ಸನಾತನವು ಹಲವು ವರ್ಷಗಳಿಂದ ಹೇಳುತ್ತಿರುವ ಆಪತ್ಕಾಲವು ಇಂದು ಜಗತ್ತಿನ ಹೊಸ್ತಿಲಿಗೆ ಬಂದು ನಿಂತಿದೆ. ಅದು ಯಾವುದೇ ಕ್ಷಣದಲ್ಲಿ ಕದ ತಟ್ಟಬಹುದು. ಕಳೆದ ಒಂದು ವರ್ಷದಿಂದ ಜಗತ್ತನ್ನು ಆವರಿಸಿರುವ ಕರೋನಾ ಮಹಾಮಾರಿಯು ಆಪತ್ಕಾಲದ ಒಂದು ಸಣ್ಣ ತುಣುಕು ಅಷ್ಟೇ. ನಿಜವಾದ ಆಪತ್ಕಾಲವು ಇದಕ್ಕಿಂತ ಅನೇಕ ಪಟ್ಟು ಹೆಚ್ಚು ಭಯಾನಕ ಮತ್ತು ಅಮಾನವೀಯವಾಗಿರಲಿದೆ. ಮಾನವನಿರ್ಮಿತ ಇರಬಹುದು ನೈಸರ್ಗಿಕ ವಿಪತ್ತುಗಳ ರೂಪದಲ್ಲಿರಬಹುದು, ವಿಭಿನ್ನ ರೂಪಗಳಲ್ಲಿ ಆಪತ್ಕಾಲವು ಬಂದೆರಗಲಿದೆ. ಇವುಗಳಲ್ಲಿ ಕೆಲವನ್ನು ನಾವು ಈ ಲೇಖನ ಮಾಲೆಯಲ್ಲಿ ನೋಡಲಿದ್ದೇವೆ. ಆಪತ್ಕಾಲದಲ್ಲಿ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ರಕ್ಷಿಸಲು ನೀವು ಏನು ಮಾಡಬಹುದು ಎಂಬುದರ ಕುರಿತು ಮಾಹಿತಿಯನ್ನು ನೀಡಲು ಈ ಲೇಖನವು ಪ್ರಯತ್ನಿಸುತ್ತದೆ. ಓದುಗರಿಗೆ ಈ ಮಾಹಿತಿಯ ಲಾಭವಾಗಬೇಕೆಂಬುವುದೇ ಈ ಲೇಖನ ಮಾಲೆಯನ್ನು ಪ್ರಕಟಿಸುವ ಉದ್ದೇಶವಾಗಿದೆ.
ಮೂರನೇ ಮಹಾಯುದ್ಧದಲ್ಲಿ ಪರಮಾಣು ಬಾಂಬ್ ಗಳ ಬಳಕೆಯಾಗುವುದು ನಿಸ್ಸಂದೇಹವಾಗಿದೆ. ಅದರ ಪರಿಣಾಮಗಳೇನು ಮತ್ತು ಅದರಿಂದ ತಪ್ಪಿಸಿಕೊಳ್ಳಲು ಏನು ಮಾಡಬಹುದು ? ಎಂಬುದರ ಬಗ್ಗೆ ಈ ಲೇಖನದಲ್ಲಿ ನೀಡಲಾಗಿದೆ.
1 ಅ 1 ಅ 5. ಪರಮಾಣು ಬಾಂಬ್ ದಾಳಿಯ ಮೊದಲು ಆತ್ಮರಕ್ಷಣೆಗಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು
ಆಶ್ರಯ ಪಡೆಯಲು ಕಟ್ಟಡದ ನೆಲಮಾಳಿಗೆಯಲ್ಲಿ ಅಥವಾ ಮಧ್ಯದಲ್ಲಿ ಮೊದಲೇ ಒಂದು ಸ್ಥಳವನ್ನು ಗೊತ್ತುಪಡಿಸಿ, ಸಾಧ್ಯವಾದರೆ ಮನೆಯ ಸುತ್ತಲೂ ಕಂದಕ ನಿರ್ಮಿಸುವುದು : ಪರಮಾಣು ಬಾಂಬ್ ದಾಳಿ ಯಾವುದೇ ಸಮಯದಲ್ಲಿ ಸಂಭವಿಸಬಹುದು. ಆದ್ದರಿಂದ, ಜನರು ತಮ್ಮ ಮನೆಯ, ದಿನದ ಹೆಚ್ಚಿನ ಸಮಯವನ್ನು ಕಳೆಯುವ ಕಚೇರಿ ಅಥವಾ ಶಾಲೆಯ ಜೊತೆಗೆ ನಿಯಮಿತವಾಗಿ ಪ್ರಯಾಣಿಸುವ ಮಾರ್ಗದಲ್ಲಿಯೂ ಈ ಅನಾಹುತವನ್ನು ಎದುರಿಸಲು ಸಮೀಪದಲ್ಲಿರುವ ಸುರಕ್ಷಿತ ಸ್ಥಳಗಳು ನೋಡಿಡಬೇಕು. ಭೂಗತ ನೆಲಮಾಳಿಗೆಗಳು ಮತ್ತು ದೊಡ್ಡ ದೊಡ್ಡ ಭದ್ರ ಕಟ್ಟಡಗಳ ಮಧ್ಯದ ಕೊಠಡಿಗಳು ಪರಮಾಣು ಬಾಂಬ್ ದಾಳಿಯಿಂದ ರಕ್ಷಿಣೆ ಪಡೆಯಲು ಅತ್ಯುತ್ತಮ ಸ್ಥಳಗಳಾಗಿವೆ. ಅಂತಹ ಸ್ಥಳಗಳು ಲಭ್ಯವಿಲ್ಲದಿದ್ದರೆ, ಯಾರಿಗೆ ಸಾಧ್ಯವೋ ಅವರು ಮನೆಯ ಮುಂದೆ ತೆರೆದ ಜಾಗದಲ್ಲಿ ಯುದ್ಧದ ಸಂದರ್ಭದಲ್ಲಿ ಮಾಡುವಂತಹ ಕಂದಕಗಳನ್ನು (trenches) ತಯಾರಿಸಬಹುದು ಮತ್ತು ಅದರಲ್ಲಿ ಆಶ್ರಯ ಪಡೆಯಬಹುದು.
ಆಧಾರ : www.nrc.gov/about-nrc/emerg-preparedness/about-emerg-preparedness/potassium-iodide-use.html
1 ಅ 1 ಅ 6. ಪರಮಾಣು ಬಾಂಬ್ ಸ್ಫೋಟಗೊಂಡ ನಂತರ ವಿಕಿರಣ ಹೊರಬೀಳುವ ಮೊದಲು ತಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು
ಅ. ಪರಮಾಣು ಬಾಂಬ್ ಸ್ಫೋಟದ ಸ್ಥಳದಿಂದ ತಕ್ಷಣ ಸ್ಥಳ ಬಿಡುವುದು : ಪರಮಾಣು ಬಾಂಬ್ ಬಿದ್ದಿದೆ ಎಂದು ತಿಳಿದ ತಕ್ಷಣ, ಅದರ ವಿಕಿರಣವು ನಿಮ್ಮ ಮೇಲೆ ಪರಿಣಾಮ ಬೀರುವ ಮೊದಲೇ ನಿಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸಿ. ಇದಕ್ಕಾಗಿ, ಸಾಧ್ಯವಾದಷ್ಟು ಬೇಗ ಸ್ಫೋಟದ ಸ್ಥಳದಿಂದ ದೂರ ಹೋಗಬೇಕು. ಫಾಲ್‌ಔಟ್ ಅವಧಿ ಇದಕ್ಕೆ ಉಪಯುಕ್ತವಾಗಿದೆ. ಈ ಅವಧಿಯು ಹಿಂದಿನ ಲೇಖನದಲ್ಲಿ ಹೇಳಿದಂತೆ 15 ನಿಮಿಷ ಅಥವಾ ಹೆಚ್ಚಿನದಾಗಿರಬಹುದು. ವಿಕಿರಣ ತಾಣವು ಮನೆಯ ಸಮೀಪದಲ್ಲಿದ್ದರೆ, ಮನೆಯೊಳಗೆ ಇರಿ.
ಆ. ವಿಕಿರಣದ ಸಮಯದಲ್ಲಿ ಹೊರಸೂಸುವ ಗಾಮಾ ಕಿರಣಗಳನ್ನು ತಪ್ಪಿಸಲು ಸಾಧ್ಯವಾದರೆ ಕಂದಕದಲ್ಲಿ ಅಡಗಿಕೊಳ್ಳುವುದು : ಸಾಧ್ಯವಾದರೆ, ಸ್ಫೋಟದ ನಂತರದ ವಿಕಿರಣದ ಸಮಯದಲ್ಲಿ ಹೊರಸೂಸುವ ಗಾಮಾ ಕಿರಣಗಳಿಂದ ರಕ್ಷಿಸಲು 4-5 ಅಡಿ ಆಳದ ಕಂದಕವನ್ನು ಬಳಸಿ; ಆದರೆ ಸ್ಫೋಟದಿಂದ ಕಂದಕವು ನಾಶವಾಗುವುದಿಲ್ಲ ಮತ್ತು ಅದರಲ್ಲಿ ನೀವು ಜೀವಂತವಾಗಿ ಹೂತುಹೋಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಇ. ಮನೆ ಅಥವಾ ಕಟ್ಟಡದ ಮೇಲ್ಛಾವಣಿಗೆ ಹೋಗುವುದನ್ನು ತಪ್ಪಿಸಿ : ಫಾಲ್‌ಔಟ್ ಅಂದರೆ ವಿಕಿರಣಶೀಲ ಧೂಳು ಕಟ್ಟಡದ ಮೇಲ್ಛಾವಣಿಯ ಮೇಲೆ ಮತ್ತು ಹೊರಗಿನ ಗೋಡೆಗಳ ಮೇಲೆ ಶೇಖರಣೆಯಾಗುತ್ತದೆ; ಆದ್ದರಿಂದ ಸಾಧ್ಯವಾದಷ್ಟು ಮೇಲಿನ ಮಹಡಿಗೆ ಹೋಗುವುದನ್ನು ತಪ್ಪಿಸಿ, ಹಾಗೆಯೇ ಹೊರಗಿನ ಗೋಡೆಗಳು ಮತ್ತು ಮೇಲ್ಛಾವಣಿಗಳಿಂದ ದೂರವಿರಿ.
ಈ. ಪರಮಾಣು ಬಾಂಬ್ ಸ್ಫೋಟದ ಸಮಯದಲ್ಲಿ ಉತ್ಪನ್ನವಾಗುವ ಬೆಳಕನ್ನು ನೋಡಲು ಅಥವಾ ಸದ್ದು ಕೇಳಲು ಕಿಟಕಿಯ ಬಳಿ ಹೋಗುವುದನ್ನು ತಪ್ಪಿಸಿ : ಪರಮಾಣು ಬಾಂಬ್ ಸ್ಫೋಟದ ಸಮಯದಲ್ಲಿ, ಪ್ರಚಂಡ ಪ್ರಮಾಣದಲ್ಲಿ ಕಣ್ಣು ಕುಕ್ಕುವ ಬೆಳಕು ಕಾಣಿಸಿ ನಂತರ ಭಾರಿ ಸದ್ದು ಕೇಳಿಬರುತ್ತದೆ. ಅಂತಹ ಬೆಳಕಿನ ಅರಿವಾದರೆ, ಕುತೂಹಲದಿಂದ ಕಿಟಕಿಯಿಂದ ಹೊರಗೆ ನೋಡಬೇಡಿ. ಶಾಕ್ ವೇವ್ಜ್ (ಸ್ಫೋಟದಿಂದ ಸೃಷ್ಟಿಯಾದ ಅತ್ಯಂತ ತೀವ್ರವಾದ ಒತ್ತಡದ ಗಾಳಿಯ ಅಲೆಗಳು) ಅಪ್ಪಳಿಸಿ ಜೀವಕ್ಕೆ ಕುತ್ತು ಉಂಟಾಗಬಹುದು. ಅಂತಹ ಸಂದರ್ಭಗಳಲ್ಲಿ ರಕ್ಷಣೆಗಾಗಿ, ಕೋಣೆಯಲ್ಲಿ ಬೀರು ಅಥವಾ ಅಂತಹುದೇ ಸ್ಥಳದ ಹಿಂದೆ ಅಡಗಿ ಕುಳಿತುಕೊಳ್ಳಬೇಕು. ಅಣುಬಾಂಬ್ ಸ್ಫೋಟದ ನಂತರ ಹೆಚ್ಚಿನ ಮನೆಗಳು ನೆಲಸಮವಾಗಲು ಇಂತಹ ಶಾಕ್ ವೇವ್ಜ್ ಕಾರಣವಾಗಿರುತ್ತವೆ.
ಉ. ಮನೆಯ ಎಲ್ಲ ಬಾಗಿಲು ಮತ್ತು ಕಿಟಕಿಗಳನ್ನು ಮುಚ್ಚಿ, ಅವುಗಳಲ್ಲಿನ ಸಣ್ಣ ಬಿರುಕು, ಸಂದುಗಳನ್ನು ಸಹ ಮುಚ್ಚಿ: ಪರಮಾಣು ಬಾಂಬ್ ಸ್ಫೋಟದ ಸಮಯದಲ್ಲಿ ನೀವು ಮನೆಯಲ್ಲಿದ್ದರೆ, (ನೀವು ಮನೆಯೊಳಗೇ ಇರಬೇಕಾದ ಪರಿಸ್ಥಿತಿ ಇದ್ದರೆ) ಹೊರಗಿನ ಗಾಳಿ ಅಥವಾ ಧೂಳು ಮನೆಯೊಳಗೆ ಬರದಂತೆ ತಡೆಯಲು ಬಾಗಿಲು, ಕಿಟಕಿಗಳನ್ನು ಭದ್ರವಾಗಿ ಮುಚ್ಚಬೇಕು. ಬಾಗಿಲುಗಳು, ಕಿಟಕಿಗಳು, ಗೋಡೆಗಳು ಮತ್ತು ನೆಲದಲ್ಲಿ ಬಿರುಕುಗಳು ಇದ್ದರೆ, ಅವುಗಳನ್ನು ಮುಚ್ಚಲು ಸೆಲ್ಲೋಟೇಪ್ ಇತ್ಯಾದಿಗಳನ್ನು ಬಳಸಬೇಕು.
ಊ. ನೀವು ವಾಹನದಲ್ಲಿದ್ದರೆ, ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ ಮಾಡಬೇಕಾದ ಕೃತಿ : ಸ್ಫೋಟದ ಸಮಯದಲ್ಲಿ ನೀವು ವಾಹನದಲ್ಲಿ ಕುಳಿತಿದ್ದರೆ, ಗಾಳಿಯಲ್ಲಿ ಹಾರುವ ಭಗ್ನಾವಶೇಷಗಳಿಂದ ಹಾಗೂ ಶಾಖದಿಂದ ರಕ್ಷಣೆ ಪಡೆಯಲು ವಾಹನವನ್ನು ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಿ. ಹತ್ತಿರದಲ್ಲಿ ಸುರಕ್ಷಿತ ಸ್ಥಳವನ್ನು ಹುಡುಕಿ ಮತ್ತು ಅಲ್ಲಿ ಅಡಗಿಕೊಳ್ಳಿ. ಸುರಕ್ಷಿತ ಸ್ಥಳವು ಸಿಗದಿದ್ದರೆ, ವಾಹನದಲ್ಲಿಯೇ ಕುಳಿತು ನಿಮ್ಮ ಕೈಗಳಿಂದ ಕುತ್ತಿಗೆ ಮತ್ತು ತಲೆಯನ್ನು ಮುಚ್ಚಿ. ನೀವು ಹೊರಗಿದ್ದರೆ, ಸಾಧ್ಯವಾದರೆ ನೆಲದ ಮೇಲೆ ಮುಖ ಕೆಳಗೆ ಮಾಡಿ ಮಲಗಿಕೊಳ್ಳಿ.
ಋ. ವಿಕಿರಣ ತಡೆಯಬಹುದಾ ವಸ್ತುಗಳ ಬಳಕೆ (ಉದಾ. ಸೀಸದ ಹಾಳೆಗಳು, ಕೆಮಿಕಲ್ ಪ್ರೊಟೆಕ್ಟಿವ್ ಮಾಸ್ಕ) : ಸೀಸ (lead), ಕಾಂಕ್ರೀಟ್ ಅಥವಾ ನೀರು ಗಾಮಾ ಕಿರಣ ಮತ್ತು ಎಕ್ಸರೆಗಳಿಂದ ರಕ್ಷಿಸುತ್ತವೆ. ಅಂದರೆ ವಿಕಿರಣಶೀಲ ವಸ್ತುಗಳನ್ನು ಇಡಲು ಸಾಮಾನ್ಯವಾಗಿ ನೀರೊಳಗೆ, ಕಾಂಕ್ರೀಟ್ ಅಥವಾ ಸೀಸದ ಪೆಟ್ಟಿಗೆ ಅಥವಾ ಕೋಣೆಗಳಲ್ಲಿ ಇಡಲಾಗುತ್ತದೆ. ಪರಮಾಣು ಬಾಂಬ್ ಸ್ಫೋಟಗೊಂಡ ನಂತರ ಸಂಭವಿಸುವ ವಿಕಿರಣದಿಂದ ರಕ್ಷಿಸಲು ಕಾಂಕ್ರೀಟ್ ಕಟ್ಟಡಗಳ ಮಧ್ಯದಲ್ಲಿ, ನೀರಿನ ಅಡಿಯಲ್ಲಿ ಅಥವಾ ನೀರಿನಿಂದ ತುಂಬಿದ ದೊಡ್ಡ ಪೀಪಾಯಿಯಲ್ಲಿ ಅಡಗಿ ಕುಳಿತುಕೊಳ್ಳಬಹುದು. ಸೀಸದ ಹಾಳೆಗಳನ್ನು ಸಹ ಬಳಸಬಹುದು. ಅಂದರೆ, ನಾಲ್ಕು ಬದಿಯಲ್ಲಿ ಮತ್ತು ಮೆಲೆ ಸೀಸದ ಹಾಳೆಗಳನ್ನು ಇಟ್ಟು ಅದರ ಮಧ್ಯದಲ್ಲಿ ಕುಳಿತುಕೊಳ್ಳಬಹುದು. ಈ ರೀತಿ ಯೋಗ್ಯವಾದ ಕವಚವನ್ನು ನಿರ್ಮಿಸಿದರೆ ವಿಕಿರಣಗಳಿಂದ ನಿಮ್ಮ ರಕ್ಷಣೆಯಾಗಬಹುದು. ಸಾಧ್ಯವಾದರೆ, ಕೆಮಿಕಲ್ ಪ್ರೊಟೆಕ್ಟಿವ್ ಮಾಸ್ಕ ಕೂಡ ಬಳಸಿ.
ಆಧಾರ :
1. www.remm.nlm.gov/nuclearexplosion.htm
2. www.remm.nlm.gov/RemmMockup_files/nuke_timeline.png
3. www.epa.gov/radiation/protecting-yourself-radiation
1 ಅ 1 ಅ 7. ಪರಮಾಣು ಬಾಂಬ್ ಸ್ಫೋಟದ ನಂತರ ವಿಕಿರಣದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತೆಗೆದುಕೊಳ್ಳಬೇಕಾದ ಕ್ರಮಗಳು
ಅ. ವಿಕಿರಣಶೀಲ ಧೂಳು ದೇಹದ ಮೇಲೆ ಬಿದ್ದಿದ್ದರೆ, ಅದನ್ನು ಆದಷ್ಟು ಬೇಗ ಒರೆಸಿಕೊಳ್ಳಬೇಕು ಅಥವಾ ಸ್ನಾನ ಮಾಡಬೇಕು : ಫಾಲ್‌ಔಟ್ ನಂತರ, ದೇಹದ ಮೇಲಿರುವ ಬಟ್ಟೆಗಳ ಮೇಲೆ ವಿಕಿರಣಶೀಲ ಧೂಳು ಇರಬಹುದು. ಅಂತಹ ಕಲುಷಿತ ಬಟ್ಟೆಗಳನ್ನು ನಿಧಾನವಾಗಿ ತೆಗೆಯಬೇಕು, ವಿಕಿರಣಶೀಲ ಧೂಳು ಎಲ್ಲಿಯೂ ಬೀಳದಂತೆ ಅಥವಾ ಎಲ್ಲೆಡೆ ಹರಡದಂತೆ ನೋಡಿಕೊಳ್ಳಬೇಕು. ಅಲ್ಲದೆ, ಬಟ್ಟೆಯಿಂದ ಮುಚ್ಚಿರದ ದೇಹದ ಭಾಗಗಳನ್ನು ಸ್ವಚ್ಛವಾದ ನೀರಿನಿಂದ ಒರೆಸಿಕೊಳ್ಳಬೇಕು ಅಥವಾ ಸ್ನಾನ ಮಾಡಿಕೊಳ್ಳಬೇಕು. ಎಷ್ಟು ಬೇಗ ಈ ಧೂಳು ನಿಮ್ಮ ದೇಹದಿಂದ ಬೇರ್ಪಡುತ್ತದೆಯೋ ಅಷ್ಟು ಒಳ್ಳೆಯದು. ತಕ್ಷಣ ಸ್ನಾನ ಮಾಡಲು ಸಾಧ್ಯವಾಗದಿದ್ದರೆ, ಸಾಧ್ಯವಾದಷ್ಟು ಬೇಗ ಕಾಗದ / ಒದ್ದೆ ಬಟ್ಟೆಯಿಂದ ಧೂಳನ್ನು ಒರೆಸಿ ನಂತರ ಸ್ನಾನ ಮಾಡಿ. ಜೋರಾಗಿ ಉಸಿರು ಬಿಟ್ಟು ಮೂಗಿನ ಹೊಳ್ಳೆಗಳನ್ನು ಸ್ವಚ್ಛ ಮಾಡಿ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ ಅವುಗಳನ್ನು ಅದೇ ರೀತಿಯಲ್ಲಿ ಸ್ವಚ್ಛಗೊಳಿಸಿ.
ಆ. ವಿಕಿರಣಶೀಲ ಧೂಳಿನಿಂದ ಕಲುಷಿತವಾದ ಬಟ್ಟೆ, ಪಾದರಕ್ಷೆಗಳು ಇತ್ಯಾದಿ ವಸ್ತುಗಳನ್ನು ಚೀಲದಲ್ಲಿ ಇಡುವುದು : ದೇಹದ ಮೇಲಿಂದ ತೆಗೆದ ಕಲುಷಿತ ಬಟ್ಟೆ, ವಸ್ತುಗಳು, ಪಾದರಕ್ಷೆಗಳು ಇತ್ಯಾದಿಗಳನ್ನು ಪ್ಲಾಸ್ಟಿಕ್ ಚೀಲದಲ್ಲಿ ಇರಿಸಿ ನಂತರ ವಿಕಿರಣ ಪರೀಕ್ಷೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು. ಅವರು ಆ ಬಟ್ಟೆಗಳನ್ನು ಸುರಕ್ಷಿತವಾಗಿವೆ ಎಂದು ಘೋಷಿಸದೆ ಅವುಗಳನ್ನು ಬಳಸಬಾರದು.
ಇ. ಕೂದಲು ತೊಳೆಯುವುದು : ಕೂದಲು ತೊಳೆಯಲು ಶಾಂಪೂ ಬಳಸಬಹುದು; ಆದರೆ ಕಂಡಿಷನರ್ ಅನ್ನು ಹಚ್ಚಬೇಡಿ; ಅದರಿಂದ ವಿಕಿರಣಶೀಲ ಧೂಳು ಕೂದಲಿಗೆ ಅಂಟಿಕೊಳ್ಳುತ್ತದೆ.
ಈ. ಎಲ್ಲ ಆಹಾರ ಪದಾರ್ಥಗಳನ್ನು ಮುಚ್ಚಿಡುವುದು : ಆಹಾರ, ನೀರು ಮತ್ತು ಇತರ ಉಪಯುಕ್ತ ವಸ್ತುಗಳನ್ನು ಮುಚ್ಚಿಡಬೇಕು. ಮುಚ್ಚಿದ ಆಹಾರವನ್ನು ಹೊರತುಪಡಿಸಿ ಬೇರೇನನ್ನೂ ತಿನ್ನಬೇಡಿ ಮತ್ತು ಸಾಕುಪ್ರಾಣಿಗಳಿಗೂ ಅದನ್ನು ನೀಡಬೇಡಿ. ತೆರೆದ ಬಾವಿಗಳು, ಕೊಳಗಳು, ಹಾಗೆಯೇ ತೆರೆದ ಆಹಾರ ಧಾನ್ಯಗಳು, ತರಕಾರಿಗಳು, ಹಾಲಿನಿಂದ ನೀರನ್ನು ಬಳಸಬಾರದು.
ಉ. ಪೊಟ್ಯಾಸಿಯಮ್ ಅಯೋಡೈಡ್ ಮಾತ್ರೆಗಳ ಬಳಕೆ : ತುರ್ತು ಪರಿಸ್ಥಿತಿಗಳಿಗೆ ಒಂದು ಕಿಟ್ ಹೊಂದಿಸಿಡಬೇಕು. ಸಾಧ್ಯವಾದರೆ, ಅದರಲ್ಲಿ ಪೊಟ್ಯಾಸಿಯಮ್ ಅಯೋಡೈಡ್ ಮಾತ್ರೆಗಳನ್ನು ಇಟ್ಟುಕೊಳ್ಳಿ. ವಿಪತ್ತಿನ ಸಮಯದಲ್ಲಿ ಆ ಮಾತ್ರೆಗಳನ್ನು ಹೇಗೆ ಬಳಸಬೇಕು ಎಂದು ಆಧುನಿಕ ವೈದ್ಯರಿಂದ ತಿಳಿದುಕೊಳ್ಳಿ. ಈ ಮಾತ್ರೆಗಳು ವಿಕಿರಣದ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ವಿದೇಶದಲ್ಲಿ ಪರಮಾಣು ರಿಯಾಕ್ಟರ್‌ಗಳ ಬಳಿ ವಾಸಿಸುವ ಜನರು ಇವುಗಳನ್ನು ಮನೆಯಲ್ಲಿಯೇ ಇಟ್ಟುಕೊಳ್ಳುತ್ತಾರೆ.
ಊ. ಕುಟುಂಬ ಮತ್ತು ಸಾಕುಪ್ರಾಣಿಗಳ ಆರೈಕೆ : ಪರಮಾಣು ಬಾಂಬ್ ಸ್ಫೋಟದ ಸಮಯದಲ್ಲಿ ಕುಟುಂಬಗಳು ಚದುರಿಹೋದರೆ, ಅವರು ಇದ್ದಲ್ಲಿಯೇ ಇರಬೇಕು, ಮುಂದೆ ಅಪಾಯಕಾರಿ ವಿಕಿರಣದ ಪ್ರಭಾವ ಕಡಿಮೆಯಾದ ನಂತರ ಮತ್ತೆ ಒಂದಾಗಬಹುದು ಎಂಬುದು ನೆನಪಿಟ್ಟುಕೊಳ್ಳಿ. ಮನೆಯಲ್ಲಿ ಸಾಕುಪ್ರಾಣಿಗಳಿದ್ದರೆ, ಅವುಗಳನ್ನು ಮನೆಯೊಳಗೆ ಅಥವಾ ಸುರಕ್ಷಿತ ಜಾಗದಲ್ಲಿ ಇರಿಸಿ.
ಋ. ಸರ್ಕಾರದ ಮುಂದಿನ ಸೂಚನೆ ಬರುವ ವರೆಗೂ ಸುರಕ್ಷಿತ ಜಾಗದಲ್ಲಿರುವುದು : ಪರಮಾಣು ಬಾಂಬ್ ಸ್ಫೋಟದ ನಂತರ ಮೊದಲ 24 ರಿಂದ 48 ಗಂಟೆಗಳ ಕಾಲ (ವಿಕಿರಣ ಅಪಾಯ ಅತಿ ಹೆಚ್ಚಿರುವಾಗ) ಅಥವಾ ಸ್ಥಳೀಯ ಆಡಳಿತದ ಸೂಚನೆಯಿಲ್ಲದೆ ಮನೆಯೊಳಗೆ, ದೊಡ್ಡ ಕಟ್ಟಡಗಳ ಮುಚ್ಚಿದ ಸುರಕ್ಷಿತ ಜಾಗದಲ್ಲಿರಬೇಕು. ಅಧಿಕಾರಿಗಳಿಂದ ಬರುವ ಪರಿಷ್ಕೃತ ಸೂಚನೆಗಳನ್ನು ಪಾಲಿಸಬೇಕು.
ಎ. ಸರ್ಕಾರದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು: ಕಟ್ಟಡವನ್ನು ಖಾಲಿ ಮಾಡಲು ಸರ್ಕಾರಿ ಅಧಿಕಾರಿಗಳು ಆದೇಶಿಸಿದರೆ (ಅಥವಾ ಅಧಿಕಾರಿಗಳು ನಿಮಗೆ ಸಲಹೆ ನೀಡಿದರೆ) ಮುಂದೆ ಏನು ಮಾಡಬೇಕು, ಎಲ್ಲಿಗೆ ಹೋಗಬೇಕು? ಎಲ್ಲಿ ಆಶ್ರಯವನ್ನು ಪಡೆಯಬೇಖು? ಅದರ ಪ್ರಕ್ರಿಯೆ ಏನು? ಇತ್ಯಾದಿ ಮಾಹಿತಿಯನ್ನು ಎಚ್ಚರಿಕೆಯಿಂದ ಆಲಿಸಬೇಕು. ಅದರಂತೆ ಸರ್ಕಾರದ ಸೂಚನೆಗಳ ಜೊತೆಗೆ ಮುಂದಿನ ಸೂಚನೆಗಳನ್ನು ಪಾಲಿಸಬೇಕು.
1. ಅನಗತ್ಯವಾಗಿ ಮನೆಯಿಂದ ಹೊರಗೆ ಹೋಗಬಾರದು.
2. ನೀವು ಕಟ್ಟಡವನ್ನು ಖಾಲಿ ಮಾಡಿದ್ದರೆ, ಸ್ಥಳೀಯ ಸರ್ಕಾರಿ ಅಧಿಕಾರಿಗಳು ಕಟ್ಟಡ ಸುರಕ್ಷಿತವೆಂದು ಘೋಷಿಸದೇ ಹಿಂತಿರುಗಬೇಡಿ.
3. ಪರಮಾಣು ಬಾಂಬ್ ಸ್ಫೋಟಗಳ ಅಧಿಕ ಒತ್ತಡದ ಅಲೆಗಳಲ್ಲಿ ಹಳೆಯ ಕಟ್ಟಡಗಳು, ಮರಗಳು ಇತ್ಯಾದಿಗಳು ಬೀಳುವ ಸಾಧ್ಯತೆಯಿರುವುದರಿಂದ ಅವುಗಳಿಂದ ದೂರವಿರಬೇಕು; ಏಕೆಂದರೆ ಅವು ಯಾವುದೇ ಸಮಯದಲ್ಲಿ ಬೀಳಬಹುದು.
ಏ. ರೇಡಿಯೋ, ಟೆಲಿವಿಷನ್, ಇತ್ಯಾದಿಗಳ ಮೂಲಕ ವಿಪತ್ತಿನ ಬಗ್ಗೆ ಮದ್ಯ-ಮಧ್ಯದಲ್ಲಿ ಮಾಹಿತಿಯನ್ನು ಪಡೆಯುವುದು : ಅಧಿಕೃತ ಮಾಹಿತಿಗಾಗಿ ರೇಡಿಯೋ, ಟೆಲಿವಿಷನ್, ಇತ್ಯಾದಿಗಳಲ್ಲಿ ಲಭ್ಯವಿರುವ ಯಾವುದೇ ಒಂದು ಮಾಧ್ಯಮದ ಮೂಲಕ ಅಗತ್ಯ ಮಾಹಿತಿಯನ್ನು ಪಡೆಯಬೇಕು. ಉದಾ. ಹೊರಗೆ ಹೋಗುವುದು ಸುರಕ್ಷಿತವೇ? ಅಥವಾ ಎಲ್ಲಿಗೆ ಹೋಗಬೇಕು?
(ಆಧಾರ : ndma.gov.in/images/pdf/pocketbook-do-dont.pdf)
1 ಅ 2. ಜಲಜನಕ (ಹೈಡ್ರೋಜನ್) ಬಾಂಬ್ ದಾಳಿಗಳು
ಇದು ಪರಮಾಣು ಬಾಂಬ್‌ಗಿಂತ ಸಾವಿರ ಪಟ್ಟು ಹೆಚ್ಚು ವಿನಾಶಕಾರಿ. ಅದರ ಶಕ್ತಿಯನ್ನು ಬೇಕಾದಷ್ಟು ಮಟ್ಟಕ್ಕೆ ಹೆಚ್ಚಿಸಬಹುದು, ಆದ್ದರಿಂದ ಜಲಜನಕ ಬಾಂಬ್ ಹೆಚ್ಚು ವಿನಾಶಕಾರಿಯಾಗಿದೆ. ಈ ಬಾಂಬ್ ಒಳಗೊಂದು ಪರಮಾಣು ಬಾಂಬ್ ಇರುತ್ತದೆ. ಮೊದಲು ಪರಮಾಣು ಬಾಂಬ್ ಸ್ಫೋಟಗೊಳ್ಳುತ್ತದೆ ಮತ್ತು ನಂತರ ಅದರ ಶಾಖದಿಂದ ಜಲಜನಕದ ಪರಮಾಣುಗಳ ನ್ಯೂಕ್ಲಿಯಸ್ ಪರಸ್ಪರ ಬೆಸೆದು ಅಪಾರ ಪ್ರಮಾಣದಲ್ಲಿ ಶಕ್ತಿ ಬಿಡುಗಡೆಯಾಗುತ್ತದೆ. ಈ ಸಂಲಯನ ಪ್ರಕ್ರಿಯೆಯನ್ನು ಫ್ಯೂಷನ್ ಎಂದು ಕರೆಯುತ್ತಾರೆ, ಆದ್ದರಿಂದ ಇದನ್ನು ಫ್ಯೂಷನ್ ಬಾಂಬ್ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಜಲಜನಕದ ಪರಮಾಣುಗಳ ಸಂಲಯನದಿಂದ ಒಂದು ಹೀಲಿಯಂ ಉತ್ಪನ್ನವಾಗುತ್ತದೆ.