ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗಲು ಮಾಡಬೇಕಾದ ಪ್ರಯತ್ನಗಳು
ನಾವು ನಾಮಜಪವನ್ನು ಮಾಡುತ್ತೇವೆ, ಆಗ ನಮ್ಮ ಗಮನ ಬಹಳಷ್ಟು ಸಲ ನಾಮಜಪದ ಸಂಖ್ಯೆಗಳ ಕಡೆಗೆ ಹೆಚ್ಚು ಇರುತ್ತದೆ. ಆದರೆ ನಾವು ಮಾಡುತ್ತಿರುವ ನಾಮಜಪ ನಿಜವಾಗಿಯೂ ದೇವರ ಚರಣಗಳವರೆಗೆ ತಲುಪುತ್ತಿದೆಯೇ ಎನ್ನುವ ಅನುಭೂತಿಯನ್ನು ನಾವು ಪಡೆಯಬೇಕು. ಇದರರ್ಥ ನಾಮಜಪದ ಸಂಖ್ಯೆಯತ್ತ ಗಮನ ನೀಡಬಾರದು ಎಂದಲ್ಲ! ಸಾಧನೆಯ ಪ್ರಾಥಮಿಕ ಹಂತದಲ್ಲಿ ಸಂಖ್ಯಾತ್ಮಕ ನಾಮಜಪವೂ ಅಷ್ಟೇ ಮಹತ್ವದ್ದಾಗಿದೆ. ಆದರೆ ಸಂಖ್ಯಾತ್ಮಕ ನಾಮಜಪ ಮಾಡುತ್ತಾ, ಮಾಡುತ್ತಾ, ನಾವು ಮನಸ್ಸಿನಲ್ಲಿ ಈಶ್ವರನನ್ನು ಅನುಭವಿಸುತ್ತಾ ನಾಮಜಪವನ್ನು ಮಾಡಬೇಕಾಗಿದೆ. ಅದಕ್ಕಾಗಿ ಏನು ಪ್ರಯತ್ನ ಮಾಡಬೇಕು, ಎನ್ನುವುದನ್ನು ಈಗ ನಾವು ನೋಡೋಣ. .
ಈಗ ನಾಮಜಪದಲ್ಲಿ ಸಂಖ್ಯಾತ್ಮಕ ಹಾಗೂ ಗುಣಾತ್ಮಕ ವೃದ್ಧಿ ಆಗುವುದಕ್ಕಾಗಿ ಮಾಡಬೇಕಾದ ಪ್ರಯತ್ನಗಳ ಬಗ್ಗೆ ತಿಳಿದುಕೊಳ್ಳುವವರಿದ್ದೇವೆ.
ನಾಮಜಪ ಏಕಾಗ್ರತೆಯಿಂದ ಮತ್ತು ಒಳ್ಳೆಯ ರೀತಿಯಲ್ಲಿ ಆಗಲು ಮಾಡಬೇಕಾದ ಪ್ರಯತ್ನ.
ಅ. ಪ್ರಾರ್ಥನೆ ಮಾಡುವುದು
ನಾವು ಯಾವುದೇ ಶುಭ ಕೆಲಸವನ್ನು ಪ್ರಾರಂಭಿಸುವ ಮೊದಲು ಏನು ಮಾಡುತ್ತೇವೆ? ಅಥವಾ ನಮ್ಮ ಕಾರ್ಯಗಳಲ್ಲಿನ ಅಡೆತಡೆಗಳು ದೂರವಾಗಬೇಕು ಎಂದು ನಾವು ಏನು ಮಾಡುತ್ತೇವೆ? ಪ್ರಾರ್ಥನೆ ಮಾಡುತ್ತೇವೆ ಅಲ್ಲವೆ? ನಾಮಜಪ ಅಥವಾ ಯಾವುದೇ ಸತ್ಕಾರ್ಯವನ್ನು ಮಾಡುವ ಸಂದರ್ಭದಲ್ಲಿ ಒಂದು ಮಹತ್ವದ ಅಂಶವೆಂದರೆ ದೇವರಲ್ಲಿ ಪ್ರಾರ್ಥನೆ ಮಾಡುವುದು! ಪ್ರಾರ್ಥನೆ ಮಾಡುವುದರಿಂದ ನಮ್ಮಲ್ಲಿ ಯಾಚಕವೃತ್ತಿ ನಿರ್ಮಾಣವಾಗಿ ನಮ್ಮ ಅಹಂಕಾರ ಕಡಿಮೆಯಾಗಲು ಸಹಾಯವಾಗುತ್ತದೆ. ನಾಮಜಪವನ್ನು ಮಾಡುವ ಮೊದಲು ನಮ್ಮ ಉಪಾಸ್ಯದೇವತೆಯಲ್ಲಿ – ‘ಹೇ ಪ್ರಭು, ನಾನು ನಾಮಜಪ ಮಾಡಲು ಆರಂಭಿಸುತ್ತಿದ್ದೇನೆ. ನೀನೇ ನನ್ನಿಂದ ಈ ನಾಮಜಪವನ್ನು ಮಾಡಿಸಿಕೊ. ಈ ನಾಮಜಪವು ನನ್ನಿಂದ ಒಳ್ಳೆಯ ರೀತಿಯಲ್ಲಿ ಆಗಲಿ, ಇದರಲ್ಲಿ ಯಾವುದೇ ವಿಘ್ನ ಬಾರದಿರಲಿ’ ಎಂದು ಪ್ರಾರ್ಥನೆ ಮಾಡಬೇಕು. ದೇವರಲ್ಲಿ ಶರಣಾಗತ ಭಾವದಿಂದ ಪ್ರಾರ್ಥನೆ ಮಾಡಿದ ನಂತರ ನಾಮಜಪವು ಆಗುವುದರಲ್ಲಿನ ವಿಘ್ನಗಳು ದೂರವಾಗಿ ನಾಮಜಪವು ಒಳ್ಳೆಯ ರೀತಿಯಲ್ಲಿ ಆಗಲು ಸಹಾಯವಾಗುತ್ತದೆ.
ಆ. ನಾಮವನ್ನು ಶ್ವಾಸಕ್ಕೆ ಜೋಡಿಸುವುದು
ನಾಮಜಪವು ಏಕಾಗ್ರತೆಯಿಂದ ಆಗಲು ಅದನ್ನು ನಮ್ಮ ಶ್ವಾಸದ ವೇಗದೊಂದಿಗೆ ಜೋಡಿಸಲು ಪ್ರಯತ್ನ ಮಾಡಬಹುದು. ನಾವು ಶ್ವಾಸದಿಂದಲೇ ಜೀವಂತರಾಗಿದ್ದೇವೆ; ಆದ್ದರಿಂದ ಶ್ವಾಸದ ಮೇಲೆ ಗಮನವನ್ನು ಕೇಂದ್ರೀಕರಿಸುವುದು ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಪ್ರಾರಂಭದಲ್ಲಿ ಶಾಂತವಾಗಿ ಕುಳಿತು ನಮ್ಮ ಶ್ವಾಸದ ಮೇಲೆ ಗಮನವನ್ನು ಏಕಾಗ್ರಗೊಳಿಸಬೇಕು ಮತ್ತು ನಂತರ ನಾಮಜಪವನ್ನು ಶ್ವಾಸಕ್ಕೆ ಜೋಡಿಸಲು ಪ್ರಯತ್ನಿಸಬೇಕು. ಉದಾಹರಣೆಗೆ, ಶ್ರೀ ಗುರುದೇವ ದತ್ತ | ಎಂದು ನಾಮಜಪವನ್ನು ಮಾಡುತ್ತಿದ್ದರೆ ಶ್ವಾಸವನ್ನು ಒಳಗೆ ತೆಗೆದುಕೊಳ್ಳುವಾಗ ‘ಶ್ರೀ ಗುರುದೇವ’ ಎಂದು ಹೇಳಿ ಶ್ವಾಸವನ್ನು ಹೊರಬಿಡುವಾಗ ‘ದತ್ತ’ ಎಂದು ಹೇಳಬಹುದು. ನಾವು ನಮ್ಮ ಶ್ವಾಸದ ವೇಗಕ್ಕನುಸಾರವಾಗಿ ನಾಮಜಪವನ್ನು ಮಾಡಲು ಪ್ರಯತ್ನಿಸಬಹುದು. ಯಾರ ನಾಮಜಪವು ತನ್ನಿಂತಾನೇ ಆಗುತ್ತಿದೆಯೋ ಅವರು ಶ್ವಾಸಕ್ಕೆ ಜೋಡಿಸುವ ಆವಶ್ಯಕತೆಯಿಲ್ಲ. ನಮ್ಮ ಶರೀರದಲ್ಲಿ ಆಖಂಡವಾಗಿ ನಡೆಯುತ್ತಿರುವ ಶ್ವಾಸದ ಅರಿವು ಆಗುತ್ತಿರುವುದರಿಂದ ನಮ್ಮ ನಾಮಜಪವೂ ಅಖಂಡವಾಗಿ ಆಗಬೇಕೆಂಬುವುದಕ್ಕಾಗಿ ಅದನ್ನು ಶ್ವಾಸೋಚ್ಛ್ವಾಸದ ಕ್ರಿಯೆಗೆ ಜೋಡಿಸಲು ಪ್ರಯತ್ನ ಮಾಡಬಹುದು. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಶ್ವಾಸದ ವೇಗಕ್ಕೆ ನಾಮಜಪವನ್ನು ಜೋಡಿಸಬೇಕು. ನಾಮಜಪಕ್ಕನುಸಾರ ಶ್ವಾಸದ ವೇಗವನ್ನು ಹೆಚ್ಚು-ಕಡಿಮೆ ಮಾಡಬಾರದು.
ಇ. ವೇಗವಾಗಿ ನಾಮಜಪಿಸುವುದು
ನಾಮಜಪವನ್ನು ಮಾಡುವಾಗ ಮನಸ್ಸಿನಲ್ಲಿ ಅನಾವಶ್ಯಕ ವಿಚಾರಗಳು ಬರುತ್ತಿದ್ದಲ್ಲಿ ನಾಮಜಪವನ್ನು ವೇಗವಾಗಿ ಮಾಡಬಹುದು. ಜಪವನ್ನು ವೇಗವಾಗಿ ಮಾಡಿದರೆ ಗಮನವು ಅದರ ಮೇಲೆ ಕೇಂದ್ರೀಕರಿಸಲು ಸಹಾಯವಾಗುತ್ತದೆ. ಮುಂದೆ ಮನಸ್ಸು ಜಪದ ಮೇಲೆ ಕೇಂದ್ರಿತಗೊಳ್ಳತೊಡಗಿತೆಂದರೆ ಹಂತಹಂತವಾಗಿ ಜಪದ ವೇಗವನ್ನು ಕಡಿಮೆ ಮಾಡಬೇಕು. ಕೊನೆಗೆ ಶ್ವಾಸೋಚ್ಛ್ವಾಸದ ವೇಗಕ್ಕೆ ಜಪದ ವೇಗವನ್ನು ಜೋಡಿಸಬೇಕು. ಜಪದ ವೇಗವು ಶ್ವಾಸದ ವೇಗಕ್ಕಿಂತಲೂ ಕಡಿಮೆಯಾದರೆ ಅದು ಒಳ್ಳೆಯದೇ. ಜಪಕ್ಕೆ ಒಂದು ಲಯ/ತಾಳಬದ್ಧತೆ ಬಂತೆಂದರೆ ಅದು ಇನ್ನೂ ಚೆನ್ನಾಗಿ ಆಗುತ್ತದೆ.
ಈ. ದಶಾಪರಾಧವಿರಹಿತ ನಾಮಜಪವನ್ನು ಮಾಡುವುದು
ನಾಮಜಪವನ್ನು ಮಾಡುವಾಗ ನಮ್ಮ ನಡೆ-ನುಡಿಗಳೆಡೆ ಗಮನ ಹರಿಸಬೇಕಾಗುತ್ತದೆ. ನಾವು ಒಂದೆಡೆ ನಾಮಜಪವನ್ನು ಮಾಡುತ್ತಿದ್ದೇವೆ ಮತ್ತು ಇನ್ನೊಂದೆಡೆ ಇತರರೊಂದಿಗೆ ಜೊತೆ ದುರಹಂಕಾರದಿಂದ ವರ್ತಿಸುತ್ತಿದ್ದೇವೆ, ಇತರರಿಗೆ ಅವಮಾನವಾಗುವ ರೀತಿಯಲ್ಲಿ ಮಾತನಾಡುತ್ತಿದ್ದೇವೆ ಎಂದಾದರೆ ನಾಮಜಪದಿಂದ ಏನಾದರೂ ಲಾಭವಾಗುವುದೇ? ಆದ್ದರಿಂದಲೇ ನಾಮಜಪವು ದಶಾಪರಾಧವಿರಹಿತವಾಗಿರಬೇಕು ಎಂದು ಹೇಳಲಾಗಿದೆ. ಅಂದರೆ ನಾಮಜಪವನ್ನು ಮಾಡುವಾಗ ನಮ್ಮ ವರ್ತನೆಯು ಸದ್ವರ್ತನೆಯಾಗಿರಬೇಕು. ಸಾಧುನಿಂದನೆ, ಗುರುಜನರ ಅವಮಾನ, ವೇದ-ಶಾಸ್ತ್ರ-ಪುರಾಣಗಳ ನಿಂದನೆ, ನಾಮದ ಬಲದ ಮೇಲೆ ಪಾಪಾಚರಣೆ ಮಾಡುವುದು ಇವು ದಶಾಪರಾಧಗಳ ಪೈಕಿ ಕೆಲವು ಅಪರಾಧಗಳಾಗಿವೆ.
ನಾಮಧಾರಕನು (ನಾಮ ಜಪಿಸುವವನು) ಅಪರಾಧಗಳ ಈ ಕುಪಥ್ಯಗಳಿಂದ ದೂರವಿರಬೇಕು. ಇಲ್ಲದಿದ್ದರೆ ಆ ಅಪರಾಧಗಳ ಪರಿಮಾರ್ಜನೆಯಲ್ಲಿ ಮಾಡಿದ ಎಲ್ಲ ಸಾಧನೆಯೂ ವ್ಯರ್ಥವಾಗಿ ಹೋಗುತ್ತದೆ ಮತ್ತು ಆಧ್ಯಾತ್ಮಿಕ ಉನ್ನತಿಯಾಗುವುದಿಲ್ಲ. ಉದಾಹರಣೆಗೆ, ಒಂದು ಕೆಟ್ಟು ಮಾತು ಬೈದರೆ ಮೂವತ್ತು ಮಾಲೆ ಜಪ, ಲಂಚ ತೆಗೆದುಕೊಂಡರೆ ಐನೂರು ಮಾಲೆ ಜಪ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಸಾಧನೆ ಮಾಡುವಾಗ ಕೇವಲ ನಾಮಸಾಧನೆ ಮಾಡಿದರೆ ಸಾಲದು, ನಮ್ಮ ಅಯೋಗ್ಯ ಅಭ್ಯಾಸಗಳನ್ನು, ಸ್ವಭಾವದ ದೋಷಗಳನ್ನು ಮತ್ತು ಅಹಂಕಾರವನ್ನು ಹೋಗಲಾಡಿಸಲು ಪ್ರಯತ್ನ ಮಾಡುವುದೂ ಮಹತ್ವದ್ದಾಗಿದೆ. ಅದನ್ನು ಹೇಗೆ ಸಾಧ್ಯಗೊಳಿಸುವುದು ಎನ್ನುವುದನ್ನು ನಾವು ಮುಂದಿನ ಸತ್ಸಂಗಗಳಲ್ಲಿ ತಿಳಿದುಕೊಳ್ಳೋಣ.
ಉ. ಸಾಧ್ಯವಾದಷ್ಟು ಹೆಚ್ಚು ನಾಮಜಪ ಮಾಡುವುದು
ನಾಮಜಪದ ಸಂಸ್ಕಾರವು ಮನಸ್ಸಿನಲ್ಲಿ ಮೂಡಬೇಕೆಂಬುವುದಕ್ಕಾಗಿ ನಾವು ಅದನ್ನು ನಮ್ಮ ದೈನಂದಿನ ಕೃತಿಗಳಿಗೆ ಜೋಡಿಸಿಕೊಂಡು ಮಾಡುವ ಅಭ್ಯಾಸ ಮಾಡಿಕೊಳ್ಳಬಹುದು. ಉದಾ: ಗೃಹಿಣಿಯರು ಅಡುಗೆ ಮಾಡುವಾಗ ನಾಮಜಪವನ್ನು ಮಾಡಬಹುದು. ನಾಮಜಪವನ್ನು ಮಾಡುತ್ತ ಆಡುಗೆ ಮಾಡಿದರೆ ಅದರಲ್ಲಿ ಸಾತ್ತ್ವಿಕತೆಯು ನಿರ್ಮಾಣವಾಗಿ ಅದನ್ನು ಗ್ರಹಿಸುವವರಿಗೂ ಅದರ ಲಾಭವಾಗುತ್ತದೆ. ಸ್ನಾನ ಮಾಡುವಾಗ, ವೈಯಕ್ತಿಕ ಕಾರ್ಯಗಳನ್ನು ಮಾಡುವಾಗ, ಮೊಬೈಲ್ ಅಥವಾ ಟಿ.ವಿ. ನೋಡುವಾಗ ನಾಮಜಪ ಮಾಡಬಹುದು. ಯಾರಾದರೂ ನೌಕರಿಗೆಂದು ಹೊರಹೋಗುತ್ತಿದ್ದರೆ ಪ್ರಯಾಣ ಮಾಡುವಾಗ, ತರಕಾರಿ ತರಲು ಹೋದಾಗ ನಾಮಜಪವನ್ನು ಮಾಡಬಹುದು. ಪ್ರತಿರಾತ್ರಿ ಮಲಗುವ ಮೊದಲು 5 ನಿಮಿಷ ನಾಮಜಪ ಮಾಡಬಹುದು.
ಅನ್ಯ ಕೆಲಸಗಳನ್ನು ಮಾಡುವಾಗ ನಾಮಜಪವನ್ನು ಹೇಗೆ ಮಾಡಲು ಸಾಧ್ಯ ಎಂಬ ಪ್ರಶ್ನೆ ಬರಬಹುದು. ಇದಕ್ಕೆ ಸುಲಭ ಉತ್ತರ ಎಂದರೆ ಪ್ರತ್ಯಕ್ಷ ಮಾಡಿ ನೋಡುವುದು. ವ್ಯವಹಾರದಲ್ಲಿಯೂ ನಾವು 3-4 ಕೆಲಸಗಳನ್ನು ಕೌಶಲ್ಯದಿಂದ ಒಟ್ಟಿಗೆ ಮಾಡಬಹುದು ಮತ್ತು ಕೆಲವೊಮ್ಮೆ ಮಾಡುತ್ತೇವೆ ಕೂಡ. ನಾವು ರಸ್ತೆಯಲ್ಲಿ ನಡೆಯುತ್ತಿದ್ದೇವೆ ಎಂದು ತಿಳಿದುಕೊಳ್ಳೋಣ, ಆಗ ನಾವು ಅಕ್ಕ-ಪಕ್ಕ ನೋಡುತ್ತಿರುತ್ತೇವೆ, ಹಾರ್ನ್ ಶಬ್ದ ಕೇಳಿಸಿದರೆ ಅದನ್ನು ಕೇಳಿ ಪಕ್ಕಕ್ಕೆ ಸರಿಯುತ್ತೇವೆ, ಅದೇ ಸಮಯದಲ್ಲಿ ರಸ್ತೆಯ ಬದಿಯಲ್ಲಿರುವ ಅಂಗಡಿಗಳ ಕಡೆಯೂ ನಮ್ಮ ಗಮನವಿರುತ್ತದೆ, ನಾವು ಯಾರೊಂದಿಗಾದರೂ ಮಾತನಾಡುತ್ತಿರುತ್ತೇವೆ ಅಥವಾ ಮನೆಗೆ ಹೋದ ನಂತರ ಏನು ಮಾಡಬೇಕಿದೆ ಎಂಬುದರ ಬಗ್ಗೆ ಮನಸ್ಸಿನಲ್ಲಿ ನಿರ್ಧರಿಸುತ್ತಿರುತ್ತೇವೆ. ಇದೆಲ್ಲವನ್ನೂ ಒಂದೇ ಸಮಯದಲ್ಲಿ ನಾವು ಮಾಡಬಲ್ಲೆವು ಎಂದಾದರೆ ದೈನಂದಿನ ಕೃತಿಗಳಿಗೆ ಜೋಡಿಸಿ ನಾಮಜಪವನ್ನೂ ಮಾಡುವುದು ಸಾಧ್ಯವಾಗುವುದು. ಪ್ರಾರಂಭದಲ್ಲಿ ನಾವು ನಾಮಜಪವನ್ನು ಪ್ರಯತ್ನಪೂರ್ವಕವಾಗಿಯೂ ನಿಗ್ರಹದಿಂದಲೂ ಮಾಡಬೇಕಾಗುವುದು. ಒಮ್ಮೆ ನಾಮಜಪದ ಸಂಸ್ಕಾರವಾಯಿತೆಂದರೆ ನಾಮಜಪವು ಸಹಜವಾಗಿಯೂ ಅಖಂಡವಾಗಿಯೂ ಆಗಲು ಸಾಧ್ಯವಾಗುತ್ತದೆ.
ನಾಮಜಪದಿಂದ ವ್ಯಕ್ತಿಯ ಊರ್ಜೆ ಮತ್ತು ಸಕಾರಾತ್ಮಕತೆಯಲ್ಲಿ ವೃದ್ಧಿಯಾವಗುವುದು
ಎಲ್ಲ ಸಂತರು ನಾಮದ ಮಹಿಮೆಯನ್ನು ಕೊಂಡಾಡಿದ್ದಾರೆ. ನಮ್ಮಲ್ಲಿ ಅನೇಕರು ನಾಮಸ್ಮರಣೆಯಿಂದ ಮನಸ್ಸು ಶಾಂತ ಮತ್ತು ಸ್ಥಿರವಾಗಿರುವುದನ್ನು ಅನುಭವಿಸಿರಬಹುದು. ನಾಮಸ್ಮರಣೆಯಿಂದ ಉತ್ಸಾಹ ಏಕೆ ಬರುತ್ತದೆ ಎಂದು ತಿಳಿದುಕೊಳ್ಳೋಣ. ವ್ಯಕ್ತಿಯ ಒಟ್ಟು ಶಕ್ತಿ ಶೇ. 100 ಎಂದು ತಿಳಿದರೆ, ಅದರಲ್ಲಿ ಶೇ. 70 ರಷ್ಟು ಶಕ್ತಿ ಶರೀರ ಮತ್ತು ಲಿಂಗದೇಹಗಳ ಕ್ರಿಯೆಗಾಗಿ ಖರ್ಚಾಗುತ್ತಿರುತ್ತದೆ, ಶೇ. 30 ಕುಂಡಲಿನಿ ಶಕ್ತಿಯಿರುತ್ತದೆ. ಶೇ. 70 ರಲ್ಲಿ ಸ್ಥೂಲ ದೇಹದಿಂದ ಯಾವ ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳು ನಡೆಯುತ್ತಿರುತ್ತವೆಯೋ, ಉದಾ. ಕಣ್ರೆಪ್ಪೆಗಳ ತೆರೆಯುವಿಕೆ ಮುಚ್ಚುವುದು ನೈಸರ್ಗಿಕ ರೀತಿಯಲ್ಲಿ ಆಗುತ್ತಿರುತ್ತದೆ. ಅದಕ್ಕಾಗಿ ಶೇ 20 ರಷ್ಟು ಶಕ್ತಿ ಉಪಯೋಗಿಸಲ್ಪಡುತ್ತದೆ. ಹಾಗೆಯೇ ಮನಸ್ಸು, ಚಿತ್ತ, ಬುದ್ಧಿ ಮತ್ತು ಅಹಂ ಈ ಲಿಂಗದೇಹದ ವ್ಯವಹಾರಕ್ಕಾಗಿ ಶೇ 50 ರಷ್ಟು ಶಕ್ತಿ ಉಪಯೋಗಿಸಲ್ಪಡುತ್ತದೆ. ನಮ್ಮ ಮನಸ್ಸಿನಲ್ಲಿ ಎಷ್ಟು ಹೆಚ್ಚು ವಿಚಾರಗಳಿರುತ್ತವೆಯೋ, ಅಷ್ಟು ನಮ್ಮ ಮನಸ್ಸಿನ ಊರ್ಜೆ ಹೆಚ್ಚು ಖರ್ಚಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ, ವ್ಯಕ್ತಿಯ ಒಟ್ಟು ಶೇ. 100 ರಷ್ಟು ಶಕ್ತಿಯಲ್ಲಿ ಶೇ. 20 ಶಕ್ತಿ ಶಾರೀರಿಕ ವಿಷಯಗಳಿಗಾಗಿ, ಶೇ. 50 ರಷ್ಟು ಶಕ್ತಿ ಮಾನಸಿಕ ವಿಷಯಗಳಿಗಾಗಿ ವ್ಯಯವಾಗುತ್ತದೆ. ಶೇ. 30 ರಷ್ಟು ಕುಂಡಲಿನಿ ಶಕ್ತಿ ಸುಪ್ತವಾಗಿರುತ್ತದೆ. ನಾಮಸ್ಮರಣೆಯಿಂದ ವ್ಯಕ್ತಿಯ ಮನಸ್ಸಿನ ಅನಾವಶ್ಯಕ, ನಕಾರಾತ್ಮಕ, ನಿರರ್ಥಕ ವಿಚಾರಗಳು ಕಡಿಮೆಯಾಗುತ್ತವೆ. ಇದರಿಂದ ವಿಚಾರಗಳಲ್ಲಿ ಖರ್ಚಾಗುವ ಮಾನಸಿಕ ಶಕ್ತಿಯ ಉಳಿತಾಯವಾಗುತ್ತದೆ, ಹಾಗೆಯೇ ನಾಮಜಪದಿಂದ ಕುಂಡಲಿನಿ ಜಾಗೃತಗೊಳ್ಳುವ ದಿಸೆಯಲ್ಲಿ ಮುಂದುವರಿಯುತ್ತಿರುವುದರಿಂದ ಸುಪ್ತಾವಸ್ಥೆಯಲ್ಲಿರುವ ಶಕ್ತಿಯೂ ಜಾಗೃತಗೊಳ್ಳತೊಡಗುತ್ತದೆ. ಇದರಿಂದ ನಾಮಸ್ಮರಣೆಯನ್ನು ಮಾಡುವುದರಿಂದ ಉತ್ಸಾಹ, ಸಕಾರಾತ್ಮಕತೆ, ಸ್ಥಿರತೆ, ಶಾಂತಿಯ ಅನುಭೂತಿಗಳು ಬರುತ್ತವೆ.
ಹಿಂದಿನ ಮೂರು ಸತ್ಸಂಗದಲ್ಲಿ ನಾವು ನಾಮಜಪ ಚೆನ್ನಾಗಿ ಆಗಲು ಏನು ಪ್ರಯತ್ನ ಮಾಡುವುದು, ನಾಮಜಪದ ಲಾಭ ಏನು, ಎಂಬ ವಿಷಯಗಳನ್ನು ತಿಳಿದುಕೊಂಡೆವು. ಇದನ್ನು ಇಷ್ಟು ವಿವರವಾಗಿ ತೆಗೆದುಕೊಳ್ಳುವುದರ ಕಾರಣವೇನೆಂದರೆ ನಾಮಜಪವು ನಮ್ಮ ಸಾಧನೆಯ ಅಡಿಪಾಯವಾಗಿದೆ. ನಮ್ಮ ನಾಮಜಪ ಸಂಖ್ಯಾತ್ಮಕ ಮತ್ತು ಗುಣಾತ್ಮಕವೂ ಆದರೆ, ಸಾಧನೆಯಲ್ಲಿ ಪ್ರಗತಿಯಾಗಲು ಅದರ ಲಾಭವಾಗಲಿದೆ.
ಮುಂದಿನ ವಾರ ನಾವು ಇನ್ನೂ ಒಂದು ಕೃತಿಯನ್ನು ಮಾಡಬಹುದು. “ನಮಗೇನು ತಿಳಿದಿದೆ, ಅದನ್ನು ಇತರರಿಗೆ ಹೇಳಬೇಕು” ಎಂದು ಸಂತರೊಬ್ಬರು ಹೇಳಿದ್ದಾರೆ. ನಾಮಜಪದ ಮಹತ್ವ ನಮ್ಮ ಗಮನಕ್ಕೆ ಬಂದಿದೆ, ಅಥವಾ ನಾಮಜಪದಿಂದ ಯಾವುದಾದರೂ ಅನುಭೂತಿಗಳು ಬಂದಿದ್ದರೆ, ನಾವು ಇತರರಿಗೆ ಹೇಳಬಹುದು. ಇದರ ಲಾಭ ನಮಗೆ ಹೇಗಾಗುತ್ತದೆಯೆಂದರೆ ಯಾವಾಗ ನಾವು ನಮಗೆ ತಿಳಿದಿರುವ ನಾಮಜಪದ ಮಾಹಿತಿಯನ್ನು ಇತರರಿಗೆ ಹೇಳುತ್ತೇವೆಯೋ, ಆಗ ನಮ್ಮ ಮನಸ್ಸಿನ ಮೇಲೆ ನಾಮಜಪದ ಮಹತ್ವ ಇನ್ನಷ್ಟು ಬಿಂಬಿಸಲ್ಪಡುತ್ತದೆ. ಆದ್ದರಿಂದ ಈ ವಾರದಲ್ಲಿ ನೀವು ಕನಿಷ್ಟ ಪಕ್ಷ ಇಬ್ಬರಿಗಾದರೂ ನಾಮಜಪದ ಮಹತ್ವವನ್ನು ಹೇಳಲು ಪ್ರಯತ್ನಿಸೋಣ.
ನಾವು ವಿವಿಧ ಪ್ರಸಂಗಗಳಲ್ಲಿ ದೇವರಿಗೆ ಪ್ರಾರ್ಥನೆ ಮಾಡುತ್ತಿರುತ್ತೇವೆ. ಪ್ರಾರ್ಥನೆಯ ಮಹತ್ವವೇನು ಎನ್ನುವುದನ್ನು ನಾವು ಮುಂದಿನ ಸತ್ಸಂಗದಲ್ಲಿ ತಿಳಿದುಕೊಳ್ಳೋಣ.