ಸತ್ಸಂಗ 12 : ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ

ಕಳೆದ ಸತ್ಸಂಗದಲ್ಲಿ ನಾವು ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯ ಕಿರುಪರಿಚಯ ಪಡೆದುಕೊಂಡಿದ್ದೆವು. ಅದರಲ್ಲಿ ಸ್ವಭಾವವೆಂದರೇನು, ಸ್ವಭಾವದೋಷಗಳ ದುಷ್ಪರಿಣಾಮಗಳು ಯಾವವು, ಹಾಗೆಯೇ ನಿಜವಾದ ಅರ್ಥದಲ್ಲಿ ವ್ಯಕ್ತಿತ್ವ ವಿಕಾಸವಾಗುವುದರಲ್ಲಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಹೇಗೆ ಮಹತ್ವದ್ದಾಗಿದೆ ಎಂಬಿತ್ಯಾದಿ ಕೆಲವು ಅಂಶಗಳು ನೋಡಿದ್ದೆವು. ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯನ್ನು ಸರಿಯಾಗಿ ತಿಳಿದುಕೊಂಡು ಅದನ್ನು ನಡೆಸಲು ಪ್ರಾಥಮಿಕ ಹಂತದಲ್ಲಿ ನಮಗೆ ನಮ್ಮ ಸ್ವಭಾವದ ಚಿಂತನವಾಗುವುದು ಮಹತ್ವದ್ದಾಗಿರುತ್ತದೆ. ಆದುದರಿಂದಲೇ ಕಳೆದ ವಾರದಲ್ಲಿ ನಾವು ನಮ್ಮ ಸ್ವಭಾವದ ಚಿಂತನ ಮಾಡಿಕೊಂಡು ಬರಲು ನಿರ್ಧರಿಸಿದ್ದೆವು. ಅದರಲ್ಲಿ ನಮ್ಮಲ್ಲಿರುವ ದೋಷಗಳು, ಅಯೋಗ್ಯ ಅಭ್ಯಾಸಗಳು ಮತ್ತು ಅವುಗಳಿಂದಾಗುವ ತಪ್ಪುಗಳ ನಿರೀಕ್ಷಣೆಯನ್ನು ಮಾಡಲು ನಿರ್ದರಿಸಿದ್ದೆವು. ಉದಾ. ತೆಗೆದುಕೊಂಡ ವಸ್ತುಗಳನ್ನು ಜಾಗದಲ್ಲಿ ಇಡದಿರುವುದು, ಊಟ ಮಾಡುವಾಗ ಅನ್ನದ ಅವಹೇಳನೆ ಮಾಡುತ್ತೇವೆ, ನಮಗೆ ಬೇಕಾದ ರೀತಿಯಲ್ಲಿ ಯಾವುದಾದರೊಂದು ಪ್ರಸಂಗ ನಡೆಯದಿದ್ದರೆ, ಸಿಡಿಮಿಡಿಗೊಳ್ಳುತ್ತೇವೆ. ಹೀಗೆ ಹಲವಾರು ಪ್ರಸಂಗಗಳು ಗಮನಕ್ಕೆ ಬಂದಿರಬಹುದು, ಅವು ಕೌಟುಂಬಿಕ ಜೀವನದಲ್ಲಿ ಅಥವಾ ಇತರ ಸ್ಥಳಗಳಲ್ಲಿ ಒತ್ತಡದ ಪರಿಸ್ಥಿತಿಯನ್ನು ನಿರ್ಮಿಸಿರಬಹುದು.

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ

ಯಾವುದೇ ಸಾಧನಾಮಾರ್ಗದಿಂದ ಸಾಧನೆ ಮಾಡಿದರೂ ಸ್ವಭಾವದೋಷಗಳ (ಷಡ್ರಿಪುಗಳ) ನಿರ್ಮೂಲನೆಯಾದ ಹೊರತು ಸಾಧನೆಯಲ್ಲಿ ಪ್ರಗತಿಯಾಗುವುದಿಲ್ಲ. ಸಾಧನೆಯಲ್ಲಿ ಪ್ರಗತಿಯಾಗುವುದು ಎಂದರೆ ಏನು, ನಮ್ಮ ಮೋಕ್ಷದ ದಿಶೆಗೆ ಪ್ರಯಾಣಿಸುವುದು! ಪರಿಸ್ಥಿತಿ ಹೇಗೇ ಇದ್ದರೂ ಒಳಗಿನಿಂದ ಆನಂದವನ್ನು ಅನುಭವಿಸಲು ಸಾಧ್ಯವಾಗುವುದು! ಈಶ್ವರನ ಅಸ್ತಿತ್ವದ ಅರಿವಾಗುವುದು! ಈಶ್ವರ ದೋಷರಹಿತ ಮತ್ತು ಗುಣವಂತನಾಗಿದ್ದಾನೆ. ನಮಗೆ ಅವನೊಂದಿಗೆ ಏಕರೂಪವಾಗಬೇಕಿದ್ದರೆ, ದೋಷರಹಿತರಾಗಲು ಅಂದರೆ ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸುವುದು ಆವಶ್ಯಕವಾಗಿದೆ.

ಸ್ವಭಾವದೋಷಗಳಿಂದಾಗುವ ತಪ್ಪುಗಳಿಂದಾಗಿ ನಮ್ಮ ಸಾಧನೆ ಖರ್ಚಾಗುತ್ತದೆ. ಉದಾ: ನಾವು ಸಿಟ್ಟಿನ ಭರದಲ್ಲಿ ಅಪಶಬ್ದಗಳನ್ನು ಉಪಯೋಗಿಸಿದರೆ ನಮ್ಮ 30 ಮಾಲೆಗಳಷ್ಟು ಜಪವು ವ್ಯರ್ಥವಾಗುತ್ತದೆ. ಇತರರಿಗೆ ನೋವಾಗುವಂತೆ ಮಾತನಾಡಿದೆವು, ಇತರರಿಗೆ ನೋವುಂಟು ಮಾಡಿದರೂ ನಮ್ಮ ಸಾಧನೆ ಖರ್ಚಾಗುತ್ತದೆ. ಸ್ವಭಾವದೋಷಗಳಿಂದ ಕೇವಲ ಸಾಧನೆಯಲ್ಲಿ ಹಾನಿಯಾಗುತ್ತದೆ ಎಂದೇನಿಲ್ಲ, ವ್ಯಾವಹಾರಿಕ ಜೀವನದಲ್ಲಿಯೂ ಹಲವಾರು ಸಮಸ್ಯೆಗಳು ನಿರ್ಮಾಣವಾಗಿ ವ್ಯಕ್ತಿಯು ದುಃಖಿತನಾಗುತ್ತಾನೆ.

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಪರಿಣಾಮಕಾರಿಯಾಗಲು ಆವಶ್ಯಕ ಅಂಶಗಳು

ನಮ್ಮಲ್ಲಿರುವ ನ್ಯೂನತೆಗಳನ್ನು ಒಪ್ಪಿಕೊಳ್ಳುವುದು

ನಾನು ನಿಜವಾಗಿಯೂ ಹೇಗಿದ್ದೇನೆ ಎಂಬುದರ ಚಿಂತನ ಮಾಡುವುದು

ನಮ್ಮಲ್ಲಿನ ಕುಂದುಕೊರತೆಗಳನ್ನು ಒಪ್ಪಿಕೊಳ್ಳುವುದು :

ಪ್ರತಿಯೊಬ್ಬರಿಗೂ ಆನಂದಪ್ರಾಪ್ತಿಯ ಹಂಬಲವಿರುತ್ತದೆ. ಅದನ್ನು ಸಾಧಿಸಬೇಕಾದರೆ ಸ್ವಭಾವದೋಷಗಳ ನಿರ್ಮೂಲನೆ ಮಾಡುವುದು ಆವಶ್ಯಕವಾಗಿದೆ. ಆದರೆ ಈ ಪ್ರಕ್ರಿಯೆಯನ್ನು ನಡೆಸಬೇಕಾದರೆ ಮೊಟ್ಟಮೊದಲು ನಾವು ಏನು ಮಾಡಬೇಕಾಗಿದೆ? ನಮ್ಮಲ್ಲಿರುವ ಕುಂದುಕೊರತೆಗಳು, ದೋಷಗಳು ಇವನ್ನೆಲ್ಲ ಮನಃಪೂರ್ವಕವಾಗಿ ಒಪ್ಪಿಕೊಳ್ಳಬೇಕು.

ನಾನು ನಿಜವಾಗಿಯೂ ಹೇಗಿದ್ದೇನೆ ಎಂಬುವುದರ ಚಿಂತನೆ ಮಾಡುವುದು

ಸರ್ವೇಸಾಮಾನ್ಯ ವ್ಯಕ್ತಿಯ ಹಾಗೂ ಪ್ರಾಥಮಿಕ ಅವಸ್ಥೆಯಲ್ಲಿರುವ ಸಾಧಕನ ವೃತ್ತಿಯು ಬಹಿರ್ಮುಖವಾಗಿರುತ್ತದೆ. ಆದ್ದರಿಂದ ಪ್ರಾರಂಭದಲ್ಲಿ ಒಂದು ಮನುಷ್ಯನೆಂದು ನಾನು ನಿಖರವಾಗಿ ಹೇಗಿದ್ದೇನೆ ಎಂಬುದರ ಅರಿವು ಇರುವುದಿಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಬಗ್ಗೆ ಕೆಲವು ತಪ್ಪು ಕಲ್ಪನೆಗಳು ಇರುತ್ತವೆ. ಹೆಚ್ಚಿನ ಜನರಿಗೆ ತಮ್ಮ ವಿಚಾರಗಳು, ವರ್ತನೆ ಹಾಗೂ ಕೃತಿಗಳು ಯೋಗ್ಯವೇ ಎಂದೆನಿಸುವುದರಿಂದ ವ್ಯಕ್ತಿಯು ಈ ನಂಬಿಕೆಯ ಆಧಾರದ ಮೇಲೆ ತನ್ನದೇ ಆದ ಒಂದು ಹುಸಿ ಪ್ರತಿಮೆಯನ್ನು (pseudo image) ಅನ್ನು ನಿರ್ಮಿಸಿಕೊಳ್ಳುತ್ತಾನೆ. ಈ ಪ್ರತಿಮೆಯು ವಾಸ್ತವಕ್ಕಿಂತ ಬೇರೆಯೇ ಆಗಿರುತ್ತದೆ. ಉದಾ: ‘ನಾನು ಎಲ್ಲ ಕೃತಿಗಳನ್ನು ಸರಿಯಾಗಿ, ವ್ಯವಸ್ಥಿತವಾಗಿ ಮಾಡುತ್ತೇನೆ’, ‘ನಾನು ಇತರರಿಗೆ ಸಹಾಯ ಮಾಡುತ್ತೇನೆ’, ಅಥವಾ ‘ಇಂತಹ ಒಂದು ಕೆಲಸವು ನನ್ನಿಂದ ಸಾಧ್ಯವೇ ಇಲ್ಲ’. ಇಂತಹ ಕೆಲವು ಕಲ್ಪನೆಗಳು ವ್ಯಕ್ತಿಯ ಮನಸ್ಸಿನಲ್ಲಿ ಬೇರೂರಿರುತ್ತವೆ. ಈ ವಿಚಾರಗಳ ಆಧಾರದ ಮೇಲೆ ನಿರ್ಮಾಣವಾಗಿರುವ ಹುಸಿ ಪ್ರತಿಮೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ವ್ಯಕ್ತಿಯು ತಿಳಿದೋ-ತಿಳಿಯದೆಯೋ ಪ್ರಯತ್ನ ಮಾಡುತ್ತಿರುತ್ತಾನೆ. ಆದ್ದರಿಂದ ಬಹಳಷ್ಟು ಜನರ ವರ್ತನೆಯು ಬೇರೆ ಬೇರೆ ವ್ಯಕ್ತಿಗಳೊಂದಿಗೆ ಬೇರೆ ಬೇರೆಯಾಗಿರುತ್ತದೆ. ಅಂತರ್ಮುಖತೆಯ ಮೊದಲನೆಯ ಹಂತದಲ್ಲಿ ಭ್ರಮೆಯ ಪ್ರತಿಮೆಗೆ ಪೆಟ್ಟು ಕೊಟ್ಟು ‘ನಿಜವಾದ ನಾನು ಹೇಗಿದ್ದೇನೆ’ ಎಂಬುದನ್ನು ಗುರುತಿಸುವುದು ಹಾಗೂ ಅದಕ್ಕಾಗಿ ತನ್ನ ಮನಸ್ಸಿನ ಅಧ್ಯಯನ ಮಾಡುವುದು ಆವಶ್ಯವಾಗಿರುತ್ತದೆ. ನಮ್ಮ ಪರಿಚಯ ವಾಸ್ತವಕ್ಕೆ ಹತ್ತಿರವಾದಷ್ಟು ಅಂತರ್ಮುಖತೆಯ ಪ್ರಕ್ರಿಯೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ನಾನೆಲ್ಲಿ ತಪ್ಪಿದೆ, ನಾನು ಹೇಗೆ ವ್ಯವಹರಿಸಬೇಕು, ಎಂಬುದರ ಚಿಂತನ ಮಾಡುವುದು ಅಂದರೆ ಅಂತರ್ಮುಖತೆ ಮತ್ತು ಯಾವುದಾದರೊಂದು ಪ್ರಸಂಗದಲ್ಲಿ ಇತರರು ಹೇಗೆ ವರ್ತಿಸಬೇಕು ಎಂಬುದನ್ನು ನಿರ್ಧರಿಸುವುದು, ಇತರರಿಗೆ ದೋಷ ನೀಡುವುದು, ಯಾವುದಾದರೊಂದು ಪರಿಸ್ಥಿತಿಯನ್ನು ಸ್ವೀಕರಿಸದಿರುವುದು ಎಂದರೆ ಬಹಿರ್ಮುಖತೆ! ನಾವು ಬಹಿರ್ಮುಖತೆಯಿಂದ ಅಂತರ್ಮುಖತೆಯ ಕಡೆಗೆ ಪ್ರವಾಸ ಮಾಡಬೇಕಾಗಿದೆ.

ದೈನಂದಿನ ಒತ್ತಡ, ಸಂಘರ್ಷವನ್ನು ಆಧ್ಯಾತ್ಮಿಕ ಸ್ತರದಲ್ಲಿ ಜಯಿಸಲು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯು ಉಪಯುಕ್ತವಾಗಿದೆ

ಸಾಮಾನ್ಯವಾಗಿ ಹೇಗಿಸರುತ್ತದೆ? ‘ನಾನು ಮಾಡಿದ ಕೃತಿಯು ಉತ್ತಮವೇ ಆಗಿದೆ, ನಾನು ಹೇಳಿರುವುದೇ ಯೋಗ್ಯವಾಗಿದೆ, ನನ್ನನ್ನು ಯಾರೂ ಅರ್ಥ ಮಾಡಿಕೊಳ್ಳುವುದಿಲ್ಲ, ನನ್ನ ಬಗ್ಗೆ ಮಾತ್ರ ಹೀಗೆ ವರ್ತಿಸುತ್ತಾರೆ’ – ಸರ್ವೇಸಾಮಾನ್ಯ ವ್ಯಕ್ತಿಗಳಲ್ಲಿ ಇಂತಹ ವಿಚಾರಪ್ರಕ್ರಿಯೆ ಇರುತ್ತದೆ. ಯಾವುದಾದರೊಂದು ನಿರ್ಣಯ ತಪ್ಪಾದರೆ ‘ಇನ್ನೊಬ್ಬರು ಹೇಗೆ ತಪ್ಪು ಮಾಡಿದರು’, ಅಥವಾ ‘ಪರಿಸ್ಥಿತಿ ಹೀಗೆ-ಹೀಗೆ ಇದ್ದದ್ದರಿಂದ ಹೀಗಾಯಿತು’ ಎಂಬಂತೆ ವಿಚಾರಪ್ರಕ್ರಿಯೆಯು ನಡೆಯುತ್ತದೆ; ಆದರೆ ಯಾವುದಾದರೊಂದು ಪರಿಸ್ಥಿತಿಯಲ್ಲಿ ‘ನಾನು ಏನು ಮಾಡಬಹುದಾಗಿತ್ತು’, ಅಥವಾ ‘ನನ್ನಿಂದ ಏನು ತಪ್ಪಾಯಿತು’ ಎಂಬಂತಹ ವಿಚಾರಪ್ರಕ್ರಿಯೆಯು ಆಗುವುದಿಲ್ಲ. ಅಂತಹ ವಿಚಾರಪ್ರಕ್ರಿಯೆ ಅಥವಾ ಚಿಂತನೆಯಾಗುವುದು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವದ ಹಾಗೂ ಮೊದಲನೆಯ ಹಂತವಾಗಿದೆ. ಈ ರೀತಿ ವಿಚಾರಪ್ರಕ್ರಿಯೆ ಆದರೆ, ನಿಖರವಾಗಿ ಏನು ತಪ್ಪಾಗುತ್ತಿದೆ ಎಂಬುದರ ಬುಡಕ್ಕೆ ಹೋಗಿ ಅದಕ್ಕೆ ಪರಿಹಾರೋಪಾಯವನ್ನು ಕಂಡುಕೊಳ್ಳಬಹುದು. ಇಂದು ದೇಶವಿದೇಶಗಳ ಅನೇಕ ಜಿಜ್ಞಾಸುಗಳು ಈ ಸ್ವಭಾವದೋಷ ನಿರ್ಮೂಲನಾ ಪ್ರಕ್ರಿಯೆಯನ್ನು ಕಲಿತು, ಆನಂದಿ, ಉತ್ಸಾಹಿ ಮತ್ತು ಒತ್ತಡಮುಕ್ತ ಜೀವನವನ್ನು ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯು ನಮಗೆ ದೈನಂದಿನ ಒತ್ತಡಸಂಘರ್ಷಗಳನ್ನು ಆಧ್ಯಾತ್ಮಿಕ ಸ್ತರದಲ್ಲಿ ಹೇಗೆ ಜಯಿಸಬಹುದು ?, ಎಂದು ಕಲಿಸುತ್ತದೆ. ಈ ಪ್ರಕ್ರಿಯೆಯನ್ನು ನಾವಿಂದು ತಿಳಿದುಕೊಳ್ಳೋಣ.

ಮನಸ್ಸಿನ ಕಾರ್ಯ

ಒಳ್ಳೆಯ ಅಥವಾ ಕೆಟ್ಟ ಕೃತಿಯನ್ನು ಮಾಡುವ ಮೊದಲು ಅದರ ವಿಚಾರವು ನಮ್ಮ ಮನಸ್ಸಿಗೆ ಬರುತ್ತದೆ ಮತ್ತು ನಂತರ ಕೃತಿ ಆಗುತ್ತದೆ; ಅಂದರೆ ಕೃತಿಗಿಂತ ಮನಸ್ಸಿನ ವಿಚಾರವು ಹೆಚ್ಚು ಮಹತ್ವದ್ದಾಗಿರುತ್ತದೆ. ಸ್ವಭಾವವು ಮನಸ್ಸಿಗೆ ಸಂಬಂಧಪಟ್ಟಿರುತ್ತದೆ.

ಬಾಹ್ಯ ಮನಸ್ಸು ಮತ್ತು ಅಂತರ್ಮಮನಸ್ಸು ಇವು ಮನಸ್ಸಿನ ಎರಡು ಭಾಗಗಳಾಗಿವೆ. ಮನಸ್ಸಿನ ರಚನೆಯಲ್ಲಿ ಹಾಗೂ ಕಾರ್ಯದಲ್ಲಿ ಬಾಹ್ಯ ಮನಸ್ಸಿನ ಪಾಲು ಕೇವಲ ಶೇ. ೧೦ ರಷ್ಟು ಇರುತ್ತದೆ; ಅಂತರ್ಮನಸ್ಸಿನ ಪಾಲು ಶೇ. ೯೦ ರಷ್ಟು ಇರುತ್ತದೆ. ಬಾಹ್ಯ ಮನಸ್ಸು ಅಂದರೆ ಜಾಗೃತ ಮನಸ್ಸು. ದಿನನಿತ್ಯದ ವಿಚಾರಗಳು ಹಾಗೂ ಭಾವನೆಗಳು ಬಾಹ್ಯ ಮನಸ್ಸಿಗೆ ಸಂಬಂಧಪಟ್ಟಿರುತ್ತವೆ. ನಮ್ಮ ಅಂತರ್ಮನಸ್ಸಿನಲ್ಲಿ ಭಾವ-ಭಾವನೆಗಳು, ವಿಚಾರ-ವಿಕಾರಗಳು, ಅನುಭವಗಳು, ಆಸೆ-ಆಕಾಂಕ್ಷೆಗಳು ಶೇಖರಿಸಲ್ಪಡುತ್ತವೆ. ಸಂಕ್ಷಿಪ್ತವಾಗಿ ಅಂತರ್ಮನಸ್ಸಿನಲ್ಲಿ ಈ ಜನ್ಮದ ಹಾಗೂ ಹಿಂದಿನ ಜನ್ಮಗಳ ವಿವಿಧ ಸಂಸ್ಕಾರಗಳು ಸುಪ್ತಾವಸ್ಥೆಯಲ್ಲಿ ಇರುತ್ತವೆ.

ಸಂಸ್ಕಾರ ಎಂದರೇನು? ವ್ಯವಹಾರದಲ್ಲಿ ಸಂಸ್ಕಾರ ಎಂಬ ಪದವನ್ನು ಆಚಾರ-ವಿಚಾರ ಮತ್ತು ಕೃತಿ ಎಂದು ಅರ್ಥೈಸುತ್ತಾರೆ. ಆದರೆ ಆಧ್ಯಾತ್ಮಿಕ ದೃಷ್ಟಿಯಲ್ಲಿ ಸಂಸ್ಕಾರ ಅಂದರೆ ನಮ್ಮ ವೃತ್ತಿ ಹಾಗೂ ನಮ್ಮಿಂದ ಆಗುವ ಕೃತಿಗಳಿಂದ ಅಂತರ್ಮನಸ್ಸಿನಲ್ಲಿ ಉಂಟಾಗುವ ಗುರುತುಗಳು (ಇಂಪ್ರೆಷನ್). ಒಳ್ಳೆಯ ವಿಚಾರಗಳ ಸಂಸ್ಕಾರಗಳಾಗುವಂತೆಯೇ ಕೆಟ್ಟ ಸಂಗತಿಗಳ ಸಂಸ್ಕಾರಗಳೂ ಆಗುತ್ತವೆ. ಉದಾ: ದೇವರ ನಾಮಜಪವನ್ನು ಮಾಡುವ ಸಂಸ್ಕಾರವಾಗುವಂತೆಯೇ ಬಯ್ಯುವ ಸಂಸ್ಕಾರವೂ ಆಗುತ್ತದೆ. ಯಾವುದಾದರೊಂದು ವಿಚಾರ ಅಥವಾ ಕೃತಿಯು ಮತ್ತೆ ಮತ್ತೆ ಆಗುತ್ತಾ ಹೋದರೆ ಈ ಸಂಸ್ಕಾರವು ಹೆಚ್ಚು ಹೆಚ್ಚು ದೃಢವಾಗುತ್ತಾ ಹೋಗುತ್ತದೆ ಮತ್ತು ಚಿತ್ತದಲ್ಲಿ ಸ್ಥಿರಗೊಳ್ಳುತ್ತದೆ. ಈ ಜನ್ಮದ ಸಂಸ್ಕಾರಗಳಷ್ಟೇ ಅಲ್ಲ, ಹಿಂದಿನ ಜನ್ಮಗಳ ಸಂಸ್ಕಾರಗಳು ಕೂಡ ಮನಸ್ಸಿನ ಅತ್ಯಂತ ಆಳದಲ್ಲಿ ಬೇರೂರಿರುತ್ತವೆ. ಪ್ರತಿಯೊಂದು ಸಂಸ್ಕಾರವು ವ್ಯಕ್ತಿಯನ್ನು ಜನ್ಮ ಮೃತ್ಯುವಿನ ಬಂಧನದಲ್ಲಿ ಸಿಲುಕಿಸುತ್ತದೆ.

ಸಂಸ್ಕಾರ – ವೃತ್ತಿ – ವಿಚಾರ – ಕೃತಿ

ಮನಸ್ಸಿನ ಒಳ್ಳೆಯ-ಕೆಟ್ಟ ಸಂಸ್ಕಾರಗಳಿಗನುಸಾರ ನಮ್ಮ ವೃತ್ತಿಯು ರೂಪುಗೊಳ್ಳುತ್ತದೆ ಮತ್ತು ವೃತ್ತಿಯಿಂದ ವಿಚಾರ ನಿರ್ಮಾಣವಾಗುತ್ತದೆ. ವಿಚಾರಗಳಿಗನುಸಾರ ನಮ್ಮಿಂದ ಒಳ್ಳೆಯ ಅಥವಾ ಕೆಟ್ಟ ಕೃತಿಗಳು ನಡೆಯುತ್ತವೆ. ಯಾವುದಾದರೊಂದು ಪ್ರಸಂಗಕ್ಕನುಸಾರ ನಮ್ಮ ಅಂತರ್ಮನಸ್ಸಿನಲ್ಲಿರುವ ಇಷ್ಟಾನಿಷ್ಟಗಳು, ವಾಸನೆಗಳು, ನಮ್ಮ ವೈಶಿಷ್ಟ್ಯಗಳು, ಹೀಗೆ ಸುಪ್ತಾವಸ್ಥೆಯಲ್ಲಿರುವ ಸಂಸ್ಕಾರಗಳು ಜಾಗೃತಗೊಳ್ಳುತ್ತವೆ ಮತ್ತು ನಮ್ಮಿಂದ ಅದಕ್ಕನುಸಾರ ಕೃತಿಯಾಗುತ್ತದೆ.

ಉದಾ: ರಸ್ತೆಯಲ್ಲಿ ನೂರು ರೂಪಾಯಿನ ನೋಟು ಸಿಕ್ಕಿದರೆ ಏನು ಮಾಡುತ್ತಾರೆ? ಒಬ್ಬ ಅದನ್ನು ಎತ್ತಿಕೊಂಡು ತನ್ನ ಬಳಿಯೇ ಇಟ್ಟುಕೊಳ್ಳಬಹುದು, ಮತ್ತೊಬ್ಬ ಅಕ್ಕ ಪಕ್ಕದಲ್ಲಿರುವವರಿಗೆ ಈ ನೋಟ್ ಯಾರದ್ದು ಎಂದು ಕೇಳಬಹುದು. ಇಲ್ಲಿ ನಾವು ನೋಡುತ್ತಿರುವ ಘಟನೆಯು ಒಂದೇ ಆಗಿದ್ದರೂ ಭಿನ್ನ ಪ್ರಕೃತಿಗಳ ವ್ಯಕ್ತಿಗಳು ಮಾಡಿದ ಕೃತಿಯು ಬೇರೆಬೇರೆಯಾಗಿದೆ. ಆ ವ್ಯಕ್ತಿಯ ಅಂತರ್ಮನಸ್ಸಿನಲ್ಲಿರುವ ಸಂಸ್ಕಾರಗಳೇ ಇದಕ್ಕೆ ಕಾರಣ. ಲೋಭದ ಸಂಸ್ಕಾರ ಇರುವ ವ್ಯಕ್ತಿಯು ಆ ನೋಟನ್ನು ತನ್ನ ಬಳಿ ಇಟ್ಟುಕೊಂಡರೆ, ಪ್ರಾಮಾಣಿಕತೆಯ ಸಂಸ್ಕಾರ ಧೃಡವಾಗಿರುವ ವ್ಯಕ್ತಿಯು ಆ ನೋಟು ಯಾರದ್ದು ಎಂದು ಕೇಳುತ್ತಾನೆ.

ಮನುಷ್ಯನಿಂದ ನಡೆಯುವ ಪ್ರತಿಯೊಂದು ಕೃತಿಯ ಆತನ ಮನಸ್ಸಿನಿಂದಲೇ ನಡೆಯುತ್ತದೆ

ಶರೀರದಿಂದ ಆಗುವ ಪ್ರತಿಯೊಂದು ಕೃತಿಯೂ ಮನಸ್ಸಿನಿಂದಲೇ ಆಗುತ್ತದೆ. ಮನಸ್ಸು ಸ್ವಚ್ಛವಾಗಿದ್ದರೆ ಅಂದರೆ ಮನಸ್ಸಿನಲ್ಲಿ ಸ್ವಭಾವದೋಷಗಳು ಮತ್ತು ಅಹಂ ಇಲ್ಲದಿದ್ದರೆ ಶರೀರದಿಂದ ಯೋಗ್ಯ ಕೃತಿಯಾಗುತ್ತದೆ. ಅದೇ, ತುಂಬಾ ಸ್ವಭಾವದೋಷಗಳು ಮತ್ತು ಅಹಂ ಇದ್ದರೆ ಶರೀರದಿಂದ ಅಯೋಗ್ಯ ಕೃತಿಗಳಾಗುತ್ತದೆ. ಸ್ವಭಾವದೋಷಗಳ ಪರಿಣಾಮವು ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಕಾರ್ಯಾಲಯಕ್ಕೆ ಸಂಬಂಧಪಟ್ಟ, ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಕಂಡುಬರುತ್ತದೆ. ಆದ್ದರಿಂದಲೇ ಒಂದು ಆತ್ಮವಿಶ್ವಾಸದಿಂದ ತುಂಬಿರುವ, ಸಕಾರಾತ್ಮಕ, ಅಂತರ್ಮುಖ ಜೀವನವನ್ನು ನಡೆಸಬೇಕಿದ್ದರೆ ಅರಿವಿಟ್ಟುಕೊಂಡು ಪ್ರಯತ್ನ ಮಾಡುವುದು ಮಹತ್ವದ್ದಾಗಿದೆ.

ನಾವು ಕೂಡ ನಮ್ಮ ದೈನಂದಿನ ಜೀವನದಲ್ಲಿ ಒತ್ತಡದ ಪ್ರಸಂಗಗಳನ್ನು ಅನುಭವಿಸುತ್ತೇವೆ ಅಲ್ಲವೇ? ಭೂತಕಾಲದ ಕೆಲವು ಪ್ರಸಂಗಗಳ ಭಾರವು ನಮ್ಮ ಮನಸ್ಸಿನ ಮೇಲೆ ಇರುತ್ತದೆ, ಕೆಲವರಿಗೆ ಭಯವೆನಿಸುತ್ತದೆ, ಕೆಲವರಿಗೆ ಭವಿಷ್ಯದ ಚಿಂತೆ ಇರುತ್ತದೆ, ಕೆಲವು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಭಯವಿರುತ್ತದೆ. ಸ್ವಭಾವದೋಷಗಳು ಹೆಚ್ಚು ಇದ್ದರೆ ದಿನದ ಬಹಳಷ್ಟು ಸಮಯ ನಮ್ಮ ಮನಸ್ಸು ಅಸ್ವಸ್ಥ ಅಥವಾ ಒತ್ತಡಭರಿತವಾಗಿರುತ್ತದೆ. ಇದನ್ನು ಅನುಭವಿಸುತ್ತೇವೆ ಅಲ್ಲವೇ?

ಸ್ವಭಾವದೋಷ-ನಿರ್ಮೂಲನ ಪ್ರಕ್ರಿಯೆಯನ್ನು ಪ್ರಾರಂಭಿಸುವ ಮುನ್ನ ನಮ್ಮ ವರ್ತನೆಯ ಕುರಿತು ಚಿಂತನೆ ಮಾಡಬೇಕು. ಯಾವ ಸಂಗತಿಗಳಿಂದ ನಮಗೆ ಒತ್ತಡ ಉಂಟಾಗುತ್ತದೆ ಅಥವಾ ಯಾವ ಕೃತಿಗಳು ಅಥವಾ ಸ್ವಭಾವದೋಷಗಳು ನಮ್ಮ ಗಮನಕ್ಕೆ ಬರುತ್ತವೆ ಎಂಬುದರ ಅಭ್ಯಾಸ ಮಾಡಬೇಕು. ಪ್ರತಿದಿನವೂ ನಮ್ಮ ನಡೆ-ನುಡಿಯ ನಿರೀಕ್ಷಣೆ ಮಾಡಿ ನಮ್ಮಿಂದ ಎಲ್ಲಿ ತಪ್ಪುಗಳಾಗುತ್ತಿವೆ ಎಂಬುದರ ವಿಚಾರ (ಚಿಂತನೆ) ಮಾಡಬೇಕು. ಎಲ್ಲಕ್ಕಿಂತ ಮಹತ್ವದ್ದೇನೆಂದರೆ ಈ ವಿಷಯಗಳನ್ನು ಬರೆದಿಟ್ಟುಕೊಳ್ಳಬೇಕು.


ಇಂದು ದೇಶವಿದೇಶಗಳಲ್ಲಿನ ಹಲವಾರು ಜಿಜ್ಞಾಸುಗಳು ಈ ಸ್ವಭಾವದೋಷ-ನಿರ್ಮೂಲನಾ ಪ್ರಕ್ರಿಯೆಯನ್ನು ಕಲಿತುಕೊಂಡು ಆನಂದಿತರೂ, ಉತ್ಸಾಹಿಗಳೂ ಆಗಿ ಒತ್ತಡರಹಿತ ಜೀವನವನ್ನು ನಡೆಸುತ್ತಿದ್ದಾರೆ. ಈ ಪ್ರಕ್ರಿಯೆಯು ಆಧ್ಯಾತ್ಮಿಕ ಸ್ತರದಲ್ಲಿ ನಾವು ದೈನಂದಿನ ಒತ್ತಡಗಳ ಮೇಲೆ ಹೇಗೆ ಜಯಸಾಧಿಸಬಹುದು ಎಂಬುದನ್ನು ಕಲಿಸುತ್ತದೆ!

Leave a Comment