯಾರನ್ನೂ ತಾವಾಗಿಯೇ ತಮ್ಮಿಂದ ದೂರ ಒಯ್ಯವುದಿಲ್ಲ. ತದ್ವಿರುದ್ಧ ಅವರು ತಮ್ಮ ಶಿಷ್ಯನನ್ನು ತಿದ್ದಿ, ಗೀರಿ, ವಜ್ರದಂತಹ ಹೊಳಪನ್ನು ನೀಡುತ್ತಾರೆ. ಅವನನ್ನು ಶುದ್ಧ ಮಾಡಿ ನಂತರ ನನ್ನ ಚರಣಗಳಲ್ಲಿ ತರುತ್ತಾರೆ. ಆದುದರಿಂದ ನಾನು ಯಾವಾಗಲೂ ಪೃಥ್ವಿಯ ಮೇಲೆ ಗುರುಗಳ ರೂಪದಲ್ಲಿಯೇ ಬರುತ್ತೇನೆ.
ಗುರು ಮತ್ತು ಈಶ್ವರ ಒಂದೇ ಆಗಿರುವುದರಿಂದ ಅವರಲ್ಲಿ ಅದ್ವೈತವಿರುತ್ತದೆ
ಗುರುಗಳು ಈ ಜನ್ಮದಲ್ಲಿ ಸಾಧಕರ ಕಾಳಜಿಯನ್ನು ವಹಿಸುತ್ತಾರೆ ಮತ್ತು ಈಶ್ವರನು ಜನ್ಮಜನ್ಮಾಂತರಗಳಲ್ಲಿ ಕಾಳಜಿ ತೆಗೆದುಕೊಳ್ಳುತ್ತಾನೆ, ಇದು ಸತ್ಯವೇ ಆಗಿದೆ, ಎಂದು ಹೇಳಿ ಗುರುಗಳು ತಮ್ಮ ಶಿಷ್ಯನನ್ನು ಸ್ವಾವಲಂಬಿಯನ್ನಾಗಿ ಮಾಡುತ್ತಾರೆ. ಇದು ಗುರುಗಳ ಒಂದು ಕಲಿಕೆಯಾಗಿದೆ; ಆದರೆ ಪ್ರತಿಯೊಬ್ಬ ಶಿಷ್ಯನಿಗೆ ಗುರು ಮತ್ತು ಈಶ್ವರ ಒಂದೇ ಆಗಿರುತ್ತಾರೆ. ಆದುದರಿಂದ ಅವರಲ್ಲಿ ಅದ್ವೈತವಿರುವುದರಿಂದ ಈಶ್ವರನು ಯಾವಾಗಲೂ ಗುರುಗಳ ರೂಪದಲ್ಲಿ ಭೂಲೋಕದಲ್ಲಿ ವಾಸಿಸುತ್ತಾನೆ.
– ಕು. ಪ್ರಿಯಾಂಕಾ ಲೋಟಲೀಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (28.4.2020)
Good thing and good thoughts