ನಾಮಜಪವನ್ನು ಮಾಡುವ ವಿಧಾನಗಳು
ಇಲ್ಲಿಯವರೆಗೆ ನಾಮಜಪದ ಮಹತ್ವ ಮತ್ತು ಲಾಭಗಳನ್ನು ತಿಳಿದುಕೊಂಡೆವು. ನೀವು ಈಗಾಗಲೇ ಆ ಜಪಗಳನ್ನು ಮಾಡಲು ಆರಂಭಿಸಿರಲೂಬಹುದು. ನಾಮಜಪವನ್ನು ಮಾಡುವಾಗ ಮನಸ್ಸು ಏಕಾಗ್ರವಾಗುವುದಿಲ್ಲ, ಮನಸ್ಸು ವಿಚಾರಗಳಲ್ಲಿಯೇ ಸಿಲುಕಿಕೊಳ್ಳುವುದರಿಂದ ನಾಮಜಪವು ನಿಂತು ಹೋಗುತ್ತದೆ ಅಥವಾ ನಾಮಜಪವನ್ನು ಮಾಡುವುದು ಮರೆತು ಹೋಗುತ್ತದೆ ಹೀಗೂ ಕೆಲವರ ಅನುಭವಕ್ಕೆ ಬಂದಿರುತ್ತದೆ. ನಾಮಜಪವು ಹೆಚ್ಚು ಹೆಚ್ಚು ಉತ್ತಮವಾಗಿ ಆಗುವ ದೃಷ್ಟಿಯಿಂದ ನಾಮಜಪವನ್ನು ಮಾಡುವ ಬೇರೆ ಬೇರೆ ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ.
ಲಿಖಿತ ನಾಮಜಪ
ಪ್ರಾಥಮಿಕ ಹಂತದಲ್ಲಿ ನಾವು ‘ಲಿಖಿತ ನಾಮಜಪ’ವನ್ನು ಮಾಡಬಹುದು. ಲಿಖಿತ ನಾಮಜಪ ಎಂದರೆ ನಾವು ಮಾಡಬೇಕಾಗಿರುವ ನಾಮಜಪವನ್ನು ನೋಟ್ ಪುಸ್ತಕದಲ್ಲಿ ಬರೆಯುವುದು. ಈ ವಿಧಾನದಲ್ಲಿ ನಾವು ಮೊದಲು ನಾಮಜಪವನ್ನು ಉಚ್ಚಾರ ಮಾಡುತ್ತೇವೆ, ನಂತರ ಬರೆಯುತ್ತೇವೆ ಮತ್ತು ಬರೆದಿರುವುದು ಸರಿಯಿದೆ ತಾನೇ ಎಂದು ನೋಡಲು ಅದರ ಮೇಲೆ ದೃಷ್ಟಿ ಹಾಕುತ್ತೇವೆ; ಅಂದರೆ 1 ಬಾರಿ ನಾಮಜಪವನ್ನು ಬರೆಯುವಾಗ ನಮ್ಮಿಂದ 3 ಬಾರಿ ಸ್ಮರಣೆಯಾಗುತ್ತದೆ. ಈ ನಾಮಜಪವನ್ನು ಮಾಡುವಾಗ ನಮ್ಮ ಕಣ್ಣು, ಕೈ, ಬುದ್ಧಿ ಮತ್ತೆ ಮನಸ್ಸು ಇವೆಲ್ಲವೂ ನಾಮಜಪದಲ್ಲಿ ತೊಡಗಿರುತ್ತವೆ. ಆದ್ದರಿಂದ ನಾಮಜಪವನ್ನು ಮಾಡುತ್ತಿರುವ ಸಮಯದಲ್ಲಿ ಮನಸ್ಸು ಅಲೆದಾಡುವ, ವಿಚಲಿತವಾಗುವ ಸಾಧ್ಯತೆಯು ಕಡಿಮೆಯಿರುತ್ತದೆ. ನಾಮಜಪವನ್ನು ಬರೆದಿರುವ ಪುಸ್ತಕಗಳನ್ನು ಮನೆಯಲ್ಲಿಟ್ಟಾಗ ಆ ವಾಸ್ತುವು ಶುದ್ಧವಾಗಲು ಮತ್ತು ಶುದ್ಧವಾಗಿಯೇ ಇರಲು ಸಹಾಯವಾಗುತ್ತದೆ. ನಾಮಜಪದಲ್ಲಿ ಆಸಕ್ತಿ ಉಂಟಾಗಲೆಂದು ಪ್ರಾರಂಭದಲ್ಲಿ ನಾಮಜಪವನ್ನು ಕೈಯಿಂದ ಬರೆಯುವುದು, ಮುಂದಿನ ಹಂತದಲ್ಲಿ ಅದನ್ನು ದೊಡ್ಡ ಸ್ವರದಲ್ಲಿ ಹೇಳುವುದು ಮತ್ತು ನಂತರ ಮನಸ್ಸು ನಾಮಜಪದಲ್ಲಿ ಆನಂದ ಪಡೆಯತೊಡಗಿದಾಗ, ನಾಮಜಪವನ್ನು ಮನಸ್ಸಿನಲ್ಲಿಯೇ ಮಾಡುವುದು ಈ ರೀತಿಯಲ್ಲಿ ನಾಮಜಪವನ್ನು ಮಾಡಬಹುದು.
ವೈಖರಿ ನಾಮಜಪ
ಲಿಖಿತ ನಾಮಜಪವನ್ನು ಮಾಡುವ ಬದಲು ನಾವು ವೈಖರಿ ವಾಣಿಯಲ್ಲಿಯೂ ನಾಮಜಪವನ್ನು ಮಾಡಬಹುದು. ವೈಖರಿಯಲ್ಲಿ ನಾಮಜಪ ಮಾಡುವುದೆಂದರೆ ದೊಡ್ಡ ಸ್ವರದಲ್ಲಿ ನಾಮಜಪವನ್ನು ಮಾಡುವುದು. ಹೀಗೆ ಮಾಡಿದಾಗ ಮನಸ್ಸನ್ನು ಜಪದ ಮೇಲೆ ಏಕಾಗ್ರಗೊಳಿಸಲು ಸುಲಭವಾಗುತ್ತದೆ ಮತ್ತು ಪ್ರಾಣಾಯಾಮದ ಲಾಭವೂ ಸಿಗುತ್ತದೆ. ವೈಖರಿ ವಾಣಿಯಲ್ಲಿ ಎಂದರೆ ದೊಡ್ಡ ಸ್ವರದಲ್ಲಿ ನಾಮಜಪವನ್ನು ಮಾಡುವುದರ ಮತ್ತೊಂದು ಲಾಭವೆಂದರೆ ಆ ನಾಮಜಪದಿಂದ ನಿರ್ಮಾಣವಾಗುವ ಧ್ವನಿಲಹರಿಗಳಿಂದಾಗಿ ವಾತಾವರಣವು ಸಾತ್ತ್ವಿಕವಾಗಲು ಸಹಾಯವಾಗುತ್ತದೆ. ದೊಡ್ಡ ಸ್ವರದಲ್ಲಿ ನಾಮಜಪವನ್ನು ಮಾಡುವುದರಿಂದ ಅದು ಮನೆಯಲ್ಲಿರುವ ನಮ್ಮ ಕುಟುಂಬದವರೆ ಕಿವಿಗೆ ಬಿದ್ದು ಅವರ ಮನಸ್ಸಿನಲ್ಲಿಯೂ ಸಾತ್ತ್ವಿಕ ಭಾವವು ಉಂಟಾಗಲು ಸಹಾಯವಾಗುತ್ತದೆ.
ವೈಖರಿಯಲ್ಲಿ ನಾಮಜಪವನ್ನು ಮಾಡುವುದರ ಅನನುಕೂಲತೆ ಏನೆಂದರೆ ನಾಮಜಪವು ದೊಡ್ಡಸ್ವರದಲ್ಲಿ ಆಗುವುದರಿಂದ ಮನಸ್ಸು ನಿರ್ವಿಚಾರ ಅವಸ್ಥೆಗೆ ತಲುಪಲು ಸಾಧ್ಯವಾಗುವುದಿಲ್ಲ. ಮನಸ್ಸು ನಾಮಜಪದಿಂದ ನಿರ್ವಿಚಾರ ಸ್ಥಿತಿಗೆ ಹೋಗುವುದು ಆಧ್ಯಾತಿಕ ಉನ್ನತಿಯ ಲಕ್ಷಣವಾಗಿರುತ್ತದೆ.
ವೈಖರಿ ವಾಣಿಯ ಜೊತೆ ಮಧ್ಯಮಾ, ಪಶ್ಯಂತಿ ಮತ್ತು ಪರಾ ಈ ವಾಣಿಗಳೂ ಇವೆ.
ಮಧ್ಯಮಾ ವಾಣಿಯ ನಾಮಜಪ
ಮಧ್ಯಮಾ ವಾಣಿಯಲ್ಲಿ ಆಗುವ ನಾಮಜಪವೆಂದರೆ ತನ್ನಿಂದ ತಾನೇ ಆಗುವ ಜಪ! ಇದು ವೈಖರಿ ಮತ್ತು ಪಶ್ಯಂತಿ ಇವೆರಡು ವಾಣಿಗಳ ಮಧ್ಯದ ವಾಣಿಯಾಗಿರುವುದರಿಂದ ಇದನ್ನು ಮಧ್ಯಮಾ ಎನ್ನುತ್ತಾರೆ. ಮನಸ್ಸಿನ ಮೇಲೆ ನಾಮಜಪದ ಸಂಸ್ಕಾರವಾದ ನಂತರ ಸಾಮಾನ್ಯವಾಗಿ ಒಂದು ತಿಂಗಳೊಳಗೆ ನಾಮಜಪವು ಮನಸ್ಸಿನಲ್ಲಿ ತನ್ನಿಂದ ತಾನೇ ಆಗತೊಡಗುತ್ತದೆ. ನಾಮಜಪವು ಈ ವಿಧದಲ್ಲಿ ಆಗುವುದೆಂದರೆ ನಾಮಜಪದಲ್ಲಿನ ಉನ್ನತಿಯ ಲಕ್ಷಣವಾಗಿದೆ. ಕಳೆದ ಒಂದು ತಿಂಗಳಲ್ಲಿ ಯಾರಿಗಾದರೂ ಇಂತಹ ಅನುಭೂತಿ ಬಂದಿದ್ದರೆ, ಅವರ ಜಪ ಮಧ್ಯಮಾ ವಾಣಿಯಲ್ಲಿ ಆಗಲು ಆರಂಭವಾಗಿದೆ ಎಂದು ತಿಳಿದುಕೊಳ್ಳಬಹುದು.
ಈ ವಾಣಿಯಲ್ಲಿ ಮಗು ಹೇಗೆ ತಾಯಿಯನ್ನು ಆರ್ತವಾಗಿ ಕರೆಯುತ್ತದೆಯೋ, ಆ ಆರ್ತತೆಯನ್ನು ನಾಮಜಪ ಮಾಡುವವರು ಅನುಭವಿಸಬಹುದು. ಇಂತಹ ನಾಮಜಪ ಆಗುವುದೆಂದರೆ ಇದು ನಾಮಜಪದಲ್ಲಿ ಉನ್ನತಿಯ ಲಕ್ಷಣವಾಗಿದೆ.
ಪಶ್ಯಂತಿ ವಾಣಿಯ ನಾಮಜಪ
ದ್ರಷ್ಟಾರ ಸಂತರು ಹಾಗೂ ಋಷಿಮುನಿಗಳಲ್ಲಿ ಆಗುವ ಜಪವು ಪಶ್ಯಂತಿ ವಾಣಿಯಲ್ಲಿ ಆಗುತ್ತದೆ. ‘ಪಶ್ಯ’ ಎಂಬ ಧಾತುವಿನಿಂದ ‘ಪಶ್ಯಂತಿ’ ಎಂಬ ಪದವು ರೂಪುಗೊಂಡಿದೆ. ‘ಪಶ್ಯ’ ಎಂದರೆ ನೋಡುವುದು. ತ್ರಿಕಾಲಗಳನ್ನೂ ನೋಡುವ ದ್ರಷ್ಟಾರ ಋಷಿಮುನಿಗಳ ನಾಮಜಪವು ‘ಪಶ್ಯಂತಿ’ ವಾಣಿಯಲ್ಲಿ ಆಗುತ್ತಿರುತ್ತದೆ.
ಪರಾ
ಪರಾ ವಾಣಿ ಎಂದರೆ ನಾಮವನ್ನು ಜಪಿಸುವವನೇ ನಾಮರೂಪಿಯಾಗಿ ಬಿಡುವುದು; ಅಂದರೆ ಪರಾ ವಾಣಿಯಲ್ಲಿ ನಾಮಜಪವಾಗುವುದಿಲ್ಲ, ಜಪದೊಂದಿಗೆ ಅದ್ವೈತವುಂಟಾಗಿರುತ್ತದೆ. ಜಪಕರ್ತನು ಜಪದೊಂದಿಗೆ ಏಕರೂಪವಾಗಿರುತ್ತಾನೆ. ಅಂದರೇನು? ನಾಮಜಪ ಮಾಡುವಂತಹ ವ್ಯಕ್ತಿಯ ಸಂಪರ್ಕ ಈಶ್ವರೀ ಶಕ್ತಿಯೊಂದಿಗೆ ತನ್ನಿಂತಾನೆ ಆಗಿರುತ್ತದೆ ಹಾಗೂ ಆ ಶಕ್ತಿಯೊಂದಿಗೆ ಅವನ ಸಂವಾದ ನಡೆಯುತ್ತದೆ. ಈ ಸಂವಾದವು ಆತ್ಮಶಕ್ತಿ ಜಾಗೃತವಾಗಿರುವುದರಿಂದಲೇ ಆಗುತ್ತದೆ, ಆದುದರಿಂದ ಇದಕ್ಕೆ ‘ಪರಾ’ ವಾಣಿ, ಎನ್ನುತ್ತಾರೆ.
ಜಪಮಾಲೆಯಿಂದ ನಾಮಜಪವನ್ನು ಮಾಡುವುದು
ನಾವು ಜಪಮಾಲೆಯನ್ನು ಬಳಸಿಯೂ ನಾಮಜಪವನ್ನು ಮಾಡಬಹುದು. ಜಪಮಾಲೆಯಿಂದ ನಾಮಜಪವನ್ನು ಎಣಿಸುವುದರಿಂದ ನಿರ್ದಿಷ್ಟ ಸಂಖ್ಯೆಯ ನಾಮಜಪವನ್ನು ಮಾಡಿದ ನಂತರ ಮನಸ್ಸಿಗೆ ಸಮಾಧಾನ ಸಿಗುತ್ತದೆ ಮತ್ತು ನಾಮಜಪದಲ್ಲಿ ಆಸಕ್ತಿಯೂ ಹೆಚ್ಚಾಗುತ್ತದೆ.
ಪ್ರಾಥಮಿಕ ಅವಸ್ಥೆಯಲ್ಲಿರುವ ಸಾಧಕನು ಮಾಲೆಯನ್ನುಪಯೋಗಿಸಿ ನಾಮಜಪವನ್ನು ಮಾಡುತ್ತಿದ್ದರೆ ಪ್ರತಿದಿನ ಕನಿಷ್ಠ ಮೂರು ಮಾಲೆ ಜಪವನ್ನು ಮಾಡಬೇಕು. ನಾಮಜಪವು ಕಡಿಮೆಯಾಗುತ್ತಿದ್ದರೆ ಎಷ್ಟು ಮಾಲೆ ಕಡಿಮೆಯಾಗಿದೆ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ಮಾಲೆಯನ್ನು ಉಪಯೋಗಿಸಿ ನಾಮಜಪವನ್ನು ಎಣಿಸಬೇಕು. ಅಧಿಕಾಧಿಕ ನಾಮಜಪ ಆಗುತ್ತಿದ್ದರೆ ಎಣಿಸುವ ಅಗತ್ಯವಿಲ್ಲ.
ಅ. ಜಪಮಾಲೆಯಲ್ಲಿನ ಮಣಿಗಳ ಸಂಖ್ಯೆ : ಹಿಂದೂಗಳ ಜಪಮಾಲೆಯಲ್ಲಿ 108 ಮಣಿಗಳಿರುತ್ತವೆ. ಮೇರುಮಣಿಯು ಬೇರೆ ಇರುತ್ತದೆ. ಕೆಲವು ಸಂಪ್ರದಾಯಗಳಲ್ಲಿ ಬೇರೆ ಸಂಖ್ಯೆಯೂ ಇರುತ್ತದೆ, ಉದಾ. ಶೈವರು 32 ಮಣಿಗಳ ಮಾಲೆಯನ್ನು ಉಪಯೋಗಿಸುತ್ತಾರೆ. ಕೆಲವು ಗ್ರಂಥಗಳಲ್ಲಿ ‘ಜಪಮಾಲೆಯು 9 ಮಣಿಗಳದ್ದಾಗಿರಬೇಕು ಮತ್ತು ಅದರ 12 ಆವರ್ತನಗಳಿಂದ (ಸುತ್ತುಗಳಿಂದ) 108 ರ ಸಂಖ್ಯೆಯನ್ನು ಎಣಿಸಬೇಕು’ ಎಂದು ಹೇಳಲಾಗಿದೆ.
ಆ. ಜಪಮಾಲೆಯಲ್ಲಿನ 108 ಮಣಿಗಳ ಆಧ್ಯಾತಿಕ ಅರ್ಥ : ಕುಂಡಲಿನಿಯೋಗಕ್ಕನುಸಾರ ಶರೀರದಲ್ಲಿ 108 ಸಂವೇದನಾಬಿಂದುಗಳಿವೆ. ಜಪಮಾಲೆಯಲ್ಲಿನ ಮಣಿಗಳು ಅದರ ಸೂಚಕವಾಗಿವೆ. ಅವುಗಳ ಸಂಬಂಧವು ಕುಂಡಲಿನಿಯೋಗದೊಂದಿಗಿದೆ.
ಭಕ್ತಿಯೋಗಕ್ಕನುಸಾರ ಶ್ರೀವಿಷ್ಣು ಮತ್ತು ಶಿವ ಇವರ 108 ಹೆಸರುಗಳಿವೆ. ಜಪಮಾಲೆಯಲ್ಲಿನ ಮಣಿಗಳು ಅವುಗಳ ಸೂಚಕವಾಗಿವೆ.
ಜ್ಞಾನಯೋಗಕ್ಕನುಸಾರ ಜ್ಞಾನದೇವತೆ ಮತ್ತು ವಿದ್ಯೆಗಳ ಸಂಖ್ಯೆಯು 108 ಇದೆ. ಜಪಮಾಲೆಯಲ್ಲಿನ ಮಣಿಗಳು ಅವುಗಳ ಸೂಚಕವಾಗಿವೆ.
27 ನಕ್ಷತ್ರಗಳಿವೆ ಹಾಗೂ ಪ್ರತಿಯೊಂದು ನಕ್ಷತ್ರದ ನಾಲ್ಕು ಚರಣಗಳಿರುತ್ತವೆ. ಆದ್ದರಿಂದಲೆ 108 ಮಣಿಗಳಿರುತ್ತವೆ.
ಅಧ್ಯಾತ್ಮದಲ್ಲಿ 9 ಈ ಸಂಖ್ಯೆಯನ್ನು ಬ್ರಹ್ಮವಾಚಕ ಎಂದು ಪರಿಗಣಿಸಲಾಗಿದೆ. ಈ ಸಂಖ್ಯೆಯ 12 ಪಟ್ಟು ಜಪ ಆಗಬೇಕು.
ವಿವಿಧ ಮಾರ್ಗಗಳಿಗನುಸಾರ ಕಾರಣಗಳು ಬೇರೆ ಬೇರೆ ಆಗಿದ್ದರೂ, ಇದರಿಂದ ನಾವೇನು ಕಲಿಯಬಹುದು? ನಮ್ಮ ಸಂಖ್ಯಾತ್ಮಕ ನಾಮಜಪ ಹೆಚ್ಚಿಸಲು ಜಪಮಾಲೆಯನ್ನು ಉಪಯೋಗಿಸಬಹುದು ಎಂದ!
ಇ. ಮೇರುಮಣಿ : ಇದು ಮಾಲೆಯಲ್ಲಿನ ಮುಖ್ಯ ಮಣಿಯಾಗಿದೆ. ನಾಮಜಪವನ್ನು ಮಾಡುವಾಗ ಮೇರುಮಣಿಯನ್ನು ದಾಟುವುದಿಲ್ಲ.
ಈ. ಮೇರುಮಣಿ ಏಕೆ ದಾಟುವುದಿಲ್ಲ? : ಮೇರುಮಣಿ ಬಂದಾಗ ಮಾಲೆಯನ್ನು ವಿರುದ್ಧ ದಿಕ್ಕಿನಲ್ಲಿ ಏಕೆ ತಿರುಗಿಸುತ್ತಾರೆ? ಎಂಬ ಪ್ರಶ್ನೆಯು ನಿಮ್ಮ ಮನಸ್ಸಿಗೆ ಬಂದಿರಬಹುದು.
1. ಜಪವನ್ನು ಮಾಡುವ ಕ್ರಿಯೆಯನ್ನು ಮರೆಯುವುದಕ್ಕಾಗಿ ಹೀಗೆ ಮಾಡಲಾಗುತ್ತದೆ. ಭಕ್ತಿಯೋಗಕ್ಕನುಸಾರ ಈಶ್ವರನ ಸ್ಮರಣೆ ಅಪೇಕ್ಷಿತವಾಗಿದೆ. ನಾನು ಎಷ್ಟು ಸಲ ಜಪ ಮಾಡಿದೆ ಎಂಬುವುದರ ಅರಿವನ್ನು ಮರೆತು ನಾನು ಸತತವಾಗಿ ಈಶ್ವರನ ನಾಮದಲ್ಲಿ ಮಗ್ನನಾಗಿರಬೇಕು, ಎಂದು ಗಮನದಲ್ಲಿಡಲು ನಾವು ಜಪ ಮರೆಯುವ ಕ್ರಿಯೆಯನ್ನು ಮರೆಯಬೇಕಿದೆ.
2. ಸಾಧಕನ ದೃಷ್ಟಿಯಿಂದ ಎಡಬದಿಯಲ್ಲಿರುವ ಇಡಾ ನಾಡಿ ಅಥವಾ ಬಲಬದಿಯಲ್ಲಿರುವ ಪಿಂಗಳಾ ನಾಡಿಯ ಬದಲಿಗೆ ಮಧ್ಯದಲ್ಲಿರುವ ಸುಷುಮ್ನಾ ನಾಡಿಯು ಚಾಲನೆಯಲ್ಲಿರುವುದು ಮಹತ್ವದಾಗಿರುತ್ತದೆ. ಹಾಗೆಯೇ ಕೇವಲ ಒಂದು ದಿಕ್ಕಿನಲ್ಲಿ ಮಾಲೆಯನ್ನು ತಿರುಗಿಸುವುದು ಸಾಧಕನ ದೃಷ್ಟಿಯಿಂದ ಯೋಗ್ಯವಲ್ಲ. ಇಡಾ ಮತ್ತು ಪಿಂಗಳಾ ನಾಡಿಗಳ ಮಧ್ಯೆ ಸುಷುಮ್ನಾ ನಾಡಿಯಿರುತ್ತದೆ, ಅದೇ ರೀತಿ ಮಾಲೆಯ ಹಿಂದು-ಮುಂದು ತಿರುಗುವುದರ ಮಧ್ಯದಲ್ಲಿ ಮೇರುಮಣಿಯಿರುತ್ತದೆ. ತಪ್ಪಿ ಏನಾದರೂ ಮೇರುಮಣಿಯನ್ನು ದಾಟಿದರೆ ಪ್ರಾಯಶ್ಚಿತ್ತವೆಂದು ಆರು ಬಾರಿ ಪ್ರಾಣಾಯಾಮವನ್ನು ಮಾಡಬೇಕು.
ಉ. ಜಪಮಾಲೆಯಿಂದ ಜಪವನ್ನು ಮಾಡುವ ಪದ್ಧತಿ
1. ಮಾಲೆಯನ್ನು ನಮ್ಮತ್ತ ಎಳೆಯಬೇಕು : ಮಾಲೆಯನ್ನು ತನ್ನ ಕಡೆಗೆ ಎಳೆಯುವ ಬದಲು ಹೊರಗಿನ ದಿಕ್ಕಿಗೆ ತಳ್ಳಿದರೆ ಏನೆನಿಸುತ್ತದೆ ಎಂಬುದರ ಅನುಭೂತಿಯನ್ನು ಪಡೆದುಕೊಳ್ಳಿ. ಹೆಚ್ಚಿನ ಜನರಿಗೆ ತೊಂದರೆದಾಯಕ ಅನುಭೂತಿ ಬರುತ್ತದೆ. ಇದಕ್ಕೆ ಕಾರಣವೇನೆಂದರೆ ಮಾಲೆಯನ್ನು ನಮ್ಮ ಕಡೆಗೆ ಎಳೆಯುವಾಗ ಪ್ರಾಣವಾಯುವು ಕಾರ್ಯರತವಾದರೆ ಹೊರಗಿನ ದಿಕ್ಕಿಗೆ ತಳ್ಳುವಾಗ ಸಮಾನವಾಯುವು ಕಾರ್ಯರತವಾಗುತ್ತದೆ. ಸಮಾನವಾಯುವು ಚಾಲನೆಯಲ್ಲಿರುವಾಗ ಆಗುವ ಆನಂದಕ್ಕಿತ ಹೆಚ್ಚಿನ ಆನಂದ ಪ್ರಾಣವಾಯುವು ಚಾಲನೆಯಲ್ಲಿರುವಾಗ ಆಗುತ್ತದೆ. (ಇವುಗಳ ವಿಷಯದ ಮಾಹಿತಿಯನ್ನು ಸನಾತನದ ‘ಆಧ್ಯಾತ್ಮಿಕ ಉನ್ನತಿಗಾಗಿ ಹಠಯೋಗ (ಭಾಗ 2)’ ಎಂಬ ಗ್ರಂಥದಲ್ಲಿ ಕೊಡಲಾಗಿದೆ.)
2. ಬಲಗೈಯಲ್ಲಿ ಮಾಲೆಯನ್ನು ಹಿಡಿದು ಮುಂದಿನ ವಿಧಗಳಲ್ಲಿ ನಾಮಜಪ ಮಾಡಲಾಗುತ್ತದೆ.
ಅ. ಮಧ್ಯದ ಬೆರಳಿನ ಮಧ್ಯಭಾಗದ ಮೇಲೆ ಮಾಲೆಯನ್ನಿಟ್ಟು ಮಣಿಗಳನ್ನು ಹೆಬ್ಬೆರಳಿನಿಂದ ತನ್ನ ಕಡೆಗೆ ಎಳೆಯುವುದು. ತೋರುಬೆರಳನ್ನು (ತರ್ಜನಿಯನ್ನು) ಮಾಲೆಗೆ ಸ್ಪರ್ಶಿಸಬಾರದು.
ಆ. ಉಂಗುರದ ಬೆರಳಿನ ಮೇಲೆ ಮಾಲೆಯನ್ನಿಟ್ಟು ಉಂಗುರದ ಬೆರಳು ಮತ್ತು ಹೆಬ್ಬೆರಳಿನ ತುದಿಗಳನ್ನು ಸೇರಿಸಬೇಕು. ನಂತರ ಮಧ್ಯದ ಬೆರಳಿನಿಂದ ಮಾಣೆಗಳನ್ನು ಎಳೆಯುವುದು ಶರೀರಶಾಸ್ತ್ರದ ದೃಷ್ಟಿಯಿಂದಲೂ ಹೆಚ್ಚು ಅನುಕೂಲಕರವಾಗಿರುತ್ತದೆ.
ಊ. ಮಣಿಗಳ ವಿಧಗಳು : ಯಾವ ದೇವತೆಯ ನಾಮಜಪವನ್ನು ಮಾಡುವುದಿರುತ್ತದೆಯೋ ಆ ದೇವತೆಯ ಪವಿತ್ರಕಗಳನ್ನು (ಸೂಕ್ಷ್ಮಾತಿಸೂಕ್ಷ್ಮ ಕಣಗಳನ್ನು) ಸೆಳೆದುಕೊಳ್ಳುವ ಮಣಿಗಳ ಮಾಲೆ ಇರಬೇಕು, ಉದಾ. ಶಿವನ ನಾಮಜಪಕ್ಕಾಗಿ ರುದ್ರಾಕ್ಷಿಯ ಮಾಲೆಯನ್ನೂ, ಶ್ರೀವಿಷ್ಣುವಿನ ನಾಮಜಪಕ್ಕಾಗಿ ತುಳಸಿಯ ಮಾಲೆಯನ್ನೂ ಉಪಯೋಗಿಸಬೇಕು. ( ಪವಿತ್ರಕಗಳೆಂದರೆ ಸೂಕ್ಷ್ಮಾತಿಸೂಕ್ಷ್ಮ ಚೈತನ್ಯಕಣ. ನಮ್ಮ ಕಣ್ಣುಗಳಿಗೆ ಕಾಣಿಸದಿರುವ ಇಂತಹ ಅನೇಕ ಕಣಗಳು ಈ ವಾತಾವರಣದಲ್ಲಿರುತ್ತವೆ. ಅದರಲ್ಲಿ ವಿವಿಧ ದೇವತೆಗಳ ತತ್ತ್ವ ಕೂಡ ಇರುತ್ತವೆ, ಅದಕ್ಕೆ ಪವಿತ್ರಕ ಎನ್ನುತ್ತಾರೆ,)
ನಾಮಜಪ ಸಾಧನೆಯಲ್ಲಿ ಆಧ್ಯಾತ್ಮಿಕ ಉನ್ನತಿಯ ಉದ್ದೇಶಕ್ಕನುಸಾರ ಸತ್ತ್ವ, ರಜ ಅಥವಾ ತಮ ಇವುಗಳ ಪೈಕಿ ಯಾವುದಾದರೊಂದು ಗುಣವು ಪ್ರಧಾನವಾಗಿರುವಂತಹ ಮಣಿಗಳ ಮಾಲೆಯನ್ನು ಉಪಯೋಗಿಸುತ್ತಾರೆ. ಇದರಲ್ಲಿ ತುಳಸಿ ಮಾಲೆಯನ್ನು ಶ್ರೀಕೃಷ್ಣ, ಶ್ರೀರಾಮ, ಶ್ರೀವಿಷ್ಣುವಿನ ಜಪಕ್ಕಾಗಿ, ರುದ್ರಾಕ್ಷಿಯ ಮಾಲೆಯನ್ನು ಶಿವ ಮತ್ತು ಮಾರುತಿಗಾಗಿ, ಮುತ್ತು ಅಥವಾ ಹವಳದ ಮಾಲೆಯನ್ನು ದುರ್ಗಾದೇವಿಯ ಜಪಕ್ಕಾಗಿ, ಸುವರ್ಣದ ಮಾಲೆಯನ್ನು ಶ್ರೀಲಕ್ಷ್ಮಿಗಾಗಿ, ರಕ್ತಚಂದನದ ಮಾಲೆಯನ್ನು ತ್ರಿಪುರಾದೇವಿಯ ಜಪಕ್ಕಾಗಿ ಮತ್ತು ಶ್ರೀಗಣೇಶನ ಜಪಕ್ಕಾಗಿ ಆನೆ ದಂತದ ಮಾಲೆಯನ್ನು ಬಳಸುತ್ತಾರೆ.
ಮನಸ್ಸಿನಲ್ಲಿ ನಾಮಜಪ ಮಾಡುವುದು
ನಾವು ಮನಸ್ಸಿನಲ್ಲಿ ಕೂಡ ನಾಮಜಪವನ್ನು ಮಾಡಬಹುದು. ಸ್ಥೂಲಕ್ಕಿಂತ ಸೂಕ್ಷ್ಮಕ್ಕೆ ಹೆಚ್ಚು ಸಾಮರ್ಥ್ಯವಿರುವುದರಿಂದ ಮನಸ್ಸಿನಲ್ಲಿ ಮಾಡಿದ ಜಪವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ನಮಗೆ ಇಂದಿನ ಈ ವಿಷಯದಿಂದ ನಾಮಜಪ ಹಾಗೂ ಜಪಮಾಲೆಯ ವಿಷಯದಲ್ಲಿ ಮಾಹಿತಿ ಸಿಕ್ಕಿತು. ಹೆಚ್ಚೆಚ್ಚು ನಾಮಜಪ ಮಾಡುವುದೇ ನಮ್ಮ ಮುಖ್ಯ ಉದ್ದೇಶವಾಗಿದೆ. ಅದು ಆಗಬೇಕಾದರೆ ನಾವು ಯಾವ ಯಾವ ಪದ್ಧತಿಯಲ್ಲಿ ನಾಮಜಪ ಮಾಡಬಹುದು, ಎಂಬುದನ್ನು ನೋಡಿದೆವು. ನಾವು ಪುಸ್ತಕದಲ್ಲಿ ನಾಮಜಪ ಬರೆಯಬಹುದು, ದೊಡ್ಡ ಧ್ವನಿಯಲ್ಲಿ ಅಥವಾ ಜಪಮಾಲೆ ಹಿಡಿದು ನಾಮಜಪ ಮಾಡಬಹುದು. ನಾಮಜಪ ಮಾಡಲು ಒಂದು ಅಥವಾ ಹೆಚ್ಚು ಪದ್ಧತಿಯನ್ನು ಉಪಯೋಗಿಸಬಹುದು. ಒಟ್ಟಿನಲ್ಲಿ ನಮ್ಮಿಂದ ನಾಮಜಪವಾಗುವುದು ಮಹತ್ವದ್ದಾಗಿದೆ.
ಈ ವಾರದಲ್ಲಿ ನಾವು ವೈಖರಿ ವಾಣಿಯಿಂದ ಹೆಚ್ಚೆಚ್ಚು ಜಪ ಮಾಡೋಣ. ಮನಸ್ಸು ಏಕಾಗ್ರವಾಗುತ್ತಿದ್ದರೆ ಮನಸ್ಸಿನಲ್ಲಿಯೇ ದೇವರ ನಾಮಜಪ ಮಾಡೋಣ. ಅಧ್ಯಾತ್ಮದಲ್ಲಿ ಕೇಳುವುದಕ್ಕೆ ಕೇವಲ ಶೇ. 2 ರಷ್ಟು ಮತ್ತು, ಪ್ರತ್ಯಕ್ಷ ಕೃತಿಗೆ ಶೇ. 98 ರಷ್ಟು ಮಹತ್ವವಿದೆ. ಆದ್ದರಿಂದ ನಾವು ಇಂದಿನ ಸತ್ಸಂಗವನ್ನು ಕೇಳಿದ್ದರಿಂದ ನಮಗೆ ಶೇ. 2 ರಷ್ಟು ಲಾಭವಾಗಲೇ ಬೇಕು. ಮುಂದಿನ ಶೇ. 98 ರಷ್ಟು ಲಾಭಗಳಿಸಲು ನಾವು ಪ್ರತ್ಯಕ್ಷ ಕೃತಿ ಮಾಡಲು ಪ್ರಯತ್ನ ಮಾಡೋಣ. ಮುಂದಿನ ಸತ್ಸಂಗದಲ್ಲಿ ನಾವು ನಾಮಜಪ ಏಕಾಗ್ರತೆಯಿಂದ ಮಾಡಲು ಹೇಗೆ ಪ್ರಯತ್ನಿಸಬೇಕು? ಎಂಬುದನ್ನು ತಿಳಿದುಕೊಳ್ಳಲಿದ್ದೇವೆ.