ಸತ್ಸಂಗ 9 : ಅಷ್ಟಾಂಗ ಸಾಧನೆ

ಅಷ್ಟಾಂಗ ಸಾಧನೆ

ಸಾಧನೆ ಮಾಡುವಾಗ ಗುರುಕೃಪೆಯು ಅತ್ಯಂತ ಮಹತ್ವದ್ದಾಗಿರುತ್ತದೆ. ಶಿಷ್ಯನ ನಿಜವಾದ ಪ್ರಗತಿಯು ಗುರುಕೃಪೆಯಿಂದಲೇ ಆಗುತ್ತದೆ; ಆದ್ದರಿಂದಲೇ ‘ಗುರುಕೃಪಾ ಹಿ ಕೇವಲಂ ಶಿಷ್ಯಪರಮಮಂಗಲಮ್’, ಅಂದರೆ ಶಿಷ್ಯನ ಪರಮಮಂಗಲವು ಗುರುಕೃಪೆಯಿಂದಲೇ ಸಾಧ್ಯವಿದೆ ಎಂದು ಹೇಳಲಾಗಿದೆ. ಗುರುಗಳು ವಿವಿಧ ಮಾಧ್ಯಮಗಳಿಂದ ಶಿಷ್ಯನಿಗೆ ಕಲಿಸುತ್ತಿರುತ್ತಾರೆ, ಆತನನ್ನು ರೂಪಿಸುತ್ತಿರುತ್ತಾರೆ. ಗುರುಕೃಪೆಯ ಮಾಧ್ಯಮದಿಂದ ವ್ಯಕ್ತಿಯು ಈಶ್ವರಪ್ರಾಪ್ತಿಯ ದಿಕ್ಕಿನಲ್ಲಿ ಮಾರ್ಗವನ್ನು ಕ್ರಮಿಸುವುದನ್ನೇ ಗುರುಕೃಪಾಯೋಗ ಎನ್ನುತ್ತಾರೆ.

ಸಾಧನೆಯ ವಿಧಗಳು

ಗುರುಕೃಪಾಯೋಗಾನುಸಾರ ಸಾಧನೆಯಲ್ಲಿ ಎರಡು ಅಂಗಗಳಿವೆ. ಒಂದು ವ್ಯಷ್ಟಿ ಸಾಧನೆ ಮತ್ತು ಎರಡನೆಯದು ಸಮಷ್ಟಿ ಸಾಧನೆ. ವ್ಯಷ್ಟಿ ಸಾಧನೆ ಅಂದರೆ ವೈಯಕ್ತಿಕ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾಗಿರುವ ಪ್ರಯತ್ನಗಳು ಮತ್ತು ಸಮಷ್ಟಿ ಸಾಧನೆ ಎಂದರೆ ಸಮಾಜದ ಆಧ್ಯಾತ್ಮಿಕ ಉನ್ನತಿಗಾಗಿ ಮಾಡಬೇಕಾಗಿರುವ ಪ್ರಯತ್ನಗಳು. ಕಾಲಮಹಿಮೆಗನುಸಾರ ಪ್ರಸ್ತುತ ವ್ಯಷ್ಟಿ ಸಾಧನೆಗೆ ಶೇ. 35 ರಷ್ಟು ಮಹತ್ವವಿದೆಯಾದರೆ ಸಮಷ್ಟಿ ಸಾಧನೆಗೆ ಶೇ. 65 ರಷ್ಟು ಮಹತ್ವವಿದೆ. ವ್ಯಷ್ಟಿ ಸಾಧನೆಯ ಅಡಿಪಾಯದ ಮೇಲೆಯೇ ಸಮಷ್ಟಿ ಸಾಧನಾರೂಪದ ಕಟ್ಟಡವು ನಿಲ್ಲುತ್ತದೆ ಆದ್ದರಿಂದ ವ್ಯಷ್ಟಿ ಸಾಧನೆಯೂ ಅತಿ ಮಹತ್ವದ್ದಾಗಿದೆ. ಇವೆರಡೂ ರೀತಿಯ ಸಾಧನೆಗಳು ಪರಸ್ಪರ ಪೂರಕವಾಗಿವೆ. ಸಮಷ್ಟಿ ಸಾಧನೆಯ ವಿಷಯವನ್ನು ನಾವು ಮುಂದಿನ ಸತ್ಸಂಗದಲ್ಲಿ ತಿಳಿದುಕೊಳ್ಳುವವರಿದ್ದೇವೆ. ಈಗ ವ್ಯಷ್ಟಿ ಸಾಧನೆಯ ವಿವಿಧ ಅಂಗಗಳ ಪರಿಚಯ ಮಾಡಿಕೊಳ್ಳೋಣ.

ವ್ಯಷ್ಟಿ ಸಾಧನೆ

ವ್ಯಷ್ಟಿ ಸಾಧನೆಯ ಅಂಗಗಳು ಯಾವುವು? ವ್ಯಷ್ಟಿ ಸಾಧನೆಯ ಅಂಗಗಳೆಂದರೆ ನಾಮಜಪ, ಸತ್ಸಂಗ, ಸತ್ಸೇವೆ, ಸತ್ ಗಾಗಿ ತ್ಯಾಗ, ಇತರರ ಬಗ್ಗೆ ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಕ್ತಿಭಾವವನ್ನು ಜಾಗೃತಗೊಳಿಸುವುದಕ್ಕಾಗಿ ಪ್ರಯತ್ನಗಳು. ಸಾಧನೆಯ ಈ  8 ಅಂಗಗಳಿಂದ ಸಾಧನೆ ಮಾಡಿದರೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿ ಆಗುತ್ತದೆ.  ನಾವು ಇದುವರೆಗೆ ನಾಮಜಪ ಮತ್ತು ಸತ್ಸಂಗದ ಬಗ್ಗೆ ತಿಳಿದುಕೊಂಡಿದ್ದೇವೆ.

ಸತ್ಸೇವೆ

ಸತ್ಸೇವೆ ಎಂಬುದು ಸಾಧನಾಮಾರ್ಗದ ಒಂದು ಮಹತ್ವದ ಘಟ್ಟವಾಗಿದೆ. ಸತ್ಸೇವೆ ಎಂದರೆ ನಿಖರವಾಗಿ ಏನು? ಸತ್ ಎಂದರೆ ಈಶ್ವರ ಅಥವಾ ಪರಬ್ರಹ್ಮ. ಸತ್ಸೇವೆ ಎಂದರೆ ಈಶ್ವರನ ಸೇವೆ! ಇಂದು ಪ್ರತ್ಯಕ್ಷ ಈಶ್ವರನ ಸೇವೆಯನ್ನು ಮಾಡಲು ಅಸಾಧ್ಯವಾಗಿರುವ ಕಾರಣ ಸಂತರ ಸೇವೆಯನ್ನು ಮಾಡಬೇಕು ಎಂದು ಹೇಳಲಾಗಿದೆ. ಸಂತರು ಈಶ್ವರನ ಸಗುಣ ರೂಪವಾಗಿದ್ದಾರೆ. ಈಶ್ವರನಿಗೆ ಅಥವಾ ಸಂತರಿಗೆ ಅಪೇಕ್ಷಿತವಿರುವಂತೆ ನಾವು ಏನು ಮಾಡುತ್ತೇವೋ ಅದೇ ಸತ್ಸೇವೆ. ಸಂತರಿಗೆ ಅಥವಾ ಈಶ್ವರನಿಗೆ ಏನು ಅಪೇಕ್ಷಿತವಾಗಿದೆ? ಧರ್ಮ ಪ್ರಸಾರ ಅಥವಾ ಅಧ್ಯಾತ್ಮಪ್ರಚಾರ! ಅಧ್ಯಾತ್ಮದ ಎಂದರೆ ಸಾಧನೆಯ ಪ್ರಚಾರವು ಸರ್ವೋತ್ತಮ ಸೇವೆಯಾಗಿದೆ. ಸತ್ಸೇವೆಯ ಮಾಧ್ಯಮದಿಂದ ಸಂತರ ಅಥವಾ ಗುರುಗಳ ಮನಸ್ಸನ್ನು ಒಲಿಸಿಕೊಳ್ಳಬಹುದು, ಮತ್ತು ಗುರುಕೃಪೆಯು ಇದರ ಮೂಲಕವೇ ಕಾರ್ಯರತವಾಗುತ್ತದೆ. ಆಧ್ಯಾತ್ಮಿಕ ಉನ್ನತಿಯ ದೃಷ್ಟಿಯಿಂದ ಸತ್ಸೇವೆಗೆ ಶೇ. 100 ರಷ್ಟು ಮಹತ್ವವಿದೆ. ಸತ್ಸೇವೆಯಿಂದ ಅಹಂಭಾವವು ಕಡಿಮೆಯಾಗಲೂ ಸಹಾಯವಾಗುತ್ತದೆ.

‘ಅನ್ನದಾನ, ಪ್ರಾಣದಾನ ಹಾಗೂ ವಿದ್ಯಾದಾನಗಳಿಗಿಂತ ಧರ್ಮದಾನವು ಶ್ರೇಷ್ಠ’ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದಾರೆ. ಆದ್ದರಿಂದ ನಾವು ಸಹ ಪ್ರತಿದಿನ ಸ್ವಲ್ಪ ಸಮಯವನ್ನಾದರೂ ಸತ್ಸೇವೆಗೆ ಕೊಡಬೇಕು. (ನಾವು ಮುಂದಿನ ಸತ್ಸಂಗದಲ್ಲಿ ಸತ್ಸೇವೆಯ ಕುರಿತು ಸವಿಸ್ತಾರವಾಗಿ ತಿಳಿದುಕೊಳ್ಳೋಣ)

ತ್ಯಾಗ

ವ್ಯಷ್ಟಿ ಸಾಧನೆಯ ಮುಂದಿನ ಅಂಗವೆಂದರೆ ಸತ್ ಗಾಗಿ ತ್ಯಾಗ ಮಾಡುವುದು. ಆಧ್ಯಾತ್ಮಿಕ ಉನ್ನತಿಯಾಗಲು ತನು-ಮನ-ಧನಗಳ ತ್ಯಾಗ ಮಾಡಬೇಕಾಗಿರುತ್ತದೆ. ತನುವಿನ ತ್ಯಾಗವೆಂದರೆ ಈಶ್ವರಪ್ರಾಪ್ತಿಗಾಗಿ ತನ್ನ ದೇಹವನ್ನು ಸವೆಸುವುದು. ನಾಮಜಪವನ್ನು ಮಾಡುವುದು ಹಾಗೂ ಸತತವಾಗಿ ಈಶ್ವರನ ಅನುಸಂಧಾನದಲ್ಲಿರಲು ಪ್ರಯತ್ನಿಸುವುದು ಒಂದು ವಿಧದಲ್ಲಿ ಮನಸ್ಸಿನ ತ್ಯಾಗವಾಗಿದೆ. ಇಷ್ಟವಾಗಿರುವ ಚಲನಚಿತ್ರವನ್ನು ನೋಡುವುದು ಅಥವಾ ಸತ್ಸಂಗವನ್ನು ನಡೆಸುವ ಸಿದ್ಧತೆಯಲ್ಲಿ ಸಹಾಯ ಮಾಡುವುದು ಹೀಗೆ ಎರಡು ಆಯ್ಕೆಗಳು ನಮ್ಮೆದುರಿರುವ ಸಂದರ್ಭದಲ್ಲಿ ನಾವು ಚಲನಚಿತ್ರವನ್ನು ನೋಡುವ ಬದಲಾಗಿ ಸತ್ಸಂಗಕ್ಕೆ ಪ್ರಾಧಾನ್ಯತೆಯನ್ನು ಕೊಟ್ಟರೆ ಅದು ನಮ್ಮ ಮನಸ್ಸಿನ ತ್ಯಾಗವಾಯಿತು; ಏಕೆಂದರೆ ಇಲ್ಲಿ ಮನಸ್ಸಿಗೆ ಸುಖವನ್ನು ನೀಡುವ ವಿಷಯವನ್ನು ನಾವು ಭಗವಂತನಿಗಾಗಿ ತ್ಯಜಿಸಿದ್ದೇವೆ. ಧನದ ತ್ಯಾಗವೆಂದರೆ ಸತ್ಕಾರ್ಯಕ್ಕಾಗಿ ಧನವನ್ನು ಅರ್ಪಿಸುವುದು. ನಮ್ಮ ಧನ-ಸಂಪತ್ತಿನ ಆರನೆಯ ಒಂದು ಭಾಗವನ್ನು ಧರ್ಮಕಾರ್ಯಕ್ಕಾಗಿ ಅರ್ಪಿಸಬೇಕು ಎಂದು ಶಾಸ್ತ್ರವು ಹೇಳುತ್ತದೆ, ಅರ್ಪಣೆ ನೀಡುವಾಗ ಅದು ‘ಸತ್ಪಾತ್ರೇ ದಾನಮ್’ ವಾಗಿದೆಯೋ ಇಲ್ಲವೋ ಎಂಬುದನ್ನು ಗಮನಿಸುವುದು ಮಹತ್ವದ್ದಾಗಿದೆ. ಅಂದರೆ ಅರ್ಪಣೆ ಮಾಡುವಾಗ ಯೋಗ್ಯತೆ ಇದ್ದವರಿಗೆ ದಾನವಾಗುತ್ತಿದೆಯಲ್ಲ, ಆ ದಾನ ಯೋಗ್ಯ ಜಾಗಕ್ಕೆ ನೀಡುತ್ತಿದ್ದೇವಲ್ಲ ಇದರ ಯೋಚನೆ ಮಾಡುವುದೂ ಕೂಡ ಮಹತ್ವದ್ದಾಗಿರುತ್ತದೆ.

ಈಶ್ವರಪ್ರಾಪ್ತಿಗಾಗಿ ಹಂತಹಂತವಾಗಿ ತನು-ಮನ-ಧನ ಇವುಗಳನ್ನು ತ್ಯಜಿಸಬೇಕು. ನಾವು ಸರ್ಕಸ್ ನಲ್ಲಿ ನೋಡಿರಬಹುದು, ಎತ್ತರದಲ್ಲಿರುವ ತೂಗುಯ್ಯಾಲೆಯ ಮೇಲೆ ತೂಗುತ್ತಿರುವ ಒಬ್ಬ ಹುಡುಗಿಯು ತಾನು ಹಿಡಿದಿರುವ ಉಯ್ಯಾಲೆಯ ಕೋಲನ್ನು ಬಿಟ್ಟಾಗಲೇ ಮತ್ತೊಂದು ತೂಗುಯ್ಯಾಲೆಯ ಮೇಲೆ ತೂಗುತ್ತಿರುವ ವ್ಯಕ್ತಿಯು ಅವಳನ್ನು ಸರಿಯಾಗಿಯೂ, ಸಹಜವಾಗಿಯೂ ಹಿಡಿದುಕೊಳ್ಳುತ್ತಾನೆ. ಮೊದಲನೆಯ ಹುಡುಗಿ ತಾನು ಹಿಡಿದಿರುವ ಕೋಲನ್ನು ಬಿಡದಿದ್ದರೆ ಮತ್ತೊಂದು ತೂಗುಯ್ಯಾಲೆಯೆ ಮೇಲೆ ತಲೆಕೆಳಗಾಗಿ ತೂಗುತ್ತಿರುವ ವ್ಯಕ್ತಿಯು ಅವಳನ್ನು ಹಿಡಿಯಲು ಸಾಧ್ಯವಾಗುವುದಿಲ್ಲ. ಅಂತೆಯೇ ಸಾಧಕನು ಸರ್ವಸ್ವವನ್ನೂ ತ್ಯಜಿಸಿದ ಹೊರತು ಈಶ್ವರನು ಅವನಿಗೆ ಆಧಾರ ಕೊಡುವುದಿಲ್ಲ. ತ್ಯಾಗ ಮಾಡುವುದೆಂದರೆ ವಸ್ತುಗಳನ್ನು ತ್ಯಜಿಸುವುದಲ್ಲ, ಆ ವಸ್ತುಗಳ ಬಗೆಗಿನ ಆಸಕ್ತಿ ಬಿಡುವುದು. ಪ್ರಾರಂಭದಲ್ಲಿ ಗುರುಗಳು ಶಿಷ್ಯನಿಗೆ ಅವನ ಬಳಿ ಇರುವ ವಸ್ತುಗಳನ್ನು ತ್ಯಜಿಸಲು ಕಲಿಸುತ್ತಾರೆ. ಕೊನೆಗೆ ಆತನ ಆಸಕ್ತಿ ಇಲ್ಲದಂತಾಯಿತೆಂದರೆ ಆತನಿಗೆ ವಿಪುಲವಾಗಿ ಕೊಡುತ್ತಾರೆ. ಅಂದರೆ ಗುರುಗಳು ಶಿಷ್ಯನು ಭೌತಿಕ ಸುಖದಲ್ಲಿ ಸಿಲುಕಿಕೊಳ್ಳದಂತೆ ನೋಡಿಕೊಳ್ಳುತ್ತಾರೆ.

ಭಾವಜಾಗೃತಿಗಾಗಿ ಪ್ರಯತ್ನ

ನಮ್ಮಲ್ಲಿ ಭಾವವಿದ್ದಲ್ಲಿ ದೇವ ಅಥವಾ ಭಾವಕ್ಕಾಗಿ ಹಂಬಲಿಸುವ ಭಗವಂತ ಎಂದು ಹೇಳುತ್ತಾರೆ. ನಮ್ಮ ಅಂತಃಕರಣದಲ್ಲಿ ಭಗವಂತನ ಬಗ್ಗೆ ಸೆಳೆತ ನಿರ್ಮಾಣವಾಗುವುದನ್ನೇ ಭಗವಂತನ ಬಗ್ಗೆ ಭಾವವಿರುವುದು ಎನ್ನುತ್ತಾರೆ. ನಮ್ಮಲ್ಲಿ ಎಷ್ಟು ಬೇಗ ಭಾವವು ನಿರ್ಮಾಣಾವಾಗುವುದೋ ಮತ್ತು ಅದು ಎಷ್ಟು ಹೆಚ್ಚು ಸಮಯ ಜಾಗೃತವಾಗಿರುವುದೋ ಅಷ್ಟು ಬೇಗ ನಾವು ಭಗವಂತನ ಸಮೀಪಕ್ಕೆ ಹೋಗುತ್ತೇವೆ. ರಾಮಕೃಷ್ಣ ಪರಮಹಂಸರಿಗೆ ಅವರ ಅತ್ಯುಚ್ಚ ಮಟ್ಟದ ಭಾವದಿಂದಾಗಿ ಕಾಳಿಮಾತೆಯ ದರ್ಶನವು ಸತತವಾಗಿ ಆಗುತ್ತಿತ್ತು. ಮೀರಾಬಾಯಿಗೆ ಶ್ರೀಕೃಷ್ಣನ ಬಗ್ಗೆಯಿದ್ದ ಭಾವದಿಂದಾಗಿ ಶ್ರೀಕೃಷ್ಣನು ಅವಳನ್ನು ಹೆಜ್ಜೆಹೆಜ್ಜೆಗೂ ರಕ್ಷಿಸಿದನು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭಗವಂತನ ಅಂಶವು ಇದ್ದೇ ಇರುತ್ತದೆ. ನಾವು ಕೂಡ ಪ್ರಯತ್ನಪಟ್ಟು ಭಗವಂತನ ಬಗ್ಗೆ ಭಾವವನ್ನು ಹೆಚ್ಚಿಸಿಕೊಂಡು ಸತತವಾಗಿ ಅವನ ಅನುಸಂಧಾನದಲ್ಲಿರಲು ಸಾಧ್ಯವಿದೆ. ಭಾವವನ್ನು ಹೆಚ್ಚಿಸಿಕೊಳ್ಳಲು ಮನಸ್ಸು ಮತ್ತು ಬುದ್ಧಿಯ ಸ್ತರದ ಕೃತಿಗಳನ್ನು ಮಾಡುತ್ತಾ ಹೋದರೆ ಖಂಡಿತವಾಗಿಯೂ ಭಾವವೃದ್ಧಿಯಾಗುತ್ತದೆ.

ಪ್ರೀತಿ (ನಿರಪೇಕ್ಷ ಪ್ರೇಮ)

ವ್ಯಷ್ಟಿ ಸಾಧನೆಯ ಮುಂದಿನ ಹಂತವೆಂದರೆ ಪ್ರೀತಿ, ಅಂದರೆ ನಿರಪೇಕ್ಷ ಪ್ರೇಮ! ವ್ಯವಹಾರಿಕ ಜೀವನದ ಪ್ರೇಮದಲ್ಲಿ ಅಪೇಕ್ಷೆಯಿರುತ್ತದೆ. ನಾವು ನಮ್ಮ ನೆಂಟರಲ್ಲಿ ಒಬ್ಬರಿಗೆ ತುಂಬಾ ಸಹಾಯ ಮಾಡಿದಾಗ ಅವರು ಅದರ ಅರಿವನ್ನು ಇಟ್ಟುಕೊಳ್ಳದಿದ್ದರೆ ನಮ್ಮ ಮನಸ್ಸಿನ ಸ್ಥಿತಿ ಹೇಗಾಗುತ್ತದೆ? ಮುಂದಿನ ಬಾರಿ ಅವರಿಗೆ ಸಹಾಯ ಮಾಡಬೇಕಾಗಿ ಬಂದರೆ ನಾವು ಹತ್ತು ಸಲ ವಿಚಾರ ಮಾಡುತ್ತೇವೆ ಅಲ್ಲವೇ? ಇದೇ ‘ಅಪೇಕ್ಷೆಗಳಿಂದ ಕೂಡಿದ ಪ್ರೇಮ’. ಅಧ್ಯಾತ್ಮದಲ್ಲಿ ನಿರಪೇಕ್ಷ ಪ್ರೇಮ ಅಥವಾ ಪ್ರೀತಿಯ ಹಂತವನ್ನು ತಲುಪುವುದು ಮಹತ್ವದ್ದಾಗಿದೆ. ಈಶ್ವರನು ಸೂರ್ಯನ ಬೆಳಕು, ಪ್ರಾಣವಾಯು, ಎಲ್ಲವನ್ನೂ ನಮಗೆ ಉಚಿತವಾಗಿ ಕೊಡುತ್ತಾನೆ; ಆದರೆ ನಾವು ಅದರ ಬಗ್ಗೆ ಎಷ್ಟು ಸಲ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇವೆ? ಹೆಚ್ಚಾಗಿ ನಮಗೆ ಈಶ್ವರನ ಈ ಕೃಪೆಯ ಅರಿವು ಕೂಡ ಇರುವುದಿಲ್ಲ. ಆದರೂ ಈಶ್ವರನು ಎಂದಾದರೂ ತಾನು ಕೊಡುವುದನ್ನು ಕಡಿಮೆ ಮಾಡಿದ್ದಾನೆಯೇ? ಮಾನವ ಕೃತಜ್ಞತೆಯನ್ನು ವ್ಯಕ್ತಪಡಿಸಲಿ ಅಥವಾ ಬಿಡಲಿ, ಅರಿವನ್ನು ಇಟ್ಟುಕೊಳ್ಳಲಿ ಅಥವಾ ಬಿಡಲಿ, ಈಶ್ವರನು ಯಾವುದನ್ನು ಕೊಡುವುದಿರುತ್ತದೆಯೋ ಅದನ್ನು ಕೊಟ್ಟೇ ಕೊಡುತ್ತಾನೆ. ಇದೇ ನಿರಪೇಕ್ಷ ಪ್ರೇಮ! ಸಾಧನೆ ಮಾಡುವುದರಿಂದ ಸಾತ್ತ್ವಿಕತೆಯು ಹೆಚ್ಚಾಗಿ ವ್ಯಾಪಕತೆ ಮತ್ತು ನಿರಪೇಕ್ಷ ಪ್ರೇಮವು ನಿರ್ಮಾಣವಾಗತೊಡಗುತ್ತದೆ. ಪ್ರತಿಯೊಂದು ವಸ್ತುವಿನಲ್ಲಿಯೂ ಪರಮೇಶ್ವರನ ರೂಪವು ಕಾಣತೊಡಗುತ್ತದೆ. ‘ವಸುಧೈವ ಕುಟುಂಬಕಮ್ |’ ಅಂದರೆ ಇಡೀ ವಿಶ್ವದ ಬಗ್ಗೆ ಕುಟುಂಬಭಾವನೆಯು ನಿರ್ಮಾಣವಾಗುತ್ತದೆ.

ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ

ವ್ಯಷ್ಟಿ ಸಾಧನೆಯ ಮಹತ್ವದ ಮುಂದಿನ ಎರಡು ಹಂತಗಳೆಂದರೆ ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ. ಪ್ರತಿಯೊಬ್ಬನಲ್ಲಿಯೂ ಸ್ವಭಾವದೋಷಗಳು ಮತ್ತು ಅಹಂಕಾರವು ಇದ್ದೇ ಇರುತ್ತದೆ. ಒಬ್ಬನಿಗೆ ಬೇಗನೇ ಸಿಟ್ಟು ಬರುತ್ತದೆ, ಇನ್ನೊಬ್ಬನಿಗೆ ಚಿಕ್ಕ ಚಿಕ್ಕ ವಿಷಯಳಿಗೆ ಕಿರಿಕಿರಿಯಾಗುತ್ತದೆ, ಮತ್ತೊಬ್ಬನಿಗೆ ತನ್ನ ಮನಸ್ಸಿನ ವಿರುದ್ಧ ಏನಾದರೂ ನಡೆದರೆ ಅದನ್ನು ಸ್ವೀಕರಿಸಲು ಆಗುವುದಿಲ್ಲ. ಯಾರಿಗಾದರೂ ಸುಳ್ಳು ಹೇಳುವ ಅಭ್ಯಾಸವಿರುತ್ತದೆ, ಹಾಗೆಯೇ ನನಗೆ ಯಾವಾಗಲೂ ಗೌರವ ಸಿಗಬೇಕು ಅಥವಾ ಬೇರೆಯವರು ಯಾವಾಗಲೂ ನನ್ನನ್ನು ಹೊಗಳಬೇಕು ಅಥವಾ ಕೊಂಡಾಡಬೇಕು ಎಂದೆನಿಸುತ್ತದೆ. ನಮ್ಮೆಲ್ಲರಲ್ಲಿಯೂ ದೋಷಗಳು ಮತ್ತು ಅಹಂಕಾರ ಅಲ್ಪ ಅಥವಾ ಹೆಚ್ಚು ಪ್ರಮಾಣದಲ್ಲಿ ಇದ್ದೇ ಇರುತ್ತವೆ. ಸಾಧನಾಮಾರ್ಗದಲ್ಲಿ ಮುಂದುವರೆಯುವಾಗ ಈ ದೋಷಗಳನ್ನೂ, ಅಹಂ ಅನ್ನೂ ಕಡಿಮೆ ಮಾಡಿಕೊಳ್ಳುವುದು, ಅವುಗಳ ನಿರ್ಮೂಲನೆ ಮಾಡಿಕೊಳ್ಳುವುದು ಮಹತ್ವದ್ದಾಗಿರುತ್ತದೆ. ಇದನ್ನು ಮಾಡದಿದ್ದರೆ ದೋಷಗಳಿಂದಾಗುವ ತಪ್ಪುಗಳ ಪರಿಮಾರ್ಜನೆ ಮಾಡುವಲ್ಲಿ ಸಾಧನೆಯು ಖಾರ್ಚಾಗುತ್ತ ಹೋಗುತ್ತದೆ. ಸ್ವಭಾವದೋಷ ನಿರ್ಮೂಲನೆ ಮತ್ತು ಅಹಂ ನಿರ್ಮೂಲನೆ ಬಗ್ಗೆ ಮುಂದಿನ ಸತ್ಸಂಗಗಳಲ್ಲಿ ತಿಳಿದುಕೊಳ್ಳೋಣ.

ಇಂದಿನ ಸತ್ಸಂಗದಲ್ಲಿ ನಾವು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಎರಡು ವಿಧಗಳು, ನಾಮಜಪ, ಸತ್ಸಂಗ, ಸೇವೆ, ತ್ಯಾಗ, ಪ್ರೀತಿ, ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ ಮತ್ತು ಭಾವಜಾಗೃತಿ ಹೀಗೆ ವ್ಯಷ್ಟಿ ಸಾಧನೆಯ ಅಂತರ್ಗತ ಸಾಧನೆಯ 8 ಅಂಗಗಳನ್ನು ತಿಳಿದುಕೊಂಡಿದ್ದೇವೆ. ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಈ 8 ಅಂಗಗಳಿಂದ ಸಾಧನೆ ಮಾಡುವುದು ಮಹತ್ವದ್ದಾಗಿದೆ. ಇದಕ್ಕಾಗಿ ನಾವು ಪ್ರಯತ್ನ ಮಾಡೋಣ. ಮುಂದಿನ ಸತ್ಸಂಗದಲ್ಲಿ ನಾವು ಭಾವಜಾಗೃತಿಯ ಪ್ರಯತ್ನಗಳಲ್ಲಿ ಮಾನಸ ಪೂಜೆಯ ಮಹತ್ವ ಏನು ಎಂದು ತಿಳಿದುಕೊಳ್ಳೋಣ.

Leave a Comment