ಸತ್ಸಂಗ 11 : ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಪರಿಚಯ

ಹಿಂದಿನ ಸತ್ಸಂಗದಲ್ಲಿ ನಾವು ಭಾವವೆಂದರೇನು, ಭಾವ ಮತ್ತು ಭಾವನೆಗಳ ವ್ಯತ್ಯಾಸ, ಹಾಗೆಯೇ ಭಾವಜಾಗೃತಿಯ ಪ್ರಯತ್ನಗಳಲ್ಲಿ ಮಾನಸ ಪೂಜೆಯ ಮಹತ್ವ ಮತ್ತು ಅದನ್ನು ಹೇಗೆ ಮಾಡುವುದೆಂದು ತಿಳಿದುಕೊಂಡೆವು. ಭಾವವಿದ್ದಲ್ಲಿ ದೇವರು ಇರುತ್ತಾರೆ ಎಂದು ಹೇಳಿರುವುದರಿಂದ ನಾಮಜಪ, ಪ್ರಾರ್ಥನೆ, ಕೃತಜ್ಞತೆಯೊಂದಿಗೆ, ಮಾನಸ ಪೂಜೆ ಎಂಬ ಭಾವಜಾಗೃತಿಯ ಪ್ರಯತ್ನಗಳನ್ನು ಮಾಡಿ ಭಗವಂತನ ಅಖಂಡ ಅನುಸಂಧಾನದಲ್ಲಿರಲು ಹೇಗೆ ಸಾಧ್ಯವಾಗುತ್ತದೆ ಎಂದೂ ಕಲಿತೆವು. ಅಷ್ಟಾಂಗ ಸಾಧನೆಯ ಅಂಶಗಳನ್ನು ತಿಳಿದುಕೊಳ್ಳುವಾಗ ನಾವು ಸ್ವಭಾವದೋಷ ನಿರ್ಮೂಲನೆ ಮಾಡುವುದರ ಮಹತ್ವವನ್ನು ತಿಳಿದುಕೊಂಡಿದ್ದೆವು. ಇಂದು ನಾವು ವಿಸ್ತಾರವಾಗಿ ಈ ಪ್ರಕ್ರಿಯೆಯ ಮಹತ್ವವನ್ನು ತಿಳಿದುಕೊಳ್ಳೋಣ.

ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮಹತ್ವ

ಅ. ಆನಂದಮಯ ಜೀವನಕ್ಕಾಗಿ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ

ಧರ್ಮಶಾಸ್ತ್ರದಲ್ಲಿ  ಮಾನವನು ಷಡ್ರಿಪುಗಳ ತ್ಯಾಗ ಮಾಡಬೇಕು ಎಂದು ಹೇಳಲಾಗಿದೆ. ಷಡ್ರಿಪುಗಳು ಮನುಷ್ಯನನ್ನು ಸುಮ್ಮನೆ ಕುಳಿತುಕೊಳ್ಳಲು ಬಿಡುವುದಿಲ್ಲ ಎಂದು ಸಂತರೂ ಹೇಳಿದ್ದಾರೆ. ಈ ಷಡ್ರಿಪುಗಳೊಂದಿಗೆ ಇತರ ಅನೇಕ ದುರ್ಗುಣಗಳು, ಕೆಟ್ಟ ಚಟಗಳು ಮನುಷ್ಯನನ್ನು ಅಂಟಿಕೊಂಡಿರುತ್ತವೆ. ಇದರಿಂದ ವ್ಯಕ್ತಿಯ ಜೀವನ ಒತ್ತಡದಿಂದ ಕೂಡಿ ದುಃಖಭರಿತವಾಗಿರುತ್ತದೆ. ಆನಂದಮಯ ಜೀವನವನ್ನು ಜೀವಿಸುವುದಿದ್ದರೆ, ಈ ಷಡ್ರಿಪುಗಳನ್ನು ದೂರಗೊಳಿಸುವುದು ಅಥವಾ ನಮ್ಮ ಸ್ವಭಾವದಲ್ಲಿರುವ ದೋಷ, ಕೆಟ್ಟ ಚಟಗಳನ್ನು ದೂರಗೊಳಿಸುವುದು ಆವಶ್ಯಕವಾಗಿರುತ್ತದೆ. ನಮಗೆಲ್ಲರಿಗೂ ಕೂಡ ನಮ್ಮಲ್ಲಿ ದೋಷಗಳು ಇರಬಾರದು ಎಂದು ಅಂತರಂಗದಿಂದ ಅನಿಸುತ್ತದೆ. ಆದರೆ ದೋಷಗಳನ್ನು ಹೇಗೆ ದೂರಗೊಳಿಸುವುದು ಎನ್ನುವುದನ್ನು ಯಾರೂ ನಮಗೆ ಹೇಳಿಕೊಟ್ಟಿಲ್ಲ, ಇದನ್ನು ನಿರ್ದಿಷ್ಟವಾಗಿ ಹೇಗೆ ಸಾಧ್ಯಮಾಡುವುದು ಎನ್ನುವುದರ ಅದ್ವಿತೀಯ ಪ್ರಕ್ರಿಯೆಯನ್ನು ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಬಹಳ ಸರಳವಾದ ಭಾಷೆಯಲ್ಲಿ ತಿಳಿಸಿದ್ದಾರೆ. ಈ ಪ್ರಕ್ರಿಯೆನ್ನು ಆಚರಣೆಯಲ್ಲಿ ತಂದನಂತರ ಆನಂದದಲ್ಲಿ ವೃದ್ಧಿಯಾಗಿರುವ, ಒತ್ತಡ ದೂರವಾಗಿರುವ ಅನುಭೂತಿಯನ್ನು ಅನೇಕ ಜನರು ಪಡೆದಿದ್ದಾರೆ. ಇಂದಿಗೂ ಅನೇಕ ಜನರು ಪಡೆದುಕೊಳ್ಳುತ್ತಿದ್ದಾರೆ. ಹುಟ್ಟುಗುಣ ಸುಟ್ಟರೂ ಹೋಗದು ಎಂದು ಹೇಳುತ್ತಾರೆ, ಆದರೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಹೇಳಿಕೊಟ್ಟಿರುವ ಸ್ವಭಾವದೋಷಗಳನ್ನು ದೂರಗೊಳಿಸುವ ಪ್ರಕ್ರಿಯೆಯನ್ನು ಶ್ರದ್ಧೆಯಿಂದ ಮತ್ತು ಪ್ರಾಮಾಣಿಕವಾಗಿ ಆಚರಣೆಯಲ್ಲಿ ತಂದರೆ ವ್ಯಕ್ತಿಯ ಸ್ವಭಾವದಲ್ಲಿ ಆಮೂಲಾಗ್ರ ಬದಲಾವಣೆಯಾಗಲು ಸಾಧ್ಯವಿದೆ.

ಇಲ್ಲಿಂದ ಮುಂದಿನ ಕೆಲವು ಸತ್ಸಂಗಗಳಲ್ಲಿ ನಾವು ಇದೇ ಪ್ರಕ್ರಿಯೆಯನ್ನು ಸವಿಸ್ತಾರವಾಗಿ ಕಲಿಯಲಿದ್ದೇವೆ. ತಾವು ಈ ಪ್ರಕ್ರಿಯೆಯನ್ನು ಏಕಾಗ್ರತೆಯಿಂದ ತಿಳಿದುಕೊಂಡು ಆಚರಣೆಯಲ್ಲಿ ತರಬೇಕು ಎಂದು ವಿನಂತಿಸುತ್ತೇವೆ.

ಸ್ವಭಾವವೆಂದರೇನು?

ಪ್ರಾರಂಭದಲ್ಲಿ ನಾವು ಸ್ವಭಾವವೆಂದರೇನು ಎನ್ನುವುದನ್ನು ತಿಳಿದುಕೊಳ್ಳೋಣ. ಸಮಾಜದಲ್ಲಿ ಅನೇಕ ವ್ಯಕ್ತಿಗಳ ಸಂಪರ್ಕ ನಮಗಾಗುತ್ತದೆ; ಆದರೆ ಅವರೆಲ್ಲರ ಸ್ವಭಾವ ಒಂದೇ ರೀತಿಯಾಗಿರುತ್ತದೆಯೇ? ಇಲ್ಲವಲ್ಲ? ವ್ಯಕ್ತಿಗಳೆಷ್ಟೇ ಪ್ರಕೃತಿಗಳಿರುತ್ತವೆ. ಕೆಲವರು ಶಾಂತ ಸ್ವಭಾವದವರಾದರೆ, ಕೆಲವರು ಮುಂಗೋಪಿಗಳು, ಕೆಲವರು ಪ್ರೇಮಮಯ, ಕೆಲವರು ವಂಚಕರು, ಇನ್ನೂ ಕೆಲವು ಹೆದರಿಕೆಯ ಸ್ವಭಾವದವರಾಗಿರುತ್ತದೆ. ಪ್ರತಿಯೊಂದು ಕೃತಿಯಿಂದಲೂ ನಮ್ಮ ಅಂತರ್ಮನಸ್ಸಿನ ಒಂದೇ ರೀತಿಯ ಸಂಸ್ಕಾರಗಳು ಮೇಲಿಂದ ಮೇಲೆ ಪ್ರಕಟವಾಗುತ್ತಿರುತ್ತವೆಯೋ ಆಗ ಅದನ್ನು ಸ್ವಭಾವ ಎಂದು ಹೇಳುತ್ತಾರೆ. ಉದಾ. ಓರ್ವ ವ್ಯಕ್ತಿ ಇತರರನ್ನು ತಾವಾಗಿಯೇ ಮಾತನಾಡಿಸುತ್ತಿದ್ದರೆ, ಚೆನ್ನಾಗಿ ಸಂವಾದವನ್ನು ನಡೆಸುತ್ತಿದ್ದರೆ, ಅವನನ್ನು ವಾಚಾಲ ಎಂದು ನಾವು ಕರೆಯುತ್ತೇವೆ. ಒಬ್ಬನಿಗೆ ಸಣ್ಣ ಸಣ್ಣ ಕಾರಣಕ್ಕೂ ಕೋಪ ಬರುತ್ತಿದ್ದರೆ, ಆ ವ್ಯಕ್ತಿಯನ್ನು ಮುಂಗೋಪಿ ಎಂದು ಕರೆಯುತ್ತೇವೆ. ಸ್ವಲ್ಪದರಲ್ಲಿ ಹೇಳುವುದಾದರೆ ಸ್ವಭಾವವೆಂದರೆ ವ್ಯಕ್ತಿಯ ಪ್ರಕೃತಿ. ಕೆಲವು ವ್ಯಕ್ತಿಗಳ ಸಂದರ್ಭದಲ್ಲಿ ಒಂದೇ ರೀತಿಯ ವರ್ತನೆಯು ಮೇಲಿಂದ ಮೇಲೆ ಎಷ್ಟು ಆಗುತ್ತದೆಯೆಂದರೆ, ಆ ವ್ಯಕ್ತಿಯೆಂದರೆ ‘ಗುಣ’ ಅಥವಾ ‘ದೋಷ’ ಎಂಬ ಸಮೀಕರಣವೇ ಆಗುತ್ತದೆ. ವ್ಯಕ್ತಿಯ ಅಂತರ್ಮನಸ್ಸಿನ ಸಂಸ್ಕಾರಗಳಂತೆಯೇ ಆ ವ್ಯಕ್ತಿಯ ವೃತ್ತಿ ಅಂದರೆ ಸ್ವಭಾವವಿರುತ್ತದೆ. ಅವನ ಮನಸ್ಸಿನಲ್ಲಿ ಅದೇ ರೀತಿಯ ವಿಚಾರಗಳು ಬರುತ್ತವೆ ಮತ್ತು ವಿಚಾರಗಳನ್ನು ಅನುಸರಿಸಿ ಆ ವ್ಯಕ್ತಿಯಿಂದ ಒಳ್ಳೆಯ ಅಥವಾ ಕೆಟ್ಟ ಕೃತಿಗಳು ಘಟಿಸುತ್ತಿರುತ್ತವೆ. ವ್ಯಕ್ತಿಯ ನಡುವಳಿಕೆ ಮತ್ತು ಮಾತಿನಿಂದ ಅವನಲ್ಲಿರುವ ಸಂಸ್ಕಾರಗಳು ಏನೆಂದು ತಿಳಿಯುತ್ತವೆ.

ಆಧ್ಯಾತ್ಮಿಕ ಪರಿಭಾಷೆಯಲ್ಲಿ ಸ್ವಭಾವದೋಷವೆಂದರೆ ಷಡ್ರಿಪು

ಸಾಧಾರಣವಾಗಿ ಒಳ್ಳೆಯ ಸಂಸ್ಕಾರಗಳನ್ನು ಗುಣಗಳು ಮತ್ತು ಕೆಟ್ಟ ಚಟಗಳನ್ನು ಸ್ವಭಾವದೋಷ ಎಂದು ಹೇಳುತ್ತೇವೆ. ಸ್ವಭಾವದಿಂದ ಆ ವ್ಯಕ್ತಿಗೆ ಅಥವಾ ಇತರರಿಗೆ ಹಾನಿಯಾಗುತ್ತಿದ್ದರೆ, ಅದು ಆ ವ್ಯಕ್ತಿಯ ಸ್ವಭಾವದೋಷ ಎಂದು ಹೇಳಬಹುದು. ಆಧ್ಯಾತ್ಮಿಕ ಪರಿಭಾಷೆಯಲ್ಲಿ ಅದನ್ನು ‘ಷಡ್ರಿಪು’ (ಅರಿಷಡ್ವರ್ಗಗಳು) ಎಂದು ಹೇಳುತ್ತಾರೆ. ಪ್ರತಿಯೊಂದು ವ್ಯಕ್ತಿಯಲ್ಲಿ ಅವು ಹೆಚ್ಚು-ಕಡಿಮೆ ಪ್ರಮಾಣದಲ್ಲಿ ಕಾರ್ಯನಿರತವಾಗಿರುತ್ತದೆ.

ಷಡ್ರಿಪುಗಳ ಮೇಲೆ ನಿಯಂತ್ರಣ ಪಡೆಯಲು ಸಾಧನೆಯ ಆವಶ್ಯಕತೆ

ಮನುಷ್ಯನು ತನ್ನಲ್ಲಿರುವ ಷಡ್ರಿಪುಗಳನ್ನು ನಾಶಗೊಳಿಸಬೇಕು, ಎಂದು ನಾವು ಅನೇಕ ಬಾರಿ ಕೇಳಿರುತ್ತೇವೆ; ಆದರೆ ಈ ಷಡ್ರಿಪುಗಳೆಂದರೇನು ಎನ್ನುವುದನ್ನು ಮೊದಲಿಗೆ ತಿಳಿದುಕೊಳ್ಳೋಣ. ಷಡ್ ಎಂದರೆ ಆರು ಮತ್ತು ರಿಪು ಎಂದರೆ ಶತ್ರು ಅಥವಾ ವೈರಿ. ‘ಷಡ್ರಿಪು’ ಪದದ ಅರ್ಥ – ಆರು ಶತ್ರುಗಳು ಎಂದು. ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರ ಇವು ಮನುಷ್ಯನ ಆರು ಶತ್ರುಗಳಾಗಿವೆ.

ಮನುಷ್ಯನಲ್ಲಿ ಒಂದೇ ಶತ್ರು ಪ್ರಬಲವಾಗಿದ್ದರೂ, ಇನ್ನುಳಿದ ಐದು ರಿಪುಗಳು ಹೇಗೆ ಕಾರ್ಯನಿರತವಾಗುತ್ತವೆ ಎನ್ನುವುದರ ಒಂದು ಉದಾಹರಣೆಯನ್ನು ನೋಡೋಣ. ಓರ್ವ ಮಹಿಳೆಯಲ್ಲಿ ‘ಮೋಹ’ ಎಂಬ ರಿಪು ಪ್ರಬಲವಾಗಿತ್ತು. ಅದರಲ್ಲಿಯೂ ಅವಳಿಗೆ ಚಿನ್ನದ ಒಡವೆಗಳ ಮೋಹ ಸ್ವಲ್ಪ ಹೆಚ್ಚೇ ಇತ್ತು. ಅವಳ ಪಕ್ಕದ ಮನೆಯಲ್ಲಿ ವಾಸಿಸುವ ಮಹಿಳೆಯೊಬ್ಬಳು ಒಮ್ಮೆ ಬಂಗಾರದ ಸರವನ್ನು ಹಾಕಿದ್ದಳು. ಅದನ್ನು ನೋಡಿದ ಬಳಿಕ ‘ತನಗೂ ಅಂತಹದ್ದೇ ಸರ ಬೇಕು’, ಎನ್ನುವ ‘ಕಾಮ’ ಅಂದರೆ ತೀವ್ರ ಇಚ್ಛೆ ಅವಳಲ್ಲಿ ನಿರ್ಮಾಣವಾಯಿತು. ಅವಳು ತನ್ನ ಪತಿಗೆ ಹಾಗೆಯೇ ಹೇಳಿದಳು. ಅವರ ಆರ್ಥಿಕ ಪರಿಸ್ಥಿತಿ ಅಷ್ಟಕಷ್ಟೇ ಆಗಿರುವುದರಿಂದ ‘ಚಿನ್ನದ ಸರ ಖರೀದಿಸಲು ತನಗೆ ಸಾಧ್ಯವಾಗುವುದಿಲ್ಲ’ ಎಂದು ಅವಳ ಪತಿ ಅವಳಿಗೆ ಹೇಳಿದನು. ಅದಕ್ಕೆ ಅವಳಿಗೆ ‘ಕ್ರೋಧ’ ಬಂತು. ಅವಳು ಸಿಡಿಮಿಡಿ ಮಾಡತೊಡಗಿದಳು. ಇದರಿಂದ ಅವಳ ಪತಿಯು ಸಾಲ ತೆಗೆದು ಹೇಗೋ ಅದೇ ತೆರನಾದ ಚಿನ್ನದ ಸರವನ್ನು ಖರೀದಿಸಿದನು. ಸರ ಸಿಗುತ್ತಲೇ ಅವಳು ಅದನ್ನು ಹಾಕಿಕೊಂಡು ಎಲ್ಲರ ಎದುರಿಗೆ ಮೆರೆದಳು.  ಇದರಿಂದ ಅವಳಲ್ಲಿ ‘ಮದ’ ಉತ್ಪನ್ನವಾಯಿತು. ಕೆಲವು ದಿನಗಳ ಬಳಿಕ ಪಕ್ಕದ ಮನೆಯಲ್ಲಿ ವಾಸಿಸುವ ಇನ್ನೋರ್ವ ಮಹಿಳೆಯ ಕೈಯಲ್ಲಿ ಚಿನ್ನದ ಬಳೆಗಳನ್ನು ನೋಡಿದಾಗ ತನಗೂ ಅಂತಹದ್ದೇ ಬಳೆ ಬೇಕು ಎನ್ನುವ ಲೋಭ ಅವಳ ಮನಸ್ಸಿನಲ್ಲಿ ಉತ್ಪನ್ನವಾಯಿತು. ಚಿನ್ನದ ಸರವನ್ನು ಖರೀದಿಸಲು ಸಾಲ ತೆಗೆದಿದ್ದರಿಂದ ಈ ಸಲ ತಕ್ಷಣವೇ ಬಂಗಾರದ ಬಳೆಯನ್ನು ಖರೀದಿಸುವುದು ಅವಳ ಪತಿಗೆ ಸಾಧ್ಯವಿರಲಿಲ್ಲ. ಇದರಿಂದ ಅವಳಿಗೆ ಅವಳ ಪಕ್ಕದ ಮನೆಯಲ್ಲಿ ವಾಸಿಸುವ ಮಹಿಳೆಯ ವಿಷಯದಲ್ಲಿ ‘ಮತ್ಸರ’ ಎನಿಸತೊಡಗಿತು.

ಇದರಿಂದ ಏನು ಗಮನಕ್ಕೆ ಬರುತ್ತದೆ ಎಂದರೆ ಒಂದು ರಿಪು ಪ್ರಬಲವಾಗಿದ್ದರೆ ಸಾಕು ಇತರ 5 ರಿಪುಗಳೂ ಪರಿಸ್ಥಿತಿಗನುಸಾರ ಕಾರ್ಯನಿರತವಾಗುತ್ತವೆ. ಇದರಿಂದ ಒಂದೇ ಒಂದು ರಿಪುವನ್ನು ಕಾರ್ಯನಿರತವಾಗಲು ಬಿಡದೇ ಇರುವುದು ಮಹತ್ವದ್ದಾಗಿರುತ್ತದೆ. ನಾವು ಒಂದು ಉದಾಹರಣೆಯನ್ನು ನಾವು ನೋಡಿದೆವು. ನಮ್ಮ ದೈನಂದಿನ ಜೀವನದಲ್ಲಿ ಇಂತಹ ಅನೇಕ ಘಟನೆಗಳು ನಮ್ಮ ಸಂದರ್ಭದಲ್ಲಿಯೂ ಘಟಿಸುತ್ತಿರುತ್ತವೆ. ಎಲ್ಲ ಸಂತರೂ ಷಡ್ರಿಪುಗಳು ಮನುಷ್ಯನ ಶತ್ರುಗಳಾಗಿವೆಯೆಂದು ಹೇಳಿದ್ದಾರೆ. ಅವನ್ನು ಸಾಧನೆಯ ಬಲದಿಂದ ದೂರಗೊಳಿಸಲು ಸಾಧ್ಯವಾಗುತ್ತದೆ. ಆದ್ದರಿಂದಲೇ ನಾವು ಈ ಪ್ರಕ್ರಿಯೆಯನ್ನು ತಿಳಿದುಕೊಳ್ಳುತ್ತಿದ್ದೇವೆ.

ಸ್ವಭಾವದೋಷಗಳ ದುಷ್ಪರಿಣಾಮ

ಶಾರೀರಿಕ – ವಿವಿಧ ರೋಗಗಳು ಬರುವುದು

ಮಾನಸಿಕ – ನಿರಾಶೆ, ಕೀಳರಿಮೆ ಮೂಡುವುದು

ಆಧ್ಯಾತ್ಮಿಕ – ಸಾಧನೆ ಖರ್ಚಾಗುವುದು

ನಾವು ನಮ್ಮಲ್ಲಿರುವ ಸ್ವಭಾವದೋಷಗಳತ್ತ ಗಾಂಭೀರ್ಯದಿಂದ ನೋಡದೇ ಇರುವುದರಿಂದ ಅವುಗ ದುಷ್ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಸ್ವಭಾವದೋಷದಿಂದ ವ್ಯಕ್ತಿಯ ಜೀವನ ಒತ್ತಡದಿಂದ ಕೂಡಿರುತ್ತದೆ ಮತ್ತು ಅದರಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿಯೂ ದುಷ್ಪರಿಣಾಮ ಕಾಣಿಸಲು ಪ್ರಾರಂಭವಾಗುತ್ತವೆ.

ಶಾರೀರಿಕ ಸ್ತರದಲ್ಲಿ ಯಾವ ದುಷ್ಪರಿಣಾಮಗಳಾಗುತ್ತವೆ? ಉದಾ: ಓರ್ವ ವ್ಯಕ್ತಿಯ ಸ್ವಭಾವ ಹೆಚ್ಚು ಕಾಳಜಿ ಮಾಡುವಂತಹದಿದ್ದರೆ, ಶರೀರದಲ್ಲಿರುವ ಅವಯವಗಳ ಮೇಲೆಯೂ ಅದರ ದುಷ್ಪರಿಣಾಮವಾಗುತ್ತದೆ ಮತ್ತು ಇದರಿಂದ ಅವನಿಗೆ ಆಮ್ಲಪಿತ್ತ, ಅಲ್ಸರ್ (ಹೊಟ್ಟೆಯಲ್ಲಿ ಹುಣ್ಣು), ದಮ್ಮು, ಹೃದಯವಿಕಾರ, ಅಧಿಕ ರಕ್ತದೊತ್ತಡ ಮುಂತಾದ ರೋಗಗಳು ಉದ್ಭವಿಸುತ್ತವೆ.

ಮಾನಸಿಕ ಸ್ತರದ ಮೇಲೆ ಏನು ಪರಿಣಾಮವಾಗುತ್ತದೆ? ಸ್ವಭಾವದೋಷದಿಂದ ನಿರಾಶೆ, ಏಕಾಗ್ರತೆ ಮತ್ತು ಆತ್ಮವಿಶ್ವಾಸದ ಕೊರತೆ, ಮರೆಗುಳಿತನ, ಮನೋವ್ಯಾಧಿ (ಉದಾ – ಸ್ಕೀಝೋಫ್ರೇನಿಯಾ) ಗಳಂತಹ ವಿವಿಧ ಮಾನಸಿಕ ರೋಗಗಳು ಆಗುತ್ತವೆ. ಸ್ವಭಾವದೋಷಗಳು ಹೆಚ್ಚಿದ್ದಷ್ಟು ನಮ್ಮ ಮನಸ್ಸಿನ ಮೇಲೆ ಒತ್ತಡಗಳು ಬರುತ್ತವೆ. ಕ್ಷುಲ್ಲಕ ಘಟನೆಯಿಂದಲೂ ಇಂತಹ ವ್ಯಕ್ತಿಗಳಿಗೆ ದುಃಖವೆನಿಸುತ್ತದೆ. ಸ್ವಭಾವದೋಷಗಳೊಂದಿಗೆ ಹೋರಾಡಿ ಸ್ಥಿರವಾಗಿರಲು ಮನಸ್ಸಿನ ಶಕ್ತಿ ಅಥವಾ ಊರ್ಜೆ ದೊಡ್ಡ ಪ್ರಮಾಣದಲ್ಲಿ ಖರ್ಚಾಗುತ್ತದೆ. ಇದರಿಂದ ಆ ವ್ಯಕ್ತಿಗೆ ಬಹಳ ಬೇಗನೆ ಆಯಾಸವೆನಿಸುತ್ತದೆ ಮತ್ತು ನಿರುತ್ಸಾಹದ ಅರಿವಾಗುತ್ತದೆ. ಮಾನಸಿಕ ಒತ್ತಡದಿಂದ ಹೊರಗೆ ಬರಲು ಕೆಲವು ವ್ಯಕ್ತಿಗಳು ಸಿಗರೇಟ್, ಮದ್ಯಪಾನ ಮುಂತಾದ ವ್ಯಸನಗಳ ದಾಸರಾಗುತ್ತಾರೆ, ಆದರೆ ಹಾಗೆ ಮಾಡುವುದರಿಂದ ಮಾನಸಿಕ ಒತ್ತಡದ ನಿರ್ಮೂಲನೆಯಾಗುವುದಿಲ್ಲ. ಇದರಿಂದ ವ್ಯಾವಹಾರಿಕ ಜೀವನದಲ್ಲಿಯೂ ಸ್ವಭಾವದೋಷಗಳ ನಿರ್ಮೂಲನೆಯು ಕಾಲದ ಆವಶ್ಯಕತೆಯಾಗಿದೆ ಎಂದು ತಿಳಿಯುತ್ತದೆ.

ಸ್ವಭಾವದೋಷದಿಂದ ಆಧ್ಯಾತ್ಮಿಕ ಸ್ತರದರಲ್ಲಿಯೂ ಹಾನಿಯಾಗುತ್ತದೆ. ಯಾವುದೇ ಯೋಗಮಾರ್ಗದಿಂದ ಸಾಧನೆಯನ್ನು ಮಾಡಿದರೂ, ಎಲ್ಲಿಯವರೆಗೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆಯಾಗುವುದಿಲ್ಲವೋ, ಅಲ್ಲಿಯವರೆಗೂ ಸಾಧನೆಯಲ್ಲಿ ಪ್ರಗತಿ ಹೊಂದುವುದು ಅತ್ಯಂತ ಕಠಿಣವಾಗುತ್ತದೆ. ಉದಾ. ಧ್ಯಾನಯೋಗದಿಂದ ಸಾಧನೆ ಮಾಡುವವರು ಧ್ಯಾನ ಮಾಡಲು ಎಷ್ಟೇ ಪ್ರಯತ್ನಿಸಿದರೂ ಅವರಲ್ಲಿರುವ ದೋಷಗಳಿಂದ ಅವರ ಮನಸ್ಸಿನಲ್ಲಿ ಅಸಂಖ್ಯಾತ ವಿಚಾರಗಳು ಬರುತ್ತಿದ್ದರೆ, ಸರಿಯಾಗಿ ಧ್ಯಾನ ಮಾಡಲು ಸಾಧ್ಯವಾಗುವುದಿಲ್ಲ. ಸ್ವಭಾವದೋಷಗಳಿಂದಾಗುವ ತಪ್ಪು ಕೃತಿಗಳಿಂದಾಗಿ ಸಾಧನೆ ಖರ್ಚಾಗುತ್ತದೆ. ಇದರಿಂದ ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಉದಾ. ಒಮ್ಮೆ ಸುಳ್ಳು ಹೇಳಿದರೆ 30 ಮಾಲೆ ಜಪ ವ್ಯರ್ಥವಾಗುತ್ತದೆ! ಇದರಿಂದ ಸಾಧನೆಯನ್ನು ಮಾಡುವಾಗ ನಾಮಜಪವನ್ನು ಮಾಡುವುದು ಎಷ್ಟು ಮಹತ್ವದ್ದಾಗಿದೆಯೋ, ಸ್ವಭಾವದೋಷ ನಿರ್ಮೂಲನೆಗಾಗಿ ಪ್ರಯತ್ನಿಸುವುದೂ ಅಷ್ಟೇ ಮಹತ್ವದ್ದಾಗಿದೆ. ಪಾತ್ರೆಗೆ ತೂತಾಗಿದ್ದರೆ ಆ ಪಾತ್ರೆ ನೀರಿನಿಂದ ತುಂಬಕೊಳ್ಳಲು ಸಾಧ್ಯವಿದೆಯೇ? ರಂಧ್ರವನ್ನು ಮುಚ್ಚಿದ ಬಳಿಕವೇ ಪಾತ್ರೆಯಲ್ಲಿ ನೀರು ನಿಲ್ಲಲು ಸಾಧ್ಯವಿದೆ. ಅದೇ ರೀತಿ ವ್ಯಕ್ತಿಯಲ್ಲಿರುವ ಸ್ವಭಾವದೋಷಗಳೆಂಬ ತೂತುಗಳನ್ನು ಮುಚ್ಚಿದ ಬಳಿಕವೇ ವ್ಯಕ್ತಿ ಎಂಬ ಪಾತ್ರೆಯಲ್ಲಿ ಸಾಧನೆ ಎಂಬ ನೀರು ಸಂಗ್ರಹವಾಗುತ್ತದೆ.

ವ್ಯಕ್ತಿತ್ವದ ನಿಜವಾದ ವಿಕಾಸ ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ಮೂಲಕವೇ ಸಾಧ್ಯ

ಇಂದು ವ್ಯಕ್ತಿತ್ವ ಆದರ್ಶಮಯಗೊಳಿಸಲು ಅನೇಕ ಜನರು ವಿಶೇಷವಾಗಿ ಯುವಕರು ಬಹಳಷ್ಟು ಶುಲ್ಕವನ್ನು ಭರಿಸಿ ವ್ಯಕ್ತಿತ್ವ ವಿಕಸನ ವರ್ಗ ಅಥವಾ ಶಿಬಿರಗಳಿಗೆ ಹೋಗುತ್ತಿರುವುದು ಕಂಡು ಬರುತ್ತದೆ. ಅನೇಕ ದೊಡ್ಡ ಕಂಪನಿಗಳಲ್ಲಿಯೂ ಆತ್ಮವಿಶ್ವಾಸದಿಂದ ಮತ್ತು ಕುಶಲತೆಯಿಂದ ಕೆಲಸ ಮಾಡಲು ಸಾಧ್ಯವಾಗಬೇಕೆಂದು ಕರ್ಮಚಾರಿಗಳಲ್ಲಿರುವ ಕೊರತೆಗಳನ್ನು ದೂರ ಮಾಡಲು ವ್ಯಕ್ತಿತ್ವ ವಿಕಸನದ ಅಂದರೆ ಪರ್ಸನಾಲಿಟಿ ಡೆವಲೆಪಮೆಂಟ್ ವರ್ಗಗಳನ್ನು ನಡೆಸಲಾಗುತ್ತದೆ. ಸಾಫ್ಟ ಸ್ಕಿಲ್ಸ (Soft skills) ಎಂಬ ಅಡಿಯಲ್ಲಿ ಸಭ್ಯತೆಯ ಶಿಷ್ಟಾಚಾರವನ್ನು ಕಲಿಸಲಾಗುತ್ತದೆ; ಆದರೆ ಅಲ್ಲಿ ಮೂಲ ಸ್ವಭಾವದೋಷದ ಮೇಲೆ ಪ್ರಕ್ರಿಯೆಯನ್ನು ನಡೆಸಲಾಗದ ಕಾರಣ ಅದು ತಾತ್ಕಾಲಿಕ ಮತ್ತು ಮೇಲುಮೇಲಿನ ಸ್ತರದ ಕಲಿಕೆಯಾಗಿರುತ್ತದೆ. ನಮಗೆ  ಏನಾದರೂ ಗಾಯವಾದರೆ, ಅದನ್ನು ಬುಡದಿಂದ ಗುಣಪಡಿಸಲು ಮಲಾಮು ಹಚ್ಚಿ, ಬ್ಯಾಂಡೇಜ ಮಾಡುವುದರೊಂದಿಗೆ ಡಾಕ್ಟರರು ನಮಗೆ ಔಷಧಿಗಳನ್ನು ಕೂಡ ನೀಡುತ್ತಾರೆ. ಅದೇ ರೀತಿ ಬಾಹ್ಯ ಮನಸ್ಸಿಗೆ ನಾವು ಎಷ್ಟೇ ತಿಳಿಸಿ ಹೇಳಿದರೂ, ಅಂತರ್ಮನಸ್ಸಿನ ಅಯೋಗ್ಯ ಸಂಸ್ಕಾರವನ್ನು ದೂರ ಮಾಡಲು ಪ್ರಯತ್ನಿಸಿದ ಬಳಿಕವೇ ನಮ್ಮ ವ್ಯಕ್ತಿತ್ವ ಪೂರ್ಣವಾಗಿ ಬದಲಾಗುವುದು. ಇದರತ್ತ ಗಮನ ಹರಿಸಬೇಕು.

ದೈನಂದಿನ ಜೀವನವನ್ನು ಜೀವಿಸುವಾಗ ಅಥವಾ ಯಾವುದೇ ಕೆಲಸವನ್ನು ಮಾಡುವಾಗ ಭಾವ ಭಾವನೆಗಳ ಉತ್ತಮ ನಿಯೋಜನೆಯನ್ನು ಮಾಡಲು ಸಾಧ್ಯವಾಗುವುದು, ಹಾಗೆಯೇ ಪರಿಸ್ಥಿತಿಯನ್ನು ಚೆನ್ನಾಗಿ ನಿಭಾಯಿಸಲು ಸಾಧ್ಯವಾಗುವುದು ಮಹತ್ವದ್ದಾಗಿರುತ್ತದೆ. ಇದಕ್ಕಾಗಿ ನಮ್ರತೆ, ನಿರಪೇಕ್ಷತೆ, ವಿವೇಕ, ನಿಃಸ್ವಾರ್ಥತೆ, ಕಠಿಣ ಪ್ರಸಂಗವನ್ನು ಎದುರಿಸುವಾಗ ಸಕಾರಾತ್ಮಕವಾಗಿದ್ದು ಸ್ಥಿರ ಚಿತ್ತದಿಂದ ವಿವೇಕಬುದ್ಧಿಯಿಂದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದು ಇತ್ಯಾದಿ ವಿಷಯಗಳ ಆವಶ್ಯಕತೆಯಿರುತ್ತದೆ. ಅದನ್ನು ಸಹಜವಾಗಿ ನಿಭಾಯಿಸಲು ಸಮೂಲ ಮತ್ತು ಆಧ್ಯಾತ್ಮಿಕ ಸ್ತರದಲ್ಲಿಯೂ ಪ್ರಯತ್ನಿಸುವುದು ಮಹತ್ವದ್ದಾಗಿದೆ. ಸಾಧನೆಯಿಂದ ಬುದ್ಧಿ ಸಾತ್ವಿಕವಾಗುವುದರೊಂದಿಗೆ ಸ್ವಭಾವದೋಷಗಳ ಪ್ರಮಾಣವೂ ಕಡಿಮೆಯಾಗುತ್ತಾ ಹೋಗುತ್ತದೆ. ಆ ರೀತಿ ವ್ಯಕ್ತಿತ್ವದಲ್ಲಿ ತನ್ನಿಂತಾನೇ ಅಭಿವೃದ್ಧಿಯಾಗುತ್ತ ಹೋಗುತ್ತದೆ. ಆಡು ಭಾಷೆಯಲ್ಲಿ ಹೇಳುವುದಾದರೆ, ವ್ಯಕ್ತಿತ್ವ ವಿಕಸನ (personality development) ಎಂಬುವುದು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆಯ ‘ಬೈ ಪ್ರಾಡಕ್ಟ’  ಅಥವಾ ಲಭಿಸುವ ಉಪೋತ್ಪನ್ನವಾಗಿದೆ. ವ್ಯಕ್ತಿಯಲ್ಲಿರುವ ದೋಷಗಳನ್ನು ದೂರಗೊಳಿಸಿ ಅವನ ಚಿತ್ತದ ಮೇಲೆ ಗುಣಗಳ ಸಂಸ್ಕಾರವನ್ನು ನಿರ್ಮಾಣ ಮಾಡುವ ಪ್ರಕ್ರಿಯೆಯನ್ನು ಸ್ವಭಾವದೋಷ ನಿರ್ಮೂಲನ ಪ್ರಕ್ರಿಯೆ ಎಂದು ಹೇಳುತ್ತಾರೆ.

ಮುಂದಿನ ಸತ್ಸಂಗದಲ್ಲಿ ನಾವು ನಮ್ಮಲ್ಲಿರುವ ದುರ್ಗುಣಗಳು ಅಥವಾ ಸ್ವಭಾವದೋಷಗಳನ್ನು ಹೇಗೆ ದೂರಗೊಳಿಸುವುದು, ನಮ್ಮ ಮನಸ್ಸು ನಿರ್ದಿಷ್ಟವಾಗಿ ಹೇಗೆ ಕಾರ್ಯ ಮಾಡುತ್ತದೆ ಎನ್ನುವುದನ್ನು ತಿಳಿದುಕೊಳ್ಳುವವರಿದ್ದೇವೆ. ಅದಕ್ಕಿಂತ ಮೊದಲು ಈ ವಾರದಲ್ಲಿ ನಾವು ಪ್ರತಿದಿನ ಸ್ವಲ್ಪ ಸಮಯ ನಮ್ಮ ಸ್ವಭಾವದ ಬಗ್ಗೆ ಚಿಂತನೆ ಮಾಡೋಣ. ನಮ್ಮಲ್ಲಿ ಯಾವ ಕೊರತೆಯಿದೆ ಎನ್ನುವ ಅಭ್ಯಾಸವನ್ನು ಮಾಡೋಣ. ಹಾಗೆಯೇ ಗಮನಕ್ಕೆ ಬಂದಿರುವ ದೋಷ ಮತ್ತು ಅಯೋಗ್ಯ ಚಟಗಳನ್ನು (ಅಭ್ಯಾಸಗಳನ್ನು) ಬರೆದಿಟ್ಟುಕೊಳ್ಳೋಣ. ಈ ವಾರದಲ್ಲಿ ಇವುಗಳಲ್ಲಿ ಯಾವುದೇ ಗಮನಕ್ಕೆ ಬರಲಿಲ್ಲವೆಂದರೆ ಏನೂ ತೊಂದರೆಯಿಲ್ಲ. ಪ್ರಯತ್ನವನ್ನಂತೂ ಮಾಡೋಣ!

Leave a Comment