ಕಳೆದ ಸತ್ಸಂಗದಲ್ಲಿ ನಾವು ದೇವರಿಗೆ ಪ್ರಾರ್ಥನೆಯನ್ನು ಮಾಡುವುದರ ಮಹತ್ವವನ್ನು ತಿಳಿದುಕೊಂಡೆವು. ಪ್ರಾರ್ಥನೆ ಮಾಡುವಾಗ ದೇವರಲ್ಲಿ ಏನನ್ನು ಬೇಡಬೇಕು, ಪ್ರಾರ್ಥನೆ ಮಾಡುವುದರ ಮಹತ್ವವನ್ನು ಗಮನದಲ್ಲಿರಿಸಿಕೊಂಡು ನಾವು ಆಧ್ಯಾತ್ಮಿಕ ಸ್ತರದ ಕೆಲವು ಪ್ರಾರ್ಥನೆಗಳ ಉದಾಹರಣೆಗಳನ್ನೂ ನೋಡಿದೆವು. ಹೆಚ್ಚು ಹೆಚ್ಚು ಪ್ರಾರ್ಥನೆಯಾಗಲು ಕೆಲವು ಪ್ರಯತ್ನಗಳನ್ನು ಮಾಡುವುದಾಗಿ ನಿರ್ಧರಿಸಿದ್ದೆವು. ಉದಾ. ಪ್ರಾರ್ಥನೆಯ ನೆನಪಾಗಲು ಮೊಬೈಲ್ ನಲ್ಲಿ ಅಲಾರ್ಮ್ ಹಾಕಿಡುವುದು. ಪ್ರಾರ್ಥನೆಯ ಕಾಗದವನ್ನು ಕಣ್ಣಿಗೆ ಕಾಣುವ ಜಾಗದಲ್ಲಿ ಗೋಡೆಗೆ ಅಂಟಿಸಿಡುವುದು ಇತ್ಯಾದಿ.
ಹಿಂದಿನ ಸತ್ಸಂಗದಲ್ಲಿ ನಾವು ದೈನಂದಿನ ಕೃತಿಗಳನ್ನು ಮಾಡುತ್ತಿರುವಾಗ ಆಧ್ಯಾತ್ಮಿಕ ಸ್ತರದಲ್ಲಿ ನಾವು ಯಾವ ಪ್ರಾರ್ಥನೆಗಳನ್ನು ಮಾಡಬಹುದು ಎಂದು ತಿಳಿದುಕೊಂಡೆವು. ಇಂದು ನಾವು ಪ್ರಾರ್ಥನೆಗೆ ಸೇರಿಕೊಂಡೇ ಬರುವ ಕೃತಜ್ಞತೆಯ ವಿಷಯವನ್ನು ತಿಳಿದುಕೊಳ್ಳೋಣ. ಕೃತಜ್ಞತೆಯ ಸುಲಭವಾದ ಅರ್ಥ ಏನೆಂದರೆ ಆಭಾರ ಮನ್ನಣೆ (ಧನ್ಯವಾದ ಸಲ್ಲಿಸುವುದು). ವ್ಯವಹಾರದಲ್ಲಿ ನಮಗೆ ಯಾರಾದರೂ ಏನಾದರೂ ಸಹಾಯ ಮಾಡಿದರೆ ನಾವು ಅವರಿಗೆ ಧನ್ಯವಾದ ಹೇಳುತ್ತೇವೆ. ಹಾಗೆಯೇ ಅಧ್ಯಾತ್ಮದಲ್ಲಿಯೂ ಈಶ್ವರನು ನಮ್ಮ ಮೇಲಿಟ್ಟಿರುವ ಕೃಪೆಯ ಬಗ್ಗೆ ಆಭಾರ ಸಲ್ಲಿಸುವುದು ಅಂದರೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದು ಎಂದಾಗಿದೆ. ಸಾಮಾನ್ಯವಾಗಿ ಯಾವುದಾದರೊಂದು ಸಮಸ್ಯೆಯಿಂದ ನಾವು ಹೊರ ಬಂದೆವು ಅಥವಾ ದೊಡ್ಡ ಸಂಕಟದಿಂದ ಪಾರಾದೆವು ಆಗ ನಾವು ಈಶ್ವರನ ಕೃಪೆಯಿಂದಾಯಿತು ಎನ್ನುತ್ತೇವೆ. ಆದರೆ ಪ್ರತ್ಯಕ್ಷವಾಗಿ ನೋಡಿದರೆ ಕೇವಲ ಸಂಕಟದ ಸಮಯದಲ್ಲಿ ಮಾತ್ರವಲ್ಲ, ಪ್ರತಿಯೊಂದು ಕ್ಷಣದಲ್ಲಿಯೂ ಪರಮ ದಯಾಮಯ ಈಶ್ವರನು ಪ್ರಾಣಿಮಾತ್ರರ ಮೇಲೆ ಕೃಪೆ ಮಾಡುತ್ತಿರುತ್ತಾನೆ. ಕೇವಲ ಅದನ್ನು ನೋಡುವಲ್ಲಿ ನಾವು ಕಡಿಮೆ ಬೀಳುತ್ತದೆ. ಈಶ್ವರನು ಎಂದೂ ಯಾರಿಗೂ ಅಹಿತವನ್ನುಂಟು ಮಾಡುವುದಿಲ್ಲ! ಒಂದುವೇಳೆ ನಮ್ಮ ಮೇಲೆ ಏನಾದರೂ ಸಂಕಟ ಬಂದಲ್ಲಿ ಅಥವಾ ದುಃಖವು ಬಂದಲ್ಲಿ ಅವೆಲ್ಲವೂ ನಮ್ಮ ಪೂರ್ವಜನ್ಮದ ಕರ್ಮಗಳ ಫಲವಾಗಿರುತ್ತದೆ (ಪ್ರಾರಬ್ಧವಾಗಿರುತ್ತದೆ). ದೇವರು ಅದನ್ನು ನಮ್ಮಿಂದ ಭೋಗಿಸುವಂತೆ ಮಾಡಿ, ನಮ್ಮ ಪ್ರಾರಬ್ಧವನ್ನು ಕಡಿಮೆ ಮಾಡಿ, ನಾವು ಸಾಧನೆಯನ್ನು ಮಾಡುತ್ತಿದ್ದರೆ ನಮ್ಮ ಪ್ರಾರಬ್ಧ ಸಹ ಸುಸಹ್ಯಗೊಳಿಸುತ್ತಾನೆ.
ಕೃತಜ್ಞತೆ ಅಂದರೆ ಏನು?
ಸೃಷ್ಟಿಯ ನಿರ್ಮಾತೃ ಅಂದರೆ ಈಶ್ವರ. ನಾವು ಈಶ್ವರನು ನಿರ್ಮಿಸಿರುವ ಈ ಸೃಷ್ಟಿಯ ಒಂದು ಘಟಕವಾಗಿದ್ದೇವೆ. ಈಶ್ವರನ ವಿಷಯದಲ್ಲಿ ಅಥವಾ ಈಶ್ವರನ ಯಾವುದೇ ಸ್ವರೂಪದ ವಿಷಯದಲ್ಲಿ ಅರಿವು ಇರುವುದು ಮತ್ತು ಈ ಅರಿವಿನಿಂದಲೇ ಸರ್ವ ಶ್ರೇಯಸ್ಸನ್ನು ಈಶ್ವರನಿಗೆ ಅರ್ಪಿಸುವುದಕ್ಕೆ ಕೃತಜ್ಞತೆ ಎನ್ನುತ್ತಾರೆ. ಉದಾ. ನಮಗೆ ಪ್ರತಿದಿನ ಸೂರ್ಯನಿಂದ ಬೆಳಕು ಸಿಗುತ್ತದೆ. ನಿಸರ್ಗಚಕ್ರಕ್ಕನುಸಾರ ಮಳೆ ಬಿದ್ದು ನಮಗೆ ನೀರು ಲಭ್ಯವಾಗುತ್ತದೆ. ನಾವು ತಿನ್ನುವ ಆಹಾರವು ಜೀರ್ಣವಾಗಿ ಅದರಿಂದ ಶಕ್ತಿ ಸಿಗುತ್ತದೆ. ನಿದ್ದೆಯಿಂದ ನಮಗೆ ಬೆಳಗ್ಗೆ ಎಚ್ಚರವಾಗುತ್ತದೆ. ಇದೆಲ್ಲವನ್ನೂ ಯಾರು ಮಾಡುತ್ತಿರುತ್ತಾರೆ? ಮಾಡುವವನು ಮತ್ತು ಮಾಡಿಸುವವನು ಈಶ್ವರನೇ. ನಮ್ಮ ಉಸಿರಾಟ ನಡೆಯುತ್ತದೆ. ನಮ್ಮ ದೇಹದಲ್ಲಿರುವ ಚೈತನ್ಯ ಕಾರ್ಯನಿರತವಿರುವುದು, ದೇಹದಿಂದ ನಡೆದಾಟ, ಮಾತುಕತೆ, ಬುದ್ಧಿಯಿಂದ ವಿಚಾರ ಮಾಡುವುದು, ಕಣ್ಣುಗಳು ಮಿಟುಕುವುದು, ಇವೆಲ್ಲವೂ ನಾವು ಏನೂ ಮಾಡದೇ ಅಹೋರಾತ್ರಿ ನಡೆಯುತ್ತಿರುತ್ತವೆ. ಇದು ದೇವರಿಗೆ ನಮ್ಮ ಮೇಲಿರುವ ಕೃಪೆ ಅಲ್ಲದೇ ಮತ್ತಿನ್ನೇನು? ಇವೆಲ್ಲವುಗಳ ಅರಿವನ್ನು ಇಟ್ಟುಕೊಂಡು ನಾವು ಈಶ್ವರನ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು.
ಭಾವಜಾಗೃತಿಯ ದೃಷ್ಟಿಯಿಂದ ಕೃತಜ್ಞತೆಯ ಮಹತ್ವ
ಭಾವಜಾಗೃತಿಯ ದೃಷ್ಟಿಯಿಂದ ಕೃತಜ್ಞತೆ ಸಲ್ಲಿಸುವುದಕ್ಕೆ ಬಹಳ ಮಹತ್ವವಿದೆ. ನಮ್ಮಲ್ಲಿ ಹೆಚ್ಚಿನ ಜನರು ಭಕ್ತಿಮಾರ್ಗಿಗಳಾಗಿದ್ದೇವೆ. ಭಕ್ತಿಮಾರ್ಗದಲ್ಲಿ ದೇವರ ಬಗ್ಗೆ ಭಾವಕ್ಕೆ ಅಪಾರ ಮಹತ್ವವಿದೆ. ‘ಭಾವವಿದ್ದಲ್ಲಿ ದೇವರು’ ಎಂದು ಹೇಳಲಾಗುತ್ತದೆ. ಹೀಗಿದ್ದರೂ ಪ್ರತಿಯೊಂದು ಕ್ಷಣ ಭಾವಾವಸ್ಥೆಯಲ್ಲಿರುವುದು ಅಥವಾ ಭಾವಜಾಗೃತಿಯಾಗುವುದು ಇಂದಿನ ಕಾಲದಲ್ಲಿ ಬಹಳ ಕಠಿಣವಾಗಿದೆ. ಏಕೆಂದರೆ ನಮ್ಮಲ್ಲಿ ಹೆಚ್ಚಿನವರಲ್ಲಿ ಹೆಚ್ಚುಕಡಿಮೆ ಪ್ರಮಾಣದಲ್ಲಿ ಸ್ವಭಾವದೋಷ ಮತ್ತು ಅಹಂಗಳ ಗಂಟು ಇದೆ. ಅದು ಎಲ್ಲಿಯವರೆಗೆ ಇರುತ್ತದೆಯೋ ಅಲ್ಲಿಯ ವರೆಗೆ ದೇವರ ಅಸ್ತಿತ್ವವನ್ನು ಸಾತತ್ಯದಿಂದ ಅನುಭವಿಸಲು ಆಗುವುದಿಲ್ಲ. ಇಂತಹ ಸಮಯದಲ್ಲಿ ಏನು ಮಾಡಬೇಕು ಎಂಬುದಕ್ಕೆ ಸುಲಭವಾದ ಉಪಾಯವೆಂದರೆ ಕೃತಜ್ಞತಾ ಭಾವದಲ್ಲಿರುವುದು! ಕೃತಜ್ಞತಾ ಭಾವದಲ್ಲಿದ್ದೊಡನೆ ನಮ್ಮ ದೃಷ್ಟಿಯೇ ಭಾವಮಯ ಮತ್ತು ಸಕಾರಾತ್ಮಕವಾಗುತ್ತದೆ.
ಕೃತಜ್ಞತಾಭಾವವನ್ನು ಹೇಗೆ ನಿರ್ಮಿಸುವುದು?
ಈಗ ಮಹತ್ವದ ಅಂಶವೇನೆಂದರೆ ಕೃತಜ್ಞತಾಭಾವವನ್ನು ಹೇಗೆ ನಿರ್ಮಿಸುವುದು? ಅಥವಾ ಕೃತಜ್ಞತಾಭಾವವನ್ನು ಹೆಚ್ಚಿಸುವುದು ಹೇಗೆ? ಅದಕ್ಕಾಗಿ ಒಂದು ಸರಳ ಪ್ರಯತ್ನವನ್ನು ಮಾಡಬೇಕು – ಪ್ರತಿಯೊಂದು ಕೃತಿಯಾದ ನಂತರ ಅದನ್ನು ದೇವರ ಚರಣಗಳಿಗೆ ಅರ್ಪಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಪ್ರತಿಯೊಂದು ಒಳ್ಳೆಯ ವಿಷಯದ ಶ್ರೇಯಸ್ಸನ್ನು ದೇವರಿಗೆ ಅರ್ಪಿಸಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು. ಯಾವುದಾದರೊಂದು ವಿಷಯ ಚೆನ್ನಾಗಿ ಆಯಿತು ಮತ್ತು ಯಾರಾದರೂ ನಮ್ಮನ್ನು ಹೊಗಳಿದರು ಎಂದರೆ ನಮಗೆ ಏನು ಅನಿಸುತ್ತದೆ? ನಮ್ಮ ವಿಚಾರಪ್ರಕ್ರಿಯೆ ಹೇಗೆ ಇರುತ್ತದೆ? ನಾವು ಮಾಡಿದ ಅಡುಗೆಯು ಅತ್ಯಂತ ರುಚಿಕರವಾಯಿತಯ ಮತ್ತು ಕುಟುಂಬದವರು ಅದನ್ನು ತುಂಬಾ ಹೊಗಳಿದರು ಆಗ ನಮಗೆ ಏನು ಅನಿಸುತ್ತದೆ? ಯಾರಾದರೂ ನಮ್ಮನ್ನು ಹೊಗಳಿದರೆ ನಮ್ಮ ಮನಸ್ಸಿಗೆ ಸುಖವೆನಿಸುತ್ತದೆ. ನಮಗೆ ಒಳ್ಳೆಯದೆನಿಸುತ್ತದೆ ಮತ್ತು ನನ್ನಿಂದಾಗಿ ಅದು ಚೆನ್ನಾಗಿ ಆಯಿತು ಎಂದು ಅನಿಸುತ್ತದೆ. ಅಲ್ವೇ? ಇಲ್ಲಿ ನಮ್ಮ ವಿಚಾರಗಳ ದಿಶೆಯನ್ನು ಹೇಗಿಟ್ಟುಕೊಳ್ಳಬೇಕು ಎಂದರೆ ದೇವರು ನನ್ನಿಂದ ಈ ಕೃತಿಯನ್ನು ಮಾಡಿಸಿಕೊಂಡರು. ಒಳ್ಳೆಯ ಅಡುಗೆಯನ್ನು ಮಾಡಲು ದೇವರು ಆವಶ್ಯಕವಿರುವ ಎಲ್ಲ ವಸ್ತುಗಳನ್ನು ಒದಗಿಸಿಕೊಟ್ಟರು. ಗ್ಯಾಸ್ (ಅಡುಗೆ ಅನಿಲ) ನೀಡಿದರು. ಎಲ್ಲ ಘಟಕಗಳನ್ನು ಯೊಗ್ಯ ಪ್ರಮಾಣದಲ್ಲಿ ಹಾಕಿಸಿದರು. ನನ್ನ ಮನಸ್ಸಿನ ಸ್ಥಿತಿಯನ್ನು ಚೆನ್ನಾಗಿರಿಸಿ, ನನಗೆ ಅಡುಗೆ ಮಾಡಲು ಶಕ್ತಿಯನ್ನು ನೀಡಿದ್ದರಿಂದ ಅಡುಗೆಯು ಚೆನ್ನಾಗಿ ಆಗಲು ಸಾಧ್ಯವಾಯಿತು. ಇಂತಹ ವಿಚಾರಪ್ರಕ್ರಿಯೆ ಆದಲ್ಲಿ ಅಡುಗೆ ಚೆನ್ನಾಗಿ ಆದದ್ದು ಸಹ ದೇವರ ಕೃಪೆಯೇ ಎಂದು ಗಮನಕ್ಕೆ ಬರುತ್ತದೆ ಮತ್ತು ದೇವರಲ್ಲಿ ಕೃತಜ್ಞತೆ ವ್ಯಕ್ತವಾಗುತ್ತದೆ. ಎಲ್ಲಿ ಒಂದು ಮರದ ಎಲೆ ಸಹ ದೇವರ ಇಚ್ಛೆಯಿಲ್ಲದೇ ಅಲುಗಾಡಲಾರದೋ ಅಲ್ಲಿ ನಮ್ಮಿಂದಾಗಿ ಏನೋ ಆಯಿತು ಎಂದು ತಿಳಿದುಕೊಳ್ಳುವುದು ಅವಿವೇಕ ಅಲ್ಲವೇ?
ಕೃತಜ್ಞತೆಯನ್ನು ವ್ಯಕ್ತಪಡಿಸುವುದರ ಮಹತ್ವ
ಕೃತಜ್ಞತೆಯನ್ನು ವ್ಯಕ್ತಪಡಿಸುವುದರ ಮಹತ್ವವೇನು? ಕೃತಜ್ಞತೆಯನ್ನು ವ್ಯಕ್ತಪಡಿಸುವುದರಿಂದ ನಮ್ಮ ಅಹಂಭಾವ ಕಡಿಮೆಯಾಗುತ್ತದೆ. ಏಕೆಂದರೆ ಜೀವನದಲ್ಲಿ ಘಟಿಸುವ ಪ್ರತಿಯೊಂದು ಕೃತಿಯ ಸಂಪೂರ್ಣ ಶ್ರೇಯಸ್ಸನ್ನು ಈಶ್ವರ ಅಥವಾ ಗುರುಗಳಿಗೆ ನೀಡಲಾಗುತ್ತದೆ. ಎಲ್ಲವನ್ನೂ ದೇವರೇ ಮಾಡಿಸಿಕೊಳ್ಳುತ್ತಿದ್ದಾರೆ, ಪ್ರತಿಯೊಂದು ಒಳ್ಳೆಯ ಮತ್ತು ಕೆಟ್ಟ ಪ್ರಸಂಗವು ನನಗೆ ಏನೋ ಕಲಿಯಲಿಕ್ಕಾಗಿ ಮತ್ತು ಸಾಧನೆಯಲ್ಲಿ ನನ್ನ ಪ್ರಗತಿಯಾಗಬೇಕೆಂದೇ ಘಟಿಸುತ್ತಿದೆ ಎಂಬ ಭಾವ ಮೂಡುತ್ತದೆ. ಕೃತಜ್ಞತೆಯಲ್ಲಿ ಕರ್ಮದ ಫಲವನ್ನು ಈಶ್ವರನಿಗೆ ಅರ್ಪಿಸುತ್ತೇವೆ. ಕರ್ಮಫಲ ತ್ಯಾಗವಾಗುವುದರಿಂದ ನಮ್ಮಿಂದಾಗುವ ಕರ್ಮವು ಅಕರ್ಮಕರ್ಮವಾಗುತ್ತದೆ. ಅಂದರೆ ಕರ್ಮವನ್ನು ದೇವರಿಗೆ ಅರ್ಪಿಸುವುದರಿಂದ ಅದರಿಂದ ಪಾಪ-ಪುಣ್ಯ ಅಥವಾ ಕೊಡಕೊಳ್ಳುವಿಕೆಯ ಲೆಕ್ಕಾಚಾರ ಉಂಟಾಗುವುದಿಲ್ಲ.
ಕೃತಜ್ಞತಾಭಾವದಲ್ಲಿರುವುದರ ಲಾಭಗಳು
ಸತತ ಕೃತಜ್ಞತಾಭಾವದಲ್ಲಿ ಇರುವುದರಿಂದ ಆಧ್ಯಾತ್ಮಿಕ ಸ್ತರದಲ್ಲಿಯೂ ಬಹಳ ಲಾಭವಾಗುತ್ತದೆ. ನಮಗೆ ದೇವರ ಮೇಲಿನ ಶ್ರದ್ಧೆ ಹೆಚ್ಚಾಗುತ್ತದೆ. ಮನಸ್ಸಿನ ವಿರುದ್ಧ ಘಟಿಸುವ ಪ್ರಸಂಗಗಳಲ್ಲಿ ಮನಸ್ಸಿನ ಸ್ಥಿರತೆ ಹೆಚ್ಚಾಗುತ್ತದೆ. ಸಾಧನೆಯ ಪ್ರಯತ್ನಗಳಲ್ಲಿ ಸಾತತ್ಯ ಬರುತ್ತದೆ ಮತ್ತು ಜಿಗುಟುತನ ಹೆಚ್ಚಾಗಿ ಪ್ರಯತ್ನಗಳಿಗೆ ವೇಗ ಸಿಗುತ್ತದೆ. ದೇವರು ನೀಡುತ್ತಿರುವ ಪ್ರತಿಯೊಂದು ಕ್ಷಣದಿಂದ ಆನಂದವನ್ನು ಪಡೆಯಲು ಸಾಧ್ಯವಾಗುತ್ತದೆ.
ಕೃತಜ್ಞತೆಯ ಕೆಲವು ಉದಾಹರಣೆಗಳು
ಕೃತಜ್ಞತೆಯಲ್ಲಿರುವ ಆನಂದವನ್ನು ಸಾತತ್ಯದಿಂದ ಪಡೆಯಲು ಆರಂಭಿಕ ಹಂತದಲ್ಲಿ ದೇವರ ಕೃಪೆಯ ಮತ್ತು ಅವರ ಅಸ್ತಿತ್ವದ ಅರಿವು ಇಟ್ಟುಕೊಟ್ಟಲು ಪ್ರಯತ್ನಪೂರ್ವಕವಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಅಂದರೆ ಹೇಗೆ ಮಾಡಬಹುದು?
– ಬೆಳಗ್ಗೆ ಎದ್ದ ತಕ್ಷಣ ದೇವಾ, ನಿನ್ನ ಕೃಪೆಯಿಂದ ಎಚ್ಚರವಾಯಿತು ಮತ್ತು ಸಾಧನೆಗಾಗಿ ಹೊಸ ದಿನ ಸಿಕ್ಕಿತು. ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ಊಟ, ತಿಂಡಿ ಮಾಡಿಯಾದ ನಂತರ ದೇವಾ, ನಿನ್ನ ಕೃಪೆಯಿಂದ ಇಂದು ಆಹಾರ ಸಿಕ್ಕಿತು, ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ಅಡುಗೆಯಾದ ನಂತರ – ಹೇ ಅನ್ನಪೂರ್ಣಾ ದೇವಿ, ನಿನ್ನ ಕೃಪೆಯಿಂದ ಇಂದು ಅಡುಗೆ ಮಾಡಲು ಸಾಧ್ಯವಾಯಿತು. ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ದೇವಾ ನೀನು ನಾಮಜಪಿಸಲು ನೆನಪು ಮಾಡಿಕೊಟ್ಟು ನಾಮಜಪ ಮಾಡಿಸಿಕೊಂಡೆ, ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ನಮ್ಮ ಮನಸ್ಸಿನ ಸ್ಥಿತಿ ಉತ್ತಮ ಹಾಗೂ ಆನಂದಿಯಾಗಿದ್ದರೆ – ದೇವಾ, ನಿನ್ನ ಕೃಪೆಯಿಂದ ಎಲ್ಲವೂ ಸುಲಲಿತವಾಗಿ ನಡೆಯುತ್ತಿದೆ. ಮನಸ್ಸು ಆನಂದದಿಂದಿದೆ ಅದಕ್ಕಾಗಿ ನಿನ್ನ ಚರಣಗಳಲ್ಲಿ ಕೃತಜ್ಞನಾಗಿದ್ದೇನೆ.
– ಸಾಧನೆ ತಿಳಿದ ಬಗ್ಗೆ ಕೃತಜ್ಞರಾಗಿರಬಹುದು. ಮನುಷ್ಯಜನ್ಮದ ನಿಜವಾದ ಸಾರ್ಥಕತೆಯು ಮೋಕ್ಷಪ್ರಾಪ್ತಿ ಮಾಡಿಕೊಳ್ಳುವುದರಲ್ಲಿದೆ. ಜಗತ್ತಿನಲ್ಲಿ ೭೦೦ ಕೋಟಿ ಜನರಿದ್ದಾರೆ. ಅದರಲ್ಲಿ ಅನೇಕ ಜನರು ಈ ಭೌತಿಕ ಜಗತ್ತನ್ನೇ ಅಂತಿಮ ಸತ್ಯವೆಂದು ತಿಳಿದು ಜೀವಿಸುತ್ತಿದ್ದಾರೆ, ಆದರೆ ಇಷ್ಟೆಲ್ಲ ಜನರಲ್ಲಿ ದೇವರು ನನ್ನನ್ನು ಸಾಧನೆಯ ಪಥದಲ್ಲಿ ತಂದಿದ್ದಾನೆ, ಸಾಧನೆಯ ರುಚಿಯನ್ನು ಮೂಡಿಸಿದ್ದಾನೆ. ಇದನ್ನೆಲ್ಲ ಗಮನಕ್ಕೆ ತೆಗೆದುಕೊಂಡರೆ ನಾವು ಭಾಗ್ಯವಂತರಾಗಿದ್ದೇವೆ ಎಂದು ಅನಿಸುತ್ತದೆ ಅಲ್ಲವೇ? ಈ ವಿಚಾರಗಳಿಂದ ಮನಸ್ಸಿನಲ್ಲಿ ಸತತ ಕೃತಜ್ಞತಾಭಾವವು ಉಂಟಾಗಬಲ್ಲದು.
ಕೃತಜ್ಞತಾಭಾವದ ಪರಿಣಾಮ
ಕೃತಜ್ಞತೆಯನ್ನು ವ್ಯಕ್ತಪಡಿಸಲು ದೇವರ ಎದುರು ನಿಂತುಕೊಳ್ಳುವ ಆವಶ್ಯಕತೆಯಿಲ್ಲ. ನಾವು ಕೃತಿಯಾದ ನಂತರ ಎಲ್ಲಿದ್ದೇವೆಯೋ ಅದೇ ಜಾಗದಿಂದ ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಸ್ನಾನಕ್ಕಾಗಿ ಸಿಗುವ ನೀರು, ನಾವು ಧರಿಸುತ್ತಿರುವ ಬಟ್ಟೆ, ಚಪ್ಪಲಿ, ನಮಗೆ ಸಿಕ್ಕಿರುವ ಮೊಬೈಲ್, ಒಳ್ಳೆಯ ಕುಟುಂಬ, ಸಹಾಯ ಮಾಡುವ ಮಿತ್ರರು, ನಮ್ಮ ಕೈಕಾಲುಗಳು, ಅವಯವಗಳು ಇವೆಲ್ಲವುಗಳಿಗೆ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು. ಆರಂಭಿಕ ಹಂತದಲ್ಲಿ ನಮಗೆ ಕೃತಜ್ಞತೆಯನ್ನು ಶಬ್ದಗಳಲ್ಲಿ ವ್ಯಕ್ತಪಡಿಸುತ್ತಿದ್ದೇನೆ ಆದರೆ ಅದು ಯಾಂತ್ರಿಕ ಪದ್ಧತಿಯಲ್ಲಾಗುತ್ತಿದೆ ಎಂದು ಅನಿಸಬಹುದು. ಆದರೆ ಅದರ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಆರಂಭದಲ್ಲಿ ಮನಸ್ಸಿಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವ ಅಭ್ಯಾಸ ಮಾಡಿಸಬೇಕಾಗುತ್ತದೆ. ಒಂದು ಸಲ ಕೃತಜ್ಞತೆಯ ಸಂಸ್ಕಾರವು ಮನಸ್ಸಿನಲ್ಲಿ ಮೂಡಿತೆಂದರೆ 5-6 ವಾರಗಳಲ್ಲಿಯೇ ಕೃತಜ್ಞತಾಭಾವ ಮೂಡಲು ಆರಂಭವಾಗುತ್ತದೆ. ಮುಂದೆಮುಂದೆ ಆ ಭಾವವು ಹೆಚ್ಚಾಗುತ್ತಾ ಹೋಗುತ್ತದೆ. ಹಾಗಾಗಿ ಸಾಧನೆಯಲ್ಲಿ ಪ್ರಗತಿಯಾಗತೊಡಗುತ್ತದೆ. ಕೃತಜ್ಞತಾಭಾವವು ಮೂಡಿತೆಂದರೆ ಕೃತಿಯನ್ನು ಮಾಡುವ ಮೊದಲು ಕೃತಿಯಾದ ನಂತರ ಈಶ್ವರೇಚ್ಛೆಯಿಂದಲೇ ಎಲ್ಲವೂ ಆಗುತ್ತದೆ. ದೇವರೇ ಎಲ್ಲವನ್ನೂ ಮಾಡುತ್ತಾರೆ ಎಂಬ ಅರಿವು ಸತತವಾಗಿ ಆಗುತ್ತಿರುತ್ತದೆ. ಯಾವುದಾದರೊಂದು ವಿಷಯವು ಮನಸ್ಸಿನಂತೆ ಆಗದಿದ್ದರೆ, ಸಿಗದಿದ್ದರೆ, ಸಂಕಟ ಬಂದರೆ ಅದರಲ್ಲಿಯೂ ದೇವರ ಕೃಪೆಯನ್ನೇ ಅನುಭವಿಸಲು ಸಾಧ್ಯವಾಗುತ್ತದೆ ಮತ್ತು ಆನಂದದಲ್ಲಿರಲು ಸಾಧ್ಯವಾಗುತ್ತದೆ.
ಧ್ಯೇಯ
ದಿನವಿಡೀ 15 ಬಾರಿ ಕೃತಜ್ಞತೆಯನ್ನು ವ್ಯಕ್ತಪಡಿಸುವುದು
ನಾವು ಈ ವಾರದಲ್ಲಿ ಕೃತಿಯ ಸ್ತರದಲ್ಲಿ ಮಾಡಬೇಕಾಗಿರುವ ಪ್ರಯತ್ನ ಏನೆಂದರೆ ನಮಗೆ ಯಾವೆಲ್ಲ ವಿಷಯಗಳ ಬಗ್ಗೆ ಕೃತಜ್ಞತೆ ಅನಿಸುತ್ತದೆ ಅಥವಾ ಎಲ್ಲೆಲ್ಲಿ ನಾವು ಕೃತಜ್ಞತೆಯನ್ನು ವ್ಯಕ್ತಪಡಿಸಬಹುದು ಎಂದು ಒಂದು ಪುಸ್ತಕದಲ್ಲಿ ಬರೆದು ತೆಗೆಯಬೇಕು ಮತ್ತು ದಿನವಿಡೀ ಕಡಿಮೆ ಪಕ್ಷ 15 ಸಲ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಒಂದುವೇಳೆ ಏನೂ ಹೊಳೆಯದಿದ್ದರೆ ದೇವಾ ನಿನಗೆ ಕೃತಜ್ಞನಾಗಿದ್ದೇನೆ ಎಂದಾದರೂ ಹೇಳಬಹುದು. ನಾವು ಎಷ್ಟು ಹೆಚ್ಚು ಕೃತಜ್ಞತಾಭಾವದಲ್ಲಿರಲು ಪ್ರಯತ್ನಿಸುತ್ತೇವೆಯೋ ಅಷ್ಟು ನಮ್ಮ ಮನಸ್ಸು ಶಾಂತ, ಆನಂದಿ ಮತ್ತು ಸಕಾರಾತ್ಮಕವಾಗುತ್ತಿರುವುದು ನಮಗೆ ಗೊತ್ತಾಗುತ್ತದೆ. ಹಾಗಾದರೆ ಈ ವಾರದಲ್ಲಿ ನಾವು ಅದೇ ರೀತಿ ಪ್ರಯತ್ನಿಸಬಹುದಲ್ಲ ?
ಇಂದಿನ ಸತ್ಸಂಗದಲ್ಲಿ ನಾವು ಕೃತಜ್ಞತೆ ಎಂದರೇನು, ಭಾವಜಾಗೃತಿಯ ದೃಷ್ಟಿಯಿಂದ ಕೃತಜ್ಞತೆಯ ಮಹತ್ವ, ಕೃತಜ್ಞತಾಭಾವವನ್ನು ಹೇಗೆ ನಿರ್ಮಿಸಬೇಕು, ಕೃತಜ್ಞತೆಯನ್ನು ವ್ಯಕ್ತಪಡಿಸುವುದರ ಮಹತ್ವ, ಕೃತಜ್ಞತಾಭಾವದಲ್ಲಿ ಇರುವುದರಿಂದ ಆಗುವ ಲಾಭ, ಕೃತಜ್ಞತೆಯ ಕೆಲವು ಉದಾಹರಣೆಗಳು ಮತ್ತು ಕೃತಜ್ಞತಾಭಾವದ ಪರಿಣಾಮ ಮುಂತಾದ ಅಂಶಗಳನ್ನು ತಿಳಿದುಕೊಂಡೆವು. ಕಳೆದ ವಾರದಿಂದ ನಾವು ಪ್ರಾರ್ಥನೆಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ. ಈ ವಾರದಲ್ಲಿ ನಾವು ಪ್ರಾರ್ಥನೆಗೆ ಕೃತಜ್ಞತೆಯನ್ನು ಜೋಡಿಸೋಣ. ಈ ವಾರಕ್ಕಾಗಿ ನಾವು ದಿನವಿಡೀ 15 ಸಲ ಆದರೂ ಕೃತಜ್ಞತೆಯನ್ನು ವ್ಯಕ್ತಪಡಿಸುವ ಧ್ಯೇಯವನ್ನು ಇಟ್ಟುಕೊಳ್ಳೋಣ.
ಮುಂದಿನ ವಾರ ನಾವು ಸತ್ಸಂಗ ಎಂದರೇನು, ಸಾಧನೆಯ ದೃಷ್ಟಿಯಿಂದ ಸತ್ಸಂಗದ ಮಹತ್ವ ಮುಂತಾದ ವಿಷಯಗಳನ್ನು ತಿಳಿದುಕೊಳ್ಳೋಣ.