ಸಾಧನೆಯನ್ನು ಮಾಡುತ್ತಿರುವಾಗ ನಾಮಜಪವು ಸಾಧನೆಯ ಅಡಿಪಾಯವಾಗಿರುತ್ತದೆ. ಸತ್ಸಂಗದಿಂದ ಅಡಿಪಾಯ ಗಟ್ಟಿಯಾಗಲು ಸಹಾಯವಾಗುತ್ತದೆ. ಸತ್ಸಂಗದಿಂದ ನಮ್ಮ ಸಾಧನೆಯು ಸ್ಥಿರವಾಗುತ್ತದೆ. ಹಾಗಾಗಿ ಇಂದು ನಾವು ಸತ್ಸಂಗದ ಮಹತ್ವವೇನು ಎಂದು ತಿಳಿದುಕೊಳೋಣ.
ಸತ್ಸಂಗ ಎಂದರೆ ಏನು?
ಸತ್ಸಂಗ ಎಂದರೆ ಸತ್ ನ ಸಂಗ. ಸತ್ ಅಂದರೆ ಈಶ್ವರ ಅಥವಾ ಬ್ರಹ್ಮತತ್ತ್ವ ಮತ್ತು ಸಂಗ ಎಂದರೆ ಸಹವಾಸ! ಪ್ರತ್ಯಕ್ಷ ಈಶ್ವರನ ಸಹವಾಸ ಸಿಗುವುದು ಅಸಾಧ್ಯ. ಸಂತರು ಈಶ್ವರನ ಸಗುಣ ರೂಪವಾಗಿರುವುದರಿಂದ ಸಂತರ ಸಹವಾಸವೇ ನಮಗೆ ಸರ್ವಶ್ರೇಷ್ಠ ಸತ್ಸಂಗವಾಗುತ್ತದೆ. ಆದರೆ ನಮಗೆ ಸಂತರ ಸಹವಾಸ ಅಥವಾ ಸತ್ಸಂಗ ಯಾವಾಗಲೂ ಸಿಗುತ್ತದೆ ಎಂದೇನಿಲ್ಲ. ಆದ್ದರಿಂದ ಸಾಧನೆಯನ್ನು ಮಾಡುತ್ತಿರುವ ಸಾಧಕರ ಸಹವಾಸದಲ್ಲಿರುವುದಕ್ಕೆ ಮಹತ್ವವಿರುತ್ತದೆ. ಸತ್ಸಂಗ ಅಂದರೆ ಈಶ್ವರ, ಧರ್ಮ, ಅಧ್ಯಾತ್ಮ ಮತ್ತು ಸಾಧನೆ ಈ ವಿಷಯಗಳ ಬಗ್ಗೆ ಸಾತ್ತ್ವಿಕ ಚರ್ಚೆ, ಈಶ್ವರನ ಅಥವಾ ಬ್ರಹ್ಮತತ್ತ್ವದ ಅನುಭೂತಿಯ ದೃಷ್ಟಿಯಿಂದ ಅನುಕೂಲಕರವಾದ ವಾತಾವರಣ. ಸರಳವಾಗಿ ಹೇಳುವುದಾದರೆ ಸತ್ಸಂಗ ಅಂದರೆ ಅಧ್ಯಾತ್ಮಕ್ಕೆ ಪೂರಕ ಅಥವಾ ಪೋಷಕ ವಾತಾವರಣ! ಈ ಸತ್ಸಂಗವು ನಮಗೆ ಬೇರೆ ಬೇರೆ ಮಾಧ್ಯಮಗಳಿಂದ ಸಿಗಬಹುದು. ಹರಿಕಥೆ ಅಥವಾ ಪ್ರವಚನಕ್ಕೆ ಹೋಗುವುದು, ದೇವಸ್ಥಾನಕ್ಕೆ ಹೋಗುವುದು, ತೀರ್ಥಕ್ಷೇತ್ರದಲ್ಲಿ ವಾಸ ಮಾಡುವುದು, ಸಂತರು ರಚಿಸಿದ ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು, ಇತರ ಸಾಧಕರ ಸಾನ್ನಿಧ್ಯದಲ್ಲಿ ಇರುವುದು, ಸಂತರ ಅಥವಾ ಗುರುಗಳ ಬಳಿ ಹೋಗುವುದು ಇವೆಲ್ಲವೂ ಸತ್ಸಂಗವನ್ನು ಪಡೆಯುವ ಬೇರೆಬೇರೆ ಮಾಧ್ಯಮಗಳಾಗಿವೆ.
ಸತ್ಸಂಗದಲ್ಲಿ ಪ್ರತ್ಯಕ್ಷ ಈಶ್ವರನ ಅಸ್ತಿತ್ವವಿರುತ್ತದೆ. ನಾವು ಪ್ರಾಮಾಣಿಕವಾಗಿಯೂ ಆರ್ತ ಭಾವದಿಂದಲೂ ಸತ್ಸಂಗದಲ್ಲಿ ಭಾಗವಹಿಸಿದರೆ ಈಶ್ವರೀಯ ತತ್ತ್ವದ ಅನುಭೂತಿಯನ್ನು ಪಡೆಯಲು ಸಾಧ್ಯವಿದೆ. ಸತ್ಸಂಗವು ಲಭಿಸಿದರೂ ಅದರಿಂದ ನಿರೀಕ್ಷಿತ ಲಾಭವನ್ನು ಪಡೆಯಬೇಕಿದ್ದರೆ ನಮ್ಮ ಆಂತರಿಕ ಭಾವವೂ ಅಷ್ಟೇ ಮಹತ್ವದ್ದಾಗಿರುತ್ತದೆ. ಉದಾಹರಣೆಗೆ ದೇವಸ್ಥಾನಕ್ಕೆ ಹೋಗುವುದು ಕೂಡ ಒಂದು ಸತ್ಸಂಗವೇ ಆಗಿದೆ ಎಂದು ನಾವು ಹೇಳಿದೆವು; ಆದರೆ ದೇವಸ್ಥಾನಕ್ಕೆ ಹೋಗುವಾಗ ಪಿಕ್ನಿಕ್ಕಿಗೆ ಹೋದಂತೆ ಹೋದರೆ ಆ ದೇವದರ್ಶನದಿಂದ ನಮಗೆ ಆಧ್ಯಾತ್ಮಿಕ ಸ್ತರದಲ್ಲಿ ನಿರೀಕ್ಷಿತ ಲಾಭ ಸಿಗುವುದೇ? ಆದ್ದರಿಂದ ಸತ್ಸಂಗದಿಂದ ಲಾಭ ಪಡೆಯಲು ನಮ್ಮ ಪ್ರಾಮಾಣಿಕ ಪ್ರಯತ್ನಗಳೂ ಮಹತ್ವದ್ದಾಗಿವೆ.
ಗುರುಕೃಪೆಯಿಂದ ನಮಗೆ ಪ್ರತಿ ವಾರ ಈ ಸತ್ಸಂಗ ಸಿಗುತ್ತಿದೆ. ಅದರಿಂದ ಆಧ್ಯಾತ್ಮಿಕ ಸ್ತರದಲ್ಲಿ ಹೆಚ್ಚು ಹೆಚ್ಚು ಲಾಭ ಪಡೆದುಕೊಳ್ಳುವ ದೃಷ್ಟಿಯಿಂದ ನಾವು ಸತ್ಸಂಗದಲ್ಲಿ ಪೂರ್ಣ ಶ್ರದ್ಧೆಯಿಂದ ಪಾಲ್ಗೊಳ್ಳೋಣ.
ಸತ್ಸಂಗದ ಮಹತ್ವ
ತಪಸ್ಸಿಗಿಂತಲೂ ಹೆಚ್ಚು ಮಹತ್ವ ಇರುವ ಸತ್ಸಂಗ
ಸತ್ಸಂಗದ ಮಹತ್ವವನ್ನು ತಿಳಿಸುವ ಒಂದು ಕಥೆಯಿದೆ. ಒಮ್ಮೆ ಮಹರ್ಷಿ ವಸಿಷ್ಠ ಮತ್ತು ವಿಶ್ವಾಮಿತ್ರರ ನಡುವೆ ಸತ್ಸಂಗ ಶ್ರೇಷ್ಠವೋ ತಪಸ್ಸು ಶ್ರೇಷ್ಠವೋ ಎಂಬ ವಿಷಯದ ಕುರಿತು ವಾದ ನಡೆಯಿತು. ವಸಿಷ್ಠರು ಹೇಳಿದರು, ಸತ್ಸಂಗವು ಶ್ರೇಷ್ಠ ಮತ್ತು ವಿಶ್ವಾಮಿತ್ರರು ತಪಸ್ಸು ಶ್ರೇಷ್ಠ ಎಂದರು. ಈ ವಾದವನ್ನು ಕೊನೆಗೊಳಿಸಲು ಅವರಿಬ್ಬರೂ ದೇವತೆಗಳ ಬಳಿ ಹೋದರು. ಆಗ ದೇವರು, ಆದಿಶೇಷನೇ ನಿಮ್ಮ ಪ್ರಶ್ನೆಗೆ ಉತ್ತರವನ್ನು ಕೊಡಬಲ್ಲನು! ಎಂದರು. ಆಗ ಇಬ್ಬರೂ ಆದಿಶೇಷನ ಬಳಿ ಹೋಗಿ ಸತ್ಸಂಗ ಶ್ರೇಷ್ಠವೋ ತಪಸ್ಸು ಶ್ರೇಷ್ಠವೋ ಎಂದು ಕೇಳಿದರು. ಆಗ ಆದಿಶೇಷನು, “ನನ್ನ ತಲೆಯ ಮೇಲಿರುವ ಪೃಥ್ವಿಯ ಭಾರವನ್ನು ಸ್ವಲ್ಪ ಹಗುರ ಮಾಡಿ, ಆಮೇಲೆ ನಾನು ವಿಚಾರ ಮಾಡಿ ಹೇಳುತ್ತೇನೆ” ಎಂದು ಹೇಳಿದನು. ಆದಿಶೇಷನ ತಲೆಯ ಮೇಲಿನ ಭಾರವನ್ನು ಕಡಿಮೆ ಮಾಡುವುದಕ್ಕಾಗಿ ವಿಶ್ವಾಮಿತ್ರರು ‘ನಾನು ನನ್ನ ೧ ಸಾವಿರ ವರ್ಷಗಳ ತಪಸ್ಸಿನ ಫಲವನ್ನು ಅರ್ಪಿಸುತ್ತೇನೆ, ಪೃಥ್ವಿಯು ಆದಿಶೇಷನ ತಲೆಯಿಂದ ಸ್ವಲ್ಪ ಮೇಲೆ ಹೋಗಲಿ’ ಎಂದು ಸಂಕಲ್ಪವನ್ನು ಮಾಡಿದರು. ಪೃಥ್ವಿಯು ಸ್ವಲ್ಪವೂ ಅಲುಗಾಡಲಿಲ್ಲ. ನಂತರ ವಸಿಷ್ಠರು ಸಂಕಲ್ಪ ಮಾಡಿದರು, ‘ನಾನು ನನ್ನ ಅರ್ಧ ಘಟಿಕೆಗಳಷ್ಟು ಅವಧಿಯ (ಅಂದರೆ 12 ನಿಮಿಷಗಳ) ಸತ್ಸಂಗದ ಫಲವನ್ನು ಅರ್ಪಿಸುತ್ತೇನೆ. ಪೃಥ್ವಿಯು ತನ್ನ ಭಾರವನ್ನು ಕಡಿಮೆ ಮಾಡಲಿ’. ಆಗ ಪೃಥ್ವಿಯು ಕೂಡಲೇ ಮೇಲೆ ಎತ್ತಲ್ಪಟ್ಟಿತು.
ಇದರಿಂದ ಏನು ಗಮನಕ್ಕೆ ಬಂರುತ್ತದೆ? ವಿಶ್ವಾಮಿತ್ರರು ತಪಶ್ಚರ್ಯೆಯ ಫಲವನ್ನು ಅರ್ಪಿಸಿದರು, ಮತ್ತು ವಸಿಷ್ಠ ಋಷಿಗಳು ಸತ್ಸಂಗದ ಫಲವನ್ನು ಅರ್ಪಿಸಿದರು. ತಪಶ್ಚರ್ಯೆಗಿಂತ ಸತ್ಸಂಗದ ಮಹತ್ವ ಎಷ್ಟಿದೆ ಎಂದು ಗಮನಕ್ಕೆ ಬಂತಲ್ಲ? ಭಗವಂತನ ಕೃಪೆಯಿಂದ ನಮಗೆ ಪ್ರತಿವಾರ ಈ ಸತ್ಸಂಗ ಸಿಗುತ್ತಿದೆ. ಇದಕ್ಕಾಗಿ ನಾವು ದೇವರಿಗೆ ಕೃತಜ್ಞರಾಗಿರಬೇಕು. ಈಗ ಇನ್ನೂ ಕೆಲವು ಅಂಶಗಳ ಆಧಾರದಲ್ಲಿ ಸತ್ಸಂಗದ ಮಹತ್ವ ಏನೇನಿದೆ ಎಂದು ತಿಳಿದುಕೊಳ್ಳೋಣ.
ರತ್ನಾಕರ ವಾಲ್ಮೀಕಿಯಾಗಿದ್ದು, ನಾರದಮುನಿಗಳ ಕೆಲವೇ ನಿಮಿಷದ ಸತ್ಸಂಗದಿಂಲೇ
ದರೋಡೆಕೋರನಾದ ರತ್ನಾಕರನು ದಾರಿಹೋಕರನ್ನು ಹೊಡೆದು ಲೂಟಿ ಮಾಡುತ್ತಿದ್ದನು. ಒಮ್ಮೆ ಅವನಿಗೂ ನಾರದಮುನಿಗಳಿಗೂ ಭೇಟಿಯಾಯಿತು. ನಾರದರು ಆತನನ್ನು ಕೇಳಿದರು, “ಯಾರಿಗಾಗಿ ನೀ ಈ ಪಾಪವನ್ನು ಮಾಡುತ್ತಿರುವೆಯೋ ಆ ನಿನ್ನ ಕುಟುಂಬದವರು ಅಂದರೆ ನಿನ್ನ ಹೆಂಡತಿ-ಮಕ್ಕಳು ಈ ಪಾಪದಲ್ಲಿ ಪಾಲುದಾರರಾಗಲು ಸಿದ್ದರಾಗಿದ್ದಾರೆಯೇ?” ಆತನು ಮನೆಗೆ ಹೋಗಿ ಈ ಪ್ರಶ್ನೆಯನ್ನು ಕೇಳಿದಾಗ ಹೆಂಡತಿ-ಮಕ್ಕಳು ಪಾಪದಲ್ಲಿ ಪಾಲುದಾರರಾಗಲು ನಿರಾಕರಿಸಿದರು. ತದನಂತರದ ಇತಿಹಾಸವು ಎಲ್ಲರಿಗೂ ತಿಳಿದೇ ಇದೆ. ನಾರದಮುನಿಗಳ ಮಹತ್ವದ ಪ್ರಶ್ನೆಯ ನಂತರ ಆತನ ಜೀವನಕ್ಕೆ ಬೇರೆಯೇ ತಿರುವು ಬಂತು. ಆತನು ಹಗಲಿರುಳು ಸಾಧನೆ ಮಾಡಿದನು. ಮುಂದೆ ಇಡೀ ವಿಶ್ವಕ್ಕೇ ಪೂಜ್ಯರಾಗಿರುವ ವಾಲ್ಮೀಕಿ ಋಷಿಯಾಗಿ ರೂಪಾಂತರಗೊಂಡಿದ್ದು ಇದೇ ಸತ್ಸಂಗದಿಂದ. ಸತ್ಸಂಗಕ್ಕೆ ಇಷ್ಟೊಂದು ಮಹತ್ವವಿದೆ.
ಸತ್ಸಂಗದ ಲಾಭಗಳು
ವೃತ್ತಿ ಸಾತ್ತ್ವಿಕವಾಗುವುದು
ಒಳ್ಳೆಯ ಅಭ್ಯಾಸಗಳನ್ನು ಬೇಗನೇ ಅಳವಡಿಸಿಕೊಳ್ಳಲಾಗುವುದಿಲ್ಲ. ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದಕ್ಕಾಗಿ ನಿರಂತರವಾಗಿ ಪಟ್ಟುಹಿಡಿದು ಪ್ರಯತ್ನ ಪಡಬೇಕಾಗುತ್ತದೆ. ಅದೇ ಕೆಟ್ಟ ಅಭ್ಯಾಸಗಳು ಮಾತ್ರ ಬೇಗನೇ ಮೈಗೂಡುತ್ತವೆ. ಹಲವರು ಇದರ ಅನುಭವವನ್ನು ಪಡೆದಿರಬಹುದು. ನಾವು ಪ್ರತಿದಿನ ವ್ಯಾಯಾಮ ಅಥವಾ ಪ್ರಾಣಾಯಾಮ ಮಾಡುವಂತೆ ನಿಶ್ಚಯಿಸಿದರೆ ಅದರ ಅಭ್ಯಾಸವಾಗುವ ತನಕ ಮನಸ್ಸಿನಲ್ಲಿ ಎಷ್ಟೊಂದು ಸಂಘರ್ಷ ಮಾಡಬೇಕಾಗುತ್ತದೆ! ಅದೇ ವ್ಯಾಯಾಮದಿಂದ ಒಂದು ದಿನ ರಜೆ ತೆಗೆದುಕೊಳ್ಳುವುದಿದ್ದರೆ ಮನಸ್ಸು ಒಂದೇ ಕ್ಷಣದಲ್ಲಿ ಸಿದ್ಧವಾಗುತ್ತದೆ. ಸತ್ಸಂಗದಿಂದ ವ್ಯಕ್ತಿಯ ಮನೋವೃತ್ತಿಯು ಸಾತ್ತ್ವಿಕವಾಗುತ್ತದೆ. ಅದರಿಂದ ಪಟ್ಟುಹಿಡಿಯುವಿಕೆ (ಜಿಗುಟುತನ), ನಿರಂತರತೆ, ಛಲ ಈ ಗುಣಗಳ ವಿಕಾಸವಾಗಲೂ ಸಹಾಯವಾಗುತ್ತದೆ. ಸತ್ಸಂಗವು ಪರಮಾರ್ಥದಲ್ಲಿ ಮಾತ್ರವಲ್ಲ; ವ್ಯವಹಾರದಲ್ಲಿಯೂ ಮಹತ್ವದ್ದಾಗಿದೆ.
ಈಶ್ವರನ ಮೇಲಿನ ಶ್ರದ್ಧೆ ಹೆಚ್ಚಾಗುವುದು
ಸತ್ಸಂಗದಲ್ಲಿ ಈಶ್ವರ, ಧರ್ಮ, ಅಧ್ಯಾತ್ಮ ಮತ್ತು ಸಾಧನೆಯ ವಿಷಯಗಳ ಚರ್ಚೆಯಾಗುತ್ತದೆ. ಇದರಿಂದ ವ್ಯಕ್ತಿಯ ಆಧ್ಯಾತ್ಮಿಕ ದೃಷ್ಟಿಕೋನಗಳು ಪ್ರಬುದ್ಧವಾಗುತ್ತವೆ. ಏನಾಗುತ್ತದೆ ಅಂದರೆ ಜೀವನದಲ್ಲಿ ಯಾವುದಾದರೊಂದು ಘಟನೆ ಘಟಿಸಿದಾಗ ಸಾಮಾನ್ಯ ವ್ಯಕ್ತಿಯು ನನಗೆ ಮಾತ್ರ ಹೀಗೇಕಾಗುತ್ತದೆ ಎಂಬ ವಿಚಾರ ಮಾಡುತ್ತಾನೆ. ಆದರೆ ಎಲ್ಲವೂ ಒಳ್ಳೆಯದು ಘಟಿಸಿದರೆ ನನ್ನಿಂದಾಯಿತು ಎಂದು ವಿಚಾರ ಮಾಡುತ್ತಾನೆ. ಯಾವಾಗ ನಾವು ಸತ್ಸಂಗಕ್ಕೆ ಬರುತ್ತೇವೆಯೋ ಮತ್ತು ಸತ್ಸಂಗದಲ್ಲಿ ಈಶ್ವರೀ ಶಕ್ತಿಯ ಬಗ್ಗೆ ತಿಳಿದುಕೊಳ್ಳುತ್ತೇವೆಯೋ ಆಗ ಜೀವನದಲ್ಲಿ ಘಟಿಸುವ ಪ್ರಸಂಗಗಳತ್ತ ನೋಡುವ ದೃಷ್ಟಿಕೋನ ಬದಲಾಗುತ್ತದೆ. ಯಾವುದಾದರೊಂದು ಅಪ್ರಿಯ ಘಟನೆಯಾದಾಗ ಅದು ನನ್ನ ಪ್ರಾರಬ್ಧದಿಂದ ಘಟಿಸಿತು ಎಂದು ಸ್ವೀಕರಿಸಲು ಸಾಧ್ಯವಾಗುತ್ತದೆ ಹಾಗೆಯೇ ಆನಂದದಾಯಕ ಅಥವಾ ಒಳ್ಳೆಯದೇನಾದರೂ ಘಟಿಸಿದರೆ ದೇವರ ಕೃಪೆಯಿಂದಾಯಿತು ಎಂಬ ವಿಚಾರದಿಂದ ನಿಧಾನವಾಗಿ ಆಧ್ಯಾತ್ಮಿಕ ದೃಷ್ಟಿಕೋನಗಳು ಪ್ರಬುದ್ಧವಾಗುತ್ತವೆ. ಇದರಿಂದ ಈಶ್ವರನ ಮೇಲಿನ ಶ್ರದ್ಧೆಯು ಹೆಚ್ಚಾಗುತ್ತದೆ.
ಸಾತ್ತ್ವಿಕತೆ ಹೆಚ್ಚಾಗುವುದು
ನಾಮಜಪದಿಂದ 5% ಸಾತ್ತ್ವಿಕತೆ ಹೆಚ್ಚಾಗುತ್ತದೆ ಮತ್ತು ಸತ್ಸಂಗದಿಂದ 30% ತನಕ ಹೆಚ್ಚಳವಾಗುತ್ತದೆ. ಸತ್ಸಂಗದಲ್ಲಿ ನಾಮ ಜಪಿಸುವವರು, ಭಗವಂತನ ಭಕ್ತಿಯನ್ನು ಮಾಡುವ, ಅಧ್ಯಾತ್ಮದ ಬಗ್ಗೆ ಆರಿತುಕೊಳ್ಳುವಂತಹವರು ಒಟ್ಟಿಗೆ ಸೇರುತ್ತೇವೆ. ಹಾಗಾಗಿ ಎಲ್ಲರ ಒಟ್ಟು ಸಾತ್ತ್ವಿಕತೆ ಹೆಚ್ಚಾಗುತ್ತದೆ. ಹಾಗಾಗಿ ನಾಮಜ ಪಿಸುವುದರಿಂದ 5% ಸಾತ್ತ್ವಿಕತೆ ಹೆಚ್ಚಾದರೆ, ಸತ್ಸಂಗದಿಂದ ಅದರಲ್ಲಿ 30% ತನಕ ಹೆಚ್ಚಳವಾಗಬಹುದು.
ಸಹಜವಾಗಿ ಆನಂದ ಸಿಗುವುದು
ನಾಮಜಪದಿಂದ ಯಾವ ಆನಂದ ಸಿಗುತ್ತದೆಯೋ ಅದೇ ಆನಂದ ಸತ್ಸಂಗದಿಂದ ಸಹಜವಾಗಿ ಸಿಗುತ್ತದೆ.
ನಾಮಜಪದ ಮುಂದಿನ ಹಂತಕ್ಕೆ ತಲುಪುವುದು
ಸತ್ಸಂಗವು ನಾಮಸ್ಮರಣೆಗಿಂತ ಮುಂದಿನ ಹಂತವಾಗಿದೆ. ಆದರೆ ಪ್ರತಿಯೊಂದು ಕ್ಷಣ ಅಂದರೆ 24 ಗಂಟೆಗಳ ಕಾಲ ನಾವು ಸತ್ಸಂಗದಲ್ಲಿ ಇರಲು ಸಾಧ್ಯವಿಲ್ಲ, ಆದ್ದರಿಂದ ನಾಮಜಪವು ಆವಶ್ಯಕವಾಗಿದೆ. ನಾಮಜಪದಿಂದ ನಾವು ಅಖಂಡ ಸಾಧನೆಯಲ್ಲಿ ಇರಲು ಸಾಧ್ಯವಾಗುತ್ತದೆ.
ಚೈತನ್ಯ ಸಿಗುವುದು
ಸತ್ಸಂಗದಲ್ಲಿ ಈಶ್ವರನ ಬಗ್ಗೆ ಚರ್ಚಿಸಲಾಗುತ್ತದೆ, ಈಶ್ವರನ ಗುಣಗಾನ ಮಾಡಲಾಗುತ್ತದೆ. ಹಾಗಾಗಿ ಅಲ್ಲಿ ಸೂಕ್ಷ್ಮರೂಪದಲ್ಲಿ ಈಶ್ವರನ ಅಸ್ತಿತ್ವವು ಇದ್ದೇ ಇರುತ್ತದೆ. ಆದ ಕಾರಣ ಉಪಸ್ಥಿತರಿರುವವರಿಗೆ ಸತ್ಸಂಗದಿಂದ ಚೈತನ್ಯದ ಸ್ತರದಲ್ಲಿಯೂ ಲಾಭವಾಗುತ್ತದೆ. ಸಮಾಜದಲ್ಲಿ ಬೇರೆ ವ್ಯಕ್ತಿಗಳ ತುಲನೆಯಲ್ಲಿ ಸತ್ಸಂಗಕ್ಕೆ ಬರುವವರಲ್ಲಿ ಸತ್ತ್ವಗುಣವು ಹೆಚ್ಚು ಪ್ರಮಾಣದಲ್ಲಿರುತ್ತದೆ. ಹೆಚ್ಚಿನ ಸತ್ತ್ವಗುಣವಿರುವ ವ್ಯಕ್ತಿಗಳು ಒಗ್ಗೂಡುವುದರಿಂದ ಸಾಮೂಹಿಕ ಸತ್ತ್ವಗುಣವು ಹೆಚ್ಚಾಗಿ ವಾತಾವರಣವೂ ಸಾತ್ತ್ವಿಕವಾಗುತ್ತದೆ. ಅದರಿಂದ ಸಾಧಕನಲ್ಲಿರುವ ಸತ್ತ್ವಗುಣವು ಹೆಚ್ಚಾಗಲು ಸಹಾಯವಾಗುತ್ತದೆ.
ಈಶ್ವರಪ್ರಾಪ್ತಿಯ ಧಾರಣೆ ದೃಢವಾಗುತ್ತದೆ.
ಸತ್ಸಂಗಕ್ಕೆ ನಿಯಮಿತವಾಗಿ ಉಪಸ್ಥಿತರಾಗುವುದರಿಂದ ನಮ್ಮ ಸಾಧನೆಯು ಹೆಚ್ಚು-ಹೆಚ್ಚು ದೃಢವಾಗುತ್ತಾ ಹೋಗುತ್ತದೆ. ಈಶ್ವರಪ್ರಾಪ್ತಿಯೇ ನನ್ನ ಜೀವನದ ಧ್ಯೇಯವಾಗಿದೆ ಎಂಬ ನಿಲುವು ಕೂಡ ಹೆಚ್ಚು ದೃಢವಾಗುತ್ತದೆ..
ಸಕಾರಾತ್ಮಕತೆ ಹೆಚ್ಚಾಗಿ ಮನೋಬಲ ಹೆಚ್ಚಾಗುವುದು
ಸತ್ಸಂಗದಲ್ಲಿನ ಸಾತ್ತ್ವಿಕ ವಾತಾವರಣದಲ್ಲಿ ಸಾಧಕನ ಧ್ಯಾನ ಮುಂತಾದ ಸಾಧನೆಗಳು ಇನ್ನೂ ಉತ್ತಮವಾಗಿ ಆಗುತ್ತವೆ. ಸತ್ಸಂಗದಿಂದ ಅನುಭೂತಿಗಳೂ ಬರುತ್ತವೆ. ಅನುಭೂತಿಗಳಿಂದ ಸಾಧನೆಯಲ್ಲಿ ಶ್ರದ್ಧೆ ಹೆಚ್ಚಗಲು ಸಹಾಯವಾಗುತ್ತದೆ. ಸಕಾರಾತ್ಮಕತೆಯು ಹೆಚ್ಚಾಗುತ್ತದೆ, ಇದರಿಂದ ಮನೋಬಲವೂ ಹೆಚ್ಚುತ್ತದೆ.
ವೃತ್ತಿ ವ್ಯಾಪಕವಾಗುವುದು
ಸತ್ಸಂಗದಲ್ಲಿ ಪಾಲ್ಗೊಳ್ಳುತ್ತಿರುವ ಬೇರೆ ಸಾಧಕಕರಿಗೆ ಸಾಧನೆ ಮಾಡುವಾಗ ಯಾವ ಅಡಚಣೆಗಳು ಬರುತ್ತವೆ, ಅವನ್ನು ನಿವಾರಿಸಲು ಏನು ಪ್ರಯತ್ನ ಮಾಡಬೇಕು, ನಮ್ಮಂತೆಯೇ ಸತ್ಸಂಗದಲ್ಲಿ ಪಾಲ್ಗೊಳ್ಳುವ ಸಾಧಕರು ಹೇಗೆ ಪ್ರಯತ್ನ ಮಾಡುತ್ತಾರೆ ಇದು ಕಲಿಯಲು ಸಿಗುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ಸಾಧನೆಯ ಪ್ರಾಯೋಗಿಕ ಪ್ರಯತ್ನಗಳನ್ನು ಕಲಿಯಲು ಸತ್ಸಂಗದಂತಹ ಬೇರೊಂದು ಮಾಧ್ಯಮವಿಲ್ಲ. ಸತ್ಸಂಗದಲ್ಲಿ ನಾವು ಹೇಳುವ ಪ್ರಯತ್ನಗಳು ಅಥವಾ ಅನುಭೂತಿಗಳ ಆಧ್ಯಾತ್ಮಿಕ ಕಾರಣ ಮೀಮಾಂಸೆಯು ತಿಳಿಯುತ್ತದೆ. ಹೀಗಾಗಿ ಸತ್ಸಂಗದಲ್ಲಿ ಪಾಲ್ಗೊಳ್ಳುವವರ ಶ್ರದ್ಧೆ ಹೆಚ್ಚಾಗಲು ಸಹಾಯವಾಗುತ್ತದೆ. ಸತ್ಸಂಗಕ್ಕೆ ಬರುವ ಇತರ ಸಾಧಕರು ನಮ್ಮವರೇ ಎಂಬ ಭಾವವು ನಿರ್ಮಾಣವಾಗುತ್ತದೆ. ಅದರಿಂದಲೇ ಮುಂದೇ ‘ಇಡೀ ವಿಶ್ವವೇ ನನ್ನ ಮನೆ’ ಅಥವಾ ‘ವಸುಧೈವ ಕುಟುಂಬಕಮ್’ ಎಂದರೆ ಇಡೀ ಪೃಥ್ವಿಯೇ ಒಂದು ಕುಟುಂಬ ಎಂಬ ಭಾವ ನಿರ್ಮಾಣವಾಗುತ್ತದೆ.
ಸಂದೇಹ ನಿವಾರಣೆಯಾಗುವುದು
ಸಾಧಕನ ಮನಸ್ಸಿನಲ್ಲಿ ಸಾಧನೆಯ ವಿಷಯದ ಸಂದೇಹಗಳು, ಪ್ರಶ್ನೆಗಳು ಇದ್ದರೆ ಸತ್ಸಂಗದಲ್ಲಿ ಅವುಗಳಿಗೆ ಉತ್ತರಗಳು ಸಿಗುತ್ತವೆ.
ಸಾಧನೆಯ ಪ್ರಯತ್ನಗಳಿಗೆ ವೇಗ ಸಿಗುವುದು
ಸಾಧನೆಯ ಬಗ್ಗೆ ವಿಕಲ್ಪ / ಅನುಮಾನ / ದ್ವಂದ್ವ ನಿರ್ಮಾಣವಾಗಿದ್ದರೆ ಸತ್ಸಂಗಕ್ಕೆ ಹೋಗುವುದರಿಂದ ಅದು ಇಲ್ಲದಂತಾಗಲು ಸಹಾಯವಾಗುತ್ತದೆ. ಇಂದಿಗೂ ಸಮಾಜದಲ್ಲಿ ಸಾಧನೆ ಮತ್ತು ಅಧ್ಯಾತ್ಮದ ಬಗ್ಗೆ ತಪ್ಪು ನಿಲುವುಗಳು ಮತ್ತು ಕಲ್ಪನೆಗಳು ಕಾಣಸಿಗುತ್ತವೆ. ಉದಾಹರಣೆಗೆ ಸಾಧನೆಯನ್ನು ಇಳಿವಯಸ್ಸಿನಲ್ಲಿ ಮಾಡಬೇಕು ಅಥವಾ ಅಧ್ಯಾತ್ಮ ಎಂದರೆ ಹಿನ್ನೆಡೆ ಮತ್ತು ವಿಜ್ಞಾನ ಎಂದರೆ ಪ್ರಗತಿ! ಸತ್ಸಂಗದಿಂದ ಇಂತಹ ತಪ್ಪು ಕಲ್ಪನೆಗಳು ದೂರವಾಗುತ್ತವೆ. ಸಾಧನಾಮಾರ್ಗದಲ್ಲಿ ಮಾರ್ಗದರ್ಶನ ದೊರಕಿ ಸಾಧನೆಯ ಪ್ರಯತ್ನಗಳಿಗೆ ವೇಗ ಬರುತ್ತದೆ.
ಹೀಗೆ ಸತ್ಸಂಗದ ಎಷ್ಟೋ ಲಾಭಗಳನ್ನು ಹೇಳಬಹುದು. ಸತ್ಸಂಗದ ಮಹತ್ವವನ್ನು ಅನುಭವಿಸುವುದಿದ್ದರೆ ಸತ್ಸಂಗದಲ್ಲಿ ಪಾಲ್ಗೊಳ್ಳುವ ಮುನ್ನ ಇದ್ದ ಮನಸ್ಥಿತಿ ಮತ್ತು ಸತ್ಸಂಗದ ನಂತರದ ಮನಸ್ಥಿತಿ ಇವುಗಳನ್ನು ಅಭ್ಯಾಸ ಮಾಡಿ ತಾವೇ ನೊಡಿಕೊಳ್ಳಲೂಬಹುದು.
ಮುಂದಿನ ಸತ್ಸಂಗದಲ್ಲಿ ನಾವು ಗುರುಕೃಪಾಯೋಗಾನುಸಾರ ಸಾಧನೆಯ ಭಾಗವಾಗಿರುವ ಅಷ್ಟಾಂಗ ಸಾಧನೆಯ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.