ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗೆ ವ್ಯವಹಾರದಲ್ಲಿನ ಸುಖ ಸಿಗುವುದಿಲ್ಲ ಮತ್ತು ಅವನಿಗೆ ಸಾಧನೆಯಲ್ಲಿನ ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಲೇಖನದಲ್ಲಿ ನಕಾರಾತ್ಮಕತೆಯ ಕಾರಣಗಳು, ನಕಾರಾತ್ಮಕತೆಯಿಂದಾಗುವ ದುಷ್ಪರಿಣಾಮಗಳು, ನಕಾರಾತ್ಮಕತೆಯನ್ನು ದೂರಗೊಳಿಸಲು ಮಾಡಬೇಕಾದ ಉಪಾಯ ಇತ್ಯಾದಿಗಳನ್ನು ಕೊಡಲಾಗಿದೆ. ಈ ಲೇಖನವನ್ನು ಓದಿ ನಕಾರಾತ್ಮಕ ವಿಚಾರ ಮಾಡುವ ವ್ಯಕ್ತಿಗಳಿಗೆ ಸಕಾರಾತ್ಮಕವಾಗಿ ಇರುವುದರ ಮಹತ್ವ ತಿಳಿಯುವುದು ಮತ್ತು ಅದಕ್ಕಾಗಿ ಪ್ರಯತ್ನವನ್ನು ಮಾಡಲು ಪ್ರೇರಣೆಯೂ ಸಿಗುವುದು.
೧. ನಕಾರಾತ್ಮಕತೆ ಅಂದರೇನು ?
ನಕಾರಾತ್ಮಕತೆಯು ಮನಸ್ಸಿನ ಒಂದು ಸ್ಥಿತಿಯಾಗಿದೆ. ಮುಂದಿನ ವಿಚಾರಗಳಿಗೆ ನಕಾರಾತ್ಮಕತೆ (negativity, negative thinking) ಎಂದು ಹೇಳಬಹುದು.
ಅ. ಮನುಷ್ಯನ ಮನಸ್ಸಿನಲ್ಲಿ ನಡೆದಿರುವ ‘ವಿರುದ್ಧ ವಿಚಾರ’ಗಳ ಪ್ರಕ್ರಿಯೆ
ಆ. ದೇವರಿಗೆ ಮತ್ತು ಮನುಷ್ಯನಿಗೆ ಅಪೇಕ್ಷಿತವಿರದ ವಿಚಾರಗಳು ಮನಸ್ಸಿನಲ್ಲಿ ಬರುವುದು
ಇ. ಮನುಷ್ಯನನ್ನು ಕರ್ತವ್ಯದಿಂದ ದೂರ ಕರೆದೊಯ್ಯುವ ವಿಚಾರಗಳು
ಈ. ಮನುಷ್ಯನನ್ನು ದೇವರಿಂದ ದೂರ ಕರೆದೊಯ್ಯುವ ವಿಚಾರಗಳು
ಉ. ಮನುಷ್ಯನಿಗೆ ಜೀವನದಲ್ಲಿನ ಆನಂದವನ್ನು ಪಡೆಯಲು ಬಿಡದಿರುವ ವಿಚಾರಗಳು
ಊ. ಮನುಷ್ಯನನ್ನು ಮನುಷ್ಯನೆಂದು ಜೀವಿಸಲು ಬಿಡದಿರುವ ವಿಚಾರಗಳು
ಎ. ‘ಆನಂದವನ್ನು ಪ್ರಾಪ್ತಮಾಡಿಕೊಳ್ಳಲು ಶ್ರಮ ಪಡಬೇಕಾಗುತ್ತದೆ’ ಎಂಬ ಸತ್ಯವನ್ನು ಮರೆಸುವ ವಿಚಾರಗಳು
೨. ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಏಕೆ ಮತ್ತು ಯಾವಾಗ ಬರುತ್ತವೆ ?
ಅ. ದೇವರ ಮೇಲಿನ ವಿಶ್ವಾಸವು ಅಸ್ಥಿರವಾಗಿರುವುದು ಮತ್ತು ಶ್ರದ್ಧೆಯ ಅಭಾವ
ಆ. ತಮ್ಮ ಕರ್ತವ್ಯದ ಕುರಿತು ಅನುಮಾನ ಪಡುವುದು
ಇ. ಆತ್ಮವಿಶ್ವಾಸದ ಅಭಾವ
ಈ. ಸಂಶಯ ಸ್ವಭಾವ
ಉ. ಸಂಬಂಧಿತ ವ್ಯಕ್ತಿಗಳ ಕುರಿತು ಪ್ರೇಮಭಾವ, ಅಕ್ಕರೆ ಅಥವಾ ಆತ್ಮೀಯತೆ ಇಲ್ಲದಿರುವುದು
ಊ. ಪರಿಸ್ಥಿತಿ ಒಂದೇ ಆಗಿದ್ದರೂ, ಅದರಲ್ಲಿ ಅನೇಕ ಬದಲಾವಣೆಗಳಾಗಬಹುದು, ಎಂದು ಕಲ್ಪನೆ ಮಾಡುವುದು ಅಥವಾ ಊಹಿಸುವುದು
ಎ. ಅನಾವಶ್ಯಕ ವಿಚಾರಪ್ರಕ್ರಿಯೆ
ಏ. ವಿಚಾರಗಳಿಗೆ ಕಲ್ಪನೆಗಳ ಅನೇಕ ಕಲ್ಪನೆಗಳು ಹುಟ್ಟಿಕೊಳ್ಳುವುದು
೩. ನಕಾರಾತ್ಮಕತೆಯ ಕಾರಣಗಳು
೩ ಅ. ಕೀಳರಿಮೆಯ ಸ್ವಭಾವದೋಷವು ಪ್ರಬಲವಾಗಿರುವುದು : ವ್ಯಕ್ತಿಯಲ್ಲಿ ಕೀಳರಿಮೆ ಸ್ವಭಾವದೋಷವು ಪ್ರಬಲವಾಗಿದ್ದರೆ ಅವನ ಮನಸ್ಸಿನಲ್ಲಿ ನಕಾರಾತ್ಮಕ ವಿಚಾರಗಳು ಬರುವ ಪ್ರಮಾಣವು ಹೆಚ್ಚಿರುತ್ತದೆ. ಕೀಳರಿಮೆ ಎಂದರೆ ‘ಸರ್ವಸಾಮಾನ್ಯ ವ್ಯಕ್ತಿಯಲ್ಲಿರುವ ಗುಣವೈಶಿಷ್ಟ್ಯಗಳು ನನ್ನಲ್ಲಿಲ್ಲ ಅಥವಾ ಅವುಗಳ ಕೊರತೆ ಇದೆ’ ಎಂದು ಅನಿಸುವುದು. ಆದುದರಿಂದ ‘ನನಗೇನೂ ಬರುವುದಿಲ್ಲ’, ‘ನನಗೆ ಇತರರಂತೆ ಏನೂ ಮಾಡಲು ಸಾಧ್ಯವಾಗುವುದಿಲ್ಲ’ ಎಂದು ಅನಿಸುತ್ತದೆ. ಇಂತಹ ವಿಚಾರಗಳಿಂದಾಗಿ ಆ ವ್ಯಕ್ತಿಯು ಯಾವುದೇ ಕೃತಿಯನ್ನು ಮಾಡಲು ಸಿದ್ಧನಾಗುವುದಿಲ್ಲ. ಎಲ್ಲ ಪ್ರಯತ್ನಗಳು ಮತ್ತು ಕೃತಿಗಳು ನಿಲ್ಲುವುದರಿಂದ ಆ ವ್ಯಕ್ತಿಗೆ ಬದುಕುವುದು ಬೇಡವೆನಿಸುತ್ತದೆ. ಆ ವ್ಯಕ್ತಿಯು ಮನೋರೋಗಿಯಾಗುತ್ತಾನೆ ಮತ್ತು ಅವನ ಜೀವನವು ವ್ಯರ್ಥವಾಗುತ್ತದೆ.
೩ ಆ. ಮನಸ್ಸು, ಬುದ್ಧಿ ಮತ್ತು ಶರೀರವನ್ನು ಉಪಯೋಗಿಸದಿರುವುದು : ಕೀಳರಿಮೆಯಿರುವ ಮತ್ತು ನಕಾರಾತ್ಮಕ ವಿಚಾರಗಳನ್ನು ಮಾಡುವ ವ್ಯಕ್ತಿಯು ಮನಸ್ಸಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ದೇವರು ನೀಡಿದ ಇಂದ್ರಿಯಗಳನ್ನು ಮತ್ತು ಅವಯವಗಳನ್ನು ಉಪಯೋಗಿಸಿ ಏನಾದರೂ ಮಾಡುವುದಿರುತ್ತದೆ, ಇದನ್ನೇ ಅವನು ಮರೆಯುತ್ತಾನೆ. ಇಂತಹ ವ್ಯಕ್ತಿಯು ದೇವರು ನೀಡಿದ ಶರೀರ ಮತ್ತು ಇಂದ್ರಿಯಗಳನ್ನು ಉಪಯೋಗಿಸುವುದಿಲ್ಲ. ಆದ್ದರಿಂದ ಅವನು ದೇವರ ಆಜ್ಞಾಪಾಲನೆಯನ್ನೂ ಮಾಡುವುದಿಲ್ಲ. ಆ ವ್ಯಕ್ತಿಯು ಪ್ರಾರಬ್ಧವನ್ನು ಭೋಗಿಸಿ ತೀರಿಸುವ ದೇವರು ನೀಡಿದ ಅವಕಾಶವನ್ನು ಕಳೆದುಕೊಳ್ಳುತ್ತಾನೆ. ಇದರಿಂದ ಜನ್ಮ-ಮೃತ್ಯುವಿನ ಚಕ್ರಗಳ ಸಂಖ್ಯೆಯು ಹೆಚ್ಚಾಗುತ್ತಾ ಹೋಗುತ್ತದೆ. ದೇವರು ನೀಡಿದ ಮನಸ್ಸು, ಬುದ್ಧಿ ಮತ್ತು ಶರೀರದ ಬಳಕೆಯನ್ನು ಮಾಡುವುದಿಲ್ಲ. ಆದ್ದರಿಂದ ಅವನಿಗೆ ಐಹಿಕ ಜೀವನವನ್ನೂ ಸುಖವಾಗಿ ನಡೆಸಲು ಆಗುವುದಿಲ್ಲ.
೩ ಇ. ತನ್ನನ್ನು ತಾನು ಕಡಿಮೆ ಎಂದು ತಿಳಿದುಕೊಳ್ಳುವುದು : ೮೪ ಲಕ್ಷ ಯೋನಿಗಳಲ್ಲಿ ಪ್ರವಾಸ ಮಾಡಿದ ನಂತರ ಮನುಷ್ಯಜನ್ಮ ಪ್ರಾಪ್ತವಾಗುತ್ತದೆ. ದೇವರು ಮನುಷ್ಯನಿಗೆ ನೀಡಿದ ಈ ಸುಂದರ ಶರೀರ, ಮನಸ್ಸು ಮತ್ತು ಬುದ್ಧಿ ತನ್ನನ್ನು ತಾನು ಕಡಿಮೆ ಎಂದು ತಿಳಿದುಕೊಳ್ಳುವುದರಿಂದ ವ್ಯರ್ಥವಾಗುತ್ತದೆ, ಆದರೆ ಇದು ಅವನಿಗೆ ತಿಳಿಯುವುದಿಲ್ಲ. ೮೪ ಲಕ್ಷ ಯೋನಿಗಳಲ್ಲಿನ ಎಲ್ಲ ಜೀವಗಳಲ್ಲಿ ಮನುಷ್ಯಪ್ರಾಣಿಯು ಸರ್ವಶ್ರೇಷ್ಠನೆಂದು ತಿಳಿಯಲಾಗುತ್ತದೆ. ಮನುಷ್ಯನಲ್ಲಿ ಅಸಾಧ್ಯ ಕೆಲಸಗಳನ್ನು ಸಾಧ್ಯ ಮಾಡುವ ಕ್ಷಮತೆಯಿದೆ. ತನ್ನನ್ನು ತಾನು ಕಡಿಮೆ ಎಂದು ತಿಳಿದುಕೊಳ್ಳುವುದೆಂದರೆ, ಆ ಸೃಷ್ಟಿ ನಿರ್ಮಾಪಕನ ಅಪಮಾನ ಮಾಡಿದಂತಾಗಿದೆ. ತನ್ನನ್ನು ತಾನು ಕಡಿಮೆ ಎಂದು ತಿಳಿದುಕೊಳ್ಳುವ ವ್ಯಕ್ತಿಯು ಆತ್ಮವಿಶ್ವಾಸವನ್ನು ಕಳೆದುಕೊಳ್ಳುತ್ತಾನೆ. ಅನಾವಶ್ಯಕ ವಿಚಾರಗಳನ್ನು ಮಾಡುತ್ತಿರುವುದರಿಂದ ನನಗೆ ಯಾವುದಾದರೊಂದು ವಿಷಯವನ್ನು ಮಾಡಲು ಸಾಧ್ಯವಾಗುವುದೇ ? ನಾನು ಆ ಕೃತಿಯನ್ನು ಮಾಡಬಹುದೇ ?, ಇಂತಹ ವಿಚಾರಗಳಲ್ಲಿ ಸಿಲುಕಿಕೊಂಡಿರುವುದರಿಂದ ಆ ವ್ಯಕ್ತಿಯು ತನ್ನ ಇಚ್ಛೆ ಮತ್ತು ಕಾರ್ಯಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಅವನ ಮೇಲಿನ ವಿಶ್ವಾಸವೇ ಅವನಿಗೆ ಕಡಿಮೆಯಾಗುತ್ತದೆ. ತದನಂತರ ನನಗೆ ಏನೂ ಬರುವುದಿಲ್ಲ. ನನಗೆ ಏನೂ ಮಾಡಲು ಆಗುವುದಿಲ್ಲ. ನನ್ನಲ್ಲಿ ಏನೂ ಮಾಡುವ ಕ್ಷಮತೆ ಇಲ್ಲ, ಎಂಬ ನಕಾರಾತ್ಮಕ ವಿಚಾರಗಳು ಹೆಚ್ಚಾಗುತ್ತಾ ಹೋಗುತ್ತವೆ ಮತ್ತು ಇಂತಹ ವ್ಯಕ್ತಿಯು ನಿಷ್ಕ್ರಿಯನಾಗುತ್ತಾನೆ.
೩ ಈ. ಕಲಿಯುವ ವೃತ್ತಿ ಇಲ್ಲದಿರುವುದು : ಜಿಜ್ಞಾಸೆ ಕಡಿಮೆಯಿರುವ ವ್ಯಕ್ತಿಯಲ್ಲಿ ಕಲಿಯುವ ವೃತ್ತಿ ಕಡಿಮೆ ಇರುತ್ತದೆ. ಆದ್ದರಿಂದ ಆ ವ್ಯಕ್ತಿಗೆ ಕಲಿಯುವ ಮತ್ತು ಹೊಸ ಜ್ಞಾನವನ್ನು ಪಡೆಯುವ ಆನಂದವು ಸಿಗುವುದಿಲ್ಲ. ಅಪೂರ್ಣ ಜ್ಞಾನದಿಂದ ಅವನಿಂದ ಅನೇಕ ತಪ್ಪುಗಳಾಗುತ್ತವೆ. ತಪ್ಪುಗಳಾದ ನಂತರ ಆ ವ್ಯಕ್ತಿಯು ತನ್ನ ಮೇಲೆಯೇ ಸಿಡಿಮಿಡಿಗೊಳ್ಳುತ್ತಾನೆ, ನಿರಾಶನಾಗುತ್ತಾನೆ ಮತ್ತು ನನಗೆ ಏನೂ ಮಾಡಲು ಬರುವುದಿಲ್ಲ, ಎಂಬ ನಕಾರಾತ್ಮಕ ವಿಚಾರಗಳಿಂದ ಕೆಲವು ಕೃತಿಗಳನ್ನು ಮಾಡುವುದೇ ಇಲ್ಲ. ಇಂತಹ ವ್ಯಕ್ತಿಗೆ ಸಮಾಧಾನ ಮತ್ತು ಶಾಂತಿ ಹೇಗೆ ಸಿಗುವುದು ? ಮನುಷ್ಯನು ಪ್ರತಿದಿನ ಏನಾದರೂ ಕಲಿತರೆ ಅಥವಾ ಹೊಸ ಕೃತಿಗಳನ್ನು ಮಾಡಲು ಪ್ರಯತ್ನಿಸಿದರೆ ಸಕಾರಾತ್ಮಕ ವೃತ್ತಿಯು ಹೆಚ್ಚಾಗಲು ಸಹಾಯವಾಗುತ್ತದೆ.
೩ ಉ. ಆಲಸ್ಯ : ಆಲಸ್ಯವಿರುವ ಮನುಷ್ಯನಿಗೆ ವಿದ್ಯೆ ಸಿಗುವುದಿಲ್ಲ. ವಿದ್ಯೆ, ಕಲೆ ಮತ್ತು ಜ್ಞಾನ ಇವುಗಳ ಅಭಾವವಿರುವ ವ್ಯಕ್ತಿಗೆ ಧನಪ್ರಾಪ್ತಿಯಾಗುವುದಿಲ್ಲ. ಯಾರ ಬಳಿ ಧನವಿಲ್ಲವೋ, ಅವನಿಗೆ ಎಲ್ಲಿಂದ ಸುಖ ಸಿಗುವುದು ? ದುಃಖದಿಂದ ಬಳಲುವ ವ್ಯಕ್ತಿಯು ಸಕಾರಾತ್ಮಕವಾಗಿರಲು ಸಾಧ್ಯವಿಲ್ಲ. ಆ ವ್ಯಕ್ತಿಯು ಎಲ್ಲರ ಮೇಲೆ ಸಿಟ್ಟು ಮಾಡುತ್ತಾನೆ. ನಕಾರಾತ್ಮಕ ವಿಚಾರಗಳಿಂದಾಗಿ ಆ ವ್ಯಕ್ತಿಯು ತನ್ನ ಮೇಲೆ ಮತ್ತು ಇತರರ ಮೇಲೆ ಸಿಡಿಮಿಡಿಗೊಳ್ಳುತ್ತಾನೆ. ಅವನಿಗೆ ಯೋಗ್ಯ ವಿಚಾರ ಮಾಡಲು ತಿಳಿಯುವುದಿಲ್ಲ. ಅವನಿಂದ ಎಲ್ಲರಿಗೂ ತೊಂದರೆಯಾಗುತ್ತದೆ. ಕುಟುಂಬದವರು ಮತ್ತು ಸಮಾಜದಲ್ಲಿನ ವ್ಯಕ್ತಿಗಳು ಆ ವ್ಯಕ್ತಿಗೆ ಅವನ ಜೀವನ ವ್ಯರ್ಥವಾಯಿತು ಎಂದು ಹೇಳುತ್ತಾರೆ. ತಮೋಗುಣ ಹೆಚ್ಚಿರುವ ವ್ಯಕ್ತಿಯಲ್ಲಿ ರಜೋಗುಣ ಕಡಿಮೆ ಇರುತ್ತದೆ. ಇಂತಹ ಮನುಷ್ಯನಲ್ಲಿ ಆಲಸ್ಯವೃತ್ತಿ ಮತ್ತು ಕೆಲಸವನ್ನು ಮಾಡದಿರುವ ವೃತ್ತಿ ಇರುತ್ತದೆ. ಅವನು ಏನಾದರೂ ಕೃತ್ಯವನ್ನು ಮಾಡಿ ತನಗೆ ತಾನೇ ತೊಂದರೆಗಳನ್ನು ಮಾಡಿಕೊಳ್ಳುತ್ತಾನೆ ಮತ್ತು ಇತರರಿಗೂ ತೊಂದರೆಗಳನ್ನು ಕೊಡುತ್ತಾನೆ. ಇಂತಹ ಮನುಷ್ಯನ ವಿಚಾರಗಳು ಎಂದಿಗೂ ಸರಳ ಮತ್ತು ಸಕಾರಾತ್ಮಕವಾಗಿರುವುದಿಲ್ಲ. ಸತತವಾಗಿ ನಕಾರಾತ್ಮಕ ಸ್ಥಿತಿಯಲ್ಲಿರುವುದರಿಂದ ಅವನು ಒಳ್ಳೆಯ ಕರ್ಮಗಳನ್ನು ಮಾಡುವುದಿಲ್ಲ. ಕುಟುಂಬ ಮತ್ತು ಸಮಾಜದಲ್ಲಿ ವ್ಯಕ್ತಿಗಳ ಮೇಲೆ ಪ್ರೇಮವನ್ನು ಮಾಡಬೇಕು, ಎಂಬ ವಿಚಾರವು ಅವನ ಮನಸ್ಸಿನಲ್ಲಿ ಬರುವುದೇ ಇಲ್ಲ. ಅವನ ಮನಸ್ಸಿನಲ್ಲಿನ ನಕಾರಾತ್ಮಕ ವಿಚಾರಗಳು ಅವನನ್ನು ಇನ್ನೂ ಕೆಟ್ಟ ಕೃತಿಗಳನ್ನು ಮಾಡಲು ಪ್ರೇರೇಪಿಸುತ್ತವೆ.
೪. ನಕಾರಾತ್ಮಕತೆಯ ದುಷ್ಪರಿಣಾಮಗಳು
ಅ. ಮನುಷ್ಯನಿಗೆ ದೈನಂದಿನ ಜೀವನವನ್ನು ಜೀವಿಸುವಾಗ ಆನಂದವನ್ನು ಪಡೆಯಲು ಆಗುವುದಿಲ್ಲ.
ಆ. ಮನುಷ್ಯನು ಕೃತಿಹೀನ, ನಿರಾಶ ಮತ್ತು ದುಃಖಿಯಾಗುತ್ತಾನೆ.
ಇ. ಮನುಷ್ಯನಿಗೆ ಇತರರಿಗೆ ಪ್ರೇಮವನ್ನು ಕೊಡಲು ಸಾಧ್ಯವಾಗುವುದಿಲ್ಲ ಮತ್ತು ಇತರರ ಪ್ರೇಮವನ್ನು ಪಡೆಯಲೂ ಸಾಧ್ಯವಾಗುವುದಿಲ್ಲ.
ಈ. ಇಂತಹ ಮನುಷ್ಯನಿಗೆ ವ್ಯವಹಾರವನ್ನು ಚೆನ್ನಾಗಿ ಮಾಡಲು ತಿಳಿಯುವುದಿಲ್ಲ ಮತ್ತು ಪರಮಾರ್ಥವನ್ನು ಮಾಡಬೇಕೆಂಬ ವಿಚಾರವೂ ಅವನ ಮನಸ್ಸಿನಲ್ಲಿ ಬರುವುದಿಲ್ಲ.
ಉ. ಮನುಷ್ಯನು ನಿರಾಶಾವಾದಿ ಮತ್ತು ವೈಫಲ್ಯಗ್ರಸ್ತನಾಗಿ ಜೀವನದಲ್ಲಿ ಬೇಸತ್ತಿರುತ್ತಾನೆ.
ಊ. ಅವನ ಮನಸ್ಸಿನಲ್ಲಿ ‘ಜೀವನವನ್ನು ಅಂತ್ಯಗೊಳಿಸಬೇಕು’ ಎಂಬ ವಿಚಾರಗಳು ಬರುತ್ತವೆ.
ಎ. ಅವನಿಂದ ಕುಟುಂಬ ಮತ್ತು ನೌಕರಿ ಇವುಗಳ ಕರ್ತವ್ಯಗಳನ್ನು ಅಪೇಕ್ಷಿತ ರೀತಿಯಲ್ಲಿ ಪೂರ್ಣಗೊಳಿಸಲು ಆಗುವುದಿಲ್ಲ. ಅದರ ಉತ್ಪತ್ತಿ (output) ಕಡಿಮೆಯಾಗುವುದರಿಂದ ಅವನಿಗೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಏ. ಇಂತಹ ವ್ಯಕ್ತಿಯು ಮಾನಸಿಕ ಒತ್ತಡದಲ್ಲಿರುವುದರಿಂದ ಅವನಿಂದ ಯಾವುದೇ ಸಕಾರಾತ್ಮಕ ವಿಚಾರ ಅಥವಾ ಸಕಾರಾತ್ಮಕ ಕೃತಿಗಳು ಆಗುವುದಿಲ್ಲ.
ಐ. ನಕಾರಾತ್ಮಕತೆಯ ದುಷ್ಪರಿಣಾಮವು ಮನುಷ್ಯನ ಮನಸ್ಸು ಮತ್ತು ಶರೀರದ ಮೇಲಾಗುತ್ತದೆ. ಅವನ ಕಾರ್ಯಕ್ಷಮತೆಯು (ಮಾನಸಿಕ ಮತ್ತು ಶಾರೀರಿಕ) ಕಡಿಮೆಯಾಗಿ ಅವನಿಗೆ ನಿರಾಶೆ ಬರುತ್ತದೆ.
ಒ. ವ್ಯಕ್ತಿಯು ಸಾಧನೆಯಿಂದ, ಅಂದರೆ ದೇವರಿಂದ ದೂರ ಹೋಗುತ್ತಾನೆ.
ಓ. ಆ ವ್ಯಕ್ತಿಗೆ ಯಾರೊಂದಿಗೆ ಆತ್ಮೀಯತೆಯನ್ನೂ ಸಾಧಿಸಲು ಆಗುವುದಿಲ್ಲ.
ಔ. ಇಂತಹ ಮನುಷ್ಯನು ಕುಟುಂಬ ಮತ್ತು ಸಮಾಜದಲ್ಲಿನ ವ್ಯಕ್ತಿಗಳಿಂದ ದೂರವಾಗುತ್ತಾನೆ. ಅವನ ಕೊಡು-ಕೊಳ್ಳುವಿಕೆಯ ಲೆಕ್ಕಾಚಾರವು ವಿಳಂಬಗೊಳ್ಳುತ್ತದೆ.
ಭಾಗ ೨ | ಭಾಗ ೩
– ಶ್ರೀ. ಅಶೋಕ ಲಿಮಕರ್, ಸನಾತನ ಆಶ್ರಮ, ದೇವದ, ಪನವೇಲ. (೩೦.೭.೨೦೧೭)