1. ಕುಮಾರಿ
ಕುಮಾರಿಯ ಆರಾಧನೆಯಲ್ಲಿ ಹೂವುಗಳು, ಹೂಮಾಲೆಗಳು, ಹುಲ್ಲು, ಎಲೆಗಳು, ಮರದ ತೊಗಟೆ, ಹತ್ತಿ ದಾರ, ಅರಿಶಿನ, ಸಿಂಧೂರ, ಕುಂಕುಮ ಇತ್ಯಾದಿಗಳು ಮುಖ್ಯವಾಗಿವೆ. ಚಿಕ್ಕವಯಸ್ಸಿನ ಹುಡುಗಿಯರು ಇಷ್ಟಪಡುವ ವಸ್ತುಗಳನ್ನು ಈ ದೇವಿಗೆ ಅರ್ಪಿಸಲಾಗುತ್ತದೆ.
2. ರೇಣುಕಾ, ಅಂಬಾಬಾಯಿ ಮತ್ತು ತುಳಜಾ ಭವಾನಿ
ಈ ದೇವತೆಗಳು ಕುಲದೇವತೆಯಾಗಿರುವ ಕೆಲವು ಕಡೆಗಳಲ್ಲಿ ಮದುವೆಯಂತಹ ಆಚರಣೆಯ ನಂತರ, ಕುಲಾಚಾರವೆಂದು ಈ ದೇವತೆಗಳ ನಾಟ್ಯ ಮತ್ತು ದೇವಿಯ ಸ್ತುತಿಯನ್ನು ಮಾಡುತ್ತಾರೆ. ಇದಕ್ಕೆ ‘ಗೊಂಧಳ’ ಎಂದು ಕರೆಯುತ್ತಾರೆ. ಅನೇಕರು ಮದುವೆ ಸಮಾರಂಭ ಮುಗಿದ ಮೇಲೆ ಮನೆಯಲ್ಲಿ ಸತ್ಯನಾರಾಯಣನ ಪೂಜೆ ನಡೆಸುವ ಹಾಗೆಯೇ ಇದಾಗಿದೆ.
3. ಅಂಬಾಜಿ
ಗುಜರಾತಿನ ಅಂಬಾಜಿ (ಅಂಬಾಮಾತೆ) ಯ ದೇವಾಲಯಗಳಲ್ಲಿ ದೀಪಗಳಲ್ಲಿ ದೀಪದೆಣ್ಣೆ ಬಳಸುವುದಿಲ್ಲ. ಅಖಂಡವಾಗಿ ಉರಿಯುವ ತುಪ್ಪದ ನಂದಾದೀಪವನ್ನು ಬಳಸುತ್ತಾರೆ.
4. ತ್ರಿಪುರಸುಂದರಿ
ಈ ದೇವಿಯು ತಾಂತ್ರಿಕ ದೇವತೆ. ದೇವಿಯ ಉಪಾಸಕರ ಒಂದು ವಿಶಿಷ್ಟ ಪಂಥವೂ ಇದೆ. ಈ ಪಂಥದ ದೀಕ್ಷೆಯನ್ನು ಪಡೆದ ನಂತರವೇ ತ್ರಿಪುರಸುಂದರಿಯ ಆರಾಧನೆ ಮಾಡಬಹುದು ಎಂಬುವುದು ಉಪಾಸಕರ ಅಭಿಪ್ರಾಯ.
5. ತ್ರಿಪುರಭೈರವೀ
ಈ ದೇವಿಯೂ ತಾಂತ್ರಿಕ ದೇವತೆ. ದೇವಿಯು ‘ಧರ್ಮ, ಅರ್ಥ ಮತ್ತು ಕಾಮ’ ಎಂಬ ಮೂರು ಪುರುಷಾರ್ಥಗಳನ್ನು ಸಾಧಿಸಲು ಸಹಾಯ ಮಾಡುತ್ತಾಳೆ ಎಂದು ನಂಬಲಾಗಿದೆ. ದೇವಿಯು ಶಿವಲಿಂಗವನ್ನು ಭೇದಿಸಿ ಹೊರಬಂದವಳು. ಕಾಲಿಕಾಪುರಾಣದಲ್ಲಿ ದೇವಿಯ ವರ್ಣನೆ (ಧ್ಯಾನ) ಯನ್ನು ನೀಡಲಾಗಿದೆ. ತ್ರಿಪುರೆಯ ಎಲ್ಲ ರೂಪಗಳಲ್ಲಿ ಭೈರವೀಯನ್ನು ಪ್ರಬಲ ರೂಪವೆಂದು ಪರಿಗಣಿಸಲಾಗಿದೆ. ದೇವಿಯ ಪೂಜೆಯನ್ನು ಎಡಗೈಯಲ್ಲಿ ಮಾಡಲಾಗುತ್ತದೆ. ದೇವಿಗೆ ಕೆಂಪು ಬಣ್ಣದ (ರಕ್ತವರ್ಣ) ಮದಿರೆ, ಕೆಂಪು ಹೂವುಗಳು, ಕೆಂಪು ಬಟ್ಟೆ ಮತ್ತು ಸಿಂಧೂರ ಪ್ರಿಯವಾಗಿವೆ.
6. ಮಹಿಷಾಸುರ ಮರ್ದಿನಿ
ದೇವಿಯ ಶಕ್ತಿಯನ್ನು ಸಹಿಸುವ ಸಾಮರ್ಥ್ಯವಿಲ್ಲದಿರುವುದರಿಂದ, ಮೊದಲು ಶಾಂತಾದುರ್ಗೆಯ, ನಂತರ ದುರ್ಗೆಯ ಮತ್ತು ಕೊನೆಯದಾಗಿ ಮಹಿಷಾಸುರ ಮರ್ದಿನಿಯನ್ನು ಆಹ್ವಾನಿಸಲಾಗುತ್ತದೆ. ಇದರ ಪರಿಣಾಮವಾಗಿ, ದೇವಿಯ ಶಕ್ತಿಯನ್ನು ಸಹಿಸುವ ಶಕ್ತಿ ಕ್ರಮೇಣ ಹೆಚ್ಚಾದಂತೆ ಮಹಿಷಾಸುರ ಮರ್ದಿನಿಯ ಶಕ್ತಿಯನ್ನು ಸಹಿಸಿಕೊಳ್ಳಬಹುದು.
7. ಕಾಳಿ
ಪ್ರಾಚೀನ ಕಾಲದಿಂದಲೂ ಬಂಗಾಳದಲ್ಲಿ ಕಾಳಿ ಪೂಜೆ ಚಾಲ್ತಿಯಲ್ಲಿದೆ. ಪೂರ್ಣಾನಂದರ ಶ್ಯಾಮರಹಸ್ಯ ಮತ್ತು ಕೃಷ್ಣಾನಂದರ ತಂತ್ರಸಾರ ಎರಡೂ ಪ್ರಸಿದ್ಧ ಗ್ರಂಥಗಳು. ಈ ಪೂಜೆಯಲ್ಲಿ ‘ಸುರಾ’ (ಮದ್ಯ) ಅತ್ಯಾವಶ್ಯಕ ಅಂಗವಾಗಿದೆ ಎಂದು ನಂಬಲಾಗಿದೆ. ಇದನ್ನು ಮಂತ್ರದಿಂದ ಶುದ್ಧಿಗೊಳಿಸಿ ಸೇವಿಸಲಾಗುತ್ತದೆ. ಕಾಳಿಕೋಪನಿಷತ್‌ನಲ್ಲಿ ಹೇಳಿರುವಂತೆ ಕಾಳಿ ಪೂಜೆಗೆ ಬಳಸುವ ಕಾಳಿಯಂತ್ರವು ತ್ರಿಕೋಣ, ಪಂಚಕೋಣ ಅಥವಾ ನವಕೋಣದ್ದಾಗಿರಬೇಕು. ಕೆಲವೊಮ್ಮೆ ಅದು ಹದಿನೈದು ಕೋನಗಳನ್ನು ಸಹ ಹೊಂದಿರುತ್ತದೆ. ಕಾರ್ತಿಕ ಕೃಷ್ಣಪಕ್ಷದಲ್ಲಿ, ವಿಶೇಷವಾಗಿ ರಾತ್ರಿ ಮಾಡುವ ಕಾಳಿ ಪೂಜೆಯು ಫಲಪ್ರದವಾಗಿದೆ ಎಂದು ಹೇಳಲಾಗುತ್ತದೆ. ಈ ಪೂಜೆಯಲ್ಲಿ ಕಾಳಿ ಸ್ತೋತ್ರ, ಕವಚ, ಶತನಾಮ ಮತ್ತು ಸಹಸ್ರನಾಮ ಪಠಣವು ವಿಹಿತವಾಗಿದೆ.
8. ಚಾಮುಂಡಾ
ಎಂಟು ರಹಸ್ಯ ಯೋಗಿನಿಗಳು ಮುಖ್ಯ ದೇವತೆಯ ನಿಯಂತ್ರಣದಲ್ಲಿ ಬ್ರಹ್ಮಾಂಡದ ಸಂಚಾಲನೆ ಮಾಡುವುದು, ವಸ್ತುಗಳ ಉತ್ಸರ್ಜನೆ, ಪರಿಣಾಮ ಇತ್ಯಾದಿಗಳ ಕಾರ್ಯಗಳನ್ನು ನಿರ್ವಹಿಸುತ್ತಾರೆ. ಅಷ್ಟಮಿ ಮತ್ತು ನವಮಿ ತಿಥಿಗಳ ಸಂಧಿಕಾಲದಲ್ಲಿ ಸಂಧಿಪೂಜೆ ಎಂಬ ವಿಶೇಷ ಪೂಜೆಯನ್ನು ನಡೆಸಲಾಗುತ್ತದೆ. ಈ ಪೂಜೆ ದುರ್ಗೆಯ ‘ಚಾಮುಂಡಾ’ ರೂಪದ್ದಾಗಿರುತ್ತದೆ. ಅಂದು ರಾತ್ರಿ ಗಾಯನ-ವಾದನ ಇತ್ಯಾದಿಗಳೊಂದಿಗೆ ಜಾಗರ ಇರುತ್ತದೆ.
9. ದುರ್ಗಾ
ಶ್ರೀ ದುರ್ಗಾ ಮಹಾಯಂತ್ರವು ಶ್ರೀ ಭಾಗವತಿ ದೇವಿಯ (ದುರ್ಗೆಯ) ಆಸನವಾಗಿದೆ. ನವರಾತ್ರಿಯಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಪೂಜಿಸಲಾಗುತ್ತದೆ.
10. ಉತ್ತಾನಪಾದಾ
ದೇವಿಯು ಮಾತೃತ್ವ, ಸರ್ಜನ ಮತ್ತು ಸೃಷ್ಟಿಯ ನಿರ್ಮಿತಿ ಈ ಮೂರು ಗುಣಗಳನ್ನು ಹೊಂದಿದ್ದಾಳೆ. ಕಾಲುಗಳನ್ನು ಪೂಜಕನ ದಿಕ್ಕಿನಲ್ಲಿ ಮಡಿಚಿ ಬೆನ್ನಿನ ಮೇಲೆ ಮಲಗಿರುವ (ಉತ್ತಾನ) ಛಿನ್ನಮಸ್ತಾ ಅಥವಾ ಲಜ್ಜಾಗೌರಿ ದೇವಿಯ ವಿಗ್ರಹವನ್ನು ಪೂಜಿಸುವ ಪ್ರಥೆ ಪ್ರಾಚೀನ ಕಾಲದಿಂದಲೂ ಆಚರಣೆಯಲ್ಲಿರುವಂತೆ ತೋರುತ್ತದೆ. ಶಿವಲಿಂಗದ ಪಾಣಿಪೀಠದ (ಲಿಂಗವೇದಿಕೆ) ರಚನೆಯಂತೆಯೇ ದೇವಿಯನ್ನೂ ಪೂಜಿಸಲಾಗಿದೆಯೆಂದು ತೋರುತ್ತದೆ. ಅಭಿಷೇಕದ ನಂತರ ನೀರಿಳಿದು ಹೋಗಲು ಒಂದು ಮಾರ್ಗವನ್ನು ನೀಡಲಾಗಿದೆ ಎಂದು ತೋರುತ್ತದೆ.
ಆಧಾರ : ಸನಾತನದ ಗ್ರಂಥ ‘ಶಕ್ತಿ (ಭಾಗ -2)’