ಇಂದಿನ ಸತ್ಸಂಗದಲ್ಲಿ ನಾವು ಭಾವಜಾಗೃತಿಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ. ಸಾಧನೆಯಲ್ಲಿ ಭಾವಕ್ಕೆ ಅಸಾಧಾರಣ ಮಹತ್ವ ಇದೆ. ಭಾವವಿದ್ದಲ್ಲಿ ದೇವರು, ಅಂದರೆ ಎಲ್ಲಿ ಭಾವವಿರುತ್ತದೆ ಅಲ್ಲಿ ಭಗವಂತನ ಅಸ್ತಿತ್ವ ಇರುತ್ತದೆ, ಎಂದು ಹೇಳುತ್ತಾರೆ. ಭಾವ ಎಂದರೆ ಏನು, ಅದರ ಮಹತ್ವ ಏನು, ಮತ್ತು ಭಾವಜಾಗೃತಿಗಾಗಿ ಯಾವ ಪ್ರಯತ್ನಗಳನ್ನು ಮಾಡಬಹುದು ಎಂದು ನಾವೀಗ ತಿಳಿದುಕೊಳ್ಳೋಣ.
ಭಾವ ಎಂದರೆ ಏನು ?
ಭಾವ ಪದದ ಉತ್ಪತ್ತಿ ಮತ್ತು ಅರ್ಥ
ಭಾವ ಪದ ಭಾ ಮತ್ತು ವ ಈ ಎರಡು ಅಕ್ಷರಗಳಿಂದ ಕೂಡಿದೆ. ಇದರಲ್ಲಿ ಭಾ ಅಂದರೆ ತೇಜ ಮತ್ತು ವ ಅಂದರೆ ವೃದ್ಧಿ ಮಾಡುವ. ಯಾವುದರ ಜಾಗೃತಿಯಿಂದ ನಮ್ಮಲ್ಲಿ ತೇಜತತ್ವದ ವೃದ್ಧಿಯಾಗುತ್ತದೆಯೋ ಅದೇ ಭಾವ! ತೇಜತತ್ವ ಇದು ಈಶ್ವರನ ರೂಪಕ್ಕೆ ಸಂಬಂಧಪಟ್ಟದ್ದಾಗಿದೆ.
ಭಾವ ಎಂದರೆ ಸತತವಾಗಿ ಈಶ್ವರನ ರೂಪದ ಎಂದರೆ ಅಸ್ತಿತ್ವದ ಅರಿವು ಇರುವುದು. ಸಂತರಿಗೆ ಈಶ್ವರನ ಅಸ್ತಿತ್ವದ ಅರಿವು ಇರುವುದರಿಂದ ಅವರು ಸತತ ಭಾವಾವಸ್ಥೆಯಲ್ಲಿ ಇರುತ್ತಿದ್ದರು. ಭಾವದಿಂದ ಸ್ಥೂಲ ದೇಹದ, ಹಾಗೂ ಮನಸ್ಸಿನ ಶುದ್ದಿಯಾಗುತ್ತದೆ. ದೇಹದಲ್ಲಿರುವ ರಜ-ತಮದ ಪ್ರಮಾಣ ಕಡಿಮೆ ಆಗಿ ಸತ್ವ ಗುಣ ಹೆಚ್ಚುತ್ತದೆ. ಆಧ್ಯಾತ್ಮಿಕ ಉಪಾಯ ಮಾಡುವುದರಿಂದ ಎಷ್ಟು ಆಧ್ಯಾತ್ಮಿಕ ಲಾಭವಾಗುತ್ತದೆಯೋ, ಅಷ್ಟೇ ಲಾಭ ಭಾವಜಾಗೃತಿಯಿಂದ ಕೂಡ ಆಗುತ್ತದೆ. ಪ್ರಾಪ್ತ ಪರಿಸ್ಥಿತಿಯನ್ನು ಎದುರಿಸಲು ಭಾವದಿಂದ ಆಧ್ಯಾತ್ಮಿಕ ಶಕ್ತಿ ಸಿಗುತ್ತದೆ. ಭಾವದಿಂದ ಸಂಪೂರ್ಣ ಜಗತ್ತನ್ನು ನೋಡುವ ದೃಷ್ಟಿಯೇ ಪ್ರೀತಿಮಯ ಮತ್ತು ಸಕಾರಾತ್ಮಕವಾಗುತ್ತದೆ.
ಭಾವ ಕೇವಲ ಕಲ್ಪನೆ ಅಲ್ಲ, ಅದು ಶಕ್ತಿ
ಭಾವ ಇದು ಕೇವಲ ಕಲ್ಪನೆಯಲ್ಲ, ಅದರಲ್ಲಿ ಒಂದು ಈಶ್ವರಿಯ ಶಕ್ತಿ ಇದೆ, ಆದ್ದರಿಂದಲೇ ‘ಭಾವ ಇದ್ದಲ್ಲಿ ದೇವರು’ ಎಂದು ಹೇಳುತ್ತಾರೆ. ಭಾವವು ಚಿತ್ತದ ಒಂದು ಅವಸ್ಥೆ ಆಗಿದೆ. ತಾವು ಅನೇಕ ಪೌರಾಣಿಕ ಅಥವಾ ಸಂತರ ಕಥೆಗಳಲ್ಲಿ ಅವರ ಉತ್ಕಟ ಭಾವದ ಉದಾಹರಣೆಗಳನ್ನು ಕೇಳಿರಬಹುದು. ಸಂತ ನಾಮದೇವರು ಚಿಕ್ಕವರಿರುವಾಗ ಒಮ್ಮೆ ದೇವರಿಗೆ ನೈವೇದ್ಯ ಅರ್ಪಿಸುವುದಕ್ಕಾಗಿ ವಿಠ್ಠಲನ ದೇವಸ್ಥಾನಕ್ಕೆ ಹೋಗಿದ್ದರು. ದೇವರಿಗೆ ನೈವೇದ್ಯ ಅರ್ಪಿಸಿದರೆ ದೇವನು ಅದು ಪ್ರತ್ಯಕ್ಷ ತಿನ್ನಬೇಕು ಎಂದು ನಾಮದೇವರಿಗೆ ಅನಿಸಿತು. ದೇವರು ನೈವೇದ್ಯ ಸ್ವೀಕರಿಸುವ ತನಕ ಹಿಂದಿರುಗಿ ಹೋಗಬಾರದು ಎಂಬ ಭಾವದಿಂದ ಅವರು ಭಗವಂತನು ನೈವೇದ್ಯ ಗ್ರಹಸಲಿ ಎಂದು ದಾರಿ ಕಾಯುತ್ತಿದ್ದರು. ಆದರೆ ದೇವರು ಪ್ರಕಟವಾಗಲಿಲ್ಲ. ದೇವರು ನೈವೇದ್ಯ ಗ್ರಹಣ ಮಾಡದಿದ್ದರೆ ನಾನು ಪ್ರಾಣತ್ಯಾಗ ಮಾಡುವೆ ಎಂದು ನಾಮದೇವನು ದೇವರಿಗೆ ಹೇಳಿದನು. ಆದರೂ ಕೂಡ ದೇವರು ನೈವೇದ್ಯವನ್ನು ಸ್ವೀಕರಿಸಲಿಲ್ಲ. ಕೊನೆಗೆ ಸಂತ ನಾಮದೇವ ನಿಜವಾಗಿಯೂ ಪ್ರಾಣ ತ್ಯಜಿಸಲು ಸಿದ್ಧರಾದಾಗ ಮೂರ್ತಿಯಿಂದ ಪಾಂಡುರಂಗನು ಪ್ರಕಟನಾದನು. ನಾಮದೇವನ ಭಕ್ತಿಗಾಗಿ ದೇವರು ಬರಬೇಕಾಯಿತು ಮತ್ತು ನೈವೇದ್ಯ ಸ್ವೀಕರಿಸಬೇಕಾಯಿತು.
ದಾಸಶ್ರೇಷ್ಠ ಕನಕದಾಸರ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಶ್ರೀಕೃಷ್ಣನ ದರ್ಶನಕ್ಕೆ ಕಳಕಳಿಯಿಂದ ಪ್ರಾರ್ಥನೆ ಮಾಡಿದ ಕನಕದಾಸರಿಗೆ ದರ್ಶನ ನೀಡಲು ಶ್ರೀಕೃಷ್ಣನ ವಿಗ್ರಹ ದಿಕ್ಕನ್ನೇ ಬದಲಾಯಿಸಿದ್ದು, ಇಂದಿಗೂ ಕೃಷ್ಣನ ದರ್ಶನವನ್ನು ನಾವು ಕನಕನ ಕಿಂಡಿಯಿಂದ ಪಡೆಯುತ್ತೇವೆ. ಭಾವದ ಅನೇಕಾನೇಕ ಉದಾಹರಣೆಗಳು ಇವೆ. ಸಾಧನೆಯ ಮಾರ್ಗದಲ್ಲಿ ಭಾವಜಾಗೃತಿಯು ಮಹತ್ವದ ಹಂತವಾಗಿದೆ.
ಭಾವ ಮತ್ತು ಭಾವನೆ ಇದರಲ್ಲಿನ ವ್ಯತ್ಯಾಸ
ಮನಸ್ಸಿಗೆ ದುಃಖ ಆದಾಗ ಅಳುವುದು : ಭಾವನೆ
ದೇವರ ನೆನಪಿನಿಂದ ಅಳುವುದು : ಭಾವ
ಭಾವ ಮತ್ತು ಭಾವನೆ ಇವುಗಳಲ್ಲಿ ವ್ಯತ್ಯಾಸ ಇದೆ. ಸಾಧನೆಯಲ್ಲಿ ಭಾವನೆಗಿಂತಲೂ ಭಾವಕ್ಕೆ ಹೆಚ್ಚು ಮಹತ್ವ ನೀಡಲಾಗಿದೆ. ಕೆಲವು ಸಾರಿ ಭಾವ ಮತ್ತು ಭಾವನೆ ಇದರಲ್ಲಿ ಗೊಂದಲ ಆಗುತ್ತದೆ. ಭಾವ ಮತ್ತು ಭಾವನೆ ಇವೆರಡೂ ಬೇರೆ ಬೇರೆ ವಿಷಯಗಳಾಗಿವೆ. ಭಾವನೆ ಮತ್ತು ಭಾವ ಇವೆರಡರಲ್ಲಿಯೂ ಕಣ್ಣಿಂದ ನೀರು ಬರುವ ಒಂದು ಲಕ್ಷಣ ಕಾಣಿಸುತ್ತದೆ. ಕಣ್ಣಿಂದ ನೀರು ಬಂದರೆ ಅದು ಭಾವನೆಯೋ ಭಾವವೋ ಎಂದು ಹೇಗೆ ಗುರುತಿಸುವುದು? ಆ ಸಮಯದಲ್ಲಿ ಮನಸ್ಸಿನ ಸ್ಥಿತಿ ಹೇಗಿದೆ ಎಂಬುದನ್ನು ನೋಡಬೇಕು. ಮನಸ್ಸಿಗೆ ದುಃಖವಾಗಿ ಕಣ್ಣೀರು ಬರುತ್ತಿದೆ ಅಂದರೆ ಅದು ಭಾವನೆ ಆಯಿತು ಮತ್ತು ಗುರುಗಳ ಅಥವಾ ದೇವರ ನೆನಪಿನಿಂದ ಜೀವ ವ್ಯಾಕುಲವಾದರೆ ಮತ್ತು ಆದ್ದರಿಂದ ಕಣ್ಣೀರು ಬಂದರೆ ಅದು ಭಾವ!
ದೇವರ ಭಕ್ತನಾಗುವುದಕ್ಕಾಗಿ ಭಾವ ಮಹತ್ವದ್ದಾಗಿದೆ
ಭಾವವಿದ್ದಲ್ಲಿ ದೇವರು – ಈ ನಾಣ್ನುಡಿಯಂತೆ ಭಾವ ಇರುವವರಿಗೆ ಭಗವಂತನು ಸಹಾಯ ಮಾಡುತ್ತಾನೆ. ಭಗವಂತನು – ನ ಮೆ ಭಕ್ತಃ ಪ್ರಾಣಶ್ಯತಿ ಎಂದು ಹೇಳಿದ್ದಾನೆ. ಅದರ ಅರ್ಥ ನನ್ನ ಭಕ್ತರ ನಾಶ ಆಗುವುದಿಲ್ಲ. ಭಾವ ಇರುವವನೇ ಭಕ್ತನಾಗಬಲ್ಲನು. ನಮ್ಮಲ್ಲಿ ಪ್ರತಿಯೊಬ್ಬರಲ್ಲಿ ದೇವರ ಬಗ್ಗೆ ಅಲ್ಪಸ್ವಲ್ಪ ಪ್ರಮಾಣದಲ್ಲಿ ಭಾವ ಇರುತ್ತದೆ; ಆದ್ದರಿಂದಲೇ ನಾವು ಸತ್ಸಂಗಕ್ಕೆ ಬಂದಿದ್ದೇವೆ. ದೇವರ ಕುರಿತಾದ ಈ ಭಾವವನ್ನು ನಾವು ಹೆಚ್ಚಿಸಬೇಕಾಗಿದೆ. ಭಾವಜಾಗೃತಿಗಾಗಿ ಸಾತತ್ಯದಿಂದ ಪ್ರಯತ್ನ ಮಾಡಿದರೆ ಭಾವದಲ್ಲಿ ಹೆಚ್ಚಳವಾಗಬಲ್ಲದು. ಭಾವಜಾಗೃತಿಗಾಗಿ ಮಾಡಬಹುದಾದ ಅನೇಕ ಚಿಕ್ಕ ಪುಟ್ಟ ಪ್ರಯತ್ನಗಳು ಇವೆ. ಅದರಲ್ಲಿ ನಾವಿಂದು ಮಾನಸ ಪೂಜೆಯ ಬಗ್ಗೆ ತಿಳಿದುಕೊಳ್ಳೋಣ.
ಮಾನಸ ಪೂಜೆ ಎಂದರೆ ಏನು ?
ಮಾನಸ ಪೂಜೆ ಎಂದರೇನು? ಮನಸ್ಸಿನಲ್ಲಿ ದೇವರ ಅಥವಾ ಗುರುಗಳ ರೂಪದ ಕಲ್ಪನೆ ಮಾಡಿ ಎಲ್ಲ ಪೂಜೆ ಉಪಚಾರ ದೇವರಿಗೆ ಅರ್ಪಿಸಿ ಮಾಡುವ ಪೂಜೆಯೇ ಮಾನಸ ಪೂಜೆ. ನಮ್ಮ ಇಷ್ಟದಂತೆ ದೇವರಿಗೆ ಏನೇನು ಅರ್ಪಣೆ ಮಾಡಬೇಕೆಂದು ಅನಿಸುತ್ತದೆಯೋ ಅದರ ಕಲ್ಪನೆ ಮಾಡಿ ದೇವರಿಗೆ ಅರ್ಪಣೆ ಮಾಡಬಹುದು. ಎಷ್ಟು ಸಾರಿ ನಾವು ಮಾನಸ ಪೂಜೆ ಮಾಡುತ್ತೇವೆ, ಅಷ್ಟು ಬಾರಿ ನಮ್ಮ ಮನಸ್ಸಿನ ತ್ಯಾಗ ಆಗುತ್ತದೆ. ಮಾನಸ ಪೂಜೆಗೆ ಸ್ಥಳ, ಕಾಲದ ಬಂಧನವಿಲ್ಲ. ನಾವು ಪ್ರತಿದಿನ ದೇವರ ಪೂಜೆ ಮಾಡುತ್ತೇವೆ, ಅದು ಸ್ಥೂಲ ಪೂಜೆ. ಸ್ಥೂಲದಲ್ಲಿ ಪೂಜೆ ಮಾಡುತ್ತಿರುವಾಗ ಕೆಲವು ಸಲ ನಮ್ಮ ಮನಸ್ಸು ಇತರ ವಿಷಯದ ಕಡೆಗೆ ಹರಿದಾಡಬಹುದು. ಅದೇ ಮಾನಸ ಪೂಜೆಯು ಸೂಕ್ಷ್ಮ ಸ್ತರದ್ದಾಗಿರುತ್ತದೆ. ನಾವು ಈಗಾಗಲೇ ಸತ್ಸಂಗದಲ್ಲಿ ಸ್ಥೂಲಕ್ಕಿಂತ ಸೂಕ್ಷ್ಮ ಶ್ರೇಷ್ಠ ಎಂಬ ಸಿದ್ದಾಂತ ನೋಡಿದ್ದೇವೆ. ಕೆಲವು ಜನರಿಗೆ ನೌಕರಿ, ವ್ಯವಸಾಯ ಇತ್ಯಾದಿ ಕಾರಣಗಳಿಂದ ದೇವರ ಪೂಜೆ ಮಾಡುವ ಇಚ್ಛೆ ಇದ್ದರೂ ಕೂಡ ಅವರಿಗೆ ಮಾಡಲು ಸಾಧ್ಯವಾಗುವುದಿಲ್ಲ. ಇಂತಹವರು ಪ್ರವಾಸದಲ್ಲಿ ಹೋಗುವಾಗ ಬರುವಾಗ ಅಥವಾ ಇತರ ಸ್ಥಳಗಳಲ್ಲಿ ಮಾನಸ ಪೂಜೆ ಮಾಡುವ ಅವಕಾಶ ಇರುತ್ತದೆ. ಯಾರು ಪ್ರತಿದಿನ ದೇವರ ಮನೆಯಲ್ಲಿ ದೇವರ ಪೂಜೆ ಪ್ರತ್ಯಕ್ಷವಾಗಿ ಮಾಡುತ್ತಿದ್ದಾರೆಯೋ ಅವರು ಸಹ ಮಾನಸ ಪೂಜೆ ಮಾಡಬಹುದು. ಮಾನಸ ಪೂಜೆಯಿಂದ ಏಕಾಗ್ರತೆ ಬರುತ್ತದೆ.
ಶ್ರೀದುರ್ಗಾದೇವಿಯ ಮಾನಸ ಪೂಜೆ
ಇಂದಿನ ಸತ್ಸಂಗದಲ್ಲಿ ನಾವು ಮಾನಸ ಪೂಜೆ ಮಾಡಿ ದೇವರ ಅಸ್ತಿತ್ವ ಅನುಭವಿಸುವ ಪ್ರಯತ್ನ ಮಾಡೋಣ. ಇಂದು ಶ್ರೀ ದುರ್ಗಾದೇವಿಯ ಮಾನಸ ಪೂಜೆ ಮಾಡೋಣ. (ಮಾನಸ ಪೂಜೆಯನ್ನು ಓದಿ, ನಂತರ ಕಣ್ಣು ಮುಚ್ಚಿ ಓದಿದಂತೆ ಮಾನಸ ಪೂಜೆ ಮಾಡಬಹುದು)
ಎಲ್ಲರೂ ಕಣ್ಣುಗಳನ್ನು ಮುಚ್ಚೋಣ. ಯಾರಿಗೆ ತಮ್ಮ ಕುಲದೇವರು ಯಾರೆಂದು ತಿಳಿದಿದೆ, ಅವರು ಮಾನಸ ಪೂಜೆ ಮಾಡುವಾಗ ತಮ್ಮ ಕುಲದೇವರ ರೂಪ ತಮ್ಮ ಕಣ್ಣ ಮುಂದೆ ತಂದುಕೊಳ್ಳಬೇಕು. ಕುಲದೇವತೆ ತಿಳಿದಿರುವವರು ಅಷ್ಟಭುಜಾ ದುರ್ಗಾದೇವಿಯ ರೂಪವನ್ನು ಕಣ್ಮುಂದೆ ತರೋಣ. ಪೂಜೆಯನ್ನು ಆರಂಭಿಸುವ ಮೊದಲು ನಾವು ದೇವಿಗೆ ಸಂಪೂರ್ಣವಾಗಿ ಶರಣಾಗಿ ಪ್ರಾರ್ಥನೆ ಮಾಡೋಣ.
ಹೇ ಮಾತೆ, ಈ ಅಜ್ಞಾನಿ ಮಗುವಿಗೆ ನಿನ್ನ ಮಾನಸ ಪೂಜೆ ಮಾಡುವುದಿದೆ. ಹೇ ದೇವಿ, ನಿನ್ನ ಪೂಜೆ ಹೇಗೆ ಮಾಡಬೇಕು ಎಂದು ನನಗೆ ತಿಳಿದಿಲ್ಲ. ಆದರೆ ಹೇ ದೇವಿ, ನೀನೇ ಈ ಪಾಮರ ಜೀವದ ಮೇಲೆ ಕೃಪೆದೋರಿ ನಿನ್ನ ದರ್ಶನವನ್ನು ನೀಡು.
ನಾವು ಆರ್ತಭಾವದಿಂದ ಪ್ರಾರ್ಥನೆ ಮಾಡಿದ ನಂತರ ಶ್ರೀ ದುರ್ಗಾದೇವಿ ಪ್ರತ್ಯಕ್ಷ ನಮ್ಮ ಎದುರು ಅವತರಿಸಿದ್ದಾಳೆ. ಮಾತೆಯ ಮುಖ ಪ್ರಸನ್ನವಾಗಿದ್ದು ದೇವಿ ನಮಗೆ ಆಶೀರ್ವಾದ ನೀಡುತ್ತಿದ್ದಾಳೆ. ದೇವಿಯ ಪೂಜೆಗಾಗಿ ನಾವು ಎಲ್ಲ ಸಿದ್ಧತೆಗಳನ್ನು ಮಾಡಿದ್ದೇವೆ. ಸುವರ್ಣ ಸಿಂಹಾಸನ, ಬಂಗಾರದ ಹರಿವಾಣ, ಬಂಗಾರದ ಬುಟ್ಟಿಯಲ್ಲಿ ಹೂವುಗಳು, ರತ್ನ ಖಚಿತ ತಟ್ಟೆ ಮತ್ತು ಕಲಶ, ಬಂಗಾರದ 5 ನೀಲಾಂಜನಗಳು (ದೀಪ) ಮತ್ತು ದೊಡ್ಡ ಬಟ್ಟಲಗಳಲ್ಲಿ ಅರಿಶಿನ ಕುಂಕುಮ ತೆಗೆದುಕೊಂಡಿದ್ದೇವೆ. ದೇವಿಯ ಪೂಜೆ ಮಾಡಲು ಅವಕಾಶ ಸಿಕ್ಕಿರುವುದರಿಂದ ನಮಗೆ ಬಹಳ ಕೃತಜ್ಞತೆ ಅನಿಸುತ್ತಿದೆ. ನಾನು ದೇವಿಗೆ ಸುವರ್ಣ ಸಿಂಹಾಸನದಲ್ಲಿ ವಿರಾಜಮಾನವಾಗಲು ಪ್ರಾರ್ಥನೆ ಮಾಡುತ್ತಿದ್ದೇನೆ. ದೇವಿ ಸಿಂಹಾಸನದ ಮೇಲೆ ವಿರಾಜಮಾನಳಾಗುತ್ತಿದ್ದಾಳೆ. ದೇವಿಗೆ ಚರಣಗಳನ್ನು ಇಡಲು ನಾನು ರತ್ನಖಚಿತ ತಟ್ಟೆಯನ್ನು ಇಟ್ಟಿದ್ದೇನೆ. ನಾನು ದೇವಿಯ ಚರಣಗಳನ್ನು ಎರಡು ಕೈಗಳಿಂದ ಹಿಡಿದು ತಟ್ಟೆಯಲ್ಲಿ ಇರಿಸುತ್ತಿದ್ದೇನೆ. ದೇವಿಯ ಚರಣಗಳನ್ನು ಪ್ರತ್ಯಕ್ಷವಾಗಿ ಸ್ಪರ್ಶಿಸುವ ಭಾಗ್ಯ ನನಗೆ ದೊರೆತಿರುವುದರಿಂದ ಹೃದಯ ತುಂಬಿ ಬಂದಿದೆ. ದೇವಿಯ ಚರಣಗಳಿಂದ ನನಗೆ ಬಹಳಷ್ಟು ಚೈತನ್ಯ ದೊರೆತು ನನ್ನ ಸುತ್ತಲಿನ ಕಪ್ಪು ಆವರಣ ನಷ್ಟವಾಗುತ್ತಿದೆ. ನಾನು ಒಂದು ಬಂಗಾರದ ಕಲಶದಲ್ಲಿ ಉಗುರು ಬೆಚ್ಚಗಿನ ಸುಗಂಧಿತ ನೀರು ತೆಗೆದುಕೊಂಡಿದ್ದೇನೆ. ಈಗ ಈ ಉಗುರು ಬೆಚ್ಚನೆಯ ನೀರಿನಿಂದ ನಾನು ದೇವಿಯ ಚರಣಗಳನ್ನು ತೊಳೆಯುತ್ತಿದ್ದೇನೆ. ನಂತರ ಪಂಚಾಮೃತದ ಅಭಿಷೇಕ ಮಾಡುತ್ತಿದ್ದೇನೆ. ಅದರ ನಂತರ ಮತ್ತೆ ಬೆಚ್ಚಗಿನ ನೀರಿನಿಂದ ದೇವಿಯ ಚರಣಗಳನ್ನು ತೊಳೆಯುತ್ತಿದ್ದೇನೆ. ಈಗ ತಟ್ಟೆಯನ್ನು ಪಕ್ಕಕ್ಕೆ ಇಟ್ಟು ನಾನು ಮೃದುವಾದ ರೇಷ್ಮೆ ಬಟ್ಟೆಯಿಂದ ದೇವಿಯ ಚರಣಕಮಲಗಳನ್ನು ಮೃದುವಾಗಿ ಒರೆಸುತ್ತಿದ್ದೇನೆ. ಈಗ ದೇವಿಯ ಎರಡು ಚರಣಗಳ ಮೇಲೆ ನಾನು ಒದ್ದೆ ಮಾಡಿದ ಕೆಂಪು ಕುಂಕುಮದಿಂದ ಸ್ವಸ್ತಿಕ ತೆಗೆದಿದ್ದೇನೆ. ಅದರ ಮೇಲೆ ಅಕ್ಷತೆ ಅರ್ಪಿಸುತ್ತಿದ್ದೇನೆ. ಪಕ್ಕದಲ್ಲಿ ಬೆಳ್ಳಿಯ ಊದುಕಡ್ಡಿಯ ಸ್ಟಾಂಡಿನಲ್ಲಿ ಎರಡು ಸುಗಂಧಭರಿತ ಊದಕಡ್ಡಿಗಳನ್ನು ಹಚ್ಚಿದ್ದೇನೆ. ನೀಲಾಂಜನ ಬೆಳಗಿದ್ದೇನೆ.
ದುರ್ಗಾದೇವಿಯು ಕೆಂಪು ಬಣ್ಣದ ರೇಷ್ಮೆ ವಸ್ತ್ರ ಧರಿಸಿದ್ದಾಳೆ. ಅದರ ಅಂಚುಗಳು ಬಂಗಾರ ಬಣ್ಣದ್ದಾಗಿದೆ. ಮೈ ಮೇಲೆ ಹಳದಿ ವಸ್ತ್ರ ಹೊದ್ದುಕೊಂಡಿದ್ದಾಳೆ. ಅದರ ಮೇಲೆ ಸುಂದರ ಕಸೂತಿ ಇದೆ. ದೇವಿಯು ವಿವಿಧ ಆಭರಣಗಳನ್ನು ತೊಟ್ಟಿದ್ದಾಳೆ. ದೇವಿಯ ಈ ರೂಪ ನೋಡಿ ಮನಸ್ಸಿಗೆ ಆನಂದವಾಗುತ್ತಿದೆ. ಬಂಗಾರದ ತಟ್ಟೆಯಲ್ಲಿರುವ ಬಂಗಾರದ ಬಟ್ಟಲಿನಲ್ಲಿ ಅರಿಶಿಣ ಕುಂಕುಮ, ಕೇಸರಿ, ಅಷ್ಟಗಂಧ ಮತ್ತು ಕಸ್ತೂರಿ ಇದೆ. ಅದನ್ನು ನಾನು ದೇವಿಯ ಹಣೆಗೆ ಮೃದುವಾಗಿ ಹಚ್ಚುತ್ತಿದ್ದೇನೆ. ದೇವಿಗೆ ಕುಂಕುಮ ಹಚ್ಚಿದಾಗ ಬೆರಳಿನಿಂದ ಪ್ರಚಂಡ ಪ್ರಮಾಣದ ಶಕ್ತಿಯ ಹರಿವು ನನ್ನ ಶರೀರದಲ್ಲಿ ಹೋಗುತ್ತಿದೆ. ಈಗ ನಾನು ದೇವಿಗೆ ಇಷ್ಟವಾದ ಮಲ್ಲಿಗೆ, ಕಮಲ, ಸಂಪಿಗೆ, ಬಕುಳ ಮುಂತಾದ ಪರಿಮಳ ಇರುವ ಹೂವುಗಳನ್ನು ದೇವಿಯ ಚರಣಗಳಲ್ಲಿ ಅರ್ಪಿಸುತ್ತಿದ್ದೇನೆ. ದೇವಿಗೆ ಹೂವುಗಳನ್ನು ಅರ್ಪಿಸಿದ ನಂತರ ಅವುಗಳ ಪರಿಮಳವು ಎಲ್ಲೆಡೆ ಪಸರಿಸಿದೆ. ಪ್ರತ್ಯಕ್ಷ ದೇವಿಯ ಚರಣಗಳಲ್ಲಿ ಅರ್ಪಿಸಿರುವುದರಿಂದ ಹೂವುಗಳು ಕೂಡ ಕೃತಜ್ಞತೆ ವ್ಯಕ್ತಪಡಿಸುತ್ತಿವೆ. ಈಗ ನಾನು ಪಂಚಾರತಿಯಿಂದ ದೇವಿಗೆ ಆರತಿ ಮಾಡುತ್ತಿದ್ದೇನೆ. ಆರತಿಯ ಜ್ಯೋತಿಯ ಬೆಳಕಿನಲ್ಲಿ ದೇವಿಯ ರೂಪ ಅತ್ಯಂತ ತೇಜಸ್ವಿ ಕಾಣುತ್ತಿದೆ. ಈಗ ನಾನು ದೇವಿಗೆ ಹೋಳಿಗೆಯ ನೈವೇದ್ಯ ಅರ್ಪಿಸುತ್ತಿದ್ದೇನೆ ಮತ್ತು ದೇವಿಯು ಹೋಳಿಗೆಯ ನೈವೇದ್ಯ ಸ್ವೀಕರಿಸಬೇಕೆಂದು ಶರಣಾಗತ ಭಾವದಿಂದ ಪ್ರಾರ್ಥನೆ ಮಾಡುತ್ತಿದ್ದೇನೆ. ಈ ಅಜ್ಞಾನಿ ಮಗುವಿನ ಪ್ರಾರ್ಥನೆ ಕೇಳಿ ದೇವಿಯು ಸ್ವಲ್ಪ ಪ್ರಸಾದ ಗ್ರಹಿಸುತ್ತಿದ್ದಾಳೆ. ಈಗ ಅತ್ಯಂತ ಉತ್ಕಟ ಭಾವದಿಂದ ನಾನು ದೇವಿಯ ಆರತಿ ಮಾಡುತ್ತಿದ್ದೇನೆ. ಆರತಿ ಮಾಡಿದ ನಂತರ ಸಂಪೂರ್ಣ ಶರಣಾಗತ ಭಾವದಿಂದ ದೇವಿಯ ಚರಣಗಳಲ್ಲಿ ಮಸ್ತಕವನ್ನು ಇರಿಸಿದ್ದೇನೆ. ದೇವಿಯ ಬಳಿ, ಹೇ ದೇವಿ ನನ್ನನ್ನು ಉದ್ದರಿಸು, ಈ ಭವಸಾಗರದಿಂದ ನನ್ನನ್ನು ಪಾರು ಮಾಡು. ನನ್ನಲ್ಲಿ ನಿನ್ನ ಕುರಿತು ಭಕ್ತಿಭಾವ ಉತ್ಪನ್ನವಾಗುವ ಹಾಗೆ ಮಾಡು. ಹೇ ದೇವಿ, ಒಂದು ಕ್ಷಣ ಕೂಡ ನನಗೆ ನಿನ್ನ ಮರೆವು ಆಗದಿರಲಿ. ಸಾಧನೆಯ ಪ್ರಯತ್ನಗಳನ್ನು ಪ್ರಾಮಾಣಿಕವಾಗಿ ಮತ್ತು ಮನಸ್ಸಿನಿಂದ ಮಾಡುವುದಕ್ಕಾಗಿ ನೀನೇ ನನಗೆ ಶಕ್ತಿ, ಬುದ್ಧಿ ಮತ್ತು ಚೈತನ್ಯ ಪ್ರದಾನಿಸು ಎಂದು ವಿನಂತಿಸುತ್ತಿದ್ದೇನೆ. ಈ ಪ್ರಾರ್ಥನೆ ಕೇಳಿ ದೇವಿಯು ವಾತ್ಸಲ್ಯಮಯ ದೃಷ್ಟಿಯಿಂದ ನನ್ನನ್ನು ನೋಡುತ್ತಿದ್ದಾಳೆ. ದೇವಿಯ ಈ ಕೃಪಾಕಟಾಕ್ಷದಿಂದ ನನ್ನ ಎಲ್ಲ ದುಃಖಗಳು ನಾಶವಾಗಿವೆ. ಜಗನ್ಮಾತೆ ತನ್ನ ಪ್ರೀತಿಯ ವರದಹಸ್ತವನ್ನು ನನ್ನ ತಲೆಯ ಮೇಲೆ ಇಟ್ಟು ನನಗೆ ಆಶೀರ್ವಾದ ನೀಡುತ್ತಿದ್ದಾಳೆ. ದೇವಿ ನನಗೆ ಮಲ್ಲಿಗೆ ಹೂವಿನ ಮಾಲೆಯನ್ನು ಪ್ರಸಾದ ಎಂದು ನೀಡುತ್ತಿದ್ದಾಳೆ. ಇದಾದ ನಂತರ ದೇವಿ ಅಂತರ್ಧಾನವಾದಳು. ದೇವಿಯ ದರ್ಶನದಿಂದ ನನ್ನ ಮನಸ್ಸು ಕೃತಾರ್ಥಭಾವದಿಂದ ತುಂಬಿ ಬಂದಿದೆ. ನನಗೆ ಮಾನಸ ಪೂಜೆ ಮಾಡುವ ಅವಕಾಶ ನೀಡಿರುವುದಕ್ಕಾಗಿ ನಾನು ದೇವಿಯ ಚರಣಗಳಲ್ಲಿ ಅನನ್ಯ ಭಾವದಿಂದ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇನೆ.
ಈಗ ನಾವು ನಿಧಾನವಾಗಿ ಕಣ್ಣು ತೆರೆಯೋಣ. ದೇವಿಯ ಮಾನಸ ಪೂಜೆ ಮಾಡಿದ ನಂತರ ನಮಗೆ ಏನು ಅನುಭವಕ್ಕೆ ಬಂದಿತು? ಮಾನಸ ಪೂಜೆಯನ್ನು ಹೆಚ್ಚು ಏಕಾಗ್ರತೆಯಿಂದ ಮಾಡುತ್ತಿರುವುದರಿಂದ ದೇವಿಯ ಅಸ್ತಿತ್ವದ ಅನುಭೂತಿ ಬರಬಹುದು.
ಈ ರೀತಿ ಪ್ರತಿದಿನ ನಮ್ಮ ಗುರುಗಳ ಅಥವಾ ಇಷ್ಟ ದೇವತೆಯ ಮಾನಸ ಪೂಜೆಯನ್ನು ಮಾಡಲು ಪ್ರಯತ್ನಿಸೋಣ. ನೀವೆಲ್ಲರೂ ಹೀಗೆ ಪ್ರಯತ್ನ ಮಾಡುವಿರಲ್ಲ?
ಇಂದಿನ ಸತ್ಸಂಗದಲ್ಲಿ ನಾವು ಭಾವ ಎಂದರೆ ಏನು, ಭಾವ ಮತ್ತು ಭಾವನೆ ಇವುಗಳಲ್ಲಿರುವ ವ್ಯತ್ಯಾಸ, ಹಾಗೂ ಭಾವಜಾಗೃತಿಯ ಪ್ರಯತ್ನಗಳಲ್ಲಿ ಮಾನಸ ಪೂಜೆಯ ಮಹತ್ವ ಮತ್ತು ಅದನ್ನು ಮಾಡುವುದನ್ನು ತಿಳಿದುಕೊಂಡಿದ್ದೇವೆ. ಭಾವ ಇದ್ದಲ್ಲಿ ದೇವರು ಇರುವುದರಿಂದ ನಾವು ನಾಮಜಪ, ಪ್ರಾರ್ಥನೆ, ಕೃತಜ್ಞತೆ ಸಲ್ಲಿಸುವುದರ ಜೊತೆಗೆ ಮಾನಸ ಪೂಜೆ ಎಂಬ ಭಾವಜಾಗೃತಿಯ ಪ್ರಯತ್ನ ಮಾಡಿ ಸತತವಾಗಿ ಭಗವಂತನ ಅನುಸಂಧಾನದಲ್ಲಿರಲು ಪ್ರಯತ್ನಿಸೋಣ.
ಮುಂದಿನ ಸತ್ಸಂಗದಲ್ಲಿ ನಾವು ವ್ಯಕ್ತಿತ್ವ ವಿಕಾಸ ಮತ್ತು ಆನಂದ ಪ್ರಾಪ್ತಿಗಾಗಿ ಸ್ವಭಾವದೋಷ ನಿರ್ಮೂಲನೆಯ ಪ್ರಕ್ರಿಯೆಯ ಪರಿಚಯ ಮಾಡಿಕೊಳ್ಳೋಣ. ಹುಟ್ಟು ಗುಣ ಸುಟ್ಟರೂ ಹೋಗದಯ ಎಂದು ಹೇಳುತ್ತಾರೆ; ಆದರೆ ಅದು ನಿಜವೇ? ಸಾಧನೆಯಿಂದ ಸ್ವಭಾವದೋಷಗಳನ್ನು ದೂರಗೊಳಿಸಬಹುದು. ಆನಂದಪ್ರಾಪ್ತಿಯ ಮಾರ್ಗದಲ್ಲಿ ಅಡಚಣೆ ಆಗಿರುವ ಸ್ವಭಾವದೋಷಗಳನ್ನು ದೂರಗೊಳಿಸಿ ಆನಂದಿ ಜೀವನ ಹೇಗೆ ಜೀವಿಸುವುದು ಎಂದು ನಾವು ಮುಂಬರುವ ಸತ್ಸಂಗಗಳಲ್ಲಿ ಕಲಿಯೋಣ.