ಔಷಧಿ ವನಸ್ಪತಿಗಳು ಬಹಳಷ್ಟಿವೆ, ಆದುದರಿಂದ ಮನೆಯಲ್ಲಿ ಯಾವ ವನಸ್ಪತಿಗಳನ್ನು ಬೆಳೆಸಬೇಕು ? ಎಂಬ ಪ್ರಶ್ನೆಯೂ ಬರುತ್ತದೆ. ಪ್ರಸ್ತುತ ಲೇಖನ ಮಾಲಿಕೆಯಲ್ಲಿ ಕೆಲವು ಮಹತ್ವದ ಔಷಧಿ ವನಸ್ಪತಿಗಳ ತೋಟಗಾರಿಕೆಯನ್ನು ಮನೆಯಲ್ಲಿಯೇ ಹೇಗೆ ಮಾಡಬೇಕು ?, ಎಂಬುದರ ಮಾಹಿತಿಯನ್ನು ನೀಡಲಾಗಿದೆ. ಈ ವನಸ್ಪತಿಗಳನ್ನು ನೆಟ್ಟ ಮೇಲೆ ಸಾಧಾರಣ ೩ ನೆಯ ತಿಂಗಳಿನಿಂದ ಅವುಗಳನ್ನು ಔಷಧಿಗಳೆಂದು ಉಪಯೋಗಿಸಬಹುದು. ಸದ್ಯದ ಆಪತ್ಕಾಲವನ್ನು ಗಮನದಲ್ಲಿರಿಸಿಕೊಂಡು, ಔಷಧಿ ಮರಗಳನ್ನು ಬೆಳೆಸುವುದಕ್ಕಿಂತ ಇಂತಹ ವನಸ್ಪತಿಗಳಿಗೆ ಪ್ರಾಧಾನ್ಯತೆಯನ್ನು ನೀಡಿದರೆ ಈ ಗಿಡಮೂಲಿಕೆಗಳು ನಮಗೆ ಬೇಗನೇ ಉಪಯೋಗಕ್ಕೆ ಬರಬಹುದು. ಔಷಧಿ ವನಸ್ಪತಿಗಳ ಸಸಿಗಳು ಸಹಜವಾಗಿ ಎಲ್ಲೆಡೆ ಸಿಗುವುದಿಲ್ಲ. ಈ ಸಮಸ್ಯೆಗೆ ಪರಿಹಾರೋಪಾಯಗಳನ್ನು ಸಹ ಈ ಲೇಖನ ಮಾಲಿಕೆಯಲ್ಲಿ ನೀಡಲಾಗಿದೆ. ವಾಚಕರು ಈ ಲೇಖನದಲ್ಲಿ ನೀಡಿದ ವನಸ್ಪತಿಗಳನ್ನು ಬಿಟ್ಟು ಇತರ ವನಸ್ಪತಿಗಳನ್ನೂ ಮನೆಯಲ್ಲಿಯೇ ಬೆಳೆಸಬಹುದು. ಈ ಲೇಖನದಲ್ಲಿ ನೀಡಿದ ಔಷಧಿ ವನಸ್ಪತಿಗಳನ್ನು ಔಷಧಗಳೆಂದು ಹೇಗೆ ಉಪಯೋಗಿಸಬೇಕು ? ಎಂಬುದರ ಮಾಹಿತಿಯನ್ನು ಸನಾತನದ ಗ್ರಂಥಗಳಾದ ‘ಸ್ಥಳದ ಲಭ್ಯತೆಗನುಸಾರ ಔಷಧಿ ವನಸ್ಪತಿಗಳ ತೋಟಗಾರಿಕೆ’, ‘೧೧೬ ವನಸ್ಪತಿಗಳ ಔಷಧೀಯ ಗುಣಧರ್ಮಗಳು’ ಮತ್ತು ‘೯೫ ವನಸ್ಪತಿಗಳ ಔಷಧಿಯ ಗುಣಧರ್ಮಗಳು’ ಇವುಗಳಲ್ಲಿ ಕೊಡಲಾಗಿದೆ.
1. ತುಳಸಿ
1 ಅ. ಮಹತ್ವ
ತುಳಸಿಯ ಕಷಾಯವು ಎಲ್ಲ ಪ್ರಕಾರದ ಜ್ವರಗಳಲ್ಲಿ ಉಪಯುಕ್ತವಾಗಿದೆ. ತುಳಸಿಯ ಬೀಜಗಳು ತಂಪಾಗಿದ್ದು ಅವು ಮೂತ್ರರೋಗಗಳಿಗೆ ಉತ್ತಮ ಔಷಧಿಯಾಗಿವೆ. ಆದುದರಿಂದ ಮನೆಯ ಸುತ್ತಲೂ ತುಳಸಿಯ ಗಿಡಗಳನ್ನು ಆದಷ್ಟು ಹೆಚ್ಚು ಪ್ರಮಾಣದಲ್ಲಿ ನೆಡಬೇಕು. ನಾವು ಅಡ್ಡಾಡುವ ದಾರಿಯ ಎರಡೂ ಬದಿಗಳಲ್ಲಿ ತುಳಸಿಯ ಸಸಿಗಳನ್ನು ನೆಡಬಹುದು. ಇದರಿಂದ ವಾತಾವರಣವು ಪ್ರಸನ್ನವಾಗಿರುತ್ತದೆ. ಕಪ್ಪು (ಕೃಷ್ಣ ತುಳಸಿ) ಅಥವಾ ಬಿಳಿ (ರಾಮ ತುಳಸಿ) ಈ ಎರಡೂ ರೀತಿಯ ತುಳಸಿಗಳನ್ನು ಬೆಳೆಸಬಹುದು.
1 ಆ. ಬೀಜಗಳಿಂದ ತುಳಸಿಯನ್ನು ಬೆಳೆಸುವುದು
ತುಳಸಿಯ ಒಣಗಿದ ಮಂಜರಿಗಳನ್ನು (ಹೂವುಗಳನ್ನು) ಕೈಯಲ್ಲಿ ತೆಗೆದುಕೊಂಡು ತಿಕ್ಕಿದರೆ ಅದರ ಚಿಕ್ಕ ಚಿಕ್ಕ ಬೀಜಗಳು ಹೊರಗೆ ಬರುತ್ತವೆ. ಈ ಬೀಜಗಳನ್ನು ಮೊಳಕೆಯೊಡೆಯಲು ಯಾವುದಾದರೊಂದು ಒಳ್ಳೆಯ ಫಲವತ್ತಾದ ಜಾಗದಲ್ಲಿ ಅಥವಾ ಕುಂಡದಲ್ಲಿ ಹಾಕಬೇಕು. ಬೀಜಗಳನ್ನು ಮೊಳಕೆಯೊಡೆಯಲು ಹಾಕುವ ಮೊದಲು ಅವುಗಳನ್ನು ಕೈಯಲ್ಲಿ ಸ್ವಲ್ಪ ತಿಕ್ಕಬೇಕು. ಹೀಗೆ ಮಾಡಿದರೆ ಬೀಜಗಳ ಮೇಲಿನ ಸಿಪ್ಪೆಯು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಮತ್ತು ಬೀಜಗಳು ಮೊಳಕೆಯೊಡೆಯುವ ಸಾಧ್ಯತೆಯು ಹೆಚ್ಚಾಗುತ್ತದೆ. ‘ಬೀಜಗಳು ಎಷ್ಟು ದಪ್ಪವಾಗಿರುತ್ತವೆಯೋ, ಸಾಧಾರಣವಾಗಿ ಅಷ್ಟೇ ದಪ್ಪ ಮಣ್ಣು ಬೀಜದ ಮೇಲಿರಬೇಕು’, ಎಂಬ ಶಾಸ್ತ್ರವಿದೆ. ತುಳಸಿಯ ಬೀಜಗಳ ಆಕಾರವು ತೀರ ಚಿಕ್ಕದಾಗಿರುವುದರಿಂದ ಬೀಜಗಳ ಮೇಲೆ ಸ್ವಲ್ಪವೇ ಮಣ್ಣನ್ನು ಉದುರಿಸಬೇಕು. ಬೀಜಗಳನ್ನು ಮಣ್ಣಿನಲ್ಲಿ ಬಹಳ ಆಳದಲ್ಲಿ ಹಾಕಿದರೆ ಅವು ಮೊಳಕೆಯೊಡೆಯುವುದಿಲ್ಲ. ಬೀಜಗಳನ್ನು ಮಣ್ಣಿನಲ್ಲಿ ಹಾಕಿದ ನಂತರ ನೀರನ್ನು ಕಾಳಜಿಪೂರ್ವಕವಾಗಿ ಹಾಕಬೇಕು, ಇಲ್ಲದಿದ್ದರೆ ಬೀಜಗಳ ಮೇಲಿನ ಮಣ್ಣು ಪಕ್ಕಕ್ಕೆ ಸರಿದು ಬೀಜಗಳು ಹೊರಗೆ ಬರುವ ಸಾಧ್ಯತೆಯಿರುತ್ತದೆ. ಸಸಿಗಳು ೪ ರಿಂದ ೬ ಇಂಚುಗಳಷ್ಟು ಬೆಳೆದ ನಂತರ ಅವುಗಳನ್ನು ನಿಧಾನವಾಗಿ ತೆಗೆದು ಯೋಗ್ಯ ಜಾಗದಲ್ಲಿ ನೆಡಬೇಕು.
1 ಆ 1. ಇರುವೆಗಳು ಬರಬಾರದೆಂದು ಮಾಡಬೇಕಾದ ಉಪಾಯ : ತುಳಸಿಯ ಬೀಜಗಳಿಗೆ ಇರುವೆಗಳು ಬೇಗನೇ ಬರುತ್ತವೆ. ಇರುವೆಗಳು ಬರಬಾರದೆಂದು, ಯಾವ ಕುಂಡದಲ್ಲಿ ಬೀಜಗಳನ್ನು ಮೊಳಕೆ ಒಡೆಯಲು ಹಾಕಲಾಗಿದೆಯೋ, ಆ ಕುಂಡವನ್ನು ನೀರಿನಲ್ಲಿಡಬೇಕು. ಇದಕ್ಕಾಗಿ ಪೇಂಟ್ ಡಬ್ಬದ ಪ್ಲಾಸ್ಟಿಕ್ ಮುಚ್ಚಳವನ್ನು ಉಪಯೋಗಿಸಬಹುದು. ಅದರಲ್ಲಿ ನೀರನ್ನು ಹಾಕಬೇಕು ಮತ್ತು ಮುಚ್ಚಳದ ಮಧ್ಯಭಾಗದಲ್ಲಿ ಕುಂಡವನ್ನಿಡಬೇಕು. ಕುಂಡದ ಸುತ್ತಲೂ ಯಾವಾಗಲೂ ನೀರು ಇರುವಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೆ ಕುಂಡದ ಸುತ್ತಲೂ ನೀರಿಲ್ಲದಿರುವಾಗ ಇರುವೆಗಳು ಕುಂಡದೊಳಗೆ ಬಂದು ಬೀಜಗಳನ್ನು ತಿನ್ನಬಹುದು. ಇರುವೆಗಳನ್ನು ತಡೆಗಟ್ಟಲು ಕುಂಡದ ಸುತ್ತಲೂ ಕರ್ಪೂರ, ಫಿನೈಲ್ ಇವುಗಳ ಪೈಕಿ ಯಾವುದಾದರೊಂದನ್ನು ಸ್ವಲ್ಪ ಹಾಕಿಡಬಹುದು. ಬೀಜಗಳಿಂದ ಮೊಳಕೆಯೊಡೆದು ಬಂದ ಸಸಿಗಳನ್ನು ತೆಗೆದು ಭೂಮಿಯಲ್ಲಿ ನೆಡಬಹುದು.
1 ಇ. ಮಳೆಗಾಲದಲ್ಲಿ ತಾವಾಗಿಯೇ ಹುಟ್ಟುವ ಸಸಿಗಳನ್ನು ತೆಗೆದು ಯೋಗ್ಯ ಸ್ಥಳದಲ್ಲಿ ನೆಡುವುದು
ಮಳೆಗಾಲದ ಮೊದಲೇ ಬಿದ್ದಿರುವ ಬೀಜಗಳಿಂದ ಗಿಡಗಳ ಕೆಳಗಡೆ ತಾವಾಗಿಯೇ ಸಸಿಗಳು ಹುಟ್ಟಿಕೊಳ್ಳುತ್ತವೆ. ಈ ಸಸಿಗಳನ್ನು ಮೃದುವಾಗಿ ಬೇರುಸಹಿತ ತೆಗೆದು ಯೋಗ್ಯ ಸ್ಥಳದಲ್ಲಿ ನೆಡಬೇಕು.
1 ಈ. ಸಸಿಗಳ ಆರೈಕೆ
ತುಳಸಿ ಸಸಿಗಳಿಗೆ ನಿಯಮಿತ ನೀರು ಹಾಕಬೇಕು. ಮಂಜರಿಗಳು (ಹೂವುಗಳು) ಒಣಗಿದಾಗ ಅವುಗಳನ್ನು ಕೀಳಬೇಕು.
2. ಆಡುಸೋಗೆ
2 ಅ. ಮಹತ್ವ
ಆಡುಸೋಗೆಯನ್ನು ‘ಭಿಷಙ್ಮಾತಾ’ (ವೈದ್ಯರ ತಾಯಿ) ಎಂದು ಬಣ್ಣಿಸಲಾಗಿದೆ. ಅನೇಕ ರೋಗಗಳಿಗೆ ಇದು ಉಪಯುಕ್ತವಾಗಿದೆ. ವಿಶೇಷವಾಗಿ ಆಡುಸೋಗೆಯು ಸೋಂಕು ರೋಗಗಳಿಗೆ ತುಂಬಾ ಉಪಯುಕ್ತವಾಗಿದೆ. ದಡಾರ (ಗೊಬ್ಬರ), ಸಿಡುಬುಗಳಂತಹ ಸಾಂಕ್ರಾಮಿಕ ರೋಗಗಳಾದಾಗ ಆಡುಸೋಗೆಯನ್ನು ಸೇವಿಸಲು, ಹಾಗೆಯೇ ನೀರಿನಲ್ಲಿ ಹಾಕಿ ಸ್ನಾನಕ್ಕಾಗಿ ಉಪಯೋಗಿಸುತ್ತಾರೆ. ಇದರ ಎಲೆಗಳಲ್ಲಿ ತರಕಾರಿ ಮತ್ತು ಹಣ್ಣು ಇತ್ಯಾದಿಗಳನ್ನಿಟ್ಟರೆ ಅವು ಹೆಚ್ಚು ದಿನ ಉಳಿಯುತ್ತವೆ. ನಮ್ಮ ಮನೆಯ ಸುತ್ತಮುತ್ತಲೂ ಆದಷ್ಟು ಹೆಚ್ಚು ಪ್ರಮಾಣದಲ್ಲಿ ಆಡುಸೋಗೆಯನ್ನು ನೆಡಬೇಕು. ಬೇಲಿಗೆಂದು ಆಡುಸೋಗೆಯ ಗಿಡಗಳನ್ನು ನೆಡಬಹುದು.
2 ಆ. ಗುರುತು ಮತ್ತು ದೊರಕುವ ಸ್ಥಳ
ಈ ವನಸ್ಪತಿಯು ನಗರಗಳಲ್ಲಿಯೂ ಕಂಡುಬರುತ್ತದೆ. ಕೆಲವು ಸ್ಥಳಗಳಲ್ಲಿ ಈ ವನಸ್ಪತಿಯು ರಸ್ತೆ ಇಕ್ಕೆಲದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಬೆಳೆದಿರುತ್ತದೆ. ಈ ವನಸ್ಪತಿಯ ಎಲೆಗಳು ಹಚ್ಚಹಸಿರು ಮತ್ತು ಭರ್ಜಿಯಂತೆ (ಬರ್ಜಿ) ಚೂಪಾಗಿರುತ್ತವೆ. ಹಣ್ಣಾದ ಎಲೆಗಳು ಹಳದಿ ಬಣ್ಣದ್ದಾಗಿರುತ್ತವೆ. ಎಲೆಗಳಿಗೆ ವಿಶಿಷ್ಟ ಗಂಧವಿರುತ್ತದೆ.
ಇದರ ಹೂವುಗಳು ಬಿಳಿ ಬಣ್ಣದ್ದಾಗಿರುತ್ತವೆ (ಚಿತ್ರ ನೋಡಿ). ಡಿಸೆಂಬರ್‌ನಿಂದ ಫೆಬ್ರವರಿಯವರೆಗೆ ಹೂವುಗಳನ್ನು ಕಾಣಬಹುದು. ಹೂವಿನ ಆಕಾರವು ಬಾಯಿತೆರೆದ ಸಿಂಹದ ಮುಖದಂತೆ ಇರುತ್ತದೆ. ಆದುದರಿಂದ ಇದಕ್ಕೆ ಸಿಂಹಾಸ್ಯ ಎಂಬ ಸಂಸ್ಕೃತ ಹೆಸರು ಸಹ ಇದೆ. ಸಿಂಹಾಸ್ಯ ಎಂದರೆ ‘ಸಿಂಹಮುಖದ ಆಕಾರವಿರುವ’ ಎಂದಾಗಿದೆ.
2 ಇ. ಆಡುಸೋಗೆಯ ತೋಟಗಾರಿಕೆ
ಆಡುಸೋಗೆಯ ಬೂದು ಬಣ್ಣದ ಪರಿಪಕ್ವ ಕೊಂಬೆಗಳನ್ನು ಕೊಯ್ದು ನೆಡಬೇಕು. ಕೊಂಬೆಗಳನ್ನು ಕೊಯ್ಯುವಾಗ ಗೆಣ್ಣುಗಳ ಸ್ವಲ್ಪ ಕೆಳಗೆ ಕೊಯ್ಯ ಬೇಕು. (ಗೆಣ್ಣು ಎಂದರೆ ಕಾಂಡಕ್ಕೆ ಎಲ್ಲಿ ಎಲೆಗಳು ಬಂದಿರುತ್ತವೆಯೋ, ಆ ಭಾಗ) ಯಾವ ಭಾಗವನ್ನು ಮಣ್ಣಿನಲ್ಲಿ ಹೂಳಬೇಕಾಗಿದೆಯೋ, ಗೆಣ್ಣಿನ ಆ ಭಾಗದಲ್ಲಿರುವ ಎಲ್ಲ ಎಲೆಗಳನ್ನು ಕತ್ತರಿಸಬೇಕು. ಆ ಸ್ಥಳದಲ್ಲಿಯೇ ಬೇರುಗಳು ಒಡೆಯುತ್ತವೆ. ಎಲೆಗಳಿಂದ ನೀರು ಆವಿಯಾಗುತ್ತದೆ, ಹಾಗೆಯೇ ದ್ಯುತಿಸಂಶ್ಲೇಷಣೆ (ಆಹಾರ ತಾಯಾರಿಕೆ) ಕೂಡ ಆಗುತ್ತದೆ. ಬೇಸಿಗೆಯಲ್ಲಿ ಗಿಡಗಳನ್ನು ನೆಡುವುದಿದ್ದರೆ ರೆಂಬೆಗಳಲ್ಲಿನ ನೀರಿನ ಅತಿಯಾಗಿ ಆವಿಯಾಗಬಾರದು, ಆದರೆ ರೆಂಬೆಗೆ ತನ್ನ ಆಹಾರವನ್ನು ತಯಾರಿಸಲೂ ಆಗಬೇಕೆಂದು, ಮೇಲುಮೇಲಿನ ಎಲೆಗಳನ್ನು ಅರ್ಧದಷ್ಟು ಕತ್ತರಿಸಬೇಕು. ಮಳೆಗಾಲದಲ್ಲಿ ಈ ಗಿಡಗಳನ್ನು ಬೆಳೆಸುವಾಗ ಮೇಲಿನ ಎಲೆಗಳನ್ನು ಕತ್ತರಿಸುವ ಆವಶ್ಯಕತೆ ಇರುವುದಿಲ್ಲ. ಆಡುಸೋಗೆಯ ರೆಂಬೆಗಳನ್ನು ನೆಟ್ಟ ನಂತರ ಅವುಗಳಿಗೆ ಸಾಧಾರಣ ೧೫ ದಿನಗಳಲ್ಲಿ ಬೇರುಗಳು ಒಡೆಯುತ್ತವೆ. ಮೊದಲಿನ ಎಲೆಗಳು ಉದುರಿ ಹೊಸ ಎಲೆಗಳು ಬರುತ್ತವೆ.
3. ಅಮೃತಬಳ್ಳಿ (ಅಮರದಬಳ್ಳಿ, ಅಗ್ನಿಬಳ್ಳಿ, ಗುಡುಚಿ)
3 ಅ. ಮಹತ್ವ
ಇದರ ಗುಣಗಳಿಗೆ ಅಂತ್ಯವೇ ಇಲ್ಲ. ಕೊರೊನಾದ ಸಮಯದಲ್ಲಿ ಅಮೃತಬಳ್ಳಿಯ ಮಹತ್ವವು ಎಲ್ಲರಿಗೂ ತಿಳಿಯಿತು. ಜ್ವರದಿಂದ ದಮ್ಮಿನವರೆಗೆ (ಅಸ್ತಮಾ) ಹೆಚ್ಚಿನ ರೋಗಗಳಲ್ಲಿ ಇದರಿಂದ ಲಾಭವಾಗುತ್ತದೆ. ಅಮೃತಬಳ್ಳಿಯು ಉತ್ತಮ ಶಕ್ತಿವರ್ಧಕವಾಗಿದೆ. ಹಾಲು ಕೊಡುವ ಪ್ರಾಣಿಗಳಿಗೆ ಅಮೃತಬಳ್ಳಿಯನ್ನು ತಿನ್ನಿಸಿದರೆ ಅವುಗಳ ಹಾಲು ಹೆಚ್ಚಾಗುತ್ತದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ಬೆಳೆಸಬೇಕು.
3 ಆ. ಗುರುತು
ಮಳೆಗಾಲದ ದಿನಗಳಲ್ಲಿ ಅನೇಕ ಕಡೆ ರಸ್ತೆಬದಿಯ ಕೆಲವು ಗಿಡಗಳ ಮೇಲೆ ಹಳದಿ-ಹಸಿರು ಬಣ್ಣದ 2 – 3 ಮಿಲಿಮೀಟರ್ ವ್ಯಾಸದ ಬಳ್ಳಿಗಳು ಜೋತಾಡುವುದು ಕಾಣಿಸುತ್ತದೆ. ಈ ಬಳ್ಳಿಗಳು ಅಮೃತಬಳ್ಳಿಯದ್ದಾಗಿರುತ್ತವೆ. ಇವುಗಳ ಹೊರಬದಿಯ ತೊಗಟೆ ಬೂದು ಬಣ್ಣದ್ದಾಗಿರುತ್ತದೆ ಮತ್ತು ಅದರ ಮೇಲೆ ಗುಳ್ಳೆಗಳಂತೆ ಉಬ್ಬುಗಳಿರುತ್ತವೆ. ಇವುಗಳಿಗೆ ಆಂಗ್ಲ ಭಾಷೆಯಲ್ಲಿ ‘ಲೆಂಟಿಸೆಲ್ಸ್’ (lenticels)’ ಎನ್ನುತ್ತಾರೆ. ಇವುಗಳ ಕಾಂಡವನ್ನು ಕುಟ್ಟಿದಾಗ ಮೇಲಿನ ಬೂದು ಬಣ್ಣದ ತೊಗಟೆ ಬೇರೆಯಾಗುತ್ತದೆ ಮತ್ತು ಒಳಗಿನ ಹಸಿರು ಬಣ್ಣದ ತೊಗಟೆ ಕಾಣಿಸತೊಡಗುತ್ತದೆ. ಅದರ ತಿರುಳು ಹಳದಿ ಬಣ್ಣದ್ದಾಗಿರುತ್ತದೆ. ಅಮೃತಬಳ್ಳಿಯ ಕಾಂಡವನ್ನು ಹರಿತವಾದ ಶಸ್ತ್ರದಿಂದ ‘ಅಡ್ಡವಾಗಿ ಕತ್ತರಿಸಿದರೆ (ಕ್ರಾಸ್ ಸೆಕ್ಶನ್)’ ಒಳಗಿನ ಚಕ್ರಾಕಾರ ತಿರುಳು ಕಾಣಿಸುತ್ತದೆ (ಚಿತ್ರ ನೋಡಿ). ಎಳೆಯ ಅಮೃತಬಳ್ಳಿಯನ್ನು ಕೊಯ್ದರೆ (ಕತ್ತರಿಸಿದರೆ) ಅದರಿಂದ ನೀರಿನಂತಹ ಪಾರದರ್ಶಕ ದ್ರವ ಸೋರುತ್ತದೆ. ಈ ದ್ರವ ಸ್ವಲ್ಪ ಕಹಿ ಇರುತ್ತದೆ.
3 ಇ. ಅಮೃತಬಳ್ಳಿಯ ತೋಟಗಾರಿಕೆ
ಅಮೃತಬಳ್ಳಿಯ ಕಾಂಡವನ್ನು ಕೊಯ್ದು ಭೂಮಿಯ ಮೇಲಿಟ್ಟರೆ ಮತ್ತು ಅದಕ್ಕೆ ಪೋಷಕ ವಾತಾವರಣ ದೊರಕಿದರೆ, ಅದರಿಂದ ಬಳ್ಳಿಯು ಹುಟ್ಟುತ್ತದೆ. ಕೊಯ್ದು ಎಸೆದ ಅಮೃತಬಳ್ಳಿಯಿಂದಲೂ ಪುನಃ ಬಳ್ಳಿಯು ಹುಟ್ಟುತ್ತದೆ, ಆದುದರಿಂದ ಅದಕ್ಕೆ ಸಂಸ್ಕೃತದಲ್ಲಿ ‘ಛಿನ್ನರೂಹಾ (ಛಿನ್ನ – ಕೊಯ್ದ ನಂತರ, ರೂಹಾ – ಪುನಃ ಹುಟ್ಟುವ)’ ಎಂಬ ಹೆಸರು ಸಹ ಇದೆ. ಅಮೃತಬಳ್ಳಿಯ ಕಾಂಡದ ಗೇಣುದ್ದ ತುಂಡುಗಳನ್ನು ಮಣ್ಣಿನಲ್ಲಿ ನೆಟ್ಟಗೆ ಹೂಳಬೇಕು. ಕಾಂಡವನ್ನು ಕೊಯ್ಯುವಾಗ ಬೇರುಗಳ ಕಡೆಗಿನ ಬದಿಯನ್ನು ಓರೆಯಾಗಿ ಕೊಯ್ಯಬೇಕು. ಈ ಓರೆಯಾಗಿ ಕತ್ತರಿಸಿದ ಭಾಗವನ್ನು ಮಾರುಕಟ್ಟೆಯಲ್ಲಿ ಸಿಗುವ ‘ರೂಟೆಕ್ಸ್’ ಪುಡಿಯಲ್ಲಿ ಅದ್ದಿ ಮಣ್ಣಿನಲ್ಲಿ ನೆಟ್ಟರೆ ಕಾಂಡಕ್ಕೆ ಬೇಗನೆ ಬೇರುಗಳು ಒಡೆಯುತ್ತವೆ . (ಯಾವುದೇ ವನಸ್ಪತಿಯ ರೆಂಬೆಗಳಿಂದ (ಕಾಂಡಗಳಿಂದ) ಗಿಡಗಳನ್ನು ಬೆಳೆಸುವುದಿದ್ದರೆ ಈ ರೀತಿ ರೂಟೆಕ್ಸ್ ಪೌಡರನ್ನು ಉಪಯೋಗಿಸಿದರೆ ರೆಂಬೆಗಳಿಗೆ ಬೇಗನೆ ಬೇರುಗಳು ಒಡೆಯುತ್ತವೆ ಮತ್ತು ಅವು ಚೆನ್ನಾಗಿ ಬೆಳೆಯುವ ಸಾಧ್ಯತೆಯೂ ಹೆಚ್ಚಾಗುತ್ತದೆ.) ಬೇಲಿಗಳ ಮೇಲೆ, ಮಾಳಿಗೆಯ ಸರಳುಗಳ ಮೇಲೆ, ಮಾವು, ಕಹಿಬೇವು ಇವುಗಳಂತಹ ವೃಕ್ಷಗಳ ಮೇಲೆ ಈ ಬಳ್ಳಿಯನ್ನು ಬಿಡಬೇಕು. ಈ ಬಳ್ಳಿಯನ್ನು ವಿಷಕಾರಿ ವೃಕ್ಷಗಳ ಮೇಲೆ (ಉದಾ. ಹೆಮ್ಮುಷ್ಟಿ ಅಥವಾ ನಂಜಿನಕೊರಡು) ಬಿಡಬಾರದು; ಏಕೆಂದರೆ ಹಾಗೆ ಮಾಡಿದರೆ ಆ ವೃಕ್ಷಗಳ ವಿಷಕಾರಿ ಗುಣವು ಅಮೃತಬಳ್ಳಿಯಲ್ಲಿಯೂ ಬರುತ್ತದೆ.
4. ಲೋಳೆಸರ (ಲೋಳಿಸರ)
4 ಅ ಮಹತ್ವ
ಇದು ನಿಯಮಿತವಾಗಿ ಬೇಕಾಗುವ ಔಷಧಿಯಲ್ಲ. ಸುಟ್ಟ ಗಾಯಗಳು, ಋತುಸ್ರಾವದ ತೊಂದರೆಗಳು, ಕೆಮ್ಮು, ಕಫ ಇವುಗಳಲ್ಲಿ ಲೋಳೆಸರವು ಉಪಯೋಗವಾಗುತ್ತದೆ. 4 ಜನರಿರುವ ಕುಟುಂಬಕ್ಕೆ 2 ರಿಂದ 4 ಸಸಿಗಳು ಸಾಕಾಗುತ್ತವೆ; ಮನೆಯ ಸುತ್ತಲೂ ಜಾಗವಿದ್ದರೆ 10-12 ಸಸಿಗಳನ್ನು ನೆಡಬಹುದು.
4 ಆ. ಲೋಳೆಸರ ಸಸಿಗಳ ತೋಟಗಾರಿಕೆ
ಬಹಳಷ್ಟು ಜನರ ಮನೆಗಳಲ್ಲಿ ಲೋಳೆಸರವನ್ನು ನೆಟ್ಟಿರುತ್ತಾರೆ. ಲೋಳೆಸರಕ್ಕೆ ಬೇರುಗಳ ಬದಿಯಿಂದ ಮರಿ ಸಸಿಗಳು ಹುಟ್ಟುತ್ತವೆ. ಈ ಚಿಕ್ಕ ಸಸಿಗಳನ್ನು ತೆಗೆದು ಬೇರೆಕಡೆಗೆ ನೆಟ್ಟರೆ ಅವುಗಳಿಂದ ಹೊಸ ಗಿಡಗಳು ತಯಾರಾಗುತ್ತವೆ. ಅಕ್ಕಪಕ್ಕದವರಿಂದ 1 – 2 ಸಸಿಗಳನ್ನು ಕೇಳಿ ತಂದು ನೆಟ್ಟರೆ ಒಂದು ವರ್ಷದಲ್ಲಿ 4 ಜನರಿಗಾಗುವಷ್ಟು ಲೋಳೆಸರ ತಯಾರಾಗುತ್ತದೆ. ಇದರ ಸಸಿಗಳು ಸಸ್ಯಶಾಲೆ (ನರ್ಸರಿ)ಗಳಲ್ಲಿಯೂ ಮಾರಾಟಕ್ಕೆ ಸಿಗುತ್ತವೆ.
5. ನೆಲಬೇರು (ನೆಲಬೇವು, ಊರಕಿರಿಯಾತು, ಕಾಲಮೇಘ)
5 ಅ. ಮಹತ್ವ
ಈ ವನಸ್ಪತಿಯು ಸಾಂಕ್ರಾಮಿಕ ರೋಗಗಳಲ್ಲಿ ಬಹಳ ಉಪಯುಕ್ತವಾಗಿದೆ. ಇದು ಬಹಳ ಕಹಿಯಾಗಿರುತ್ತದೆ. ಇದನ್ನು ಜ್ವರ ಮತ್ತು ಹೊಟ್ಟೆಯ ಹುಳಗಳನ್ನು (ಜಂತಗಳನ್ನು) ಕಡಿಮೆ ಮಾಡಲು ಉಪಯೋಗಿಸುತ್ತಾರೆ. ಇದು ವಿರೇಚಕವಾಗಿರುವುದರಿಂದ (ಹೊಟ್ಟೆಯನ್ನು ಸ್ವಚ್ಚಗೊಳಿಸುವುದರಿಂದ) ಕೆಲವು ಕಡೆ ಮಳೆಗಾಲದಲ್ಲಿ ಮತ್ತು ತದನಂತರ ಬರುವ ಶರದ್ ಋತುವಿನಲ್ಲಿ ವಾರಕ್ಕೊಮ್ಮೆ ಇದರ ಕಷಾಯವನ್ನು ಸೇವಿಸುವ ಪದ್ಧತಿಯಿದೆ. ಇದರಿಂದ ಆರೋಗ್ಯ ಚೆನ್ನಾಗಿರುತ್ತದೆ. ಈ ವನಸ್ಪತಿ ವಾತವನ್ನು ಹೆಚ್ಚಿಸುವುದರಿಂದ ಜ್ವರ ಇಲ್ಲದಿರುವಾಗ ಮತ್ತು ವೈದ್ಯರ ಸಲಹೆ ಇಲ್ಲದೇ ಇದರ ಕಷಾಯವನ್ನು ಪ್ರತಿದಿನ ತೆಗೆದುಕೊಳ್ಳಬಾರದು.
5 ಆ. ಗುರುತು
ಈ ವನಸ್ಪತಿಯನ್ನು ನೆಲಬೇವು, ಊರಕಿರಿಯಾತು ಎಂದೂ, ಸಂಸ್ಕೃತದಲ್ಲಿ ಕಾಲಮೇಘ ಎಂದೂ, ಕೊಂಕಣಿಯಲ್ಲಿ ‘ಕಿರಾಯತೆ’ ಎಂದೂ ಕರೆಯುತ್ತಾರೆ. ಮಳೆಗಾಲದ ಪ್ರಾರಂಭದಲ್ಲಿ ಇದರ ಎಲೆಗಳು ಸ್ವಲ್ಪ ಅಗಲವಾಗಿರುತ್ತವೆ. (ಚಿತ್ರ ನೋಡಿ) ಮಳೆಗಾಲ ಮುಗಿದ ನಂತರ ಎಲೆಗಳು ಕೋನಾಕೃತಿಗೆ ಪರಿವರ್ತನೆಯಾಗುತ್ತವೆ. ಮಳೆಗಾಲದ ಬಳಿಕ ನೀರುಣಿಸಿದರೆ ಮಾತ್ರ ಈ ವನಸ್ಪತಿ ಉಳಿಯುತ್ತದೆ, ಇಲ್ಲವಾದರೆ ಅದು ಒಣಗುತ್ತದೆ. ಬಹಳಷ್ಟು ಸಲ ಮಳೆಗಾಲದ ನಂತರ ಕೊಂಕಣ ಭಾಗದಲ್ಲಿ ಅನೇಕ ಸ್ಥಳಗಳಲ್ಲಿ ಈ ವನಸ್ಪತಿ ಒಣಗಿದ ಸ್ಥಿತಿಯಲ್ಲಿ ಕಂಡು ಬರುತ್ತದೆ. ಇದಕ್ಕೆ ಮಳೆಗಾಲ ಮುಗಿಯುವಾಗ ಸಪೂರ ತುರಾಯಿ ಬರುತ್ತವೆ. (ಚಿತ್ರದಲ್ಲಿ ಗೋಲಾಕಾರ ಮಾಡಿ ತೋರಿಸಲಾಗಿದೆ) ಅದರಲ್ಲಿ ಬೀಜಗಳಿರುತ್ತವೆ.
5 ಇ. ನೆಲಬೇರಿನ ತೋಟಗಾರಿಕೆ
ಈ ವನಸ್ಪತಿಯು ಕೊಂಕಣದಲ್ಲಿ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿರುತ್ತದೆ. ಮೊದಲ ಮಳೆಯಾದ ಕೂಡಲೇ ಈ ಹಿಂದೆ ಬಿದ್ದಿರುವ ಬೀಜಗಳಿಂದ ದೊಡ್ಡ ಸಂಖ್ಯೆಯಲ್ಲಿ ಈ ವನಸ್ಪತಿಯ ಸಸಿಗಳು ಹುಟ್ಟುತ್ತವೆ. ಈ ಸಸಿಗಳನ್ನು ತಂದು ಮನೆಯ ಪರಿಸರದಲ್ಲಿ ನೆಟ್ಟು ಅವುಗಳನ್ನು ಬೆಳೆಸಬಹುದು. ಮಳೆಗಾಲ ಮುಗಿಯುವ ಸಮಯದಲ್ಲಿ ತುರಾಯಿಗಳಲ್ಲಿನ ಬೀಜಗಳನ್ನು ಸಂಗ್ರಹಿಸಿಟ್ಟರೆ ಮುಂದಿನ ಮಳೆಗಾಲದ ಪ್ರಾರಂಭದಲ್ಲಿ ಅವುಗಳನ್ನು ಬಿತ್ತಬಹುದು..
6. ಜಾಜಿ ಮಲ್ಲಿಗೆ
6 ಅ. ಮಹತ್ವ
ರಕ್ತಸ್ರಾವವನ್ನು ತಡೆಯಲು ಜಾಜಿಯ ಎಲೆಗಳು ಉಪಯುಕ್ತವಾಗಿವೆ. ಬಾಯಿ ಹುಣ್ಣಾದಾಗ (ಬಾಯಿ ಕೆಂಪು ಆಗುವುದು, ಬಾಯಿಯಲ್ಲಿ ಹುಣ್ಣುಗಳು ಆಗುವುದು ಮತ್ತು ಇದರಿಂದ ಖಾರ ಪದಾರ್ಥಗಳನ್ನು ಸಹಿಸಲು ಆಗದಿರುವುದು) ಜಾಜಿಯ ಎಲೆಗಳನ್ನು ಅಗಿದು ಉಗುಳಿದರೆ ತಕ್ಷಣವೇ ಆರಾಮವೆನಿಸುತ್ತದೆ. 4 ಜನರ ಕುಟುಂಬಕ್ಕೆ ಒಂದು ಗಿಡ ಸಾಕಾಗುತ್ತದೆ.
6 ಆ. ದೊರಕುವ ಸ್ಥಳ
ಕೆಲವು ದೇವಸ್ಥಾನಗಳಲ್ಲಿ ಜಾಜಿ ಹೂಗಳ ಉತ್ಸವವಿರುತ್ತದೆ. ಆದುದರಿಂದ ಇಂತಹ ಗ್ರಾಮಗಳಲ್ಲಿ ಜಾಜಿಯ ಕೃಷಿಯನ್ನು ಮಾಡಲಾಗುತ್ತದೆ. ಬಹಳಷ್ಟು ಜನರು ಮನೆಯಲ್ಲಿ ಜಾಜಿ ಮಲ್ಲಿಗೆಯನ್ನು ಬೆಳೆಸುತ್ತಾರೆ.
6 ಇ. ಜಾಜಿ ತೋಟಗಾರಿಕೆ
ಜಾಜಿಯ ಟೊಂಗೆಗಳನ್ನು ತಂದು ನೆಟ್ಟರೆ ಅವುಗಳಿಗೆ ಬೇರೊಡೆದು ಗಿಡಗಳು ಬೆಳೆಯುತ್ತವೆ. ಮಳೆಗಾಲದಲ್ಲಿ ಜಾಜಿಯ ಟೊಂಗೆಗಳನ್ನು ನೆಡಬೇಕಾಗಿದ್ದರೆ ಬೇರುಗಳಿಗೆ ಉಷ್ಣತೆ ಸಿಗಲು, ಟೊಂಗೆಗಳ ಬೇರಿನ ಕಡೆಯ ಭಾಗದ ಸುತ್ತಲೂ ಒಣಗಿದ ಹುಲ್ಲಿನ 1-2 ಕಡ್ಡಿಗಳನ್ನು ಸುತ್ತಬೇಕು. ಇದರಿಂದ ಆವಶ್ಯಕತೆಯಿರುವಷ್ಟು ಉಷ್ಣತೆ ದೊರೆತು, ಟೊಂಗೆಗಳಿಗೆ ಬೇರುಗಳು ಒಡೆಯುತ್ತವೆ. ಹುಲ್ಲು ಸುತ್ತದೇ ಇದ್ದರೆ ತಂಪಿನಿಂದ ಟೊಂಗೆಗಳು ಕೊಳೆಯಬಹುದು.
ಸಂಕಲನಕಾರರು
ಶ್ರೀ. ಮಾಧವ ರಾಮಚಂದ್ರ ಪರಾಡಕರ ಮತ್ತು ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ.
ಮಾರ್ಗದರ್ಶಕರು
ಡಾ. ದಿಗಂಬರ ನಭು ಮೋಕಾಟ, ಸಹಾಯಕ ಪ್ರಾಧ್ಯಾಪಕರು, ವನಸ್ಪತಿಶಾಸ್ತ್ರ ವಿಭಾಗ, ಸಾವಿತ್ರಿಬಾಯಿ ಫುಲೆ ಪುಣೆ ವಿದ್ಯಾಪೀಠ, ಪುಣೆ ಮತ್ತು ಪ್ರಮುಖ ನಿರ್ದೇಶಕರು, ಕ್ಷೇತ್ರೀಯ ಸಹಸುವಿಧಾ ಕೇಂದ್ರ, ಪಶ್ಚಿಮ ವಿಭಾಗ, ರಾಷ್ಟ್ರೀಯ ಔಷಧಿ ವನಸ್ಪತಿ ಮಂಡಳ, ಆಯುಷ ಮಂತ್ರಾಲಯ, ಭಾರತ ಸರಕಾರ.
Excellent explanation.We will try definitely.