ನಿಜವಾದ ಭಕ್ತನು ದೇವರ ಅನಂತ ಲೀಲೆಗಳ ಬಗ್ಗೆ ತಿಳಿದಿರುತ್ತಾನೆ ಮತ್ತು ಅಖಂಡವಾಗಿ ಆ ಲೀಲೆಗಳನ್ನು ಇತರರಿಗೆ ವರ್ಣಿಸುತ್ತಾನೆ ! ದೇವರ ಗುಣಗಳು, ರೂಪ, ಕಾರ್ಯ, ಕೀರ್ತಿ, ಶಕ್ತಿ, ಮಹಿಮೆ, ಮತ್ತು ಲೀಲೆ; ಹೀಗೆ ಎಲ್ಲವನ್ನೂ ಇತರರಿಗೆ ಹೇಳದೆ ಭಕ್ತನಿಗೆ ನೆಮ್ಮದಿ ಸಿಗುವುದಿಲ್ಲ. ಇದುವೇ ಕೀರ್ತನ ಭಕ್ತಿ.
ನಿಜವಾದ ಭಕ್ತನು ಜನರ ಮುಂದೆ ದೇವರನ್ನು ಅಖಂಡವಾಗಿ ಸ್ತುತಿಸುತ್ತಲೇ ಇರುತ್ತಾನೆ. ಏಕೆಂದರೆ ಅವನು ನಿರಂತರವಾಗಿ ದೇವರ ವಿಚಾರಗಳನ್ನೇ ಹೊಂದಿರುತ್ತಾನೆ. ದೇವರು ಸರ್ವಗುಣ ಸಂಪನ್ನರಾಗಿರುವುದರಿಂದ, ದೇವರ ಗುಣಗಳನ್ನು ವರ್ಣಿಸುವುದನ್ನು ನಿಲ್ಲಸಲು ಸಾಧ್ಯವೇ ಇಲ್ಲ. ಆದ್ದರಿಂದ, ಕೀರ್ತನೆಯಿಂದ ಭಕ್ತನ ಭಕ್ತಿಯು ನಿರಂತರವಾಗಿ ಮುಂದುವರಿಯುತ್ತದೆ. ದೇವರ ಲೀಲೆಗಳು, ಖ್ಯಾತಿ, ಶಕ್ತಿ, ವೈಭವ, ಚರಿತ್ರೆ, ಗುಣಗಳು, ಹೆಸರುಗಳು ಇತ್ಯಾದಿಗಳನ್ನು ಪ್ರೀತಿಯಿಂದ ವಿವರಿಸುವುದೇ ಕೀರ್ತನ ಭಕ್ತಿ. ದೇವರ್ಷಿ ನಾರದ, ಮಹರ್ಷಿ ವ್ಯಾಸ, ಋಷಿ ವಾಲ್ಮೀಕಿ, ಮಹರ್ಷಿ ಶುಕದೇವ ಮುಂತಾದವರೆಲ್ಲರೂ ಕೀರ್ತನ ಭಕ್ತಿಯನ್ನು ಮಾಡಿದ್ದಾರೆ.
ದೇವರ್ಶಿ ನಾರದರು ವಿಷ್ಣುವಿನ ಪರಮಭಕ್ತರು. ಶ್ರೀಹರಿ ವಿಷ್ಣುವಿಗೂ ನಾರದರು ಅತ್ಯಂತ ಪ್ರಿಯರು. ನಾರದರು ತಮ್ಮ ವೀಣೆಯ ಮಧುರ ಸ್ವರಗಳೊಂದಿಗೆ ಶ್ರೀವಿಷ್ಣುವಿನ ಅಖಂಡ ಗುಣಗಾನ ಮಾಡುತ್ತಲೇ ಇರುತ್ತಾರೆ. ಅವರು ನಿರಂತರವಾಗಿ ‘ನಾರಾಯಣ ನಾರಾಯಣ’ ಎಂದು ಜಪಿಸುವ ಮೂಲಕ ತ್ರಿಲೋಕದಲ್ಲಿ ಪ್ರವಾಸವನ್ನು ಮುಂದುವರಿಸುತ್ತಾರೆ. ಇದು ಮಾತ್ರವಲ್ಲ, ನಾರದರು ತಮ್ಮ ಆರಾಧ್ಯ ದೇವತೆಯಾದ ಶ್ರೀವಿಷ್ಣುವಿನ ಭಕ್ತರಿಗೂ ಸಹಾಯ ಮಾಡುತ್ತಾರೆ.
ಲೋಕಕಲ್ಯಾಣದ ಬಗ್ಗೆ ತೀವ್ರ ಒಲವು ಹೊಂದಿರುವ ನಾರದಮುನಿಗಳು ಅಸಂಖ್ಯ ಜೀವಗಳನ್ನು ದೇವರ ಪವಿತ್ರ ಪಾದಗಳಿಗೆ ಕರೆತಂದಿದ್ದಾರೆ. ದೇವರ್ಶಿ ನಾರಾದರು ಭಕ್ತ ಪ್ರಹ್ಲಾದ, ಭಕ್ತ ಅಂಬರೀಶ್ ಮತ್ತು ಬಾಲಕ ಧ್ರುವ ಮುಂತಾದ ಭಕ್ತರಿಗೆ ಉಪದೇಶ ನೀಡಿ ಅವರನ್ನು ಭಕ್ತಿ ಮಾರ್ಗದಲ್ಲಿ ನಡೆಯಲು ಪ್ರೇರೇಪಿಸಿದರು. ಇದು ಅವರ ಕೀರ್ತನ ಭಕ್ತಿಯೇ. ಭಕ್ತಿಯ ಬಗ್ಗೆ ಇತರರಿಗೆ ಬೋಧನೆ ನೀಡುವುದು, ನಾರಾಯಣನನ್ನು ಅಖಂಡವಾಗಿ ಸ್ಮರಿಸಿ ಬ್ರಹ್ಮಾಂಡದಲ್ಲಿ ಸಂಚರಿಸುವುದು, ಅಖಂಡವಾಗಿ ವಿಷ್ಣುವಿನ ಸ್ತುತಿಯಲ್ಲಿ ನಿರತವಾಗಿರುವುದು, ಇತರರಿಗೆ ಮಾರ್ಗದರ್ಶನ ನೀಡುವುದು, ಭಗವಾನ ವಿಷ್ಣುವಿನ ಬಗ್ಗೆ ಇತರರಿಗೆ ಹೇಳುವ ಮೂಲಕ ನಾವು ಭಗವಾನ ವಿಷ್ಣುವಿನ ಪಾದಗಳನ್ನು ಹೇಗೆ ಸೇರಬಹುದು ಎಂದು ಮಾರ್ಗದರ್ಶನ ನೀಡುವ ಮೂಲಕ ದೇವರ್ಷಿ ನಾರದರು ಅಖಂಡವಾಗಿ ಕೀರ್ತನ ಭಕ್ತಿಯಲ್ಲಿ ನಿರತರಾಗಿರುತ್ತಾರೆ.
ದೇವರಿಗೆ ಪ್ರಿಯರಾದ ದೇವರ್ಷಿ ನಾರಾದರ ಚರಣಗಳಲ್ಲಿ ಪ್ರಾರ್ಥಿಸೋಣ – ಯಾವ ರೀತಿ ತಾವು ಈಶ್ವರನ ಭಕ್ತಿಯಲ್ಲಿ ಅಖಂಡವಾಗಿ ಲೀನರಾಗಿರುತ್ತೀರಿ; ಅವರ ಸ್ಮರಣೆ, ಸ್ತುತಿ ಮತ್ತು ಅವರ ಇಚ್ಛೆಯಿಂದಲೇ ನೀವು ಮೂರು ಲೋಕಗಳಲ್ಲಿ ಪ್ರಯಾಣಿಸುತ್ತೀರಿ; ಅದೇ ರೀತಿ, ಭಗವಂತನ ಅಚಲ ಭಕ್ತಿಯನ್ನು ಮಾಡಲು ನಮಗೆ ಕಲಿಸಿ. ಅನೇಕ ಜೀವಗಳನ್ನು ದೇವರ ಪಾದಗಳಿಗೆ ಕರೆತಂದಂತೆಯೇ, ನೀವು ನಮ್ಮನ್ನು ಕೂಡ ದೇವರ ಪಾದಗಳಿಗೆ ಕರೆದೊಯ್ಯಬೇಕು, ಇದುವೇ ನಿಮ್ಮ ಚರಣಗಳಲ್ಲಿ ಪ್ರಾರ್ಥನೆ.