ಅನೇಕ ಜನರಿಗೆ ಮಲಬದ್ಧತೆಯ (ಹೊಟ್ಟೆ ಸ್ವಚ್ಛವಾಗದಿರುವ) ಸಮಸ್ಯೆ ಇರುತ್ತದೆ. ಈ ಸಮಸ್ಯೆಯಿಂದ ಇತರ ಅನೇಕ ಶಾರೀರಿಕ ಸಮಸ್ಯೆಗಳು ಉದ್ಭವಿಸುತ್ತವೆ. ಎಷ್ಟೋ ಜನರು ಪ್ರತಿದಿನ ಹೊಟ್ಟೆ ಸ್ವಚ್ಛವಾಗಲು ಔಷಧಿಗಳನ್ನು ತೆಗೆದುಕೊಳ್ಳುತ್ತಾರೆ. ಇವುಗಳಲ್ಲಿನ ಹೆಚ್ಚಿನ ಔಷಧಗಳಿಂದ ಕರುಳುಗಳು ಒಣಗುತ್ತವೆ ಮತ್ತು ಇದರಿಂದ ಮಲಬದ್ಧತೆಯ ಸಮಸ್ಯೆಯು ಇನ್ನೂ ಹೆಚ್ಚಾಗುತ್ತದೆ.
೧. ಮೆಂತೆಕಾಳುಗಳನ್ನು ಸೇವಿಸುವ ಪದ್ಧತಿ
‘ಮಲಬದ್ಧತೆಗೆ (ಹೊಟ್ಟೆ ಸ್ವಚ್ಛವಾಗಲು) ಮೆಂತೆಕಾಳು ರಾಮಬಾಣ ಔಷಧಿಯಾಗಿದೆ. ರಾತ್ರಿ ಮಲಗುವಾಗ ಅಥವಾ ರಾತ್ರಿಯ ಊಟದ ನಂತರ ಅರ್ಧ ಚಮಚ ಮೆಂತೆಕಾಳುಗಳನ್ನು ಸ್ವಲ್ಪ ನೀರಿನೊಂದಿಗೆ ಔಷಧಿಯ ಮಾತ್ರೆಗಳನ್ನು ನುಂಗುವಂತೆ, ಕಚ್ಚದೇ ನುಂಗಬೇಕು. ಇದರಿಂದ ಬೆಳಗ್ಗೆ ಎದ್ದ ನಂತರ ಹೊಟ್ಟೆ ಸ್ಚಚ್ಛವಾಗುತ್ತದೆ.
೨. ಮೆಂತೆಕಾಳು ಈ ರೀತಿ ಕಾರ್ಯ ಮಾಡುತ್ತದೆ
ಮೆಂತೆಕಾಳುಗಳು ಹೊಟ್ಟೆಯಲ್ಲಿ ಹೋದ ನಂತರ ಉಬ್ಬುತ್ತವೆ ಮತ್ತು ಅವುಗಳ ನುಣುಪಿನಿಂದಾಗಿ ಅವು ಕರುಳಿನಲ್ಲಿರುವ ಮಲವನ್ನು ಮುಂದೆ ದೂಡುತ್ತವೆ. ಮೆಂತೆಕಾಳುಗಳಿಂದ ಕರುಳಿನಲ್ಲಿ ಆವಶ್ಯಕವಿರುವಷ್ಟು ನೀರಿನ ಪ್ರಮಾಣವು ಉಳಿಯುತ್ತದೆ. ಇದರಿಂದಾಗಿ ಕರುಳುಗಳು ಒಣಗುವುದಿಲ್ಲ ಮೆಂತೆಕಾಳುಗಳು ವಾತ, ಪಿತ್ತ ಮತ್ತು ಕಫ ಈ ಮೂರೂ ದೋಷಗಳನ್ನು ಶಮನಗೊಳಿಸುತ್ತವೆ. ಮೆಂತೆಕಾಳುಗಳು ಆಹಾರದಲ್ಲಿನ ಪದಾರ್ಥವಾಗಿವೆ. ಆದುದರಿಂದ ಅನೇಕ ದಿನಗಳವರೆಗೆ ಪ್ರತಿದಿನ ಮೆಂತೆಕಾಳುಗಳನ್ನು ಸೇವಿಸಿದರೂ, ಯಾವುದೇ ಅಪಾಯವಾಗುವುದಿಲ್ಲ. ಮೆಂತೆಕಾಳುಗಳನ್ನು ತಿನ್ನುವುದರಿಂದ ನೈಸರ್ಗಿಕ ರೀತಿಯಿಂದ ಶೌಚವಾಗುತ್ತದೆ. ಇವುಗಳಿಂದ ಭೇದಿಯಾಗುವುದಿಲ್ಲ. ಮೆಂತೆಕಾಳು ಶಕ್ತಿವರ್ಧಕವಾಗಿವೆ. ಆದುದರಿಂದ ಮೆಂತೆಕಾಳುಗಳನ್ನು ನಿಯಮಿತವಾಗಿ ತಿನ್ನುವುದರಿಂದ ದಣಿವೂ ಕಡಿಮೆಯಾಗುತ್ತದೆ.
೩. ಮಲಬದ್ಧತೆಗನುಸಾರ ಮೆಂತೆಕಾಳುಗಳ ಪ್ರಮಾಣ
ಪ್ರತಿದಿನ ಅರ್ಧ ಚಮಚದಷ್ಟು ಮೆಂತೆಕಾಳುಗಳನ್ನು ತಿಂದು ಅದರಿಂದ ಲಾಭವಾಗುತ್ತಿದ್ದರೆ, ಮುಂದಿನ ವಾರದಲ್ಲಿ ಅದರ ಪ್ರಮಾಣವನ್ನು ಕಡಿಮೆ ಮಾಡಿ ನೋಡಬೇಕು. ಎಷ್ಟು ಕಡಿಮೆ ಪ್ರಮಾಣದಲ್ಲಿ ಅದು ಲಾಭವಾಗುತ್ತದೆಯೋ, ಅಷ್ಟು ಪ್ರಮಾಣವನ್ನು ಇಟ್ಟುಕೊಳ್ಳಬೇಕು. ಕೆಲವರ ಹೊಟ್ಟೆ ಹೆಚ್ಚು ಜಡವಾಗಿರುತ್ತದೆ. ಅಂತಹವರಿಗೆ ಅರ್ಧ ಚಮಚದಷ್ಟು ಮೆಂತೆಕಾಳು ತಿಂದು ಹೊಟ್ಟೆ ಸ್ವಚ್ಛವಾಗುವುದಿಲ್ಲ. ಅಂತಹವರು ಮೆಂತೆ ಕಾಳಿನ ಪ್ರಮಾಣವನ್ನು ಪ್ರತಿದಿನ ಅರ್ಧ ಚಮಚದಷ್ಟು ಹೆಚ್ಚು ತೆಗೆದುಕೊಂಡು ನೋಡಬೇಕು. ಯಾವ ಪ್ರಮಾಣ ಸರಿಯಾಗುತ್ತದೆಯೋ, ಆ ಪ್ರಮಾಣವನ್ನು ಮುಂದುವರಿಸಬೇಕು. ಕೆಲವರಿಗೆ ಒಂದು ಸಮಯಕ್ಕೆ ೩ ರಿಂದ ೪ ಚಮಚದಷ್ಟು ಮೆಂತೆಕಾಳುಗಳನ್ನು ಸೇವಿಸಬೇಕಾಗುತ್ತದೆ.
೪. ಮೆಂತೆಕಾಳುಗಳನ್ನು ತೊಳೆದು ಉಪಯೋಗಿಸಬೇಕು
ಹೊಟ್ಟೆ ಸ್ವಚ್ಛವಾಗಲು ಉಪಯೋಗಿಸಲಾಗುವ ಇತರ ಔಷಧಗಳಿಗಿಂತ ಮೆಂತೆಕಾಳು ಎಷ್ಟೋಪಟ್ಟು ಕಡಿಮೆ ಬೆಲೆಗೆ ಸಿಗುತ್ತವೆ. ಪೇಟೆಯಲ್ಲಿ ಸಿಗುವ ಮೆಂತೆಕಾಳುಗಳ ಮೇಲೆ ರಾಸಾಯನಿಕವನ್ನು ಸಿಂಪಡಿಸುತ್ತಾರೆ. ಆದುದರಿಂದ ಬೇಸಿಗೆಯಲ್ಲಿ ಒಂದು ವರ್ಷಕ್ಕೆ ಸಾಕಾಗುವಷ್ಟು ಮೆಂತೆಕಾಳುಗಳನ್ನು ತಂದು ತೊಳೆದು ಸರಿಯಾಗಿ ಒಣಗಿಸಿ ಗಾಳಿಯಾಡದಂತಹ ಡಬ್ಬಿಯಲ್ಲಿ ಹಾಕಿಡಬೇಕು ಮತ್ತು ಆವಶ್ಯಕತೆಗನುಸಾರ ವರ್ಷವಿಡೀ ಬಳಸಬೇಕು.’
– ವೈದ್ಯ ಮೇಘರಾಜ ಮಾಧವ ಪರಾಡಕರ, ಸನಾತನ ಆಶ್ರಮ, ರಾಮನಾಥಿ, ಗೋವಾ. (೧೮.೩.೨೦೨೧)
Thanq so much.
Very useful is this app.
Everyone must keep this. & read & follow.
V r great ful 2 u always.
ಅತ್ತ್ಯುತ್ತಮ.ಮಾಹಿತಿ
ಕೃತಙ್ಞತೆಗಳು
🙏🙏🙏🙏